ಗುಜರಾತ್ ಮೆ ಗುಜಾರಿಯೇ..ಹೆಜ್ಜೆ 22: ಏಕತಾ ಪ್ರತಿಮೆ
ಗುಜರಾತಿನ ಪ್ರವಾಸಿ ತಾಣಗಳಿಗೆ ಇತ್ತೀಚಿನ ಸೇರ್ಪಡೆ ಕವಾಡಿಯಾದಲ್ಲಿರುವ ‘ಏಕತಾ ಪ್ರತಿಮೆ’ . ಭಾರತದ ಏಕತೆಗಾಗಿ ದುಡಿದ ಉಕ್ಕಿನ ಮನುಷ್ಯ ಸರ್ದಾರ ವಲ್ಲಭ್ ಭಾಯಿ ಪಟೇಲ್ ಅವರ 182 ಮೀಟರ್ ಎತ್ತರದ ಪ್ರತಿಮೆಯನ್ನು 2018 ರ ಒಕ್ಟೋಬರ್ 30 ರಂದು, ಅವರ 142 ನೇ ಹುಟ್ಟುಹಬಬ್ದ ದಿನದಂದು ಉದ್ಘಾಟಿಸಲಾಯಿತು. ಇದು ಪ್ರಪಂಚದ ಅತಿ ಎತ್ತರದ ಪ್ರತಿಮೆ ಎಂಬ ಹೆಗ್ಗಳಿಕೆಯನ್ನು ಪಡೆದಿದೆ.
ಅಹ್ಮದಾಬಾದ್ ನಿಂದ ಹೊರಟು, ಉತ್ತಮವಾದ ಬರೋಡಾ ಎಕ್ಸ್ ಪ್ರೆಸ್ ರಸ್ತೆ ( 90 ಕಿ.ಮಿ) ಮೂಲಕ ಹಾದುಹೋಗಿ ವಡೋದರ ತಲಪಿದೆವು. ಕವಾಡಿಯ ಎಂಬಲ್ಲಿ ವರೆಗೆ ಖಾಸಗಿ ವಾಹನಗಳಿಗೆ ಅನುಮತಿ ಇದೆ.ಆಲ್ಲಿಂದ ಪ್ರತಿಮೆಯ ವರೆಗೆ ಅವರ ಬಸ್ಸಿನಲ್ಲಿ ಪ್ರಯಾಣ.
ನರ್ಮದಾ ನದಿ ದಡದಲ್ಲಿರುವ ಏಕತಾ ಪ್ರತಿಮೆಯು 182 ಮೀಟರ್ ಎತ್ತರ್ವಿದ್ದು ಪ್ರಪಂಚದ ಅತಿ ಎತ್ತರದ ಏಕ ಪ್ರತಿಮೆಯಾಗಿದೆ. ರೂ.120/- ಟಿಕೆಟ್ ಬೆಲೆ ಕೊಟ್ಟು ಏಕತಾ ಪ್ರತಿಮೆಯನ್ನು ಪ್ರವೇಶಿಸಬಹುದು. ನೆಲಮಟ್ಟದಲ್ಲಿ ಮ್ಯೂಸಿಯಂ ಇದೆ. ಮ್ಯೂಸಿಯಂನಲ್ಲಿ, ಪ್ರತಿಮೆಯ ರಚನೆಯ ವಿವಿಧ ಹಂತಗಳ ಅದ್ಭುತವಾದ ಇಂಜಿನಿಯರಿಂಗ್ ಕೌಶಲದ ಹಿನ್ನೋಟ, ಬಳಸಲಾದ ವಸ್ತುಗಳ ಬಗ್ಗೆ ಮಾಹಿತಿ ಇತ್ಯಾದಿ ಇವೆ. ಪ್ರತಿಮೆಯ ಪಾದ ತಲಪಲು ಎರಡನೆಯ ಮಹಡಿಗೆ ಹೋಗಬೇಕು. ಇಲ್ಲಿಗೆ ಹೋಗಿ ಪ್ರತಿಮೆಯ ಪಾದದ ಬಳಿ ಫೋಟೊ ತೆಗೆಯಲು ಅನುಕೂಲವಿದೆ.
ಭವ್ಯವಾದ ಏಕತಾ ಪ್ರತಿಮೆಯನ್ನು ತಲಪಲು ಎಲೆವೇಟರ್ ಗಳಿವೆ. ಪ್ರತಿಮೆಯ ಎದೆ ಭಾಗದಲ್ಲಿ ( 45 ನೆಯ ಮಹಡಿ) ವೀಕ್ಷಣಾ ಸ್ಥವಿದೆ. ಲಿಫ್ಟ್ ನಲ್ಲಿ ಹೋಗಬೇಕು. ಪ್ರತಿಮೆಯ ಒಳಗಡೆ ಮ್ಯೂಸಿಯಂ, ರೆಸ್ಟಾರೆಂಟ್ ಗಳಿವೆ. ಲಿಫ್ಟ್ ಮೂಲಕ ೪೫ ನೇ ಮಹಡಿಯ ವರೆಗೆ ಪ್ರವಾಸಿಗರು ಹೋಗಬಹುದು. ಅದು ಪ್ರತಿಮೆಯ ವಕ್ಷಭಾಗವಾಗಿದೆ. ಅಲ್ಲಿಂದ ಸುತ್ತುಮುತ್ತಲು ನೋಡಲು ಅವಕಾಶವಿದೆ.
ಏಕತಾ ಪ್ರತಿಮೆಯನ್ನು ವೀಕ್ಷಿಸಿ, ವಲ್ಲಭಭಾಯಿ ಪಟೇಲ್ ಅವರಿಗೆ ನಮಿಸಿ, ಹೊರಟೆವು. ಅಲ್ಲಿಗೆ ನಮ್ಮ ಗುಜರಾತ್ ಪ್ರವಾಸದ ನಿಗದಿತ ವೇಳಾಪಟ್ಟಿ ಮುಗಿದಿತ್ತು. ಅಹ್ಮದಾಬಾದ್ ಗೆ ಹಿಂತಿರುಗಿ, ಹೋಟೆಲ್ ನಲ್ಲಿ ಊಟೋಪಚಾರ ಮುಗಿಸಿದೆವು. ಅಂದು ನಮ್ಮ ಪ್ರವಾಸದ ಕೊನೆಯ ದಿನವಾಗಿತ್ತು.
ನಮ್ಮ 10 ದಿನಗಳ ಪ್ರವಾಸವನ್ನು ಅಚ್ಚುಕಟ್ಟಾಗಿ, ಕಾಳಜಿಯಿಂದ ನಿರ್ವಹಿಸಿದ ಟ್ರಾವೆಲ್ಸ್4ಯು ತಂಡದ ಟೂರ್ ಮ್ಯಾನೇಜರ್ ಶ್ರೀ ಗಣೇಶ್ ಹಾಗೂ ನಮಗೆ ಶುಚಿ-ರುಚಿಯಾಗಿ ಅಡುಗೆ ಮಾಡಿ ಬಡಿಸುತ್ತಿದ್ದ ಅಡುಗೆಯ ತಂಡದವರನ್ನು ಅಭಿನಂದಿಸಿ ಧನ್ಯವಾದ ಸಮರ್ಪಿಸಿದೆವು. 10 ದಿನಗಳ ಒಡನಾಟದಲ್ಲಿ ಪರಿಚಿತರಾಗಿದ್ದ ಸಹಪ್ರವಾಸಿಗರಿಂದ ಬೀಳ್ಕೊಂಡೆವು. ಮರುದಿನ ಪ್ರವಾಸದ ಸವಿನೆನಪುಗಳೊಂದಿಗೆ, ಅವರವರ ವಿಮಾನ/ರೈಲಿನ ಟಿಕೆಟ್ ಸಮಯಕ್ಕೆ ತಕ್ಕಂತೆ ಹೊರಟು ಗುಜರಾತ್ ಗೆ ವಿದಾಯ ಹೇಳಿದೆವು.
ಇದುವರೆಗೆ 22 ಕಂತುಗಳಲ್ಲಿ ಹರಿದುಬಂದ ‘ಗುಜರಾತ್ ಮೆ ಗುಜಾರಿಯೆ’ ಪ್ರವಾಸಕಥನವನ್ನು ಓದಿ, ಪ್ರೋತ್ಸಾಹಿಸಿದ ತಮಗೆಲ್ಲರಿಗೂ ಧನ್ಯವಾದಗಳು.
(ಮುಗಿಯಿತು)
ಈ ಪ್ರವಾಸಕಥನದ ಹಿಂದಿನ ಹೆಜ್ಜೆ ಇಲ್ಲಿದೆ : http://surahonne.com/?p=32062
– ಹೇಮಮಾಲಾ.ಬಿ
ಗುಜರಾತ್ ನ ಪ್ರವಾಸ ಕಥನ ಬಹಳ ಸೊಗಸಾಗಿ ಮೂಡಿ ಬಂತು.
it has come out very well. congrats.
ನಾನು ಗುಜರಾತಿನ ಪ್ರವಾಸ ಮಾಡಿದ್ದೆನಾದರೂ ನೀವು ಬರೆದ ಪ್ರವಾಸ ಕಥನ ಓದುತ್ತಾ ಮತ್ತೊಮ್ಮೆ ಪ್ರವಾಸ ಮಾಡಿದಂತೆ ಆಯಿತು.ನೀವು ಮಾಡಿದ ಪ್ರವಾಸ ಕಥನ ಆಕರ್ಷಕವಾದ ನಿರೊಪಣೆಯನ್ನು ಹೊಂದಿತ್ತು. ಪ್ರವಾಸದ ಕಥನವನ್ನು ಬಿಡಿಸಿ ಓದುಗರಿಗೆ ಹೇಳುವ ರೀತಿ ನಿಮಗೆ ಸಿದ್ಧಿಸಿದೆ ಗೆಳತಿ ಹೇಮಾ ಅಭಿನಂದನೆಗಳು.
ನಾವು ಗುಜರಾತಿಗೆ ಭೇಟಿ ನೀಡಿದಾಗ ಏಕತಾ ಪ್ರತಿಮೆ ಇರಲಿಲ್ಲ. ನಿಮ್ಮ ಲೇಖನ ಓದಿ ನೋಡಿದ ಹಾಗೆ ಆಯಿತು ವಂದನೆಗಳು
ಪ್ರವಾಸಕಥನವನ್ನು ಓದಿ, ಸುರಹೊನ್ನೆಯನ್ನು ಮೆಚ್ಚಿ, ನಿರಂತರವಾಗಿ ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು.
ಉಕ್ಕಿನ ಮನುಷ್ಯ ಎಂದೇ ಹೆಸರಾಗಿರುವ ಸರ್ದಾರ ವಲ್ಲಭ ಭಾಯಿ ಪಟೇಲ್ ಅವರ, ಜಗತ್ತಿನಲ್ಲೇ ಅತಿ ಎತ್ತರದ ಉಕ್ಕಿನ ಪ್ರತಿಮೆಯು ನಮ್ಮ ದೇಶದ ಹೆಮ್ಮೆ. ಸೊಗಸಾದ ನಿರೂಪಣಾ ಶೈಲಿಯಿಂದ ಹಾಗೂ ಪೂರಕ ಚಿತ್ರಗಳಿಂದ ಪೂರ್ತಿ ಪ್ರವಾಸ ಕಥನವು ಮನ ಸೂರೆಗೊಂಡುದು ಸುಳ್ಳಲ್ಲ. ಲೇಖಕಿ ಹೇಮಮಾಲಾ ಅವರಿಗೆ ಧನ್ಯವಾದಗಳು
ನಾವುಗಳು ಗುಜರಾತಿನಲ್ಲಿ ಎಂಟು ವರುಷಗಳು ವಾಸವಾಗಿದ್ದರೂ, ಗಾಯತ್ರಿಯವರಂದಂತೆ ಆಗ ಏಕತಾ ಪ್ರತಿಮೆ ಇರಲಿಲ್ಲ. ವರ್ಣನೆ ಮಾಹಿತಿಪೂರ್ಣವಾಗಿ, ಹೋಗಿ ನೋಡುವ ಮನಸ್ಸಾಗುತ್ತಿದೆ. ಲೇಖನ ಆಸಕ್ತಿ ಹುಟ್ಟಿಸುವಂತಿದೆ. ಅಭಿನಂದನೆಗಳು.
ಮೆಚ್ಚುಗೆಗಾಗಿ ಧನ್ಯವಾದಗಳು.