‘ಕರ್ವೊಳು’ ಕಂಡಿದ್ದೀರಾ?
ಈ ತರಕಾರಿಯನ್ನು ತೆಳು ಬಿಲ್ಲೆಗಳಾಗಿ ಹೆಚ್ಚಿದ ನಂತರ ತುಪ್ಪದಲ್ಲಿ ಹುರಿದು ತಯಾರಿಸಿದ ಮಜ್ಜಿಗೆಹುಳಿಯನ್ನು ತಿನ್ನದೆ ಬರೋಬ್ಬರಿ 25 ವರ್ಷಗಳ ಮೇಲಾದರೂ ಆ ರುಚಿಯ ನೆನಪಿನ್ನೂ ಮಾಸಿಲ್ಲ. ಬೇಲಿಯ ನಡುವೆ, ಪೊದೆಗಳಲ್ಲಿ ಕಂಡುಬರುವ ಕಾಡುಬಳ್ಳಿ ಕಣ್ಣಿಗೆ ಬಿದ್ದಾಗ ಅದರಲ್ಲಿ ಕಾಯಿ ಇದೆಯೇ ಅಂತ ಹುಡುಕಿ, ಸಿಕ್ಕಿದರೆ ಅದನ್ನು ಹಸಿಯಾಗಿಯೇ ಜಗಿದು ಚಪ್ಪರಿಸುತ್ತಿದ್ದ ಆ ದಿನಗಳ ನೆನಪಾಗುತ್ತಿದೆ! ಅಪರೂಪಕ್ಕೆ ತವರು ಮನೆಗೆ ಹೋದಾಗ ಆ ಕಾಯಿಗೆ ಹುಡುಕಾಡಿ ಸಿಗದಿದ್ದಾಗ “ಛೇ, ಈ ಸಲವೂ ಸಿಗಲಿಲ್ಲ” ಅಂತ ಮನಸಿನಲ್ಲಿ ನೊಂದುಕೊಳ್ಳುವುದು ಇದ್ದದ್ದೇ. ಯಾವುದಪ್ಪಾ ಈ ತರಕಾರಿ ಅಂತ ಯೋಚಿಸುತ್ತಿದ್ದೀರಾ? ನಮ್ಮ ತುಳುವಿನಲ್ಲಿ ಅದಕ್ಕೆ ಕರ್ವೊಳು ಅನ್ನುವರು. ನೋಡಲಿಕ್ಕೆ ತೊಂಡೆಕಾಯಿಯನ್ನು ತುಸು ಹೋಲುವ ಈ ಕರ್ವೊಳು ಕಾಯಿಯ ಎಲೆ, ಬೇರು, ಕಾಯಿ/ಹಣ್ಣು ಪ್ರತಿಯೊಂದೂ ಕೂಡಾ ಪ್ರಾಚೀನ ವೈದ್ಯಪದ್ಧತಿಯಲ್ಲಿ ಬಳಸಲ್ಪಡುತ್ತದೆ. ಹಾಗಾಗಿ ಔಷಧೀಯ ಗುಣವುಳ್ಳ ಬಳ್ಳಿಯೂ ಹೌದು. ಹಳ್ಳಿಯಲ್ಲಿ ಹುಟ್ಟಿ ಬೆಳೆದ ಎಲ್ಲರಿಗೂ ಈ ತರಕಾರಿಯ ಪರಿಚಯ ಇರಬಹುದು ಹಾಗೂ ಅದನ್ನು ಬಳಸಿಯೂ ಗೊತ್ತಿರಬಹುದು ಅನ್ನುವುದು ನನ್ನ ನಂಬಿಕೆ. ಬಳ್ಳಿಯಲ್ಲಿ ಸಿಕ್ಕಿದ ಕಾಯಿಗಳನ್ನು ತಂದು ಅಡುಗೆಯಲ್ಲಿ ಬಳಸುತ್ತಿದ್ದರೇ ವಿನಹ ಈ ಬಳ್ಳಿಯನ್ನು ಬೆಳೆಯಲು ಯಾರೂ ಮನಸ್ಸು ಮಾಡಲಿಲ್ಲ. ಯಾಕೋ ಈ ಸಸ್ಯ ಅಳಿವಿನಂಚಿನಲ್ಲಿದೆ. ಹೀಗೊಂದು ರುಚಿಭರಿತ ತರಕಾರಿ ಇದೆ ಅನ್ನುವುದೇ ಇಂದಿನ ಹೆಚ್ಚಿನ ಮಕ್ಕಳಿಗೆ ಗೊತ್ತಿರಲಾರದು. ಯಾಕೆಂದರೆ ಅಷ್ಟೊಂದು ಅಪರೂಪವಾಗಿಬಿಟ್ಟಿದೆ.
ಆಂಗ್ಲ ಭಾಷೆಯಲ್ಲಿ creeping cucumber ಎಂದು ಹೇಳುವ, Cucurbitaceae ಅನ್ನುವ ಜಾತಿಗೆ ಸೇರಿದ ವೈಜ್ಞಾನಿಕವಾಗಿ Solena amplexicaulis ಹೆಸರು ಹೊಂದಿದ ಈ ಬಳ್ಳಿಸಸ್ಯದಲ್ಲಿ ಸಿಗುವ ಕಾಯಿ ತಿನ್ನಲು ಬಲು ರುಚಿ. ಕನ್ನಡದಲ್ಲಿ ಏನೆನ್ನುವರು ಎಂದು ತಿಳಿದಿರಲಿಲ್ಲ. ಸಸ್ಯಗಳ ಬಗ್ಗೆ ಉತ್ತಮ ಮಾಹಿತಿ ನೀಡುವ ಮುಖಪುಟದಲ್ಲಿ ಈ ಬಳ್ಳಿಯ ಚಿತ್ರ ಹಂಚಿಕೊಂಡಾಗ ಅನೇಕ ಹೆಸರುಗಳು ಹಾಗೆಯೇ ಹೆಚ್ಚಿನ ಮಾಹಿತಿಗಳೂ ಸಿಕ್ಕಿದವು. ದೇವನೊಂದೇ ರೂಪ ಹಲವು ಅನ್ನುವಂತೆ “ಈ ತರಕಾರಿ ಬಲು ರುಚಿ ಹಾಗೂ ಪೂರ್ತಿ ಸಸ್ಯವೇ ಔಷಧೀಯ ಗುಣಗಳ ಆಗರ” ಅನ್ನುವುದು ಒಕ್ಕೊರಲ ಮಾತಾದರೂ ಹೆಸರು ಮಾತ್ರ ಊರಿಂದೂರಿಗೆ ಬೇರೆ ಬೇರೆ! ಕರುಗಳ ಕಾಯಿ, ಕರಾವೊಳು, ಗಮಟೆ ಕಾಯಿ, ಗೌಟಿ ಕಾಯಿ, ಗ್ಯಾರಲೆ ಕಾಯಿ,…. ಇತ್ಯಾದಿ ತರಹೇವಾರಿ ಹೆಸರುಗಳು!. (ಕೊಂಕಣಿಯಲ್ಲಿ ಗೊಯಿಂಟ ಅನ್ನುವರಂತೆ). ಏಷ್ಯಾ ಖಂಡದ ವಿವಿಧ ದೇಶಗಳಲ್ಲಿ ಈ ಬಳ್ಳಿಸಸ್ಯ ಕಂಡುಬರುವುದು ಅನ್ನುವ ಮಾಹಿತಿಯನ್ನು ಅಂತರ್ಜಾಲದ ಮೂಲಕ ತಿಳಿದುಕೊಂಡಾಯಿತು. ತೊಂಡೆಕಾಯಿಯನ್ನು ಹೋಲುತ್ತದೆ, ಆದರೆ ತೊಂಡೆಕಾಯಿಗಿಂತ ಗಾತ್ರದಲ್ಲಿ ಸಣ್ಣದು ಹಾಗೇ ತೊಂಡೆಕಾಯಿಗಿಂತ ಗಟ್ಟಿ ಹಾಗೂ ತುದಿ ಸ್ವಲ್ಪ ಚೂಪಾಗಿರುತ್ತದೆ. ಈ ಸಸ್ಯದ ಎಲೆಗಳು ತೊಂಡೆಕಾಯಿಯ ಎಲೆಗಿಂತ ಸಣ್ಣದಿದ್ದು ತೆಳುವಾಗಿರುತ್ತವೆ.
ಕಾಯಿ ಮತ್ತು ಹಣ್ಣು ವಿಟಮಿನ್ ಭರಿತವಾಗಿದ್ದು ಉತ್ತಮ ಪೋಷಕಾಂಶಗಳನ್ನು ಹೊಂದಿದೆ. ಒಂದು ಕಾಯಿ ತಿಂದರೆ ಒಂದು ಕುಡ್ತೆ ಹಾಲು ಕುಡಿಯುವುದಕ್ಕೆ ಸಮ, ಇದರ ಬೀಜಗಳಲ್ಲಿ ಪೋಷಕಾಂಶಗಳಿವೆ, ಹಸಿಯಾಗಿಯೂ ತಿನ್ನಬಹುದು ಹಾಗೂ ಅಡುಗೆಯಲ್ಲೂ ಉಪಯೋಗಿಸಬಹುದು. ಇದರಿಂದ ತಯಾರಿಸಿದ ಪಲ್ಯ, ಚಟ್ನಿ, ಮಜ್ಜಿಗೆ ಹುಳಿ ಎಲ್ಲವೂ ಸೂಪರ್ ಅನ್ನುವುದು ಈ ತರಕಾರಿ ತಿಂದು ಗೊತ್ತಿರುವವರೆಲ್ಲರ ಅಭಿಮತ. ವಿವಿಧ ಆರೋಗ್ಯ ಸಮಸ್ಯೆಗಳನ್ನು ನಿವಾರಿಸಲು ಇದರ ಎಲೆ, ಕಾಯಿ, ಬೇರು ಎಲ್ಲವನ್ನೂ ಬಳಸುವರು.
ಮೂತ್ರಸಂಬಂಧಿ ಸಮಸ್ಯೆಗಳಿಗೆ ಮತ್ತು ಚರ್ಮರೋಗಗಳ ನಿವಾರಣೆಗೆ ಈ ಗಿಡದ ರಸವನ್ನು ಬಳಸುವರು. ಗಿಡದಿಂದ ತಯಾರಿಸಿದ ಲೇಪವನ್ನು ಕುರು ಹಾಗೂ ಇನ್ನಿತರ ಚರ್ಮರೋಗಕ್ಕೆ ಹಾಗೆಯೇ ದೇಹದಲ್ಲಿ ಆಗುವ ಗಾಯಗಳಿಗೆ ಹಚ್ಚಲು ಉಪಯೋಗಿಸುವರು. ಜಠರದಲ್ಲಿರುವ ಹುಳುಗಳನ್ನು ನಿವಾರಿಸಲು ಇದರ ಬೀಜದ ಹುಡಿಯ ಸೇವನೆ ಮಾಡುವರು. ಗಿಡದ ಕಷಾಯ ಮತ್ತು ಲೇಪ ಸಂಧಿವಾತದಲ್ಲಿ ಬಳಸುವರು. ಇದರ ಹಣ್ಣು ಮತ್ತು ಇಡೀ ಗಿಡವನ್ನು ಉಪಯೋಗಿಸಿ ತಯಾರಿಸಿದ ರಸವನ್ನು ರಕ್ತ ಶುದ್ಧಿಕಾರಕವಾಗಿ ಬಳಸುವರು. ಬೇರು ಮತ್ತು ಎಲೆಯ ರಸ ವೀರ್ಯವೃದ್ಧಿಯಲ್ಲಿ ಸಹಕಾರಿ. ಗಿಡದ ಲೇಪವನ್ನು ತಲೆಗೆ ಹಚ್ಚಿದರೆ ನಿದ್ರಾಹೀನತೆ ದೂರವಾಗುವುದು. ಸೇರೆ ಅಥವಾ ಇನ್ನಿತರ ಗಿಡಗಳಿಂದ ಉಂಟಾಗುವ ಅಲರ್ಜಿಯನ್ನು ದೂರ ಮಾಡಲು ಇದರ ಎಲೆಯನ್ನು ನೀರಿನಲ್ಲಿ ಅರೆದು ನಂತರ ತೆಂಗಿನಕಾಯಿ ಹಾಲಿನಲ್ಲಿ ಬೆರೆಸಿ ಅಥವಾ ಎಲೆಯ ರಸವನ್ನು ಸಕ್ಕರೆ ಮತ್ತು ಹಾಲಿನಲ್ಲಿ ಮಿಶ್ರ ಮಾಡಿ ಕುಡಿಯಲು ಕೊಡುವರು. ವಿಷಕಡಿತ ಉಂಟಾದಾಗ ಇಡೀ ಗಿಡವನ್ನು ಉಪಯೋಗಿಸಿ ತೆಗೆದ ರಸವನ್ನು ಕುಡಿಯಲು ಕೊಡುವರು (ಶಿವರಾಜನ್ ಮತ್ತು ಬಾಲಚಂದ್ರನ್, 1996). ಜೀರ್ಣಕ್ರಿಯೆಯನ್ನು ತ್ವರಿತಗೊಳಿಸುವ ಗುಣ ಹೊಂದಿದೆ. ಛತ್ತೀಸ್-ಗಡದಲ್ಲಿ ಕೆಲವು ಪ್ರದೇಶಗಳ ಜನರು ಕಾಡುಪ್ರಾಣಿಗಳ ಮಾಂಸ ಸೇವನೆ ಮಾಡಿದ ಬಳಿಕ ಜೀರ್ಣಕ್ರಿಯೆ ಸರಿಯಾಗಿ ಆಗಲು ಈ ಗಿಡದ ಹಣ್ಣು ಅಥವಾ ಬೇರನ್ನು ತಿನ್ನುವರಂತೆ. ಈ ಗಿಡದ ಗುಣಗಳ ಹಾಗೂ ಉಪಯೋಗಗಳ ಬಗ್ಗೆ ಅನೇಕ ಸಂಶೋಧನೆಗಳು ನಡೆದಿವೆ, ಈಗಲೂ ನಡೆಯುತ್ತಿವೆ ಅನ್ನುವುದು ಸಂತಸದ ವಿಚಾರ.
ಇಷ್ಟೆಲ್ಲಾ ಔಷಧೀಯ ಗುಣಗಳುಳ್ಳ ಹಾಗೆಯೇ ಪೋಷಕಾಂಶಗಳನ್ನು ಹೊಂದಿರುವ ಈ ಕರ್ವೊಳು ಸಸ್ಯವನ್ನು ಉಳಿಸಿ ಬೆಳೆಸುವುದು ಎಲ್ಲರ ಜವಾಬ್ದಾರಿ. ಸುಲಭವಾಗಿ ಬೆಳೆಯುವ ತರಕಾರಿಗಳ ಜೊತೆಯಲ್ಲಿ ಈ ತರಕಾರಿಯನ್ನು ಬೆಳೆಯುವಂತಾದರೆ ಈ ಗಿಡದ ಬಗ್ಗೆ ಮುಂದಿನ ಪೀಳಿಗೆಯವರೂ ಕೂಡಾ ತಿಳಿಯುವಂತಾಗುತ್ತದೆ. ಪ್ರಕೃತಿಯಲ್ಲಿ ಸಿಗುವ ಇಂತಹ ಸಸ್ಯಗಳ ಪೋಷಣೆ ಆಗಲಿ ಅನ್ನುವ ಕಳಕಳಿ.
(ಕೆಲವು ದಿನಗಳ ಹಿಂದೆ, ಕರ್ವೊಳು ಕಾಯಿಗೆ ಕನ್ನಡದಲ್ಲಿ ಏನನ್ನುವರು ಗೊತ್ತಾ ಅಂತ ಕೇಳಲು ನನ್ನ ಬಂಧು ಶ್ವೇತಾಳಿಗೆ ಕರೆ ಮಾಡಿದ್ದೆ. “ನಾನು ಇವತ್ತೇ ಒಂದು ಕಾಯಿ ತಿಂದೆ” ಅಂದ ಶ್ವೇತಾಳ ಬಳಿ ಗಿಡದ ಛಾಯಾಚಿತ್ರ ಕಳುಹಿಸಲು ಕೋರಿಕೊಂಡಿದ್ದೆ. ಅವರ ಮನೆಯ ಹಿತ್ತಿಲಲ್ಲಿ ಬೆಳೆದ ಕರ್ವೊಳು ಗಿಡದ ಚಿತ್ರಗಳನ್ನು ಕಳುಹಿಸಿದ ಶ್ವೇತಾಳಿಗೆ ಈ ಲೇಖನದ ಮೂಲಕ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ)
-ಡಾ. ಕೃಷ್ಣಪ್ರಭ ಎಂ, ಮಂಗಳೂರು
ನಮ್ಮೂರಲ್ಲಿ ಇದನ್ನು ಕಾರೊಲ್ ಎನ್ನುತ್ತಾರೆ. ಹಸಿರಾಗಿ ತಿನ್ನುತ್ತಿದ್ದೆವು ವಿನಹ ಉಪಯೋಗ ತಿಳಿದಿರಲಿಲ್ಲ. ತಿಳಸಿದ್ದಕ್ಕೆ ಧನ್ಯವಾದಗಳು
ನನಗೂ ಮಾಹಿತಿ ಕಲೆ ಹಾಕಿದಾಗಲೇಿ ಇದರ ವಿಚಾರ ಪೂರ್ತಿ ಗೊತ್ತಾಯಿತು. ಮೆಚ್ಚುಗೆಗೆ ಧನ್ಯವಾದಗಳು
ಸೂಪರ್ ಬರಹ
ಮೆಚ್ಚುಗೆಗೆ ಧನ್ಯವಾದಗಳು ಅಕ್ಕ
ಉಪಯುಕ್ತ ಮಾಹಿತಿಯನ್ನು ಒಳಗೊಂಡ ಲೇಖನ ಚೆನ್ನಾಗಿದೆ ಮೇಡಂ ಅದಕ್ಕಾಗಿ ಧನ್ಯವಾದಗಳು.
ಮೆಚ್ಚುಗೆಗೆ
ತುಂಬು ಹೃದಯದ ಧನ್ಯವಾದಗಳು
ನಾವಿದನ್ನು ಕರಗಳ ಕಾಯಿ ಎನ್ನುತ್ತಿದ್ದೆವು. ಕಾಡಿನಲ್ಲಿ ಇದರ ಬಳ್ಳಿ ಎಲ್ಲಿರುತ್ತದೆಂದು ನೆನಪಿಟ್ಟುಕೊಂಡು ಮರು ವರುಷ ಅದೇ ಸೀಸನ್ ನಲ್ಲಿ ಹೋಗಿ ಹುಡುಕಿ ಕೊಯ್ದು ತಿನ್ನು ವಷ್ಟು ಇದರ ರುಚಿ ಕಾಡು ತ್ತಿತ್ತು. ಇದರ ಜತೆಗೆ ನೆನಪಾಗುವ ಹೆಸರು ಪೀರೆಕಾಯಿಯದು. ಆದರೆ ಅದನ್ನು ಹಾಗೆ ತಿನ್ನಲು ಸಾಧ್ಯವಿಲ್ಲ. ಪದಾರ್ಥಗಳನ್ನು ಮಾಡಿಯೇ ತಿನ್ನಬೇಕು. ತುಂಬಾ ರುಚಿ.
ಬರಹ ಕ್ಕಾಗಿ ಅಭಿನಂದನೆ ಗಳು
ಹಿಂದಿನ ವರ್ಷದ ನೆನಪನ್ನು ಇಟ್ಟುಕೊಂಡು ಅದೇ ಜಾಗದಲ್ಲಿ ಹುಡುಕುವುದು. ಕಣ್ಣಿಗೆ ಕಾಣಸಿಕ್ಕಿದರೆ ನಿಧಿ ಸಿಕ್ಕಿದ ಸಂಭ್ರಮ. ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದಗಳು ಮೇಡಂ
wow very interesting
Thank you very much
ನಾವು ಚಿಕ್ಕದಿರುವಾಗ ಮಾತ್ರ ನೋಡಿದ್ದು.ಸದ್ಯ ನೋಡಲಿಲ್ಲ.ನಿಮ್ಮ ಲೇಖನ ಪುನಃ ನೆನಪಿಸಿತು..
ನನಗೂ ತಿನ್ನಲು ಸಿಗದೆ ೨೫ ವರ್ಷಗಳೇ ಕಳೆಯಿತು. ಮೆಚ್ಚುಗೆಗೆ ತುಂಬು ಹೃದಯದ ಧನ್ಯವಾದಗಳು ಅಕ್ಕ
ಇದನ್ನು ನಾವು ಗುರುಗಳ ಕಾಯಿ ಅಂತ ಹೇಳ್ತೇವೆ. ಇದರಲ್ಲಿ ನಮ್ಮ ಅಬ್ಬೆ ಕೂಡಾ ಮಜ್ಜಿಗೆ ಹುಳಿ ಮಾಡುತ್ತಿದ್ದರು.
ತರಹೇವಾರಿ ಹೆಸರುಗಳು ಈ ತರಕಾರಿಗೆ. ಆದರೆ ಅದರ ರುಚಿಯ ಬಗ್ಗೆ ಎಲ್ಲರದೂ ಒಂದೇ ಮಾತು
ಕರುಗಳಕಾಯಿ ಎನ್ನುತ್ತೇವೆ ನಾವು. ನಮ್ಮ ಊರಮನೆಯಲ್ಲಿದೆ. ಮಕ್ಕಳು ಹಸಿಯನ್ನೇ ಕರಂಕುರುಂ ತಿನ್ನುತ್ತಾರೆ. ಚಂದದ ಬರಹ.
ಕಿರಿಯರಿಂದ ಹಿಡಿದು ಹಿರಿಯರ ತನಕವೂ ಇದನ್ನು ಹಸಿಯಾಗಿ ತಿನ್ನುವವರೇ. ಮೆಚ್ಚುಗೆಗೆ ಧನ್ಯವಾದಗಳು
ಕಾಯಿಯ ಬಗ್ಗೆ ಒಳ್ಳೆಯ ಮಾಹಿತಿ ಪ್ರಭಾ
ಮೆಚ್ಚುಗೆಗೆ ಧನ್ಯವಾದಗಳು
ಉಪಯುಕ್ತ ಲೇಖನ
ಮೆಚ್ಚುಗೆಗೆ ಧನ್ಯವಾದಗಳು ಮೇಡಂ
ಕರುಗಳ ಕಾಯಿಯ ಮಹಿಮೆಯನ್ನು ತಿಳಿಯಪಡಿಸಿದ ಲೇಖನ ಬಹಳ ಉಪಯುಕ್ತ… ಧನ್ಯವಾದಗಳು. ನಮ್ಮ ಹಿತ್ತಿಲಲ್ಲಿರುವುದನ್ನು ನಾವು ಉಪಯೋಗಿಸುತ್ತೇವೆ…ಭಾರೀ ರುಚಿ!
ಮೆಚ್ಚುಗೆಗೆ ಧನ್ಯವಾದಗಳು ಮೇಡಂ ಆದರೆ ಅದರ ರುಚಿಯ ಬಗ್ಗೆ ಎರಡು ಮಾತೇ ಇಲ್ಲ
ಇವತ್ತು ಹೀಗೆಯೇ ಬಹಳಷ್ಟು ನಮ್ಮ ಸುತ್ತಮುತ್ತಲು ಇರುತಿದ್ದ ಔಷಧೀಯ ಗುಣವುಳ್ಳ ಗಿಡ, ಹಣ್ಣು, ತರಕಾರಿಗಳು ಮಾಯವಾಗಿದೆ. ಕೆಲವೆಲ್ಲ ಬರೀ ನೆನಪು ಮಾತ್ರ. ಬಹಳ ಚಂದದ ಲೇಖನ ಮೇಡಂ.
ಈಗಿರುವ ಹಾಗೂ ಮುಂದಿನ ಪೀಳಿಗೆಯವರೂ ತಿಳಿಯುವಂತಾಗಲಿ ಅನ್ನುವ ಸದಾಶಯ. ಮೆಚ್ಚುಗೆಗೆ ಧನ್ಯವಾದಗಳು ನಯನಾ
ಇದಕ್ಕೆ ಕರಗಲಕಾಯಿ ಅನ್ನುತ್ತಿದ್ದೆವು. ಬಾಲ್ಯದಲ್ಲಿ ತಿಂದ ನೆನಪಿದೆ. ಚೆಂದದ ಬರಹ.
ಚಂದದ ಶೀರ್ಷಿಕೆ ನೀಡಿ ಲೇಖನ ಪ್ರಕಟಿಸಿ, ಮೆಚ್ಚುಗೆ ವ್ಯಕ್ತಪಡಿಸಿದ ನಿಮಗೆ ಅನಂತ ಧನ್ಯವಾದಗಳು ಅಕ್ಕ
ಕರೋಳು ತಿಂದ ನೆನಪು ಮಾಡಿದ್ದಕ್ಕೆ ಧನ್ಯವಾದಗಳು . ತುಂಬಾ ಮಾಹಿತಿ ಕೊಟ್ಟಿದ್ದೀರಿ
ನೆನಪು ಬರಲಿ, ಗಿಡದ ಬಗ್ಗೆ ಹೆಚ್ಚಿನವರಿಗೆ ಅರಿವು ಮೂಡಲಿ ಅನ್ನುವ ಸಣ್ಣ ಆಸೆ. ಮೆಚ್ಚುಗೆಗೆ ಧನ್ಯವಾದಗಳು
ಔಷಧೀಯ ಸಸ್ಯ ಪರಿಚಯಿಸಿದ ತಮಗೆ ಧನ್ಯವಾದಗಳು.