ವಿಶೇಷ ದಿನ

ಜೀವನದ ಗೆಲುವು ಪುಸ್ತಕಗಳ ಒಡಲು

Share Button

‘ಪುಸ್ತಕ’ ಎಂದರೆ ಜ್ಞಾನ ಭಂಡಾರ. ಎಂದೂ ಕರಗದ ಸಂಪತ್ತು. ಪುಸ್ತಕಗಳು ತಲೆಮಾರುಗಳ ಆಸ್ತಿಯೂ ಹೌದು. ಪುಸ್ತಕಗಳ ಮಹತ್ವ ಪುಸ್ತಕಗಳನ್ನು ಓದಿದವರಿಗೇ ಗೊತ್ತು. ರಾಮಾಯಣ, ಮಹಾಭಾರತದಂತಹ ಮಹಾ ಗ್ರಂಥಗಳು ಮನುಷ್ಯನಲ್ಲಿ ಒಳ್ಳೆಯ ವ್ಯಕ್ತಿತ್ವವನ್ನು ಹುಟ್ಟು ಹಾಕಬಲ್ಲವು. ಭಗವದ್ಗೀತೆಯು ಬದುಕಿನ ಬವಣೆಗಳನ್ನು ಭೇದಿಸುವ ರಹಸ್ಯವನ್ನು ತಿಳಿಸಿಕೊಡುತ್ತದೆ. ಮನುಷ್ಯನ ಆರೋಗ್ಯಕರ ವಿಕಸನದಲ್ಲಿ ಪುಸ್ತಕಗಳ ಪಾತ್ರ ಅತ್ಯಂತ ಮಹತ್ವದ್ದು.

ಇಂದಿನ ನಮ್ಮ ಬಹಳಷ್ಟು ಮಕ್ಕಳು ಪಠ್ಯಪುಸ್ತಗಳನ್ನು ಬಿಟ್ಟು ಬೇರೆ ಯಾವ ಪುಸ್ತಕಗಳನ್ನೂ ಓದುವ ಅಭ್ಯಾಸ ವನ್ನು ಬೆಳೆಸಿಕೊಳ್ಳುತ್ತಿಲ್ಲ. ಸದಾ ಮೊಬೈಲ್ ಬಳಕೆ ಅಥವಾ ಟಿವಿಯನ್ನು ನೋಡುತ್ತಾ ಕಾಲ ಕಳೆಯಲು ಹೆಚ್ಚು ಇಷ್ಟ ಪಡುತ್ತಾರೆ. ಪುಸ್ತಕಗಳನ್ನು ಓದುವ ತಾಳ್ಮೆ ಇಂದಿನ ಮಕ್ಕಳಲ್ಲಿ ಕಾಣದಾಗಿದೆ. ಇದಕ್ಕೆ ಮನೆಯ ಪರಿಸರವೂ ಕಾರಣವಾದೀತು. ಮನೆಯಲ್ಲಿ ದೊಡ್ಡವರಿಗೆ ಪುಸ್ತಕ ಓದುವ ಹವ್ಯಾಸ ಇಲ್ಲದಿರುವಾಗ ಅದು ಮಕ್ಕಳಿಗೆ ಹೇಗೆ ತಾನೆ ಬರಲು ಸಾಧ್ಯ? ಶಾಲೆಯಲ್ಲಿ ಕೊಡುವ ಅತಿಯಾದ ಹೋಂವರ್ಕ್, ಮನೆಪಾಠಗಳ ಹಾವಳಿ, ಮಕ್ಕಳಿಗಾಗಿ ಸಮಯವನ್ನು ಮೀಸಲಿಡದ ಹೆತ್ತವರು, ಸರಿಯಾದ ಮಾರ್ಗದರ್ಶನದ ಕೊರತೆಯಿಂದಾಗಿ ಮಕ್ಕಳಿಗೆ ಕಥೆ ಕಾದಂಬರಿಗಳನ್ನು ಓದುವ ಆಸಕ್ತಿ ಹುಟ್ಟುತ್ತಲೇ ಇಲ್ಲ.

ಪಠ್ಯಪುಸ್ತಗಳ ಹೊರತಾಗಿ ಒಳ್ಳೆಯ .ಅನ್ಯ ಪುಸ್ತಕಗಳನ್ನು ಓದುವುದರಿಂದ ಮಕ್ಕಳಲ್ಲಿ ಭಾಷಾ ಜ್ಞಾನ, ಪದಗಳ ಪರಿಚಯ, ಸಾಹಿತ್ಯದಲ್ಲಿ ಆಸಕ್ತಿ, ಬೆಳೆಯುತ್ತದೆ. ನೈತಿಕತೆ, ಸೃಜನಶೀಲತೆ ಹಾಗು ಪ್ರಬುದ್ಧತೆ ಅರಳಲು ಸಾಧ್ಯವಾಗುತ್ತದೆ. ಯಾವುದೇ ವಿಷಯದ ಬಗ್ಗೆ ವಿಶ್ಲೇಷಿಸುವ, ಸ್ವಂತ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಶಕ್ತಿ ಸಾಮರ್ಥ್ಯವನ್ನು ಹೊಂದಬಹುದಾಗಿದೆ. ಭಾಷಾ ಪ್ರೇಮ ಇಮ್ಮಡಿಯಾಗುತ್ತದೆ. ಆಯಾ ಭಾಷೆಗಳನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಸಂರಕ್ಷಿಸಲು ಸಹಾಯವಾಗುತ್ತದೆ. ಅದರಲ್ಲೂ ಸ್ಥಳೀಯ ಹಾಗು ಪ್ರಾದೇಶಿಕ  ಭಾಷೆಗಳ ಸಾಹಿತ್ಯ ಲೋಕ ಸುಭಿಕ್ಷ್ಯವಾಗುತ್ತದೆ. ಮನುಷ್ಯನ ಅಸ್ಮಿತೆ ಕೇವಲ ಆಯಾ ಪ್ರದೇಶದ ಸಂಸ್ಕಾರ,ಸಂಸ್ಕೃತಿಯ ಮೇಲಷ್ಟೇ ಅಲ್ಲ ಭಾಷೆಯ ಮೇಲೂ ಅವಲಂಬಿತವಾಗಿರುತ್ತದೆ. ಎಷ್ಟೇ ವಿದ್ಯಾವಂತರಾದರೂ ಸಮರ್ಥವಾಗಿ ಸಂವಹನ ಸಾಧಿಸಲು ಭಾಷಾ ಜ್ಞಾನ ಅತ್ಯಗತ್ಯ. ಭಾಷಾ ಜ್ಞಾನದ ಮೇಲೆ ಮೇಲುಗೈ ಸಾಧಿಸಲು ಹೆಚ್ಚು ಹೆಚ್ಚು ಪುಸ್ತಕಗಳನ್ನು ಓದುವುದು ಅತ್ಯವಶ್ಯಕ.

PC: Internet

ನಮ್ಮ ಪೂರ್ವಜರು ‘ದೇಶ ಸುತ್ತು ಕೋಶ ಓದು’ ಎಂಬ ಅರ್ಥಗರ್ಭಿತವಾದ ಗಾದೆಯನ್ನು ಅದೆಷ್ಟೋ ವರ್ಷಗಳ ಹಿಂದೆಯೇ ಸೃಷ್ಟಿ ಮಾಡಿದ್ದಾರೆ. ಇಂದು ಸಾಹಿತ್ಯ ಕೃಷಿ ಮಾಡಲು ಅನೇಕ ಅವಕಾಶಗಳಿವೆ. ಆ ಅವಕಾಶಗಳನ್ನು ಪಡೆಯಲು ಹಲವಾರು ದಾರಿಗಳೂ ಇವೆ. ಪುಸ್ತಕಗಳು ಮನುಷ್ಯನಿಗೆ ಗುರುವಾಗಿ, ಸಂಗಾತಿಯಾಗಿ, ಮಾರ್ಗದರ್ಶಿಯಾಗಿ ಸನ್ಮಾರ್ಗವನ್ನು ತೋರಿಸುತ್ತದೆ.ನೈತಿಕತೆಯ ಮಟ್ಟ ಕಡಿಮೆಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ನೀತಿಪಾಠ ತಿಳಿಸಿ ಕೊಡುವ ಪುಸ್ತಕಗಳ ಓದು ಬೇಕಿದೆ. ಧರ್ಮ, ನ್ಯಾಯ, ನೀತಿ ಸಾರುವ ಪುಸ್ತಕಗಳಿಂದ ನೀತಿವಂತ ಸಮಾಜ ಕಟ್ಟಲು ಸಾಧ್ಯ. ಎಪ್ರಿಲ್ 23 ರಂದು ವಿಶ್ವ ಪುಸ್ತಕ ದಿನ. ಈ ಸಂದರ್ಭದಲ್ಲಿ, ಭವಿಷ್ಯದ ಬಲಿಷ್ಠ ನ್ಯಾಯಯುತ ಸಮಾಜ ನಿರ್ಮಾಣಕ್ಕಾಗಿ ಇಂದೇ ಪಣ ತೊಡೋಣ. ಪುಸ್ತಕ ದಾಸೋಹಕ್ಕೆ ನಾಂದಿ ಹಾಡೋಣ.

ಮಾಲಿನಿ ವಾದಿರಾಜ್

7 Comments on “ಜೀವನದ ಗೆಲುವು ಪುಸ್ತಕಗಳ ಒಡಲು

  1. ಪುಸ್ತಕ ದ ಓದು ಅದರ ಉಪಯೋಗ ಇಂದಿನವರಲ್ಲಿನ ಅಸಡ್ಡೆ ಎಲ್ಲವನ್ನೂ ಅಚ್ಚುಕಟ್ಟಾಗಿ ಹೇಳಿ..ಅದರಲ್ಲಿ ನಮ್ಮ ನಮ್ಮ ಪಾತ್ರ ಗಳ.ಜವಾಬ್ದಾರಿ ಯನ್ನು.. ನೆನಪಿಸಿರುವ ಲೇಖನ ‌ ..ಚೆನ್ನಾಗಿ ದೆ ಧನ್ಯವಾದಗಳು ಸೋದರಿ.

  2. ಪುಸ್ತಕ ಓದಿನ ಮಹತ್ವವನ್ನು ಸೊಗಸಾಗಿ ತಿಳಿಯಪಡಿಸಿರುವಿರಿ…ಧನ್ಯವಾದಗಳು.

  3. ಇಂದಿನ ಈ ಪರಿಸ್ಥಿತಿಗೆ ಪೋಷಕರೇ ಕಾರಣ. ಉತ್ತಮ ಲೇಖನ. ಧನ್ಯವಾದಗಳು ಮೇಡಂ.

  4. ಸೊಗಸಾದ ನಿರೂಪಣೆಯಿಂದ ಕೂಡಿದ ಚಂದದ ಲೇಖನ.

Leave a Reply to Achyuta Bidarhalli Cancel reply

 Click this button or press Ctrl+G to toggle between Kannada and English

Your email address will not be published. Required fields are marked *