ಕವಿ ಕೆ.ಎಸ್.ನ ನೆನಪು

ಕವಿನೆನಪು 23 :ಅಂಕಣಕಾರ,ವಾಣಿಜ್ಯ ಬೋಧಕ ಪ್ರಾ ಎಚ್ಚೆಸ್ಕೆಯವರ ಸಖ್ಯ

Share Button
ಕವಿ ಕೆ ಎಸ್ ನ

ಪ್ರಾ ಎಚ್ಚೆಸ್ಕೆಯವರ ಗದ್ಯಶೈಲಿಯನ್ನು ಅವರ ಸುಧಾ ವಾರಪತ್ರಿಕೆಗಳ ಬರಹಗಳ ಮೂಲಕ ಮೆಚ್ಚಿದ ನಮ್ಮತಂದೆಯವರು ಇದೂ ಗದ್ಯರೂಪದ ಕಾವ್ಯವೇ ಎಂದಿದ್ದರು.ವಾರದ ವ್ಯಕ್ತಿ ಅಂಕಣದಲ್ಲಿ ಎಚ್ಚೆಸ್ಕೆಯವರು ತಮ್ಮಬಗ್ಗೆ ಬರೆದುದನ್ನು ಅಭಿಮಾನದಿಂದ ಸ್ಮರಿಸುತ್ತಿದ್ದರು.

ಎಚ್ಚೆಸ್ಕೆಯವರು1969ರಲ್ಲಿ ಒಮ್ಮೆ ಬೆಂಗಳೂರಿನ ಜಯನಗರದ ಮಾಧವನ್ ಪಾರ್ಕ್ ಬಳಿ ಇದ್ದ ನಮ್ಮ ಮನೆಗೆ ಅನಿರೀಕ್ಷಿತವಾಗಿ ಬಂದು ಸಂತಸ ಉಂಟು ಮಾಡಿದ ಸನ್ನಿವೇಶ ಚಿರಸ್ಮರಣೀಯ. ಸುಧಾ ವಾರಪತ್ರಿಕೆ ಕಛೇರಿಗೆ ಹೋಗಿ ನಮ್ಮ ತಂದೆಯವರ ವಿಳಾಸ ಕೇಳಿದಾಗ, ಸಂಪಾದಕರು ಅಲ್ಲಿಯೇ ಮುದ್ರಣ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಮ್ಮ ಅಣ್ಣ ಹರಿಹರನನ್ನು ಅವರಿಗೆ  ಪರಿಚಯಿಸಿದರು. ಎಚ್ಚೆಸ್ಕೆಯವರು ನಮ್ಮ ಮನೆಗೆ ಬರುವ ಅಭಿಲಾಷೆ ವ್ಯಕ್ತಪಡಿಸಿದಾಗ,ನಮ್ಮ ಅಣ್ಣ ಅವರನ್ನು ಮನೆಗೆ ಕರೆದುಕೊಂಡು ಬಂದರು.

ನಮ್ಮ ತಂದೆ ಅವರನ್ನು ಸಂತಸದಿಂದ ಬರಮಾಡಿಕೊಂಡು “ರಾತ್ರಿ ಊಟ ಇಲ್ಲೇ ಮಾಡಿಕೊಂಡು ಹೋಗಿ” ಎಂದು ಆಗ್ರಹಿಸಿದರು. ಎಚ್ಚೆಸ್ಕೆಯವರು ತಮ್ಮ ಎಂದಿನ ಸಂಕೋಚದಿಂದಲೇ ಸಮ್ಮತಿಸಿದರು. ನಂತರ ಅವರು ಜೇಬಿನಿಂದ ಒಂದು ಪುಟ್ಟ ಪುಸ್ತಕ ತೆಗೆದು ನಮ್ಮ ತಂದೆಯವರ ಹುಟ್ಟಿದ ದಿನ, ಬಾಲ್ಯ, ತಂದೆ ತಾಯಿ ವಿವರ, ವಿದ್ಯಾಭ್ಯಾಸ ವೃತ್ತಿ ಹೀಗೆ ಪ್ರತಿಯೊಂದರ ವಿವರ ಕೇಳಿ ಪಡೆದು, ಸರಸರನೆ ಬರೆದುಕೊಂಡು, ಪುಸ್ತಕ ತಮ್ಮ ಜೇಬಿಗಿರಿಸಿಕೊಂಡು, ಮಾತುಕತೆ ಮುಂದುವರಿಸಿದರು. ನಾನು ಬಾಗಿಲ ಸಂದಿಯಿಂದ ಕುತೂಹಲದಿಂದ ಇಣುಕಿ ನೋಡುತ್ತಿದ್ದೆ. ನಾನು ಸುಧಾ ಪತ್ರಿಕೆಯನ್ನು ಆರಂಭದ ಸಂಚಿಕೆಯಿಂದ ಓದುತ್ತಿದ್ದೆ. ವಾರದ ವ್ಯಕ್ತಿ ಅಂಕಣದಲ್ಲಿ ಎಚ್ಚೆಸ್ಕೆಯವರ ಹೆಸರಿರುತ್ತಿತ್ತು. ಆದರೆ ವಾರದಿಂದ ವಾರಕ್ಕೆ ಅಂಕಣದಲ್ಲಿ ಸಮದರ್ಶಿ ಎಂದಿರುತ್ತಿತ್ತು. ಅದೂ ಎಚ್ಚೆಸ್ಕೆಯವರೇ ಎಂದು ನಮ್ಮ ಅಣ್ಣ ತಿಳಿಸಿದ್ದ. ಪ್ರಾಚಾರ್ಯರು ಮಾಹಿತಿಗಳನ್ನು ಹೀಗೆ ವ್ಯಕ್ತಿಗಳ ಮುಖತಃ ಭೇಟಿಯಲ್ಲಿ ಹಾಗೂ ಬಲ್ಲ ಎಲ್ಲ ಮೂಲಗಳಿಂದ ಸಂಗ್ರಹಿಸಿ ಬರವಣಿಗೆಗೆ ಬಳಸುತ್ತಿದ್ದರು.

ಅಂದಿನ ಊಟವೂ ತೀರಾ ಸರಳವೇ. ಅನ್ನ, ಸಾರು, ಮಜ್ಜಿಗೆ, ಕೋಸಂಬರಿ ಅಷ್ಟೆ. ಈ ವಿಷಯವನ್ನು ಅಮ್ಮ ಸಂಕೋಚದಿಂದ ತಿಳಿಸಿದಾಗ ಅವರು “ಇಲ್ಲ,ಅಡುಗೆ ಅಮೃತ ಸಮಾನವಾಗಿತ್ತು” ಎಂದು ತಮ್ಮ ದೊಡ್ಡತನ ಮೆರೆದರು. ಮುಂದೊಮ್ಮೆ ನಾನು ಅವರನ್ನು ಭೇಟಿಯಾದಾಗಲೂ ಪ್ರಾಚಾರ್ಯರು ಅಂದಿನ ನಮ್ಮ ಮನೆಯ ಅಲ್ಪಾತಿಥ್ಯವನ್ನು ನೆನಪಿಸಿಕೊಂಡಿದ್ದರು.

ಪ್ರಾ ಎಚ್ಚೆಸ್ಕೆ

ನಮ್ಮ ತಂದೆ ಪ್ರಾಚಾರ್ಯರ ಜತೆ ಮೈಸೂರಿನಲ್ಲಿ ಒಂದು ಸಮಾರಂಭದಲ್ಲಿ ಭಾಗವಹಿಸಿದ್ದಾಗ ನನ್ನ ಬಗ್ಗೆ ವಿಚಾರಿಸಿದರಂತೆ.(ಅವರು ಮುನ್ನಡೆಸಿದ್ದ ಬ್ಯಾಕಿಂಗ್ ಕಮ್ಮಟ,ಬ್ಯಾಂಕಿಂಗ್ ಪ್ರಪಂಚ ಪತ್ರಿಕೆಯ ಕೆಲಸಗಳಿಗೆ ಅವರ ಮಾರ್ಗದರ್ಶನದಲ್ಲಿ ತೊಡಗಿಕೊಂದಾಗ ನನಗೆ ಅವರ  ನಿಕಟ ಪರಿಚಯವಾಗಿತ್ತು). ಮನೆಗೆ ಬಂದಾಗ ತಂದೆಯವರು “ಎಚ್ಚೆಸ್ಕೆಯವರು ನಿನ್ನ ಬಗ್ಗೆ ಕೇಳಿದರು. ಅವರು ನಿನಗೆ ಹೇಗೆ ಗೊತ್ತು?’ಎಂದು ಕೇಳಿದರು.

ನಾನು ಬ್ಯಾಕಿಂಗ್ ಕಮ್ಮಟ, ಬ್ಯಾಂಕಿಂಗ್ ಪ್ರಪಂಚಗಳ ವಿಷಯ ತಿಳಿಸಿದೆ. ಎಚ್ಚೆಸ್ಕೆಯವರೂ ಅಷ್ತೆ. ಪ್ರತಿ ಬಾರಿ ಭೇಟಿಯಾದಾಗಲೂ ಅವರು ಕೇಳುತ್ತಿದ್ದ ಮೊದಲ ಪ್ರಶ್ನೆ ”ತಂದೆಯವರು ಹೇಗಿದ್ದಾರೆ.” ಎಂದೇ. ಹೆಚ್ಚು ಬಾರಿ ಭೇಟಿಯಾಗದಿದ್ದರೂ ಇಬ್ಬರೂ ಪರಸ್ಪರ ಗೌರವಪೂರ್ಣ ಸ್ನೇಹಭಾವ ಹೊಂದಿದ್ದರು.

(ಮುಂದುವರಿಯುವುದು….)

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:   http://surahonne.com/?p=30448

-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು)

3 Comments on “ಕವಿನೆನಪು 23 :ಅಂಕಣಕಾರ,ವಾಣಿಜ್ಯ ಬೋಧಕ ಪ್ರಾ ಎಚ್ಚೆಸ್ಕೆಯವರ ಸಖ್ಯ

  1. ಹಿರಿಕವಿಗಳ ಜೀವನಗಾಥೆಯ ಸರಣಿ ಬರಹವು ಅವರ ಹಿರಿಯ ಒಡನಾಡಿಗಳ ಬಗೆಗೂ ತಿಳಿಯುವ ಅವಕಾಶವನ್ನು ಕಲ್ಪಿಸಿದೆ…ತುಂಬಾ ಧನ್ಯವಾದಗಳು ಸರ್.

  2. ತಮ್ಮ ಲೇಖನ ಸರಣಿಯ ಮೂಲಕ ನಾವು ಹಲವಾರು ಖ್ಯಾತ ಸಾಹಿತಿಗಳ, ವಿದ್ವಾಂಸರ ಬಗ್ಗೆ ಕಿಂಚಿತ್ತಾದರೂ ತಿಳಿದುಕೊಳ್ಳಲು ಸಾಧ್ಯವಾಗುತ್ತಿದೆ. ತಮಗೆ ಧನ್ಯವಾದಗಳು

Leave a Reply to ಶಂಕರಿ ಶರ್ಮ, ಪುತ್ತೂರು Cancel reply

 Click this button or press Ctrl+G to toggle between Kannada and English

Your email address will not be published. Required fields are marked *