ಅತ್ಯಂತ ಖಾರದ‌ ಐಸ್‌ಕ್ರೀಂ ರೆಸ್ಪಿರೊ ಡೆಲ್‌ಡಿಯಾವೊಲೊ

Share Button

ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯಸ್ಸಾದ ಮುದುಕರವರೆಗೂ ಪ್ರತಿಯೊಬ್ಬರೂ ಇಷ್ಟ ಪಡುವ‌ ಏಕೈಕ ಖಾದ್ಯ ‌ಐಸ್‌ಕ್ರೀಂ. ವಿಶ್ವದಲ್ಲಿ ‌ಐಸ್‌ಕ್ರೀಂ ಸವಿಯುವ ನಾಲಿಗೆ‌ ಎಷ್ಟಿದೆಯೋ ‌ಅದಕ್ಕೂ ಹೆಚ್ಚು ಪ್ರಭೇದ‌ ಈ ಒಂದು ಖಾದ್ಯದಲ್ಲಿದೆ. ಎಷ್ಟರಮಟ್ಟಿಗೆ ವಿಶ್ವವ್ಯಾಪಿ ಪ್ರಸಿದ್ದಿಯಾಗಿದೆಯಂದರೆ ಜಗತ್ತಿನ ಯಾವುದೇ ಮೂಲೆಗೆ ಹೋದರೂ‌ ಅಲ್ಲಿ‌ ಐಸ್‌ಕ್ರೀಂ ಲಭ್ಯ. ದೇಶ, ಸಂಸ್ಕೃತಿ, ವಾತಾವರಣ, ಸಂಪ್ರದಾಯ, ಆಚರಣೆ,ಸ್ಥಳೀಯವಾಗಿ ದೊರಕುವ ಹಣ್ಣು ಹಂಪಲುಗಳು ಇವೇ ಮುಂತಾದವುಗಳಿಗೆ ತಕ್ಕುದಾದ ‌ಐಸ್ ಕ್ರೀಂಗಳು ಹಾಗೂ ಐಸ್‌ಕ್ರೀಂನ ‌ಇತರೆ ರೂಪಗಳನ್ನು ತಯಾರಿಸಿ ಪರಿಚಯಿಸುವ ಕ್ರಿಯೆ‌ ಅನಾದಿ ಕಾಲದಿಂದ ನಡೆದು ಬಂದಿದೆ. ನೀವು ಯಾವುದೇ ಬಣ್ಣ ಹಾಗೂ ಸುವಾಸನೆಯ ಕ್ರಮಪಲ್ಲಟಣೆ ಮತ್ತು ಸಂಯೋಜನೆಯನ್ನು ಕಲ್ಪಿಸಿಕೊಳ್ಳಿ ಅಂತಹ‌ ಐಸ್‌ಕ್ರೀಂ ವಿಶ್ವದ‌ ಎಲ್ಲಾದರೂ ಖಂಡಿತ ತಯಾರಾಗಿಯೇ ‌ಇರುತ್ತದೆ.

ಇಂತಹ ‌ಅಪ್ರತಿಮ ಸರ್ವಜನ ಮೆಚ್ಚುಗೆಯ ಖಾದ್ಯದ ಸವಿಯನ್ನು ಸವಿಯುವಾಗ ಸಾಯುವ ಆಲೋಚನೆ ಮನಃಪಟಲದ ಮೇಲೆ ಸುಳಿಯಲು ಸಾಧ್ಯವೇ? ಏನೇ ಖಾಯಿಲೆ ಖಸಾಲೆಗಳಿದ್ದರೂ, ಸಾಯುವ ಸಮಯದಲ್ಲೂ‌ಒಮ್ಮೆ ಸವಿದು ಬಿಡುವ ‌ಎಂಬ ಆಸೆ ಅಂತರಾಳದಿಂದ ಹುಟ್ಟುವುದು ಸಹಜ. ಹಾಗಿರುವಾಗ ‌ಇನ್ನೆಲ್ಲಿಯ ಮರಣದ ಚಿಂತೆ?

ನರಕದ ಕದ ತಟ್ಟಿ ಬರುವಂತಹ ಕ್ರಿಯೆಗೆ ‌ಒಳಗಾಗುವ ‌ಐಸ್‌ಕ್ರೀಂ ಪ್ರಭೇದವನ್ನು ತಯಾರಿಸಿದ (ಅಪ)ಕೀರ್ತಿ ಸಲ್ಲುವುದು ಸ್ಕಾಟ್ಲೆಂಡಿನ ಗ್ಲಾಸ್ಗೋದ ಕಾರ್ಡೋನಾಲ್ಡ್‌ನಲ್ಲಿರುವ ‘ಆಲ್ಡ್‌ ವಿಚ್ ‌ಕೆಫೆ‌ ಅಂಡ್‌ ಐಸ್‌ಕ್ರೀಂ’ ಪ್ಯಾರ್ಲರ್‌ಗೆ. ಈ ಪ್ಯಾರ್ಲರ್‌ನಲ್ಲಿ ತಯಾರಾಗಿ ಮಾರಾಟವಾಗುವ‌ ಐಸ್‌ಕ್ರೀಂ ವಿಶ್ವದಲ್ಲೇ ‘ಅತಿ ಹೆಚ್ಚು ಅಪಾಯಕಾರಿ’ ಎಂಬ ಹಣೆ ಪಟ್ಟಿಯನ್ನು ಕಟ್ಟಿಕೊಂಡಿದೆ. ಹೌದೇ!! ಎಂದು ಹುಬ್ಬೇರಿಸಬೇಡಿ. ಇದು ನಿಜ. ಇದು‌ ಎಲ್ಲಾ‌ ಐಸ್ ಕ್ರೀಂಗಳಂತೆ ಸಿಹಿ ಐಸ್‌ಕ್ರೀಂ ಅಲ್ಲ. ಬದಲಿಗೆ ಖಾರದ‌ ಐಸ್‌ಕ್ರೀಂ!! ಖಾರವೆಂದರೆ ‌ಅಂತಿಂತ ಖಾರವಲ್ಲ. ನಾಲಿಗೆಗೆ ಸೋಕಿದರೆ ಕಣ್ಣು, ಮೂಗು, ಬಾಯಿ ಎಲ್ಲಾ ಕಡೆಯಿಂದ ನೀರು ಕಿತ್ತುಕೊಳ್ಳುವಷ್ಟು ಖಾರ. ಆಲ್ಡ್‌ ವಿಚ್‌ ಕೆಫೆ‌ ಅಂಡ್ ‌ಐಸ್‌ಕ್ರೀಂ ಪ್ಯಾರ್ಲರ್ ವ್ಯಾಲೆಂಟೈನ್’ಡೇ’ಗಾಗಿ ‌ಈ ವಿಶೇಷ ಐಸ್‌ಕ್ರೀಂ ಪ್ರಭೇದವನ್ನು ಫೆಬ್ರವರಿಯಲ್ಲಿ ಬಿಡುಗಡೆ ಮಾಡಿತು. ‘ರೆಸ್ಪಿರೊ ಡೆಲ್‌ಡಿಯಾ ವೊಲೊ’ಎಂಬ ವಿಚಿತ್ರ ನಾಮಧೇಯದ ‌ಐಸ್‌ಕ್ರೀಂ ಅದು. ಇದನ್ನು‌ಇಂಗ್ಲೀಷ್ ಹಾಗೂ ಕನ್ನಡ ಭಾಷೆಗೆ ತರ್ಜುಮೆ ಮಾಡಿದಲ್ಲಿ ‘ಬ್ರೀತ್‌ ಆಪ್ ‌ದ ಡೆವಿಲ್’ – ‘ದೆವ್ವದ ಉಸಿರು’ ಎನ್ನಬಹುದೇ?

ಚಿತ್ರಕೃಪೆ: ಅಂತರ್ಜಾಲ

ಈ ವಿಸ್ಮಯಕಾರಿ ಮಸಾಲೆಯುಕ್ತ ‌ಅತ್ಯಂತ ಖಾರದ ‌ಐಸ್‌ಕ್ರೀಂನಲ್ಲಿ ಬಳಸಿರುವ ಮೂಲ ಪದಾರ್ಥ ಕೆರೊಲಿನಾ ರೀಪರ್ ಮೆಣಸು. ಈ ಮೆಣಸು 15,69,500 ಸ್ಕ್ಕೊವಿಲ್ಲೆ ಹೀಟ್ ‌ಯೂನಿಟ್‌ನಷ್ಟು ಖಾರವನ್ನು ‌ಐಸ್‌ಕ್ರೀಂಗೆ ನೀಡುತ್ತದೆ. ಏನಿದು ಸ್ಕೊವಿಲ್ಲೇ ಹೀಟ್‌ಯೂನಿಟ್? ಸ್ಕೊವಿಲ್ಲೇ ಮಾಪಕವು ಮೆಣಸಿನಕಾಯಿ ಅಥವಾ ಖಾರವನ್ನು ನೀಡುವ ಮಸಾಲೆ ಪದಾರ್ಥಗಳ ತೀಕ್ಷ್ಣತೆಯ ಆಳತೆಗೋಲು. ಸಾಮಾನ್ಯವಾಗಿ ಕರ್ನಾಟಕದಮನೆಗಳಲ್ಲಿ ಬಳಸುವ ಬ್ಯಾಡಗಿ ಹಾಗೂ ಗುಂಟೂರು ಮೆಣಸಿನಕಾಯಿಗಳ ತೀಕ್ಷ್ಣತೆಯಮೌಲ್ಯ ನಿರ್ಣಯ ‌ಈ ಮಾಪನದಲ್ಲಿ ಮಾಡಿದರೆ ಅವು ಕ್ರಮವಾಗಿ ‌ಅಂದಾಜು 50000 ಮತ್ತು 35000 ಯೂನಿಟ್ಟುಗಳಷ್ಟಿದೆ. ಇದರ‌ ಆಧಾರದ ಮೇಲೆ ‘ರೆಸ್ಪಿರೊ ಡೆಲ್‌ಡಿಯಾವೊಲೊ’ ಐಸ್‌ಕ್ರೀಂ ಅನ್ನು ಬ್ಯಾಡಗಿ ಮೆಣಸಿನಕಾಯಿಗೆ ಹೋಲಿಸಿದರೆ ಅದರ ಖಾರ ಬ್ಯಾಡಗಿ ಖಾರಕ್ಕಿಂತ ಕನಿಷ್ಟ 30 ಪಟ್ಟು ಹೆಚ್ಚು ಖಾರಯುಕ್ತ.

ಖಾರದ ಈ ಐಸ್‌ಕ್ರೀಂ ತಯಾರಿಕೆ ಹಾಗೂ ವಿತರಣೆಯ ಸಮಯದಲ್ಲಿ ತಯಾರಕರು ಹಾಗೂ ವಿತರಣೆಗಾರರು ಕೈಗಳಿಗೆ ಗ್ಲೌಸ್ ಹಾಕಿಕೊಳ್ಳುವುದನ್ನು ಮರೆಯುವುದಿಲ್ಲ. ಚರ್ಮದ ಮೇಲೆ ಈ ಖಾರದಿಂದಾಗುವ ಪರಿಣಾಮ ಹಾಗೂ ಉರಿತ ಹೆಚ್ಚು ಭಯಂಕರ. ಇಂತಹ‌  ಅಪರೂಪದ ಖಾರದ‌ ಐಸ್‌ಕ್ರೀಂ ಸೇವಿಸಿದರೆ ಬದುಕುಳಿಯಲು ಸಾಧ್ಯವೇ? ಹಾಗಾಗಿ ಈ ಐಸ್‌ಕ್ರೀಂ ತಯಾರಕರು‌ ಇದನ್ನು ಸವಿಯಲು ಬಂದವರಿಗೆ ಕೆಲವು ಕರಾರುಗಳನ್ನು ವಿಧಿಸುತ್ತಾರೆ. ಈ ಐಸ್‌ಕ್ರೀಂ ದುರ್ಭಲ ಹೃದಯದವರಿಗೆ‌ ಅಲ್ಲ. ಇದನ್ನು ಸವಿಯಲು‌ ಇಚ್ಛಿಸುವವರು ಕನಿಷ್ಟ ಹದಿನೆಂಟು ವರ್ಷ ದಾಟಿರಬೇಕು ‌ಎಂಬುದು ಮೊದಲನೇ ಕರಾರಾದರೆ‌ ಎರಡನೆಯದು‌ ಇದರಿಂದಾಗುವ‌ ಅಪಾಯಕ್ಕೆ ‘ನಾನೇ ಸ್ವಯಂಕಾರಣ’ ಎಂಬ ಮುಚ್ಚಳಿಕೆಗೆ ಸಹಿ ಮಾಡಬೇಕು. ವ್ಯಾಲಂಟೈನ್‌ಡೇಯ ಕ್ಲೀಷೆಯನ್ನು ಮುರಿಯಲು ಇದು ‌ಅತ್ಯತ್ತಮ ಮಾರ್ಗ!!!

ತನ್ನ ಪ್ರಿಯ ಗ್ರಾಹಕರಿಗೆ ನೀಡುವ ಮುಚ್ಚಳಿಕೆಯಲ್ಲಿ ‘ವೈಯುಕ್ತಿಕಗಾಯ, ಅನಾರೋಗ್ಯ ಮತ್ತು ಸಂಭವನೀಯ ಪ್ರಾಣ ಹಾನಿಗೆ’ ತಯಾರಕರು ಜವಾದ್ಬಾರರಲ್ಲ ‌ಎಂದು ಸ್ಪಷ್ಟವಾಗಿ ನಮೂದಿಸಿ ಸಹಿ ಪಡೆಯುತ್ತಾರೆ. ಈ ಐಸ್‌ಕ್ರೀಂ ಸೇವನೆಯಿಂದ ಆಗಬಹುದಾದ‌ ಅಪಾಯದ ಪೂರ್ಣ ವಿವರವನ್ನು ಗ್ರಾಹಕರ ಗಮನಕ್ಕೆ ತಂದು ಎಚ್ಚರಿಸಿದ ನಂತರವೇ ಪ್ಯಾರ್ಲರ್‌ನವರು‌ ಇದನ್ನು ವಿತರಿಸುವುದು.

ಆಲ್ಡ್‌ ವಿಚ್ ‌ಕೆಫೆ‌ ಅಂಡ್‌ ಐಸ್‌ಕ್ರೀಂ ಪ್ಯಾರ್ಲರ್‌ ಐಸ್‌ಕ್ರೀಂ ತಯಾರಿಕೆಯಲ್ಲಿ 1936 ಕ್ಕೂ ಹಿಂದಿನ ಇಟಾಲಿಯನ್‌ ತಯಾರಿಕಾ ವಿಧಾನವನ್ನೇ ಪಾಲಿಸಿಕೊಂಡು ಬಂದಿದೆ.ಈ ಐಸ್‌ಕ್ರೀಂನಲ್ಲಿ ಬಳಕೆಯಾಗಿರುವ ಕಚ್ಚಾ ಪದಾರ್ಥಗಳ ರಹಸ್ಯ ಸೂತ್ರವನ್ನು ವಾಣಿಜ್ಯ ದೃಷ್ಟಿಯಿಂದ ಬಯಲು ಮಾಡುವುದಿಲ್ಲ. ಸ್ಥಳೀಯವಾಗಿ ದೊರಕುವ ಪದಾರ್ಥ ಹಾಗೂ ಇಟಲಿಯಿಂದ ‌ಆಮದು ಮಾಡಿಕೊಂಡ ಕೆಲವು ಪದಾರ್ಥಗಳನ್ನು ಬಳಕೆ ಮಾಡಲಾಗಿದೆ ‌ಎಂದು ಮಾತ್ರ ತಯಾರಕರು ತಿಳಿಸುತ್ತಾರೆ.

ಐಸ್‌ಕ್ರೀಂನ ಹೊಸ ಹೊಸ ಪ್ರಭೇದಗಳ ಸೃಷ್ಟಿ ಆರಂಭವಾಗುವುದು ‌ಇಟೆಲಿಯಲ್ಲಿ .ಅಲ್ಲಿ ಡೆವಿಲ್ಸ್ ಸೇತುವೆ ‌ಎಂಬೊಂದು ಸ್ಥಳವಿದೆ. ವಿಶ್ವಾದ್ಯಂತ ಹರಡಿರುವ‌ ಇಟೆಲಿ ಮೂಲದ ‌ಐಸ್‌ಕ್ರೀಂ ತಯಾರಕರ ಕುಟುಂಬಗಳು ವರ್ಷಕ್ಕೊಮ್ಮೆ‌ಇಲ್ಲಿ ಸೇರಿ ತಮ್ಮತಮ್ಮ ವ್ಯಾಪಾರ ವಾಹಿವಾಟಿನ ಬಗ್ಗೆ, ಹೊಸ ಹೊಸ ಪ್ರಭೇದಗಳ ಬಗ್ಗೆ, ಅವಿಷ್ಕಾರಗಳ ಬಗ್ಗೆ, ತಯಾರಿಕಾರೀತಿ ನೀತಿ ಬಗ್ಗೆ ದೀರ್ಘವಾಗಿ ಚರ್ಚಿಸುವುದುಂಟು ‌ಎನ್ನುತ್ತಾರೆ‌ ಆಲ್ಡ್‌ವಿಚ್ ‌ಕೆಫೆ ‌ಅಂಡ್ ‌ಐಸ್‌ಕ್ರೀಂ ಪ್ಯಾರ್ಲರ್‌ನ ಮಾಲೀಕ ಮಾರ್ಟಿನ್ ಬಂಡೋನಿ ‌ಅವರ ತಮ್ಮ ಲೀ ಬಂಡೋನಿ. ಡೆವಿಲ್ಸ್ ಸೇತುವೆ ಮೇಲಾದ ಬಹಳಷ್ಟು ವಿನಿಮಯಗಳನ್ನು ತಾವಿರುವ ದೇಶದಲ್ಲಿ ಕಾರ್ಯಗತಗೊಳಿಸಲು ರೂಪುರೇಷೆಗಳನ್ನು ಹಣೆಯಲಾಗುವುದು. ಹಾಗಾಗಿಯೇ ‌ಇರಬೇಕು ಈ ಒಂದು ಹೊಸ ಪ್ರಭೇದದ ‌ಐಸ್‌ಕ್ರೀಂಗೆ ‘ರೆಸ್ಪಿರೊ ಡೆಲ್‌ ಡಿಯಾವೊಲೊ’ ಎಂದು ಹೆಸರಿಸಿರುವುದು.

ತಯಾರಕರ ಪ್ರಕಾರ‌ ಇದರ ಬೆಲೆ ಹೆಚ್ಚಿಲ್ಲ. ಮಾರುಕಟ್ಟೆಯಲ್ಲಿ ಲಭ್ಯವಿರುವ ಬೇರಾವುದೇ ಮಾಮೂಲಿ ಐಸ್‌ಕ್ರೀಂಗೆ ಹೋಲಿಸಬಹುದು.

-ಕೆ.ವಿ.ಶಶಿಧರ

6 Responses

  1. ನಯನ ಬಜಕೂಡ್ಲು says:

    ಹೊಸ ವಿಚಾರ

  2. Savithri bhat says:

    ನನಗೂ ಇದು ಹೊಸ ವಿಚಾರ. ಚೆನ್ನಾಗಿದೆ

  3. ಶಂಕರಿ ಶರ್ಮ says:

    ಯಬ್ಬಾ.. ನಾನಂತೂ ಖಾರವೆಂದರೆ ಮೈಲು ದೂರ ಓಡುವವಳು! ನನಗಂತೂ ಓದುವಾಗಲೇ ತುಂಬಾ ಖಾರವಾಯ್ತು!! ಹೊಸ ವಿಷಯದ ಮೆಲಿನ ಸೊಗಸಾದ ಲೇಖನ.

  4. Anonymous says:

    ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು

  5. ಕೆ.ವಿ.ಶಶಿಧರ says:

    ಪ್ರತಿಕ್ರಿಯೆ ನೀಡಿದ ಎಲ್ಲರಿಗೂ ಅನಂತಾನಂತ ಧನ್ಯವಾದಗಳು

  6. km vasundhara says:

    ಓ… ವಿದೇಶಿಯರು ನಾಲಗೆಯ ಮೇಲೆ ಖಾರವನ್ನೇ ಸೋಕಿಸದವರು.. ಅದು ಹೇಗೆ ಇಂತಹ ಖಾರದ ಪದಾರ್ಥ ಸೃಷ್ಟಿಸಿದರು?! ಯಾರ ಪಂಥಾಹ್ವಾನದ ಫಲವಿದು? ಕುತೂಹಲಕರವಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: