ನೆನಪು ಭಾಗ 10: ಕವಿ ಎಚ್ ಎಸ್ ವಿ ಯವರೊಂದಿಗೆ ಕೆ ಎಸ್ ನ ಸ್ನೇಹ
ಕನ್ನಡದ ಬಹುಮುಖ ಪ್ರತಿಭಾವಂತ ಕವಿ, ಸಾಹಿತಿ, ವಿಮರ್ಶಕ, ಚಲನಚಿತ್ರ ಕರ್ಮಿ ಡಾ. ಎಚ್ ಎಸ್ ವೆಂಕಟೇಶಮೂರ್ತಿಯವರೊಡನೆ ನಮ್ಮ ತಂದೆಯವರು ಒಂದು ಮಧುರವಾದ ಬಾಂಧವ್ಯವನ್ನು ಹೊಂದಿದ್ದರು. ತಮ್ಮ ವೃತ್ತಿಜೀವನ ಹಾಗೂ ಚಟುವಟಿಕೆಗಳ ನಡುವೆ ಬಿಡುವು ಮಾಡಿಕೊಂಡು ಮನೆಗೆ ಬಂದು ಹೋಗುತ್ತಿದ್ದರು. ಹಲವೊಮ್ಮೆ ತಮ್ಮೊಡನೆ ಉದಯೋನ್ಮುಖ ಪ್ರತಿಭಾವಂತರನ್ನು ಜತೆಗೆ ಕರೆತಂದು ನಮ್ಮ ತಂದೆಯವರಿಗೆ ಪರಿಚಯ ಮಾಡಿಸುತ್ತಿದ್ದರು.
ಈ ನಡುವೆ ನಮ್ಮ ತಾಯಿಯವರು ಬಂದು ಅವರ ಯೋಗಕ್ಷೇಮ ವಿಚಾರಿಸಿ,:” ಕಾಫಿ ತರ್ತೀನಿ” ಅಂದಾಗ ಎಚ್ ಎಸ್ ವಿ ಯವರು “ಕೊಡಿ ವೆಂಕಮ್ಮನವರೇ ನಿಮ್ಮ ಕೈರುಚಿಯ ಕಾಫಿ ಬೇಡ ಅನ್ನುವವರುಂಟೆ”ಎನ್ನುತ್ತಿದ್ದರು.ಗೌರಿಹಬ್ಬದ ಸಮಯದಲ್ಲಿ ನಮ್ಮ ತಾಯಿಯವರಿಗೆ ಮೊರದ ಬಾಗಿನ ನೀಡಲು ಅವರ ಪತ್ನಿ ರಾಜಲಕ್ಷ್ಮಿಯವರೂ ಬರುತ್ತಿದ್ದರು. ಎಚ್ ಎಸ್ ವಿ ದಂಪತಿಗಳು ತಮ್ಮ ಮೊಮ್ಮಕ್ಕಳನ್ನು ಕರೆದುಕೊಂಡು ಬಂದು ನಮ್ಮ ಎಚ್ ಎಸ್ ವಿ ತಂದೆ ತಾಯಿಗೆ ತೋರಿಸಿ ಆಶೀರ್ವಾದ ಪಡೆಯುತ್ತಿದ್ದರು.
ಎಚ್ ಎಸ್ ವಿಯವರು ಉತ್ತಮ ವಾಗ್ಮಿ ಹಳಗನ್ನಡ ಸಾಹಿತ್ಯವೇ ಆಗಲಿ, ಹೊಸಗನ್ನಡ ಸಾಹಿತ್ಯವೇ ಆಗಲಿ ಅದರ ಬಗ್ಗೆ ಅಧಿಕಾರಯುತವಾಗಿ ಹಾಗೂ ಪಾಡಿತ್ಯಪೂರ್ಣವಾಗಿ ಉಪನ್ಯಾಸ ಮಾಡಬಲ್ಲ ಶಕ್ತರು. ನಮ್ಮ ತಂದೆಯವರ ಕಾವ್ಯದ ಬಗ್ಗೆ ಅವರ ಜೀವಿತಕಾಲದಲ್ಲಿ ಮತ್ತು ಇಂದೂ ಹಲವಾರು ವೇದಿಕೆಗಳಲ್ಲಿ ಪರಿಚಯ ಮಾಡಿಕೊಡುತ್ತಿರುವ ಸಹೃದಯರು. 1986ರಲ್ಲಿ ನಮ್ಮ ಬ್ಯಾಂಕಿನ {ಎಸ್ ಬಿ ಐ } ಕನ್ನಡ ಸಂಘಗಳು ಹಾಗೂ ಮೈಸೂರು ಬ್ಯಾಂಕ್ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿದ್ದ ಕಥಾಶಿಬಿರದ ನಿರ್ದೇಶಕತ್ವವನ್ನು ವಹಿಸಿಕೊಂಡು, ನಮಗೆಲ್ಲ ಕಥಾರಚನೆಯಲ್ಲಿ ಆಸಕ್ತಿಮೂಡಿಸಿ ಶಿಬಿರನ್ನು ಯಶಸ್ವಿಯಾಗಿಸಿದವರು. ಅಲ್ಲದೆ ನಮ್ಮ ಬ್ಯಾಂಕಿನ ಸಿಬ್ಬಂದಿ ತರಬೇತಿ ಕೇಂದ್ರಕ್ಕೂ ಆಗಮಿಸಿ ಕನ್ನಡ ಸಾಹಿತ್ಯದ ಹಲವಾರು ಉಪಯುಕ್ತ ವಿಷಯಗಳನ್ನು ಕುರಿತು ಉಪನ್ಯಾಸ ನೀಡಿರುವವರು.
1990ರಲ್ಲಿ ಮೈಸೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಮ್ಮ ತಂದೆಯವರ ಅಧ್ಯಕ್ಷತೆಯಲ್ಲಿ ನಡೆದಾಗ ಅದರ ಸವಿನೆನಪಿಗಾಗಿ, ಎಚ್ ಎಸ್ ವಿಯವರು ಸ್ವಯಂ ಆಸಕ್ತಿಯಿಂದ ನರಹಳ್ಳಿ ಬಾಲಸುಬ್ರಹ್ಮಣ್ಯ ಹಾಗೂ ದೇಶ ಕುಲಕರ್ಣಿಯವರ ಸಹಯೋಗದಲ್ಲಿ ‘ಸಿರಿಮಲ್ಲಿಗೆ‘ ಎಂಬ ಕೆ ಎಸ್ ನ ಸಂದರ್ಶನ ಆಧಾರಿತ ಕೃತಿಯೊಂದನ್ನು ಹೊರತಂದರು . ಇದರಲ್ಲಿ ಕವಿಜೀವನದ ಹಲವಾರು ಅಪರೂಪದ ವಿವರಗಳು ಮತ್ತು ಕೆಲವು ಪ್ರಮುಖ ಕವನಗಳು ಉಗಮಗೊಂಡ ರೀತಿಯ ಬಗ್ಗೆ ಕವಿಯೇ ತಿಳಿಸಿಕೊಟ್ಟ ವಿಶಿಷ್ಟ ಮಾಹಿತಿಗಳಿವೆ.
ಎಚ್ ಎಸ್ ವಿ ಯವರು ತಮ್ಮ ಆರಂಭದ ಕವನ ಸಂಕಲನವೊಂದಕ್ಕೆ ನಮ್ಮ ತಂದೆಯವರ ಮುನ್ನುಡಿ ಬಯಸಿ ಹಸ್ತಪ್ರತಿಯನ್ನು ಎಚ್ ಎಸ್ ವಿಯವರು ಮನೆಗೆ ತಲುಪಿಸಿದ್ದರು. ಮುನ್ನುಡಿ ಅದೇಕೋ ಅವರಿಗೆ ಸಿಗಲಿಲ್ಲ… ಆಶ್ಚರ್ಯದ ಸಂಗತಿಯೆಂದರೆ ಎಚ್ ಎಸ್ ವಿ ಯವರು ಈ ನೇತ್ಯಾತ್ಮಕ ಬೆಳವಣಿಗೆಗೆ ಅನಗತ್ಯ ಪ್ರಚಾರ ನೀಡಲಿಲ್ಲ. (ಬಹುಶಃ ಅವರ ಸ್ನೇಹವಲಯದಲ್ಲಿ ಈ ವಿಷಯ ಚರ್ಚೆಯಾಗಿರಬಹುದು) ನಮ್ಮ ತಂದೆಯರೊಡನೆ ಇದರ ಬಗ್ಗೆ ಎಂದೂ ಮಾತನಾಡಲಿಲ್ಲ. ಕೆ ಎಸ್ ನ ಅವರ ಬಗ್ಗೆ ಮತ್ತು ಅವರ ಕಾವ್ಯದ ಬಗ್ಗೆ ಅಭಿಮಾನವನ್ನು ಮುಂದುವರೆಸುವುದನ್ನು ಬಿಡಲಿಲ್ಲ. ನನಗಂತೂ ಈ ವಿಷಯ ಎಚ್ ಎಸ್ ವಿ ಯವರ ದೊಡ್ಡಗುಣ ಎಂದೇ ಅನ್ನಿಸಿದೆ.
ಇಂದೂ ನಮ್ಮ ಕುಟುಂಬದ ಆತ್ಮೀಯರಲ್ಲಿ ಎಚ್ಎಸ್ ವಿ ಒಬ್ಬರು.
(ಮುಂದುವರಿಯುವುದು….)
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=29221
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ಬೆಂಗಳೂರು )
ವಾಹ್. ಸೂಪರ್
ಹಿರಿಯ ಸಾಹಿತಿ, ಕವಿ, ಎಚ್. ಎಸ್. ವೆಂಕಟೇಶ ಮೂರ್ತಿಯವರೊಡನೆ ಇರುವ ಮಧುರ ಸ್ನೇಹ ಬಾಂಧವ್ಯವನ್ನು ಹೃದಯಂಗಮವಾಗಿ ನಿರೂಪಿಸಿರುವಿರಿ ಸರ್..ಧನ್ಯವಾದಗಳು.