ಅಕ್ಷರದವ್ವನಿಗೆ ಅಕ್ಷರ ನಮನ

Share Button

ಭಾರತದಲ್ಲಿ ಶತ ಶತಮಾನಗಳಿಂದ ನಮ್ಮದು ಪುರುಷ ಪ್ರಧಾನ ಸಮಾಜ. ಇಲ್ಲಿ ಸ್ತ್ರೀಗೆ ಶಿಕ್ಷಣ ಪಡೆಯುವ ಹಕ್ಕು ಇರಲಿಲ್ಲ. ಅಲ್ಲದೇ ಅನೇಕ ವರ್ಷಗಳಿಂದ ‘ಉದ್ಯೋಗಂ ಪುರುಷ ಲಕ್ಷಣಂ ಎಂಬ ಉಲ್ಲೇಖವಿದ್ದು ಇದೀಗ ಕೆಲ ದಶಕಗಳ ಹಿಂದಷ್ಟೇ ‘ಉದ್ಯೋಗಂ ಮನುಷ್ಯ ಲಕ್ಷಣಂ’ ಎಂದಾಗಿದೆ.

ಈಗೆಲ್ಲ ಶಾಲಾ ಕಾಲೇಜುಗಳಲ್ಲಿ ಪರೀಕ್ಷೆಯಲ್ಲಿ ಉನ್ನತ ಶ್ರೇಣಿ ಸಾಧಿಸುವಲ್ಲಿ ವಿದ್ಯಾರ್ಥಿನಿಯರದೇ ಮೇಲುಗೈ. ಅಷ್ಟೇ ಅಲ್ಲ ಶಿಕ್ಷಕ ಹಾಗೂ ಪ್ರಾಧ್ಯಾಪಕ ವೃಂದದಲ್ಲಿಯೂ ಮಹಿಳೆಯರೇ ಹೆಚ್ಚು ಕಾಣಸಿಗುತ್ತಾರೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದಾಗ ಇಷ್ಟೆಲ್ಲಾ ಮೈಲಿಗಲ್ಲು ದೊರೆಯಲು ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿಯಾಗಿದ್ದನ್ನು ನಿರ್ಲಕ್ಷಿಸುವಂತಿಲ್ಲ. ಇಂತಹ ಕ್ರಾಂತಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದು ಭಾರತದ ಪ್ರಪ್ರಥಮ ಮಹಿಳಾ ಶಿಕ್ಷಕಿಯಾದ ಸಾವಿತ್ರಿಬಾಯಿ ಫುಲೆ ಯವರು.

ಮಹಾತಾಯಿ ಸಾವಿತ್ರಿಬಾಯಿಯವರು 3 ಜನವರಿ 1831 ರಲ್ಲಿ ಮಹಾರಾಷ್ಟ್ರದ ಸತಾರ್ ಜಿಲ್ಲೆಯ ನೈಗಾಂವ್ ಎಂಬ ಗ್ರಾಮದಲ್ಲಿ ಲಕ್ಷ್ಮೀಬಾಯಿ ಹಾಗೂ ಖಂಡೋಜಿ ನೇವ್ಸೆ ಪಾಟೀಲ್ ದಂಪತಿಯ ಸುಪುತ್ರಿಯಾಗಿ ಜನಿಸಿದರು. ಆಗೆಲ್ಲ ಸಾಮಾನ್ಯವಾಗಿದ್ದ ಬಾಲ್ಯವಿವಾಹ ಪದ್ಧತಿಯಂತೆ ಇವರನ್ನೂ ಎಂಟನೇ ವಯಸ್ಸಿನಲ್ಲಿ ಹದಿಮೂರನೇ ವಯಸ್ಸಿನ ಜ್ಯೋತಿರಾವ್ (ಜ್ಯೋತಿಬಾ) ಗೋವಿಂದರಾವ್ ಫುಲೆಯವರೊಂದಿಗೆ ವಿವಾಹ ಮಾಡಲಾಯಿತು.

ಪತ್ನಿಯ ತೀಕ್ಷ್ಣಮತಿ, ವಿಚಾರ ಗ್ರಹಿಕೆ, ಹೊಸತನ್ನು ಕಲಿಯುವ ಆಸಕ್ತಿ, ಶ್ರದ್ಧೆ, ಜ್ಞಾಪಕ ಶಕ್ತಿಯನ್ನು ಗುರುತಿಸಿದ ಜ್ಯೋತಿಬಾ ಫುಲೆಯವರು ಮೊದಲು ಮನೆಯಲ್ಲಿಯೇ ಪತ್ನಿಗೆ ಅಕ್ಷರಾಭ್ಯಾಸ ಮಾಡಿಸಲು ಮುಂದಾದರು. ಅದರ ಫಲವಾಗಿ ಸಾವಿತ್ರಿಬಾಯಿಯವರಿಗೆ ತಮ್ಮ ಮನೆಯೇ ಮೊದಲ ಪಾಠಶಾಲೆಯಾಯಿತು. ಪತಿಯೇ ಮೊದಲ ಗುರುವಾದರು.

ಸಾವಿತ್ರಿಬಾಯಿ ಯವರದ್ದು ಸಣ್ಣ ವಯಸ್ಸಾದರೂ ಗೃಹಕೃತ್ಯವನ್ನು, ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸುವಲ್ಲಿ ಸೋಲಲಿಲ್ಲ. ಇದರೊಂದಿಗೆ ಪತಿ ತಮಗೆ ನೀಡುತ್ತಿದ್ದ ಸಹಕಾರವನ್ನು ಪ್ರೋತ್ಸಾಹವನ್ನು ಸದುಪಯೋಗ ಪಡಿಸಿಕೊಂಡರು. ಹಾಗಂತ ಸಾವಿತ್ರಿಬಾಯಿ ತಮ್ಮ ಮನೆಯವರ ಹಾಗೂ ಸಮಾಜದ ಅಪಮಾನ, ನಿಂದನೆಗಳಿಗೆ ಗುರಿಯಾಗುವುದೇನು ತಪ್ಪಲಿಲ್ಲ. ಆದರೆ ಅವರಲ್ಲಿನ ದಿಟ್ಟತನ ಎಲ್ಲ ಕಷ್ಟಗಳನ್ನು ಮೆಟ್ಟಿ ನಿಲ್ಲಲು ಸಾಧ್ಯವಾಯಿತು.

1847 ರಲ್ಲಿ ಅಂದರೆ ತಮ್ಮ ೧೭ನೇ ವಯಸ್ಸಿನಲ್ಲಿ ಮಹಾರಾಷ್ಟ್ರದಲ್ಲಿ ಆಗಿನ ಬ್ರಿಟಿಷ್ ಸರ್ಕಾರದ ಮಿಶೆಲ್ ನಾರ್ಮಲ್ ಸ್ಕೂಲ್ ನಲ್ಲಿ ಹಿಂದಿ ವಿಷಯದಲ್ಲಿ ಶಿಕ್ಷಕರ (ಬಿಎಡ್) ತರಬೇತಿ ಪಡೆದು ತರಬೇತಿ ಪಡೆದ ಮೊದಲ ಮಹಿಳೆ ಎನಿಸಿಕೊಂಡರು. 1848 ರಲ್ಲಿ ಪುಣೆಯ ಬುಧವಾರಪೇಟೆಯ ಭಿಡೆ ಯವರ ಭವನದಲ್ಲಿ ತಮ್ಮ ಪತಿ ಜ್ಯೋತಿಬಾ ಅವರು ಆರಂಭಿಸಿದ ಕನ್ಯಾ ಶಾಲೆಯ ಪ್ರಧಾನ ಶಿಕ್ಷಕಿಯಾಗಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದರು. 1855 ರಲ್ಲಿ ಕೂಲಿಕಾರ್ಮಿಕರು ಮತ್ತವರ ಮಕ್ಕಳಿಗೆಂದೇ ವಿಶೇಷವಾಗಿ ಸಂಜೆಯ ಶಾಲೆಯನ್ನು ತೆರೆದರು. ಈ ಸಂದರ್ಭದಲ್ಲಿ ಸಾವಿತ್ರಿಬಾಯಿಯವರು ಅನೇಕ ರೀತಿಯ ಕಷ್ಟ ಕಾರ್ಪಣ್ಯಗಳನ್ನು ಎದುರಿಸಬೇಕಾಯಿತು.

ಆಗಿನ ಕಾಲದಲ್ಲಿ ಸ್ತ್ರೀಯೊಬ್ಬಳು ಶಿಕ್ಷಣ ಕಲಿಯುವುದಿರಲಿ ಮನೆಯಿಂದ ಹೊರ ಹೋಗುವುದೂ ಅಸಾಧ್ಯದ ಮಾತಾಗಿತ್ತು. ಹೀಗಿರುವಾಗ ಸುತ್ತಲಿನ ಸಮಾಜ ಈ ಬೆಳವಣಿಗೆಯನ್ನು ಧರ್ಮದ್ರೋಹವೆಂದು ತಮ್ಮಷ್ಟಕ್ಕೇ ಪರಿಗಣಿಸಿ ಸಾವಿತ್ರಿಬಾಯಿಯನ್ನು ಅವರ ನಿರ್ಧಾರದಿಂದ ಹಿಂದೆ ಸರಿಯುವಂತೆ ವಿಪರೀತವಾಗಿ ಹಿಂಸಿಸಿದರು. ಬಾಲಕಿಯರನ್ನು, ಮಹಿಳೆಯರನ್ನು ಶಿಕ್ಷಣದಿಂದ ಸಶಕ್ತರನ್ನಾಗಿಸುವ ಧ್ಯೇಯದಿಂದ ಸಾವಿತ್ರಿಬಾಯಿ ಮನೆ ಮನೆಗೆ ಹೋಗಿ ಅವರನ್ನು ಮನವೋಲಿಸಿ, ಶಿಕ್ಷಣದಿಂದಾಗುವ ಲಾಭವನ್ನು ವಿವರಿಸಿ, ಅವರಲ್ಲಿ ಧೈರ್ಯ ತುಂಬಿ ಕನ್ಯಾಶಾಲೆಗೆ ಕರೆತರಲು ತಮ್ಮ ಪ್ರಾಣವನ್ನೇ ಒತ್ತೆಯಿಟ್ಟು ಅವಿರತವಾಗಿ ಶ್ರಮಿಸಿದರು.

ಹೀಗೆ ತಮ್ಮ ಮನೆಯ ಹೆಣ್ಣು ಮಕ್ಕಳು ಶಾಲೆಗೆ ಹೋಗುವ ಧೈರ್ಯ ತೋರಿದ್ದರಿಂದ ಉದ್ರಿಕ್ತಗೊಂಡ ಜನರು ಸಾವಿತ್ರಿ ಬಾಯಿಯವರು ಶಾಲೆಗೆಂದು ರಸ್ತೆಯಲ್ಲಿ ನಡೆದು ಹೋಗುವಾಗ ಅವರ ಮೇಲೆ ಕೆಸರು, ಸಗಣಿ ಹಾಗೂ ಕಲ್ಲುಗಳನ್ನು ತೂರುವ ಮೂಲಕ ಮತ್ತು ಅತ್ಯಂತ ನಿರ್ದಾಕ್ಷಿಣ್ಯವಾಗಿ ನಿಂದಿಸುವ ಮೂಲಕ ಅವಮಾನಿಸಿದರು. ಆರಂಭದಲ್ಲಿ ಕೆಲಮಹಿಳೆಯರೂ ಇಂತಹ ಕೃತ್ಯ ಎಸಗುವಲ್ಲಿ ಹೊರತಾಗಿರಲಿಲ್ಲ. ಕ್ರಮೇಣ ಅವರಿಗೂ ತಿಳುವಳಿಕೆ ಬಂದು ಪಶ್ಚಾತ್ತಾಪ ಪಟ್ಟರು ಎಂಬುದನ್ನು ಅಲ್ಲಗಳೆಯುವಂತಿಲ್ಲ.

ಆದರೆ ಇದರಿಂದ ಕೊಂಚವೂ ಎದೆಗುಂದದೆ ಜನರು ತಮ್ಮ ಮೇಲೆ ಎಸೆಯುವ ಕಲ್ಲು, ಎರಚುವ ಸಗಣಿ ಹಾಗೂ ಕೆಸರನ್ನೇ ತಮ್ಮ ಮೇಲೆ ಸುರಿಸುವ ಹೂವುಗಳೆಂದು ಪರಿಭಾವಿಸಿ ಧೈರ್ಯದಿಂದ ಮುನ್ನಡೆಯುತ್ತಿದ್ದರು. ಪ್ರತಿದಿನ ಇಂತಹ ಅವಮಾನ ಎದುರಿಸಬೇಕಾಗಿ ಬಂದಾಗ ಸಾವಿತ್ರಿಬಾಯಿಯವರು ತಮ್ಮ ಕೈಚೀಲದಲ್ಲಿ ಒಂದು ಸೀರೆಯನ್ನು ಸದಾ ಜೊತೆಗಿಟ್ಟುಕೊಂಡು ಶಾಲೆಗೆ ಹೋಗುವುದನ್ನು ರೂಢಿಸಿಕೊಂಡರು. ತಮ್ಮ ವಿದ್ಯಾರ್ಥಿನಿಯರೆಲ್ಲ ಶಾಲೆಗೆ ಬರುವುದರೊಳಗಾಗಿ ತಾವು ತಂದಿದ್ದ ಸೀರೆಯನ್ನು ಉಟ್ಟು ಪಾಠಕ್ಕೆ ಸಿದ್ಧವಾಗುತ್ತಿದ್ದರು.

ಕ್ರಮೇಣ ಅಸ್ಪೃಶ್ಯತೆ, ಜಾತಿ ಪದ್ಧತಿ, ಬಾಲ್ಯ ವಿವಾಹ, ವಿಧವೆಯರ ರಕ್ಷಣೆ, ಅನಾಥ ಮಕ್ಕಳ ಪಾಲನೆ ಮುಂತಾದ ಅನೇಕ ಸಮಾಜ ಸುಧಾರಕ ಕಾರ್ಯಗಳಲ್ಲಿ ಪತಿಯೊಡಗೂಡಿ ತೊಡಗಿಸಿಕೊಂಡರು. ಇದರ ಫಲವಾಗಿ 1863 ರಲ್ಲಿ ವಿಧವೆಯರ ಮಕ್ಕಳಿಗಾಗಿ ಶಿಶುಕೇಂದ್ರವನ್ನು ಸ್ಥಾಪಿಸಿದರು. ನಂತರ ಅದರ ಮರು ವರ್ಷವೇ ಅಂದರೆ 1864 ರಲ್ಲಿ ವಿಧವಾ ವಿವಾಹವನ್ನು ಸಹ ನೆರವೇರಿಸಿ ವಿಧವೆಯರಿಗೆ ಹೊಸ ಬದುಕನ್ನು ಕಲ್ಪಿಸಿಕೊಟ್ಟರು.

1860 ರಲ್ಲಿ ವಿಧವೆಯರ ತಲೆ ಬೋಳಿಸುವ ಅನಿಷ್ಟ ಪದ್ಧತಿಯನ್ನು ಪ್ರಬಲವಾಗಿ ವಿರೋಧಿಸಿದರು. ವಿಧವೆಯರಿಗೆ ಹಾಗೂ ವಿವಾಹಬಾಹಿರವಾಗಿ ಗರ್ಭಿಣಿಯರಾಗುವ ಸ್ತ್ರೀಯರಿಗಾಗಿ ಪುಣೆಯಲ್ಲಿ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಿದರು. ಅವರ ಮಕ್ಕಳಿಗೆ ಆರೋಗ್ಯ, ಆಹಾರ, ಪೋಷಣೆ, ಶಿಕ್ಷಣ ಮುಂತಾದ ಮೂಲಭೂತ ಸೌಕರ್ಯಗಳನ್ನು ನೀಡಿ ಬದುಕಿಗೊಂದು ನೆಲೆ ಕಲ್ಪಿಸಿಕೊಟ್ಟರು.

ಅಷ್ಟೊತ್ತಿಗಾಗಲೇ ಈ ದಂಪತಿ ಸಮಾಜದಲ್ಲಿ ಸಾಕಷ್ಟು ವಿಶ್ವಾಸ ಗಳಿಸಿದ್ದರು. ಜನರು ಕೂಡಾನಿಧಾನವಾಗಿ ತಮ್ಮ ಅಜ್ಞಾನದಿಂದ ಹೊರಬಂದು ಇವರಿಬ್ಬರಿಗೂ ತಮ್ಮ ಶಕ್ತ್ಯಾನುಸಾರ ಸಹಾಯ, ಸಹಕಾರ ನೀಡಲು ಮನಸ್ಸು ಮಾಡಿದ್ದರು. ಈ ಯಶಸ್ಸಿನ ಫಲವೇ ಫುಲೆ ದಂಪತಿಯಿಂದ 1873 ರಲ್ಲಿ ‘ಸತ್ಯಶೋಧಕ ಸಮಾಜ’ ಎನ್ನುವ ಸಂಸ್ಥೆಯೊಂದು ಸ್ಥಾಪನೆಯಾಯಿತು.

ಸಾವಿತ್ರಿಬಾಯಿ ಕೇವಲ ಸಮಾಜ ಸುಧಾರಣಾ ಕಾರ್ಯ ಮಾತ್ರವಲ್ಲದೆ ಸಾಹಿತ್ಯ ಕ್ಷೇತ್ರದಲ್ಲಿಯೂ ಮಹತ್ತರ ಕೊಡುಗೆ ನೀಡಿದ್ದಾರೆ. 1854 ರಲ್ಲಿ ಮರಾಠಿಯಲ್ಲಿ ಅಭಂಗ್ ಶೈಲಿಯಲ್ಲಿ  ರಚಿಸಿದ ‘ಕಾವ್ಯ ಫುಲೆ’ ಎನ್ನುವ ಚೊಚ್ಚಲ ಕವನ ಸಂಕಲನವು ಪ್ರಕಟವಾಯಿತು. 1891 ರಲ್ಲಿ ‘ಭವನ್ ಕಾಶಿ ಸುಬೋಧ ರತ್ನಾಕರ್’ ಎನ್ನುವ ಜೀವನ ಚರಿತ್ರೆ ಪತಿಯ ಸಾಧನೆ ಕುರಿತು ರಚಿಸಿದ ಕೃತಿ ಪ್ರಕಟವಾಯಿತು. 1892 ರಲ್ಲಿ ಮೂರನೇ ಕೃತಿ ತಮ್ಮ ಪತಿಯ ಭಾಷಣಗಳನ್ನು ಸಂಪಾದಿಸಿ ರಚಿಸಿದ ಹಾಗೂ ನಾಲ್ಕನೇ ಕೃತಿ ಸಾಮಾಜಿಕ ಕಳಕಳಿ ಹೊಂದಿದ ‘ಕರ್ಜೆ’ ಪ್ರಕಟವಾಯಿತು. ಇವರ ಬರಹವು ಸಮಾಜದ ಹುಳುಕುಗಳನ್ನು, ತಲೆತಲಾಂತರದಿಂದ ನಡೆಸಿಕೊಂಡು ಬಂದಂತಹ ಅನಿಷ್ಟ ಪದ್ಧತಿಯನ್ನು ಬಲವಾಗಿ ಖಂಡಿಸಿ ಬುಡ ಸಮೇತ ಕಿತ್ತೊಗೆದು ಸಮಾಜದಲ್ಲಿ ಆರೋಗ್ಯಕರ ಮತ್ತು ಕ್ರಾಂತಿಕಾರಿ ಬದಲಾವಣೆಗಳನ್ನು ತರುವಂತಹ ಸದುದ್ದೇಶದಿಂದ ಕೂಡಿದೆ.

ಹಗಲಿರುಳೆನ್ನದೇ ಶ್ರಮಿಸಿದ ಫುಲೆ ದಂಪತಿಗೆ ಇದ್ದ ಒಂದೇ ಕೊರತೆಯೆಂದರೆ ತಮಗೆ ಮಕ್ಕಳಾಗಲಿಲ್ಲ ಎಂಬುದು. ಆದರೆ ಇವರಿಬ್ಬರಲ್ಲಿ ಅದಮ್ಯ ಪ್ರೀತಿ, ವಿಶ್ವಾಸ, ಅನ್ಯೋನ್ಯತೆಯಿತ್ತು. ಇವರಿಬ್ಬರ ವಿಚಾರಗಳು, ಗುಣ, ಸ್ವಭಾವದಲ್ಲಿ ಸಾಕಷ್ಟು ಸಾಮ್ಯತೆ ಇತ್ತು. ಹೀಗಾಗಿಯೇ ಜ್ಯೋತಿಬಾ ಅವರಿಗೆ ಸಂಬಂಧಿಕರು ಮಗುವಿಗಾಗಿ ಎರಡನೇ ಮದುವೆಯಾಗು ಎಂದು ಕಿವಿಯೂದಿದ್ದರೂ ಅವನ್ನೆಲ್ಲಾ ಗಾಳಿಗೆ ತೂರಿ ಕನಸು ಮನಸಿನಲ್ಲೂ ತಮಗಾಗಿ ಮಿಡಿಯುವ ಅರ್ಧಾಂಗಿಯನ್ನೇ ಮಗುವಿನ ಹಾಗೆ ಕಣ್ಣ ರೆಪ್ಪೆಯಲ್ಲಿಟ್ಟು ಜೋಪಾನ ಮಾಡಿದ್ದರು. ಕೆಲ ವರ್ಷಗಳ ಬಳಿಕ ಒಬ್ಬ ವಿಧವೆಯ ಗಂಡು ಮಗುವನ್ನು ದತ್ತು ತೆಗೆದುಕೊಂಡು ‘ಯಶ್ವಂತ’ ನೆಂದು ನಾಮಕರಣ ಮಾಡಿ ಮಗುವಿಗೆ ಮಮತೆ, ವಾತ್ಸಲ್ಯವನ್ನು ಧಾರೆಯೆರೆದು ಉನ್ನತ ಶಿಕ್ಷಣ ನೀಡಿ ಸಾಕಿ ಸಲುಹಿದರು.

ಶಿಕ್ಷಣ ಕ್ರಾಂತಿ, ಸಮಾಜ ಸುಧಾರಣೆ, ಸಾಹಿತ್ಯ ಕೃಷಿ ಅಲ್ಲದೇ ಆಗ ಎಲ್ಲೆಡೆ ಶಾಪದಂತೆ ವ್ಯಾಪಿಸಿದ್ದ ಪ್ಲೇಗ್ ಮಹಾಮಾರಿಗೆ ತುತ್ತಾಗಿದ್ದ ರೋಗಿಗಳ ಶುಶ್ರೂಷೆ ಮಾಡುತ್ತಾ ತಮ್ಮ ಕೊನೆಯ ದಿನಗಳನ್ನು ಆಸ್ಪತ್ರೆಯಲ್ಲಿಯೇ ಕಳೆದರು. ಪರಿಣಾಮವಾಗಿ ಕೆಲವೇ ದಿನಗಳಲ್ಲಿ ಅಂದರೆ 10 ಮಾರ್ಚ್ 1897 ರಲ್ಲಿ ವಿಧಿ ಪ್ಲೇಗ್ ರೂಪದಲ್ಲಿ ಇವರನ್ನು ಬಲಿ ತೆಗೆದುಕೊಂಡಿತು.

ಸಮಾಜದ ಉದ್ಧಾರಕ್ಕಾಗಿ ಅವಿರತ ಹೋರಾಟ ನಡೆಸಿದ ನಿಸ್ವಾರ್ಥ ಸೇವೆಗೈದ ಮಹಾತಾಯಿ, ಅಕ್ಷರದವ್ವ, ಭಾರತದ ಮೊದಲ ಮಹಿಳಾ ಶಿಕ್ಷಕಿ ಎನಿಸಿಕೊಂಡ ಸಾವಿತ್ರಿಬಾಯಿ ಯನ್ನು ಎಂದೆಂದಿಗೂಸ್ಮರಿಸಲೇಬೇಕು. ‘Behind every successful man there is a woman’ ಎನ್ನುವ ಉಲ್ಲೇಖಕ್ಕೆ ಸವಾಲಾಗಿ ಜ್ಯೋತಿಬಾ ಫುಲೆಯವರು ಸಮಾಜವನ್ನು ಎದುರು ಹಾಕಿಕೊಂಡು ತಮ್ಮ ಪತ್ನಿಗೆ ಜೊತೆಯಾಗಿ ನಿಂತು ಅವರ ಎಲ್ಲ ಸಾಧನೆ, ಯಶಸ್ಸಿಗೆ ನೆರಳಾದರು ಎಂಬುದನ್ನು ಮರೆಯುವಂತಿಲ್ಲ.

-ಮೇಘನಾ ಕಾನೇಟ್ಕರ್

6 Responses

  1. ನಯನ ಬಜಕೂಡ್ಲು says:

    ನಿಮ್ಮ ಪ್ರತಿ ಬರಹವೂ, ಯಾವಾಗಲೂ ಒಳ್ಳೆ ಒಳ್ಳೆಯ ಮಾಹಿತಿಗಳನ್ನು ಒಳಗೊಂಡಿರುತ್ತದೆ.

  2. ನಾಗರತ್ನ ಬಿ. ಅರ್. says:

    ಬಹಳ ಉಪಯುಕ್ತ ವಾದ ಸಕಾಲಿಕ ಬರಹದ ಮೂಲಕ ಸಾವಿತ್ರಿ ಬಾಯಿ ಪುಲೆಯ ಸಾಧನೆಯ ಬಗ್ಗೆ ನೆನಪು ಮಾಡಿಕೊಟ್ಟ ನಿಮಗೆ ಧನ್ಯವಾದಗಳು ಸೋದರಿ.

  3. sudha says:

    ನಮಸ್ಕಾರ. ಮಹತಾಯಿ ಸಾವಿತ್ರಿ ಬಾಯಿ.

  4. ಡಾ. ಕೃಷ್ಣಪ್ರಭ ಎಂ says:

    ಚಂದದ ಬರಹ

  5. . ಶಂಕರಿ ಶರ್ಮ says:

    ಅಸಹನೀಯ ಅವಮಾನಗಳನ್ನು ಸಹಿಸಿಕೊಂಡು, ಸಮಾಜದ ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಜೊತೆಗೆ ವಿಧವೆಯರ ಏಳಿಗೆಗಾಗಿ ಟೊಂಕಕಟ್ಟಿ ಶ್ರಮಿಸಿದ ಸಾವಿತ್ರಿ ಬಾಯಿ ಫುಲೆಯವರು ನಿಜಾರ್ಥದಲ್ಲಿ ಮಹಾತಾಯಿ…ಅಕ್ಷರದವ್ವೆ!! ಒಳ್ಳೆಯ ಲೇಖನ.

  6. Padma Anand says:

    ಅಕ್ಷರದವ್ವನಿಗೆ ಸೊಗಸಾದ ಅಕ್ಷರ ನಮನ. ಅಭಿನಂದನೆಗಳು.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: