ಮಣಿಪಾಲದ ಮಧುರ ನೆನಪುಗಳು..ಭಾಗ 11

Share Button

ಹಿಂದಿನ ಸಂಚಿಕೆಯಿಂದ ಮುಂದುವರಿದುದು.. http://surahonne.com/?p=33991

ಮಂಗಳೂರು ಕ್ರಿಶ್ಚಿಯನ್ ಹೌಸ್

ವೈಭೋವೋಪೇತ ನವಾಬ್ ಮಹಲನ್ನು  ವೀಕ್ಷಿಸಿ ಹೊರಟಾಗ ಮನಸ್ಸಿಗೆ ಕೊಂಚ ನೋವಾದುದಂತೂ ನಿಜ. ಮುಂದಕ್ಕೆ..ಅಲ್ಲೇ  ಪಕ್ಕದಲ್ಲಿರುವ ಸುಂದರವಾದ ಮನೆಯು ಕ್ರೈಸ್ತ ಧರ್ಮದವರಿಗೆ ಸೇರಿದುದಾಗಿದೆ. ಈ ರೋಮನ್ ಕೆಥೋಲಿಕ್ ಹೌಸ್ ಅಥವಾ ಮಂಗಳೂರು ಕ್ರಿಶ್ಚಿಯನ್ ಹೌಸ್, ಸುಮಾರು 170 ವರ್ಷಗಳ ಇತಿಹಾಸವುಳ್ಳ, ಪೋರ್ಚುಗೀಸ್ ಮತ್ತು ಕ್ರಿಶ್ಚಿಯನ್ ಸಂಸ್ಕೃತಿಗಳು ಮಿಳಿತಗೊಂಡಿರುವುದಾಗಿದೆ. ಈ ಮನೆಯನ್ನು ಮಂಗಳೂರಿನ ಫಳ್ನೀರಿನಿಂದ  ತಂದು ಇಲ್ಲಿ ಮರುಸ್ಥಾಪಿಸಲಾಗಿದೆ. ಇಲ್ಲಿಯ ಕ್ರೈಸ್ತರು ಹಿಂದೂಧರ್ಮದಿಂದ ಮತಾಂತರಗೊಂಡವರಾಗಿರುವರು. ಈ ಸಂಸ್ಕೃತಿ ಗ್ರಾಮದೊಳಗಿರುವ ಇತರ ಎಲ್ಲಾ ಮನೆಗಳಿಗಿಂತ ತೀರಾ ಭಿನ್ನವಾಗಿರುವ ಈ ಕ್ರಿಶ್ಚಿಯನ್ ಮಿಶನರಿ ಮನೆಯ ಒಳಗಡೆ ಕಾಲಿರಿಸುತ್ತಿದ್ದಂತೆಯೇ ಎದುರುಗಡೆಗೆ ತಂಪಾದ, ವಿಶಾಲವಾದ ಹಜಾರವಿದೆ. ಬಿಸಿಲ ಝಳ ಒಳಗೆ ತಗುಲದಂತೆ ಛಾವಣಿಯು ಎರಡು ಪದರುಗಳುಳ್ಳ ಜರ್ಮನಿಯ ಬೇಸಿಲ್ ಮೆಷಿನ್ ಟೈಲ್ಸ್ ನಿಂದ ಕಟ್ಟಲ್ಪಟ್ಟಿದೆ. ಇಂದಿಗೂ ಆ ಕಾರ್ಖಾನೆಯು ಮಂಗಳೂರಿನಲ್ಲಿ ಹಂಚುಗಳನ್ನು ತಯಾರಿಸುತ್ತಿದೆಯಂತೆ. ಅತ್ಯಂತ ಬಲಿಷ್ಠ ಹಾಗೂ ಸುಂದರವಾದ ಮರದ ವಿಶ್ರಾಮ ಕುರ್ಚಿಗಳು  ಮನ ಸೆಳೆಯುತ್ತವೆ. ಮನೆಯ ಒಳಗಡೆ ಕೊಳೆಯಾಗದಿರಲು ಹಾಗೂ ಬಂದ ಅತಿಥಿಗಳು ಹೊರಗಡೆಗೇ ತಂಪಾದ ವರಾಂಡದಲ್ಲಿ ಕುಳಿತು, ಮಾತನಾಡಿ, ತಿಂಡಿ ತೀರ್ಥಗಳನ್ನು ತೆಗೆದುಕೊಳ್ಳುವ ವ್ಯವಸ್ಥೆಗಾಗಿಯೆ ಇವೆ.. ಮರದ ಸುಂದರವಾದ ಮೇಜು ಕುರ್ಚಿಗಳು. ಚಂದದ ಸೋಫಾಗಳು, ದೊಡ್ಡದಾದ ಆರಾಮ ಕುರ್ಚಿ ನಮ್ಮನ್ನು ಅಲ್ಲಿ ಸ್ವಲ್ಪ ದಣಿವಾರಿಸಲು ಕರೆಯುತ್ತಿರುವಂತೆನಿಸುತ್ತದೆ. ಅಲ್ಲೇ ಪಕ್ಕದಲ್ಲಿ, ಎಲ್ಲರೂ ಕುಳಿತು ಮಾತನಾಡಲು ಅನುಕೂಲವಾಗುವಂತಹ, ವಿಶೇಷವಾದ ವಕೀಲರ ಬೆಂಚು, ಪತ್ರಿಕೆಗಳನ್ನಿರಿಸುವ ದೊಡ್ಡದಾದ ಸ್ಟಾಂಡ್ ಗಮನಸೆಳೆಯುತ್ತವೆ. ಒಳಗಡೆಗೆ ಹೋಗುತ್ತಿದ್ದಂತೆಯೇ, ಚರ್ಚಿನಲ್ಲಿರುವಂತೆ, ಎದುರು ಭಾಗದಲ್ಲಿದೆ ಏಸುಕ್ರಿಸ್ತನ ದೊಡ್ಡದಾದ ಶಿಲುಬೆ. ಅದರ ಎದುರು ಭಾಗದಲ್ಲಿ  ಸುಮಾರು ನಾಲ್ಕು ಅಡಿ ಎತ್ತರದ ಹಾಗೂ ಸುಮಾರು ಅರ್ಧ ಅಡಿ ಸುತ್ತಳತೆಯ  ಮೇಣದ ಬತ್ತಿ ಕಂಡು ಆಶ್ಚರ್ಯವಾಗುತ್ತದೆ.. ಯಾಕೆಂದರೆ , ಅದು ಉರಿದ ಕುರುಹೇ ಕಾಣದು! ಅದರ ಬಗ್ಗೆ ವಿಚಾರಿಸಲಾಗಿ ತಿಳಿದು ಬಂದ ಸಂಗತಿ ತುಂಬಾ ಕುತೂಹಲಕಾರಿಯಾಗಿತ್ತು.

ಮಂಗಳೂರು ಕ್ರಿಶ್ಚಿಯನ್ ಹೌಸ್

ಸುಮಾರು 150 ವರ್ಷಗಳಿಂದ ಕ್ರಿಸ್ಮಸ್ ದಿನ ಮಾತ್ರ ಉರಿಸಲ್ಪಡುವ ಈ ಮೇಣದ ಬತ್ತಿಯ  ಗಾತ್ರ ಕಡಿಮೆಯಾದುದೇ ಇಲ್ಲವಂತೆ! ನಿಜವಾಗಿಯೂ ಇದು ವಿಸ್ಮಯಲ್ಲವೇ? ಶಿಲುಬೆಯ ಪಕ್ಕದಲ್ಲಿದೆ.

ತಪ್ಪೊಪ್ಪಿಗೆಗಾಗಿರುವ ಗೌಪ್ಯ ಜಾಗ. (Confession Box). ಎಡ ಪಕ್ಕದ ಕೋಣೆಯಲ್ಲಿ ಹಲವಾರು ಹಳೆಯ ಕಾಲದ ಸುಂದರ, ಸದೃಢ ಮರದ ಕಪಾಟುಗಳು ಓರಣವಾಗಿ ಜೋಡಿಸಲ್ಪಟ್ಟಿವೆ. ಇನ್ನೂ ಸರಿಯಾಗಿ  ವೇಳೆ ತೋರಿಸುತ್ತಿರುವ ಹಾಗೂ ಗಂಟೆಗೊಮ್ಮೆ ಕುಕ್ಕೂ ಹೇಳುವ ಕುಕ್ಕೂ ಗಡಿಯಾರ ಇಲ್ಲಿಯ ಗೋಡೆಯನ್ನು ಅಲಂಕರಿಸಿದೆ. ಈ ಮನೆಯೊಳಗೆ ಐರೋಪ್ಯ ವಸ್ತುಗಳ ದೊಡ್ಡ ಸಂಗ್ರಹವೇ ಇದೆ ಎನ್ನಬಹುದು. ಹೊರಗಡೆ ಶೆಡ್ ನಲ್ಲಿ ನಿಲ್ಲಿಸಿರುವ ದೊಡ್ಡದಾದ ಕಾರು, ಒಳಗೆ ತೂಗುತ್ತಿರುವ ಜರ್ಮನ್ ಲ್ಯಾಂಪ್ ಗಳು, ಗೋಡೆಗೆ ಒರಗಿರುವ ಬಂದೂಕು, ಬಲ ಪಕ್ಕ ಕೋಣೆಯಲ್ಲಿರುವ ಹಳೆಯ ಮಾದರಿಯ ಕೆಮರಾ, ಸೀಮೆಎಣ್ಣೆಯ ಪ್ರೊಜೆಕ್ಟರ್, ಇದ್ದಿಲಿನ ಇಸ್ತ್ರಿಪೆಟ್ಟಿಗೆ,  ಸದ್ದಿಲ್ಲದೆ ಮೌನವಾಗಿ ಕುಳಿತಿರುವ ರೇಡಿಯೋಗ್ರಾಂ ಇತ್ಯಾದಿಗಳು ಕುತೂಹಲಕಾರಿಯಾಗಿವೆ. ಅದಕ್ಕೆ ಸಂಬಂಧಿಸಿದ ಹತ್ತಾರು ಸೋಜಿಗದ ವಸ್ತುಗಳು ಅಚ್ಚುಕಟ್ಟಾಗಿ ಜೋಡಿಸಲ್ಪಟ್ಟು ಗಮನಸೆಳೆಯುವಂತಿವೆ.

ಮುಂದಕ್ಕೆ ಕೊನೆಯ ಕೋಣೆಯೇ ಊಟದ ಕೋಣೆ. ಅಲ್ಲಿ ಸುವ್ಯವಸ್ಥಿತವಾಗಿ ಇರಿಸಿರುವ ಅಲಂಕಾರಿಕ ಊಟದ ಮೇಜು ಮತ್ತು ಕುರ್ಚಿಗಳು, ಆದರ ಮೇಲೆ ಒಪ್ಪವಾಗಿ ಕುಳಿತಿರುವ ಫಳಫಳ ಹೊಳೆಯುತ್ತಿರುವ ಪಿಂಗಾಣಿ ಪಾತ್ರೆ, ತಟ್ಟೆ, ಲೋಟಗಳು ಮನಸ್ಸಿಗೆ ಖುಷಿ ಕೊಡುತ್ತವೆ. ಅಲ್ಲಿ , ಎಲ್ಲರ ಮನೆಯಲ್ಲಿರುವಂತೆ ಇರುವ ಫ್ರಿಜ್ ಕಂಡು ನಿಜವಾಗಿಯೂ ಆಶ್ಚರ್ಯವಾಯಿತು! ಅಲ್ವಿನ್ ಕಂಪೆನಿಯ ಬಿಳಿ ಬಣ್ಣದ ತಂಪು ಪೆಟ್ಟಿಗೆಯು ವಿದ್ಯುಚ್ಛಕ್ತಿ ಲಭ್ಯವಿಲ್ಲದ ಕಾಲಘಟ್ಟದಲ್ಲಿ ಸೀಮೆ ಎಣ್ಣೆಯಿಂದ ಕಾರ್ಯ ನಿರ್ವಹಿಸುತ್ತಿದ್ದರೆ, ಈಗ ವಿದ್ಯುಚ್ಛಕ್ತಿಯಿಂದ ನಡೆಯುತ್ತಿದೆ. ಅದರ ಪಕ್ಕದಲ್ಲಿರುವ ಪಿಂಗಾಣಿಯ ಕಾಫಿ ತಯಾರಿಸುವ ಪಾತ್ರೆ, ಕಾಫಿ ಪುಡಿ ಮಾಡುವ ಯಂತ್ರ, ಅರೆಯುವ ಯಂತ್ರ ಇತ್ಯಾದಿಗಳು ನಮ್ಮನ್ನು ಸೋಜಿಗದಲ್ಲಿ ಮುಳುಗಿಸುತ್ತವೆ. ಅಲ್ಲಿಂದ ಬಲ ಕೋಣೆಗೆ ಅಡಿ ಇರಿಸುತ್ತಿದ್ದಂತೆ ಹತ್ತಾರು ಇಟೆಲಿಯ ವಿಶೇಷ ಫ್ಯಾನ್ ಗಳು ನಮ್ಮನ್ನು ಇದಿರುಗೊಳ್ಳುತ್ತವೆ‌. ಇವುಗಳೆಲ್ಲವನ್ನೂ ಕಂಡಾಗ ಯುರೋಪಿನ ಆಧುನಿಕತೆಯು ವಿಜ್ಞಾನ ಮತ್ತು ತಂತ್ರಜ್ಞಾನಗಳ ಮೂಲಕ ಆ ಕಾಲದಲ್ಲೇ ನಮ್ಮ ದೇಶದೊಳಗೆ ಪ್ರವೇಶಿಸಿದುದರ ಬಗ್ಗೆ ಅರಿವು ಮೂಡುತ್ತದೆ. ಹೊರ ಜಗುಲಿಯಲ್ಲಿ ತಿರುಗುತ್ತಿರುವ ಫ್ಯಾನ್.. ಅದರಿಂದ ಕೋಣೆ ತುಂಬಾ ಹರಡಿದ  ತಂಪಾದ, ನವಿರು ಸುಗಂಧದ ಗಾಳಿಯನ್ನು ಆಸ್ವಾದಿಸುತ್ತಾ ಅಲ್ಲಿಂದ ಹೊರ ಬಂದೆವು.

ಹೊರಗಡೆ ಬಂದಾಗ, ಎಡ ಪಕ್ಕದ ಕೆಂಬಣ್ಣದ ಗಾರೆಕಲ್ಲಿನ ದೊಡ್ಡದಾದಕಟ್ಟಡವು ಗಮನ ಸೆಳೆಯಿತು. ಆದರೆ ಅದರ ಕೆಲಸವು ಇನ್ನೂ ಪೂರ್ತಿಯಾಗದುದರಿಂದ ಪ್ರವಾಸಿಗರಿಗೆ ಅವಕಾಶವಿರಲಿಲ್ಲ. ಅಲ್ಲೇ ಅದರ ಪಕ್ಕದಲ್ಲಿ ಚಂದದ ಹಳೆಯ ಕಟ್ಟಡವು ಅತ್ಯಂತ ನಾಜೂಕಿನ ಕೆತ್ತನೆಯ ದೊಡ್ಡ ಬಾಗಿಲನ್ನು ಹೊಂದಿದ್ದರೂ, ಪ್ರವಾಸಿಗರಿಗೆ ನೋಡಲು ಅವಕಾಶವಿರಲಿಲ್ಲವಾದರೂ ಅರ್ಧ ಬಾಗಿಲು ತೆರೆದಿತ್ತು. ಅದರಲ್ಲೇ ಸ್ವಲ್ಪ  ಇಣುಕಿ ನೋಡಿದಾಗ, ಒಳಗಡೆಗೆ ವಿಶಾಲವಾದ, ಒಂದರ ಹಿಂದೆ ಒಂದರಂತೆ, ಮೂರು ಕೋಣೆಗಳು ಕಾಣಿಸಿದುವು. ಎಲ್ಲಾ ಕೋಣೆಗಳಲ್ಲಿ ತೂಗುದೀಪಗಳು, ಆರತಿ, ತಟ್ಟೆಗಳಂತಹ ದೇವರ ಪೂಜಾ ಸಾಮಗ್ರಿಗಳು ಜೋಡಿಸಲ್ಪಟ್ಟಿದ್ದವು. ಕೆಲವರು ಅಲ್ಲಿರುವ ವಸ್ತುಗಳನ್ನು ಸ್ವಚ್ಛ ಮಾಡುತ್ತಿರುವುದು ಕಾಣಿಸಿತು.  ಅಲ್ಲಿರುವವೆಲ್ಲಾ ಶೆಣೈಯವರು, ತಾವು ಹೋದ ಕಡೆಗಳಿಂದ ಸಂಗ್ರಹಿಸಿದ ಅತ್ಯಂತ ನಾಜೂಕು, ಸೂಕ್ಷ್ಮವಾದ ಬೆಲೆ ಬಾಳುವ ವಸ್ತುಗಳಾಗಿದ್ದುವು. ಆದ್ದರಿಂದ, ಸರಿಯಾದ ಮೇಲ್ವಿಚಾರಣೆ ಇಲ್ಲದೆ ಅವುಗಳನ್ನು ಪ್ರದರ್ಶನಕ್ಕೆ ಇಡಲು ಸಾಧ್ಯವಿರಲಿಲ್ಲ. ಯಾಕೆಂದರೆ, ಕೆಲವು ಪ್ರವಾಸಿಗರು ವಸ್ತುಗಳನ್ನು ಹಿಡಿದು ನೋಡಿ ತಮ್ಮೊಂದಿಗೆ ಒಯ್ಯುವ  ಭಯವೂ ಇತ್ತು. ನಮಗೆ ಅವುಗಳನ್ನು ಹತ್ತಿರದಿಂದ ನೋಡಲಾಗದುದಕ್ಕೆ ಸ್ವಲ್ಪ ನಿರಾಸೆಯಾಗಿದ್ದಂತೂ ನಿಜ. ಬೇರೊಂದು ಜಗತ್ತಿನ ಅನುಭೂತಿಯನ್ನು ಉಂಟುಮಾಡಿದ ಕ್ರಿಶ್ಚಿಯನ್ ಮಿಷನರಿ ಮನೆಯ ವೈಭವವು ನಮ್ಮನ್ನು ಮೂಕರನ್ನಾಗಿಸಿತ್ತು.

ಎರಕದ ವಿಗ್ರಹಗಳ ಸಂಗ್ರಹ

ಮುಂದಕ್ಕೆ ಹೋದಂತೆ, ಇನ್ನೊಂದು ಕಟ್ಟಡದೊಳಗೆ ವಿಶಾಲವಾದ ಹಜಾರ.. ಅದರಲ್ಲಿ ಎರಡೂ ಪಕ್ಕಗಳಲ್ಲಿ  ವಿವಿಧ ವಿಗ್ರಹಗಳನ್ನು ಓರಣವಾಗಿ ಜೋಡಿಸಲಾಗಿತ್ತು. ಅವುಗಳೆಲ್ಲಾ ಮಯಣದಲ್ಲಿ ಅಚ್ಚುಹಾಕಿ ಮಾಡಿದಂತಹ, ಒಂದು ಬದಿಯಲ್ಲಿ ಅಥವಾ ಒಳಗಡೆ ಟೊಳ್ಳಾಗಿರುವ ಎರಕದ ಲೋಹ ವಿಗ್ರಹಗಳಾಗಿದ್ದವು. ಅದರ ತಯಾರಿ ಬಗ್ಗೆಯೂ ಅಲ್ಲಿ ತಿಳುವಳಿಕೆ ಕೊಡಲಾಯಿತು. ಮೊದಲು ಜೇನುಮಯಣದ ಮೂರ್ತಿಯನ್ನು ತಯಾರಿಸಿ ಅದರ ಮೇಲೆ, ಕೆಳಭಾಗವನ್ನು ಬಿಟ್ಟು, ಆವೆಮಣ್ಣಿನ ದಪ್ಪ ಲೇಪನವನ್ನು ಹಾಕಲಾಗುತ್ತದೆ. ಅದು ಸರಿಯಾಗಿ ಒಣಗಿದ ಬಳಿಕ ಬಿಸಿ ಮಾಡಿ ಜೇನುಮಯಣವನ್ನು ತೆಗೆದಾಗ ಒಳಗೆ ಟೊಳ್ಳಾದ ಚಂದದ ಮಣ್ಣಿನ ಮೂರ್ತಿಯು ಸಿಗುತ್ತದೆ. ಅದರೊಳಗೆ ಬಿಸಿಯಾದ ಲೋಹದ  ದ್ರಾವಣವನ್ನು ಹಾಕಿ ಆರಿಸಿದಾಗ ಒಳಗಿನ ಲೋಹವು ಗಟ್ಟಿಯಾಗುತ್ತದೆ. ಬಳಿಕ ಹೊರಗಿನ ಮಣ್ಣನ್ನು ಒಡೆದು ತೆಗೆದಾಗ ಸೊಗಸಾದ ವಿಗ್ರಹವು ಕೈಗೆ ಸಿಗುತ್ತದೆ. ಅಲ್ಲಿರುವ ವಿಗ್ರಹಗಳು ಅತ್ಯಂತ ನಾಜೂಕು ಕುಸುರಿಕಲೆಯಿಂದ  ತುಂಬಿದ್ದವು. ದೊಡ್ಡದಾದ ಮುಖವಾಡಗಳು, ಶಾರ್ದೂಲ, ದೇವ ದೇವತೆಗಳು, ವಿವಿಧ ಪ್ರಾಣಿಗಳು, ಗುಡ್ಡಗಾಡು ಜನರ ಸಂಸ್ಕೃತಿಯನ್ನು ಬಿಂಬಿಸುವಂತಹ ವಿಗ್ರಹಗಳ ಜೋಡಣೆಗಳು,  ಎಲ್ಲವನ್ನೂ ನೋಡುತ್ತಾ ಸಮಯ ಸರಿದುದೇ ತಿಳಿಯಲಿಲ್ಲ. ಹಜಾರದಲ್ಲಿ, ಮಂದದನಿಯಲ್ಲಿ ಕೇಳುತ್ತಿದ್ದ ಹಾಡು ಮನಸ್ಸನ್ನು ಅಹ್ಲಾದಗೊಳಿಸಿದ್ದು ವಿಶೇಷವಾಗಿತ್ತು.

 ಮುಧೋಳ ರಾಜವಾಡೆಯ ಅರಮನೆ

ಅದಾಗಲೇ ಮಧ್ಯಾಹ್ನ 12:30. ಕೊನೆಯದಾಗಿ ನೋಡಲಿರುವ ಬಾಗಲಕೋಟೆ ಜಿಲ್ಲೆಯ ಮುಧೋಳ ರಾಜವಾಡೆಯ ಕೊನೆಯ ಘೋರ್ಪಡೆ ಅರಸರಾದ ಮಾಲಾಜಿ ರಾವ್ ವೆಂಕಟ್ರಾವ್ ಅವರಿಂದ ಸುಮಾರು 250ವರ್ಷಗಳಷ್ಟು ಹಿಂದೆ ಕಟ್ಟಲ್ಪಟ್ಟ ದೊಡ್ಡದಾದ ಅರಮನೆಯ ಮುಂಭಾಗದಲ್ಲಿರುವ ಅತ್ಯಂತ ಸುಂದರ ದರ್ಬಾರ್ ಹಾಲ್ ನ ಮುಂದೆ ನಿಂತಿದ್ದೆವು. ಅದರ ಹಿಂಬಾಗದಲ್ಲಿದ್ದ ಅರಮನೆಯ ಇತರ ಕಟ್ಟಡಗಳೆಲ್ಲ; ಶೆಣೈಯವರಿಗೆ ಮಾಹಿತಿ ಲಭಿಸಿ, ಮುಧೋಳಕ್ಕೆ ಹೋಗುವ ಬಹಳ ಮೊದಲೇ ಬಿದ್ದು  ನಾಶವಾಗಿತ್ತು. ರಾಜ ಪ್ರಜೆಗಳೊಂದಿಗೆ ಮುಖಾಮುಖಿಯಾಗುವ ಸ್ಥಳವಾದ್ದರಿಂದ, ಬಹು ವೈಭವದಿಂದ, ದಾರುಶಿಲ್ಪ ಸೌಂದರ್ಯದಿಂದ, ಆಕರ್ಷಕ ವಾಸ್ತುವಿನ್ಯಾಸದಿಂದ ಕೂಡಿದೆ ಈ ಹಜಾರ. ಇದು, ತಳ ಮಟ್ಟದಿಂದ ಸುಮಾರು ನಾಲ್ಕೈದು ಅಡಿಗಳಷ್ಟು ಎತ್ತರದಲ್ಲಿದ್ದು, ಮೇಲೇರಲು ದೊಡ್ಡದಾದ ಮೆಟ್ಟಿಲುಗಳಿವೆ.

ಎಡ ಪಕ್ಕದ ಗೋಡೆಯಲ್ಲಿ  ಅರಸರು ಬೇಟೆಗೆ ಉಪಯೋಗಿಸುತ್ತಿದ್ದ ಆಯುಧಗಳು, ಅಲ್ಲೇ ಕೆಳಗಡೆಗೆ ದೇವರನ್ನು ಹೊರುವ ಅಂದವಾದ ಪಲ್ಲಕ್ಕಿ ಇದ್ದರೆ, ಬಲ ಪಕ್ಕದಲ್ಲಿ ರಾಣಿಯರನ್ನು ಕೊಂಡೊಯ್ಯುವಂತಹ ದೊಡ್ಡದಾದ ಮೇನೆ(ಡೋಲಿ) ಇದೆ. ಅದರ ಬಾಗಿಲುಗಳನ್ನು ಮುಚ್ಚಿದರೂ ಒಳಗಿನವರಿಗೆ ಹೊರಗೆ ನೋಡುವಂತಹ, ಹಾಗೆಯೇ ಹೊರಗಿನವರಿಗೆ ಒಳಗಿನವರು ಕಾಣಿಸದಂತಹ ವಿಶೇಷವಾದ ವ್ಯವಸ್ಥೆ ಇತ್ತು! ಎದುರಿಗೆ ಇರುವಂತಹ ದೊಡ್ಡದಾದ ಬಾಗಿಲು, ಅದರ ಮೇಲೆ  ಕೆತ್ತಿದ ರಾಜ ಲಾಂಛನದ ಸೊಗಸಾದ ಚಿತ್ರ ಮನಸೆಳೆಯಿತು. ಹಜಾರದ ಎದುರುಗಡೆಗಿದೆ, ಆಸ್ಥಾನದ ವಾದ್ಯಗಾರರಿಗಾಗಿ ಕಾದಿರಿಸಿದ ಸ್ಥಳ. ರಾಜ ದರ್ಬಾರಿಗೆ ಆಗಮಿಸುವ ಅತಿಥಿಗಳ ಸ್ಥಾನಕ್ಕೆ ಅನುಗುಣವಾಗಿ ಅವರು ವಾದ್ಯವನ್ನು ನುಡಿಸಬೇಕಿತ್ತು. ಪ್ರಖ್ಯಾತ ರಾಜಾ ಬಹದ್ದೂರ್ ಘೋರ್ಪಡೆಯವರು ಯುದ್ಧಗಳ ಸಮಯದಲ್ಲಿ ಹಲ್ಲಿ ಜಾತಿಯ ಬಲಿಷ್ಟ ಪ್ರಾಣಿ ಉಡದ ಸಹಾಯದಿಂದ ವೈರಿಗಳ ಕೋಟೆಗೆ ಲಗ್ಗೆ ಹಾಕುತ್ತಿದ್ದ ಬಗ್ಗೆ  ಗೈಡ್ ವಿವರಿಸುವಾಗ ನಮಗೆ ಆಶ್ಚರ್ಯವಾದುದಂತೂ ನಿಜ. ಎಲ್ಲಕ್ಕಿಂತ ಮಿಗಿಲಾಗಿ, ನಮ್ಮ ಕಣ್ಮನ ಸೆಳೆಯುವಂತಹುದು ಅದರ ಛಾವಣಿ. ಕೆಂಪು,ಬಿಳಿ ಬಣ್ಣಗಳಿಂದ ರಚಿಸಿದ ಅತ್ಯಂತ  ಸುಂದರ, ಅಮೋಘ ಚಿತ್ರ ಚಿತ್ತಾರಗಳು ಹೊಚ್ಚ ಹೊಸತರಂತೆ ಹೊಳೆಯುತ್ತಿವೆ. ಅದು ಪ್ರಕೃತಿದತ್ತ ಬಣ್ಣಗಳನ್ನು ಉಪಯೋಗಿಸಿ  ಬರೆದುದು ಇನ್ನೂ ಅಚ್ಚರಿ! ಈ ವಿಶೇಷವಾದ ಕೃತಕ ಛಾವಣಿಯು, ಯಾವುದೇ ಜೋಡಣೆಯಿಲ್ಲದೆ  ಮಾಡಿದುದಾಗಿದ್ದು, ಇದನ್ನು ಬಾಗಲಕೋಟೆಯಿಂದ ಇಲ್ಲಿಗೆ ಸಾಗಿಸಲು ವಿಶೇಷವಾದ ವಾಹನವನ್ನೇ ವ್ಯವಸ್ಥೆ ಮಾಡಿದ್ದರು. ಶೆಣೈಯವರು!..ಹೇಗಿದೆ ನೋಡಿ..ಅವರ ಕೆಲಸದ ಮೇಲಿನ ಆಸಕ್ತಿ.. ಬದ್ಧತೆ!! ಅಭಿಮಾನ ಪಡುವ ವಿಷಯವೇ ಹೌದು. 

ಆ ದರ್ಬಾರ್ ಹಾಲ್ ನಲ್ಲಿರಿಸಿದ್ದ ದೊಡ್ಡ ದೊಡ್ಡ ಬಣ್ಣ ಬಣ್ಣದ ಗಾಜಿನ ದೀಪಗಳನ್ನು  ಪ್ರವಾಸಿಗರು ಸ್ಪರ್ಶಿಸಲಾಗದಂತೆ ಎದುರಿಗೆ ಹಗ್ಗ ಬಿಗಿದು ಸಂರಕ್ಷಿಸಿದ್ದರು. ಹಿಂದೊಮ್ಮೆ ಬಾಗಲಕೋಟೆ ರಾಜರಿಂದ ತರಿಸಿದ ತುಂಬಾ ಬೆಲೆ ಬಾಳುವ ಗಾಜಿನ ವಸ್ತುಗಳು, ಪ್ರವಾಸಿಗರು ಕೈಯಲ್ಲಿ ಹಿಡಿದು ನೋಡಿ, ಕೈ ಜಾರಿ ಬಿದ್ದು ಹಾಳಾಗಿದ್ದುದರಿಂದ ಈ ವ್ಯವಸ್ಥೆ. ಒಂದಿಬ್ಬರು ಅದರ ಬೆಲೆಯನ್ನು ಕೊಡುವ ಅಥವಾ ಅಂತಹುದನ್ನು ತರಿಸಿ ಕೊಡುವ ಆಶ್ವಾಸನೆ ಕೊಟ್ಟಿದ್ದರೂ ಅದೇನೂ ಫಲಕಾರಿಯಾಗಿರಲಿಲ್ಲ. ವೀಕ್ಷಣೆಗಳನ್ನೆಲ್ಲಾ ಮುಗಿಸಿ ಹೊರಬಂದಾಗ ಪುನಃ ಸವಿಯಾದ ತಂಪು ಪುನರ್ಪುಳಿ ಶರಬತ್ತು ನಮಗಾಗಿ ಕಾದು ಕುಳಿತಿತ್ತು. ಸರಿಯಾಗಿ ಮಧ್ಯಾಹ್ನ ಒಂದು ಗಂಟೆ..ನಡು ನೆತ್ತಿ ಸುಡುವ ಸೂರ್ಯ.. ಶರಬತ್ತು ಕುಡಿದು ಉದರ ತಂಪುಗೊಳಿಸಿ ಹೊರಟಾಗ ಪ್ರವೇಶ ದ್ವಾರದ ಬಳಿ ಇರಿಸಿದ್ದ ದೇಣಿಗೆ ಡಬ್ಬದಲ್ಲಿ ಯಥಾನುಶಕ್ತಿ ದೇಣಿಗೆಯನ್ನು ಹಾಕಿ ಅವರಿಗೆ ಧನ್ಯವಾದವನ್ನು ಸಲ್ಲಿಸಿ ಹೊರಬಂದೆವು.

ಇಲ್ಲಿ, ಹಿರಿಯ ಪ್ರವಾಸಿಗರಿಗಿಂತ ಶಾಲಾ ಮಕ್ಕಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ,  ಪ್ರವೇಶ ದರದಲ್ಲಿ ಅರ್ಧದಷ್ಟು ಕಡಿತಗೊಳಿಸಿ ಅವರಿಗೆ ಹೆಚ್ಚು ಆದ್ಯತೆ ನೀಡಲಾಗುತ್ತದೆ. ಇನ್ನು, ಪೂರಕ ಮಾಹಿತಿಯಿಂದ ತಿಳಿದು ಬಂದ ವಿಷಯ ನಿಜಕ್ಕೂ ಗಾಬರಿಗೊಳ್ಳುವಂತಿದೆ. ಇಲ್ಲಿರುವ ಪ್ರತಿಯೊಂದು

ಮನೆಯ ನಿರ್ವಹಣಾ ವೆಚ್ಚವೇ ವರ್ಷವೊಂದಕ್ಕೆ ಸುಮಾರು ಒಂದು ಲಕ್ಷ ರೂಪಾಯಿಗಳಷ್ಟು!! ಆದರೆ, ಇಷ್ಟು ದೊಡ್ಡ ಮೊತ್ತಕ್ಕಾಗಿ ಯಾರಲ್ಲೂ ಕೈ ಚಾಚಲು ಹೋಗುತ್ತಿಲ್ಲ. ಪ್ರವಾಸಿಗರ ಪ್ರವೇಶ ಶುಲ್ಕ ಹಾಗೂ ಅವರು ಅರಿತು, ಪ್ರೀತಿಯಿಂದ ಕೊಡುವ ದೇಣಿಗೆಯಿಂದಲೇ ನಡೆಯಬೇಕಷ್ಟೆ.. ಇದು ನಿಜವಾಗಿಯೂ ಆತಂಕದ ವಿಷಯವೆಂದೆನಿಸಿತು ನನಗೆ! ಇವುಗಳೆಲ್ಲದರ ಮಧ್ಯೆಯೂ, ಅಲ್ಲಿಯ ಪ್ರತಿಯೊಂದು ವಸ್ತು ಅಥವಾ ಮನೆಗಳನ್ನು ಬಹುಕಾಳಜಿಯಿಂದ, ಸ್ವಚ್ಛ, ಸುಂದರ, ಅಷ್ಟೇ ಅಚ್ಚುಕಟ್ಟಾಗಿ ಕಾಪಾಡಿಕೊಂಡು ಬಂದಿರುವುದು ಅತ್ಯಂತ ಹೆಮ್ಮೆಯ ಸಂಗತಿ. ನಮ್ಮೂರ ಅಪರೂಪದ ಕಲಾಪೋಷಕರಾದ, ಪೂಜ್ಯ ಶೆಣೈಯವರ ಸಾಮರ್ಥ್ಯದ ಅರಿವು ಮೂಡಿಸುವ ಈ ಸಾಂಸ್ಕೃತಿಕ ಕಲಾಗ್ರಾಮದ ವೀಕ್ಷಣೆಯು ನಮ್ಮೆಲ್ಲರಲ್ಲಿ ಸಾರ್ಥಕ್ಯ ಭಾವವನ್ನು ಮೂಡಿಸಿತ್ತು. ಜೀವಮಾನದಲ್ಲೊಮ್ಮೆಯಾದರೂ ಅತಿ ಅಪರೂಪದ ಇದರ ವೈಭವವನ್ನು ಕಣ್ಣು,ಮನ ತುಂಬಿಕೊಳ್ಳಲು ಸಾಧ್ಯವಾದರೆ, ಶೆಣೈಯವರ ಶ್ರಮ ಸಾರ್ಥಕವಾಗಬಹುದೆಂದು ನನ್ನ ಭಾವನೆ.

ಮುಂದುವರಿಯುವುದು……
ಈ ಲೇಖನ ಸರಣಿಯ ಹಿಂದಿನ ಭಾಗ ಇಲ್ಲಿದೆ: http://surahonne.com/?p=33991

– ಶಂಕರಿ ಶರ್ಮ, ಪುತ್ತೂರು.

8 Responses

  1. ನಾಗರತ್ನ ಬಿ. ಅರ್. says:

    ಪ್ರವಾಸ ಕಥನ ಎಂದಿನಂತೆ ಇಂದೂ ಓದಿಸಿಕೊಂಡು ಹೋಯಿತು.ನೀವು ಕೊಟ್ಟಿರುವ ಮಾಹಿತಿ ಹಾಗೂ ಅದನ್ನು ಸಂರಕ್ಷಣೆ ಯ ಹೊಣೆ ಹೊತ್ತ ವರಿಗೆ ನನ್ನ ದೊಂದು ಹೃತ್ಪೂರ್ವಕ ಧನ್ಯವಾದಗಳು ಮೇಡಂ ಮತ್ತೆ ಮತ್ತೆ ಓದುವಂತೆ ಪ್ರೇರೇಪಿಸಿತು.. ಮುಂದಿನ ಕಂತಿಗಾಗಿ ಕಾಯುವಂತೆ ಮಾಡಿದೆ.ಧನ್ಯವಾದಗಳು ಮೇಡಂ.

    • . ಶಂಕರಿ ಶರ್ಮ says:

      ಪ್ರೀತಿಯ ಪ್ರೋತ್ಸಾಹಕ ಹಾಗೂ ಮೆಚ್ಚುಗೆಯ ಪ್ರತಿಕ್ರಿಯೆಗೆ ನಮನಗಳು ನಾಗರತ್ನ ಮೇಡಂ.

  2. ನಯನ ಬಜಕೂಡ್ಲು says:

    ಪ್ರತಿಯೊಂದು ಮಾಹಿತಿಯೂ ತುಂಬಾ ಚೆನ್ನಾಗಿದೆ

    • . ಶಂಕರಿ ಶರ್ಮ says:

      ಪ್ರೀತಿಯ ಸಹೃದಯೀ ಸ್ಪಂದನೆಗೆ ಕೃತಜ್ಞತೆಗಳು.. ನಯನಾ ಮೇಡಂ.

  3. Hema says:

    ಅದೆಷ್ಟು ಸೊಗಸಾದ ಮನೆಗಳು..ಇವುಗಳನ್ನು ಜತನದಿಂದ ಸಂರಕ್ಷಿಸಿದ ಶ್ರೀ ವಿಜಯನಾಥ ಶೆಣೈಯವರ ಸಾಧನೆಗೆ ಶರಣು. ಪ್ರತೀ ಮನೆಗಳ ವೈಶಿಷ್ಟ್ಯಗಳನ್ನು ಗುರುತಿಸಿ ಸೊಗಸಾಗಿ ನಿರೂಪಿಸಿದ ನಿಮಗೆ ಧನ್ಯವಾದಗಳು

    • . ಶಂಕರಿ ಶರ್ಮ says:

      ಮೆಚ್ಚುಗೆಯ ನುಡಿಗಳಿಗೆ ಧನ್ಯವಾದಗಳು…ಹೇಮಮಾಲಾ ಅವರಿಗೆ.

  4. sudha says:

    beautiful description

  5. Padma Anand says:

    ಎಷ್ಟೊಂದು ಚಂದದ ಕಟ್ಟಡಗಳ ವಿವರಣಾತ್ಮಕ ನಿರೂಪಣೆ ಸುಂದರ ಚಿತ್ರಗಳೊಂದಿಗೆ ಕಣ್ಣಿಗೆ ಕಟ್ಟುವಂತಿದೆ

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: