ಲಹರಿ

ಈ ಡ್ರೆಸ್ ಬೇಡ..

Share Button

ಹೆಂಗಸರಿಗೆ ಉಡುಗೆ ತೊಡುಗೆ ಬಗ್ಗೆ ಇರೋ ಹುಚ್ಚು,ಎಲ್ಲಾ ಕಾಲ,ದೇಶದಲ್ಲಿ ಸಾಮಾನ್ಯ .ಒಂದು ಸೀರೆ ಯನ್ನೋ , ಬಟ್ಟೆಯನ್ನೋ ತರುವುದಕ್ಕೆ ತಲೆಕೆಡಿಸಿಕೊಳ್ಳುವಷ್ಟು ಬೇರೆ ಯಾವ ವಿಷಯಕ್ಕೂ ತಲೆ ಕೆಡಿಸಿಕೊಳ್ಳುವುದಿಲ್ಲವೇನೋ. ಬಟ್ಟೆ ತಂದರೆ ಮಾತ್ರ ಕಥೆ ಮುಗಿಯುವುದಿಲ್ಲ.ಬಟ್ಟೆಯನ್ನ ಸರಿಯಾದ ಅಳತೆಗೆ ಹೊಲೆಯುವ ಟೈಲರ್ ಹುಡುಕುವುದು ಇನ್ನೊಂದು ಮೈಗ್ರೇನ್. ಟೈಲರ್ ಸಿಕ್ಕಿ ಹೊಲೆದು ತಂದ ಬಳಿಕ,ಹಾಕಿ ನೋಡುವಾಗ ಇನ್ನೊಂದಷ್ಟು ತಲೆಬಿಸಿ. ಅಲ್ಲಿ ಸರಿಯಾಗಿ ಹೊಲೆದಿಲ್ಲ,ಇಲ್ಲಿ ಬಿಗಿಯಾಯ್ತು, ಫಿಟ್ಟಿಂಗ್ ಸರಿಯಿಲ್ಲ ಅನ್ನೋ ತಕರಾರುಗಳು ಮತ್ತಷ್ಟು.ಪುನಃ ಟೈಲರ್ ಹತ್ರ ಹೋಗಿ ರಿಪೇರಿ ಮಾಡಿಸಿ ತಂದ ಬಳಿಕವೂ ಸಮಾಧಾನ ಹೊಂದುವವರು ಎಲ್ಲೋ ನೂರಕ್ಕೆ ಒಬ್ಬರಿಬ್ಬರು ಇರಬಹುದು. 

ಯಾವಾಗಲೂ ಅವರು ಹಾಕಿಕೊಂಡಿರುವ ಬಟ್ಟೆಗಿಂತ ಬೇರೆಯವರ ಬಟ್ಟೆಯೇ ಹೆಚ್ಚು ಆಕರ್ಷಕ.”ಛೆ,ನಾವು ತೊಗೊಳ್ಳಲು ಹೋದ್ರೆ ಸರಿಯಾಗಿ ಇರೋವು ಸಿಕ್ಕೋದೆ ಇಲ್ಲ, ಅದೆಂಗೆ ಇವಳಿಗೆ ಇಷ್ಟು ಒಳ್ಳೇದು ಸಿಕ್ತು” ಅನ್ನೋ ಕೊರಗು ಸಾರ್ವತ್ರಿಕ ಬಿಡಿ. ರೆಡಿಮೇಡ್ ತಂದರೂ ಅದನ್ನು ಪುನಃ ಅಲ್ಟ್ರೇಶನ್ ಮಾಡಿಸದೇ ಇದ್ದರೆ ಆದೀತೆ. ಒಟ್ಟಾರೆ ಬಟ್ಟೆ ವಿಷಯದಲ್ಲಿ ಹೆಂಗಸರನ್ನು ಸಮಾಧಾನ ಪಡಿಸಲು ಆ ಹರಿಹರ ಬ್ರಹ್ಮಾದಿಗಳಿಂದಲೂ ಸಾಧ್ಯವಿಲ್ಲವೇನೋ.

ನನ್ನ ನೆರೆಮನೆಯ ಗೆಳತಿಯೊಬ್ಬಳು ಹೀಗೆಯೇ ಎಲ್ಲಾ ಸಾಮಾನ್ಯ ಹೆಂಗಸರಂತೆ ಬಟ್ಟೆ ವಿಷಯಕ್ಕೆ ಬಂದರೆ ಅತೃಪ್ತ ಆತ್ಮವೇ. ಯಾವುದೇ ಸಲ್ವಾರ್ ಇಲ್ಲ ಬ್ಲೌಸ್ ಹೊಲಿಸಿದರೂ,ಇಲ್ಲ ರೆಡಿಮೇಡ್ ತಂದರೂ, ಮತ್ತೊಮ್ಮೆ ಟೈಲರ್ ಬಳಿ ರಿಪೇರಿ ಮಾಡಿಸದೇ ಇರೋದಿಲ್ಲ.

ಮೊನ್ನೆ ಒಂದು ಸಂಜೆ ಹೀಗೆ ವಾಕ್ ಗೆಂದು ಕರೆಯಲು ಹೋದಾಗ,”ಬನ್ರಿ ಇಲ್ಲಿ,ನನ್ನ ಹೊಸ ಟಾಪ್ ತೋರಿಸ್ತೀನಿ,” ಎಂದು ಮನೆಯೊಳಗೆ ಕರೆದಳು. ನಾನು ಹೋಗಿ ನೋಡಿದಾಗ ಯಾಕೋ ಬೂದು ಬಣ್ಣದ ಆ ಟಾಪ್ ಅಷ್ಟು ಚಂದ ಕಾಣದೇ ಅವಳಿಗೆ ಹೇಳಿಯೇ ಬಿಟ್ಟೆ.”ರೀ,ಇದ್ಯಾಕೋ ಅಷ್ಟು ಚಂದ ಅನ್ನಿಸ್ತಾ ಇಲ್ಲ, ಹೋಗಿ ಬದಲಾಯಿಸಿಕೊಂಡು ಬನ್ನಿ ” ಎಂದಿದ್ದಕ್ಕೆ, “ಇಲ್ಲಾ ಕಣ್ರಿ, ನನ್ನತ್ರ ಈ ಬಣ್ಣದ್ದು ಯಾವ ಬಟ್ಟೇನೂ ಇಲ್ಲ,ನನ್ನ ಮೈ ಬಣ್ಣಕ್ಕೆ ಚೆನ್ನಾಗಿ ಹೊಂದಿಕೊಳ್ಳುತ್ತೆ ಬಿಡಿ,”ಎಂದರು. ನಾನೂ,”ಏನೋ ಅವರಿಷ್ಟ” ಅಂತಾ ಸುಮ್ಮನಾದೆ.

ವಾಕ್ ಹೋಗುವಾಗ ಟೈಲರ್ ಅಂಗಡಿಗೆ ಕರೆದುಕೊಂಡು ಹೋದಳು.ಅಲ್ಲಿ ಸ್ವಲ್ಪ ಜನ ತುಂಬಿಕೊಂಡಿದ್ದರು. ಹಾಗೇ ಹೊರಗೆ ನಿಂತು ನೋಡುವಾಗ, ಇವರ ಬಟ್ಟೆಯದೇ ಬಣ್ಣದ ಬಟ್ಟೆ ಧರಿಸಿಕೊಂಡಿದ್ದ ಒಬ್ಬಳು ಹುಡುಗಿ ಟೈಲರ್ ಹತ್ರ ಏನೋ ಹೊಲಿಯಲು ಕೊಡುತ್ತಾ, ಮಾತನಾಡುತ್ತಾ ನಿಂತಿದ್ದಳು. ಹೆಚ್ಚು ಕಡಿಮೆ ಇವಳದೇ ಬಣ್ಣ,ಎತ್ತರಕ್ಕಿದ್ದಳು. ಒಂದೆರಡು ನಿಮಿಷ ಅವಳನ್ನೇ ದಿಟ್ಟಿಸಿ ನೋಡಿ, ನಂತರ,”ರೀ,ಬೇಡ ಬನ್ರಿ,ಇದು ವಾಪಸ್ ಕೊಟ್ಟು ಬೇರೆಯದು ತಂದರಾಯ್ತು,” ಅಂತ ಮರಳಿ ಕರೆದುಕೊಂಡು ಬಂದಳು. ನಾನು ನಗು ತಡೆದುಕೊಂಡು ಸುಮ್ಮನಾದೆ.

ಬಟ್ಟೆಗೆ ಮಾತ್ರ ಈ ಅಲ್ಟ್ರೇಶನ್ ಸೀಮಿತವಾಗಿಲ್ಲ. ಚಿನ್ನದ ಒಡವೆಗಳನ್ನು ಮುರಿಸಿ,ಮುರಿಸಿ, ಹೊಸ ಹೊಸ ವಿನ್ಯಾಸದ ಆಭರಣಗಳನ್ನು, ಕಾಲ ಕಾಲಕ್ಕೆ, ಫ್ಯಾಷನ್ ಬದಲಾದ ಹಾಗೆಲ್ಲಾ ಮಾಡಿಸುವ ಹುಚ್ಚು ಕೆಲವರಿಗೆ. ವೇಸ್ಟೇಜ್ ಖರ್ಚು ವಿಪರೀತ ಬಂದರೂ ತಲೆ ಕೆಡಿಸಿಕೊಳ್ಳದೆ ಮಾಡಿಸುತ್ತಾರೆ .ನನಗನ್ನಿಸುತ್ತೆ, ತಮ್ಮ ಬಳಿ ಇರುವ ಒಡವೆ,ವಸ್ತ್ರಗಳಿಗಿಂತ ಇನ್ನೊಬ್ಬರ ಬಳಿ ಇರುವವೇ ಹೆಚ್ಚು ಚಂದ ಅನ್ನೋ ಗುಮಾನಿಯ ಕಾಯಿಲೆ ಹೆಂಗಸರಲ್ಲಿ ಸಾರ್ವತ್ರಿಕ ಅಂತ.

ಒಡವೆ, ಬಟ್ಟೆ ವಿಷಯಕ್ಕೆ ಇಷ್ಟೊಂದು ತಲೆಕೆಡಿಸಿಕೊಂಡು,ತಮಗೆ ಸರಿ ಹೋಗುವವರೆಗೆ ರಿಪೇರಿ ಮಾಡಿಸಿಕೊಳ್ಳುವ ಹೆಂಗಸರು ತಮ್ಮ ಗಂಡಂದಿರ ವಿಷಯದಲ್ಲಿ ಏಕೆ ಸುಮ್ಮನಿರುತ್ತಾರೆ? ಅಥವಾ ಇದು ಅಲ್ಟ್ರೇಶನ್ ಅಗತ್ಯವಿರದ ಕಂಬಳಿ ತರಹ ಅಂದುಕೊಂಡು ಸುಮ್ಮನಾಗುತ್ತಾರೆನೋ! ಅಂಗಡಿ ಅಂಗಡಿ ಸುತ್ತಿ,ಎಲ್ಲಾ ಅಂಗಡಿಗಳಲ್ಲಿ ಇರೋ ಬರೋ ಬಟ್ಟೆಗಳನ್ನೆಲ್ಲಾ ತೆಗೆಸಿ ನೋಡಿ, ಯಾವುದೂ ಇಷ್ಟವಾಗದಿದ್ದಾಗ ಮುಲಾಜಿಲ್ಲದೆ ಎಷ್ಟೋ ಜನ ಎದ್ದು ಬರುತ್ತಾರೆ. ಆದರೆ ಜೀವನ ಸಂಗಾತಿಯ ಆಯ್ಕೆಯಲ್ಲಿ ಇಷ್ಟೊಂದು ಸ್ವಾತಂತ್ರ್ಯ ಎಲ್ಲಾ ಹೆಣ್ಣುಮಕ್ಕಳಿಗೆ ಇದೆಯೇ?

ಅಪ್ಪ ಅಮ್ಮನ ಆಯ್ಕೆಯವರನ್ನೇ ಮದುವೆಯಾಗುವ, ನಂತರ ಅವರೊಂದಿಗೇ ಹೊಂದಿಕೊಂಡು ಹೋಗುವ ಸರ್ಕಸ್ ಮಾಡುವ ಹುಡುಗಿಯರೇ ಹೆಚ್ಚು. ಆಧುನಿಕ ವಿದ್ಯೆ,ಉದ್ಯೋಗ ಯಾವುದೂ ಜೀವನ ಸಂಗಾತಿಯ ಆಯ್ಕೆಯ ವಿಷಯದಲ್ಲಿ ಸ್ವಾತಂತ್ರ್ಯ ಎಲ್ಲಾ ಹುಡುಗಿಯರಿಗೆ ನೀಡಿಲ್ಲ. ಜಾತಿ,ವರ್ಗ,ಅಂತಸ್ತು ಈಗಲೂ ಮದುವೆಗೆ ಮಾನದಂಡಗಳಾಗಿಯೇ ಉಳಿದು ಬಿಟ್ಟಿವೆ. ಒಮ್ಮೊಮ್ಮೆ ಅನ್ನಿಸುತ್ತೆ ಗಂಡನ ವಿಷಯದಲ್ಲಿ ಸಿಗದ ಆಯ್ಕೆಯ ಸ್ವಾತಂತ್ರ್ಯವನ್ನ ಹುಡುಗಿಯರು ಸರಿದೂಗಿಸಲು ಈ ರೀತಿ,ಬಟ್ಟೆ ಬರೆ, ವಡವೆ ವಸ್ತ್ರಗಳಲ್ಲಿ,ಅಂಗಡಿಗಳಲ್ಲಿ ವಸ್ತುಗಳನ್ನು ಕೊಳ್ಳುವಾಗಿನ ಚೌಕಾಸಿ ವ್ಯಾಪಾರದಲ್ಲಿ ಸರಿದೂಗಿಸಿಕೊಳ್ಳುತ್ತಾರೇನೋ ಅಂತ.

ಸಮತಾ.ಆರ್

14 Comments on “ಈ ಡ್ರೆಸ್ ಬೇಡ..

  1. ನಮಸ್ಕಾರ,ಇವೆಲ್ಲವೂ ಸಾರ್ವತ್ರಿಕ ಅಂತ ಓದಿ ಸಮಾಧಾನ ಆಯಿತು ಮೇಡಂ,, ನಮ್ಮ ಸ್ವಭಾವ ಗಳನ್ನು, ನಮ್ಮ ಸಮಸ್ಯೆಗಳನ್ನು ಸರಳವಾಗಿ ಚೆನ್ನಾಗಿ ಹೆಳಿದ್ದೀರಿ,,

  2. ಸತ್ಯಸ್ಥಸತ್ಯವಾದ ಅನುಭವದ ಮಾತುಗಳು ಮೇಡಂ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಧ್ಯೈರ್ಯವಾಗಿ ಹೇಳಿದ್ದಕ್ಕೆ ಒಂದು ಧನ್ಯವಾದಗಳು… ಮೇಡಂ

  3. Beautiful. ನಿಮ್ಮ ಎಲ್ಲ ಬರಹಗಳೂ ತುಂಬಾ ಚಂದ. ಬಹಳ ಸಿಂಪಲ್ ವಿಷಯಗಳನ್ನೂ ಸವಿಸ್ತಾರವಾಗಿ, ಓದಿಸಿಕೊಂಡು ಹೋಗುವ ರೀತಿ ಬರೆಯುತ್ತೀರಿ. Very nice

  4. ಉತ್ತಮ ಬರಹ. ಅದೆಷ್ಟು ಚಂದದ ಬರಹಗಳು ನಿಮ್ಮಿಂದ.Hats off to you

  5. ಓದಿ ಅಭಿಪ್ರಾಯ ವ್ಯಕ್ತಪಡಿಸಿದ ಎಲ್ಲರಿಗೂ ನನ್ನ ಧನ್ಯವಾದಗಳು

  6. ಅತೃಪ್ತ ಆತ್ಮಗಳ ಬಗೆಗೆ ಅತ್ಯಂತ ನಾಜೂಕಾಗಿ ಅರುಹಿದ ವಿಷಯ ಮಾತ್ರ ನೂರಕ್ಕೆ ನೂರು ನಿಜ! ಸೊಗಸಾದ ಬರಹ.

  7. ಲೇಖನದ ವೈಶಿಷ್ಟ್ಯವೆಂದರೆ, ಪ್ರಾರಂಭದಲ್ಲಿ, ತುಟಿಯಂಚಿನಲ್ಲಿ ಮೂಡಿದ ಕಿರುನಗೆಯೊಂದು ಲೇಖನ ಮುಗಿದ ನಂತರವೂ ಹಾಗೇ ಉಳಿಯಿತು. ಅಭಿನಂದನೆಗಳು

Leave a Reply to Asha K Cancel reply

 Click this button or press Ctrl+G to toggle between Kannada and English

Your email address will not be published. Required fields are marked *