ಶಾಂತಿಯನ್ನೆಲ್ಲಿ ಹುಡುಕೋಣ..!??
ಸಂಘಜೀವಿಯಾದ ಮಾನವನಿಗೆ ತನ್ನ ಸಮಾಜದಲ್ಲಿ ಬದುಕಲು ಬೇಕಾದುದೆಲ್ಲವೂ ಈ ಪ್ರಕೃತಿಯಲ್ಲಿ ಧಾರಾಳವಾಗಿ ಲಭ್ಯವಿದೆ. ಆದರೂ ಅತ್ಯಂತ ಸ್ವಾರ್ಥ ನಡವಳಿಕೆಯು ಆತನಲ್ಲಿ ಹಾಸುಹೊಕ್ಕಾಗಿರುವುದು ವಿಪರ್ಯಾಸ. ಆದ್ದರಿಂದ, ಪರಸ್ಪರ ವೈಮನಸ್ಸಿನ ಭಾವನೆಯನ್ನು ಮನಸ್ಸಲ್ಲಿ ತುಂಬಿಕೊಂಡು, ಕ್ಲೇಶದಿಂದ ಜೀವಿಸುವುದನ್ನು ಎಲ್ಲೆಲ್ಲೂ ಕಾಣಬಹುದು. ಅಸೂಯೆ, ಅಸಮಾಧಾನ, ಅನ್ಯಾಯ, ಮೋಸ, ದುರಾಸೆ, ದುರಹಂಕಾರ ಇತ್ಯಾದಿ ಸಕಲ ದುರ್ಗುಣಗಳನ್ನೂ ಮನಸ್ಸಲ್ಲಿ ತುಂಬಿಕೊಂಡು ನಡೆಸುವ ಜೀವನವು ನೆಮ್ಮದಿಯಿಂದ ಕೂಡಿರಲು ಸಾಧ್ಯವೇ? ತಂದೆಗೆ ತನ್ನ ಮಕ್ಕಳ ಮೇಲಿನ ಕುರುಡು ವ್ಯಾಮೋಹ ಮತ್ತು ಅಣ್ಣ ತಮ್ಮಂದಿರ ದಾಯಾದಿ ಕುಟುಂಬ ಕಲಹವು ಪುರಾಣೇತಿಹಾಸಗಳಲ್ಲಿಯೂ ಪ್ರಸಿದ್ಧಿ ಪಡೆದು, ಮಹಾಭಾರತದಂತಹ ಮಹಾಕಾವ್ಯದ ಕಥೆ ಸೃಷ್ಟಿಯಾದುದು ಸರ್ವವಿದಿತ. ಇನ್ನು ಹೆಚ್ಚಿನ ಅಕ್ಕಪಕ್ಕದ ಮನೆಯವರ ಬಾಂಧವ್ಯ ಹದಗೆಟ್ಟಿರುವುದು ಸರ್ವೇಸಾಮಾನ್ಯ. ಒಂದಿಂಚು ಜಾಗಕ್ಕಾಗಿ, ಜೀವಮಾನವಿಡೀ ಕೋರ್ಟು ಕಚೇರಿ ಅಲೆದಾಡಿ, ತಮ್ಮ ಕೈಯಲ್ಲಿರುವ ಅಲ್ಪಸ್ವಲ್ಪ ಕಾಸನ್ನು ವಕೀಲರ ಜೇಬಿಗೆ ಸುರಿಯುವವರು ನಮ್ಮ ನಡುವೆ ಸಾಕಷ್ಟು ಮಂದಿ ಇದ್ದಾರೆ. ಬಹುತೇಕ ಬಂಧುಗಳ ಜೊತೆಗಿನ ಪ್ರೀತಿ ವಿಶ್ವಾಸಗಳು ನೆಲಗಚ್ಚುತ್ತಿವೆ. ರಾಜ್ಯ ರಾಜ್ಯಗಳು, ದೇಶ ದೇಶಗಳ ನಡುವಿನ ಪರಸ್ಪರ ಕಾದಾಟವು ಸಮಾಜದಲ್ಲಿ ಅಶಾಂತಿ ಹರಡಲು ಕಾರಣವಾಗುತ್ತಿದೆ. ಬಹುತೇಕ ನೆರೆ ರಾಷ್ಟ್ರಗಳು ತಮ್ಮ ತಮ್ಮ ಗಡಿಭಾಗದಲ್ಲಿ ಯುದ್ಧಭೀತಿ ಎದುರಿಸುತ್ತಿರುವುದನ್ನು ಕಾಣಬಹುದು. ಇದುವೇ ಮುಂದಕ್ಕೆ ಜಾಗತಿಕ ಮಟ್ಟದಲ್ಲಿ ಮಹಾಯುದ್ಧಕ್ಕೆ ಕಾರಣವಾಗುತ್ತದೆ. ಮನುಕುಲದ ಮೇಲೆ ಇದರಿಂದಾಗುವ ಭೀಕರ ದುಷ್ಪರಿಣಾಮಗಳು ನಮ್ಮ ಕಣ್ಣ ಮುಂದೆಯೇ ಇವೆ. ಜಪಾನಿನ ಮೇಲೆರಗಿದ ಭೀಕರ ಪರಮಾಣು ಬಾಂಬಿನಂತಹ ದುರಂತವು ಮನುಕುಲದ ಮೇಲಿನ ಕಪ್ಪುಚುಕ್ಕೆಯಲ್ಲವೇ!?. ಮನುಷ್ಯನ ಮನದೊಳಗೆ, ದ್ವೇಷ, ಅಸೂಯೆ, ಅಹಂಕಾರ, ಸ್ವಾರ್ಥಗಳಂತಹ ದುರ್ಗುಣಗಳಿರುವುದರಿಂದ ಮನಸ್ಸು ಅಶಾಂತಿಯಿಂದ ತುಂಬಿರುವುದರ ಜೊತೆಗೆ ಮಾನವೀಯ ಸಂಬಂಧಗಳನ್ನು ಹಾಳುಗೆಡವಲು ಕಾರಣವಾಗುತ್ತವೆ.
ಜೀವನದಲ್ಲಿ ಪರಸ್ಪರ ಪ್ರೀತಿ, ನಂಬಿಕೆ, ಸೌಹಾರ್ದತೆ, ನಿಸ್ವಾರ್ಥಕರ್ಮ, ತೃಪ್ತಿ, ಪರೋಪಕಾರ, ತ್ಯಾಗ, ಸ್ನೇಹ, ಕರುಣೆ ಇತ್ಯಾದಿ ಉನ್ನತ, ನಿರ್ಮಲ ಗುಣಗಳು ಮನಸ್ಸನ್ನು ಸದಾ ಉಲ್ಲಸಿತವಾಗಿರಿಸುತ್ತವೆ, ಅದರಿಂದಾಗಿ ಶಾಂತಿ, ನೆಮ್ಮದಿಗಳು ತನ್ನಿಂದ ತಾನಾಗಿಯೇ ನಮ್ಮನ್ನು ಆವರಿಸುತ್ತದೆ.
ಸದ್ಯದ ಪರಿಸ್ಥಿತಿಯಲ್ಲಿ ಜಗತ್ತಿನ ಜನರಿಗೆ ನೆಮ್ಮದಿಯೆಂಬುದು ಮರೀಚಿಕೆಯಾಗಿದೆ ಎಂದೆನಿಸುತ್ತಿದೆ. ಪ್ರತಿಯೊಬ್ಬರಿಗೂ ಒಂದಿಲ್ಲ ಒಂದು ಚಿಂತೆ. ಆಧ್ಯಾತ್ಮಿಕವಾಗಿ ಯೋಚಿಸುವವರು, ‘ನೆಮ್ಮದಿಯೆಂಬುದು ನಮ್ಮೊಳಗೇ ಇದೆ’ ಎಂದುಕೊಂಡರೂ ವ್ಯಾವಹಾರಿಕವಾಗಿ ಅದನ್ನು ರೂಢಿಸಿಕೊಳ್ಳುವುದು ಸ್ವಲ್ಪ ಕಷ್ಟಸಾಧ್ಯ. ಆದರೂ, ಉದಾತ್ತ, ಉನ್ನತ ಗುಣಗಳನ್ನು ಅಳವಡಿಸಿಕೊಳ್ಳುವುದರಿಂದ ಅದನ್ನು ಸಾಧ್ಯವಾಗಿಸಬಹುದು.
ಜಗತ್ತಿನಲ್ಲಿ ಅಗಾಧ ಪ್ರಮಾಣದಲ್ಲಿ ಪಸರಿಸಿರುವ ಅಶಾಂತಿಯನ್ನು ಹೋಗಲಾಡಿಸಲೋಸುಗ ಹಾಗೂ ಶಾಂತಿ ಸಂದೇಶವನ್ನು ಜನಮನಕ್ಕೆ ತಲಪಿಸುವ ನಿಟ್ಟಿನಲ್ಲಿ 1981ನೇ ಇಸವಿಯ ಸೆಪ್ಟೆಂಬರ 21ನೇ ತಾರೀಕಿನಂದು ಸಂಯುಕ್ತ ಸಂಸ್ಥಾನದ ರಾಷ್ಟ್ರಗಳು ಒಗ್ಗೂಡಿ ಮೊದಲನೇ ‘ವಿಶ್ವ ಶಾಂತಿ ದಿನ‘ ವನ್ನು ಆಚರಿಸಿದುವು. ಈ ದಿನವನ್ನು ವಿಶೇಷವಾದ ‘ಶಾಂತಿಗಂಟೆ’ಯನ್ನು ಬಾರಿಸಿ ಉದ್ಘಾಟಿಸಲಾಯಿತು. ಈ ಗಂಟೆಯನ್ನು, ಜಗತ್ತಿನೆಲ್ಲೆಡೆಯಿಂದ, ಆದರೆ ಆಫ್ರಿಕ ಬಿಟ್ಟು ಇತರ ಎಲ್ಲಾ ಖಂಡಗಳ ಮಕ್ಕಳು ಕಳುಹಿಸಿದ ಲೋಹದ ನಾಣ್ಯಗಳಿಂದ ತಯಾರಿಸಿರುವುದು ಹೆಗ್ಗಳಿಕೆ! ಜಪಾನ್ ದೇಶವು ಇದನ್ನು ತಯಾರಿಸಿ ಉಡುಗೊರೆ ರೂಪದಲ್ಲಿ ಸಲ್ಲಿಸಿದ್ದು ಕೂಡಾ ಒಂದು ವಿಶೇಷವೇ.. ಸೆಪ್ಟೆಂಬರ 21ನೇ ದಿನವು ಇಂದಿಗೂ ಸಂಯುಕ್ತ ರಾಷ್ಟ್ರಗಳ ಘೋಷಿತ ರಜಾ ದಿನವಾಗಿದೆ. ಈಗ ಈ ಶಾಂತಿಗಂಟೆಯನ್ನು ಅಮೇರಿಕದ ನ್ಯೂಯಾರ್ಕ್ ಲ್ಲಿ ಕಾಣಬಹುದು. (ನಾನು ಕಳೆದ ವರುಷ ನ್ಯೂಯಾರ್ಕ್ ಗೆ ಹೋದಾಗ ಅದನ್ನು ನೋಡುವ ಅವಕಾಶ ಸಿಕ್ಕಿತ್ತು.) ಜಗತ್ತಿನೆಲ್ಲೆಡೆ, ದಿನದ 24ಗಂಟೆಯೂ, ಎಂದರೆ ಎಂದೆಂದೂ, ಎಲ್ಲೂ, ಗಲಭೆ ನಡೆಯದಂತೆ, ಅಶಾಂತಿ ಹರಡದಂತೆ ತಡೆಯುವುದು’ವಿಶ್ವ ಶಾಂತಿ ದಿನ’ ದ ಧ್ಯೇಯವಾಗಿದೆ. “ವಿಶ್ವಶಾಂತಿ ಚಿರಾಯುವಾಗಲಿ!” ಎಂಬ ಘೋಷಣಾ ವಾಕ್ಯದೊಂದಿಗೆ, ಶಾಂತಿ, ಸೌಹಾರ್ದತೆಗಳ ಎಲ್ಲೆಗಳನ್ನು ಬಲಗೊಳಿಸುವುದು, ವಿಶ್ವಸಮರದಿಂದ ಮಾನವಕುಲದ ಮೇಲೆ ಆಗುವ ಪರಿಣಾಮದ ಬಗ್ಗೆ ತಿಳುವಳಿಕೆ ನೀಡುವುದು ಇತ್ಯಾದಿ ಧ್ಯೇಯಗಳನ್ನಿರಿಸಿಕೊಂಡು ಕಾರ್ಯ ನಡೆಸಲಾಗುತ್ತಿದೆ.
ವರ್ಷದ ಈ ಒಂದು ದಿನದಂದು ಶಾಂತಿದಿನವನ್ನು ಆಚರಿಸಿದರೆ ಸಾಲದಲ್ಲವೇ? ಪ್ರತಿಯೊಬ್ಬರೂ ಇದರ ಬಗ್ಗೆ ತಿಳಿದು, ಮನಸ್ಸು ಪರಿವರ್ತನೆಯಾಗಬೇಕಾಗಿರುವುದು ಅಗತ್ಯ. ಪ್ರತಿಯೊಂದು ಕುಟುಂಬವೂ ಶಾಂತಿ, ನೆಮ್ಮದಿಯಿಂದ ಕೂಡಿದ್ದರೆ; ಮುಂದಕ್ಕೆ, ರಾಜ್ಯ, ದೇಶ.. ಇಡೀ ಜಗತ್ತೇ ನೆಮ್ಮದಿಯ ನೆಲೆಯಾಗುವುದರಲ್ಲಿ ಸಂಶಯವಿಲ್ಲ. ಇನ್ನಾದರೂ, ಪ್ರತಿಯೊಬ್ಬರೂ ಉನ್ನತ ಗುಣಗಳನ್ನು ರೂಢಿಸಿಕೊಂಡು ಬಾಳಲು ಮನಮಾಡಿ; ಇಡೀ ಜಗತ್ತನೇ ಶಾಂತಿಯ ನೆಲೆಯಾಗಿಸಲು ತೊಡಗೋಣ.. ಮನುಕುಲದ ಭವಿಷ್ಯದ ದಿನಗಳು ಬಂಗಾರವಾಗಲಿ ಎಂದು ಆಶಿಸೋಣ.
-ಶಂಕರಿ ಶರ್ಮ, ಪುತ್ತೂರು.
ಉತ್ತಮ ಸಂದೇಶ ನೀಡುವ ಬರಹ ಅಭಿನಂದನೆಗಳು ಮೇಡಂ.
ತುಂಬಾ ಚಂದದ ಹಾಗೂ ಉತ್ತಮ ಸಂದೇಶದಿಂದ ಕೂಡಿದ ಬರಹ.
ಸಕಾಲಿಕವಾದ, ಚೆಂದದ ಬರಹ.
ಉತ್ತಮ ಸಂದೇಶ ಹಾಗೂ ಸಕಾಲಿಕ ಬರಹ..ಚಂದದ ನಿರೂಪಣೆ..
ಲೇಖನವನ್ನು ಓದಿ ಪ್ರತಿಕ್ರಿಯೆ ವ್ಯಕ್ತಪಡಿಸಿದ ಹೇಮಮಾಲ, ಸಾವಿತ್ರಿ ಅಕ್ಕ, ನಯನ ಮೇಡಂ, ನಾಗರತ್ನ ಮೇಡಂ… ಎಲ್ಲರಿಗೂ ಹೃತ್ಪೂರ್ವಕ ಕೃತಜ್ಞತೆಗಳು.