ಹೊಯ್ಸಳೇಶ್ವರ ಪಿರಿಯರಸಿ ಪಟ್ಟಮಹಾದೇವಿ ‘ಶಾಂತಲಾ’

Share Button

ಬೇಲೂರು-ಹಳೇಬೀಡು ಎಂದಾಕ್ಷಣ ಕಣ್ಣಲ್ಲಿ ತುಂಬಿಕೊಳ್ಳುವುದು ನಾಟ್ಯರಾಣಿ ಶಾಂತಲೆಯ ನೃತ್ಯ ಭಂಗಿಗಳು. ಹೊಯ್ಸಳೇಶ್ವರ, ಶಾಂತಲೇಶ್ವರ, ಸೌಮ್ಯಕೇಶವ ದೇವಾಲಯಗಳು,  ಶಿಲಾ ಪೀಠ ಇತ್ಯಾದಿ. ಈ ಸ್ಥಳದ ಹಿನ್ನೆಲೆ ಅತ್ಯಂತ ರೋಚಕಮಯವಾಗಿರುವುದಂತೂ ಸತ್ಯ. ದರ್ಶನ ಭಾಗ್ಯ ಪಡೆದ ನಮ್ಮೆಲ್ಲರಿಗೂ ಭಾವೋದ್ರೇಕ ಉಂಟಾಗುವುದು ಸಹಜ. ಈ ಭಾವಾವೇಶಗಳನ್ನು ಕೃತಿರೂಪವಾಗಿ ತಂದ ಶ್ರೀ ಕೆ.ವಿ.ಅಯ್ಯರ್ ಅವರ “ಶಾಂತಲಾ”  ನನ್ನ ಚಿತ್ತವನ್ನು, ಹೃದಯವನ್ನು ಆವರಿಸುಕೊಂಡು ಬಿಟ್ಟಿದೆ. ಈ ಕಥೆ ಕೇವಲ ಒಂದು ಪ್ರೇಮಮಯ ಸಂಸಾರದ ಚಿತ್ರವಾಗದೆ ಕಲಾತ್ಮಕ ಕೃತಿಯಾಗಿ ಹೃದಯದಲ್ಲಿ ಶಾಶ್ವತವಾಗಿ ನೆಲೆಸುತ್ತದೆ.

ಮಹಾಸತಿ ಚಂದಲೇ ಹಾಗೂ ಚನ್ನಮ-ದಂಡಾಧೀಶನ  ಸುಪುತ್ರ, ಮಹಾದೇವಿಯ ಸಾಕುಮಗನಾದ ಕುವರ ವಿಷ್ಣುವಿನ ಬ್ರಹ್ಮೋಪದೇಶದ ಸಂಧರ್ಭದಲ್ಲಿ, ಸೊಂಪೆರೆಯುವ ಮುಖ ಕಾಂತಿ ಹೊಂದಿದ ಶಾಂತಲೆಯನ್ನು ನೋಡುವ ಸುಸಂಧರ್ಭ, ಅವಳೊಡನೆ ಆಗಮಿಸಿದ್ದ ಶಾಂತಲೆಯ ಜೀವದ ಗೆಳತಿ  ಲಕ್ಷ್ಮಿಯ ಒಡನಾಟ, ಇಬ್ಬರೂ ಒಂದು ಜೀವ, ಎರಡು ದೇಹದಂತೆ ಇರುವ ಆತ್ಮಗಳು. ಹೊಯ್ಸಳ ಆಸ್ಥಾನದಲ್ಲಿ ಶಾಂತಲೆ-ಲಕ್ಷ್ಮಿಯ ವೀಣೆ-ನೃತ್ಯದ ಜುಗಲ್ಬಂದಿಯ ಮೋಹಕ ವರ್ಣನೆ ಕಲಾರಸಿಕನನ್ನು ಹುಚ್ಚು ಹಿಡಿಸುವಂತಹುದು. ಇಬ್ಬರು ಕಲಾದೇವತೆಗಳನ್ನು ತನ್ನ ಸೊಸೆಯಾಗಿ ಸ್ವೀಕರಿಸಲು ಮಹಾದೇವಿಯು ಮುಂದಾಗುತ್ತಾಳೆ.

ಬಿಟ್ಟಿದೇವನೆ ಮುಂದೆ ವಿಷ್ಣುವರ್ಧನನಾಗಿ ಹೊಯ್ಸಳ ಸಾಮ್ರಾಜ್ಯದ ಅರಸನಾಗುತ್ತಾನೆ. ರೂಪು ಲಾವಣ್ಯದೊಂದಿಗೆ ನಾಟ್ಯಕ್ಕೆ ಮನಸೋತ ವಿಷ್ಣುವರ್ಧನ ಲಕ್ಷ್ಮಿಯನ್ನು ವರಿಸಲು ಇಚ್ಛಿಸುತ್ತಾನೆ. ಸಾಕುತಾಯಿಗೆ ಶಾಂತಲೆ ಎಂದರೆ ಶಾರದೆಯಷ್ಟೇ ಮೋಹ. ಅಂತೂ, ಅವರಿಬ್ಬರ ಇಷ್ಟದಂತೆ, ಶಾಂತಲಾ ಪಟ್ಟದರಸಿಯಾಗಿ ವಿಷ್ಣುವರ್ಧನನಿಗೆ ಮನದನ್ನೆಯಾಗಿರುತ್ತಾಳೆ. ತಂಗಿ ಲಕ್ಷ್ಮಿ ಕಿರಿಯ ಅರಸಿಯಾಗಿ ಹೊಯ್ಸಳ ಸಾಮ್ರಾಜ್ಯದ ವ್ಯವಹಾರಗಳನ್ನು ನೋಡಿಕೊಳ್ಳುವ ಮಹತ್ತರ ಜವಾಬ್ದಾರಿಯನ್ನು ಸರಿತೂಗಿಸುವ ಕೌಶಲ್ಯ ಮತಿಯಾಗಿರುತ್ತಾಳೆ. ದ್ವಾರಾವತಿಯ ಅರಸ ವಿಷ್ಣುವರ್ಧನ ರೂಪಿನಲ್ಲೋ ಅಂಗಜ. ವಿವಾಹ ಮಹೋತ್ಸವದ ವರ್ಣನೆ ಓದುಗನಿಗೆ ಸಾಕ್ಷಾತ್ ಲಕ್ಷ್ಮಿ-ನಾರಾಯಣರ, ಶ್ರೀನಿವಾಸ-ಪದ್ಮಾವತಿ  ಮದುವೆ ಸ್ವರ್ಗದಲ್ಲಿ ಆದ ಕಲ್ಪನೆ ಬಾರದಿರದು. ಇಲ್ಲಿ ಓದುಗನಿಗೆ ಗೆಳೆತನದ ಅನುಭಾವವಾಗದಿರದು. ಶಾಂತಲೆ-ಲಕ್ಷ್ಮಿ ಇಬ್ಬರೂ ಪುಟಕ್ಕಿಟ್ಟ ಚಿನ್ನವೇ ಸರಿ. ಗೆಳೆತನದ ವ್ಯಾಪ್ತಿಯನ್ನು , ಗಟ್ಟಿ ಗೆಳೆತನದ ರೀತಿ-ರಿವಾಜನ್ನು ಇಷ್ಟು ಸವಿಸ್ತಾರವಾಗಿ ಬಿಂಬಿಸಿದ ಮತ್ತೋರ್ವ ಲೇಖಕ ಕನ್ನಡ ಸಾಹಿತ್ಯಲೋಕದಲ್ಲಿ ಇರಲು ಸಾಧ್ಯವೇ ಇಲ್ಲ.

ವಿಷ್ಣುವರ್ಧನ ಹೊಯ್ಸಳ ಸಾಮ್ರಾಜ್ಯವನ್ನು ಉತ್ತುಂಗಕ್ಕೆ ತೆಗೆದುಕೊಂಡುಹೋಗಿರುವ ಅವನ ಸಾಹಸಗಾಥೆ, ದ್ವಾರಾವತಿ ರಾಜಧಾನಿಯ ಆಳ್ವಿಕೆಯ ರೂಪುರೇಷೆಗಳ ಚಿತ್ರಣ ಮನಸ್ಸನ್ನು ತುಂಬಿಕೊಳ್ಳುತ್ತದೆ. ತನ್ನ ಕಡು ವೈರಿ ಚಾಣಾಕ್ಯರನ್ನು ಸದೆಬಡಿಯುವ ವರ್ಣನೆ ಮನ ಮಿಡಿಯುವಂತೆ ಚಿತ್ರಿಸಿದ್ದಾರೆ. ಕುವರವಿಷ್ಣುವಿಗೆ ಅಮಾತ್ಯ ವೀರದೇವನ ಮಗಳು ಸೊವಳೆಯೊಡನೆ ವಿವಾಹ ಬಂಧನ.  ಇದರ ಕಲ್ಪನೆಯೇ ರೋಮಾಂಚನ!

ಈ ಕೃತಿಯ ವಿಶೇಷವೇನೆಂದರೆ ಇಲ್ಲಿ ಒಟ್ಟು ಆರು ಕನಸುಗಳು ವರ್ಣಿಸಲ್ಪಟ್ಟಿವೆ. ತುಂಬಾ ಸೊಗಸಾಗಿವೆ ಹಾಗೂ ವರ್ಣರಂಜಿತವಾಗಿವೆ. ಅದರಲ್ಲೂ, ಕುವರ ವಿಷ್ಣುವಿನ ಕನಸಿನ ವ್ಯಾಖ್ಯಾನ ಹೃದಯ ಕಲಕುವಂತಹುದು.. ಹೊಯ್ಸಳೇಶ್ವರ-ಶಾಂತಲೇಶ್ಬರ ದೇವಾಲಯಗಳು ಹಳೇಬೀಡಿನಲ್ಲಿ ನಿರ್ಮಾಣ ಹಂತದಲ್ಲಿ ಏಕಶಿಲೆಯ ಎರಡು ನಂದಿಗಳನ್ನು ಬಿನ್ನ ವಾಗದಂತೆ ತರುವುದು ಕಷ್ಟವಾಗಿದ್ದು, ಸ್ವತಃ ಶ್ರವಣಬೆಳಗೊಳದ ಬಾಹುಬಲಿಯೇ ಅದನ್ನು ಹೊತ್ತು ತರುವಾಗ ಸೂರ್ಯನ ಪ್ರಖರತೆ ತೀವ್ರವಾಗಿ ಜನಕ್ಕೆ ಉಸಿರುಕಟ್ಟಿದಂತಾಗುತ್ತದೆ. ದೇವಸ್ಥಾನ, ಬುಟ್ಟಿಯಲ್ಲಿನ ಹಣ್ಣುಗಳು,  ಆನೆ-ಕುದುರೆಗಳು ಜೀವಂತವಾಗುತ್ತವೆ ಎಂಬ ಕಲ್ಪನೆಯೇ ರೋಚಕ.ಶಾಂತಲೆಯ ಉಸಿರು ಕಟ್ಟಿ ಮೂರ್ಛೆ ಹೋಗಿರುತ್ತಾಳೆ. ನಂತರ ಎಲ್ಲವೂ ಕ್ರಮೇಣ ತಹಬಂದಿಗೆ ಬಂದು ದೇವಾಲಯದ ಕಾರ್ಯಕ್ರಮಗಳು ಸಾಂಗವಾಗಿ ಪೂರೈಸುವಂತಾಗುವ ಸನ್ನಿವೇಶವನ್ನು ವಿವರಿಸಿರುವ ರೀತಿ ನಿಜಕ್ಕೂ ಅದ್ವೀತೀಯ. ಶಾಂತಲೆ-ಲಕ್ಷ್ಮಿಯರ ಗಾಯನ-ನೃತ್ಯದ ವಿವರಣೆ ಅದ್ಭುತ. ಮಹಾದೇವಿಯ ಬಯಕೆಯನ್ನು ಸಾಕಾರಗೊಳಿಸಲು ಅಶಕ್ತಳಾದ ಶಾಂತಲೆ ತನಗೆ ಪುತ್ರಪ್ರಾಪ್ತಿಯ ಭಾಗ್ಯವಿಲ್ಲವೆಂದು ತಿಳಿದು, ಮಮ್ಮಲ ಮರುಗಿ, ತಂಗಿ ಲಕ್ಷ್ಮಿಯನ್ನೇ ಪಟ್ಟದರಸಿಯಾಗಿ ಮಾಡಬೇಕೆಂದು ಅಂಗಲಾಚಿದಾಗ, ಒಪ್ಪದ ವಿಷ್ಣುವರ್ಧನ, ಕುವರ ವಿಷ್ಣುವನ್ನೇ ಮಗನೆಂದು ಭಾವಿಸೋಣವೆಂದು ಸಮಾಧಾನ ಪಡಿಸುವ ಸಂಧರ್ಭ ಮನೋಜ್ಞವಾಗಿದೆ.

ಹೊಯ್ಸಳರ ಭೀಷ್ಮನೆಂದೇ ಕರೆಯಿಸಿಕೊಳ್ಳುವ ಗಂಗರಾಜನ ನಿಸ್ವಾರ್ಥ ಭಾವ ಮನಕಲಕುವಂತೆ ಬಿಂಬಿಸಿದ್ದಾರೆ. ಕುವರವಿಷ್ಣು ಅಪ್ಪಾಜಿಯ ಆಣತಿಯನ್ನು ಮೀರಿ ವೈರಿ ಪಡೆ ಜೊತೆ ಯುದ್ದ ಮಾಡುವ ಸಂಧರ್ಭದಲ್ಲಿ ವೀರ ಮರಣ ಹೊಂದಿದ್ದಾನೆಂದು ಪರಿಭ್ರಮಿಸಿ ಸಾವನ್ನೋಪ್ಪುವ ಮಹಾರಾಜ್ಞೇ ಮಹಾದೇವಿ ನಿಜಕ್ಕೂ ಸ್ತ್ರೀ ಕುಲಕ್ಕೆ ಕಲಶವಿಟ್ಟಂತೆ. ಸಾಕುತಾಯಿಯ ಮರಣದ ವಿಷಯವನ್ನು ತಿಳಿದ ವಿಷ್ಣುವರ್ಧನ ಅಪರ ಕರ್ಮಗಳನ್ನು ಮಾಡದೆ ಕುವರ ವಿಷ್ಣುವನ್ನು ಕರೆತರಲು ಹೊರಡುತ್ತಾನೆ. ಕುವರ ವಿಷ್ಣುವು ಗೆಲುವಿನ ಜಯಭೇರಿ ಭಾರಿಸಿ ಹಿಂತಿರುಗಿಬರುತ್ತಿದ್ದಾನೆಂಬ ಸಂತೋಷದ ವಿಷಯ ಎಲ್ಲರಲ್ಲೂ ಹರ್ಷ ಮೂಡಿಸುತ್ತದೆ. ಮಹಾದೇವಿಯ ಸಾವು ಕುವರ ವಿಷ್ಣುವನ್ನು ಕಂಗೆಡಿಸುತ್ತದೆ.

ತಾಯಿ ಶಾಂತಲೆಗೆ ತಾನು ಗರುಡನಾಗಲು ನಿರ್ಧರಿಸಿರುವ ಸಂಗತಿಯನ್ನು  ಅರಹುವ ಸನ್ನಿವೇಶ ನಿಜಕ್ಕೂಓದುಗರಲ್ಲಿ ಅತೀತ ಸಂಚಲನವನ್ನು ಮೂಡಿಸುತ್ತದೆ. ಶಾಂತಲೆಯ ಮನಸ್ಸು ವಿಚಲಿತಗೊಂಡು ತಾನು ಒಂದು ನಿರ್ಧಾರಕ್ಕೆ ಬರುತ್ತಾಳೆ ಹೊಯ್ಸಳ ರಾಜ್ಯದ ಬಗ್ಗೆ ಶಾಂತಲೆಗೆ ಇರುವ ಕಾಳಜಿ ಅಪ್ರತಿಮ. ಕುವರ ವಿಷ್ಣುವಿನೋಡನೆ ಶಿವಗಂಗೆಗೆ ತೆರಳುವ ಸಂಕಲ್ಪ ಮಾಡಿ, ಅಲ್ಲಿ ಬೆಟ್ಟದ ಬಂಡೆಯ ಬುಡದಲ್ಲಿ ಶಿವನಿಗೆ ತನ್ನನ್ನು ಅರ್ಪಿಸಿಕೊಳ್ಳುತ್ತಾಳೆ. ಅಕ್ಕನ ಸುಳಿವು ಕಾಣದ ಕುವರವಿಷ್ಣು ಹತಾಶನಾಗಿ ಸಾವಿಗೆ ಶರಣಾಗುವ ಸ್ಥಿತಿ ಓದುಗನಲ್ಲಿ ಮರುಕ ಹುಟ್ಟಿಸುತ್ತದೆ. ಶಿವಗಂಗೆಯ ಜನರ ಸಹಾಯದಿಂದ ಇಬ್ಬರ ಕಳೆಬರಗಳು ದ್ವಾರಾವತಿ ತಲಪುತ್ತದೆ.

ಚಿತಬ್ರಾಂತನಾದ ವಿಷ್ಣುವರ್ಧನ ಧರ್ಮಪತ್ನಿಯ ಸಾವನ್ನು ಒಪ್ಪದೆ ಮನದಲ್ಲೇ ಒಂದು ನಿರ್ಧಾರಕ್ಕೆ ಬರುತ್ತಾನೆ. ಮಗಳ ಸಾವಿನಿಂದ ಕುಗ್ಗಿಹೋದ ಮಾಚಿಕಬ್ಬೆ ಸಲ್ಲೇಖನ ಕ್ರಿಯೆಗೆ ಮುಂದಾಗುವ ಸನ್ನಿವೇಶ ಬಹಳ ವಿದ್ರಾವಕ. ಮಾರಸಿಂಗಮಯ್ಯನ ಮನಸಿನ ಹೊಯ್ದಾಟ ಯಾರಿಗೂ ಕಣ್ಣು ಮಂಜಾಗುವಂತೆ ಮಾಡುತ್ತದೆ.
ವಿಷ್ಣುವರ್ಧನ ಶಾಂತಲೆಯ ನಿರ್ಜೀವ ದೇಹವನ್ನು ಹೊತ್ತು ಶಿವಗಂಗೆಯತ್ತ ಪಯಣಿಸುವುದನ್ನು ಚಿತ್ರಿಸಿರುವ . ಇತ್ತ, ಕುವರವಿಷ್ಣುವಿನ ಪತ್ನಿ ಅಮಾತ್ಯ ವೀರದೇವನ ಮಗಳು ಸೋವಲೇ ಪತಿಯೊಡನೆ ಸಹಗಮನ ಮಾಡಿ ಮಹಾಸತಿ ಎಂದೆನಿಸಿಕೊಳ್ಳುವ ದಾರುಣ ಕಥೆ ಚೆನ್ನಾಗಿ ಮೂಡಿ ಬಂದಿದೆ.

ವಿಷ್ಣುವರ್ಧನ ತನ್ನ ಮನದರಸಿಯಆತ್ಮವನ್ನು ಅರಸಿಕೊಂಡು ಶಿವಗಂಗೆಯ ಪ್ರತಿಯೊಂದು ಜಾಗವನ್ನು ಶೋಧಿಸಿಬಿಡುತ್ತಾನೆ. ಕಳೆಗುಂದಿದ ಅವನ ಮುಖ ಯಾರೂ
ಗುರುತಿಸಲಾಗದಷ್ಟು ಕರಕಲಾಗಿರುತ್ತದೆ. ಅರಸನ ನಡೆಯಿಂದ ಮೂಕವಿಸ್ಮಿತರಾದ ಜನ ಶಿವಗಂಗೆಗೆ ಅವನನ್ನು ಹಿಂಬಾಲಿಸಿ, ಬಹಳ ಕಷ್ಟದಿಂದ ಅವನನ್ನು ಗುರುತುಹಿಡಿಯುತ್ತಾರೆ. ಲಕ್ಷ್ಮಿಯು ತನ್ನ ಅಕ್ಕನ ಸಾವನ್ನು ಹೇಗೆ ಸ್ವೀಕರಿಸಿಯಾಳು?ಎಂದು ಅವಳಿಗೆ ವಿಷಯ ತಿಳಿಯಬಾರದೆಂದು ನಿಶೆಗೆ ಜಾರುವಂತೆ ಮಾಡುತ್ತಾರೆ. ಶಿವಗಂಗೆಗೆ ಅವಳನ್ನು ಕರೆದುಕೊಂಡುಹೋಗಬೇಕೇ? ಬೇಡವೇ ಎಂಬ ಜಿಜ್ಞಾಸೆ ಎಲ್ಲರನ್ನು ಕಾಡುವ ಬಗ್ಗೆ, ಕಡೆಗೆ ಅವಳನ್ನು ಕರೆದುಕೊಂಡು ಹೋಗುವ ನಿರ್ಧಾರಕ್ಕೆ ಬರುವ ಪರಿಸ್ಥಿತಿ, ಎಲ್ಲರ ಮನಸ್ಸು ಹೇಗೆ ವಿಚಲಿತವಾಗಿರುತ್ತದೆ ಎಂಬುದನ್ನು ತುಂಬಾ ಸೂಕ್ಷ್ಮವಾಗಿ ಬಿಂಬಿಸಿರುವ ಬರಹಗಾರರ ಕಲಾ ಕೌಶಲ್ಯಕ್ಕೊಂದು ನನ್ನ ಸಲಾಂ. ನಶೆಯಿಂದ ಹೊರಬಂದ ಲಕ್ಷ್ಮಿಗೆ ಎಲ್ಲಾ ಅಸಹಜವಾಗಿ ಕಾಣುತ್ತದೆ. ಅವಳ ಪ್ರಶ್ನೆಗಳಿಗೆ ಉತ್ತರಿಸಲಾಗದ ದುಸ್ಥಿತಿ ತುಂಬಾ ಮನೋಜ್ಞವಾಗಿ ಚಿತ್ರಿಸಿದ್ದಾರೆ.

ಆತ್ಮದ ಶೋಧನೆಯಲ್ಲಿ ತೊಡಗಿದ ವಿಷ್ಣುವರ್ಧನನ ಬೇಗುದಿ, ಅಬ್ಬಾ!ಎಷ್ಟು ಮೈ ರೋಮಾಂಚನಗೊಳ್ಳುತ್ತದೆ. ಕಳೆಬರದ ಮುಂದೆ ಆಕ್ರಂದಿಸುವ ಜೀವಗಳಿಗೆ ಸಮಾಧಾನ ಗೊಳಿಸುವವರು ಯಾರು?ವಿಷ್ಣುವರ್ಧನನ ನೆರಳಿನ ಛಾಯೆಯಿಂದ ಗುರುತಿಸಿದ ಮಂದಿಗೆ ನಿಟ್ಟುಸಿರು ಬಿಡುವ ಸನ್ನಿವೇಶ ತುಂಬಾ ನೈಜವಾಗಿ ಮೂಡಿದೆ. ಲಕ್ಷ್ಮಿಯ ದೇಹ ಕಂಪನಗೊಳ್ಳುವ ಪರಿ, ಶಾಂತಲೆಯ ಆತ್ಮ ಲಕ್ಷ್ಮಿಯ ದೇಹಕ್ಕೆ ಬೆರೆತುಹೋಗುವ ಸನ್ನಿವೇಶ ತುಂಬಾ ಮನೋಜ್ಞವಾಗಿದೆ. ಮುಂದೆ ಲಕ್ಷ್ಮಿಯ ನಡುವಳಿಕೆಯಲ್ಲಾದ ಬದಲಾವಣೆಯನ್ನು ಊರ ಜನ ಗಮನಿಸುವಂತಾಗುತ್ತದೆ. ಹಿರಿಯ ಪಟ್ಟದರಿಸಿಯಾಗಿ ಆಲಂಕೃತಗೊಂಡು, ಗಂಡುಮಗುವಿನ ತಾಯಿಯಾಗಿ ಹೊಯ್ಸಳ ಸಾಮ್ರಾಜ್ಯಕ್ಕೆ ಪುತ್ರಪ್ರಾಪ್ತಿಯಾಗುತ್ರದೆ. ಮಾರಸಿಂಗಮಯ್ಯ-ಮಾಚಿಕಬ್ಬೆಯ ಸಾಕುಮಗಳು, ಕೇತುಮಲ್ಲನಾಯಕನ ಮುದ್ದಿನ ಮಗಳು ಚಂದಲೆಯನ್ನು ವರಿಸಿದ ವಿಷ್ಣುವರ್ಧನ ಹೊಯ್ಸಳ ಪ್ರಾಂತ್ಯಕ್ಕೆ ಧ್ರುವತಾರೆಯಾಗಿ ಮಿಂಚುತ್ತಾನೆ.

ಶಾಂತಲೆಯೆಂದು ಮರುನಾಮಕರಣಗೊಂಡ ಚಂದಲೆ ಹೊಯ್ಸಳೇಶ್ವರನಲ್ಲಿ ಶಾಶ್ವತವಾಗಿ ಶಾಂತಲೆಯಾಗೇ ಉಳಿಯುತ್ತಾಳೆ ಎಂಬ ಅಂತ್ಯ , ಆರಂಭಕ್ಕೆ ಮುನ್ನುಡಿಯಾಗುತ್ತದೆ .”ಶಾಂತಲೆ” ಒಂದು ಅಪೂರ್ವ ಕೃತಿಯಾಗಿ ನಿಲ್ಲುವುದಂತೂ ಸೂರ್ಯ-ಚಂದ್ರರಂತೆ ಸತ್ಯ. ಇದನ್ನು ಓದಿದ ಮೇಲೆ ನನಗಂತೂ ಬೇಲೂರು-ಹಳೇಬೀಡನ್ನು ಮತ್ತೆ ಕಣ್ಣು ತುಂಬಿಸಿಕೊಳ್ಳಬೇಕೆಂಬ ಅದಮ್ಯ ಬಯಕೆ ಶುರುವಾಗಿದೆ. ನೋಡೋಣ, ಯಾವಾಗ ಈ ಕರೊನ ಬಾಧೆ ನೀಗುತ್ತದೋ, ಗೊತ್ತಿಲ್ಲ.

ಹೆಬ್ಬಾಲೆ ವತ್ಸಲ.

7 Responses

  1. ನಯನ ಬಜಕೂಡ್ಲು says:

    ಕೃತಿ ಪರಿಚಯ ಬಹಳ ಚೆನ್ನಾಗಿದೆ.

  2. ನಾಗರತ್ನ ಬಿ. ಅರ್. says:

    ಪುಸ್ತಕದ ಪರಿಚಯ ಬಹಳ ಆಪ್ತವಾಗಿ ಮೂಡಿ ಬಂದಿದೆ.ಪರಿಚಯಿಸುವ ರೀತಿ ಆ ಪುಸ್ತಕ ವನ್ನು ಓದಬೇಕೆಂಬ ಬಯಕೆ ಮೂಡಿಸುತ್ತದೆ.ಅಭಿನಂದನೆಗಳು.

  3. Padma Anand says:

    ನನ್ನ ಯೌವನದಲ್ಲಿ ಓದಿದ್ದ ಮೇರು ಕೃತಿಯ ದೃಷ್ಯಗಳು ಮತ್ತೆ ಕಣ್ಣಮುಂದೆ ಬಂದು ನಿಲ್ಲುವಂತಿರುವ ಪುಸ್ತಕ ಪರಿಚಯಕ್ಕಾಗಿ ಅಭಿನಂದನೆಗಳು.

  4. ಮಹೇಶ್ವರಿ ಯು says:

    ಶಾಂತಲಾ ಹಾಗೂ ರೂಪದಶಿ೯- ಇವೆರಡೂ ಓದುಗರನ್ನು ಬಹಳ ಕಾಡುವ ಕೃತಿಗಳು. ಕೆವಿ ಅಯ್ಯರ್ ಕನ್ನಡಿಗರ ಮನಗೆದ್ದ ಲೇಖಕರು. ಪುಸ್ತಕ ಪರಿಚಯವನ್ನು ಸವಿವರವಾಗಿ ಮಾಡಿ ದ ಸೋದರಿಗೆ ಅಭಿನಂದನೆ ಗಳು

  5. ಶಂಕರಿ ಶರ್ಮ says:

    ಬಹಳ ಉತ್ತಮ ಪುಸ್ತಕವೊಂದರ ಚಂದದ ವಿಮರ್ಶೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: