ನಾ ಓದಿದ ಪುಸ್ತಕ : ‘ಸಾರ್ಥ’
ಇತ್ತೀಚೆಗೆ ಎಸ್.ಎಲ್. ಭೈರಪ್ಪರವರ “ಸಾರ್ಥ” ಕಾದಂಬರಿ ಓದುವ ಅವಕಾಶ ಸಿಕ್ಕಿತು. ಇದರ ಬಗ್ಗೆ ನನ್ನ ಅನಿಸಿಕೆಯನ್ನು ಹಂಚಿಕೊಳ್ಳುವ ಪ್ರಯತ್ನವಷ್ಟೇ. ಓದು ಪ್ರಾರಂಭಿಸಿದಾಗ ನನ್ನ ಬುದ್ಧಿಮತ್ತೆಗೆ ಸವಾಲು ಎನಿಸುವಂತೆ ಕಂಡಿತಾದರೂ, ನನ್ನ ಸಂಕಲ್ಪದಂತೆ ಓದನ್ನು ಮುಂದುವರಿಸಿದೆ. ಓದುತ್ತಾ ಹೋದಂತೆ, ಧಾರ್ಮಿಕ ಸಂಘರ್ಷಗಳ ಅನಾವರಣವಾಗುತ್ತಾ ಹೋಗಿ ನನ್ನನ್ನು ತಬ್ಬಿಬ್ಬು ಮಾಡಿದ್ದು ಸತ್ಯದ ವಿಚಾರ.
ಕಥಾನಾಯಕ ನಾಗಭಟ್ಟನ ನಿರ್ಧಿಷ್ಟ ಗುರಿ ಇಲ್ಲದ ಸಾರ್ಥದೊಡನೆ ನಡೆಸಿದ ಸಂಚಾರ ಅವನ ವ್ಯಕ್ತಿತ್ವ ವನ್ನು ಹತ್ತು ಹಲವಾರು ಪರೀಕ್ಷೆಗಳಿಗೆ ಸವಾಲುಗಳಿಗೆ ಒಡ್ಡಿತ್ತು. ಅವನ ಅನುಭವದ ಮಜಲುಗಳು ಬಹಳ ವಿಸ್ತಾರವಾಗಿದ್ದು , ನನ್ನ ಅನುಭವಕ್ಕೂ ಬಂತು. ಕ್ರಿಯಾ ಯೋಗ, ಹಠ ಯೋಗ, ತಂತ್ರ ಯೋಗ ಹೀಗೆ ಹಲವಾರು ವಿದ್ಯೆಗಳಲ್ಲಿ ತಾನು ಪಾಂಡಿತ್ಯ ಗಳಿಸಿದ್ದೇನೆ ಎಂಬ ಅಹಂ ಅವನಿಗಿದ್ದರೂ, ಕೆಲ ಸಂಧರ್ಭಗಳಲ್ಲಿ ಅವನಿಗೆ ಆ ವಿದ್ಯೆಗಳು ಅವನ ಸಂಕಟವನ್ನು ಪರಿಹರಿಸಿಕೊಳ್ಳಲು, ಶೂನ್ಯಭಾವವನ್ನು ನಿವಾರಿಸಿಕೊಳ್ಳಲು ಸಾಧ್ಯವಾಗಲೇ ಇಲ್ಲ. ಈ ವಿದ್ಯೆಗಳು ಕೇವಲ ಸಾತ್ವಿಕ ಉದ್ದೇಶಗಳು ಇದ್ದರೆ ಮಾತ್ರ ಫಲಪ್ರದವಾಗಿರುತ್ತವೆ ಎಂಬ ಮಾರ್ಮಿಕ ವಿಚಾರಗಳು ಅವನಿಗೆ ಗುರುಗಳಿಂದಲೇ ತಿಳಿಯುವ ಪರಿಸ್ಥಿತಿ ಬಂತು.
ಇನ್ನು, ಚಂದ್ರಿಕೆಯ ಪಾತ್ರ ಪರಿಶುದ್ಧದ ಪ್ರತೀಕ. ಅವಳ ಬದುಕಿನಲ್ಲಿ ನಡೆದ ವೈಪರೀತ್ಯಗಳು ಅವಳನ್ನು ಇನ್ನೂ ಬಲಪಡಿಸಿದವು. ಕಾರಣ, ಅವಳ ಮನಸ್ಸು ಅಷ್ಟು ಶುದ್ಧಿಯಾಗಿತ್ತು. ಧರ್ಮ-ಜಾತಿಗಳು ಕೇವಲ ಮನುಷ್ಯನ ಸೃಷ್ಟಿಯೇ ಹೊರತು ಯಾವುದು ಭಗವಂತನ ಉದ್ದಿಶ್ಯವಲ್ಲ. ಶಂಕರಾಚಾರ್ಯ-ಮಂಡಲಮಿಶ್ರರ ವಿಚಾರಗಳ ಸಂಘರ್ಷಗಳು ನನ್ನನ್ನು ತುಂಬಾ ಕಾಡಿತು.
ದಾಂಪತ್ಯ ಜೀವನ ಎಷ್ಟು ಪವಿತ್ರವಾದದ್ದು ಎಂಬುದಕ್ಕೆ ಭಾರತಿ ದೇವಿಯ ಪಾತ್ರ ಸಾಕ್ಷಿಯಾಗಿ ನಿಲ್ಲುತ್ತದೆ. ಒಟ್ಟಿನಲ್ಲಿ, ಸಂಘಜೀವಿಗಳಾದ ನಮಗೆ ಪ್ರೀತಿ-ಪ್ರೇಮ, ಸಹಾಯ-ಸಂವೇದನೆ, ನಿಷ್ಕಲ್ಮಶ ಮನಸು ನಮ್ಮ ಅಸ್ತಿತ್ವವನ್ನು ರೂಪಿಸುತ್ತವೆ ಹೊರತು ಬೇರೆಲ್ಲಾ ಆಚರಣೆಗಳು ನಗಣ್ಯ. ಕೇವಲ ಋಜುತನ ಮಾತ್ರ ನಮ್ಮನ್ನು ದೈವತ್ವದ ಕಡೆಗೆ ಕೊಂಡೊಯ್ಯುವ ಮೂಲ ಸಾಧನ ಎಂಬುದನ್ನು ಬಹಳ ತೀವ್ರವಾಗಿ ಧಾಖಲಿಸಿದ ಪರಿಣಾಮಕಾರಿ ಪುಸ್ತಕವಾಗಿ ನನ್ನನ್ನು ಆಕರ್ಷಿಸಿತು. ನಮ್ಮ ಸಾರ್ಥದ ಪಯಣದಲ್ಲಿ ಸ್ವಾರ್ಥಕ್ಕೆ ಅರ್ಥವಿಲ್ಲವೆಂದು ಮನಗಂಡರೆ ಸಾಕಷ್ಟೇ ಎಂದು ಹೇಳಬಲ್ಲೆ.
-ವತ್ಸಲ, ಮೈಸೂರು.
ನಿಮಗೆ ಕಥಾ ವಿಮರ್ಶೆಯು ಕರಗತಗೊಂಡಿದೆ ಮೇಡಂ. ಶುಭ ಹಾರೈಕೆಗಳು
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.
ಚೆನ್ನಾಗಿದೆ ಪುಸ್ತಕ ವಿಮರ್ಶೆ
ಧನ್ಯವಾದಗಳು
ಅತ್ಯುತ್ತಮ ಕಾದಂಬರಿಗಾರರಲ್ಲಿ ಒಬ್ಬರಾದ ಭೈರಪ್ಪನವರ ಕಾದಂಬರಿಗಳನ್ನುಇಷ್ಟಪಟ್ಟು ಓದುವವರಲ್ಲಿ ನಾನೂ ಒಬ್ಬಳು. ಅರ್ಥ ಮಾಡಿಕೊಳ್ಳಲು ಎರೆಡರಡು ಸಲ ಓದಿದ್ದಿದೆ. ಉತ್ತಮ ಕಾದಂಬರಿಯ ಒಳ್ಳೆಯ ವಿಮರ್ಶೆ..ಧನ್ಯವಾದಗಳು.
ನಿಜ ಶಂಕರಿಯವರೆ, ಒಂದೇ ಗುಕ್ಕಿನಲ್ಲಿ
ಓದಿಸಿಕೊಂಡು ಹೋಗುವ ಹಾಗಿರುತ್ತದೆ ಅವರ
ಪುಸ್ತಕಗಳು.
ಪುಸ್ತಕದ ಒಳ ಹೂರಣವನ್ನು ಅರ್ಥವತ್ತಾಗಿ ಗುರುತಿಸಿರುವ ಲೇಖನ. ಅಭಿನಂದನೆಗಳು.
ನಿಮ್ಮ ಪ್ರೇರಣೆಯ ಪ್ರತಿಕ್ರಿಯೆಗೆ ಧನ್ಯವಾದಗಳು,
ಪದ್ಮರವರೆ.
ಸಾರ್ಥ ಕಾದಂಬರಿಯನ್ನು ನಾನೂ ಓದಿದ್ದೇನೆ ನಿಮ್ಮ ಬಿಚ್ಚು ಮನಸ್ಸಿನಿಂದ ಹೇಳಿರುವ ಅನಿಸಿಕೆ ಮುದತಂದಿತು.ಅಭಿನಂದನೆಗಳು ಮೇಡಂ.