ಗುರುವಿನ ಉದರದೊಳಗೆ ಹೊಕ್ಕು ಬಂದ ಕಚ.

Share Button

ಯುವಕ-ಯುವತಿ ಪರಸ್ಪರ ಪ್ರೇಮಿಸಿ ಕೊನೆಯಲ್ಲಿ ಮದುವೆಯ ಹಂತಕ್ಕೆ ಬಂದಾಗ ಅವರಿಬ್ಬರೂ ಸಗೋತ್ರದವರೋ,  ಅಣ್ಣ-ತಂಗಿಯಾಗಬೇಕಾದವರೆಂದೋ ತಿಳಿದು ಬಂದರೆ, ಆ ಮದುವೆ ಮುರಿದು ಬೀಳುವ ಪ್ರಸಂಗ ಎದುರಾಗುತ್ತದೆ. ವಿಷಯ ತಿಳಿದು ಈ ಮದುವೆ ನಡೆಯಬಾರದೆಂದು ತಂದೆ ತಾಯಿಗಳೋ,  ಸಂಬಂಧಪಟ್ಟವರೋ ತಡೆ ಹಿಡಿದು ಆಧುನಿಕ ಯುಗದಲ್ಲಿ ಸಾಮಾನ್ಯ. ಆದರೆ ಪ್ರೀತಿಸಿದ ಗಂಡು ಅಥವಾ ಹೆಣ್ಣು  ಅವರಿಬ್ಬರಲ್ಲಿ ಯಾರಾದರೊಬ್ಬರಿಗೆ ಈ ಮದುವೆ ಸರಿಯಲ್ಲ,  ಮದುವೆಯಾಗುವುದು ಬೇಡ ಎಂಬ ವೈರಾಗ್ಯ ಬಂದು ಬಿಟ್ಟರೆ! ಉಳಿದ ಮತ್ತೊಬ್ಬರ ಪಾಡೇನು? ಊಹಿಸಿಕೊಳ್ಳಿ.  ಹೌದು. ಸಿಟ್ಟಿನ ಭರದಲ್ಲಿ ಕೋಪ, ತಾಪ, ಶಾಪ, ಹೊರಬೀಳುತ್ತದೆ. ಹಾಗೆಯೇ ಯಾವುದರಲ್ಲಾದರೂ ವೈರತ್ವ ಉಂಟಾಗಿ ಅವರನ್ನು ನಾಶ ಮಾಡಬೇಕೆಂದು ನಾನಾ ಬಗೆಯಿಂದ ಕುತಂತ್ರ ಹೂಡಿದರೂ ಅವರು ನಾಶವಾಗದೆ ಕೊನೆಗೆ ತಿರುಗುಬಾಣವಾಗಿ  ತಮಗೇ ಮುಳುವಾಗುವುದೂ ಇದೆ. ಈ ಎರಡು ವಿಶೇಷ ಪ್ರಕರಣಗಳನ್ನು ನಾವು ಒಬ್ಬನ ಕಥೆಯಿಂದಲೇ ತಿಳಿಯಬಹುದು. ಅವನು ‘ಕಚ  ಮಹರ್ಷಿ‘. ಈತನನ್ನು ಯಾರು ಪ್ರೀತಿಸಿದ್ದರು? ಇವನಲ್ಲಿ ಯಾರಿಗೆ ವೈರತ್ವವಿತ್ತು?  ಕೊನೆಗೆ ಏನಾಯಿತು?  ಅವನು ಗುರುವಿನ ಉದರ ಹೊಕ್ಕು ಹೊರ ಬಂದವ,  ಗುರುವಿನ ಉದರಕ್ಕೆ ಯಾಕೆ? ಹೇಗೆ? ಹೊಕ್ಕನು  ಎಂಬುದನ್ನು ತಿಳಿಯೋಣ.

ಪೂರ್ವಕಾಲದಲ್ಲಿ ದೇವತೆಗಳಿಗೂ ಅಸುರರಿಗೂ  ಆಗಾಗ್ಗೆ ಯುದ್ಧಗಳಾಗುತ್ತಿದ್ದುವು. ಮೂರು ಲೋಕಗಳ ಅಧಿಕಾರ ತಮಗೇ ಸಿಗಬೇಕೆಂದು ದಾನವರು ದೇವತೆಗಳ ಜತೆ ಯುದ್ಧಕ್ಕೆ ಬರುತ್ತಿದ್ದರು. ಯುದ್ಧದ ನಿಮಿತ್ತ ಯಾಗ ಯಜ್ಞಾದಿಗಳನ್ನು ನಡೆಸಲು ದೇವತೆಗಳಿಗೆ ಬೃಹಸ್ಪತಿ ಪುರೋಹಿತನಾದರೆ ದಾನವರಿಗೆ ಶುಕ್ರಾಚಾರ್ಯರು ಪುರೋಹಿತರಾಗಿದ್ದರು. ಮಹರ್ಷಿಗಳಿಬ್ಬರೂ ಎರಡೂ ಬಣಗಳ ಪುರೋಹಿತರಾದರೂ ಅವರಲ್ಲಿ ವೈಯಕ್ತಿಕ ದ್ವೇಷವಿರಲಿಲ್ಲ.  ಬೃಹಸ್ಪತಿಯ ಕೈಯೇ ಮೇಲಾಗಿ ದಾನವರು ಹೆಚ್ಚಿನ ಸಂಖ್ಯೆಯಲ್ಲಿ ಹತರಾಗುತ್ತಿದ್ದರು ಆದರೆ ಹತರಾದ ಈ ಅಸುರರನ್ನು  ಬದುಕಿಸುವ ವಿದ್ಯೆ ಶುಕ್ರಾಚಾರ್ಯರಿಗೆ ತಿಳಿದಿತ್ತು.  ಅವರು ಶಿವನನ್ನು ಒಲಿಸಿಕೊಂಡುಮೃತ ಸಂಜೀವಿನಿ’ ಎಂಬ ವಿದ್ಯೆಯನ್ನು ಕಲಿತಿದ್ದರು. ಇದರಿಂದಾಗಿ ಮೃತರಾದ ದಾನವರನ್ನು ಶುಕ್ರಾಚಾರ್ಯರು ಬದುಕಿಸಿ ಪುನಃ ಯುದ್ಧಕ್ಕೆ ಕಳುಹಿಸುತ್ತಿದ್ದರು.  ಆದರೆ ಬೃಹಸ್ಪತಿಗೆ ಈ ವಿದ್ಯೆ ತಿಳಿದಿರಲಿಲ್ಲ.

ಇದರಿಂದಾಗಿ ದೇವತೆಗಳಿಗೆ ಬಹಳ ಪೇಚಾಟಕ್ಕೆ ಇಟ್ಟುಕೊಂಡಿತು. ಅವರೆಲ್ಲ ಒಂದೆಡೆ ಸೇರಿ ಮಂತ್ರಾಲೋಚನೆ ಮಾಡಿ ತಮ್ಮ ಕಡೆಯಿಂದ ಯಾರಾದರೊಬ್ಬರು ಶುಕ್ರರಲ್ಲಿಗೆ  ಹೋಗಿ ಆ ಮಹಾ ವಿದ್ಯೆಯನ್ನು ಕಲಿತುಕೊಂಡು ಬರಬೇಕೆಂದು ತೀರ್ಮಾನಿಸಿದರು. ಮೃತ ಸಂಜೀವಿನಿ ವಿದ್ಯೆಯನ್ನು ಕಲಿತು ಬರಲು ಜಿತೇಂದ್ರಿಯನೂ, ಜಿತಕ್ರೋಧನೂ ಆಗಿದ್ದವನು ಯಾರೆಂದು ಯೋಚಿಸಿ ಕಡೆಗೆ ಬೃಹಸ್ಪ್ತಾಚಾರ್ಯರ ಮಗ ‘ಕಚ’ನೆ ಇದಕ್ಕೆ ತಕ್ಕದಾದವನೆಂದು  ತೀರ್ಮಾನಿಸಿದರು. ಅವನನ್ನು ಕರೆದು ‘ಕಚನೇ,  ದೇವತೆಗಳ ಒಳಿತಿಗಾಗಿ ನೀನು ಶುಕ್ರರಲ್ಲಿಗೆ ಹೋಗಿ ಅವರಿಂದ ಮೃತ ಸಂಜೀವಿನಿ ವಿದ್ಯೆಯನ್ನು ಕಲಿತು ಬರಬೇಕು. ಶುಕ್ರಾಚಾರ್ಯರು ರಾಕ್ಷಸ ರಾಜನಾದ ವೃಷಪರ್ವನ ರಾಜಧಾನಿಯಲ್ಲಿ ವಾಸಿಸುತ್ತಾರೆ. ಶುಕ್ರರಿಗೆ ದೇವಯಾನಿ ಎಂಬ ಮಗಳಿದ್ದಾಳೆ.  ಅವರಿಗೆ ಅವಳಲ್ಲಿ ಅಪಾರ ಪ್ರೀತಿ. ನೀನು ದೇವಯಾನಿಯ ಒಲುಮೆಯನ್ನು ಪಡೆದರೆ ಆ ವಿದ್ಯೆಯನ್ನು ಸುಲಭದಲ್ಲಿ ಕಲಿಯಬಹುದು’ ಎಂದರು .

ಕಚನು ದೇವತೆಗಳ ಪ್ರಾರ್ಥನೆಯನ್ನು ಮನ್ನಿಸಿ, ವೃರ್ಷಪರ್ವನ ರಾಜಧಾನಿಗೆ ಹೊರಟನು. ಅಲ್ಲಿ ಶುಕ್ರರನ್ನು ಕಂಡು ಅವರಿಗೆ ಉದ್ದಂಡ ನಮಸ್ಕಾರ ಮಾಡಿ ‘ನಾನು ಬೃಹಸ್ಪತಿಯ ಮಹರ್ಷಿಯ ಪುತ್ರನಾಗಿದ್ದಾನೆ. ದಯಮಾಡಿ ತಾವು ನನ್ನನ್ನು ಶಿಷ್ಯನನ್ನಾಗಿ ಪರಿಗ್ರಹಿಸಬೇಕು. ತಮ್ಮ ಬಳಿಯಲ್ಲಿ ಬ್ರಹ್ಮಚರ್ಯದಲ್ಲಿದ್ದು ವಿದ್ಯಾಭ್ಯಾಸ ಮಾಡುವ ಆಶಯದಿಂದ ಬಂದಿರುತ್ತೇನೆ’ ಎಂದು ಭಿನ್ನವಿಸಿಕೊಂಡನು. ಶುಕ್ರಾಚಾರ್ಯರಿಗೆ ಬೃಹಸ್ಪತಾಚಾರ್ಯರ ಮೇಲೆ ವೈಯಕ್ತಿಕ ವೈಷಮ್ಯ ಇಲ್ಲವಾದುದರಿಂದ ಕಚನನ್ನು ಶಿಷ್ಯನನ್ನಾಗಿ ಅಂಗೀಕರಿಸಿದರು. ಕಚನು ಗುರುಗಳ ಆದೇಶದಂತೆ ಅವರನ್ನೂ,  ಅವರ ಮಗಳಾದ ದೇವಯಾನಿಯ ಶುಶ್ರೂಷೆಯನ್ನು ಮಾಡತೊಡಗಿದನು. ಸ್ವಲ್ಪ ಕಾಲದಲ್ಲಿ ದೇವಯಾನಿ ಹಾಗೂ ಕಚನೂ ಪರಸ್ಪರ ಪ್ರೀತಿಸಲಾರಂಭಿಸಿದರು. ಅದು ಬೆಳೆ ಬೆಳೆದು ದೇವಯಾನಿ ತನ್ನ ಮನಸ್ಸಿನಲ್ಲಿ ಕಚನನ್ನೇ ವಿವಾಹವಾಗಬೇಕೆಂದು ನಿರ್ಧರಿಸಿದಳು.

ಆದರೆ ಕಚನು ಗುರುವಿಗೆ ನೀಡಿದ ಒಪ್ಪಂದದ ಪ್ರಕಾರ ಬ್ರಹ್ಮಚಾರಿಯ ವ್ರತಕ್ಕೆ ಭಂಗ ಬಾರದಂತೆ ಜಾಗೃತೆಯಿಂದಿದ್ದಳು. ಶುಕ್ರಾಚಾರ್ಯನ ಬೃಹಸ್ಪತಿಯ ಮಗಳಾದ ಕಚನನ್ನು ಶಿಷ್ಯರಾಗಿ ಸ್ವೀಕರಿಸಿದ್ದು ದೇವತೆಗಳ ವೈರಿಗಳಾದ ರಾಕ್ಷಸರಿಗೆ ಸಹಿಸಲಾಗಲಿಲ್ಲ .ಆದರೆ ಈ ಸಂಗತಿಯನ್ನು ಶುಕ್ರರಲ್ಲಿ  ಬಾಯಿ ಬಿಡುವುದಕ್ಕೆ ಅವರಿಗೆ ಧೈರ್ಯವಾಗಲಿಲ್ಲ. ಇನ್ನು ಕಚನನ್ನು ಕೊಲೆ ಮಾಡುವುದೇ ಸೂಕ್ತವೆಂಬ ತೀರ್ಮಾನಕ್ಕೆ ಬಂದರು. ಒಮ್ಮೆ ಕಚನು ಗುರುಗಳ  ದನಗಳನ್ನು ಮೇಯಿಸುತ್ತಾ ಬಯಲಿನಲ್ಲಿದ್ದಾಗ ರಾಕ್ಷಸರು ಅವನನ್ನು ಹಗ್ಗದಿಂದ  ಬಿಗಿದು ಕಟ್ಟಿಕೊಂಡು ಹೋಗಿ ಕೊಂದು ಆತನ ದೇಹವನ್ನು ಚೂರುಚೂರು ಮಾಡಿ ಅರಣ್ಯದಲ್ಲಿ ಬಿಸಾಡಿದರು. ಸಂಜೆ ಆಕಳುಗಳೆಲ್ಲ ಬಂದರೂ ಕಚನು ಬಾರದಿರುವುದನ್ನು ಗಮನಿಸಿದ ದೇವಯಾನಿಯು  ತನ್ನ ತಂದೆಯಿದ್ದೆಡೆಗೆ ಹೋಗಿ ಸಂಗತಿಯನ್ನು ತಿಳಿಸಿ ಅವನನ್ನು ಬರಮಾಡಿರೆಂದು ಮೊರೆಯಿಟ್ಟಳು.ಮಗಳಿಗೆ ಕಚನ  ಮೇಲೆ ಅಪಾರ ಪ್ರೀತಿ ಇರುವುದು ಶುಕ್ರಾಚಾರ್ಯರು ತಿಳಿದಿತ್ತು.  ಅವರು ತಮ್ಮ ಯೋಗ ಬಲದಿಂದ ಕಚನು ಹತನಾಗಿರುವುದನ್ನು ತಿಳಿದುಕೊಂಡು ‘ಮೃತ ಸಂಜೀವಿನಿ ವಿದ್ಯೆ’ಯಿಂದ ಅವನನ್ನು ಬದುಕಿಸಿದರು .ಅವನು ಮನೆಗೆ ಬಂದನು. ಅವನನ್ನು ನೋಡಿ ದೇವಯಾನಿಯ ಮುಖ ಅರಳಿತು.  ಇದನ್ನರಿತ ರಾಕ್ಷಸರು ಮತ್ತಷ್ಟು ಕೋಪಗೊಂಡರು. ಮತ್ತೊಮ್ಮೆ ಕಚನು  ದೇವಯಾನಿಗೆ ಅರಣ್ಯದಿಂದ ಸುಂದರ ಸುಗಂಧ ಪುಷ್ಪಗಳನ್ನು ತರುವುದಕ್ಕಾಗಿ ಅರಣ್ಯಕ್ಕೆ ಹೋಗಿದ್ದರು .ಆತನೊಬ್ಬನನ್ನೇ ಕಂಡ ರಾಕ್ಷಸರು ಅವನನ್ನು ಹಿಡಿದು ಎಳೆದು ತಂದು ಕೊಚ್ಚಿ ಸಮುದ್ರಕ್ಕೆಸೆದರು. ಈಗಲೂ ಕಚನು ಬಾರದಿರುವ ವರ್ತಮಾನವನ್ನು ದೇವಯಾನಿ ತಂದೆಗೆ ತಿಳಿಸಿದಾಗ ಶುಕ್ರರು ‘ಮೃತ ಸಂಜೀವಿನಿ’ ಮಂತ್ರದಿಂದ ಅವನನ್ನು ಬದುಕಿಸಿ ಬರಮಾಡಿದರು. ನಡೆದುದೆಲ್ಲವನ್ನೂ ಕಚನು ದೇವಯಾನಿಗೆ ಹೇಳಿದನು .ಇದು ಮರುಕಳಿಸುತ್ತಾ ಹೋಯಿತು.

ಇನ್ನೊಮ್ಮೆ ಕಚನು ಕಟ್ಟಿಗೆ ಸಮಿತ್ತುಗಳನ್ನು ತರುವುದಕ್ಕಾಗಿ  ಕಾಡಿಗೆ ಹೋಗಿದ್ದಾಗ ರಾಕ್ಷಸರು ಅವನನ್ನು ಕೊಂದು ಸುಟ್ಟು ಬೂದಿ ಮಾಡಿ ಅದನ್ನು ನುಣ್ಣಗೆ ಅರೆದು ಮದ್ಯದಲ್ಲಿ ಬೆರೆಸಿ ಶುಕ್ರರಿಗೇ  ಕುಡಿಯುವ ಕೊಡುವ ಪಾತ್ರೆಯಲ್ಲಿಟ್ಟರು. .ಶುಕ್ರರು  ತಿಳಿಯದೆ ಕುಡಿದು ಬಿಟ್ಟರು. ಈಗ ಕಚನು ಶುಕ್ರರ ಜಠರವನ್ನು ಸೇರಿದನು . ಕಚನನ್ನು ಎಂದಿನಂತೆ ಕಾಣದಿರಲು ದೇವಿಯಾನಿ ಗೋಳಿಡುತ್ತಾ ತಂದೆಯ ಬಳಿ ಹೋಗಿ ‘ಅಪ್ಪಾ ನಿನ್ನ ಶಿಷ್ಯರು ಕಚನನ್ನು ಕೊಂದಿರಲೇಬೇಕು. ಅವನಿಲ್ಲದೆ ನಾನು ಬದುಕಿರಲಾರೆ ಅಪ್ಪಾ’ ಎಂದಳು ಹಾಗೂ ಶುಕ್ರರು ‘ಮಗಳೇ ಅವನಿಗೆ ಸತ್ತು ಹೋಗಿರುವುದಂತೂ  ನಿಜ. ಆದರೆ ನಾನು ಸಂಜೀವಿನಿ ಮಂತ್ರದಿಂದ ಅವನನ್ನು ಬದುಕಿದಂತೆಲ್ಲ  ರಾಕ್ಷಸರು ಕೊಂದು ಹಾಕುತ್ತಾರೆ. ಹೀಗೆ  ಪುನರಾವರ್ತನೆ ಆಗುವುದರಿಂದೇನು ಪ್ರಯೋಜನ ?  ನೀನು ಅವನ ಕುರಿತು ಶೋಕಿಸಬೇಡ, ಅವನನ್ನು ಮರೆತು ಬಿಡು’ ಎಂದರು.

PC: Internet

‘ಅಪ್ಪಾ …ನೀವು ಹೀಗೆ ಹೇಳಬಹುದೇ  ? ಅವನು ನಿಮ್ಮ ಶಿಷ್ಯನಾಗಿರುವಾಗ  ಅವನ ರಕ್ಷಣೆ ಭಾರ ನಿಮಗೆ ಸೇರಿದ್ದಲ್ಲವೇ? ಅಲ್ಲದೆ ಅವನು ನನಗೆ ಅತ್ಯಂತ ಪ್ರಿಯನು. ಅವನಿಲ್ಲದೆ ನಾನು ಬದುಕುಳಿಯಲಾರೆ ನೀವು ಬದುಕಿಸದಿದ್ದರೆ ನಾನು ಸಾಯುವುದು ನಿಶ್ಚಿತ’ ಎಂದಳು. .ಹೌದು ದೇವಯಾನಿ ಹೇಳುವುದರಲ್ಲಿ ಸತ್ಯಾಂಶವಿದೆ.  ಶಿಷ್ಯನ ಪ್ರಾಣ ಉಳಿಸುವುದು  ನನ್ನ ಕರ್ತವ್ಯ. ನನ್ನ ಪ್ರೀತಿಯ ಮಗಳಾದ ದೇವಯಾನಿಗಾಗಿ ತಾನು ಏನು ಮಾಡಲು ಸಿದ್ಧ ಎಂದುಕೊಂಡು ಶುಕ್ರಾಚಾರ್ಯರು  ಮಂತ್ರ ಪುರಸ್ಸರವಾಗಿ ಕಚನನ್ನು ಆಹ್ವಾನಿಸಿದರು. ದೇವಯಾನಿ ಆತನ ಬರವಿಗಾಗಿ ಕಾಯುತ್ತಲೇ ಇದ್ದಳು. ಆದರೆ ಕಚ ಬರಲೇ ಇಲ್ಲ.  ಸ್ವಲ್ಪ ಹೊತ್ತಿನಲ್ಲಿ ಶುಕ್ರರಿಗೆ ತನ್ನ ಜಠರದಲ್ಲಿ ಏನೋ ಶಬ್ದವುಂಟಾದಂತಾಯಿತು.

ಅವರು ಸೂಕ್ಷ್ಮವಾಗಿ ಆಲಿಸಿದರೆ ‘ಗುರುದೇವ, ಗುರುದೇವ’ ಎಂಬ ಮೊರೆ ತನ್ನ ಹೊಟ್ಟೆಯೊಳಗಿಂದ ಕೇಳಿಸಿತು.  ‘ಕಚನೇ, ನೀನು ಹೇಗೆ ನನ್ನ ಉದರದೊಳಗೆ ಹೇಗೆ ಸೇರಿದೆ?’ ಎಂದರು. ‘ಗುರುಗಳೇ, ನಿಮ್ಮ ಅನುಗ್ರಹದಿಂದ ನನಗೆಲ್ಲವೂ ಸ್ಮರಣೆಯಲ್ಲಿದೆ ಹೇಳುತ್ತೇನೆ . ನಾನು ಕಟ್ಟಿಗೆ ಸಮಿತ್ತುಗಳನ್ನು ತರುವುದಕ್ಕಾಗಿ ಕಾಡಿಗೆ ಹೋಗಿದ್ದಾಗ ಅಸುರರು ನನ್ನನ್ನು ಕೊಂದು ಸುಟ್ಟು ಭಸ್ಮ ಮಾಡಿ ನಿಮಗೆ ಅರ್ಪಿಸಲಿದ್ದ ಸೆರೆಯಲ್ಲಿ ಬೆರೆಸಿದ್ದರು. ನೀವದನ್ನು ಕುಡಿಯಿರಿ. ಈ ರೀತಿಯಾಗಿ ನಾನು ನಿಮ್ಮ ಹೊಟ್ಟೆಯನ್ನು ಸೇರಿದ್ದೇನೆ . ನೀವು ‘ಮೃತ ಸಂಜೀವಿನಿ ವಿದ್ಯೆಯಿಂದ ಬದುಕಿ ಸಂಜೀವಿನಿ ಮಂತ್ರದಿಂದ ಬದುಕಿಸಿದ್ದೀರಿ. ಇಲ್ಲಿಂದ ನನ್ನ ಪ್ರಾಣ ಉಳಿಸಲು ನಾನು ನಿಮ್ಮ  ಹೊಟ್ಟೆ ಸೀಳಿಕೊಂಡು ನಾನು ಹೊರಗೆ ಬಂದರೆ ಗುರುಗಳ ವಧೆ ಮಾಡಿದ ಪಾಪ ತಟ್ಟುವುದಿಲ್ಲವೇ ? ನಾನು ಇಲ್ಲಿ ತನಕ ಮಾಡಿದ ತಪಸ್ಸಿನ ಫಲವೆಲ್ಲವೂ ನಾಶವಾಗಿ ಬಿಡುವುದಲ್ಲವೇ? ಅದಕ್ಕಾಗಿ ನಾನು ಬಹಳ ಕಷ್ಟವನ್ನು ಅನುಭವಿಸುತ್ತಾ ನಿಮ್ಮ ಹೊಟ್ಟೆಯೊಳಗಿದ್ದೇನೆ’ ಎಂದ.

ಈಗ ಶುಕ್ರಾಚಾರ್ಯರಿಗೆ ಸಂದಿಗ್ಧ ಪರಿಸ್ಥಿತಿ ಉಂಟಾಯಿತು . ಕಚನು  ಹೊರಬರಬೇಕಾದರೆ ತನ್ನ ಹೊಟ್ಟೆಯನ್ನು ಸೀಳಿಯೇ  ಬರಬೇಕು. ಆಗ ತನ್ನ ಮರಣ ಉಂಟಾಗಿ ಮೃತ ಸಂಜೀವಿನಿ ವಿದ್ಯೆಯೂ ನಾಶವಾಗುವುದು. ದೇವಯಾನಿಯೂ  ಅನಾಥಳಾಗುವಳು. ಕಚನನ್ನು ಅಲ್ಲಿಯೇ ನಾಶಗೊಳಿಸಿದರೆ ದೇವಯಾನಿ ತನ್ನ ಪ್ರಾಣ ಕಳಕೊಳ್ಳುತ್ತಾಳೆ.  ಇದಕ್ಕೆಲ್ಲ ಪರಿಹಾರವೆಂದರೆ ತನ್ನ ಉದರೊಳಗಿರುವ ಕಚನಿಗೆ ಅಲ್ಲಿಗೇ ಮೃತ ಸಂಜೀವಿನಿ ವಿದ್ಯೆ ಹೇಳಿಕೊಡುವುದು. ಆಮೇಲೆ ಅವನು ಹೊರಗೆ ಬಂದ ಕೂಡಲೇ ತನ್ನನ್ನು ಆ ವಿದ್ಯಾಬಲದಿಂದ ರಕ್ಷಿಸಬೇಕೆಂದು ಈಗಲೇ ಅಪ್ಪಣೆ ಮಾಡಿಬಿಡುವುದು. ಹಾಗಾದಾಗ ಎಲ್ಲವೂ ಸುಸೂತ್ರವಾಗಿ ಆಗುವುದು ಎಂದು ಯೋಚಿಸುವ   ಶುಕ್ರಾಚಾರ್ಯರು ‘ಪ್ರಿಯ ಶಿಷ್ಯನೇ, ನೀನು ಬಂದ ಕಾರ್ಯ ಈಗ ಸಿದ್ಧಿಯಾಗುವುದು. ನೀನು ಕಚನ  ರೂಪದಲ್ಲಿ ಬಂದ ಇಂದ್ರನಲ್ಲವಷ್ಟೇ? ಅಲ್ಲದಿದ್ದರೆ  ಇದು ಸಿದ್ಧಿಸದು. ಇದು ಬ್ರಾಹ್ಮಣೋತ್ತಮನಿಗೆ ಸಿದ್ಧಿಯಾಗುವುದು. ನನ್ನ ಹೊಟ್ಟೆಯನ್ನು ಸೀಳಿ ನೀನು ಹೊರಗೆ ಬಂದ ಮೇಲೆ ನನ್ನನ್ನು ನಿನ್ನ ತಂದೆ ಎಂದು ಭಾವಿಸಿ ಕೂಡಲೇ ನನ್ನನ್ನು ಬದುಕಿಸುವುದು ನಿನ್ನ ಪರಮ ಕರ್ತವ್ಯವಾಗುವುದು’ ಎಂದರು ಶುಕ್ರರು . ಅವರ ಷರತ್ತಿಗೆ ಒಪ್ಪಿದ ಕಚನಿಗೆ ಶುಕ್ರರು ಆ ಮಹಾ ವಿದ್ಯೆಯನ್ನು ಹೇಳಿಕೊಟ್ಟರು. ಶುಕ್ರರ ಜಠರದೊಳಗಿದ್ದು ಅದನ್ನು ಮನನ ಮಾಡಿದನು.  ಮತ್ತೆ ಅವರ ಹೊಟ್ಟೆಯನ್ನು ಸೀಳಿಕೊಂಡು ಬಂದು ಆಗ ತಾನೇ ಕಲಿತ ವಿದ್ಯೆಯಿಂದ  ಶುಕ್ರರನ್ನು ಬದುಕಿಸಿ ಅವರು ಎದ್ದ ಕೂಡಲೇ ಅವರಿಗೆ ಸಾಷ್ಟಾಂಗ ಪ್ರಣಾಮ ಮಾಡಿ ‘ಗುರುದೇವ, ನಿಮ್ಮನ್ನೇ ತಂದೆ ಹಾಗೂ ತಾಯಿಯೆಂದು  ಭಾವಿಸಿದ್ದೇನೆ. ನಿಮಗೆ ನನ್ನ ಮನಸ್ಸಿನಲ್ಲೂ ದ್ರೋಹವೆಸಗಲಾರೆ’ ಎಂದನು.  ಆಮೇಲೆ, ಸುರಾಪಾನ ಎಷ್ಟೊಂದು ಅನರ್ಥಕ್ಕೆಡೆ ಮಾಡುತ್ತದೆ ಎಂದು ತನ್ನಲ್ಲೇ ಯೋಚಿಸಿದ ಶುಕ್ರರು ಅದಕ್ಕೆ ಬಹಿಷ್ಕಾರ ಹಾಕಿದರು .ಇದರಿಂದಾಗಿ ಅಂದಿನಿಂದ ಬ್ರಾಹ್ಮಣರಿಗೆ ಸುರಾಪಾನ ನಿಷೇಧವಾಯಿತು.

ಈ ಘಟನೆಯಿಂದ ಕಚನಿಗೆ ಬಹಳ ಉಪಕಾರವಾಯಿತು. ಅಸುರರು ಕಚನನ್ನು ನಾಶ ಮಾಡಿಸಲು ಹವಣಿಸಿದಷ್ಟೂ  ಅದು ತಿರುಗು ಬಾಣದಂತಾಗಿ ಆತನು ಯಾತಕ್ಕಾಗಿ ಬಂದಿದ್ದನೋ,  ಯಾವ ಕಾರ್ಯ ಸಂಕಲ್ಪಿಸಿದ್ದನೋ  ಅದು ಸಿದ್ಧಿಸಿತು .ಹೀಗಿದ್ದಾಗ ಒಂದು ದಿನ ಕಚನು  ಗುರುಗಳಲ್ಲಿಗೆ ಹೋಗಿ ಅವರ ಅನುಮತಿ ಪಡೆದು ಆಶೀರ್ವಾದದೊಂದಿಗೆ ದೇವಲೋಕಕ್ಕೆ ಹಿಂತಿರುಗಲು ಸಿದ್ಧನಾದನು.ಅಷ್ಟರಲ್ಲಿ ದೇವಯಾನಿ ಬಂದು ‘ನೀನು ಹಿಂದಕ್ಕೆ ನೀನು ಹಿಂದಕ್ಕೆ ಹೋಗಬಾರದೆಂದು ನನ್ನನ್ನು ವಿವಾಹವಾಗಬೇಕೆಂದು’ ಕೇಳಿಕೊಂಡಳು .ಆಗ ಕಚನು ದೇವಯಾನಿಗೆ ‘ಗುರುಗಳ ಉದರದಿಂದ ಮರುಜನ್ಮ ಪಡೆದ ನನಗೆ ಅವರು ಪಿತೃ ಸಮಾನ. ನೀನೀಗ  ನನ್ನ ತಂಗಿಯಾಗಿರುವೆ. ಆದುದರಿಂದ ನಿನ್ನನ್ನು ಮದುವೆಯಾಗುವುದು ಧರ್ಮಸಮ್ಮತವಲ್ಲ’ ಎಂದನು. ಕಚನನ್ನು ಅತಿಯಾಗಿ ಪ್ರೇಮಿಸಿ ಅವನನ್ನೇ ಮದುವೆ ಆಗಬೇಕೆಂದು ಬಯಸಿದ್ದ ದೇವಯಾನಿಗೆ ಅವನಿಂದ ಈ  ಮಾತುಗಳು ಬಂದಾಗ ಅಸಾಧ್ಯ ಕೋಪ ಉಕ್ಕಿ ಬಂತು.  ನನ್ನ ತಂದೆಯ ಮೂಲಕ ಕಲಿತುಕೊಂಡ ವಿದ್ಯೆ ನಿನಗೆ  ಫಲಿಸದಿರಲಿ  ಎಂದಳು.  ಆಗ ಕಚನು ‘ನೀನು ವೇದಶಾಸ್ತ್ರ ಪಾರಂಗತನಾದ ವಿಪ್ರೋತ್ತಮನ  ಮಗಳಾಗಿ ಹೀಗೆ ಹೇಳಬಹುದೇ ? ನಿನ್ನನ್ನು ಯಾವನೊಬ್ಬ ಬ್ರಾಹ್ಮಣನು ಮದುವೆಯಾಗದಿರಲಿ, ನಿನಗೆ ಕ್ಷತ್ರಿಯನು ದೊರಕಲಿ’ ಎಂದು ಪ್ರತಿ ಶಾಪವಿತ್ತನು.(ಮುಂದೆ ದೇವಯಾನಿ ಕ್ಷತ್ರಿಯ ಮಹಾರಾಜನಾದ ಯಯಾತಿಯನ್ನು ಮದುವೆಯಾಗುತ್ತಾಳೆ). ಕಚನು ಅಲ್ಲಿಂದ ಬೀಳ್ಕೊಂಡ ಸ್ವರ್ಗ ಲೋಕಕ್ಕೆ ಪ್ರಯಾಣ ಬೆಳೆಸಿದನು. ಕಚನು ಮೃತಸಂಜೀವಿನಿ  ಮಹಾವಿದ್ಯೆಯನ್ನು ಸಿದ್ಧಿಸಿ ಬಂದನೆಂದು ದೇವತೆಗಳು ಸಂತೋಷಿಸಿದರು..ಕಚನನ್ನು ಕೊಲ್ಲಬೇಕೆಂದು ಅಸುರರು ಎಷ್ಟೇ ಪ್ರಯತ್ನ ಪಟ್ಟರೂ ಅವನು ಸಾಯಲಿಲ್ಲ. ಬದಲಾಗಿ ಅವನು ಕಲಿಯಬೇಕಾದ ವಿದ್ಯೆಗೆ ಅವರು ಹಾಕಿದ ಕುತಂತ್ರ ಪೂರಕವಾಯಿತು. ಆತನನ್ನು ಸುಟ್ಟು ಬೂದಿ ಮಾಡಿ ಗುರುಗಳಿಗೆ ಕುಡಿಸಿದರೂ ಆತನ ಮರುಜನ್ಮ ಪಡೆದು ಗುರುಗಳ ಉದರ ಸೀಳಿಕೊಂಡು ಬರುವಂತಾಯಿತು.  ದೇವರೊಲುಮೆಯಿದ್ದಲ್ಲಿ ಯಾವುದೂ ಅಸಾಧ್ಯವಲ್ಲ ಅಲ್ಲವೇ?.

-ವಿಜಯಾ ಸುಬ್ರಹ್ಮಣ್ಯ, ಕುಂಬಳೆ

7 Responses

  1. Anonymous says:

    ಪ್ರಕಟಿಸಿದ ಹೇಮಮಾಲಾ ಹಾಗೂ ಓದುಗರಿಗೆ ವಂದನೆಗಳು.

  2. ಬಿ.ಆರ್.ನಾಗರತ್ನ says:

    ಪುರಾಣ ಕಥೆಗಳನ್ನು ಚೆಂದವಾಗಿ ಚೌಕಟ್ಟಿನಲ್ಲಿ ಕಟ್ಟಿಕೊಡುವ ನಿಮಗೆ ನನ್ನ ದೊಂದು ನಮಸ್ಕಾರ ಮೇಡಂ.

  3. ನಯನ ಬಜಕೂಡ್ಲು says:

    ಚೆನ್ನಾಗಿದೆ ಮೇಡಂ,

  4. Asha nooji says:

    ಕಚನ.ಕಥೆ.ಓದಿ ಖುಷಿ.ಆತು.
    ಅಕ್ಕೋ..ಎನಗೆ ಗೊಂತಿತಿಲ್ಲೆ

  5. Anonymous says:

    ನಾಗರತ್ನ, ನಯನ ಬಜಕ್ಕೂಡೆಲು, ಆಶಾ ನೂಜಿ. ಎಲ್ಲಾ ಸೋದರಿಯಗೆ ಧನ್ಯವಾದಗಳು.

  6. ಶಂಕರಿ ಶರ್ಮ says:

    ಕಚ-ದೇವಯಾನಿ, ಪುರಾಣದ ಪ್ರಸಿದ್ಧ ಪ್ರೇಮಕತೆ. ಅತ್ಯಂತ ಸರಳ, ಸುಂದರ ರೂಪದಲ್ಲಿ ನಿರೂಪಿಸಿ ನಮ್ಮ ಮುಂದಿಟ್ಟ ವಿಜಯಕ್ಕನವರಿಗೆ ಧನ್ಯವಾದಗಳು.

  7. Savithri bhat says:

    ಕಚ ದೇವಯಾನಿಯ ಕಥೆ ಯಾವಾಗಲೊ ಓದಿದ್ದು ಅರ್ಧಂಬರ್ಧ ನೆನಪಿತ್ತು. ಈಗ ಪುನಃ ಓದಿ ತುಂಬಾ ಕುಶಿ ಆಯಿತು. ನಿರೂಪಣೆಯು ಚೆನ್ನಾಗಿತ್ತು. ಧನ್ಯವಾದಗಳು ಮೇಡಂ. ಹಾಗೂ ಸುರಹೊನ್ನೆಗೂ ಧನ್ಯವಾದಗಳು

Leave a Reply to Asha nooji Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: