ಕನ್ನಡದೊಂದಿಗೆ ನಾನು
ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಪ್ರಪಂಚದ ಪ್ರತಿಯೊಂದು ದೇಶವೂ ತನ್ನದೇ ಆದ ಸ್ವಂತ ಭಾಷೆ ಹಾಗೂ ಬೇರೆಬೇರೆ ಭಾಷಾ ಪ್ರಭೇದಗಳನ್ನು ಹೊಂದಿರುತ್ತದೆ.ಭಾಷೆ ನಿಂತ ನೀರಲ್ಲ.ಅದು ಸದಾ ಪ್ರವಹಿಸುತ್ತಲೇ ತನ್ನ ಹರವನ್ನು ವಿಸ್ತರಿಸಿಕೊಳ್ಳುತ್ತಲೇ ಸಾಗುತ್ತದೆ. ಸಮಾಜದಲ್ಲಿ ವ್ಯಕ್ತಿ ತನ್ನ ವಯಸ್ಸಿಗನುಗುಣವಾಗಿ ಬದಲಾಗುತ್ತಾ ಬೆಳೆದುಬರುವಂತೆಯೇ ಭಾಷೆಯೂ ನಿರಂತರವಾಗಿ ಬದಲಾಗುತ್ತಾ ಬೆಳೆಯುತ್ತಿರುತ್ತದೆ. ಭಾಷೆ ಎನ್ನುವುದು ದೈವದತ್ತವಾದುದಲ್ಲ.
“ಅವಶ್ಯಕತೆಯೇ ಸಂಶೋಧನೆಗೆ ತಾಯಿ ಇದ್ದಂತೆ” ಎನ್ನುವ ಗಾದೆಯಂತೆ ಮನುಷ್ಯ ತನ್ನ ಭಾವನೆ , ಆಲೋಚನೆಗಳನ್ನು ವ್ಯಕ್ತಪಡಿಸಲು ಧ್ವನಿ ಸಂಕೇತಗಳ ಮೂಲಕ ಭಾಷೆಯೊಂದರ ಉಗಮವಾಯಿತು.ಭಾಷೆ ಎನ್ನುವುದು ಆಡುವವನ ಆಸ್ತಿ. ಪ್ರಪಂಚದಲ್ಲಿ ಯಾರು ಯಾವ ಭಾಷೆಯನ್ನಾದರೂ ಕಲಿಯಬಹುದು. ಅದು ಕಾಲದಿಂದ ಕಾಲಕ್ಕೆ ಬದಲಾಗುತ್ತಾ ಸಾಗುತ್ತದೆ.
ಕುವೆಂಪು ಅವರು ಹೇಳುವಂತೆ ” ಹಾರೈಸಿ ಹಾರೈಸಿ ಹಾರಿದುದೋ ನಿರಧಿಯ ಮೀನ” ಎಂಬಂತೆ ಬಸವನ ಹುಳುವಿಗಿಂತ ಕೋಟಿ ಪಟ್ಟು ನಿಧಾನಗತಿಯಲ್ಲಿ ಭಾಷೆ ಯ ವಿಕಾಸವಾಗಿರಬೇಕು. ನಮ್ಮ ಹೆಮ್ಮೆಯ ಕನ್ನಡ ಭಾಷೆ ಹೆಚ್ಚು ಪ್ರಾಚೀನವಾದ ಸಾಹಿತ್ಯ ಪರಂಪರೆಯನ್ನು ಹೊಂದಿರುವ ಭಾಷೆಯಾಗಿದೆ. ಸಾಹಿತ್ಯ ಹಿನ್ನೆಲೆಯು ಶ್ರೀಮಂತವಾಗಿರುವುದಕ್ಕೆ ನಮಗೆ ಅಭಿಮಾನವೂ ಇದೆ.
ಕನ್ನಡವೂ ಜಿಲ್ಲಾವಾರು ಭಿನ್ನವಾಗಿದ್ದು , ಅದರ ಅನುಭವವನ್ನು ನಿಮ್ಮೊಂದಿಗೆಹಂಚಿಕೊಳ್ಳಲು ಬಯಸುತ್ತೇನೆ. ದಾವಣಗೆರೆ ನನಗೆ ಅನೇಕ ಕನ್ನಡ ಪ್ರಭೇದಗಳನ್ನು ಪರಿಚಯಿಸಿತು. ಅಲ್ಲಿನ ನನ್ನ ಅನೇಕ ಗೆಳತಿಯರು ಕರ್ನಾಟಕದ ಮೂಲೆಮೂಲೆಗಳಲ್ಲಿ ಇದ್ದವರು. ಉತ್ತರಕನ್ನಡ ಹಾಗೂ ದಕ್ಷಿಣ ಕನ್ನಡದ ಭಾಗದವರು. ಅವರ ಭಾಷೆ ಇನ್ನೂ ನನ್ನ ಕಿವಿಗಳಿಗೆ ಇಂಪು ಕೊಡುತ್ತದೆ. ಕುಮಟಾದ ಗೆಳತಿ ಸಂಗೀತಾ , ಶಿರಸಿಯ ಶಶಿಕಲಾ, ಅಂಕೋಲಾದ ಅಕ್ಷತಾ ಹೀಗೆ ಅವರ ಉಚ್ಛಾರಣೆ ನನ್ನ ಮನಗೆದ್ದಿತ್ತು. ಕನ್ನಡವನ್ನು ಬಿಡಿಸಿ,ಬಿಡಿಸಿ ಮಾತನಾಡುವುದು , ಬಪ್ಪ, ಹೋಪ, ಅಂಬ್ರು, ಮಾರಾಯ ಈ ರೀತಿಯ ಪದಗಳು ಅವರಲ್ಲಿ ಹೆಚ್ಚು. ಸಮುದ್ರದ ತೀರದವರು ಕೊಂಕಣಿ ಭಾಷೆಯನ್ನುಆಡುತ್ತಾರೆ. ಇಂದಿಗೂ ಅವರ ಮಾತುಗಳು ಮಧುರಾತಿಮಧುರ. ಹೀಗೆ ಬಿಜಾಪುರದ, ಧಾರವಾಡದ ,ಶಿವಮೊಗ್ಗದ ಅನೇಕ ಗೆಳತಿಯರು ವಿಭಿನ್ನ ಕನ್ನಡದ ಪರಿಚಯ ಮಾಡಿಕೊಟ್ಟರು.
2005 ರಲ್ಲಿ ಶಿಕ್ಷಕಿಯಾಗಿ ಮೈಸೂರಿನಲ್ಲಿ ಕೆಲಸಕ್ಕೆ ಸೇರಿದಾಗ , ಮೈಸೂರಿನ ಕನ್ನಡದ ಪರಿಚಯವಾಯಿತ್ತು. ಇದು ಎಷ್ಟೋ ವಿಷಯದಲ್ಲಿ ತನ್ನದೇ ಆದ ವೈಶಿಷ್ಟ್ಯಗಳನ್ನು ಹೊಂದಿರುವುದು ಕಂಡುಬಂದಿತ್ತು. ಅಲ್ಲಿನ ಹಳ್ಳಿಯ ಜನರ ನಾಲಿಗೆಯ ವೇಗಕ್ಕೆ ನನಗೆ ಕೆಲವು ಪದಗಳೇ ಅರ್ಥವಾಗುತ್ತಿರಲಿಲ್ಲ. ಹೀಗೆ ಒಂದು ಸಲ ಶಾಲೆಯಲ್ಲಿ ನಿಂಬೆಹಣ್ಣು ಪಾನೀಯ ತಯಾರಿಸಿ ನಮಗೆಲ್ಲರಿಗೂ ನೀಡಿದರು. ಅಲ್ಲಿನ ಅಡಿಗೆಯ ನೀಲಮ್ಮ “ಉಳಿದದ್ದನ್ನ ಎತ್ತಿ ಮಡಗಿ, ಇಲ್ಲಾಂದ್ರ ಎರ ಬರತ್ತೇಳಿ” ಎಂದರು. ನನಗೆ ಎರ ಅನ್ನೋ ಶಬ್ದ ಅರ್ಥವಾಗಲಿಲ್ಲ. ಸುಮ್ಮನೇ ಅವರ ಮುಖ ನೋಡಿದೆ, ಕೂಡಲೇ ಅಲ್ಲೇ ಇದ್ದ ನನ್ನ ಸಹೋದ್ಯೋಗಿ ಎರ ಎಂದರೆ ಇರುವೆ ಎಂದು ಹೇಳಿದ ಮೇಲೆ ನನಗರ್ಥವಾಗಿತ್ತು.!
ಹೀಗೆ ಅಲ್ಲಿಯ ಭಾಷೆ ಮೂಲತಃ ಚಿತ್ರದುರ್ಗದವಳಾದ ನನಗೆ ಅರ್ಥ ಮಾಡಿಕೊಳ್ಳಲು ಸಮಯ ತೆಗೆದುಕೊಂಡಿತು. ಅವನಿಗೆ, ಇವನಿಗೆ ಎಂಬುವು ಅವಗ, ಇವಗ ಎಂಬುದಾಗಿಯೂ, ಮಾಡ್ಲೇಳಿ, ಬರ್ಲೇಳಿ, ಕೊಡ್ಲೇಳಿ ಇತ್ಯಾದ ಪದಗಳು ಬಳಕೆಯಲ್ಲಿವೆ. ಹಾಗೆಯೇ ಮೈಸೂರಿನಲ್ಲಿ ನಮಗೆ ತರಬೇತಿ ನೀಡಲು ನಿಯೋಜಿತರಾದ ಸಂಪನ್ಮೂಲ ಶಿಕ್ಷಕರಲ್ಲಿ ಶ್ರೀಯುತ ಪ್ರಕಾಶ್ ಒಬ್ಬರು. ಅವರು ಮಂಡ್ಯ ಕಡೆಯವರು. ಮಂಡ್ಯ ಕನ್ನಡ ಮೈಸೂರಿನ ಕನ್ನಡವನ್ನು ಹೋಲುತ್ತದೆಯಾದರೂ “ಷ” ಹಾಗೂ “ಶ”ಕಾರಗಳ ಉಚ್ಚಾರಣೆಯಲ್ಲಿ ಅವರು ಸೋಲುತ್ತಾರೆ. ಅವರು ಜೀವಕೋಶದ ಬಗ್ಗೆ ವಿವರಿಸುತ್ತಿದ್ದರೆ ನನಗೆ ಒಳಗೊಳಗೇ ನಗು ತಡೆಯಲಾಗುತ್ತಿರಲಿಲ್ಲ. ಕಾರಣ ಇಷ್ಟೇ , ಅವರ ಹೆಸರು ಪ್ರಕಾಸ, ಪಾಠ ಜೀವಕೋಸ, ಹಾಗಾಗಿ ಎಲ್ಲರೂ ಸರ್ವನಾಸ… ಇದು ಅವರನ್ನು ಆಡಿಕೊಳ್ಳುವ ಸಲುವಾಗಿ ನಾನು ಹೇಳಿದ್ದಲ್ಲ . ಅವರು ಅಭ್ಯಾಸ ಮಾಡಿಕೊಂಡಂತೆ ಭಾಷೆಯಲ್ಲಿ ಉಚ್ಚಾರಣೆ ದೋಷ ಇದ್ದು, ಎಲ್ಲರಲ್ಲೂ ಈ ತೊಂದರೆ ಕಾಣಿಸದು.
ಇರುಳಿರುಳಳಿದು ದಿನ ದಿನ ಬೆಳಗೆ
ಸುತ್ತಮುತ್ತಲೂ ಮೇಲಕೆ ಕೆಳಗೆ
ಗಾವುದ ಗಾವುದ ಮುಂದೆ
ಎವೆತೆರೆದಿಕ್ಕುವ ಹೊತ್ತಿನ ಒಳಗೆ
ಹಕ್ಕಿ ಹಾರುತಿದೆ ನೋಡಿದಿರಾ?
ಎಂದು ಬೇಂದ್ರೆಯವರು ಈ ಪದ್ಯದಲ್ಲಿ ವರ್ಣಿಸಿದ್ದಾರೆ. ಹಕ್ಕಿಯು ಹಾರುವ ವೇಗದಲ್ಲೇ , ಕಾಲವೂ ನಮ್ಮ ಕೈಯಿಂದ ಹಾರಿ ಹೋಗುತ್ತದೆ. ಅಂದರೆ ವಿಜ್ಞಾನ ವಿಕಾಸಗೊಂಡು ತನ್ಮೂಲಕ ನಾಗರಿಕತೆಯು ಬೆಳೆದುಬಂದ ನಂತರ ಇಂಗ್ಲೀಷ್ ಬಳಕೆಯೂ ನಮ್ಮೊಡಗೂಡಿತು. ಭಾರತದಲ್ಲಿ ಬ್ರಿಟಿಷರು ನೆಲೆನಿಂತ ಮೇಲೆ ಅನಕ್ಷರಸ್ಥರೂ ಕೂಡ ಆ ಭಾಷೆಯ ಶಬ್ದಗಳನ್ನು ವಿಧಿಯಿಲ್ಲದೇ ಬಳಸಬೇಕಾಯಿತು.ಸಾಮಾನ್ಯವಾಗಿ ಪ್ರಭುಗಳ ಆಡಳಿತ ಭಾಷೆಯನ್ನು ಅನುಪಾಲನೆ ಮಾಡುವುದು ಸಾಮಾನ್ಯ ಪ್ರಜೆಗಳ ಕರ್ತವ್ಯವಾಗಿತ್ತು. ಕುರಿಗಳು ಮಂದೆಯಲ್ಲಿ ಸಾಗುವ ಕ್ರಮದಂತೆ ಭಾರತೀಯರು ಅನ್ಯಭಾಷಿಗರ ಸೂಚನೆಯಂತೆ ನಡೆದರು .
ಕುರಿಗಳು, ಸಾರ್ , ಕುರಿಗಳು
ಸಾಗಿದ್ದೇ
ಗುರಿಗಳು
ಮಂದೆಯಲ್ಲಿ ಒಂದಾಗಿ , ಸ್ವಂತತೆಯೇ ಬಂದಾಗಿ
ಇದರ ಬಾಲ ಅದು ಮತ್ತೆ ಅದರ ಬಾಲ ಇದು ಮೂಸಿ
ದನಿಕುಗ್ಗಿಸಿ , ತಲೆತಗ್ಗಿಸಿ
ಹುಡುಕಿ ಹುಲ್ಲುಕಡ್ಡಿ ಮೇವು, ಅಂಡಲೆಯುವ ನಾವು, ನೀವು
ಕುರಿಗಳು, ಸಾರ್ ,ಕುರಿಗಳು
ನಮಗೋ ನೂರು ಗುರಿಗಳು
ಎನ್ನುವಂತೆ ಭಾರತಕ್ಕೆ ಬ್ರಿಟೀಷರಂತೆ ಪೋರ್ಚುಗೀಸ್, ಡಚ್ಚರು, ಫ್ರೆಂಚರು ಬಂದು ಇಲ್ಲಿನ ನಮ್ಮ ಜನಗಳ ಮುಗ್ಧತೆಯನ್ನು ದುರುಪಯೋಗಪಡಿಸಿಕೊಂಡು ಒಬ್ಬೊಬ್ಬರಾಗಿ ನಮ್ಮವರನ್ನು ಹದ್ದುಬಸ್ತಿನಲ್ಲಿಡಲು ಪ್ರಯತ್ನಿಸಿದರು.ಅವರೆಲ್ಲರ ಆಡಳಿತದ ಕಾರಣಕ್ಕಾಗಿ ನಮ್ಮ ಕನ್ನಡದಲ್ಲೇ ಅವರ ಕೆಲವು ಪಾರಿಭಾಷಿಕ ಶಬ್ದಗಳು ಚಾಲ್ತಿಗೆ ಬಂದು, ಕನ್ನಡದ ಶಬ್ದಗಳೇ ಇರಬಹುದೆಂಬ ಭಾವನೆಯನ್ನು ಮೂಡಿಸಿದವು. ಇದೆಲ್ಲದರ ಅರಿವು ಇದ್ದೂ ಇಲ್ಲದಂತೆ ಆಗಿದೆ. ನಮ್ಮ ದಿನಬಳಕೆಯ ಶೇಕಡಾ 50 ಕ್ಕೂ ಹೆಚ್ಚು ಇಂಗ್ಲಿಷ್ ಪದಗಳು ಬಳಕೆಯಾಗುತ್ತಿವೆ. ನಮ್ಮ ಇಂಗ್ಲೀಷ್ ವ್ಯಾಮೋಹವೂಇದಕ್ಕೆ ಕಾರಣ. ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುವುದು ಎಂದರೆ ಅದು ಹೆಮ್ಮೆಯ ವಿಷಯವಾಗಿಬಿಟ್ಟಿದೆ. ಅದಕ್ಕಾಗಿ ಮಗುವಿಗೆ ಎರಡುವರ್ಷ ತುಂಬಿದ ಕೂಡಲೇ ಆಂಗ್ಲ ಮಾಧ್ಯಮದ ಶಾಲೆಗಳಿಗೆ ಕಳುಹಿಸಿ ಅವರು ಒಂದೆರಡು ಪದಗಳನ್ನು ಹೇಳಿಬಿಟ್ಟರೆ ನಮ್ಮ ಜನ್ಮ ಸಾರ್ಥಕವಾದಂತೆ. ಹೆಡ್,ಐ, ನೋಸ್, ಲೆಗ್ ಎಂಬುದಾಗಿ ಹೇಳಿದರೆ ಹೆತ್ತ ತಾಯಂದಿರ ಮುಖಮೊರದಗಲವಾಗಿಬಿಡುತ್ತದೆ. ಇದಕ್ಕೆ ಅವರದೇನೂ ತಪ್ಪಿಲ್ಲ ಬಿಡಿ. ಕಾಲೇಜು ಶಿಕ್ಷಣ ಪಡೆಯಲು, ಉನ್ನತ ವ್ಯಾಸಂಗ ಮಾಡಲು , ಡಾಕ್ಟರ್, ಇಂಜಿನಿಯರ್ ಆಗಲು ಇಂಗ್ಲಿಷ್ ಅನಿವಾರ್ಯವಾಗಿರುವುದು ಅವರ ವ್ಯಾಮೋಹಕ್ಕೆ ಕಾರಣವೆ ತಾನೇ?
ಸಂಸ್ಕೃತ ಭಾಷೆಯಲ್ಲಿ ಒಂದು ನಾಣ್ಣುಡಿಯಿದೆ . “ಪ್ರಯೋಜನಮನುದ್ದಿಶ್ಯ ನ ಮಂದೋಪಿ ಪ್ರವರ್ತತೇ” ಅಂದರೆ ” ಪ್ರಯೋಜನವಿಲ್ಲದ ಕೆಲಸವನ್ನು ಯಾವ ದಡ್ಡನೂ ಕೂಡ ಮಾಡುವುದಿಲ್ಲ” ಎಂದು. ಅಂಥದ್ದರಲ್ಲಿ ಇಂಗ್ಲೀಷ್ ಜ್ಞಾನವೂ ಕೂಡ ಪ್ರಯೋಜನವಿಲ್ಲದೇ ಇರುತ್ತದೆಯೇ?
ಭಾಷೆ ಯಾವುದೇ ಇರಲಿ ಕಲಿಯೋಣ, ಆದರೆ ಕನ್ನಡವನ್ನು ಮರೆಯದಿರೋಣ. “ಕಲಿಯೋಕೆ ಕೋಟಿ ಭಾಷೆ, ಆಡೋಕೆ ಒಂದೇ ಭಾಷೆ, ಕನ್ನಡ , ಕನ್ನಡ , ಕಸ್ತೂರಿ ಕನ್ನಡ” ಎಂದು ಅಣ್ಣಾವ್ರೇ ಹಾಡಿ ಕುಣಿದಿಲ್ಲವೇ?
“ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ“
–ಸರಿತಾ ಮಧುಕುಮಾರ್ , ನಾಗೇನಹಳ್ಳಿ
ಕನ್ನಡದ ಸೊಗಡನ್ನು ಉಣಬಡಿಸಿರುವ ನಿಮ್ಮ ಲೇಖನ ಮಧುರವಾಗಿದೆ
ಆಡುವ ಭಾಷೆ ಕನ್ನಡ ವೇ ಆದರೂ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಇರುವ ವ್ಯತ್ಯಾಸ ರೂಢಿ ಬಳಸುವ ಪರಿಯನ್ನು ಸೊಗಸಾಗಿ ವಿವರಿಸಿದ್ದು ಇಂಗ್ಲಿಷ್ ನ ಸಹಚರ್ಯೆ ಏಕೆ ಅವಶ್ಯಕ ಎಷ್ಷೇ ಭಾಷೆ ಕಲಿತರು ಕನ್ನಡದ ಒಡನಾಟ ಬಿಡಬಾರದೆಂದು ಕಳಕಳಿ ಚೆನ್ನಾಗಿದೆ ಮೂಡಿ ಬಂದಿದೆ ಧನ್ಯವಾದಗಳು ಮೇಡಂ
ಧನ್ಯವಾದಗಳು
ಮಾಹಿತಿಪೂರ್ಣ
ಧನ್ಯವಾದಗಳು
ನಮ್ಮ ಸವಿಗನ್ನಡದ ಭಾಷಾ ವೈವಿಧ್ಯತೆಯ ಸೊಗಡು ಲೇಖನದಲ್ಲಿ ಪಡಿಮೂಡಿದೆ. ಚಂದದ ಬರೆಹ…ಧನ್ಯವಾದಗಳು ಮೇಡಂ.
ಧನ್ಯವಾದಗಳು
Nice article
ನಮ್ಮ ಸುಂದರ ಮಾತೃಭಾಷೆ ಕನ್ನಡದ ಬಗ್ಗೆ ಎಷ್ಟು ಬರೆದರೂ, ಓದಿದರೂ ಮನ ಮುದಗೊಳ್ಳುವುದರಲ್ಲಿ ಬೇರೆ ಮಾತೇ ಇಲ್ಲ. ನಿಮ್ಮ ಲೇಖನವೂ ಮನವನ್ನು ಮತ್ತೊಮ್ಮೆ ಮುದಗೊಳೊಸಿತು.