ಕನಸುಗಳ ಸುತ್ತೊಂದು ಗಿರಕಿ
ಕನಸು ಕಾಣದವರು ಯಾರೂ ಇರಲಿಕ್ಕಿಲ್ಲ. ಸುಂದರ ಬದುಕಿನ ಭವ್ಯ ಭವಿತವ್ಯದ ಬಗ್ಗೆ ಕನಸು ಕಂಡು ಆ ಕನಸುಗಳನ್ನು ನನಸಾಗಿಸಲು ಪ್ರಯತ್ನಪಟ್ಟು ಯಶಸ್ಸು ಪಡೆದವರು ಹಲವರು. ಪ್ರಯತ್ನಪಡದೆ ಇದ್ದರೆ ಅದು ‘ತಿರುಕನ ಕನಸು’ ಅನ್ನಿಸಿಕೊಳ್ಳುವುದು. ಸುಪ್ತ ಮನಸ್ಸಿನಲ್ಲಿ ಬೀಡು ಬಿಟ್ಟಿರುವ ಯಾರಲ್ಲಿಯೂ ಹೇಳಿಕೊಳ್ಳಲಾಗದ ಅನುಭವಗಳು ಕೂಡಾ ಕನಸುಗಳಾಗಿ ಕಾಡುವುದುಂಟು. ಆದರೂ ದೀರ್ಘನಿದ್ರೆಯಲ್ಲಿರುವಾಗ ಬೀಳುವ ಕೆಲವು ಕನಸುಗಳಿಗೆ ಅರ್ಥವೇ ಇರುವುದಿಲ್ಲ. ಕೆಲವು ಕನಸುಗಳು ನಿದ್ದೆಗೆ ಭಂಗ ತರುವುದುಂಟು. ಭಯಭೀತರಾಗಿ ಬೊಬ್ಬಿಟ್ಟು ಹತ್ತಿರ ಮಲಗಿದವರ ನಿದ್ರಾಭಂಗವೂ ಆಗುವುದುಂಟು. ಕನಸು ಮುಗಿದರೂ, ಹೆದರಿಕೆಯೇ ಕಾರಣವಾಗಿ ಕಣ್ಣು ಮುಚ್ಚಲು ಸಾಧ್ಯವಾಗದೇ ನಿದ್ರಾರಹಿತ ರಾತ್ರಿಗಳನ್ನು ಕಳೆಯಬೇಕಾಗುವುದು. ಆಷ್ಟಕ್ಕೂ ತುದಿಮೊದಲಿಲ್ಲದ ಕೆಲವು ಕನಸುಗಳು ಯಾಕಾಗಿ ಬೀಳುತ್ತವೆಯೋ ಆ ದೇವರಿಗೆ ಮಾತ್ರ ಗೊತ್ತು. ಆದರೂ ಬೆಳಗಿನ ಜಾವ ಕೆಟ್ಟ ಕನಸು ಬಿದ್ದರಂತೂ ಹೇಳುವುದೇ ಬೇಡ. ಬೆಳಗಿನ ಜಾವ ಬಿದ್ದ ಕನಸುಗಳು ನಿಜವಾಗುತ್ತವೆ ಅನ್ನುವ ಪ್ರತೀತಿ ಇದೆಯಲ್ಲಾ!
ಕೆಲವು ಕನಸುಗಳು ಎಚ್ಚರವಾದ ನಂತರ ನೆನಪೇ ಇರುವುದಿಲ್ಲ. ಕೆಲವು ಕನಸುಗಳು ಒಂದೆರಡು ದಿನ ನೆನಪಿದ್ದರೆ, ಇನ್ನು ಕೆಲವು ಒಂದೆರಡು ವಾರ, ಇನ್ನು ಕೆಲವು ಒಂದೆರಡು ತಿಂಗಳು ನೆನಪಿರುತ್ತವೆ. ಕನಸು ಬಿದ್ದ ದಿನ ನಮ್ಮ ಮನಸ್ಥಿತಿ ಹೇಗಿರುತ್ತದೋ, ಅದನ್ನು ಹೊಂದಿಕೊಂಡು ಕನಸುಗಳ ಪರಿಣಾಮ ನಮ್ಮ ಮನಸ್ಸಿನ ಮೇಲಾಗುತ್ತದೆ. ಇದಕ್ಕೆ ಪೂರಕವಾಗಿ ಒಂದು ಘಟನೆ ನೆನಪಿಗೆ ಬರುತ್ತಿದೆ. ವಿಧಾನಸಭಾ ಚುನಾವಣಾ ಕರ್ತವ್ಯಕ್ಕೆಂದು ಹೋದಾಗ, ನನ್ನ ಜೊತೆಯಿದ್ದ ಒಬ್ಬರು ಶಿಕ್ಷಕಿಗೆ ಹಳ್ಳಿಯ ವಾತಾವರಣದಲ್ಲಿದ್ದು ಗೊತ್ತಿಲ್ಲ. ಚುನಾವಣಾ ಕರ್ತವ್ಯಕ್ಕೆ ನಮಗೆ ಸಿಕ್ಕಿದ್ದ ಆ ಶಾಲೆಯ ಸುತ್ತಮುತ್ತಲೂ ಮರಗಳಿದ್ದವು. ಒಟ್ಟಿನಲ್ಲಿ ಸಣ್ಣ ಅರಣ್ಯ ಪ್ರದೇಶ. ಆ ಶಿಕ್ಷಕಿಗೆ ರಾತ್ರೆ ಹೊರಗೆ ಹೋಗಲು ಭಯ. ಸರಿ, ಊಟ ಎಲ್ಲಾ ಮುಗಿಸಿ ದೀಪವಾರಿಸಿ ಮಲಗಿ ಹತ್ತು ನಿಮಿಷವೂ ಕಳೆದಿಲ್ಲ. ಮಲಗಿದ್ದ ನನ್ನ ಮೇಲೆ ಧಡ್ ಅಂತ ಕೈ ಬಿತ್ತು. ಜೊತೆಗೆ “ಹಾವು, ಹಾವು…..” ಅಂತ ಬೊಬ್ಬೆ ಹಾಕುತ್ತಿದ್ದರು ಆ ಶಿಕ್ಷಕಿ. ಮನದಲ್ಲಿದ್ದ ಭಯವೇ ಕಾರಣವಾಗಿ ಆ ಶಿಕ್ಷಕಿಗೆ ಹಾವಿನ ಕನಸು ಬಿದ್ದಿತ್ತು. ಮಲಗಿದ್ದ ಕೋಣೆಯ ವಿದ್ಯುದ್ದೀಪ ಆರಿಸುವುದು ಬೇಡ, ಹಾಗೇ ಇರಲಿ ಅನ್ನುವ ಅವರ ಬೇಡಿಕೆಗೆ ನಾವೆಲ್ಲಾ ಮಣಿಯಬೇಕಾಯಿತು.
ನನಗೂ ಕನಸುಗಳಿಗೂ ಅದೇನೋ ಬಿಡಲಾರದ ನಂಟು. ಕೆಲವು ಕನಸುಗಳಂತೂ ಬದಲಾಗಿಯೂ ಇಲ್ಲ. “ನಾನೆಲ್ಲೋ ಹೋಗಿರ್ತೇನೆ. ವಾಪಸ್ ಹೊರಡುವಾಗ ಚಪ್ಪಲಿ ಹಾಕಿಕೊಳ್ಳಲು ಮರೆತು ಬರಿಗಾಲಿನಲ್ಲಿಯೇ ಬಂದಿರುತ್ತೇನೆ. ಅರ್ಧದಾರಿಯಲ್ಲಿ ಚಪ್ಪಲಿ ಹಾಕಿಕೊಂಡಿಲ್ಲ ಅಂತ ಒಮ್ಮೆಲೇ ನೆನಪಾಗ್ತದೆ, ಕೂಡಲೇ ವಾಪಸ್ ಹೋದಾಗ ಅಲ್ಲಿ ಚಪ್ಪಲಿ ಇರುವುದೇ ಇಲ್ಲ. ಎಷ್ಟು ಹುಡುಕಿದರೂ ಸಿಗುವುದೇ ಇಲ್ಲ” ಇಂತಹ ಒಂದೇ ರೀತಿಯ ಕನಸು ಬಿದ್ದದ್ದಕ್ಕೆ ಲೆಕ್ಕ ಇಲ್ಲ. ಎಲ್ಲೋ ಹೋಗಬೇಕೆಂದು ಒಬ್ಬಂಟಿಯಾಗಿ ಹೊರಟಾಗ ದಾರಿ ಸಿಗದೇ ಒದ್ದಾಡುವುದು, ಯಾರೋ ಕುತ್ತಿಗೆ ಹಿಡಿದು ಅಮುಕುವುದು, ಎರಡು ಕಾಲು ಜೋಡಿಸಿ ನಿಂತರೆ ಸಾಕು- ವಿಮಾನದಂತೆ ಹಾರಾಡುತ್ತಾ ಹೋಗಬೇಕಾದೆಡೆ ಹೋಗುವುದು, ಚಂದ ಚಂದದ ಕಥೆ-ಕವನಗಳನ್ನು ಬರೆದಂತೆ, ಪ್ರಶಸ್ತಿ ಗಳಿಸಿದಂತೆ,….. ಅಬ್ಬಬ್ಬಾ ಅದೆಷ್ಟು ವಿಧದ ಕನಸುಗಳು. ನನ್ನ ಬೊಬ್ಬೆ ಕೇಳಿ ಎಚ್ಚರಗೊಂಡ ಪತಿಮಹಾಶಯರಿಂದ ಬೈಸಿಕೊಂಡ ದಿನಗಳ ಹೇಗೆ ಮರೆಯಲಿ?
ಈ ಕನಸಿಗೂ ಕೊರೋನಾಕ್ಕೂ ಏನೋ ಸಂಬಂಧವಿದೆ ಮಾರಾಯರೇ! ಕೊರೋನಾ ಎರಡನೆಯ ಅಲೆ ಬಂದಾಗ ಆ ಅಲೆಯ ಹೊಡೆತಕ್ಕೆ ನಾನೂ ಸಿಕ್ಕಿದ್ದೆ. ಕೊರೋನಾ ಪೀಡಿತಳಿದ್ದಾಗ ನಿದ್ರೆಯಲ್ಲಿಡೀ ಕನಸೇ. ಇಡೀ ರಾತ್ರಿ ವಿಧವಿಧದ ಕನಸುಗಳ ಮೆರವಣಿಗೆ. ಇನ್ನೂ ಒಂದು ವಿಶೇಷತೆ ಎಂದರೆ ಕನಸುಗಳು ಮುಂದುವರೆಯುತ್ತಿದ್ದವು ಅಂದರೆ ನಿದ್ದೆಯ ಮಧ್ಯೆ ಪೂರ್ತಿ ಎಚ್ಚರವಾಗಿ, ಪುನಃ ನಿದ್ದೆ ಬಂದಾಗ, ಹಿಂದಿನ ನಿದ್ದೆಯಲ್ಲಿ ಕನಸು ಎಲ್ಲಿಗೆ ನಿಂತಿತ್ತೋ ಅಲ್ಲಿಂದಲೇ ಆರಂಭವಾಗುತ್ತಿತ್ತು. ರಾತ್ರೆ ಇಡೀ ಕನಸುಗಳದೇ ದರ್ಬಾರು. ಏನು ಕನಸು ಬಿದ್ದಿತ್ತು ಅನ್ನುವುದು ಕೂಡಾ ಸುಮಾರು ದಿನಗಳ ತನಕ ನೆನಪು ಕೂಡಾ ಇತ್ತು. ಈಗ ಮರೆತು ಹೋಗಿದೆ.
ಇತ್ತೀಚೆಗೆ ನಮ್ಮ ಮನೆಯಲ್ಲೊಂದು ಕಾರ್ಯಕ್ರಮವಿತ್ತು. ಆ ಕಾರ್ಯಕ್ರಮಕ್ಕೆ ಬೇಕಾದ ಎಲ್ಲಾ ಸಿದ್ದತೆಗಳು ಭರದಿಂದ ಸಾಗುತ್ತಿದ್ದವು. ಕಾರ್ಯಕ್ರಮದ ಮುನ್ನಾದಿನ ನಿದ್ರೆಗೆ ಜಾರಿದ್ದ ನನಗೆ ಬೆಳಗಿನ ಜಾವ ಒಂದು ವಿಚಿತ್ರ ಕನಸು.
“ಅಡುಗೆಯವರೆಲ್ಲಾ ಮರುದಿನಕ್ಕೆ ಬೇಕಾದ ಸಿಹಿತಿಂಡಿಗಳನ್ನು ತಯಾರಿಸುತ್ತಿದ್ದಾರೆ. ಹೂವಿನ ಅಲಂಕಾರ ಇನ್ನೊಂದೆಡೆ ಆಗುತ್ತಿದೆ. ಇದ್ದಕ್ಕಿದ್ದಂತೆ ನಮ್ಮ ಮನೆಯ ಸದಸ್ಯರೊಬ್ಬರು ಉಸಿರಾಟ ನಿಲ್ಲಿಸಿದಂತೆ ಮತ್ತು ಆ ವಿಷಯ ನನಗೆ ಮಾತ್ರ ಗೊತ್ತಿದ್ದಂತೆ. ಮನೆಯೆಲ್ಲಾ ಸಂಭ್ರಮದಲ್ಲಿರುವಾಗ, ಆ ವಿಷಯವನ್ನು ಉಳಿದವರ ಗಮನಕ್ಕೆ ಹೇಗೆ ತರುವುದು ಅನ್ನುವ ಚಿಂತೆಯಲ್ಲಿದ್ದಾಗಲೇ ಉಸಿರಾಟ ನಿಲ್ಲಿಸಿದವರು ಸರಾಗವಾಗಿ ಉಸಿರಾಟ ಆರಂಭಿಸಿದಂತೆ,….” ಒಮ್ಮೆಗೆ ಎಚ್ಚರವಾದಾಗ ಬೆವರಿ ಒದ್ದೆಯಾಗಿದ್ದೆ. ಮನಸ್ಸು ರಾಡಿಯಾಗಿತ್ತು. ಮರುದಿನ ಕಾರ್ಯಕ್ರಮ ನಡೆಯುತ್ತಿದ್ದರೂ ಮನದಲ್ಲೇನೋ ಆತಂಕ ಮನೆಮಾಡಿತ್ತು. ಯಾರೊಡನೆಯೂ ನನಗೆ ಬಿದ್ದ ಕನಸನ್ನು ಹೇಳಿಕೊಳ್ಳಲಾಗದಂತಹ ಪರಿಸ್ಥಿತಿ. ಎರಡು ದಿನ ಬಿಟ್ಟು “ಬೆಳಗಿನ ಜಾವ ಬಿದ್ದಂತಹ ಆ ರೀತಿಯ ಕನಸಿಗೆ ಏನಾದರೂ ಫಲ ಉಂಟೇ?” ಅಂತ ಭಾವನಲ್ಲಿ ಕೇಳಿದಾಗ “ಹಾಗೇನೂ ಇಲ್ಲ” ಅಂದಿದ್ದರು ಭಾವ. ಸ್ವಲ್ಪ ಸಮಾಧಾನವಾಗಿತ್ತು.
ಎಷ್ಟೋ ಸಲ ಅನಿಸಿದ್ದಿದೆ. ರಾತ್ರಿ ಮಲಗುವಾಗ ಬಳಿಯಲ್ಲಿ ಒಂದು ಪೆನ್ನು ಹಾಗೂ ಒಂದು ಪುಸ್ತಕ ಇಟ್ಟುಕೊಳ್ಳಬೇಕು. ಬೀಳುವ ಕನಸುಗಳನ್ನು ಆ ಕೂಡಲೇ ದಾಖಲಿಸಬೇಕು. ಆದರೆ ಕಾರ್ಯರೂಪಕ್ಕೆ ತಂದಿಲ್ಲ. ತಂದಿದ್ದರೆ ಕವನಗಳು, ಕಥೆಗಳು, ಲೇಖನಗಳು ಪುಂಖಾನುಪುಂಖವಾಗಿ ಬರುತ್ತಿದ್ದವು ಮಾರಾಯರೇ. ನಾವು ಸಣ್ಣವರಿರುವಾಗ ನಮ್ಮ ತಂದೆಯವರು ಮಲಗುವ ಮೊದಲು ನಮಗೆ ಹೇಳಿಕೊಡುತ್ತಿದ್ದ “ಅಡಿಗರುಡ ಮುಡಿಗರುಡ ಪಚ್ಚೆಗರುಡ ಪಾತಾಳಗರುಡ.. ಹಾರುವ ಹಕ್ಕಿ…ಹರಿಯುವ ಇರುವೆ…ನನ್ನ ಮೈಕೈ ಮುಟ್ಟದೆ ಗರುಡದೇವರ ರೆಕ್ಕೆಯೊಳಗೆ ಶಯನಂ ಪಾತು ಮಾಧವಾ” ನೆನಪಿಗೆ ಬರುತ್ತಿದೆ. ಅದರ ಹಿಂದೆ ಬಹುಶಃ ಕೆಟ್ಟ ಕನಸುಗಳು ಬೀಳದಿರಲಿ ಅನ್ನುವ ಉದ್ದೇಶ ಇರಬೇಕು. ಎಂತಹ ಉದಾತ್ತ ಆಲೋಚನೆ ಅಲ್ವಾ? ಮಕ್ಕಳಲ್ಲಿ ಭಯ ನಿವಾರಣೆ ಮಾಡುವುದರ ಜೊತೆಗೆ ದೇವರ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸುವ ವಿಧಾನ!
–ಡಾ ಕೃಷ್ಣಪ್ರಭ ಎಂ, ಮಂಗಳೂರು
Very true. Nice write up. Congratulations
Thank you very much
ಕನಸುಗಳ ಸುತ್ತೊಂದು ಗಿರಕಿ ಸುಗಮವಾಗಿ ಓದಿಸಿಕೊಳ್ಳುವುದರ ಜೊತೆಗೆ ನಮ್ಮ ಕನಸುಗಳು ಅದೂ ಚಿಕ್ಕಂದಿನಲ್ಲಿ ಬೀಳುತ್ತಿದ್ದ ಕನಸುಗಳು..ಹೆದರಿಕೆ..ತಲ್ಲಣ…ನಂಬುತ್ತಿದ್ದ ರೀತಿ ಎಲ್ಲಾ ನೆನಸಿಕೊಳ್ಳುವಂತೆ ಮಾಡಿತು.. ಈಗಿನ ದಲ್ಲ. ಅದೇ ವಿಶೇಷ.. ಧನ್ಯವಾದಗಳು ಮೇಡಂ.
ಹೌದು. ಕೆಲವು ಕನಸುಗಳು ಕನಸೋ ಅಥವಾ ನಿಜವಾಗಿ ನಡೆದದ್ದೋ ಅನ್ನುವ ದ್ವಂದ್ವವನ್ನು ಕೂಡಾ ಹುಟ್ಟು ಹಾಕುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು madam
ನಾವು ದಿನಾಲು ಶ್ಲೋಕ ಹೇಳಿ ಮಲಗುತ್ತೇವೆ..
ಹೆದರಿಕೆ ದೂರ ಮಾಡಲು ಸಹಕಾರಿ. ಆತ್ಮವಿಶ್ವಾಸ ವೃದ್ಧಿಯಾಗುತ್ತದೆ
ಕನಸುಗಳ ಕುರಿತಾದ ಸೊಗಸಾದ ಬರಹ. ಕೆಲವೊಮ್ಮೆ ಕನಸಲ್ಲಿ ಕಂಡ ವಿಚಾರಗಳೇ ನಡೆಯುತ್ತಿವೆಯೇನೋ ಅನ್ನಿಸುವಂತಾಗುತ್ತದೆ.
ನಿಜ ನಯನ. ಕನಸಲ್ಲಿ ನಡೆದದ್ದಾ ಅಥವಾ ನಿಜವಾಗಿ ನಡೆದಿದ್ದಾ ಅನ್ನುವ ಅನುಮಾನ ಮನಸ್ಸಿನಲ್ಲಿ ಕೆಲವೊಮ್ಮೆ ಹುಟ್ಟುತ್ತವೆ. ಪ್ರತಿಕ್ರಿಯೆಗೆ ಧನ್ಯವಾದಗಳು
ಚೆನ್ನಾಗಿದೆ. ನಮ್ಮ ಅಜ್ಜಿ ” ರಾಮಸ್ಕಂದಮ್…….. ದುಸ್ಸ್ವಪ್ನಮ್ ತಸ್ಯ ನಶ್ಯತಿ” ಶ್ಲೋಕ ಹೇಳಿಕೊಟ್ಟಿದ್ದರು.
ಧನ್ಯವಾದಗಳು ಸರ್. ಸಮಯ ಹೊಂದಿಸಿಕೊಂಡು ನೀವು ಲೇಖನ ಓದಿದ್ದಲ್ಲದೆ ಮೆಚ್ಚುಗೆಯ ಪ್ರತಿಕ್ರಿಯೆ ನೀಡಿ ನನ್ನನ್ನು ಪ್ರೋತ್ಸಾಹಿಸಿದ್ದಕ್ಕಾಗಿ ವಂದನೆಗಳು
ಹೌದು…ಎಲ್ಲರಿಗೂ ಸಾಮಾನ್ಯವಾಗಿ ಒಂದೇ ತರಹದ ಕನಸುಗಳು ಬೀಳುತ್ತವೆ ಎಂದು ನನ್ನೆಣಿಕೆ… ಮೇಲಕ್ಕೆ ಹಾರುವುದು, ಕೆಳಕ್ಕೆ ಬೀಳುವಾಗ ಗಾಳಿಯಲ್ಲಿ ತೇಲುವುದು ಇತ್ಯಾದಿಗಳು. ಸೊಗಸಾದ ನಿರೂಪಣೆ.
ಅಕ್ಕ, ಪ್ರತಿ ಬಾರಿ ಲೇಖನ ಓದಿ ಪ್ರತಿಕ್ರಿಯೆ ನೀಡಿ ಪ್ರೋತ್ಸಾಹಿಸುವ ನಿಮಗೆ ಅನಂತ ಧನ್ಯವಾದಗಳು
ಕನಸುಗಳ ಅನಾವರಣ ನನ್ನನ್ನು ಹಗಲುಗನಸಿನಲ್ಲಿ ತೇಲುವಂತೆ ಮಾಡಿತು. ಜೀವನದ ಕೌತುಕಗಳಲ್ಲಿ ಒಂದಾದ ತಲೆಬುಡಗಳನ್ನರಿಯದ ಕನಸುಗಳನ್ನು ಕುರಿತಾದ ಲೇಖನ ಸುಂದರವಾಗಿ ಮೂಡಿ ಬಂದಿದೆ.