ಕಾದಂಬರಿ: ನೆರಳು…ಕಿರಣ 17

Share Button

 –ಹಿಂದಿನ ಸಂಚಿಕೆಯಿಂದ ಮುಂದುವರಿದುದು…..

ಅವರುಗಳು ಹೋದಮೇಲೆ ಭಟ್ಟರು “ಲಕ್ಷ್ಮೀ ನಿಮ್ಮ ಮಾವ ರಾಮಣ್ಣನವರು ಬೆಳಗ್ಗೆ ಅಜ್ಜ, ಅಜ್ಜಿಯರನ್ನು ಯಾರೋ ಪೂಜೆಗೆ ಕರೆದುಕೊಂಡು ಬರಲು ಹೇಳಿದ್ದಾರೆಂದು ಕರೆದುಕೊಂಡು ಹೋಗಿದ್ದು ಒಳ್ಳೆಯದೇ ಆಯ್ತು. ಹಾಗೇ ಪಕ್ಕದ ಮನೆ ಸುಬ್ರಹ್ಮಣ್ಯರವರು ತಮ್ಮ ಕುಟುಂಬ ಸಮೇತ ಊರಿಗೆ ಹೋಗಿರುವುದೂ ನಮ್ಮ ಪುಣ್ಯ. ಇಲ್ಲವೆಂದರೆ ಅವರಿಗೆ ಕೆಟ್ಟ ಕುತೂಹಲದಿಂದ ಏನೇನು ಹೇಳುತ್ತಿದ್ದರೋ ಕಾಣೆ. ಮಕ್ಕಳೆ ನೀವೂ ಅಷ್ಟೇ ಈ ಸುದ್ಧಿ ಹೊರಗೆ ಬರಬಾರದು.” ಎಂದರು. ಆಗತಾನೇ ತಮ್ಮ ರೂಮಿನಿಂದ ಹೊರಕ್ಕೆ ಬಂದ ಪುಟ್ಟಮಕ್ಕಳು “ಏನನ್ನು ಹೇಳಬಾರದು” ಎಂದು ಕೇಳಿದರು. ‘ಏನಿಲ್ಲ ಈಗ ಬಂದು ಹೋದವರ ಬಗ್ಗೆ ಹೇಳಬಾರದು” ಎಂದು ಭಟ್ಟರು ಲಕ್ಷ್ಮಿ ಇಬ್ಬರೂ ದನಿಗೂಡಿಸಿದು.

ಒಟ್ಟಾರೆ ಈ ಅನಿರೀಕ್ಷಿತ ಘಟನೆ ಹಿರಿಯ ಮಕ್ಕಳಿಗೆ ಹೆಚ್ಚಿನ ಸಂತಸ ತಂದಿತ್ತು. “ಅಪ್ಪಾ ನಾನು ಹೀಗೆ ಕೇಳ್ತೀನಿ ಅಂತ ಬೇಸರ ಮಾಡಿಕೊಳ್ಳಬೇಡಿ” ಎಂದು ಪೀಠಿಕೆ ಹಾಕಿದಳು ಭಾವನಾ.

“ಅದೇನು ಮಗಳೇ?” ಎಂದರು “ನೀವೂ ಭಾವ ಆಗುವವರಿಗೆ ಬಟ್ಟೆ ತೆಗೆದುಕೊಳ್ಳಲು ಹಣವನ್ನು ಕೊಡಬೇಕಾಗಿತ್ತಲ್ಲವಾ?” ಎಂದು ಕೇಳಿದಳು ಭಾವನಾ.

ಅವಳ ಮಾತನ್ನು ಕೇಳಿ ದಂಪತಿಗಳು ನಗುತ್ತಾ “ಮಗಳೆ ನಾವು ನಿಶ್ಚಿತಾರ್ಥದ ದಿನವೇ ಅವರಿಗೆ ಕೊಟ್ಟಾಯಿತು. ಏಕೆಂದರೆ ಡ್ರೆಸ್ ಸಿದ್ಧಪಡಿಸಿಕೊಳ್ಳಲು ಸಮಯ ಕಡಿಮೆಯಿದೆ ಅದಕ್ಕೇ.” ಕೇಶವಯ್ಯನವರು ಆ ದಿನ ಜುಬ್ಬ ಪ್ಯಜಾಮಾದ ಭಕ್ತನಿದ್ದ ಹಾಗೆ ಕಾಣುತ್ತೆ ಎಂದಿದ್ದರು.

“ಹೊಗಲಿ ಬಿಡಿ, ಅವರವರ ಇಷ್ಟ. ನಮ್ಮ ಮದುವೆಯ ಆರತಕ್ಷತೆಯಲ್ಲಿ ಲಾಜಾಹೋಮ, ಸಪ್ತಪದಿ ಎಲ್ಲಮುಗಿಯುವ ಹೊತ್ತಿಗೆ ಬಹಳ ಹೊತ್ತಾಗಿತ್ತು. ಆನಂತರ ಸಂಜೆಯೇ ಮನೆತುಂಬಿಸಿಕೊಳ್ಳುವ ಶಾಸ್ತ್ರ ಮಾಡುವ ಅವಸರದಲ್ಲಿ ಧಾರೆ ಉಡುಪುನಲ್ಲೇ ಸ್ವಲ್ಪ ಹೊತ್ತು ಕೂಡಿಸಿ ಎಬ್ಬಿಸಿಬಿಟ್ಟರಲ್ಲಾ. ನೀವು ಹೊಲೆಸಿಕೊಂಡ ಪ್ಯಾಂಟು, ಷರಟು, ಕೋಟು ಹಾಕಿಕೊಳ್ಳಲು ಆಗಲೇ ಇಲ್ಲ. ಭಾಗ್ಯಳ ನಾಮಕರಣದಲ್ಲಿ ಅವನ್ನು ಹಾಕಿಕೊಂಡು ಮದುಮಗನಂತೆ ಓಡಾಡಿದ್ರೀ. ನೆನಪಿದೆ ತಾನೇ?” ಎಂದಳು ಲಕ್ಷ್ಮಿ.

‘ಹೂ ಆ ನೆನಪುಗಳಿಗೆ ಫುಲ್‌ಸ್ಟಾಪ್ ಹಾಕಿ ಬಿಟ್ಟಿರುವ ಕೆಲಸವನ್ನು ಮುಗಿಸೋಣ ಬಾ ಲಕ್ಷ್ಮಿ. ನಾಳೆ ಕೆಲವು ಮನೆಗಳಿಗೆ ಹೋಗುವುದಿದೆಯಲ್ಲಾ” ಎಂದರು ಭಟ್ಟರು.

“ಆಹಾ ತಮ್ಮದೇನಾದರೂ ವಿಷಯ ಕೆದಕಿದರೆ ಜಾಣತನದಿಂದ ಜಾರಿಕೊಳ್ತಾರೆ.” ಎಂದು ಅಣಕವಾಡುತ್ತಾ ಅವರು ಮಾಡುತ್ತಿದ್ದ ಪತ್ರಿಕೆ ಕೆಲಸಕ್ಕೆ ತಾನು ಜೊತೆಯಾದಳು ಲಕ್ಷ್ಮಿ.

ಹೆತ್ತವರ ಮಾತುಗಳನ್ನು ಕೇಳಿ ನಸುನಗುತ್ತಾ ತಾವೂ ಅರ್ಧಕ್ಕೆ ಬಿಟ್ಟುಬಂದಿದ್ದ ಕೆಲಸ ಮುಂದುವರಿಸಲು ತಮ್ಮ ರೂಮಿಗೆ ತೆರಳಿದರು ಭಾಗ್ಯ ಮತ್ತು ಭಾವನಾ.

ಮುಂದಿನದ್ದೆಲ್ಲ ತಾವು ಯೋಚಿಸಿದಂತೆ ಸಿದ್ಧತೆ ಮಾಡಿಕೊಳ್ಳುತ್ತಾ ಕೊನೆಯ ಹಂತವನ್ನು ತಲುಪಿದ್ದರು ಭಟ್ಟರು ದಂಪತಿಗಳು. ಇನ್ನೇನಿದ್ದರೂ ದೇವತಾರಾಧನೆ, ತಮ್ಮವರಿಗೆಲ್ಲ ಊಟ ಅಷ್ಟೇ. ಅದಕ್ಕೆಲ್ಲ ಯೋಜನೆಯೂ ಸಿದ್ಧಗೊಂಡಿತ್ತು.

ನಿರಾಳವಾಗಿರುವಷ್ಟರಲ್ಲಿ ಮದುವೆಯ ಸಮಸ್ತ ವ್ಯವಸ್ಥೆಗಳ ಜವಾಬ್ದಾರಿ ವಹಿಸಿಕೊಂಡಿದ್ದ ಕಲ್ಯಾಣ ಮಂಟಪದ ಮುಖ್ಯವ್ಯಕ್ತಿ ಪುಟ್ಟಾ ಜೋಯಿಸರು ಒಬ್ಬ ಮನುಷ್ಯನ ಮೂಲಕ ಭಟ್ಟರಿಗೆ ಸಂದೇಶ ಕಳುಹಿಸಿದರು. ಅವರು ದಂಪತಿಗಳಿಬ್ಬರೂ ಒಮ್ಮೆ ಛತ್ರಕ್ಕೆ ಭೇಟಿಕೊಡಬೇಕೆಂದು ಹೇಳಿಕಳುಹಿಸಿದ್ದರು. ಸಂದೇಶ ತಂದ ವ್ಯಕ್ತಿಯನ್ನು ಕಂಡಕೂಡಲೇ ಭಟ್ಟರು “ನನ್ನನ್ನು ಕ್ಷಮಿಸಿಬಿಡು ಲಕ್ಷ್ಮೀ, ನಾನು ಕೇಶವಯ್ಯನವರ ಜೊತೆ ಅಲ್ಲಿಗೆ ಹೋಗಿದ್ದಾಗ ಅವರು ನಿಮ್ಮ ಮನೆಯವರನ್ನೊಂದು ಸಾರಿ ಕರೆದುಕೊಂಡು ಬನ್ನಿ. ಅವರೂ ನೋಡಲಿ, ವ್ಯವಸ್ಥೆಯ ಬಗ್ಗೆ ಮಾತನಾಡುವುದಿದೆ. ಉದಾಸೀನಮಾಡಬೇಡಿ ಎಂದು ಹೇಳಿದ್ದರು. ಕೇಶವಯ್ಯನವರೂ ಭಟ್ಟರೆ ಲಕ್ಷ್ಮಮ್ಮನನ್ನೂ ಕರೆದುಕೊಂಡು ಹೋಗಿ. ಅವರು ಪರಿಚಯ ಮಾಡಿಕೊಳ್ಳುವುದು ಉತ್ತಮ ಎಂದಿದ್ದರು. ನಾನು ಈ ಕೆಲಸಗಳ ಮಧ್ಯೆ ಮರೆತುಬಿಟ್ಟೆ. ಎಡವಟ್ಟಾಯಿತು ಸಾರಿ” ಎಂದರು.

ಆ ಸಮಯದಲ್ಲಿ ಅಲ್ಲಿಯೇ ಇದ್ದ ಲಕ್ಷ್ಮಿಯ ಸೋದರಮಾವ ರಾಮಣ್ಣನವರು ಭಟ್ಟರ ಮಾತುಗಳನ್ನು ಕೇಳಿ “ಆಹಾ ಯಾರ ಮನೆಯ ಕೆಲಸವೋ ..ಲಕ್ಷ್ಮಿ ಇಷ್ಟೆಲ್ಲಾ ತಿದ್ದಿದರೂ ಸ್ವಂತಿಕೆ ರೂಢಿಸಿಕೊಳ್ಳದ ವ್ಯಕ್ತಿ. ನನ್ನ ಸೊಸೆ ಬೇರೆಯವರ ಮುಂದೆ ತನ್ನ ಗಂಡನನ್ನು ಬಿಟ್ಟುಕೊಡುವುದಿಲ್ಲ. ಇದನ್ನು ಈಗ ಹೇಗೆ ನಿಭಾಯಿಸುತ್ತಾಳೋ ನೋಡೋಣ.” ಎಂದು ಮನಸ್ಸಿನಲ್ಲೇ ಆಲೋಚಿಸಿದರು.

ಭಟ್ಟರು ಹೇಳಿದ್ದನ್ನೆಲ್ಲಾ ಕೇಳಿದ ಲಕ್ಷ್ಮಿಗೆ ಮನಸ್ಸಿಗೆ ಪಿಚ್ಚೆನ್ನಿಸಿದರೂ ಮೂರನೆಯವರ ಎದುರಿಗೆ ಮನೆಯ ಯಜಮಾನರನ್ನು ಬಿಟ್ಟುಕೊಡುವುದು ಸೂಕ್ತವಲ್ಲ ಎಂದುಕೊಂಡಳು. ಕೂಡಲೇ “ಇದರಲ್ಲಿ ಕ್ಷಮೆ ಕೆಳುವುದೇನಿದೆ, ಕೆಲಸಗಳ ಮಧ್ಯೆ ಹೀಗಾಗುತ್ತದೆ. ಹೇಗೂ ಮಾವ ಬಂದಿದ್ದಾರೆ ಅವರ ವ್ಯಾನೂ ಇದೆ. ಒಂದು ಹೆಜ್ಜೆ ಹೋಗಿ ಬಂದುಬಿಡೋಣ ಬನ್ನಿ” ಎಂದಳು.

“ಹೇಗೆ ಹೋಗಲು ಸಾಧ್ಯ ಲಕ್ಷ್ಮೀ, ಬಸವ ಬೇರೆ ಯಾರನ್ನೋ ಕರೆದುಕೊಂಡು ಬರುತ್ತೇನೆಂದು ಹೇಳಿದ್ದಾನೆ. ಎಷ್ಟೊತ್ತಿಗೆ ಬರುತ್ತಾನೋ” ಎಂದು ಪೇಚಾಡತೊಡಗಿದರು ಭಟ್ಟರು.

ಆಗ ಲಕ್ಷ್ಮಿಯ ಸೋದರಮಾವ ರಾಮಣ್ಣನವರು “ಅದಕ್ಯಾಕೆ ಅಷ್ಟೊಂದು ಪೇಚಾಡುತ್ತೀರಾ, ನಾನು ಲಕ್ಷ್ಮಿಯನ್ನು ಕರೆದುಕೊಂಡು ಅಲ್ಲಿನ ಜೋಯಿಸರನ್ನು ಭೇಟಿಮಾಡಿಸಿ ಮಾತುಕತೆಯಾಡಿ ಹಾಗೇ ಕಲ್ಯಾಣಮಂಟಪವನ್ನೂ ತೋರಿಸಿಕೊಂಡು ಬರುತ್ತೇನೆ ಆಗದೇ?” ಎಂದರು.

ಈ ವ್ಯವಸ್ಥೆ ಲಕ್ಷ್ಮಿಗೆ ಒಪ್ಪಿತವಾಯಿತು. “ಹಾ ಹೋಗಿಬರಲೇ?” ಎಂದು ಲಗುಬಗೆಯಿಂದ ತಯಾರಾಗಿ ಮಾವನ ಜೊತೆಯಲ್ಲಿ ನಡೆದಳು.

“ತಪ್ಪು ತಿಳಿಯಬೇಡಿ ರಾಮಣ್ಣಮಾವ” ಎಂದು ಅಲವತ್ತುಕೊಳ್ಳುತ್ತಾ ಬಾಗಿಲಿನ ವರೆಗೂ ಬಂದು ಅವರನ್ನು ಬೀಳ್ಕೊಟ್ಟರು ಭಟ್ಟರು.

ಲಕ್ಷ್ಮಿ ಶ್ರೀರಾಮಕಲ್ಯಾಣಮಂಟಪದ ಬಗ್ಗೆ ಹಲವಾರು ಜನರ ಬಾಯಿಂದ ಕೇಳಿದ್ದಳೇ ಹೊರತು ಅಲ್ಲಿ ನಡೆದ ಯಾವುದೇ ಸಮಾರಂಭಕ್ಕೆ ಹೋಗುವ ಸಂದರ್ಭ ಬಂದಿರಲಿಲ್ಲ. ಈಗ ಆ ಸಮಯಬಂದಿದೆ. ಮೊದಲೇ ನೋಡಿಕೊಂಡಿದ್ದರೆ ಒಳ್ಳೆಯದೇ, ಸದ್ಯ ಅವರೇ ನೆನಪು ಮಾಡಿಕೊಂಡು ಹೆಳಿ ಕಳುಹಿಸಿದ್ದು ಒಳ್ಳೆಯದಾಯಿತು. ಹೀಗೆ ಯೋಚಿಸುತ್ತಿರುವಾಗಲೇ ವ್ಯಾನು ಗಕ್ಕನೆ ನಿಂತಿತು. “ಏನಾಯ್ತು ಮಾವ?” ಎಂದು ಕೇಳಿದಳು ಲಕ್ಷ್ಮಿ.

“ಏನಿಲ್ಲ ಕಲ್ಯಾಣಮಂಟಪಕ್ಕೆ ಬಂದಾಯ್ತು. ಕೆಳಗೆ ಇಳಿ” ಎಂದರು ರಾಮಣ್ಣ.

“ಓ ಸಿಕ್ಕೇಬಿಟ್ಟಿತೇ ! ನಾನು ತುಂಬ ದೂರವಿರಬಹುದೆಂದುಕೊಂಡೆ. ಇದು ನಮ್ಮ ಬೀಗರ ಮನೆಗೆ ಸಮೀಪವೇ ಇದೆ.” ಎಂದಳು.

“ಹೂ.. ಅವರ ಮನೆತನದವರದ್ದೇ ತಾನೇ,” ಎಂದು ವ್ಯಾನನ್ನು ಪಕ್ಕಕ್ಕೆ ನಿಲ್ಲಿಸಿ ಮಂಟಪದ ಮುಂಭಾಗದ ಗೇಟಿನಲ್ಲಿ ನಿಂತಿದ್ದ ಕಾವಲುಗಾರನನ್ನು ಕೇಳಿ ಗೇಟು ತೆಗೆಸಬೇಕೆನ್ನುವಷ್ಟರಲ್ಲಿ ಆತನೇ “ಭಟ್ಟರ ಮನೆಯವರಲ್ಲವೇ?” ಎಂದು ಕೇಳುತ್ತಾ ಒಳಗೆ ಹೋಗಲು ಅನುವು ಮಾಡಿಕೊಟ್ಟನು.

ಗೇಟುದಾಟಿ ಒಳಗೆ ಅಡಿಯಿಟ್ಟರು. ಹೊರಾಂಗಣ ವಿಶಾಲವಾಗಿತ್ತು. ಮುಂಭಾಗದಲ್ಲಿ ನಾಲ್ಕು ಕಂಭಗಳು ಚಪ್ಪರ ಹಾಕಲು ಅನುಕೂಲವಾಗುವಂತೆ ನಿಂತಿದ್ದವು. ಸುತ್ತಲೂ ಬಯಲು ವಾಹನಗಳ ನಿಲುಗಡೆಗೆ ದೊಡ್ಡದಾಗಿತ್ತು. ಎತ್ತರವಾದ ಕಾಂಪೌಂಡು, ಅದರ ಅಂಚಿನಲ್ಲಿ ಕಸಿಮಾಡಿಸಿದಂಥ ಬೇವು, ಮಾವಿನಮರಗಳು, ಹೂವಿನಗಿಡಗಳು, ಅಲ್ಲೊಂದು ಇಲ್ಲೊಂದು ತೆಂಗಿನ ಮರಗಳೂ. ಒಂದು ಅರಳೀಮರ ಸುತ್ತಲೂ ಅದಕ್ಕೊಂದು ಕಟ್ಟೆ, ಅದರ ಮುಂಭಾಗದಲ್ಲೊಂದು ತುಳಸಿಕಟ್ಟೆ, ಅದರೊಳಗಿನ ಪುಟ್ಟ ಗೂಡಿನಲ್ಲಿ ಉರಿಯುತ್ತಿದ್ದ ದೀಪವೂ ಕಾಣಿಸಿತು. ಪಕ್ಕದಲ್ಲಿಯೇ ಒಂದು ನಲ್ಲಿಯಿತ್ತು. ಅಲ್ಲಿ ಕೈಕಾಲು ತೊಳೆದುಕೊಂಡು ಒಳಕ್ಕೆ ಹೋಗಬೇಕೆನ್ನುವಷ್ಟರಲ್ಲಿ ಪುಟ್ಟಾಜೋಯಿಸರು ತಮ್ಮ ಹೆಂಡತಿಯೊಡನೆ ಹೊರಗೆ ಬರುತ್ತಿದ್ದರು. ಅದನ್ನು ಮೆಲುದನಿಯಲ್ಲಿ ರಾಮಣ್ಣ ಲಕ್ಷ್ಮಿಗೆ ಹೇಳಿದರು.

“ನಮಸ್ಕಾರ ಭಟ್ಟರ ಮನೆಯವರಲ್ಲವೇ?” ಎಂದು ಕೇಳುತ್ತಾ ಕಟ್ಟೆಯ ಹತ್ತಿರವೇ ಬಂದರು ಜೋಯಿಸರು.

ಪ್ರತಿ ನಮಸ್ಕಾರ ಹೇಳುತ್ತಾ “ ಹೌದು ಜೋಯಿಸರೇ, ನಾನು ಭಟ್ಟರ ಹೆಂಡತಿ ಲಕ್ಷ್ಮಿ, ಇವರು ನನ್ನ ಸೋದರಮಾವ ರಾಮಣ್ಣನವರು. ನನ್ನವರಿಗೆ ತುರ್ತಾಗಿ ಏನೋ ಕೆಲಸ ಬಂದದ್ದರಿಂದ ಅವರು ಬರಲಾಗಲಿಲ್ಲ” ಎಂದಳು.

“ಪರವಾಗಿಲ್ಲ, ಅವರಿಗಿಂತ ನೀವು ಬಂದಿರೋದು ಮುಖ್ಯ. ಮನೆಯ ಹೆಣ್ಣುಮಕ್ಕಳು ಒಂದುಸಾರಿ ಬಂದು ನೋಡಿ ವಿಚಾರ ವಿನಿಮಯ ಮಾಡಿಕೊಂಡರೆ ಒಳ್ಳೆಯದೆಂದು ನಿಮ್ಮವರಿಗೆ ಹೇಳಿದ್ದೆ. ಮದುವೆಗಿನ್ನು ನಾಲ್ಕಾರು ದಿನಗಳು ಉಳಿದಿವೆ. ಇನ್ನೂ ಬರದಿದ್ದುದನ್ನು ನೋಡಿ ನಾನೇ ಹೇಳಿಕಳುಹಿಸಿದೆ. ಬನ್ನಿ, ಈಕೆ ನನ್ನ ಧರ್ಮಪತ್ನಿ ಲಲಿತಾ, ನಮಗೆ ಮೂರುಜನ ಮಕ್ಕಳು. ಅವರಿಗೆಲ್ಲ ಮದುವೆ ಮಾಡಿದ್ದೇವೆ. ಹೆಣ್ಣುಮಕ್ಕಳಿಬ್ಬರೂ ಅವರವರ ಗಂಡನ ಮನೆಯಲ್ಲಿ ಸಂಸಾರ ಮಾಡಿಕೊಂಡಿದ್ದಾರೆ. ಇರುವ ಒಬ್ಬ ಮಗ ನಮ್ಮ ಈ ಕೆಲಸಗಳಿಗೆ ಕೈಜೋಡಿಸುತ್ತಾ ನಮ್ಮೊಡನೆ ಇದ್ದಾನೆ. ನಮ್ಮ ವಾಸಸ್ಥಾನಕ್ಕೆಂದು ಈ ಕಲ್ಯಾಣ ಮಂಟಪ ಕಟ್ಟಿಸಿದ ಪುಣ್ಯಾತ್ಮರು ಅನುಕೂಲ ಮಾಡಿಕೊಟ್ಟಿದ್ದಾರೆ. ನೋಡಿ ಅಲ್ಲಿ ಎದುರಿಗೆ ಕಾಣಿಸುತ್ತಿದೆಯಲ್ಲ ಅಲ್ಲಿ ಆರು ಮನೆಗಳಿವೆ. ಅದರಲ್ಲೊಂದು ನಮ್ಮದು. ಎಲ್ಲದರಲ್ಲೂ ನಮ್ಮವರೇ ಇದ್ದಾರೆ. ಕಲ್ಯಾಣಮಂಟಪದ ಹಿಂಭಾಗದಲ್ಲಿ ಪರಿಚಾರಕರಿಗಾಗಿ ಒಂದೆರಡು ಮನೆಗಳನ್ನೂ ಕಟ್ಟಿಸಿದ್ದಾರೆ. ಎಲ್ಲವನ್ನೂ ಸುಸ್ಥಿತಿಯಲ್ಲಿರುವಂತೆ ನೋಡಿಕೊಳ್ಳಲು ಒಂದು ಟ್ರಸ್ಟ್ ಇದೆ. ವೆಂಕಟರಮಣ ಜೋಯಿಸರೇ ಅದಕ್ಕೆ ಮುಖ್ಯಸ್ಥರು. ನಾವೂ ಧರ್ಮಕರ್ಮವೆಂದು ನಡೆಸಿಕೊಂಡು ಬರುತ್ತಿದ್ದೇವೆ” ಎಂದು ಪೂರ್ಣ ಇತಿಹಾಸವನ್ನೇ ಬಿಚ್ಚಿಟ್ಟರು. “ಬನ್ನಿ, ನೀವೂ ಒಳಗಡೆ ಒಂದು ಸುತ್ತುಹಾಕುವಿರಂತೆ” ಎಂದು ಕರೆದೊಯ್ದರು.

PC: Internet

“ ನೋಡಿ ಇದು ಒಳಾಂಗಣ, ಎರಡೂ ಕಡೆಯಲ್ಲಿ ಮೆಟ್ಟಿಲುಗಳಿವೆ. ಅವನ್ನು ಹತ್ತಿ ಹೋದರೆ ಒಂದೊಂದು ಪಕ್ಕದಲ್ಲೂ ನಾಲ್ಕಾರು ರೂಮುಗಳಿವೆ. ವಧು, ವರನ ಕಡೆಯವರು ಇಳಿದುಕೊಳ್ಳಲು ಅನುಕೂಲವಾಗಿದೆ. ಶೌಚಾಲಯ, ಸ್ನಾನದ ಮನೆಗಳು ಹೊರಗಿವೆಯಾದರೂ ರೂಮಿನಿಂದಲೇ ಹೊರಗೆ ಹೋಗಲು ಬಾಗಿಲುಗಳಿವೆ. ಹಾ..ಇಲ್ಲಿ ನೋಡಿ, ಇದು ಹಾಲ್, ಧಾರಾಮಂಟಪ, ಇದರ ಎರಡೂ ಬದಿಯಲ್ಲಿರುವ ರೂಮುಗಳು ಮಾತ್ರ ವಧೂವರರಿಗೆ ಮೀಸಲು. ಇತ್ತ ಬನ್ನಿ, ಊಟದಮನೆ, ಒಂದು ಸಲಕ್ಕೆ ಐವತ್ತು ಜನರು ಕುಳಿತುಕೊಳ್ಲಬಹುದು. ನಮ್ಮ ಮದುವೆಗಳಲ್ಲಿ ಅಪಾರ ಜನಸಂದಣಿಯೇನೂ ಇರುವುದಿಲ್ಲ. ಹಾಗೆ ಹೆಚ್ಚಿಗೇನಾದರು ಬಂದರೆ ಇದರ ಪಕ್ಕದಲ್ಲೇ ಮತ್ತೊಂದು ರೂಮಿದೆ. ಅಲ್ಲಿಯೂ ಕೂರಲು, ಬಡಿಸಲು ಸಾಕಷ್ಟು ಸ್ಥಳಾವಕಾಶವಿದೆ. ಮುಂದೆ ಬನ್ನಿ, ಇದು ಉಗ್ರಾಣದ ಮನೆ. ಅದರ ಬಲಭಾಗದಲ್ಲಿರುವುದೇ ಅಡುಗೆಮನೆ. ಪಾತ್ರೆಪಡಗಗಳ ವ್ಯವಸ್ಥೆಯಿದೆ. ಯಾವುದಕ್ಕೂ ಕೊರತೆಯಿಲ್ಲ. ಭಾವಿಗೆ ಪಂಪು ಹಾಕಿಸಿದ್ದಾರೆ, ವಿದ್ಯುತ್ ಕೈಕೊಟ್ಟರೆ ಬದಲಿಗೆ ಎಮರ್ಜೆನ್ಸಿ ಲೈಟುಗಳಿವೆ. ಹೊರಕ್ಕೆ ಹೋಗುವ ಬಾಗಿಲು ಇಲ್ಲಿನೋಡಿ, ಊಟಮಾಡಿದವರು ಕೈತೊಳೆದುಕೊಳ್ಳಲು ಸಾಲಾಗಿ ನಲ್ಲಿಗಳಿವೆ. ಎಲ್ಲವೂ ಅಚ್ಚುಕಟ್ಟಾಗಿದೆ.” ಎಂದು ಸಮಗ್ರವಾಗಿ ತಮ್ಮ ಕಂಚಿನ ಕಂಠದಲ್ಲಿ ವಿವರಿಸುತ್ತಾ ಬಿಡುಬೀಸಾಗಿ ಹೆಜ್ಜೆ ಹಾಕುತ್ತಾ ಬರುತ್ತಿದ್ದ ಪುಟ್ಟಾ ಜೋಯಿಸರನ್ನು ದಿಟ್ಟಿಸಿ “ಇವರಿಗ್ಯಾರಪ್ಪಾ ಪುಟ್ಟಾ ಜೋಯಿಸರೆಂದು ಹೆಸರಿಟ್ಟರೋ ಕಾಣೆ” ಎಂದುಕೊಂಡಳು ಲಕ್ಷ್ಮಿ. ಆದರೂ ಸ್ನೇಹಭರಿತವಾದ ಅವರ ಮಾತುಗಳು ಆಪ್ತತೆಯನ್ನುಂಟು ಮಾಡಿದವು. ಇನ್ನು ತಮ್ಮ ಜೊತೆಯಲ್ಲೇ ಹೆಜ್ಜೆ ಹಾಕುತ್ತಿದ್ದರೂ ಮೌನಗೌರಿಯಂತೆ ಬರುತ್ತಿದ್ದ ಲಲಿತಮ್ಮ ಸೌಮ್ಯವಾಗಿ ಗೌರವವನ್ನು ಹುಟ್ಟಿಸುವಂತಿದ್ದರು.

“ಎಲ್ಲವನ್ನು ನೋಡಿದಿರಲ್ಲಾ, ಈಗ ಬನ್ನಿ ಕುಳಿತು ಮಾತನಾಡೋಣ.” ಎಂದು ಹಾಲಿಗೆ ಕರೆದುಕೊಂಡು ಬಂದು ಅಲ್ಲಿದ್ದ ಜಮಖಾನದ ಮೇಲೆ ಲಕ್ಷ್ಮಿ, ರಾಮಣ್ನವರನ್ನು ಕುಳಿತುಕೊಳ್ಲಲು ಹೇಳಿದರು. ತಾವೂ ಸಹ ಅವರಿಗೆದುರಾಗಿ ಕುಳಿತರು. ಒಂದು ಪುಸ್ತಕವನ್ನು ಲಕ್ಷ್ಮಿಯ ಮುಂದಿಟ್ಟರು.

“ಇದೇನು ಜೋಯಿಸರೇ?” ಎಂದು ಕೇಳಿದಳು ಲಕ್ಷ್ಮಿ.

“ಅದು ನಿಮ್ಮ ಮನೆತನದ ಗೋತ್ರ, ಶಾಸ್ತ್ರ ಸಂಪ್ರದಾಯಕ್ಕೆ ತಕ್ಕಂತೆ ನಾವು ಸಿದ್ಧಪಡಿಸಿರುವ ವ್ಯವಸ್ಥೆಗಳ ಪಟ್ಟಿ. ವಧುವಿನ ಅಲಂಕಾರದಿಂದ ಕಲ್ಯಾಣ ಮುಗಿಸಿ ಬೀಳ್ಕೊಡುವವರೆಗೂ ಇದೆ. ನೀವೊಮ್ಮೆ ನೋಡಿಬಿಡಿ. ಏನಾದರೂ ವ್ಯತ್ಯಾಸವಿದ್ದರೆ ಹೇಳಿ. ಎಲ್ಲವನ್ನೂ ಒಪ್ಪಿಸಿದ್ದೀರಿ, ನಾವು ಒಪ್ಪಿಕೊಂಡಿದ್ದೇವೆ. ಆದರೂ ಒಮ್ಮೆ ನೋಡುವುದುತ್ತಮ” ಎಂದರು ಜೋಯಿಸರು.

ಲಕ್ಷ್ಮಿ ಅವರು ನೀಡಿದ ಪುಸ್ತಕದ ಮೇಲೆ ಕಣ್ಣಾಡಿಸಿದಳು. ಜೋಯಿಸರು ತಿಳಿಸಿದಂತೆ ಪ್ರತಿಯೊಂದನ್ನೂ ಹಂತಹಂತವಾಗಿ ಬರೆದಿಟ್ಟಿದ್ದರು. ಆಯಾಯ ಹೊತ್ತಿಗೆ ತಿಂಡಿ, ಊಟದ ವ್ಯವಸ್ಥೆ, ಏನೇನು ವ್ಯಂಜನಗಳನ್ನು ಮಾಡಬೇಕೆಂಬ ವಿವರಗಳು, ಬಂದವರಿಗೆ ತಾಂಬೂಲ. ಹೆಣ್ಣುಮಕ್ಕಳಿಗೆ ಮಡಿಲಕ್ಕಿ, ಬೀಗರಿಗೆ ಕೊಡುವ ತಿಂಡಿಗಳ ಬುಟ್ಟಿ, ಎಲ್ಲ ವಿವರಗಳನ್ನೂ ಬರೆದಿದ್ದರು. ಅದನ್ನೆಲ್ಲ ಗಮನಿಸಿದ ಲಕ್ಷ್ಮಿಗೆ ಪರಮಾನಂದವಾಯಿತು. ನಾವೇ ಆಗಿದ್ದರೂ ಇಷ್ಟೆಲ್ಲ ತಯಾರಿ ಮಾಡಿಕೊಳ್ಳುತ್ತಿದ್ದೆವೋ, ಇಲ್ಲವೋ ಅಥವಾ ಗಡಿಬಿಡಿಯಲ್ಲಿ ಏನಾದರು ಲೋಪವಾಗುತ್ತಿತ್ತು ಎಂದುಕೊಂಡಳು.. ಪುಸ್ತಕವನ್ನು ತನ್ನ ಮಾವನ ಕೈಯಿಗೆ ವರ್ಗಾಯಿಸಿದಳು. ಅವರೂ ನೋಡಿ “ಎಲ್ಲವೂ ಸರಿಯಾಗಿದೆ ಜೋಯಿಸರೇ, ನಮ್ಮ ಸೋದರ ಸೊಸೆಯ ಕುಟುಂಬದ ಮೇಲಾಗುತ್ತಿದ್ದ ಭಾರವನ್ನು ಹಗುರಗೊಳಿಸಲು ಮುಂದಾಗಿರುವ ನಿಮಗೆ ಸಾವಿರ ನಮಸ್ಕಾರಗಳು” ಎಂದರು. ರಾಮಣ್ಣನವರ ಮುಖದಲ್ಲಿ ಸಮಾಧಾನ ಎದ್ದು ಕಾಣುತ್ತಿತ್ತು.

“ಏ..ಬಿಡಿ, ನಾವೇನು ನಿಮ್ಮ ಕೆಲಸವನ್ನು ಪುಕ್ಕಟೆ ಮಾಡಿಕೊಡುತ್ತೇವೆಯೇ, ಅದು ಈ ಕಲ್ಯಾಣ ಕಟ್ಟಿಸಿದ ಮನೆತನದವರ ಮಗನ ಕಲ್ಯಾಣ. ಇಷ್ಟು ಜವಾಬ್ದಾರಿಯನ್ನು ತೆಗೆದುಕೊಳ್ಳದಿದ್ದರೆ ಹೇಗೆ? ಹೆದರಬೇಡಿ, ಯಾವುದಕ್ಕೂ ಲೋಪವಾಗದಂತೆ ನಡೆಸಿಕೊಡುತ್ತೇವೆ.” ಎಂದು ಆಶ್ವಾಸನೆ ಕೊಟ್ಟರು ಜೋಯಿಸರು.

“ಸರಿ, ನಾವಿನ್ನು ಬರೋಣವೇ” ಎಂದವರಿಗೆ “ಆಯಿತು” ಎಂದುತ್ತರಿಸಿ ಹಾಲು ಹಣ್ಣುಗಳನ್ನು ನೀಡಿ ಉಪಚರಿಸಿ ಬೀಳ್ಕೊಟ್ಟರು ವ್ಯವಸ್ಥಾಪಕರು.

ಅಲ್ಲಿಂದ ಹೊರಟು ಹಿಂದಿರುಗುವಾಗ ರಾಮಣ್ಣನವರು “ ಲಕ್ಷ್ಮೀ ಇಲ್ಲಿನ ಸಮಾರಂಭಗಳಿಗೆ ಬಂದಾಗ ಈ ಪುಟ್ಟಾ ಜೋಯಿಸರನ್ನು ನೋಡಿದ್ದೆನಾದರೂ ಪರಿಚಯ ಮಾಡಿಕೊಳ್ಳುವ ಅವಕಾಶವಾಗಿರಲಿಲ್ಲ,. ಇಂದೇ ಅವರನ್ನು ಮುಖತಃ ಭೇಟಿಮಾಡಿದ್ದು. ಅವರ ಮಾತುಗಳನ್ನು ಕೇಳಿದ್ದು. ನೀನು ಬಂದು ಅವರು ಮಾಡಿಕೊಂಡಿರುವ ಸಿದ್ಧತೆಗಳನ್ನು ಕೇಳಿ ತಿಳಿದುಕೊಂಡಿದ್ದು ಅನುಕೂಲವಾಯಿತು. ಮೊದಲೇ ನಾನು ಹೇಳಿದಂತೆ ಸುಸಂಪನ್ನ ವ್ಯಕ್ತಿ, ದುರಾಸೆಯ ಜನರಲ್ಲ. ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆಂಬ ಭರವಸೆ ನನಗಿದೆ ಹೆದರಬೇಡ” ಎಂದು ಧೈರ್ಯತುಂಬಿ ಅವಳನ್ನು ಮನೆಗೆ ಬಿಟ್ಟು ತಾವು ಹಿಂರಿರುಗಿದರು.

ಅಲ್ಲಿ ನಡೆದ ಎಲ್ಲ ಸಂಗತಿಗಳನ್ನು ಭಟ್ಟರೊಡನೆ ಹಂಚಿಕೊಂಡಳು ಲಕ್ಷ್ಮಿ ಅವರು ಮಾಡಿಕೊಂಡಿದ್ದ ಸಿದ್ಧತೆಗಳ ಬಗ್ಗೆ ಮೆಚ್ಚಿಗೆಯನ್ನು ವ್ಯಕ್ತಪಡಿಸುತ್ತಾ ವಿವರಿಸಿದಳು. ಅದೆಲ್ಲವನ್ನೂ ತದೇಕಚಿತ್ತದಿಂದ ಕೇಳಿದ ಭಟ್ಟರು “ಒಳ್ಳೆಯದಾಯಿತು ಬಿಡು ಲಕ್ಷ್ಮೀ, ಮುಂದಿನ ಮೂರೂಜನ ಹೆಣ್ಣುಮಕ್ಕಳಿಗೆ ಅದೇ ಕಲ್ಯಾಣಮಂಟಪ ಸಿಕ್ಕಿಬಿಟ್ಟರೆ ಹೆಚ್ಚು ಆತಂಕವಿಲ್ಲದೆ ಮದುವೆಗಳನ್ನು ಮಾಡಿ ಮುಗಿಸಬಹುದು. ಏನಂತೀಯಾ?” ಎಂದರು.

ಭಟ್ಟರ ಮಾತನ್ನು ಕೇಳಿದ ಲಕ್ಷ್ಮಿ “ಹೂಂ..ಆರಾಮವಾಗಿರುವುದು ಈ ಮನುಷ್ಯನ ರಕ್ತದಲ್ಲೇ ಬೆರೆತುಹೋಗಿದೆ ಅಂತ ಕಾಣಿಸುತ್ತೆ” ಎಂದು ಮನಸ್ಸಿನಲ್ಲೇ ಅಂದುಕೊಂಡು ಮೆಲುನಗೆ ಬೀರುತ್ತಾ ಒಳನಡೆದಳು. ಮುಂದಿನದೆಲ್ಲ ಹೂವಿನ ಸರ ಎತ್ತಿದಂತೆ ಸರಾಗವಾಗಿ ನಡೆದು ಮಗಳು ಭಾಗ್ಯಳನ್ನು ಗಂಡನ ಮನೆಗೆ ಕಳಿಸಿದ್ದಾಯಿತು ಲಕ್ಷ್ಮೀ ಮತ್ತು ಭಟ್ಟರಿಗೆ. ಶಾಸ್ತ್ರದಂತೆ ಒಂದೆರಡು ಸಾರಿ ನವದಂಪತಿಗಳನ್ನು ಕಳುಹಿಸುವುದು ಕರೆಯುವುದು ನಡೆದು ಅಲ್ಲಿನ ಸತ್ಯನಾರಾಯಣ ಪೂಜೆಗೆ ತಮ್ಮ ಹತ್ತಿರದ ಬಳಗದವರೊಡನೆ ಬೀಗರ ಮನೆಗೆ ಹೋಗಿ ಬಂದಾಯಿತು. ಬೀಗರ ಅಪೇಕ್ಷೆಯಂತೆ ಅಲ್ಲಿಯೇ ಮುಂದಿನ ಕಾರ್ಯಕಲಾಪಗಳನ್ನು ನಡೆಸಿ ಭಾಗ್ಯಳನ್ನು ಬಿಟ್ಟು ಬಂದಿದ್ದರು ಭಟ್ಟರು ದಂಪತಿಗಳು.

(ಮುಂದುವರಿಯುವುದು)

ಈ ಕಾದಂಬರಿಯ ಹಿಂದಿನ ಭಾಗ ಇಲ್ಲಿದೆ : http://surahonne.com/?p=35334

ಬಿ.ಆರ್.ನಾಗರತ್ನ, ಮೈಸೂರು

4 Responses

  1. ನಯನ ಬಜಕೂಡ್ಲು says:

    ಸೊಗಸಾಗಿದೆ ಕಥೆ

  2. Padma Anand says:

    ಅಂತೂ ಭಾಗ್ಯ ಸುಸೂತ್ರವಾಗಿ ಗಂಡನ ಮನೆಯನ್ನು ಸೇರಿದ್ದಾಯಿತು.
    ಸುಸೂತ್ರವಾಗಿ ಓದಿಸಿಕೊಳ್ಳುತ್ತಿರುವ ಸುಂದರ ಕಾದಂಬರಿ.

  3. . ಶಂಕರಿ ಶರ್ಮ says:

    ಸೊಗಸಾದ ಕಥಾ ನಿರೂಪಣೆ ಆತ್ಮೀಯವಾಗಿ ಓದಿಸಿಕೊಂಡು ಹೋಗುತ್ತಿದೆ.. .ಧನ್ಯವಾದಗಳು, ನಾಗರತ್ನ ಮೇಡಂ.

  4. ನಾಗರತ್ನ ಬಿ. ಆರ್ says:

    ನಯನ ಮೇಡಂ, ಪದ್ಮಾ ಮೇಡಂ, ಶಂಕರಿ ಮೇಡಂ ,ನಿಮ್ಮ ಪ್ರತಿ ಕ್ರಿಯೆಗೆ ನನ್ನ ಹೃತ್ಪರ್ವಕ ಧನ್ಯವಾದಗಳು.

Leave a Reply to . ಶಂಕರಿ ಶರ್ಮ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: