ಕವಿ ಕೆ ಎಸ್ ನ ನೆನಪು 5: ವರಕವಿಯ ಸಖ್ಯ

Share Button

ನಮ್ಮ ತಂದೆಯವರು  ವರಕವಿ ಬೇಂದ್ರೆಯವರೊಡನೆಯೂ ಗೌರವಮಿಶ್ರಿತ ಸ್ನೇಹಭಾವವನ್ನು ಹೊಂದಿದ್ದರು.ಬೇಂದ್ರೆಯವರು ಕೆ ಎಸ್ ನ ರ ಅಭಿನಂದನ ಗ್ರಂಥ ಚಂದನಕ್ಕೆ ಒಂದು ಆಶೀರ್ವಾದಪೂರ್ವಕ ಪತ್ರವನ್ನು ಬರೆದು ಹಾರೈಸಿದ್ದರು.

ನಮ್ಮಣ್ಣ ಹರಿಹರ 1971ರಿಂದ 1978ರವರೆಗೆ ಧಾರವಾಡದಲ್ಲಿ, ಕರ್ಣಾಟಕ ವಿಶ್ವವಿದ್ಯಾಲಯದ ಪ್ರಕಟಣ ವಿಭಾಗದಲ್ಲಿ ಉದ್ಯೋಗದಲ್ಲಿದ್ದಾಗ,ನಮ್ಮ ತಂದೆ   ಆಗಾಗ್ಗೆ ಅಲ್ಲಿಗೆ ಭೇಟಿ ನೀಡುವ ಪ್ರಸಂಗ ಬರುತ್ತಿತ್ತು.ಆಗೆಲ್ಲ ತಪ್ಪದೆ  ಚನ್ನವೀರ ಕಣವಿಯವರ ಜತೆಯೋ ,ಎನ್ಕೆ ಅವರ ಜತೆಯೋ ಸಾಧನಕೇರಿಯ ಶ್ರೀಮಾತಾಕ್ಕೆ ಬೇಂದ್ರೆಯವರನ್ನು ಕಾಣಲು ಹೋಗುವ ಅವಕಾಶವನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ.ಅಲ್ಲಿ ಬೇಂದ್ರೆಯವರ ಮಾತಿನ ಝರಿಯಲ್ಲಿ ಮಿಂದು,ಅವರ ಮನೆಯ ಕಲ್ಲುಸಕ್ಕರೆಯನ್ನು ಸವಿದು ಬರುತ್ತಿದ್ದರು. (ಬಂದವರಿಗೆಲ್ಲ ಕಲ್ಲುಸಕ್ಕರೆಯ ಆತಿಥ್ಯ ನೀಡುವುದು ಬೇಂದ್ರೆಯವರ ಮನೆಯ ಸಂಪ್ರದಾಯವಾಗಿತ್ತು. ಬೇಂದ್ರೆಯವರು ಗತಿಸಿದ ನಂತರವೂ ಈ ಪದ್ದತಿ ಮುಂದುವರೆದಿತ್ತು)

1972ರಲ್ಲಿ ಒಂದು ಸ್ಮರಣೀಯ ಪ್ರಸಂಗ ಒಂದು ಭಾನುವಾರ ಬೆಳಿಗ್ಗೆ  ಬೆಂಗಳೂರಿನ ವಿಜಯಾ ಕಾಲೆಜಿನ  ಕನ್ನಡ ಪ್ರೊಫೆಸರ್  ಆರ್ ಜಿ ಕುಲಕರ್ಣಿಯವರ ಮಗ ಬಂದು “ನಮ್ಮ ತಂದೆಯವರು ಮಧ್ಯಾಹ್ನ 3 ಗಂಟೆ ನಂತರ ನಿಮ್ಮ ಮನೆಗೆ  ಬೇಂದ್ರೆಯವರನ್ನು ಕರೆದುಕೊಂಡು ಬರಲು ಅನುಕೂಲವಿದೆಯೇ“? ಎಂದು ಕೇಳಿದರು .ನಮ್ಮ ತಂದೆಯವರು “ಅಗತ್ಯವಾಗಿ  ಬರಲಿ.ಅವರಿಗೆ ಸ್ವಾಗತ“ ಎಂದರು.

ಮನೆಯಲ್ಲಿ ಸಂಚಲನ,ಸಂಭ್ರಮದ ವಾತಾವರಣ. ಕಾವ್ಯಗಾರುಡಿಗನ ಬರವಿಗಾಗಿ ಎಲ್ಲರಿಗೂ ಕಾತರ.

3 ಗಂಟೆಗೆ ಸರಿಯಾಗಿ  ಬೇಂದ್ರೆಯವರು ಕುಲಕರ್ಣಿಯವದರೊಂದಿಗೆ  ಮನೆಗೆ ಆಗಮಿಸಿದರು. ಕೋಟು,ಪಂಚೆ, ಕರಿಟೋಪಿ, ಹಣೆಯಲ್ಲಿ ಢಾಳಾದ  ಕುಂಕುಮ ಕೈಯಲ್ಲಿ ಛತ್ರಿ .ಬಂದವರೆ “ನರಸಿಂಹಸ್ವಾಮಿ ,ನನಗೆ ನಿನ್ನ ಬಗ್ಗೆ,ನಿನ್ನ ಕಾವ್ಯದ ಬಗ್ಗೆ ಗೊತ್ತು.  ನಿನ್ನ ಕುಟುಂಬದ ಬಗ್ಗೆ ಈಗಿಂದಿಗಲೇ ತಿಳೀಬೇಕಾಗಿದೆ.ಕರೆ ಎಲ್ಲರನೂ” ಎಂದರು.

ಮನೆಯಲ್ಲಿದ್ದ ಪ್ರತಿಯೊಬ್ಬರನ್ನೂ ಪರಿಚಯ ಮಾಡಿಕೊಂಡರು.” ಏನ ಹೆಸರು? ಯಾವ ಸಾಲಿ?,ಚಲೊ  ಓದಬೇಕು ಅಪ್ಪಗ ಕೀರ್ತಿ ತರಬೇಕು” ಎಂದು ಪ್ರತಿಯೊಬ್ಬರನೂ ವಿಚಾರಿಸಿ,ತಲೆ ಮೇಲೆ ಕೈ ಇರಿಸಿ ಆಶೀರ್ವಾದ ಮಾಡಿದರು.

ವರಕವಿ ದ.ರಾ.ಬೇಂದ್ರೆ

ಅವರ ದೃಷ್ಟಿ ಅಡುಗೆಮನೆಯತ್ತಲೂ ಹೊಯಿತು,ಬಾಗಿಲಲಿ ನಿಂತು “ಏನು ನಡೆಸಿದ್ದಿ ತಂಗೆವ್ವ ?’ ಎಂದು ನಮ್ಮ ತಾಯಿಯವರನ್ನು ಕೇಳಿದರು.

“ಹಿರೇಕಾಯಿ ಬೋಂಡ ಮಾಡ್ತಿದ್ದೀನಿ.”ಎಂದರು ನಮ್ಮ ತಾಯಿ.

‘ಓಹೋ ಹೀರೇಕಾಯಿ ಬೋಂಡ ,ಬಹಳ ರುಚಿ,ಮುದುಕ ಜೀರ್ಣ ಆಗೋಲ್ಲ ಇವಗೆ ಅಂತ ಕೊಡದೆ ಹೋಗಬೇಡವ್ವ “ ಎಂದು ತಮಾಷೆ ಮಾಡಿದರು.

ಇದ್ದಕ್ಕಿದ್ದಂತೆ ಅವರ ದೃಷ್ಟಿ  ಅಡುಗೆಮನೆಯ  ಒಂದು ಮೂಲೆಯಲ್ಲಿ ದೇವರಗೂಡಲ್ಲಿದ್ದ ದೊಡ್ಡ ಪೋಟೋದತ್ತ ಹರಿಯಿತು.

“ಇದೇನು ಇಲ್ಲಿ’ ? ಎಂದು ಕೇಳಿದರು.

“ಅದು ಗೊಂದಾವಳೇಕರ ಮಹಾರಾಜ ಬ್ರಹ್ಮಚೈತನ್ಯರು” ಎಂದು ನಮ್ಮ ತಾಯಿ ಹೇಳಿದಾಗ .

“ಅದು ನನಗೂ ಗೊತ್ತು.ನಾನೂ ಆ ಕಡೆಯವನೇ ,ಇಲ್ಲಿ ಹೇಗೆ ಬಂತು ಎಂದು ಕೇಳಿದೆ.”

ಪೋಟೋ ಬಹಳ ಹಿಂದೆ ಗೊಂದಾವಳೇಕರರ ಪರಮಭಕ್ತರೊಬ್ಬರು  ನೀಡಿದ್ದೆಂದು ನಮ್ಮ ತಾಯಿ ತಿಳಿಸಿ.ಇಲ್ಲೆ ಬೆಂಗಳೂರಿನ ಹನುಮಂತನಗರದಲ್ಲಿ ಬ್ರಹ್ಮಚೈತನ್ಯಮಂದಿರ ಇದೆಯೆಂದು ಹೇಳಿದಾಗ .ಬೇಂದ್ರೆಯವರು

“ಕುಲಕರ್ಣಿ ಅದರ ಅಡ್ರೆಸ್ ಹಚ್ಚಿಕೊ,ಒಮ್ಮೆ ಅಲ್ಲಿಗೆ ಹೋಗಿಬರೋಣ ‘ಎಂದರು.( ಮುಂದಿನ ಬಾರಿ ಬೆಂಗಳೂರಿಗೆ ಬಂದಾಗ ಬ್ರಹ್ಮಚೈತನ್ಯಮಂದಿರಕ್ಕೆ ಭೇಟಿ ನೀಡಿ ಸಂತಸಪಟ್ಟರೆಂದೂ ತಿಳಿದುಬಂದಿತು.)

ಇಷ್ಟೆಲ್ಲ ಚಟುವಟಿಕೆಗಳನ್ನು ಮುಗಿಸಿ “ನರಸಿಂಹಸ್ವಾಮಿ ತಿಳಿದಿದ್ದಾಯ್ತು , ನಿನ್ನ ಸಂಸಾರ, ನಡೆಯಲಿನ್ನ ನಮ್ಮೊಳಗೆ  ಸಾಹಿತ್ಯ ವಿಚಾರ “ ಎಂದು ಮಾತಿಗೆ ಕುಳಿತರು.

ಈ ಅವಿಸ್ಮರಣಿಯ ಘಟನೆ ಸದಾ ಕವಿ ನೆನಪಾಗಿ ಕಾಡುತ್ತಿತ್ತು. ಮುಂದೊಂದು ದಿನ ನನ್ನಿಂದ ಇಂಥ  ಪದ್ಯವನ್ನೂ ಬರೆಸಿತು.

ವರಕವಿ

ಬಂದರು ವರಕವಿ ಮಲ್ಲಿಗೆ ಕವಿಯ ಮನೆಗೆ
ಕೆದರಿದ ಕೂದಲ ನಿಯಂತ್ರಿಸಲು ಟೊಪ್ಪಿಗೆ
ಹಣೆಗೆ ಕುಂಕುಮದ ಬಟ್ಟು:ಕಚ್ಚೆಪಂಚೆ,ಕೋಟು
ಕೈಯಲಿ ಛತ್ರಿ ನಿರಭಿಮಾನಿಯ ಚುಚ್ಚಿ ಎಬ್ಬಿಸಲು

ಎಲೆ ಕವಿ ನನಗೆ ನೀ ಗೊತ್ತು.ನಿನ್ನ ಕಾವ್ಯ ಕೂಡ
ಅಗಬೇಕಿದೆ ನಿನ್ನ ಸಮಸ್ತ ಕುಟುಂಬದ ಪರಿಚಯ
ಕರೆ ಎಲ್ಲ ಮಂದಿಯನು ಇಲ್ಲಿ ಈಗಿಂದೀಗಲೆ
ಉಳಿದ ಕೆಲಸ ಅವರ ಮಾತನಾಡಿಸಿದ ಮೇಲೆ

ಏ ತಮಾ,ಬಾ ಇಲ್ಲೆ, ಏನ ಹೆಸರು,ಯಾವ  ಸಾಲಿ?
ಛಲೊ ಓದಿ ನೀ ತರಬೇಕು ಮತ್ತ  ಅಪ್ಪಗ ಕೀರ್ತಿ
ಅಡುಗೆಯ ರಾಜ್ಯದಲಿ ಏನ ನಡೆಸಿದಿ ತಂಗೆವ್ವ?
ಓ,ಹಿರೇಕಾಯಿ ಬೋಂಡ ನನಗದು ಭಾಳ ಇಷ್ಟ

ಎಲೆ ಕವಿ ತಿಳಿದುಕೊಂಡಾಯ್ತು ನಿನ್ನ ಸಂಸಾರ
ನಡೆಯಲಿನ್ನ ನಮ್ಮೊಳಗೆ ಸಾಹಿತ್ಯದ ವಿಚಾರ

(ಮುಂದುವರಿಯುವುದು….)


-ಕೆ ಎನ್  ಮಹಾಬಲ
(ಕೆ ಎಸ್ ನ  ಪುತ್ರ, ನಿವೃತ್ತ ಉಪ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು )

ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ:  http://surahonne.com/?p=28613

3 Responses

  1. ಚೆನ್ನಾಗಿ ಮೂಡಿಬರುತ್ತಿದೆ…
    ಮುಂದುವರಿಯಲಿ..

  2. km vasundhara says:

    ಬಹಳ ಚೆನ್ನಾಗಿದೆ. ಇದೆಲ್ಲಾ ಅಪೂರ್ವ ವಿವರಗಳೇ. ಪುಸ್ತಕ ರೂಪದಲ್ಲಿಯೂ ಹೊರಬರಲಿ.

  3. ಶಂಕರಿ ಶರ್ಮ says:

    ಹಿರಿ ಕವಿಗಳ ಹಿರಿಮೆಯ ಬಗ್ಗೆ ಬರುವ ತಮ್ಮ ಲೇಖನ ಬಹಳ ಚೆನ್ನಾಗಿದೆ.

Leave a Reply to km vasundhara Cancel reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: