ಎಲ್ಲಿರುವೆ ಎಂದರೆ ಎಲ್ಲೆಲ್ಲೂ ಇರುವೆ!
ನಮ್ಮ ಬಾಲ್ಯದ ಪುಟಗಳಲ್ಲಿ ಇರುವೆಯದು ಒಂದು ಅಧ್ಯಾಯವಿದೆ. ನಮ್ಮದು ರೈತಾಪಿ ಕುಟುಂಬ ಆದ್ದರಿಂದ ಮನೆಯಲ್ಲಿ ಮುನ್ನೂರ ಅರವತ್ತೈದು ದಿನವು ದವಸ ಧಾನ್ಯದ ಮೂಟೆಗಳು ಇದ್ದೇ ಇರುತ್ತಿದ್ದವು. ಮುಸುರೆ ಇದ್ದಲ್ಲಿ ನೊಣ ಬರುವಂತೆ ಮನೆಯ ಯಾವುದೋ ಮೂಲೆಯಿಂದ ಸಾಲು ಸಾಲಾಗಿ ಶಿಸ್ತಿನ ಸಿಪಾಯಿಗಳಂತೆ ಹಾಜರಾಗುತ್ತಿದ್ದ ಇರುವೆಗಳು ಅಕ್ಕಿ, ರಾಗಿ, ಜೋಳದ ಕಾಳುಗಳನ್ನ ಹೊತ್ತು ಒಂದೊಂದಾಗಿ ತಮ್ಮ ಗೂಡಿಗೆ ಸಾಗಿಸುತ್ತಿದ್ದವು. ಹೀಗೆ ಧಾನ್ಯದ ಕಾಳುಗಳನ್ನ ಹೊತ್ತೊಯ್ಯುವ ಇರುವೆಗಳ ಶ್ರಮ ಮತ್ತು ಚಲನೆಯನ್ನು ಬೆರಗಿನಿಂದ ನೋಡುತ್ತಿದ್ದೆ. ಒಂದೊಂದೇ ಕಾಳುಗಳನ್ನ ಹೊತ್ತುಯ್ಯುತ್ತಿದ್ದ ಇರುವೆಗಳಿಗೆ ಕೆಲವೊಮ್ಮೆ ದೊಡ್ಡ ಬೆಲ್ಲದ ಚೂರು ಅಥವಾ ಸತ್ತ ಜಿರಳೆ ಇಲ್ಲವೇ ಕೀಟ ಸಿಕ್ಕರೆ ಗುಂಪು ಗುಂಪಾಗಿ ಬಂದು ಹೊತ್ತೊಯ್ಯುತ್ತ ‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತಿಗೆ ಸಾಕ್ಷಿಯಾಗುತ್ತಿದ್ದವು.
ಇರುವೆ ಒಂದು ಪುಟ್ಟ ಜೀವಿಯಾದರೂ ತನಗಿಂತಲೂ ಐವತ್ತು ಪಟ್ಟು ಹೆಚ್ಚು ಭಾರವನ್ನು ಹೊರುವ ಸಾಮರ್ಥ್ಯ ಹೊಂದಿರುವ ಶ್ರಮಜೀವಿಯಂತೆ! ಇರುವೆ ಎಂದರೆ ಎಲ್ಲೆಲ್ಲೂ ಇರುವ ಜೀವಿ. ಮನೆಯಲ್ಲಿದ್ದರೆ ಮನೆಯಲ್ಲಿ. ಹೊರಗೆ ಹೋದರೆ ಬಯಲಿನಲ್ಲಿ. ಮಾತ್ರವಲ್ಲದೆ ಹೊಲಕ್ಕೆ ಹೋದರು ಅಲ್ಲಿಯೂ ಇವುಗಳೇ! ನಾನು ಬಾಲ್ಯದಲ್ಲಿ ಇವುಗಳನ್ನೆಲ್ಲ ಕುತೂಹಲದಿಂದ ಗಮನಿಸುತ್ತಿದ್ದೆ. ಕೊಯ್ಲಿಗೆ ಬಂದ ರಾಗಿಯ ಹೊಲದಲ್ಲಿ ಒಣಗಿನಿಂತ ತೆನೆಯಿಂದ ಉದುರುವ ಕಾಳುಗಳನ್ನೆಲ್ಲ ಸಂಗ್ರಹಿಸುವ ಇರುವೆಗಳ ಗೂಡು. ಜೋಳದ ಹೊಲದಲ್ಲಿಯೂ ಇವುಗಳ ಹಾಜರಿ ಇರುತ್ತಿತ್ತು. ಭತ್ತದ ಹೊಲದ ಅಕ್ಕಪಕ್ಕದಲ್ಲೇ ಇರುವೆಯ ಗೂಡುಗಳು ಇರುತ್ತಿದ್ದವು. ಭತ್ತದ ಕಟಾವಿನ ನಂತರ ಗದ್ದೆಯ ತುಂಬಾ ಉದುರಿ ಬಿದ್ದಿದ್ದ ನೆಲ್ಲಿನ ಕಾಳುಗಳನ್ನೆಲ್ಲ ತಮ್ಮ ಗೂಡಿಗೆ ಸಾಗಿಸುತ್ತಿದ್ದವು. ಕಟಾವನ್ನೆಲ್ಲ ಕಲೆಹಾಕಿ, ತೆನೆ ಬಡಿದು, ತೂರಿ, ಜೊಳ್ಳು ಗಟ್ಟಿಕಾಳುಗಳನ್ನ ವಿಂಗಡಿಸಿ ಮೂಟೆ ಮಾಡುತ್ತಿದ್ದ ಕಣದ ಸುತ್ತಮುತ್ತಲು ಹತ್ತಾರು ಇರುವೆ ಗೂಡುಗಳು ಖಾಯಂ ಆಗಿರುತ್ತಿದ್ದವು. ಚದುರಿ ಹೋಗಿ ಕಣದ ಅಂಗಳದಿಂದ ಆಚೆಗೆ ಬಿದ್ದ ಕಾಳುಗಳನ್ನೆಲ್ಲ ಒಂದೊಂದಾಗಿ ಸಂಗ್ರಹಿಸಿ ಶೇಖರಿಸುತ್ತಿದ್ದವು. ಮೂಟೆಗಳನ್ನು ಮನೆಗೆ ಸಾಗಿಸಿದ ನಂತರ, ಕಣದಲ್ಲೇ ತೂರಿಬಿಟ್ಟ ಜೊಳ್ಳಿನ ನಡುವೆ ಗಟ್ಟಿಕಾಳನ್ನು ಹುಡುಕುತ್ತಿದ್ದ ಆಶಾವಾದಿ ಜೀವಿಗಳು.
ನೀವು ಗಮನಿಸಿದ್ದೀರಾ? ಇರುವೆಗಳು ಆಹಾರ ಸಿಕ್ಕಲ್ಲಿ ತಿನ್ನುತ್ತಾ ಕೂರುವುದಿಲ್ಲ. ನಾನಂತೂ ಬಾಲ್ಯದಿಂದ ಇಲ್ಲಿಯವರೆಗೂ ನೋಡಿರುವುದೆಲ್ಲ ಬರೀ ಆಹಾರ ಹೊರುತ್ತಿರುವ ಇರುವೆಗಳನ್ನೇ..! ಬಹುಶಃ ಮಾನವನ ಹೊರತಾಗಿ ಆಹಾರವನ್ನು ಸಂಗ್ರಹಿಸಿಡುವ ಕೆಲವೇ ಕೆಲವು ಜೀವಿಗಳಲ್ಲಿ ಇರುವೆ ಕೂಡ ಒಂದಾಗಿದೆ.
ಮನೆ ಸ್ವಚ್ಛತೆಯ ನೆಪದಲ್ಲಿ ಇತ್ತೀಚೆಗೆ ಇರುವೆಗಳನ್ನು ಕೊಲ್ಲುವುದು ಎಲ್ಲರಿಗೂ ಅಭ್ಯಾಸವಾಗಿದೆ! ಅದಕ್ಕೆಂದೇ ರಾಸಾಯನಿಕಗಳು ಲಭ್ಯವಿದೆ. ಆದರೆ ಇರುವೆಗಳು ನಮ್ಮ ಮನೆಯನ್ನು ಸ್ವಚ್ಛ ಮಾಡುವ ಸಂಗತಿ ನಮ್ಮ ಗಮನಕ್ಕೆ ಬಂದರು ಅರಿವಿಗೆ ಬಂದಿಲ್ಲ ನೋಡಿ. ಅದು ಹೇಗೆ ಇರುವೆಗಳು ನಮ್ಮ ಮನೆಗಳನ್ನು ಸ್ವಚ್ಛ ಮಾಡುತ್ತವೆಂದಿರಾ? ನಾವು ತಿಂದ ಸಿಹಿ ತಿನಿಸಿನ ಪುಡಿ ನೆಲದಲ್ಲಿ ಚೆಲ್ಲಿದರೆ ಇರುವೆಗಳು ಹೊತ್ತೊಯುತ್ತವೆ. ಸತ್ತು ಬಿದ್ದಿರುವ ಜಿರಳೆ ಅಥವಾ ಇನ್ನಾವುದೇ ಕೀಟದ ಹುಳು ಮನೆಯ ಯಾವುದೇ ಮೂಲೆಯಲ್ಲಿ ಬಿದ್ದಿದ್ದರೂ ಎಳೆದೊಯ್ಯುವ ಮೂಲಕ ಮನೆ ಸ್ವಚ್ಛ ಮಾಡುವಲ್ಲಿ ನಮ್ಮಗಳ ಅರಿವಿಗೆ ಬಾರದಂತೆ ನಮಗೆ ನೆರವಾಗುತ್ತವೆ. ತ್ರೇತಾಯುಗದಲ್ಲಿ ಸಮುದ್ರಕ್ಕೆ ಸೇತುವೆ ಕಟ್ಟುವಾಗ ಅಳಿಲು ಮಾಡಿದ ಸಹಾಯದಿಂದಾಗಿ ‘ಅಳಿಲು ಸೇವೆ’ ಎಂಬ ಹೆಸರು ಈಗಲೂ ಪ್ರಸಿದ್ಧವಾಗಿದೆ. ಹಾಗಾದರೆ ಈ ಕಲಿಯುಗದಲ್ಲಿ ಇರುವೆಗಳ ಸಹಾಯವನ್ನು ‘ಇರುವೆ ಸೇವೆ’ ಎಂದು ಗುರುತಿಸಬಹುದಾ? ಕರೆಯಬಹುದಾ? ಎಂದು ಯೋಚಿಸುತ್ತಿರುವೆ.
ನಮ್ಮ ಬಾಲ್ಯದ ದಿನಗಳಲ್ಲಿ ಅಜ್ಜಿಯಾಗಲಿ, ಅಮ್ಮನಾಗಲಿ ಇರುವೆಗಳನ್ನು ಕೊಲ್ಲುತ್ತಿರಲಿಲ್ಲ. ಬೆಲ್ಲಕ್ಕೆ ಇಲ್ಲವೇ ತಿನಿಸುಗಳಿಗೆ ಇರುವೆಗಳಿಂದ ದಾಳಿಯಾದರೆ, ‘ಏನ್ ಇರುವೆಗಳೋ ಏನೋ? ಅದೆಂಗ್ ಗೊತ್ತಾಗ್ ಬಿಡ್ತವೋ ಇಲ್ ಬೆಲ್ಲ ಇರೋದು ಇವ್ಕೆಲ್ಲ?’ ಎಂದು ಗೊಣಗಿ, ಇರುವೆ ಮುತ್ತಿದ ಪದಾರ್ಥಗಳನ್ನ ಕೊಂಚ ಹೊತ್ತು ಬಿಸಿಲಿಗೆ ತೆರೆದಿಡುತ್ತಿದ್ದರು. ಕೆಲವು ಹೊತ್ತಿನಲ್ಲೇ ಬಿಸಿಲಿನ ತಾಪವನ್ನು ಸಹಿಸದೇ ತಮ್ಮ ದಂಡು ದಾಳಿಯೊಂದಿಗೆ ಇರುವೆಗಳು ಎತ್ತಲೋ ಕಣ್ಮರೆಯಾಗುತ್ತಿದ್ದವು.
ನಮ್ಮಜ್ಜನಿಗೊಂದು ಅಭ್ಯಾಸವಿತ್ತು. ಪ್ರತಿದಿನ ಬೆಳಗ್ಗೆ ಕೈಕಾಲು ಮುಖ ತೊಳೆದು, ಹಣೆಗೆ ವಿಭೂತಿ ಬಳಿದು, ದೇವರಿಗೆ ನಮಿಸಿದ ನಂತರ ಕೈಯಲ್ಲಿಷ್ಟು ಅಕ್ಕಿಯ ನುಚ್ಚು, ರಾಗಿ, ಪುಡಿಬೆಲ್ಲ, ರವೆ ಇಲ್ಲವೇ ಸಕ್ಕರೆ ಅಥವಾ ಅವಲಕ್ಕಿ ಹೀಗೆ ಏನಾದರೊಂದು ಹಿಡಿದು ಮನೆಯಿಂದಾಚೆ ಹೊರಡುತ್ತಿದ್ದರು. ಮನೆಯ ಮುಂದಿರುವ ಸಗಣಿ ಅಂಗಳದಲ್ಲಿ, ಅಲ್ಲಿಯೂ ಇಲ್ಲವೆಂದರೆ ಹಾದಿ ಬದಿಯಲ್ಲಾದರೂ ಒಂದೆರಡು ಇರುವೆ ಗೂಡುಗಳನ್ನ ಹುಡುಕಿ ಅವುಗಳ ಸುತ್ತಲೂ ಕೈಯಲ್ಲಿರುವ ಆಹಾರ ಪದಾರ್ಥವನ್ನು ಉದುರಿಸಿ ಆನಂತರವೇ ಅವರ ಊಟ ತಿಂಡಿಗಳೆಲ್ಲ. ನಾವಾಗ ಅಜ್ಜನ ಜೊತೆ ಹೋಗುತ್ತಿದ್ದೆವು. ಇರುವೆ ಗೂಡುಗಳ ಹುಡುಕಲು ಅಜ್ಜನಿಗೆ ನೆರವಾಗುವುದರ ಜೊತೆ ಕೆಂಪು ಇರುವೆ ಗೂಡಿಗೆ ಆಹಾರ ಹಾಕಬಾರದೆಂದು, ಕಪ್ಪು ಇರುವೆಗಳ ಗೂಡಿಗಷ್ಟೇ ಆಹಾರ ಹಾಕುವಂತೆ ಒತ್ತಾಯಿಸುತ್ತಿದ್ದೆವು. ಅದಕ್ಕೊಂದು ಬಲವಾದ ಕಾರಣವಿತ್ತು. ಮಳೆಗಾಲದಲ್ಲಿ ದನಕರುಗಳಿಗೆಂದು ಕೊಯ್ದು ತಂದಿಟ್ಟ ಹುಲ್ಲಿನ ಹೊರೆಯಲ್ಲಿ ಇರುವೆಗಳ ಹಿಂಡು ಸೇರಿಕೊಳ್ಳುತ್ತಿದ್ದವು. ಹುಲ್ಲುಗಿಡಗಳಲ್ಲಿರುವ ಸಣ್ಣಪುಟ್ಟ ಹುಳುಗಳಿಗೋ, ಸಿಹಿಯಿರುವ ಹುಲ್ಲಿನ ಬೀಜಗಳಿಗೋ, ಜೋಳದ ಮತ್ತಾವುದೋ ಕಾಳಿಗಾಗಿಯೋ ಹುಲ್ಲಿನ ಹೊರೆಯ ತುಂಬಾ ಸೇರಿಕೊಳ್ಳುತ್ತಿದ್ದ ಇರುವೆಗಳ ದಂಡು ದನಕರುಗಳಿಗೆ ಮೇವು ಹಾಕಲು ಹುಲ್ಲಿನ ಹೊರೆಗೆ ಕೈಯಿಟ್ಟಿದ್ದೇ ತಡ ಕೈಕಾಲುಗಳ ತುಂಬಾ ಮೆತ್ತಿಕೊಳ್ಳುತ್ತಿದ್ದವು. ಕಪ್ಪು ಇರುವೆಗಳಾದರೆ ಹೆಚ್ಚು ಕಚ್ಚುತ್ತಿರಲಿಲ್ಲ. ಕೊಡವಿದರೆ ಉದುರಿ ಬೀಳುತ್ತಿದ್ದವು. ಹೆಚ್ಚಾಗಿ ಕೆಂಪು ಇರುವೆಗಳೇ ಸೇರಿಕೊಳ್ಳುತ್ತಿದ್ದು, ಅವುಗಳು ಕೊಡವಿದರು ಬೀಳದೆ ಕಚ್ಚಿ ಹಿಡಿದಿರುತ್ತಿದ್ದವು. ಒಂದೊಂದೇ ಕಿತ್ತು ಬಿಸಾಡಬೇಕಿತ್ತು. ಅವು ಕಚ್ಚಿದ ಜಾಗದಲ್ಲೆಲ್ಲ ಉರಿ ಉರಿ ಮತ್ತು ನೆವೆ. ಇದರಿಂದಾಗಿ ಕಪ್ಪು ಇರುವೆಗಳ ಬಗ್ಗೆ ಮೃದು ಧೋರಣೆಯಿದ್ದು. ಕಚ್ಚುವ ಗುಣವುಳ್ಳ ಕೆಂಪು ಇರುವೆಗಳು ನಮಗೆ ಶತ್ರುವಾಗಿದ್ದವು.
ನಮ್ಮ ಬಾಲ್ಯದಲ್ಲಿ ನಮ್ಮೂರ ಕಡೆಯಲ್ಲಿ ಎಲ್ಲೆಲ್ಲೂ ಮಣ್ಣಿನ ಮಾಳಿಗೆಯ ಮನೆಗಳೇ ಇದ್ದುದರಿಂದ ಪ್ರತಿಬಾರಿಯೂ ಬೇಸಿಗೆ ಮುಗಿದು ಮಳೆಗಾಲ ಶುರುವಾದ ಕೂಡಲೇ ಇರುವೆಗಳಿಂದ ನಮಗೊಂದು ಸಂಕಷ್ಟ ಎದುರಾಗುತ್ತಿತ್ತು. ಮಣ್ಣಿನ ಮಾಳಿಗೆಯಾದ್ದರಿಂದ ಇರುವೆಗಳು ಅಲ್ಲಲ್ಲಿ ಗೂಡು ಮಾಡಿಕೊಂಡಿರುತ್ತಿದ್ದವು. ಮಳೆಗಾಲ ಶುರುವಾದ ಸೂಚನೆಗಾಗಿ ಒಂದು ಸಂಜೆ ಮಳೆ ಶುರುವಾದರೆ, ಆ ಗೂಡಿನ ಮೂಲಕ ಮಳೆಯ ನೀರು ಕೆಳಗಿಳಿದು ಅಲ್ಲಲ್ಲಿ ಜಂತೆಯಲ್ಲಿ ಸಣ್ಣಗೆ ಮನೆ ಸೋರಲಾರಂಭಿಸುತ್ತಿತ್ತು. ಆ ಸಂದರ್ಭದಲ್ಲೂ ಜೀವನ ಪ್ರೀತಿಯುಳ್ಳ ನಮ್ಮ ಮಾವನವರೊಬ್ಬರು ‘ಮಾಳಿಗೆಗೆ ನೆಗಡಿ ಶುರುವಾಯಿತೆಂದು’ ಹಾಸ್ಯ ಚಟಾಕಿಯನ್ನಾರಿಸಿ ನಮ್ಮನ್ನೆಲ್ಲ ನಗಿಸುತ್ತಿದ್ದರು. ಎಲ್ಲೆಲ್ಲಿ ನೀರಿಳಿಯುತ್ತಿತ್ತೋ ಅಲ್ಲಿಗೆಲ್ಲ ಮನೆಯಲ್ಲಿರುವ ಪಾತ್ರೆಗಳು ಬಂದು ಮನೆಯ ಒಳಾಂಗಣವನ್ನು ಅಲಂಕರಿಸುತ್ತಿದ್ದವು. ಒಂದು ಮೂಲೆಯಲ್ಲಿ ಹೊಸಪಾತ್ರೆ, ಇನ್ನೊಂದು ಮೂಲೆಯಲ್ಲಿ ಹಳೆಯ ಪಾತ್ರೆ. ಮತ್ತೊಂದು ಕಡೆ ಮಸಿಯಾದ ಬಾಣಲೆ, ಅದಕ್ಕೆ ಕೊಂಚ ಹತ್ತಿರದಲ್ಲೇ ಕಬ್ಬಿಣದ ಬಕೆಟ್ಟು. ಮೇಗಲ ಪಡಸಾಲೆಯಲ್ಲಿ ಅಲ್ಯೂಮಿನಿಯಂ ಬೇಸಿನ್ನು, ಕೆಳಗಿನ ಪಡಸಾಲೆಯಲ್ಲಿ ನೆಗ್ಗಿಹೋಗಿರುವ ಅಗಲ ಬಾಯಿಯ ಸ್ಟೀಲ್ ಚೊಂಬು. ಹೀಗೆ ಅಲ್ಲಲ್ಲಿ ಕಾಣುವ ಮನೆಯ ಪಾತ್ರೆ ಪಗಡೆಗಳು, ಅಲ್ಲಲ್ಲ ಪಾತ್ರೆ ಪಡೆಗಳು ಸಭೆ ಸೇರಿರುವಂತೆ ಮನೆ ಗೋಚರಿಸುತ್ತಿತ್ತು. ಆ ಸಭೆಯ ನಡುವೆ ನಮಗೆಲ್ಲಿ ಜಾಗ ಸಿಕ್ಕರಲ್ಲಿ ಮನೆಮಂದಿಯೂ ಅಲ್ಲಲ್ಲಿ ಮುದುರಿ ಮಲಗುತ್ತಿದ್ದೆವು. ಮಳೆ ನಿಂತರೂ ಮರದ ಹನಿ ನಿಲ್ಲುವುದಿಲ್ಲವಲ್ಲ ಹಾಗೇ ಸೋರುವ ಮಾಳಿಗೆಯೂ ರಾತ್ರಿ ಎಷ್ಟೋ ಹೊತ್ತಿನವರೆಗೂ ನಿಲ್ಲುತ್ತಿರಲಿಲ್ಲ. ಹೀಗೆ ಬೀಳುವ ಹನಿಗಳಲ್ಲು ಹಲವು ರಾಗಗಳಿದ್ದವು. ಹೊಸದಾಗಿಟ್ಟ ಚೊಂಚಿನ ಒಡಲಿಗೆ ಚಣ್ ಚಣ್ ಎಂದು ಬೀಳುವ ಹನಿ ಅರೆಬರೆ ತುಂಬಿದ ಬಕೆಟ್ಟಿನಲ್ಲಿ ತೊಟ್ ತೊಟ್ ಎಂದು ರಾಗ ಬದಲಿಸುತ್ತಿತ್ತು. ಪಾತ್ರೆಯೊಂದರಲ್ಲಿ ಪಟ್ ಪಟ್ ಎಂದು ಸಣ್ಣ ಸ್ವರದ ಹನಿಗಳು ಬಿದ್ದರೆ, ಬೇಸನ್ನಿನಲ್ಲಿ ಬೀಳುವ ಹನಿಗಳಿಗೆ ಫಟ್ ಫಟ್ ಎಂಬ ದೊಡ್ಡ ಸ್ವರವಿತ್ತು. ಮತ್ತೊಂದು ಕಡೆಯಿಂದ ತುಂಬಲಾರಂಭಿಸಿದ ಪಾತ್ರೆಯಲ್ಲಿ ಟಪ್ ಟಪ್ ಸ್ವರ ಕಿವಿ ತುಂಬುತ್ತಿತ್ತು. ಅರ್ಧ ಮುಕ್ಕಾಲು ರಾತ್ರಿಗಳನ್ನು ಈ ರೀತಿಯ ಹನಿ ಹನಿ ಸಂಗೀತವನ್ನು ಆಲಿಸುತ್ತಾ, ಆನಂದಿಸುತ್ತ, ಬೀಳುವ ಹನಿಗಳ ಸ್ವರಗಳನ್ನು ಗುರುತಿಸುತ್ತಾ ನಿದ್ರಿಸದೇ ಮಲಗುತ್ತಿದ್ದೆ!
ಹಬ್ಬ ಹರಿದಿನಗಳಲ್ಲಿ ಇರುವೆಗಳ ಹೊಸ ಹಾವಳಿ ಶುರುವಾಗುತ್ತಿತ್ತು. ಹಬ್ಬದ ದಿನಗಳಲ್ಲಿ ನಮ್ಮೂರಿನಲ್ಲಿ ಹೆಚ್ಚಾಗಿ ಒಬ್ಬಟ್ಟು ಕರಿಗಡುಬುಗಳೆಲ್ಲ ಹೆಚ್ಚೆಚ್ಚೇ ಮಾಡುವ ರೂಢಿಯಿದ್ದು ಹಬ್ಬ ಮುಗಿದರೂ ಆ ಸಿಹಿ ತಂಗಳು ಮುಗಿಯುತ್ತಿರಲಿಲ್ಲ. ಇರುವೆಗಳ ದಾಳಿಯಿಂದ ಅವುಗಳನ್ನೆಲ್ಲ ರಕ್ಷಿಸುವ ಸಲುವಾಗಿ ಹಳೆಯ ಪಂಚೆಬಟ್ಟೆಯಲ್ಲಿ ಸುತ್ತಿ ಜಂತೆಗೆ ಕಟ್ಟುತ್ತಿದ್ದರು. ಆದರೆ ಬುದ್ಧಿವಂತ ಇರುವೆಗಳು ಸಿಹಿ ವಾಸನೆಯ ಜಾಡು ಹಿಡಿದು ಜಂತೆಯ ಮೇಲೆ ನಡೆದು ಬಂದು ಆ ಸಿಹಿಗಂಟಿನಲ್ಲಿ ಸೇರುತ್ತಿದ್ದವು. ಊಟದ ಸಮಯ ಗಂಟನ್ನು ಕೆಳಗಿಳಿಸಿ ಬಿಚ್ಚಿ ನೋಡಿದರೆ ಇರುವೆಗಳ ಹಿಂಡು! ಇದು ನಮ್ಮ ಪಾಲು ಇದು ನಮ್ಮ ಪಾಲೆಂದು ಸಿಹಿ ತುಣುಕುಗಳ ಹೊತ್ತು ಅತ್ತಿತ್ತ ಚದುರಿ ಓಡುತ್ತಿದ್ದವು. ಇಷ್ಟವಿದ್ದರೂ ಹೆಚ್ಚು ಸಿಹಿ ತಿನ್ನಲಾಗದ ಹುಳುಕು ಹಲ್ಲಿನ ಅತ್ತೆಯನ್ನು ನೋಡಿದಾಗೆಲ್ಲ ಇರುವೆಗಳಿಗೆ ಹಲ್ಲುಗಳಿರುವುದಿಲ್ಲವೇ? ಇದ್ದರೂ ಅದೆಷ್ಟು ಪುಟ್ಟ ಗಾತ್ರದ್ದಿರಬಹುದು? ಇರಲಿ ಅಷ್ಟು ಸಿಹಿ ತಿನ್ನುವ, ಸಿಹಿಯನ್ನು ಇಷ್ಟಪಡುವ ಇರುವೆಗಳ ಹಲ್ಲುಗಳೇಕೆ ಹುಳುಕಾಗುವುದಿಲ್ಲ? ಎಂಬ ಉತ್ತರ ದೊರೆಯದ ಪ್ರಶ್ನೆಗಳು ತಲೆಯಲ್ಲಿ ಮೊಳೆಯುತ್ತಿದ್ದವು. ಆಗಿನ್ನೂ ಶುಗರ್ ಎಂಬ ಖಾಯಿಲೆಯ ಹೆಸರು ಕಿವಿಗೆ ಬಿದ್ದಿರಲಿಲ್ಲ. ಅಕಸ್ಮಾತ್ ಕೇಳಿದ್ದರೆ ‘ಇಷ್ಟು ಸಿಹಿ ತಿಂದರೂ ಇರುವೆಗಳಿಗೇಕೆ ಸಕ್ಕರೆ ರೋಗ ಬರುವುದಿಲ್ಲ?’ ಎಂಬ ಉತ್ತರ ಸಿಗದ ಪ್ರಶ್ನೆಯು ಹುಟ್ಟಿಕೊಳ್ಳುತ್ತಿತ್ತೇನೋ?!
ಶಿಸ್ತಿನ ಸಿಪಾಯಿಗಳಾದ ಇರುವೆಗಳಿಗೆ ಸಿಹಿ ಎಷ್ಟಿಷ್ಟವೋ ಸತ್ತು ಬಿದ್ದಿರುವ ಕೀಟ, ಜಿರಳೆ, ಹುಳು ಉಪ್ಪಟೆಗಳು ಅಷ್ಟೇ ಇಷ್ಟ. ಸಿಹಿ ತಿನಿಸು ಚೆಲ್ಲಿದ ಕಡೆ ಗುಂಪಾಗಿ ಬರುವಂತೆ, ಜಿರಳೆಯೋ ಕೀಟವೋ ಸತ್ತುಬಿದ್ದಿದ್ದರೆ ಶಿಸ್ತಾಗಿ ಬರುವ ಇರುವೆಗಳು ಹಿಂಡು ಹಿಂಡಾಗಿ ಆ ಕೀಟವನ್ನು ಹೊತ್ತೊಯ್ಯುತ್ತವೆ. ಅದೊಂದು ದಿನ ಮನೆಯಲ್ಲಿ ಜಿರಳೆ ಕಾಟವೆಂದು ನನ್ನವಳು ಲಕ್ಷ್ಮಣ ರೇಖೆ ಬರೆದಿದ್ದಳು. ಹೆಂಡತಿಯ ಮಾತು ಮೀರುವ ಗಂಡನಿಗೇ ಶಿಕ್ಷೆಯಿರುವಾಗ ಆಕೆ ಎಳೆದ ಗೆರೆ ದಾಟುವ ಜಿರಳೆ ಬದುಕುಳಿಯಲು ಸಾಧ್ಯವೇ? ಪಾಪ, ನನ್ನವಳ ಸೀರೆ ಬಟ್ಟೆಬರೆಗಳ ತಂಟೆಗೆ ಹೋಗದಿದ್ದರೆ ಆ ಜಿರಳೆಯು ಇನ್ನೂ ಒಂದಷ್ಟು ದಿನ ನಮ್ಮ ಮನೆಯಲ್ಲೇ ತಿಂದುಂಡು ಅತಿಥಿಯಾಗಿದ್ದು ಹೋಗಬಹುದಿತ್ತು. ಗಂಡನಿಗೆ ಅರ್ಥವಾಗಿದ್ದು ಆ ಜಿರಳೆಗೂ ಅರ್ಥವಾಗಬೇಕೆಂದೆನೂ ಇಲ್ಲವಲ್ಲ. ಆದ್ದರಿಂದಲೇ ಬಹಳ ಬೇಗನೆ ಆ ಅತಿಥಿ ಜಿರಳೆಯ ತಿಥಿಯಾಯಿತು. ಸುದ್ದಿಯನ್ನು ಹೇಗೆ ತಿಳಿದವೋ ಗೊತ್ತಿಲ್ಲ. ಜಿರಳೆಯ ಅಂತ್ಯವಾಗಿ ಸ್ವಲ್ಪಹೊತ್ತಿನಲ್ಲೇ ಇರುವೆಗಳ ಸೈನ್ಯ ಬಂದೇ ಬಿಟ್ಟಿತು.
ನೋಡು ನೋಡುತ್ತಿದ್ದಂತೆ ಜಿರಳೆಯ ಶವದೇಹವನ್ನ ಗುಂಪಾಗಿ ಸೇರಿ ಹೊತ್ತುಕೊಂಡು ಹೋದವು. ಆ ಸಂದರ್ಭದಲ್ಲಿ ಕಿರುಕವಿತೆಯೊಂದನ್ನು ಬರೆದೆ. ನನ್ನ ಕೃತಿಯೊಂದರಲ್ಲಿ ಆ ಕವಿತೆಯನ್ನು ಪ್ರಕಟಿಸಿಯೂ ಬಿಟ್ಟೆ. ಆಮೇಲೆ ಮತ್ತೊಮ್ಮೆ ಓದುವಾಗ ಚೆನ್ನಾಗಿಲ್ಲವಲ್ಲ ಪುಸ್ತಕದಲ್ಲಿ ಪ್ರಕಟಿಸಿಬಿಟ್ಟೆನೆಂದು ನಾಚಿಕೆಯಾಯಿತು. ಎರಡು ವರ್ಷಗಳ ನಂತರ ಅದೇ ಕವಿತೆ ನನ್ನಿಂದ ಮತ್ತೆ ಬರೆಯಿಸಿಕೊಂಡಿತು. ಹೊಸ ರೂಪ ಪಡೆದು ಅಚ್ಚುಕಟ್ಟಾಗಿದೆ ಅಂತ ಸಮಾಧಾನವು ಆಯಿತು. ಕೆಲವು ದಿನಗಳಷ್ಟೇ ಮತ್ತೆ ಮತ್ತೆ ಓದಿದಾಗ ಇದೂ ಸಹ ಚೆನ್ನಾಗಿಲ್ಲ ಶಾಪಗ್ರಸ್ತ ಕ್ಷತ್ರಿಯನಿಗೆ ಯುದ್ಧ ಕಾಲದಲ್ಲಿ ಉಪಯೋಗಿಸುವ ಶಸ್ತ್ರಗಳ ಮಂತ್ರ ಮರೆತುಹೋಗುವಂತೆ ನನಗೇನಾದರೂ ಕವಿತೆ ಬರೆಯುವುದು ಮರೆತುಹೋಯಿತೇ? ಎಂದು ಭಯವಾಯಿತು. ಇದಾಗಿ ಮತ್ತೆರಡು ವರುಷಲ್ಲಿ ಅದೇ ಕವಿತೆಯೇ ಹೊಸರೂಪ ತೊಟ್ಟುಕೊಂಡಿತು. ಜೊತೆಗೆ ಹಾಯ್ಕು ಎಂಬ ಹೊಸ ಉಡುಪು ಉಟ್ಟುಕೊಂಡಿತು. ಇದೀಗ ಆ ಕವಿತೆಯ ವಿಚಾರದಲ್ಲಿ ನೆಮ್ಮದಿಯಿದೆ. ಆ ಮೂರು ಕಿರುಗವಿತೆಗಳನ್ನು ನಿಮ್ಮ ಓದಿಗಾಗಿ, ಬರೆದ ದಿನಾಂಕ ಸಹಿತವಾಗಿ ಇಲ್ಲಿ ಬರೆಯುತ್ತಿದ್ದೇನೆ. ಎಲ್ಲವನ್ನೂ ಓದಿದ ನಂತರ ಅಂದು ಶವವಾದ ಜಿರಳೆಗೆ ಅಂತಿಮ ನಮನ ಸಲ್ಲಿಸಿ. ಜೊತೆಗೆ ಶವವನ್ನು ಹೊತ್ತೊಯ್ದ ಇರುವೆಗಳಿಗೂ ಮನದಲ್ಲೇ ಧನ್ಯವಾದ ತಿಳಿಸಿ. ಕಾರಣ ಆ ಜಿರಳೆಯ ಸಾವು, ಹೆಣ ಹೊತ್ತುಹೋದ ಇರುವೆಗಳ ಹಿಂಡು. ಈ ಕ್ರಿಯೆ ನಡೆಯದಿದ್ದರೆ ನಾನು ಆ ಮೂರು ಕಿರುಪದ್ಯಗಳನ್ನು ಮತ್ತು ಈ ಗದ್ಯವನ್ನು ಬರೆಯುತ್ತಿರಲಿಲ್ಲ. ನೀವು ಓದುತ್ತಿರಲಿಲ್ಲ.
08/07/2015
ಸತ್ತ ಜಿರಲೆಯ
ಹೆಣ ಹೊರುವ ಇರುವೆಗೆ
ಹೊಟ್ಟೆ ತುಂಬಿದಾಗಲೇ
ಶವವಾದ ಜಿರಲೆಗೆ
‘ಅಂತ್ಯ’ಕ್ರಿಯೆ
02/04/2017
ಮನೆಯಲ್ಲಿಯೇ ಶವಯಾತ್ರೆ
ಅಂತ್ಯ ಸಂಸ್ಕಾರ
ಇರುವೆಗಳ ಹಿಂಡು
ಹೆಣ ಹೊರುತ್ತಿವೆ
18/07/2019
ಸಾಲು ಇರುವೆಗಳ ಶಿಸ್ತು
ಚದುರಿ ಹೋಗಿದೆ
ಇಲ್ಲೊಂದು ಸತ್ತ ಜಿರಳೆ
-ನವೀನ್ ಮಧುಗಿರಿ
Beautiful. ಗ್ರಾಮ್ಯ ಸೊಗಡು ತುಂಬಿದ ನಿಮ್ಮ ಬರಹಗಳು ಚಂದ, ಕೊನೆಯಲ್ಲಿ ಇರುವ ಪುಟ್ಟ ಹನಿಗವನಗಳು ಆಕರ್ಷಕ.
ಧನ್ಯವಾದಗಳು ಮೇಡಮ್..
ಚೆಂದದ ಬರಹ. ನಮ್ಮ ಬಾಲ್ಯ ನೆನಪಾಯಿತು. ಒಳ್ಳೆಯ ಲೇಖನ ಓದಿಸಿದ್ದೀರಿ ನವೀನ್ ಮಧುಗಿರಿ. ತಮಗೆ ಧನ್ಯವಾದಗಳು..
ಧನ್ಯವಾದಗಳು ತಮಗೆ..
ಇರುವೆಗಳ ಬಗ್ಗೆ ಸಾಕಷ್ಟು ವಿಷಯ ಬರೆದಿದ್ದೀರಿ..ಮಳೆಗಾಲ ದ ಬಾಲ್ಯದ ಅನುಭವ ವಾನ್ನೂ ಸೇರಿಸಿ,ಜೊತೆಗೆ ಕವನ ವನ್ನೋ ಸೇರಿಸಿ. ಲೇಖನ ಚೆನ್ನಾಗಿತ್ತು.
ಧನ್ಯವಾದಗಳು ಸಾವಿತ್ರಿ ಮೇಡಮ್..
ಹೌದು..ಶಿಸ್ತಿಗೆ ಇರುವೆಗೆ ಇರುವೆಯೇ ಸಾಟಿ. ಇರುವೆಯ ಬಗೆಗಿನ ತಿಳಿ ಹಾಸ್ಯ ಮಿಶ್ರಿತ ಲೇಖನ ಸೊಗಸಾಗಿ ಮೂಡಿಬಂದಿದೆ.
ಧನ್ಯವಾದಗಳು …
ದಟ್ಟ ಅನುಭವದ ಸೊಗಸಾದ ಬರಹ.
ಧನ್ಯವಾದಗಳು ವಸುಂಧರ ಮೇಡಮ್..