ಕವಿ ನೆನಪು 26: ಬಸರಿಕಟ್ಟೆಯ ಎಚ್ ವಿ ಮಹಾಬಲಯ್ಯನವರ ಆತ್ಮೀಯ ಆತಿಥ್ಯ

Share Button

ಕವಿ ಕೆ ಎಸ್ ನ

ಕೆಲವು ಸಾರಿ ನಮ್ಮ ತಂದೆಯವರಿಗೆ ಬರುತ್ತಿದ್ದ ಆಹ್ವಾನ ನಿಗೂಢವಾಗಿ ಇರುತ್ತಿತ್ತು. ಬಹುಪಾಲು ಮಂದಿ ನಮ್ಮ ತಂದೆಯವರ ಬಗ್ಗೆ ,ಅವರ ಕವನಗಳ ಕೇಳಿರುತ್ತಿದ್ದರು ಅಷ್ಟೆ. ಹಾಗೆ ಒಬ್ಬ ಯುವಕ ಮನೆಗೆ ಬಂದ. ತಾನು ಭಾರತೀಯ ಅರ್ಥಶಾಸ್ತ್ರ ಸೇವೆ ಉತ್ತೀರ್ಣರಾಗಿ ಈಗ ದೆಹಲಿಯಲ್ಲಿ ಇರುವುದಾಗಿಯೂ, ಅವರ ತಂದೆಯವರು ನಮ್ಮ ತಂದೆ ತಾಯಿಗಳನ್ನು ಅವರ ಊರಿಗೆ ಬರಲು ಆಹ್ವಾನಿಸಿದ್ದಾರೆಂದೂ ತಿಳಿಸಿದ.

ನಮ್ಮ ತಂದೆ “ಯಾವುದು ನಿಮ್ಮ ಊರು?ನಿಮ್ಮ ತಂದೆ ಏನು ಮಾಡುತ್ತಿದ್ದಾರೆ? ನಮ್ಮನ್ನು ಆಹ್ವಾನಿಸಲು ಕಾರಣವೇನು? ಎಂದು ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದರು.

ಆ ಯುವಕ “ನಮ್ಮದು ಕೊಪ್ಪ ತಾಲೂಕು ಬಸರಿಕಟ್ಟೆ. ನಮ್ಮ ತಂದೆ ಎಚ್ ವಿ ಮಹಾಬಲಯ್ಯ. ಅಲ್ಲಿ ಕಾಫಿ ಎಸ್ಟೇಟ್  ಹೊಂದಿದ್ದಾರೆ.  ಹಾಗೂ ಬಹಳ ಸಾಹಿತ್ಯಾಸಕ್ತರು. ಪ್ರತಿ ವರ್ಷ ಪ್ರಸಿದ್ಧ ಸಾಹಿತಿಗಳನ್ನು ಕರೆದು  ಅತಿಥಿಗಳಾಗಿ  ವಾರಗಟ್ಟಳೆ ಉಳಿಸಿಕೊಂಡು, ಸಾಹಿತ್ಯ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾರೆ. ಶಿವರಾಮ ಕಾರಂತ ,ದ ರಾ ಬೇಂದ್ರೆ, ಜಿ ಪಿ ರಾಜರತ್ನಂ ಮುಂತಾದವರು ಇದುವರೆಗೆ ಬಂದಿದ್ದಾರೆ “ಎಂದರು.
.
ನಿಗೂಢತೆ  ಈಗ ಸ್ವಲ್ಪ ತಿಳಿಯಾಯಿತು. ನಮ್ಮ ತಂದೆ “ಅಲ್ಲಿಗೆ ಬರೋದು ಹೇಗಪ್ಪ? ಎಂದು ಪ್ರಶ್ನಿಸಿದರು.

“ನೀವು ಶೃಂಗೇರಿಗೆ ಬಂದು ಬಿಡಿ. ದೇವಸ್ಥಾನದ ಹತ್ತಿರ ನಮ್ಮ ಜೀಪ್ ಬರುತ್ತದೆ. ವಾಪಸು ಬರುವಾಗಲೂ ಅಷ್ಟೆ. ಶೃಂಗೇರಿ ತಲುಪಿಸಿ ಅಲ್ಲಿಂದ ಬಸ್ ಟಿಕೆಟ್ ವ್ಯವಸ್ಥೆಯೂ ನಮ್ಮದು.”

ಎಚ್ ವಿ ಮಹಾಬಲಯ್ಯನವರೂ ಅಪ್ರತಿಮ  ಸಾಹಿತ್ಯಾಸಕ್ತರಾಗಿದ್ದರು..ಹೇರೂರು ಮೆನನ್ (ಆ ಹೆಸರು ಏಕೋ ತಿಳಿಯದು!)  ಎಂಬ ಕಾವ್ಯನಾಮದಲ್ಲಿ ಕಿರುಗವನಗಳನ್ನು ಬರೆದು ಒಂದು ಸಂಕಲನ ಪ್ರಕಟಿಸಿದ್ದರು.

ಯೋಜನೆಯಂತೆ ನಮ್ಮ ತಂದೆ ತಾಯಿ ಶೃಂಗೇರಿಗೆ ತಲುಪಿದರು.ಅಲ್ಲಿ ಸ್ವತಃ ಎಚ್ ವಿ ಮಹಾಬಲಯ್ಯನವರೇ ಬಂದು  ಅವರನ್ನು ಬಸರಿಕಟ್ಟೆಗೆ ಕರೆದುಕೊಂಡು ಹೋದರು. ವಾರದಕಾಲ ನಮ್ಮ ತಂದೆ ತಾಯಿಯವರನ್ನು  ತಮ್ಮ ಹತ್ತಿರದ ನೆಂಟರೇನೋ ಎಂಬ ಅಕ್ಕರೆಯಿಂದ,  ಅವರ ಇಡೀ ಕುಟುಂಬವರ್ಗದವರು ಉಪಚರಿಸಿದರು. ಸ್ಥಳೀಯ ಸಂಘ, ಸಂಸ್ಥೆಗಳಲ್ಲಿ ಕವಿಗೋಷ್ಠಿ, ತಮ್ಮ ಬಂಧುವರ್ಗ, ಎಸ್ಟೇಟ್ ಸಿಬ್ಬಂದಿ ಮುಂತಾದವರೊಡನೆ ಸಂವಾದ ಇತ್ಯಾದಿ ಸಾರ್ಥಕ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಯುಕ್ತ ಗೌರವಗಳೊಡನೆ, ಭಾರವಾದ ಹೃದಯದೊಡನೆ ಬೀಳ್ಕೊಟ್ಟರು.

ಎಚ್ ವಿ ಮಹಾಬಲಯ್ಯನವರದು  ಕೇವಲ ಆಡಂಬರದ ನಡವಳಿಕೆಯಾಗಿರಲಿಲ್ಲ. ತಮ್ಮ ಮಗಳ ವರಾನ್ವೇಷಣೆ ಮತ್ತು ಇತರ ಕಾರ್ಯನಿಮಿತ್ತ ಬೆಂಗಳೂರಿಗೆ ಬಂದಾಗ ನಮ್ಮ ಸಣ್ಣ ಮನೆಯಲ್ಲೇ ವಾಸ್ತವ್ಯ ಹೂಡಿ, ಆತಿಥ್ಯವನ್ನು ಸಂಭ್ರಮಿಸುತ್ತಿದ್ದರು.  ವಾಮನಾಕಾರದ ಎಚ್ ವಿ ಮಹಾಬಲಯ್ಯನವರನ್ನು ಯಾರಾದರೂ ನೋಡಿದರೆ ಇವರು ಶ್ರೀಮಂತರೇ ಎಂದು ಅನುಮಾನಿಸಿವಂತಿತ್ತು ಅವರ ಸರಳ ಸಜ್ಜನಿಕೆ.

ದುರದೃಷ್ಟ ಅವರು ತಮ್ಮ 56 ನೆಯ ವಯಸ್ಸಿನಲ್ಲೇ ತೀರಿಕೊಂಡರು. ಅಂದು ಆಕಸ್ಮಿಕ ಸ್ನೇಹವಾದರೂ ಇಂದೂ ಅವರ ಕುಟುಂಬದ ಸದಸ್ಯರು ನಮ್ಮೊಂದಿಗೆ  ಮಧುರ ಬಾಂಧವ್ಯ ಇರಿಸಿಕೊಂಡಿದ್ದಾರೆ.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:http://surahonne.com/?p=30697

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

2 Responses

  1. ನಯನ ಬಜಕೂಡ್ಲು says:

    ವಾಹ್ ಇಂತಹ ಸಾಹಿತ್ಯ ಪ್ರೇಮಿಗಳೂ ಇದ್ರ????

  2. ಶಂಕರಿ ಶರ್ಮ, ಪುತ್ತೂರು says:

    ಹಿರಿಯ ಕವಿಗಳ ಜೀವನದ ಸುಂದರ ಘಟನೆಗಳು, ಅವರ ಒಡನಾಡಿಗಳಾಗಿದ್ದ ಹಿರಿಯ ವ್ಯಕ್ತಿಗಳ ಪರಿಚಯದ ಈ ಲೇಖನಮಾಲೆ ಸೊಗಸಾಗಿದೆ..ಮಹಾಬಲಯ್ಯನವರ ಅಗಾಧ ಸಾಹಿತ್ಯಪ್ರೇಮ ಮೆಚ್ಚುವಂತಹುದು. ಸೊಗಸಾದ ಲೇಖನಮಾಲೆ..ಧನ್ಯವಾದಗಳು ಸರ್.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: