ಪ್ರವಾಸ ಪ್ರಯಾಸ
ಈಗಂತೂ ಪ್ರವಾಸ ಹೋಗೊದು ಸಾಮಾನ್ಯವಾಗಿ ಬಿಟ್ಟಿದೆ. ಎರಡು ಮೂರು ದಿನಗಳ ರಜೆ ಒಟ್ಟಿಗೆ ಸಿಕ್ಕಿಬಿಟ್ಟರೆ ಸಾಕು ಪ್ರವಾಸ ಹೊರಟು ಬಿಡುತ್ತಾರೆ. ಸ್ನೇಹಿತರು ಜೊತೆಗೂಡಿ ಹೋಗುವ ಪ್ರವಾಸ ಒಂದು ರೀತಿಯಲ್ಲಿ ಖುಷಿಯಾದರೆ, ಪತಿ,ಪತ್ನಿ ಮಕ್ಕಳೊಂದಿಗೆ ಹೋಗುವ ಪ್ರವಾಸ ಮತ್ತೊಂದು ರೀತಿಯಾ ಖುಷಿ. ಮನೆಯಲ್ಲಿ ಹಿರಿಯರಿದ್ದರೆ ಅವರನ್ನೂ ಜೊತೆಗೂಡಿಸಿಕೊಂಡು ಪ್ರವಾಸ ಹೊರಟರೆ ಸಾರ್ಥಕ್ಯದ ಭಾವದ ಜೊತೆ ಸಂತೋಷದ ಖುಷಿ. ಶಾಲಾ ಕಾಲೇಜಿನಲ್ಲಿ ಹೊರಡುವ ಪ್ರವಾಸ ರೆಕ್ಕೆ ಬಿಚ್ಚಿ ಹಾರಾಡುವಂತಹ ಸಂಭ್ರಮ. ಸಂಧ್ಯಾಕಾಲದಲ್ಲಿ ಹೊರಡುವ ಪ್ರವಾಸ ತೀರ್ಥಯಾತ್ರೆಯಾದರೆ, ಮದುವೆಯಾದ ಹೊಸದರಲ್ಲಿ ಹೋಗುವ ಪ್ರವಾಸ ಮಧುಚಂದ್ರವಾಗುತ್ತದೆ. ಹೀಗೆ ಪ್ರವಾಸದಲ್ಲಿ ನಾನಾ ರೀತಿಯಾ ಪ್ರವಾಸಗಳು ಇವೆ. ನಮ್ಮ ಬದುಕಿನಲ್ಲಿ ಅಂತಹ ಹಲವಾರು ಪ್ರವಾಸಗಳನ್ನು ಹಾದು ಬಂದಿರುತ್ತೆವೆ. ಜೀವನದಲ್ಲಿ ಒಮ್ಮೆಯೂ ಪ್ರವಾಸ ಹೋಗದ ಮಂದಿಯೂ ಇದ್ದಾರೆ. ಪ್ರವಾಸವೆಂದೆರೆ ದುಂದುವೆಚ್ಚ ಎಂದು ಪರಿಭಾವಿಸಿದ ಕೆಲ ಪುಣ್ಯತ್ಮರು ಪ್ರವಾಸದ ಪದವನ್ನೇ ಕೇಳಲು ಅನಾಸಕ್ತರಾಗಿರುತ್ತಾರೆ. ಮತ್ತೆ ಕೆಲವರಿಗೆ ಹಣದ ತಾಪತ್ರಯವೊ ಅವರ ಹಣೆಯಲ್ಲಿ ಪ್ರವಾಸ ಹೋಗುವುದು ಬರೆದೇ ಇಲ್ಲದ ಕಾರಣವೋ ಅಂತು ಅವರು ಪ್ರವಾಸವನ್ನೆ ಕಂಡಿರುವುದಿಲ್ಲ. ಆದರೆ ನನ್ನ ಬದುಕಿನಲ್ಲಿ ಮಾತ್ರ ಪ್ರವಾಸ ಅನ್ನೊ ಪದ ನನ್ನ ಉಸಿರಲ್ಲಿ ಉಸಿರಾಗಿ ಹಾಸು ಹೊಕ್ಕಿ ಬಿಟ್ಟಿದೆ.
ನನ್ನ ಮೊಟ್ಟ ಮೊದಲ ಪ್ರವಾಸ ವೆಂದರೆ ಬಾಲ್ಯಾವಸ್ತೆಯಲ್ಲಿದ್ದಾಗ ದಕ್ಷಿಣ ಭಾರತ ಪ್ರವಾಸ ಮಾಡಿದ್ದು. ನಾನು ನಾಲ್ಕರ ವಯಸ್ಸಿನಲ್ಲಿದ್ದಾಗ ನನ್ನ ಅಜ್ಜಿಯ ಹಾಗೂ ಚಿಕ್ಕಪ್ಪನ ಜೊತೆ ದಕ್ಷಿಣ ಭಾರತ ಪ್ರವಾಸಕ್ಕೆ ಹೋಗಿದ್ದೆ ಅಂತ ಅಮ್ಮ ಹೇಳಿದ್ದರು. ಅದರೆ ಅದು ನನಗೆ ಅಷ್ಟೇನು ನೆನಪಿಲ್ಲ. ಆದರೆ ಸಮುದ್ರದ ಅಲೆಗಳ ನಡುವೆ ಚಿಕ್ಕಪ್ಪನ ಕೈಯನ್ನು ಹಿಡಿದುಕೊಂಡು ನೀರಿನ ಮಧ್ಯೆನಿಂತಿದ್ದು ಅಲೆಗಳು ನನ್ನ ಕಾಲುಗಳನ್ನು ಮುತ್ತಿಕ್ಕಿ ವಾಪಸ್ಸು ಹೋಗುವಾಗ ನನ್ನನ್ನು ಸೆಳೆದುಕೊಂಡು ಹೋಗುವುದೇನೊ ಅಂತ ಭಯದಿಂದ ಚಿಕ್ಕಪ್ಪನನ್ನು ಗಟ್ಟಿಯಾಗಿ ಹಿಡಿದು ಕೊಂಡು ಕೂಗಿದ್ದು, ಬೀಚಿನಲ್ಲಿ ಗುಲಾಬಿ ಬಣ್ಣದ ಬೊಂಬಾಯ್ ಮಿಠಾಯಿ ತಿಂದಿದ್ದು, ಚಿನ್ನದ ಹಲ್ಲಿಯ ಮೇಲೆ ಅಜ್ಜಿಯ ಜೊತೆ ನಡೆದಿದ್ದು ಮಾತ್ರ ನೆನಪಿದೆ. ಆ ಚಿನ್ನದ ಹಲ್ಲಿ ಇದ್ದದ್ದು ಕಂಚಿಯಲ್ಲಿ ಅಂತ ಆಮೇಲೆ ನನಗೆ ತಿಳಿದಿದ್ದು.ಪ್ರಾಯಶಃ ಆವತ್ತಿನಿಂದಲೇ ನನ್ನ ಪ್ರವಾಸದ ಅಧ್ಯಾಯ ಪ್ರಾರಂಭವಾಯ್ತು ಅಂತ ಕಾಣುತ್ತೆ. ಆವತ್ತಿನಿಂದ ಇವತ್ತಿನವರೆಗೂ ಪ್ರವಾಸ ಹೋಗೋದು ನನ್ನ ನೆಚ್ಚಿನ ಹವ್ಯಾಸ ಆಗಿಹೋಗಿದೆ.
ನನ್ನ ಎರಡನೆ ಪ್ರವಾಸ ಶಾಲೆಯಿಂದ ಹೋಗಿದ್ದು.ನಾನು ಹೆಚ್ಚು ಕಡಿಮೆ ನನ್ನ ಎಂಟನೆ ವಯಸ್ಸಿನಲ್ಲಿ ಐದನೆ ತರಗತಿಯಲ್ಲಿದ್ದಾಗ ಪ್ರವಾಸ ಹೋಗಿದ್ದು ನನಗೆ ಈಗಲೂ ಚೆನ್ನಾಗಿ ನೆನಪಿದೆ. ಆದರೆ ಆ ಪ್ರವಾಸದಲ್ಲಿ ನಾನು ಮಾತ್ರ ಎಂಜಾಯ್ ಮಾಡಲೆ ಇಲ್ಲ.ಘಾಟಿ ರಸ್ತೆಯ ಪ್ರವಾಸ ಅಂದು ನನ್ನನ್ನು ಸಾಕು ಸಾಕು ಮಾಡಿತ್ತು. ಆ ಪ್ರವಾಸ ಎಂಬೊ ಪ್ರಯಾಸದಲ್ಲಿ ನಾನು ಸಾಕಷ್ಟು ಬಳಲಿ ಹೋಗಿದ್ದೆ. ಮತ್ತೆಂದೂ ಪ್ರವಾಸದ ಪ್ರಯಾಸವೇ ಬೇಡಾ ಅಂತ ಆ ಗಳಿಗೆಯಲ್ಲಿ ನಿರ್ಧರಿಸಿ ಬಿಟ್ಟಿದ್ದೆ. ಶಾಲೆಯಿಂದ ಸುಬ್ರಮಣ್ಯ, ಧರ್ಮಸ್ಥಳಕ್ಕೆ ಒಂದು ದಿನದ ಪ್ರವಾಸ ಹೊರಟಾಗ ನಾನು ಕುಣಿದುಕೊಂಡು ಹೊರಟಿದ್ದೆ. ಜೊತೆಗೆ ಅಣ್ಣ ಆಗಷ್ಟೆ ತನ್ನ ಶಾಲಾ ಪ್ರವಾಸ ಎಂದು ಮೈಸೂರು, ಶ್ರೀರಂಗಪಟ್ಟಣ,ನAಜನಗೂಡು ಅಂತ ಹೋಗಿ ಬಂದು ಅಲ್ಲಿ ನೋಡಿದ್ದೆನ್ನೆಲ್ಲ ವರ್ಣಿಸಿ ನನ್ನಲ್ಲಿ ಹೊಟ್ಟೆಕಿಚ್ಚು ತರಿಸಿದ್ದ.ಹಾಗಾಗಿ ನಾನೂ ಅಂತಹ ಅನುಭವ ಪಡೆದು ಅವನ ಹೊಟ್ಟೆ ಉರಿಸಬೇಕು ಅಂತ ಕಾಯ್ತಾ ಇದ್ದೆ. ಶಾಲೆಯಲ್ಲಿ ಪ್ರವಾಸ ಅಂತ ಪ್ರಕಟಿಸಿ ಯರ‍್ಯಾರು ರ‍್ತಿರಿ ಅಂತ ಕೇಳಿದ ಕೂಡಲೆ ನಾನು ರ‍್ತಿನಿ ಅಂತ ಕೈ ಎತ್ತಿದ್ದೆ. ಹಾಗೆ ನಾನೇ ಮೊದಲು ದುಡ್ಡು ಕೊಟ್ಟು ಹೆಸರು ಬರೆಸಿ ಹೆಮ್ಮೆಯಿಂದ ಬೀಗಿದ್ದೆ. ಯಾವಾಗ ಪ್ರವಾಸ ಹೋಗುತ್ತೇನೊ ಎಂದು ತವಕದಿಂದ ಕಾಯುತ್ತಿದ್ದೆ.
ಆ ದಿನ ಬಂದೆ ಬಿಟ್ಟಿತು.ಪ್ರವಾಸ ಹೊರಡುವ ದಿನ ಬೆಳಗ್ಗೆ ಐದು ಗಂಟೆಗೆ ಶಾಲೆಯಲ್ಲಿರ ಬೇಕು ಅಂದಿದ್ದರಿAದ ಆವತ್ತು ರಾತ್ರಿಯೆಲ್ಲಾ ನಿದ್ರೆ ಬಂದಿರಲಿಲ್ಲ. ನಿದ್ರೆ ಬಂದಾಗ ಕನಸಿನಲ್ಲಿ ನಾನು ಹೋಗುವುದು ತಡವಾದ್ದರಿಂದ ಶಾಲೆಯವರು ನನ್ನನ್ನು ಬಿಟ್ಟು ಹೋಗಿಯೇ ಬಿಟ್ಟರೆಂದು ಕನಸಿನಲ್ಲಿಯೇ ಅಳುತ್ತಿದ್ದದ್ದು, ತಟ್ಟನೆ ಎಚ್ಚರವಾದ ಮೇಲೂ ಅಳು ನಿಲ್ಲಿಸಿರಲಿಲ್ಲ. ಅಮ್ಮ ಏಳಿಸುವ ಮೊದಲೆ ಎದ್ದಿದ್ದೆ. ಬೆಳಗ್ಗೆ ಬೇಗನೇ ಎದ್ದು ನಾಲ್ಕು ಗಂಟೆಗೆ ಸಿದ್ದವಾಗಿ ಹೊರಟು ನಿಂತಿದ್ದೆ. ನನ್ನನ್ನು ಅಪ್ಪ ಹಾಗು ಅಣ್ಣ ಕರೆದು ಕೊಂಡು ಶಾಲೆಯ ಹತ್ತಿರ ಬಿಟ್ಟಿದ್ದರು. ಗೆಳತಿಯರ ಜೊತೆ ಖುಷಿಯಾಗಿ ಬಸ್ಸಿನಲ್ಲಿ ಕುಳಿತು ಅಪ್ಪನಿಗೂ ಅಣ್ಣನಿಗೂ ಕೈ ಬೀಸಿದ್ದೆ. ನನ್ನ ಖುಷಿ ನೋಡಿ ಅಪ್ಪ ಸಮಧಾನದಿಂದ ಅಲ್ಲಿಂದ ಹೊರಟಿದ್ದರು. ಆದರೆ ನನ್ನ ಖುಷಿ ತುಂಬಾ ಹೊತ್ತು ಇರಲಿಲ್ಲ. ಬಸ್ಸು ಹೊರಟು ಸ್ವಲ್ಪ ಹೊತ್ತಿನಲ್ಲಿಯೇ ನನಗೆ ಹೊಟ್ಟೆ ತೊಳಸಲಾರಂಭಿಸಿತು. ವಾಂತಿ ಬರುವಂತಾಗಿ ಹೇಗೇಗೊ ಆಗಲಾರಂಭಿಸಿತು. ಪ್ರಯಾಣ ಮಾಡುವ ಆಸಕ್ತಿ, ಖುಷಿ, ಉತ್ಸಾಹ ಎಲ್ಲವೂ ಅಡಗಿ ಹೋಯ್ತು.ಸೋತು ಸೊಪ್ಪಾಗಿ ಕಣ್ಮಚ್ಚಿ ಮಲಗಿ ಬಿಟ್ಟೆ.ಮಧ್ಯಾಹ್ನ ಊಟಕ್ಕೆ ಬಸ್ ನಿಲ್ಲಿಸಿದರೆ, ನಾನು ಬಸ್ಸಿನಿಂದ ಕೆಳಗಿಳಿಯಲೇ ಇಲ್ಲ. ಯಾರೆಷ್ಟೆ ಬಲವಂತ ಮಾಡಿದರೂ ಊಟ ಇರಲಿ ಒಂದು ಹನಿ ನೀರು ಕೂಡಾ ಸೇರಲಿಲ್ಲ. ಗೆಳತಿಯರೆಲ್ಲ ಸಂತೋಷವಾಗಿ ನಲಿದಾಡುತ್ತಾ ಪ್ರವಾಸದ ಸವಿಯನ್ನು ಸವಿಯುತ್ತಿದ್ದರೆ ನಾನು ಪ್ರಯಾಣದಿಂದ ಬಳಲಿ ಬೆಂಡಾಗಿ ಏನನ್ನು ನೋಡದೆ ನಿರಾಶೆಯಿಂದ ಮನೆ ಸೇರಿದ್ದೆ. ಆದರೂ ನನ್ನ ಪ್ರವಾಸದ ಉತ್ಸಾಹವೇನೂ ಕಡಿಮೆಯಾಗಿರಲಿಲ್ಲ.
ಮುಂದೆ ಹೈಸ್ಕೂಲಿನಲ್ಲಿ ಜೋಗ್ ಪಾಲ್ಸ್, ಹಂಪೆ, ಟಿ.ಬಿ.ಡ್ಯಾಮ್ ಮುಂತಾದ ಸ್ಥಳಗಳಿಗೆ ಉತ್ಸಾಹದಿಂದಲೆ ಹೋಗಿ ಪ್ರವಾಸದ ಆನಂದ ಸವಿದಿದ್ದೆ. ಮುಂದೆ ಕಾಲೇಜಿನಲ್ಲಿ ಉತ್ತರ ಭಾರತಕ್ಕೆ ಪ್ರವಾಸಕ್ಕೆ ಹೊರಟು ನಿಂತೆ. ಬೆಂಗಳೂರಿನ ತನಕ ಬಸ್ಸಿನಲ್ಲಿ, ನಂತರ ಟ್ರೈನಲ್ಲಿ ಹೋಗುವುದು ಫಿಕ್ಸ್ ಆಗಿತ್ತು. ನಾನು ಕೂಡ ನನ್ನ ಕನಸಿನ ತಾಜ್‌ಮಹಲ್ ನೋಡಬೇಕೆನ್ನುವ ತವಕ,ಆ ರೋಮಾಂಚನದ ಗಳಿಗೆಗಾಗಿ ಕಾತರಿಸುತ್ತಾ ಬಸ್ಸು ಹತ್ತಿದ್ದೆ. ಅದೇನು ದುರದೃಷ್ಟವೊ ನನ್ನ ಬಸ್ಸಿನ ಪ್ರಯಾಣದ ಅಲರ್ಜಿ ಮತ್ತೆ ಮರುಕಳಿಸಿತ್ತು. ಬಸ್ಸು ಹತ್ತುವಾಗ ಶುರುವಾದ ಹೊಟ್ಟೆ ತೊಳಸು, ವಾಂತಿಯ ಅನುಭವ ನನ್ನನ್ನು ಹಿಂಡಿ ಹಿಪ್ಪೆ ಮಾಡಿ ಬಿಟ್ಟಿತ್ತು. ಬೆಂಗಳೂರು ತಲುಪುವುದರಲ್ಲಿ ಮತ್ತೆ ಹಣ್ಣಾಗಿ ಬಿಟ್ಟೆ. ಜೊತೆಯಲ್ಲಿದ್ದವರೆಲ್ಲ ಮೊದಲನೆ ದಿನವೇ ಹೀಗೆ ಸೋತು ಸೊಪ್ಪಾಗಿ ಬಿಟ್ಟರೆ ಮುಂದೆ ಹೇಗೆ ಇಡೀ ಭಾರತ ಸುತ್ತುತ್ತೀಯಾ ಅಂತ ಎಲ್ಲರೂ ಗೇಲಿ ಮಾಡಲಾರಂಭಿಸಿದರು. ನನಗೂ ಹಾಗೆ ಅನ್ನಿಸೋಕೆ ಶುರು ಆಯಿತು. ಯಾಕಾದರೂ ಈ ಪ್ರವಾಸಕ್ಕೆ ಹೊರಟೆನೊ ಅಂತ ನನ್ನನ್ನೇ ಸಾವಿರ ಬಾರಿ ಬೈಯ್ದುಕೊಂಡೆ. ಈ ಸುಸ್ತು, ಈ ವಾಂತಿ, ಹೊಟ್ಟೆ ತೊಳಸು ಪ್ರವಾಸದುದ್ದಕ್ಕೂ ಇದ್ದರೆ ನನ್ನ ಗತಿ ಏನು ಅಂತ ಹೆದರಿಕೆ ಆಯಿತು. ಮುಂದೆ ನನ್ನ ಪರಿಸ್ಥಿತಿ ನೆನೆದು ಹದಿನೈದು ದಿನಗಳ ಕಾಲ ಪ್ರವಾಸ ನನ್ನಿಂದ ಅಸಾಧ್ಯ ಅನ್ನಿಸಿ ಪ್ರವಾಸ ಮೊಟಕು ಗೊಳಿಸಿ ಹಿಂತಿರುಗಿ ಬಿಡುವ ಎಂದು ತೀರ್ಮಾನಿಸಿ ಬಿಟ್ಟಿದ್ದೆ. ಆದರೆ ಗೆಳತಿಯರು ನಾನು ಹಿಂದಿರುಗಿ ಹೋಗದಂತೆ ಬಲವಂತವಾಗಿ ತಡೆದು ಬಿಟ್ಟರು. ಕಷ್ಟ ಪಡುತ್ತಲೆ ಮನಸ್ಸಿನ ತುಂಬಾ ಆತಂಕ ಪಡುತ್ತಲೆ ನನ್ನ ತೀರ್ಮಾನ ಬದಲಿಸಿ ಗೆಳತಿಯರ ಪ್ರೀತಿಗೆ ಕಟ್ಟು ಬಿದ್ದು ಪ್ರವಾಸವನ್ನು ಮುಂದು ವರಿಸಲೇ ಬೇಕಾಯಿತು. ಲಗೇಜ್ ಹೊತ್ತು ಕಷ್ಟ ಪಡುತ್ತಲೇ ರೈಲು ನಿಲ್ದಾಣಕ್ಕೆ ಬಂದೆನು. ಮೆಜಸ್ಟಿಕ್ ಇಂದ ರೈಲ್ವೆ ನಿಲ್ದಾಣಕ್ಕೆ ಅದೆಷ್ಟು ದೂರ ಇದೆ ಹೇಳಿ. ಆದರೆ ಅಷ್ಟು ದೂರ ನಡೆಯುವಷ್ಟರಲ್ಲಿ ನಾನು ಮತ್ತೊಂದು ಜನ್ಮ ಕಂಡಿದ್ದೆ. ನನಗಿದೆಲ್ಲ ಬೇಕಿತ್ತೆ, ಮನೆಯಲ್ಲಿ ಅಷ್ಟು ದೂರ ಕಾಲೇಜಿನ ಟ್ರಿಪ್ಪಿಗೆ ಕಳಿಸುವುದಿಲ್ಲ ಅಂತ ಹೇಳಿದಾಗ ಅತ್ತು ಕರೆದು ಹಟ ಮಾಡಿ ಅಪ್ಪನನ್ನು ಅಮ್ಮನನ್ನು ಒಪ್ಪೊ ಹಾಗೆ ಮಾಡಿ ಹೊರಟಿದ್ದು ಇದಕ್ಕಾಗಿಯೇ,ಈ ಹಾಳಾದ ಗೆಳತಿಯರ ಮಾತು ಕೇಳಿ ನಾನು ಖಂಡಿತಾ ಕೆಟ್ಟೆ ಅಂತ ಸಾವಿರ ಸಲ ಫ್ರೆಂಡ್ಸನ ಬೈಯ್ದು ಕೊಳ್ಳುತ್ತಾ ರೈಲ್ವೆ ನಿಲ್ದಾಣಕ್ಕೆ ಬಂದು ಕುಕ್ಕರಿಸಿದ್ದೆ. ಆವತ್ತು ನನಗೆ ಊಟ ಇಲ್ಲ, ನೀರಿಲ್ಲ, ಉಪವಾಸ ವನವಾಸ ಪಡುತ್ತ ನನ್ನ ಪ್ರವಾಸ ಆರಂಭಿಸಿದ್ದೆ. ಅತ್ತ ಊರಿಗೂ ಹೋಗೋ ಹಾಗೂ ಇಲ್ಲ,ಇತ್ತ ಸಂತಸದಿAದ ಪ್ರವಾಸ ಮಾಡುವ ಹಾಗೂ ಇಲ್ಲ ಅಂತಹ ತ್ರಿಶಂಕು ಮನಸ್ಥಿತಿಯಿಂದ ಬಳಲಿಹೋಗಿದ್ದೆ. ಆದರೆ ರೈಲು ಹತ್ತಿ ಸುಸ್ತಾಗಿದ್ದರಿಂದ ಬರ್ತ ಮೇಲೆ ಮಲಗಿ ನಿದ್ದೆ ಹೋಗಿ ಬಿಟ್ಟೆ. ಗೆಳತಿಯರಿಗೂ ನನ್ನ ಸ್ಥಿತಿ ನೋಡಿ ಕನಿಕರ. ಲೆಚ್ಚರ‍್ಸ್ ಅಂತೂ ಹೋಗಿ ಬಂದು ನನ್ನನ್ನು ವಿಚಾರಿಸಿಕೊಳ್ಳುತ್ತಾ ನನಗೇನೊ ದೊಡ್ಡ ರೋಗವೇ ಬಂದು ಬಿಟ್ಟೆದೆಯೇನೊ ಅನ್ನುವ ಭಾವ ಮೂಡಿಸಿ ಬಿಟ್ಟದ್ದರು. ಇದೇ ಛಾನ್ಸ್ ಅಂತ ನಮ್ಮ ಸೀನೀರ‍್ಸ ಕೂಡಾ ನನ್ನನ್ನು ವಿಚಾರಿಸಿಕೊಳ್ಳುವ ನೆವದಲ್ಲಿ ನಮ್ಮ ಕಂಪಾರ್ಟಮೆAಟಿಗೆ ಬಂದು ಬಂದೂ ತಮ್ಮ ನೆಚ್ಚಿನ ಹುಡುಗಿಯರನ್ನು ನೋಡುತ್ತಾ, ತಮ್ಮ ಪ್ರೇಮ ನಿವೇದನೆಯ ನೋಟ ಹರಿಸುತ್ತ ಇಡೀ ಬೋಗಿಯನ್ನೆ ಪ್ರೇಮಲೋಕ ಮಾಡಿಕೊಳ್ಳುವದರಲ್ಲಿದ್ದರು. ಅಷ್ಟರಲ್ಲಿ ಎಚ್ಚೆತ್ತ ನಮ್ಮ ಗುರುಬಾಂಧವರು ಅವ್ರಿಗೇನು ಆಗಿಲ್ಲ, ಇದು ಹೆಣ್ಣು ಮಕ್ಕಳ ಬೋಗಿ ಇಲ್ಲೆಲ್ಲ ಬರಬಾರದಪ್ಪ ಅಂತ ನಯವಾಗಿ ಹೇಳಿ ಕಳುಹಿಸಿ ಬಿಟ್ಟರು. ಪಾಪ ತಮ್ಮ ಪ್ರೇಮ ನಿವೇದನೆಯ ಪ್ರಯತ್ನ ಅಪೂರ್ಣವಾದುದದಕ್ಕೆ ವಿಷಾದ ಪಡುತ್ತಾ ಪೆಚ್ಚು ಮೋರೆ ಹಾಕಿಕೊಂಡು ಸ್ವಸ್ಥಾನ ಸೇರಿಕೊಂಡಿದ್ದರು. ಮತ್ತೆ ಅಂತಹ ಅವಕಾಶ ಕೊಡದಂತೆ ನಾನು ಸಂಪೂರ್ಣ ಚೇತರಿಸಿಕೊಂಡು ಬಿಟ್ಟೆ. ಮರುದಿನದಿಂದಲೆ ನಾನು ಹಕ್ಕಿಯಂತೆ ಹಾರಾಡುತ್ತಾ ಪ್ರವಾಸವನ್ನು ಎಂಜಾಯ್ ಮಾಡಿದ್ದೆ. ಹದಿನೈದುದಿನಗಳ ಪ್ರವಾಸ ಕಳೆದದ್ದೆ ಗೊತ್ತಾಗಲಿಲ್ಲ.
ಅಲ್ಲಿಂದ ನಾನು ಪ್ರತಿ ವರ್ಷ ಪ್ರವಾಸದಲ್ಲಿ ಪಾಲ್ಗೊಂಡಿದ್ದೆನೆ. ಹೊಸ ಹೊಸ ಜಾಗಗಳನ್ನು ನೋಡುವ ಅವಕಾಶ ನನ್ನದಾಗಿದೆ. ಈ ಪ್ರವಾಸದ ಸವಿ ಮುಂದೆ ನನ್ನ ಬದುಕಿನುದ್ದಕ್ಕೂ ಸವಿಯುವಂತಾಗಿದ್ದು ನನ್ನ ಮದುವೆಯ ನಂತರ. ನನ್ನ ಪತಿಗೂ ಪ್ರವಾಸವೆಂದರೆ ಅತ್ಯಂತ ಪ್ರಿಯವಾದ ಹವ್ಯಾಸ. ಮದುವೆಯ ಮಾರನೇ ದಿನವೇ ಮಧುಚಂದ್ರದ ಪ್ರವಾಸ ಊಟಿ, ಕೊಡೈಕೆನಲ್‌ತ್ತ ಸಾಗಿತ್ತು. ಅಲ್ಲಿಂದ ಮುಂದಕ್ಕೆ ಪ್ರತಿವರ್ಷವೂ ಜೊತೆಯಾಗಿಯೇ ಪ್ರವಾಸ ಕೈಗೊಳ್ಳುತ್ತಿದ್ದೆವು.ಮಗಳು ಹುಟ್ಟಿದ ಮೇಲೆ ಪ್ರವಾಸಕ್ಕೊಂದು ಹೊಸ ಕಳೆ ಬಂದಿತ್ತು. ಮಗಳಿಗೂ ಪುಟ್ಟವಯಸ್ಸಿನಿಂದಲೇ ಪ್ರವಾಸದ ರುಚಿ ಹತ್ತಿಸಿ ಬಿಟ್ಟೆವು. ಒಂದು ಚೂರೂ ರಗಳೆ ಮಾಡದೆ ಪ್ರವಾಸಗಳಲ್ಲಿ ನಮ್ಮೊಂದಿಗೆ ಪಾಲ್ಗೊಳ್ಳುವ ಅವಳ ಪರಿ ನೋಡಿ ನಮಗೆ ಅಚ್ಚರಿಯಾಗುತ್ತಿತ್ತು.
ಪ್ರವಾಸದಲ್ಲಿ ಎಷ್ಟು ಸಂತಸ ಪಡುತ್ತಿದ್ದೆವೋ ಕೆಲವೊಮ್ಮೆ ಪ್ರವಾಸದ ಸಂಕಷ್ಟಗಳನ್ನೂ ಅನುಭವಿಸಿದ್ದೆವೆ. ಅಂತದೊAದು ಸಂಕಷ್ಟವೇ ಗೋವಾ ಪ್ರವಾಸ. ಒಮ್ಮೆ ನಾನು ,ನನ್ನ ಪತಿ ಮತ್ತು ಮೂರು ವರ್ಷದ ಮಗಳು ಗೋವಾಕ್ಕೆ ಪ್ರವಾಸ ಹೋಗಿದ್ದೆವು. ಗೋವೆಗೆ ತಲುಪಿ ಬಸ್ಸಿಳಿದು ಮೊದಲು ರೂಮ್ ಮಾಡಿ ಬಿಡೋಣವೆಂದು ಆಟೋ ಹತ್ತಿ ಲಾಡ್ಜ್ ಒಂದಕ್ಕೆ ಹೋದೆವು. ಅಲ್ಲಿ ರೂಮು ಖಾಲಿ ಇಲ್ಲ ಅಂತ ಗೊತ್ತಾಯಿತು. ಸರಿ ಮತ್ತೊಂದು ಲಾಡ್ಜ್ ಹುಡುಕಿದೆವು. ಅಲ್ಲೂ ರೂಮ್ ಖಾಲಿ ಇಲ್ಲ ಅಂದರು. ಮುಂದೆ ಮತ್ತೊಂದು ಲಾಡ್ಜ್ ಅಲ್ಲೂ ರೂಮ್ ಖಾಲಿ ಇಲ್ಲ. ಮುಂದೆ ಮತ್ತೊಂದು ಲಾಡ್ಜ್ ಹೀಗೆ ಇಡೀ ಗೋವಾ ಸುತ್ತಿದರೂ ಎಲ್ಲೂ ರೂಮ್ ಸಿಗಲಿಲ್ಲ. ಮಧ್ಯಾಹ್ನ ಕಳೆದು ಸಂಜೆಯಾಗ್ತ ಇದೆ. ಎಲ್ಲೂ ರೂಮಿಲ್ಲ. ರಾತ್ರಿನೂ ಆಗಿ ಬಿಡುತ್ತದೆ. ಈಗೇನು ಮಾಡುವುದು ಎಂದು ತಿಳಿಯದೆ ನನ್ನ ಪತಿ ಪೆಚ್ಚಾಗಿ ಮಂಕಾಗಿ ಬಿಟ್ಟರು. ನನಗೆ ಅಳು ವುಕ್ಕಿ ಬರುತ್ತಿದೆ. ಬಲವಂತಾಗಿ ತಡೆಯುತ್ತಿದ್ದೆನೆ. ಮಗಳು ಹಸಿವು ಅಂತ ಅಳ್ತಾ ಇದ್ದಾಳೆ. ಆಟೊದವನು ಇನ್ನು ಯಾವ ಲಾಡ್ಜೂ ಇಲ್ಲ ಇಳಿದು ಕೊಳ್ಳಿ ಅಂತ ಹೇಳಿದಾಗ ಏನು ಮಾಡಲು ತೋಚದೆ ಆ ಲಾಡ್ಜ ಮುಂದೆ ಆಟೋದಿಂದ ಇಳಿದು ನಾನು ಮಗುವನ್ನ ಎತ್ತಿಕೊಂಡು ಅವಳ ಕೈಗೆ ಬಿಸ್ಕತ್ತು ನೀಡಿ , ಲಾಡ್ಜಿನಾ ಮೆಟ್ಟಲಿನ ಮೇಲೆ ಕುಳಿತು ಬಿಟ್ಟೆ. ಪರಸ್ಥಳ, ತಿಳಿಯದ ಭಾಷೆ, ಗುರುತು ಪರಿಚಯದವರಾರೂ ಇಲ್ಲದ ಊರು, ಜೊತೆಯಲ್ಲಿ ಹೆಂಡತಿ ,ಮಗು ನನ್ನವರೂ ಕಂಗಾಲಾಗಿ ಹೋಗಿದ್ದರು. ಏನು ಮಾಡಲೂ ತೋಚದೆ ಎಂತ ಕೆಲಸ ಮಾಡಿಕೊಂಡು ಬಿಟ್ಟೆದ್ದೆವೆ. ಮೊದಲೆ ರೂಮ್ ಬುಕ್ ಮಾಡಿಸ ಬೇಕಿತ್ತು. ಈವಾಗ ಇಲ್ಲಿ ಸೀಜನ್, ಕ್ರಿಸ್‌ಮಸ್ ರಜೆ, ಹೊಸವರ್ಷದ ಆಚರಣೆಗಾಗಿ ಪ್ರವಾಸಿಗರು ಗೋವೆಯ ತುಂಬಾ ತುಂಬಿ ಹೋಗಿದ್ದರು. ಅದ್ಯಾವುದನ್ನು ಊಹಿಸದೆ ನಾವು ಇಲ್ಲಿಗೆ ಬಂದು ಬಿಟ್ಟಿದ್ದು ಸಂಕಷ್ಟಕ್ಕೆ ಸಿಲುಕಿಸಿತ್ತು. ಮುಂದೇನು ಅನ್ನೊ ಚಿಂತೆಯಲ್ಲಿ ನಾವು ಊಟ ಮಾಡಿಲ್ಲ ಅನ್ನೋದೇ ಮರೆತು ಹೋಗಿತ್ತು. ಮಗಳು ಬಿಸ್ಕತ್ತು ತಿಂದು ಹೊಟ್ಟೆ ತುಂಬಿದ್ದರಿAದ ಮಡಿಲಿನಲ್ಲಿ ನಿದ್ದೆ ಹೋಗಿದ್ದಳು. ಈ ಇಡೀರಾತ್ರಿ ನಾವು ಹೀಗೆ ಬೀದಿಯಲ್ಲಿ ಚಳಿಯಲ್ಲಿ ನಡುಗುತ್ತ ಕಳೆಯ ಬೇಕು, ಆ ರಾತ್ರಿಯಲ್ಲಿ ಏನೆಲ್ಲಾ ಆಪಾಯ ಬಂದೊದಗ ಬಹುದು ಎಂಬುದನ್ನು ನೆನೆದೇ ನಡುಗಿ ಹೋದೆ. ನನ್ನವರ ಮುಖದಲ್ಲೂ ಆತಂಕ ಮನೆ ಮಾಡಿತ್ತು. ಯಾಕಾದರೂ ಇಲ್ಲಿಗೆ ಬಂದೆವೋ ಅಂತ ಸಾವಿರ ಬಾರಿ ಹಳಿದು ಕೊಳ್ಳುತ್ತಾ ಕುಳಿತಿದ್ದರೆ ನಮ್ಮ ಪಾಲಿಗೆ ನಿಮಿಷಗಳು ಗಂಟೆಗಳಾಗಿ ಕಳೆಯ ಹತ್ತಿತು.
ಏನು ಮಾಡುವುದು ,ಎಲ್ಲಿ ಹೋಗುವುದು ಎಂದು ಚಿಂತಿಸುತ್ತಾ ಇರುವಾಗಲೇ ಒಬ್ಬ ರೂಮ್‌ಬಾಯಿ ಹೊರಬಂದ. ನಮ್ಮ ಅಸಹಾಯಕತೆ ಅವನಿಗೆ ಅರ್ಥವಾಗಿರ ಬೇಕು. ಯಾಕೆ, ಏನು ಅಂತ ವಿಚಾರಿಸಿದ. ನನ್ನತ್ತ ಮತ್ತು ಮಗಳನ್ನು ನೋಡಿ ಫ್ಯಾಮಿಲಿ ಇದೆ. ಏನು ಮಾಡ್ತಿರಾ ಸರ್. ರೂಮುಗಳು ಒಂದೂ ಖಾಲಿ ಇಲ್ಲ. ಒಂದ್ಕೆಲಸ ಮಾಡಿ, ನನ್ನ ರೂಮು ಇದೆ. ಇವತ್ತೊಂದು ದಿನಕ್ಕೆ ಬಿಟ್ಟು ಕೊಡತಿನಿ. ಮೊದಲು ಮಗುನಾ ಮಲಗಿಸಿ. ಬೆಳಗ್ಗೆ ಯಾವುದಾರೂ ರೂಮ್ ವ್ಯವಸ್ಥೆ ಮಾಡಿಕೊಡುತ್ತೆನೆ ಅಂತ ಹೇಳಿ ತನ್ನ ಕೋಣೆ ಬಿಟ್ಟು ಕೊಟ್ಟು ತಾನು ತನ್ನ ಗೆಳೆಯನ ಕೋಣೆಗೆ ಹೋಗಿ ಮಲಗಿದ. ಆ ರಾತ್ರಿ ಅವನ ಕೋಣೆಯಲ್ಲಿ ಮಲಗಿದ್ದು ಗೋವೆ ಸುತ್ತುವಾ ಯಾವ ಆಸಕ್ತಿಯಾಗಲಿ ಮನಸ್ಸಾಗಲಿ ಇಲ್ಲದೆ ಬೆಳಗ್ಗೆ ಎದ್ದು ಆ ಹುಡುಗನಿಗೆ ಧನ್ಯಾವಾದ ತಿಳಿಸಿ ಸೀದ ಊರಿಗೆ ಬಸ್ಸು ಹತ್ತಿದ್ದೆವು. ಪರಸ್ಥಳದಲ್ಲಿ ದೇವರಂತೆ ಕಾಪಾಡಿದ್ದ ಅವನನ್ನು ನೆನೆಯುತ್ತ ಮುಂದೆ ಯಾವತ್ತೂ ಪ್ರೀಪ್ಲಾನ್ ಇಲ್ಲದೆ ಪ್ರವಾಸ ಹೋಗಬಾರದೆಂಬ ಪಾಠ ಕಲಿತೆವು. ಹೀಗೆ ಪ್ರವಾಸದ ಅನುಭವಗಳನ್ನು ಅನುಭವಿಸುತ್ತಾ ಈವತ್ತಿಗೂ ಪ್ರವಾಸದ ಹವ್ಯಾಸವನ್ನು ಬಿಡದೆ ಪ್ರತಿವರ್ಷ ಪ್ರವಾಸ ಹೋಗುತ್ತಲೇ ಇದ್ದೆವೆ. ಆರೋಗ್ಯ ಕೈಕೊಡುವ ತನಕ ಈ ಹವ್ಯಾಸ ಬಿಡಲಾರೆವೆಂಬ ಪ್ರತಿಜ್ಞೆ ನಮ್ಮದು.
– ಎನ್.ಶೈಲಜಾ ಹಾಸನ
ತುಂಬಾ ಸೊಗಸಾಗಿದೆ ಬರಹ. ಪ್ರವಾಸ ಹೋಗುವ ಆಸೆಯನ್ನು ಚಿಗುರಿಸಿದೆ.
ಧನ್ಯವಾದಗಳು
Vanajakshi BS
vanajakshibs123@gmail.com
ಪ್ರವಾಸದ ಅನುಭವಗಳು
ಸರಳ ಸುಂದರವಾಗಿ ಮೂಡಿಸಿದ್ದೀರಾ
ಧನ್ಯವಾದಗಳು
ಸೊಗಸಾದ ಬರಹ
ಧನ್ಯವಾದಗಳು
ಏನೆಲ್ಲಾ ಅನುಭವವಾದರೂ ಛಲಬಿಡದ ತ್ರಿವಿಕ್ರಮ ನಂತೆ ಮತ್ತೆ ಮತ್ತೆ ಪ್ರವಾಸಕ್ಕೆ ಹೋಗಿ ಬರುವ ನಿಮ್ಮ ಗಟ್ಟಿ ಯಾರು ನಿರ್ಧಾರಕ್ಕೆ ನನ್ನ ದೊಂದು ಹೃತ್ಪೂರ್ವಕ ಅಭಿನಂದನೆಗಳು ಮೇಡಂ ಸೊಗಸಾದ ನಿರೂಪಣೆ.
ಧನ್ಯವಾದಗಳು
ಪ್ರಯಾಸವಾದರೂ ಪ್ರವಾಸದ ಮಜಾ ಇರುತ್ತದೆ!
ಧನ್ಯವಾದಗಳು
ಪ್ರವಾಸಗಳ ಅನೂಹ್ಯ ಅನುಭವಗಳ ಆಪ್ತ ಚಿತ್ರಣಗಳ ಲೇಖನ ಚಂದವಿದೆ.
ಧನ್ಯವಾದಗಳು
ಪ್ರವಾಸದ ಪ್ರಯಾಸವನ್ನು ನೀವು ಬಹಳವಾಗಿ ಅನುಭವಿಸಿಬಿಟ್ಟಿರಿ ಮೇಡಂ! ಪ್ರವಾಸದ ಸಮಯದಲ್ಲಿ ಕೈಯಲ್ಲಿ ಸ್ವಲ್ಪ ನೆಲ್ಲಿಕಾಯಿ, ನಿಂಬೆಯ ಒಣಗಿಸಿದ ತುಂಡುಗಳು ಸದಾ ಇದ್ದರೆ, ಈ ವಾಂತಿ ಸಮಸ್ಯೆಗೆ ಸ್ವಲ್ಪ ಪರಿಹಾರ ಸಿಗಬಹುದೇನೋ…ನನಗಂತೂ ತುಂಬಾನೇ ಉಪಯೋಗವಾಗುತ್ತಿದೆ, ನನಗಲ್ಲದಿದ್ದರೂ ಜೊತೆಯಲ್ಲಿರುವ ಪ್ರವಾಸೀ ಬಂಧುಗಳಿಗೆ. ಸೊಗಸಾದ ಅನುಭವ ಕಥನ ಮೇಡಂ.
ಧನ್ಯವಾದಗಳು