ಅವಿಸ್ಮರಣೀಯ ಅಮೆರಿಕ-ಎಳೆ 28
ಮತ್ಸ್ಯಗಳ ಮಧ್ಯೆ….
ಪುಟ್ಟ ಗಾಜಿನ ತೊಟ್ಟಿಯಲ್ಲಿ, ಶುಭ್ರವಾದ ನೀರಿನಲ್ಲಿ ಬಣ್ಣ ಬಣ್ಣದ ಮೀನುಗಳು ಈಜುವುದನ್ನು ನೋಡಲು ಇಷ್ಟಪಡದವರು ಯಾರು…ಅಲ್ಲವೇ? ನನಗಂತು ಈಗಲೂ, ಪುಟ್ಟ ಅಕ್ವೇರಿಯಂ ಕಂಡರೆ ಚಿಕ್ಕ ಮಕ್ಕಳಂತೆ, ಒಂದು ನಿಮಿಷ ನಿಂತು ನೋಡಿಯೇ ಮುಂದೆ ಹೋಗಲು ಮನಸ್ಸಾಗುತ್ತದೆ. ಹಾಗಾದರೆ, ಒಂದು ಮನೆಯ ಕೋಣೆಯಷ್ಟು ದೊಡ್ಡದಾದ ಅಕ್ವೇರಿಯಂ ಎಷ್ಟು ಚೆನ್ನಾಗಿರಬಹುದು ಊಹಿಸಿ!
ಹೌದು…ನಾವು ಬಹು ದೊಡ್ಡದಾದ ಅಕ್ವೇರಿಯಂಗಳು ಒಂದೇ ಕಡೆ ಇರುವ ಮಾಂಟೆರೆ ಕೊಲ್ಲಿಗೆ (Monterey Bay) ಭೇಟಿ ನೀಡುವವರಿದ್ದೇವೆ. ನನಗಂತೂ ಎಲ್ಲಿಲ್ಲದ ಸಂಭ್ರಮ..ನನ್ನ ಪ್ರೀತಿಯ ತಾಣ, ಅದು ಹೇಗಿರಬಹುದು ಎಂದು! ನಾವಿರುವ ಮೌಂಟೆನ್ ವ್ಯೂನಿಂದ ಸುಮಾರು 122ಕಿ.ಮೀ ದೂರದಲ್ಲಿರುವ ಇದು, ಸ್ಯಾನ್ ಫ್ರಾನ್ಸಿಸ್ಕೋದ ದಕ್ಷಿಣಕ್ಕಿರುವ ಫೆಸಿಫಿಕ್ ಮಹಾಸಾಗರದ ಕೊಲ್ಲಿ ಪ್ರದೇಶವಾಗಿದೆ; ಅಲ್ಲದೆ ಮಾಂಟೆರೆಯ ಪರ್ಯಾಯ ದ್ವೀಪವಾಗಿದೆ. ಸುಮಾರು 3,22,000 ಚ. ಅಡಿ ವಿಸ್ತೀರ್ಣದ ಜಾಗದಲ್ಲಿ ಅಳವಡಿಸಲಾದ ಈ ಬೃಹದ್ಗಾತ್ರದ ಹಾಗೂ ಬಹಳ ವಿಶೇಷವಾದ ಅಕ್ವೇರಿಯಂ ಸಮೂಹವನ್ನು 1984ನೇ ಇಸವಿ ಅಕ್ಟೋಬರ್ ನಲ್ಲಿ ಪ್ರಾರಂಭಿಸಲಾಯಿತು. ಫೆಸಿಫಿಕ್ ಮಹಾಸಮುದ್ರದಲ್ಲಿ ವಾಸಿಸುವ ಜೀವಿಗಳ ಸಾಮಾನ್ಯ ಜೀವನ ಶೈಲಿಯನ್ನು ಇಲ್ಲಿ ಪ್ರತಿಬಿಂಬಿಸಲಾಗಿದೆ. ಇಲ್ಲಿ ಸಾಕಲ್ಪಡುವ ಜಲಚರಗಳ ಸಂಖ್ಯೆಯೇ ಸುಮಾರು 35,000. ಇಲ್ಲಿರುವ ಅತ್ಯಂತ ದೊಡ್ಡ ಗಾಜಿನ ತೊಟ್ಟಿಯಲ್ಲಿ ಸುಮಾರು 4.5 ಮಿಲಿಯ ಲೀಟರ್ ನೀರನ್ನು ತುಂಬಬಹುದು! ಇಷ್ಟು ದೊಡ್ಡ ಗಾತ್ರದ ಅಕ್ವೇರಿಯಂನ್ನು ಊಹಿಸುವುದೇ ಕಷ್ಟ ಅಲ್ಲವೇ? ಲಾಭದಾಯಕವಲ್ಲದ ಈ ಸಾರ್ವಜನಿಕ ಅಕ್ವೇರಿಯಂಗೆ ಪ್ರತಿ ವರ್ಷ ಸುಮಾರು ಎರಡು ಮಿಲಿಯ ಜನ ಪ್ರವಾಸಿಗರು ಭೇಟಿ ನೀಡುವರು. ಅಪರೂಪದ ಬಿಳಿ ತಿಮಿಂಗಿಲವನ್ನು ಯಶಸ್ವಿಯಾಗಿ ಹಿಡಿದು, ಸಾಕಿ, ಪ್ರದರ್ಶಿಸಿರುವುದು ಕೂಡಾ ಇದರ ಹೆಗ್ಗಳಿಕೆಗಳಲ್ಲೊಂದು! ಸಮುದ್ರ ಜೀವಿಗಳನ್ನು ಸಹಜ ರೀತಿಯಲ್ಲಿ ಸಾಕುವ ಈ ಅಕ್ವೇರಿಯಂಗೆ ಬಹಳಷ್ಟು ಬಾರಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಗಳು ಲಭಿಸಿವೆ. ಅಲ್ಲದೆ, ಜಾಗತಿಕ ಮಟ್ಟದಲ್ಲಿ ಸಮುದ್ರ ಜೀವಿಗಳ ಅಧ್ಯಯನಕ್ಕಾಗಿ ಕೂಡ ಈ ಅಕ್ವೇರಿಯಂನ್ನು ಬಳಸಲಾಗುತ್ತದೆ.
ಎಂದಿನಂತೆ ನಮ್ಮ ಪ್ರಯಾಣವು ಒಂದು ಶನಿವಾರ, ಮಧ್ಯಾಹ್ನದ ಊಟ ಮುಗಿಸಿ ಪ್ರಾರಂಭವಾಯಿತು. ಲಾಸ್ ಏಂಜಲ್ಸ್ ಗೆ ಹೋಗುವ ರಸ್ತೆ ಮೂಲಕ ಸುಮಾರು ಒಂದೂವರೆ ಗಂಟೆಯ ಪ್ರಯಾಣ. ರಸ್ತೆಯ ಇಕ್ಕೆಲಗಳಲ್ಲಿ ಬಹು ವಿಸ್ತಾರವಾದ ಸಮತಟ್ಟಾದ ಗದ್ದೆಗಳಲ್ಲಿ ಹಚ್ಚಹಸುರಾಗಿ ನಳನಳಿಸುವ ಗಿಡ ಮರಗಳನ್ನು ನೋಡುವುದೇ ಖುಷಿ. ಮರಗಳೋ.. ಕಾಯಿ, ಹಣ್ಣುಗಳಿಂದ ತುಂಬಿ ತೊನೆಯುತ್ತಿದ್ದವು. ಯಾವುದೇ ತೋಟ ಯಾ ಹೊಲಗಳಿಗೆ ಬೇಲಿ ಎಂಬುದೇ ಇಲ್ಲ! ಯಾರೂ ನೋಡುವವರಿಲ್ಲ…ಕೇಳುವವರಿಲ್ಲ! ಆದರೆ ಸಿ.ಸಿ.ಟಿ.ವಿ. ಇರಬಹುದೆಂಬ ಸಂಶಯ ನನಗೆ! ನಾವಂತೂ ನಮ್ಮ ವಾಹನ ನಿಲ್ಲಿಸಿ, ರಸ್ತೆ ಪಕ್ಕದ ತೋಟದೊಳಗೆ ನುಗ್ಗಿ , ಚೆರಿ ಮರಗಳ ಕೈಗೆಟಕುವ ಟೊಂಗೆಗಳಿಂದ ಕೆಂಪಾದ, ರುಚಿ ರುಚಿಯಾದ ಹಣ್ಣುಗಳನ್ನು ಕೊಯ್ದು, ಬೇಕಾದಷ್ಟು ತಿಂದೆವು. ಸೊಂಪಾಗಿ ಬೆಳೆದ ತರಕಾರಿ ಗಿಡಗಳಲ್ಲಿರುವ ಮುದ್ದಾದ ಮಿಡಿ, ಕಾಯಿಗಳೊಡನೆ ಮಾತನಾಡಿದೆವು. ಇಲ್ಲಿಯ ಸಾವಿರಾರು ಗಿಡಗಳಲ್ಲಿ ಒಂದರಿಂದ, ಸ್ವಲ್ಪ ಹಣ್ಣುಗಳನ್ನು ಕೊಯ್ದು ತಿಂದರೆ ಮಾಲೀಕನಿಗೆ ಏನೂ ನಷ್ಟವಿಲ್ಲ… ಆದರೆ ಜೊತೆಗೆ ಹಣ್ಣು ಒಯ್ಯುವ ಹಾಗಿಲ್ಲ. ಇಲ್ಲಿಯ ಜನರಿಗೆ ಇತರರ ಮೇಲಿರುವ ನಂಬಿಕೆ, ಹಾಗೆಯೇ ಇಲ್ಲಿಯ ಜನರ ಪ್ರಾಮಾಣಿಕತೆಗೆ ಮನಸ್ಸು ಸೋತು ಹೋಯಿತು!
ನಾವು ಮಾಂಟೆರೆ ಕೊಲ್ಲಿಗೆ ತಲಪುವಾಗ ಮಧ್ಯಾಹ್ನ ಮೂರು ಗಂಟೆಯಾಗಿತ್ತು. ಅಲ್ಲಿ ಪ್ರತಿಯೊಬ್ಬರಿಗೂ $30/- ಪ್ರವೇಶ ಶುಲ್ಕ ತೆತ್ತು ದ್ವಾರದ ಒಳಹೋದಾಗ, ಕಡಲ ಕಿನಾರೆಯಲ್ಲಿ ಮೈದಳೆದ ಸುಂದರ ಕಟ್ಟಡವು ಕಣ್ಮುಂದೆ ನಿಂತಿತು. ಸಾಗರದ ಕೊಲ್ಲಿಯ ನೀರಿನ ತಳ ಮಟ್ಟದಿಂದ ಬಲವಾದ ಸ್ತಂಭಗಳಿಂದ ಆಧರಿಸಲ್ಪಟ್ಟ ಈ ಕಟ್ಟಡವು, ಅಲ್ಲಿಯ ಉಪ್ಪು ನೀರಿನ ಪುಟ್ಟ ಅಲೆಗಳ ದುರ್ಬಲ ಹೊಡೆತವನ್ನು ಯಾವುದೇ ಹೆದರಿಕೆಯಿಲ್ಲದೆ ಸಹಿಸಿಕೊಂಡರೆ, ಸ್ತಂಭಗಳ ಮಧ್ಯೆ ಇರುವ ಸಣ್ಣ , ದೊಡ್ಡ ಸಹಸ್ರಾರು ಕರಿ ಕಲ್ಲುಗಳು ಅಲೆಗಳ ಸವರುವಿಕೆಯಿಂದ ತಮ್ಮನ್ನು ನಯವಾಗಿಸಿಕೊಂಡಿದ್ದವು.
ಕಟ್ಟಡದೊಳಗೆ ಅಡಿಯಿಟ್ಟಂತೆಯೇ, ಎದುರಿಗೆ ವಿಶಾಲವಾದ ಅತ್ಯದ್ಭುತ ಲೋಕವೊಂದು ತೆರೆದುಕೊಂಡಿತು! ನೀವೂ ಬನ್ನಿ..ಒಳಗಡೆ ಏನೇನಿದೆಯೋ ನೋಡೋಣ…
ಎಲಾ…ಏನಿದು!? ಗೋಡೆಯ ಜಾಗದಲ್ಲಿ ಎಲ್ಲಾ ಕಡೆಗಳಲ್ಲೂ ಗಾಜಿನ ತೊಟ್ಟಿಗಳದೇ ಕಾರ್ಬಾರ್! ಮುಂಭಾಗದಲ್ಲಿಯೇ ನಮ್ಮನ್ನು ಎದುರುಗೊಂಡುದು, ಇಪ್ಪತ್ತು ಅಡಿಗಳಿಗಿಂತಲೂ ಎತ್ತರಕ್ಕಿರುವ ದೊಡ್ಡದಾದ ಅಕ್ವೇರಿಯಂನಲ್ಲಿ ಬೆಳೆದಿರುವ ಬಂಗಾರದ ಬಣ್ಣದ ಸಮುದ್ರ ಕಳೆ! ಕಡುನೀಲಿಯ ನೀರಿನಲ್ಲಿ, ಎತ್ತರಕ್ಕೆ ತೊಯ್ದಾಡಿ ಬಳುಕುತ್ತಿತ್ತು ಕಳೆಯ ಬಳ್ಳಿಗಳು. ಅವುಗಳೆಡೆಯಲ್ಲಿ ಅತ್ತಿತ್ತ ಸುತ್ತಿ ಸುಳಿದಾಡುವ ಬಣ್ಣ ಬಣ್ಣದ ಮೀನುಗಳು! ಸಮುದ್ರ ಕಳೆಯನ್ನು ಬೆಳೆಸುವ ಈ ಪ್ರಕ್ರಿಯೆಯು ಪ್ರಾರಂಭಿಕ ಹಂತದಲ್ಲಿ ಬಹಳ ಸೋಲನ್ನು ಕಂಡಿತ್ತು. ವಿಜ್ಞಾನಿಗಳ ಸತತ ಪ್ರಯತ್ನದಿಂದ ಸಫಲವಾದಾಗ ಇದು ಜಗತ್ತಿನಲ್ಲಿಯೇ ಪ್ರಥಮವೆಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಅದರ ಪಕ್ಕದಲ್ಲಿರುವ ಬಹಳ ದೊಡ್ಡ ಗಾಜಿನ ಕೋಣೆಯಲ್ಲಿವೆ… ಅಪರೂಪದ ಜೆಲ್ಲಿ ಫಿಶ್ ಗಳು. ವಿವಿಧ ರೀತಿಯ, ಜಾತಿಯ ಜೆಲ್ಲಿ ಫಿಶ್ ಗಳನ್ನು ಇಲ್ಲಿ ಬಹಳ ಯಶಸ್ವಿಯಾಗಿ ಸಾಕಲಾಗುತ್ತದೆ. ಬಂಗಾರ, ನೀಲಿ, ಬಿಳಿ, ಹೀಗೆ ವಿವಿಧ ಬಣ್ಣಗಳಿಂದ ಹೊಳೆಯುತ್ತಿರುವ ಈ ಮೀನುಗಳ ಮೈಯಿಡೀ, ಹೆಸರೇ ಹೇಳುವಂತೆ.. ಜೆಲ್ ನಂತೆ ಪಾರದರ್ಶಕ! ಇವುಗಳನ್ನು ನೋಡಿದರೆ ಮೀನು ಅನಿಸುವುದೇ ಇಲ್ಲ.. ಪ್ಯಾರಾಚೂಟಿನ ಆಕಾರದಲ್ಲಿರುವ ಇವುಗಳು ನೀರಿನ ಆಳ ಅಗಲಕ್ಕೆ ನಿಧಾನವಾಗಿ ತೇಲುತ್ತಾ, ಒಮ್ಮೆ ಚಪ್ಪಟೆಯಾಗಿ, ಇನ್ನೊಮ್ಮೆ ಗುಂಡಗಾಗಿ,ತಮ್ಮ ಆಕಾರವನ್ನು ಬದಲಿಸುತ್ತಾ ಓಡಾಡುವುದನ್ನು ನೋಡುತ್ತಾ ನಿಂತುಬಿಟ್ಟವಳಿಗೆ ಮಗಳು ಬಂದು ಕರೆದಾಗಲೇ ಎಚ್ಚರ! ನನಗಂತೂ ಅವುಗಳ ಅಂಗಾಂಗಗಳು ಎಲ್ಲಿವೆ ಎಂದೇ ತಿಳಿಯದಂತಾಗಿತ್ತು! ಹೌದು, ಅವುಗಳು, ಮೆದುಳು, ಕಣ್ಣು, ಹೃದಯ, ಎಲುಬು ಏನೂ ಇಲ್ಲದ ಬರೇ ಚೀಲದಂತಹ ಪ್ರಾಣಿ! ಅದರಲ್ಲಿರುವ ಒಂದೇ ಒಂದು ಸಣ್ಣ ಮುಳ್ಳಿನಂತಹ ಗ್ರಹಣಾಂಗದಿಂದ ತನ್ನ ಕೊಳ್ಳೆಯನ್ನು ಜ್ಞಾನ ತಪ್ಪಿಸಿ ಸೇವಿಸುವುದು. ಇಲ್ಲಿ ಪ್ರತಿಯೊಂದು ತೊಟ್ಟಿಯ ಮುಂಭಾಗದಲ್ಲೂ, ಅದರೊಳಗಿರುವ ಜೀವಿಯ ಬಗೆಗೆ ವಿಸ್ತೃತ ಮಾಹಿತಿ ಹಾಗೂ ಅವುಗಳನ್ನು ಯಾವಾಗ ಎಲ್ಲಿಂದ ತಂದಿರುವುದು ಎಂಬ ಬಗ್ಗೆ ಕೂಡಾ ವಿವರಗಳಿವೆ.
ಮುಂದಕ್ಕಿರುವ ಇನ್ನೊಂದು ಅಕ್ವೇರಿಯಂನಲ್ಲಿರುವ ನೂರಾರು ಬಣ್ಣದ ಮೀನುಗಳು ತಾವು ಸಾಗರದೊಳಗೇ ಇರುವೆವೆಂದು ಭ್ರಮಿಸಿದಂತಿವೆ! ಅಷ್ಟು ದೊಡ್ಡ ಗಾತ್ರದ ತೊಟ್ಟಿಯಲ್ಲಿ ಈಜುತ್ತಿರುವ ಅವುಗಳ ಭಾಗ್ಯವೆನ್ನಲೇ.. ಅಥವಾ ನೋಡುಗರಾದ ನಮ್ಮ ಭಾಗ್ಯವೆನ್ನಲೇ?! ಅದರ ಪಕ್ಕದ ತೊಟ್ಟಿ ತುಂಬಾ ಓಡಾಡುತ್ತಿರುವ ಬಹಳ ದೊಡ್ಡದಾದ ಒಂದು ಮೀನು, ಮಧ್ಯಮ ಗಾತ್ರದ ತಿಮಿಂಗಿಲವಾಗಿತ್ತು! ಅದು ಗಾಜಿನ ಪಕ್ಕಕ್ಕೆ ಸವರಿಕೊಂಡು ಹೋದಾಗ, ಅದು ನಮ್ಮ ಮೈಮೇಲೆಯೇ ಬಂದಂತೆನಿಸುತ್ತದೆ… ಕೈಯಲ್ಲಿ ಸ್ಪರ್ಶಿಸುವ ಆಸೆಯಾಗುತ್ತದೆ.
ಇನ್ನೊಂದು ವಿಚಿತ್ರವಾದ, ವಿಶೇಷವಾದ ಅಕ್ವೇರಿಯಂ ಬಗ್ಗೆ ಹೇಳಲೇಬೇಕು. ಮೇಲ್ಗಡೆ ಚಾವಣಿಯ ಸುತ್ತಲೂ ವೃತ್ತಾಕಾರದಲ್ಲಿ ಇರುವ ಇದರಲ್ಲಿ ಸಹಸ್ರಾರು ಪುಟ್ಟ ಸಮುದ್ರ ಮೀನುಗಳು ಗುಂಪಾಗಿ, ವಿವಿಧ ಆಕಾರಗಳಲ್ಲಿ ಚಲಿಸುವುವು… ಚಲಿಸುತ್ತಿದ್ದಂತೆಯೇ ಥಟ್ಟನೆ ದಿಕ್ಕು ಬದಲಿಸಿ ವೇಗವಾಗಿ ಸಾಗುವುದನ್ನು ನೋಡಿದಷ್ಟು ಮನತಣಿಯದು. ಇದು ಇಲ್ಲಿಯ ಮುಖ್ಯ ಆಕರ್ಷಣೆ ಎಂದರೂ ತಪ್ಪಾಗಲಾರದು. ಇನ್ನೊಂದು ಕಡೆಗೆ ವಿವಿಧ ನಮೂನೆಯ ಬಿಳಿ ಬಣ್ಣದ ಹಲವಾರು ಸಮುದ್ರ ಪಕ್ಷಿಗಳು ಗುಂಪುಗೂಡಿ ತಮ್ಮಲ್ಲೇ ಚರ್ಚಿಸುತ್ತಿರುವುದು ಕಂಡಿತು.
ಅಲ್ಲೇ ಹೊರಗಡೆಗೆ ಸಮುದ್ರದ ಅಲೆಗಳ ಭೋರ್ಗರೆತದ ಸದ್ದು ಬಹಳ ದೊಡ್ಡದಾಗಿ ಕೇಳಿಸುತ್ತಿತ್ತು. “ಈ ಕೊಲ್ಲಿಯಲ್ಲಿ ತೆರೆಗಳೇ ಇಲ್ಲವಲ್ಲಾ..ಮತ್ತೆಲ್ಲಿಂದ ಬಂತು ಈ ಸದ್ದು??” ಎಂದುಕೊಂಡು ಆಕಡೆಗೆ ಹೋದಾಗ ಕಂಡದ್ದೇನು? ಅದು ನಿಜವಾದ ಸಮುದ್ರದ ಅಲೆಗಳ ಬಡಿತದ ಸದ್ದಾಗಿರಲಿಲ್ಲ! ಕೃತಕವಾಗಿ ನಿರ್ಮಿಸಿದ ದೈತ್ಯಾಕಾರದ ಅಲೆಗಳು ಅಲ್ಲಿದ್ದ ಪುಟ್ಟ ಸೇತುವೆಯ ಮೇಲಿನಿಂದ ಹಾರಿ ಅಲ್ಲಿ ನಡೆದಾಡುವ ಪ್ರವಾಸಿಗರನ್ನು ತೋಯಿಸಿಬಿಡುತ್ತಿತ್ತು. ನಮ್ಮ ಪುಟ್ಟ ಮೊಮ್ಮಗು ನನ್ನೊಡನೆ ಇದ್ದುದರಿಂದ, ಎಷ್ಟೇ ಜಾಗರೂಕತೆಯಿಂದ ಆ ಅಲೆಯ ಕೆಳಗಡೆ ಹೋದರೂ ಅಲ್ಪ ಸ್ವಲ್ಪ ಒದ್ದೆಯಾಗಿಯೇ ಹೋಯ್ತು. ಅಲ್ಲೇ ಮುಂದೆ ಇರುವ ವಿಶಾಲವಾದ ಜಾಗದಲ್ಲಿ ಪ್ರವಾಸಿಗರಿಗಾಗಿ ಹತ್ತಾರು ಕುರ್ಚಿ ಮೇಜುಗಳನ್ನು ಇರಿಸಿದ್ದರು. ಅಲ್ಲಿ ಮಗುವಿನ ಜೊತೆ ನಾನು ಕುಳಿತು ನೋಡ್ತೇನೆ.. ನನ್ನಲ್ಲಿದ್ದ ಕೈಚೀಲ ನಾಪತ್ತೆ!.. ಎಲ್ಲಿ ಬಿತ್ತೋ ಗೊತ್ತೇ ಆಗಿರಲಿಲ್ಲ. ಸ್ವಲ್ಪ ಸಮಯ ಬಿಟ್ಟು ಬಂದ ಅಳಿಯನಿಗೆ ವಿಷಯ ತಿಳಿಸಿದೆ. ಅಲ್ಲಿ ಕಳೆದು ಹೋದುದು ನೂರಕ್ಕೆ ನೂರು ಪಾಲು ಸಿಕ್ಕೇ ಸಿಗುವುದೆಂಬ ದೃಢವಾದ ನಂಬಿಕೆ ನನಗಿತ್ತು. ಅಲ್ಲಿಯ “ಕಳೆದುದು ಸಿಕ್ಕಿದೆ” (Lost and found) ವಿಭಾಗದಲ್ಲಿ ವಿಚಾರಿಸಿದರೆ ಖಂಡಿತಾ ಸಿಗುವುದೆಂಬ ಭರವಸೆಯೊಂದಿಗೆ ಹೋದ ಅಳಿಯ ಹಿಂತಿರುಗುವಾಗ ಅವನ ಕೈಯಲ್ಲಿದ್ದ ನನ್ನ ಕೈಚೀಲ ಕಂಡು, ನನ್ನ ನಂಬಿಕೆ ಹುಸಿಯಾಗಲಿಲ್ಲ ಎಂದು ನೆಮ್ಮದಿಯಾಯ್ತು…ಎರಡನೇ ಬಾರಿ ನನ್ನ ಕೈಯಿಂದ ಕಳೆದು ಹೋದುದು ಸಿಕ್ಕಿತ್ತು!
ಈ ಪ್ರವಾಸಕಥನದ ಹಿಂದಿನ ಎಳೆ ಇಲ್ಲಿದೆ : http://surahonne.com/?p=35642
–ಶಂಕರಿ ಶರ್ಮ, ಪುತ್ತೂರು.
(ಮುಂದುವರಿಯುವುದು….)
ಅಮೆರಿಕ… ಪ್ರವಾಸ ದಲ್ಲಿ… ಅಕ್ವೇರಿಯಂ.. ವಿವರಣೆ…ಅನುಭವ …ಅಭಿವ್ಯಕ್ತಿ..ನಾವೂ ನಿಮ್ಮ ಜೊತೆ ಜೊತೆಯಲ್ಲಿ ಸಾಗುತ್ತಿದ್ದಂತೆ…ಭಾಸವಾಯಿತು.
.ಧನ್ಯವಾದಗಳು ಮೇಡಂ.
ತಮ್ಮ ಪ್ರೀತಿಯ ಪ್ರೋತ್ಸಾಹಕ ನುಡಿಗಳಿಗೆ ಧನ್ಯವಾದಗಳು ಮೇಡಂ.
Beautiful
ಧನ್ಯವಾದಗಳು
ಎಂದಿನಂತೆ ತುಂಬಾ ಸುಂದರವಾಗಿ ವಿವರಣೆ ನೀಡಿದ್ದೀರಿ.
ತಮ್ಮ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು
ಅಕ್ವೇರಿಯಂ ವಿವರಣೆ ಚೆನ್ನಾಗಿ ಮನದಟ್ಟು ಆಗುವಂತೆ ಇದ್ದು ಓದಿಸಿಗೊಂಡು ಹೋಗಲು ಸಹಕಾರಿಯಾಗಿದೆ. ತಂಗಿ
ಶಂಕರಿ ಶರ್ಮಾ.
ಅಕ್ವೇರಿಯಂ ವಿವರಣೆ ಚೆನ್ನಾಗಿ ಮನದಟ್ಟು ಆಗುವಂತೆ ಇದ್ದು ಓದಿಸಿಗೊಂಡು ಹೋಗಲು ಸಹಕಾರಿಯಾಗಿದೆ. ತಂಗಿ
ಶಂಕರಿ ಶರ್ಮಾ.
ನಿಸರ್ಗವನ್ನೂ ಪುನಃಸೃಷ್ಟಿಸುವಲ್ಲಿ ಗೆದ್ದಿರುವ ಬೃಹತ್ ಅಕ್ವೇರಿಯಂನ ವರ್ಣನೆ ನಿಜಾರ್ಥದಲ್ಲಿ ಮನ ಸೂರೆಗೊಂಡಿತು. ಅಭಿನಂದನೆಗಳು.
ಅಕ್ವೇರಿಯಂ ವಿವರಣೆ ಚೆನ್ನಾಗಿದೆ.