ಪುಸ್ತಕ ಓದುವಿಕೆಯ ಖುಷಿ

Share Button


ಪುಸ್ತಕಗಳಿಗಿಂತ ಒಳ್ಳೆಯ ಮಿತ್ರ ಬೇರೊಬ್ಬನಿಲ್ಲ ಎಂಬ ಮಾತು ಎಷ್ಟು ಅರ್ಥಪೂರ್ಣವಾಗಿದೆ ಎಂಬುದನ್ನು ಪುಸ್ತಕ ಪ್ರೇಮಿಯಲ್ಲಿ ಕೇಳಬೇಕು. ನಾವು ಕುಳಿತಲ್ಲಿಯೇ ನಮ್ಮನ್ನು ಬೇರೆ ಲೋಕಕ್ಕೆ ಕರೆದುಕೊಂಡು ಹೋಗುವ ಅದ್ಭುತ ಶಕ್ತಿಯಿರುವುದು ಪುಸ್ತಕಗಳಿಗೆ ಮಾತ್ರ. ಕೆಲವೊಂದು ಕತೆ, ಕಾದಂಬರಿಗಳನ್ನು ಓದಿದಾಗ ಅದರಲ್ಲಿನ ಪಾತ್ರಗಳು ನಾವೇ ಅನ್ನುವ ಮಟ್ಟಿಗೆ ನಮ್ಮನ್ನು ಕಾಡುತ್ತವೆ. ಒಂಟಿಯಾಗಿರುವಾಗ, ಪ್ರಯಾಣ ಮಾಡುವಾಗ, ಏಕಾಂತತೆಯನ್ನು ನೀಗಲು ಪುಸ್ತಕಗಳು ಸಹಕಾರಿ.

ಪುಸ್ತಕ ಓದುವ ಅಭಿರುಚಿಯನ್ನು ಚಿಕ್ಕಂದಿನಿಂದಲೇ ಮಕ್ಕಳುರೂಢಿಸಿಕೊಳ್ಳಬೇಕು. ‘ಮನೆಯೇ ಮೊದಲ ಪಾಠಶಾಲೆ’ ಎಂಬಂತೆ ಈ ಅಭ್ಯಾಸ ಮನೆಯಿಂದಲೇ ಪ್ರಾರಂಭಗೊಳ್ಳುವುದು ಅಗತ್ಯ. ಎಳೆಯ ವಯಸ್ಸಿನ ಕಲಿಕೆಯು ಮುಂದೆ ಮಕ್ಕಳಲ್ಲಿ ಅಗಾಧ ಪರಿಣಾಮಕಾರಿಯಾಗಬಲ್ಲುದು.ವಿದ್ಯಾರ್ಥಿ ಜೀವನದಲ್ಲಿ ಕಲಿಕೆಯು ಬರೀ ತರಗತಿ ಕೊಠಡಿಯಲ್ಲಿ ದೊರೆಯುವ ವಿದ್ಯೆಗೆ ಸೀಮಿತವಾಗಿರದೆ, ಇತರ ಮೂಲಗಳಿಂದಲೂ ಜ್ಞಾನ ಸಂಪಾದನೆ ಮಾಡುವಂತಿರಬೇಕು. ಉದಾಹರಣೆಗೆ ಗ್ರಂಥಾಲಯದಿಂದ ಕೆಲವೊಂದು ಮಾಹಿತಿಯನ್ನು ಪಡೆಯಬಹುದು ಅಲ್ಲದೆ ಗುಂಪು ಸಂವಹನದಿಂದಲೂ ವಿಷಯಗಳನ್ನು ಅರಿಯಬಹುದು. ವಿದ್ಯಾರ್ಥಿಗಳು ಪ್ರತಿನಿತ್ಯ ಗ್ರಂಥಾಲಯಕ್ಕೆ ಭೇಟಿ ನೀಡಿ ದಿನದ ಹತ್ತು ಅಥವಾ ಹದಿನೈದು ನಿಮಿಷಗಳನ್ನು‌ಓದುವುದರಲ್ಲಿ ಕಳೆಯುವುದು,ಬಿಡುವಿದ್ದಾಗ ಮನೆಯ ಸಮೀಪದಲ್ಲಿರುವ ವಾಚನಾಲಯಕ್ಕೆ ಭೇಟಿನೀಡುವುದು ಹೀಗೆ ಸಮಯದ ಸದುಪಯೋಗ ಮಾಡಿಕೊಂಡಾಗಲೇ ಓದುವ ಹಂಬಲ ಬೆಳೆಯುತ್ತದೆ. ಓದುವುದರಿಂದ ಬರೆಯುವ ಹಾಗೂ ಮಾತನಾಡುವ ಕೌಶಲ್ಯ ಅಭಿವೃದ್ಧಿಯಾಗಿ ಕಠಿನ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತದೆ. ವಿದ್ಯಾರ್ಥಿಗಳಲ್ಲಿ ಉತ್ತಮ ಸಂಸ್ಕಾರ, ಜೀವನ ಮೌಲ್ಯ, ಸಂಸ್ಕ್ರತಿಯುಳ್ಳ ಬದುಕು ರೂಪಗೊಳ್ಳುವಿಕೆಗೆ ಓದುವಿಕೆ ಅತೀ ಅಗತ್ಯ. ಮಹಾನ್ ಪುರುಷರ ಜೀವನ ಚರಿತ್ರೆಯನ್ನು ಓದುವುದರಿಂದ ವ್ಯಕ್ತಿತ್ವ ವಿಕಸನಗೊಂಡು ಜೀವನದಲ್ಲಿ ಯಶಸ್ಸು ಗಳಿಸುವುದರಲ್ಲಿ ಸಂದೇಹವೇ ಇಲ್ಲ. ಶ್ರೇಷ್ಠ ಲೇಖಕರು ಬರೆದ ಉತ್ತಮ ಗ್ರಂಥಗಳನ್ನು ಓದುವುದರಿಂದ ವಿದ್ಯಾರ್ಥಿಯು ತನ್ನ ಜ್ಞಾನಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು.

PC: Internet

ಬಾಲ್ಯದಿಂದಲೇ ನನಗೆ ಪುಸ್ತಕಗಳನ್ನು ಓದುವುದೆಂದರೆ ಪಂಚಪ್ರಾಣ. ನನಗೆ ಓದಿನ ಹುಚ್ಚು ಹಿಡಿಸಿದ್ದು ನನ್ನ ಹೆತ್ತವರು. ತಂದೆ, ತಾಯಿ ಇಬ್ಬರೂ ಪುಸ್ತಕಪ್ರಿಯರಾಗಿದ್ದರು. ನಮ್ಮ ಮನೆಗೆ ಕಸ್ತೂರಿ, ಕರ್ಮವೀರ, ಸುಧಾ, ಮಯೂರ, ಪ್ರಜಾಮತ, ಚಂದಮಾಮ, ಬೊಂಬೆಮನೆ, ಅಮರ ಚಿತ್ರ ಕಥೆ, ಬಾಲಮಿತ್ರ ಹೀಗೆ ಅನೇಕ ಪುಸ್ತಕಗಳನ್ನು ತರುತ್ತಿದ್ದರು. ನಾವೆಲ್ಲಾ ಮಕ್ಕಳು ಆ ಪುಸ್ತಕಗಳನ್ನು ಆಸಕ್ತಿಯಿಂದ ಓದುತ್ತಿದ್ದೆವು. ಓದಿದ ಬಳಿಕ ಅವನ್ನು ಬೈಂಡಿಗ್ ಮಾಡಿಸಿ ತೆಗೆದಿಟ್ಟು ರಜಾದಿನಗಳಲ್ಲಿ ಇನ್ನೊಮ್ಮೆ ಓದುತ್ತಿದ್ದೆವು. ಮುಂದೆ ಈ ಹವ್ಯಾಸವು ಹೆಮ್ಮರವಾಗಿ ಬೆಳೆದು ನನ್ನ ವೃತ್ತಿ ಬದುಕನ್ನು ಈ ದಿಕ್ಕಿನಲ್ಲಿಯೇ ಆಯ್ದುಕೊಳ್ಳುವ ಅವಕಾಶ ಪ್ರಾಪ್ತಿಯಾಯಿತು.

ಆದರೆ ಇತ್ತೀಚಿನ ದಿನಗಳಲ್ಲಿ ಯುವಜನರಲ್ಲಿ ಪುಸ್ತಕ ಓದುವ ಹವ್ಯಾಸ ಕಡಿಮೆಯಾಗುತ್ತಿರುವುದನ್ನು ನಾವು ಕಾಣಬಹುದು. ಪುಸ್ತಕ ಎಂದರೆ ಮಾರುದ್ದ ದೂರ ಓಡುವವರೇ ಜಾಸ್ತಿ. ಅಲ್ಲೋ ಇಲ್ಲೋ ಒಂದಿಬ್ಬರನ್ನು ಬಿಟ್ಟರೆ ಪುಸ್ತಕ ಓದುವ ಅಭಿರುಚಿ ಇರುವವರನ್ನು ಕಾಣಲು ಕಷ್ಟ ಸಾಧ್ಯ. ಅದರಲ್ಲೂ ವಿದ್ಯಾರ್ಥಿಗಳಂತೂ ಪರೀಕ್ಷೆಯ ಸಮಯ ಬಿಟ್ಟರೆ ಬೇರೆ ಸಮಯದಲ್ಲಿ ಪುಸ್ತಕವನ್ನು ಮುಟ್ಟಲು ಬಹಳಷ್ಟು ಹಿಂಜರಿಯುವುದನ್ನು ನಾವು ಕಾಣಬಹುದು. ಪರೀಕ್ಷೆಗಳಿಗೆ ಅಂಕಗಳೇ ಮಾನದಂಡವಾದ ಕಾರಣ ಪಠ್ಯಪುಸ್ತಕಗಳನ್ನು ಉರುಹೊಡೆಯುತ್ತಾರೆ. ಆದರೆ ಇತರ ಪುಸ್ತಕಗಳನ್ನು ಓದುವ ಗೊಡವೆಗೆ ಹೋಗುವುದಿಲ್ಲ. ಹೆಚ್ಚುವರಿ ಮಾಹಿತಿ ಬೇಕಾದಲ್ಲಿ ಆಧುನಿಕ ತಂತ್ರಜ್ಞಾನದ ಮೊರೆ ಹೋಗುವುದು ಸರ್ವೇಸಾಮಾನ್ಯ. ಇದರ ಬದಲು ತನ್ನ ಓರಗೆಯವರೊಡನೆ ಗುಂಪು ಚರ್ಚೆ, ಸಂವಹನ, ಸಮೂಹ ಕಲಿಕೆ ಇತ್ಯಾದಿಗಳನ್ನು ಮಾಡುವುದರಿಂದ ಹಲವಾರು ವಿಷಯಗಳನ್ನು ತಿಳಿಯುವದರ ಜೊತೆಗೆ ಪುಸ್ತಕ ಪ್ರೀತಿಯೂ ಹುಟ್ಟುತ್ತದೆ.

ಪುಸ್ತಕಗಳೇ ವಿದ್ಯಾಭ್ಯಾಸದ ಮೂಲಮಂತ್ರವಾಗಿದ್ದು, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವವನ್ನು ಬೆಳೆಸುವುದರೊಂದಿಗೆ ಸುಸಂಸ್ಕೃತ ಮನೋಭಾವ, ಮೌಲ್ಯಯುತ ಜೀವನ, ಉತ್ತಮ ಸಂಸ್ಕಾರವನ್ನು ಮೂಡಿಸಲು ಸಹಕಾರಿಯಾಗುತ್ತದೆ. ಶಿಕ್ಷಣವು ಮನುಷ್ಯನನ್ನು ವಿದ್ಯಾವಂತನಾಗಿಸಿದರೆ, ಓದುವಿಕೆಯು ವಿಚಾರವಂತನಾಗಿಸುತ್ತದೆ. ವಿದ್ಯಾರ್ಥಿಯು ತನ್ನ ಅಮೂಲ್ಯ ಸಮಯವನ್ನು ಹಾಳು ಹರಟೆ, ಕ್ಯಾಂಟೀನ್, ಮೊಬೈಲ್, ಸ್ನೇಹಿತರು ಎಂದೆಲ್ಲಾ ವ್ಯಯಮಾಡದೆ, ಕಿಂಚಿತ್ ಸಮಯವನ್ನು ಓದುವಿಕೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮ.ಓದು ಎಂದಿಗೂ ವ್ಯಯವಾಗದ ಆಸ್ತಿ. ಆದರಲ್ಲೂ ಓದಿನಿಂದ ಸಿಗುವ ಜ್ಞಾನದ ಅರಿವನ್ನು ಯಾರೂ ಎಂದಿಗೂ ನಮ್ಮಿಂದ ಕಸಿಯಲು ಸಾಧ್ಯವಿಲ್ಲ. ಆದ್ದರಿಂದ ಪುಸ್ತಕ ಪ್ರೀತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು. ಸಮಯ ಸಿಕ್ಕಾಗಲೆಲ್ಲಾ ಅಲ್ಪ ಹೊತ್ತು ಸಮಯವನ್ನು ಓದಲು ಮೀಸಲಿಡಬೇಕು.

ಪಾಶ್ಚ್ಯಾತ್ಯ ದೇಶಗಳಲ್ಲಿ ಜನರು ಓದಲೆಂದೇ ಪುಸ್ತಕ ಮಳಿಗೆಗಳಿಗೆ ತೆರಳಿ ಪುಸ್ತಕ ಖರೀದಿಸುತ್ತಾರೆ. ಅಲ್ಲಿನ ಜನರು ಬಹುತೇಕ ಸಮಯವನ್ನು ಗ್ರಂಥಾಲಯಗಳಲ್ಲಿ ವ್ಯಯಿಸುವುದನ್ನು ನಾವು ಕಾಣಬಹುದಾಗಿದೆ. ನಮ್ಮ ಹಿಂದಿನ ರಾಷ್ಟ್ರಪತಿ ಶ್ರೀ ಪ್ರಣವ್ ಮುಖರ್ಜಿಯವರು ಬಹು ದೊಡ್ಡ ಪುಸ್ತಕಪ್ರಿಯರಾಗಿದ್ದರು. ಅಲ್ಲದೆ ಅವರು ತಂಗಿದ್ದ ರಾಷ್ಟ್ರಪತಿ ಭವನದಲ್ಲಿ ವಿಶಾಲವಾದ ಗ್ರಂಥಾಲಯವನ್ನು ಹೊಂದಿದ್ದರು. ಇವುಗಳನ್ನೆಲ್ಲಾ ಗಮನಿಸಿದಾಗ ನಮಗೆ ಕಂಡು ಬರುವ ಅಂಶ ಏನೆಂದರೆ ಓದುವಿಕೆಯು ಮನುಷ್ಯನನ್ನು ಬಹು ಎತ್ತರಕ್ಕೆ ಕೊಂಡೊಯ್ಯುವುದಲ್ಲದೆ, ಬದುಕನ್ನು ಬದಲಿಸುವ ಸಾಮರ್ಥ್ಯವಿರುವುದು ಓದಿಗೆ ಮಾತ್ರ. ಓದಿದವನು ಎಂದಿಗೂ ಕೀಳರಿಮೆ ಬೆಳೆಸಿಕೊಳ್ಳದೆ ಬದುಕಲು ಸಾಧ್ಯ. ಜ್ಞಾನದ ಕಣಜಗಳಾಗಿರುವ ಪುಸ್ತಕಗಳನ್ನು ಓದುವ ಖುಷಿ, ಅವುಗಳ ಒಡನಾಟದಿಂದ ದೊರೆಯುವ ತೃಪ್ತಿ ಓದುಗನೇ ಬಲ್ಲ. ನನಗಂತೂ ಓದುವುದೆಂದರೆ ತುಂಬಾ ಖುಶಿ. ನೀವೂ ಕೂಡ ಯಾಕೆ ಈ ಖುಶಿಯಿಂದ ವಂಚಿತರಾಗುತ್ತೀದ್ದೀರಿ? ಇಂದೇ ಪುಸ್ತಕ ಓದುವಿರಲ್ಲವೇ?

-ಶೈಲಾರಾಣಿ ಬಿ, ಮಂಗಳೂರು.

8 Responses

  1. ನಾಗರತ್ನ ಬಿ. ಆರ್ says:

    ಪುಸ್ತಕ ಓದುವ ಅಭಿರುಚಿ ಅದನ್ನು ಬೆಳಸಿಕೊಳ್ಳುವ ಬಗ್ಗೆ..
    ಸೃಷ್ಟಿ ಸುವ ವಾತಾವರಣ ದ ರೀತಿ ನೀತಿ…ಪೋಷಕ ರ ಜವಾಬ್ದಾರಿ ನಮ್ಮ ಕೊಡುಗೆ.. ಅದರಿಂದ ಉಂಟಾಗುವ ಸಂತಸ …ಎಲ್ಲವನ್ನೂ ಚೊಕ್ಕ ವಾಗಿ ತಮ್ಮ ಲೇಖನ ದಲ್ಲಿ ಡಿಮೂಡಿಸಿರುವ ನಿಮಗೆ ಧನ್ಯವಾದಗಳು ಮೇಡಂ

  2. . ಶಂಕರಿ ಶರ್ಮ says:

    ಬಾಲ್ಯದಲ್ಲಿ ಪುಸ್ತಕ ಪ್ರೀತಿ ಹುಟ್ಟಿಕೊಂಡರೆ, ಅದು ಸುಂದರ ಭವಿಷ್ಯವನ್ನು ರೂಪಿಸುವುದರಲ್ಲಿ ಎರಡು ಮಾತಿಲ್ಲ. ಪುಸ್ತಕ ಓದುವಿಕೆಯ ಅಗತ್ಯತೆಯನ್ನು ತೆರೆದಿಟ್ಟ ಲೇಖನ ಇಷ್ಟವಾಯ್ತು.

  3. ಕೆ. ರಮೇಶ್ says:

    ಅಗತ್ಯ ವಾದ ಮಾಹಿತಿ ಇರುವ ಲೇಖನ. ಧನ್ಯವಾದಗಳು ಮೇಡಂ.

  4. ನಯನ ಬಜಕೂಡ್ಲು says:

    ಚಂದದ ಬರಹ. ಓದಿನಲ್ಲಿ ಸಿಗುವ ಸುಖ ಬೇರೆ ಯಾವುದರಲ್ಲೂ ಸಿಗದು.

  5. Shakila says:

    Very inspiring article.

  6. Anjali Ganesh says:

    Explicitly written on how children have to cultivate reading habit from childhood. Really apt for the present day Shila mam.

  7. Padma Anand says:

    ಪುಸ್ತಕಗಳನ್ನು ಓದುವುದರಿಂದ ಸಿಗುವ ಸಂತಸ ಮತ್ತು ಪ್ರಯೋಜನಗಳನ್ನು ಸೊಗಸಾಗಿ ಬಿಡಿಸಿಟ್ಟ ಲೇಖನಕ್ಕಾಗಿ ಅಭಿನಂದನೆಗಳು.

Leave a Reply to ಕೆ. ರಮೇಶ್ Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: