ಕವಿ ಕೆ.ಎಸ್.ನ ನೆನಪು 1 -ಅರಳಿತು ಮೈಸೂರ ಮಲ್ಲಿಗೆ
*ಅರಳಿತು ಮೈಸೂರ ಮಲ್ಲಿಗೆ. ಇದು ಕೃಷ್ಣಶಾಸ್ತ್ರಿಗಳ ಕೃಪೆ*
“ಅವತ್ತು ಕೃಷ್ಣಶಾಸ್ತ್ರಿಗಳ ಊಟದ ಏರ್ಪಾಡು ಬಹಳ ಜೋರಾಗಿತ್ತು.ಮಹಾರಾಜಾ ಕಾಲೇಜು ಅಂಗಳದಲ್ಲಿ ನೆಲದ ಮೇಲೆ ಬಾಳೆ ಎಲೆ,ಪ್ರತಿ ಎಲೆ ಮುಂದೂ ರಂಗೋಲೆ.ಚಿರೋಟಿ,ಗಸಗಸೆ ಪಾಯಸ ಮಾಡಿಸಿದ್ದರು.ಸ್ವತಃ ಕೃಷ್ಣಶಾಸ್ತ್ರಿಗಳೇ ಪ್ರತಿಯೊಬ್ಬರಿಗೂ ಚಿರೋಟಿ ಬಡಿಸ್ತಾ ಇದ್ರು…..” ಇದು ಸಾಮಾನ್ಯವಾಗಿ ನಮ್ಮ ಅಪ್ಪ ಅಪರೂಪಕ್ಕೆ ಬಂದ ನೆಂಟರೊಂದಿಗೆ ಹಂಚಿಕೊಳ್ಳುತ್ತಿದ್ದ ಸವಿನೆನಪುಗಳು. ಅಡುಗೆಮನೆಯಲ್ಲಿರುತ್ತಿದ್ದ ಅಮ್ಮ ತಮ್ಮ ಎಂದಿನ ಜೋರುದನಿಯಲ್ಲಿ “ಆಹಾ!ಊಟ ತಿಂಡಿ ವರ್ಣನೆ ಮಾಡೋದ್ರಲ್ಲಿ ನಿಸ್ಸೀಮರು. ಮೂವತ್ತು ವರ್ಷ ಆದ್ರೂ ಮರೆತಿಲ್ಲ….”ಎನ್ನುತ್ತಿದ್ದರು.
ಹೌದು.ಇದು ಮೈಸೂರ ಮಲ್ಲಿಗೆ ಕವನ ಸಂಕಲನದ ಬಿಡುಗಡೆ,ಲೋಕಾರ್ಪಣೆ ಅಥವಾ ಒಪ್ಪಿಸುವಿಕೆ ಸಮಾರಂಭದ ಊಟದ ಬಣ್ಣನೆ.ಪುಸ್ತಕ ಬಿಡುಗಡೆಯ ಸನ್ನಿವೇಶದ ವರ್ಣನೆಗಿಂತ ಊಟೋಪಚಾರದ ವಿವರಗಳೇ ಅವರ ಸ್ವಭಾವಕ್ಕೆ ಸಹಜವೆನ್ನುವಂತೆ ಪ್ರಕಟವಾಗುತ್ತಿದ್ದವು. ಕೆ ಎಸ್ ನ ಅವರ ಮೊದಲ ಕವನ ಕಬ್ಬಿಗನ ಕೂಗು. 1931 ರಲ್ಲಿ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾಯಿತು (ಈ ಕವನ ಅವರ ಸಮಗ್ರ ಕವನ ಸಂಕಲನ ಮಲ್ಲಿಗೆಯ ಮಾಲೆಯಲ್ಲಿ ಇದೆ.)
ಪಿ ಯು ಸಿ ಯಲ್ಲಿ ವಿಜ್ಞಾನ ವಿಷಯ ತೆಗೆದುಕೊಂಡಿದ್ದರೂ ,ಬಿ ಎ ಪದವಿ ತರಗತಿಯಲ್ಲಿ.ವಿದ್ಯಾಭ್ಯಾಸ ಮುಂದುವರೆಸಿದರು. ಹಠಾತ್ತನೆ ಅವರ ತಂದೆ ಸುಬ್ಬರಾವ್ ಕಾಲವಾದುದರಿಂದ ,ಜೀವನೋಪಾಯಕ್ಕಾಗಿ ವಿದ್ಯಾಭ್ಯಾಸ ನಿಲ್ಲಿಸಿ ಅವರ ತಂದೆಯವರು ಕೆಲಸಕ್ಕಿದ್ದ ಚಿನ್ನ,ಬೆಳ್ಳಿ ಸೆಟ್ಟರ ಅಂಗಡಿಯಲ್ಲಿ ಕೆಲಸಕ್ಕೆ ಸೇರಿ ಸ್ವಲ್ಪ ಕಾಲದ ನಂತರ ಮೈಸೂರಿನ ಮುನಿಸಿಪಲ್ ಕಚೇರಿಯಲ್ಲಿ ನೌಕರಿ ಪಡೆದರು.ಮೈಸೂರ ಮಲ್ಲಿಗೆಯ ಎಲ್ಲ ಕವನಗಳೂ 1931 ರಿಂದ 1941 ರ ಅವಧಿಯಲ್ಲಿ ಬರೆದುದು.
ಕೃಷ್ಣಶಾಸ್ತ್ರಿಗಳಿಗೆ ವಿಷಯ ತಿಳಿದು ಬರೆದ ಎಲ್ಲ ಕವನಗಳನ್ನೂ ತಮಗೆ ತಂದು ತೋರಿಸಲು ನಮ್ಮ ತಂದೆಯವರಿಗೆ ಪತ್ರ ಬರೆದರು. ಹಾಗೆ ಅವರಿಗೆ ತೋರಿಸಿದಾಗ ಅವರು ಪರಿಶೀಲಿಸಿ ಅಲ್ಪ,ಸ್ವಲ್ಪ ಸಲಹೆಗಳನ್ನು ಸೂಚಿಸಿ, ಎಲ್ಲ ಕವನಗಳನ್ನು ಕುವೆಂಪುರವರಿಗೆ ತೋರಿಸಲು ಕವಿಗೆ ತಿಳಿಸಿದರು. ಮೈಸೂರ ಮಲ್ಲಿಗೆಯ ಕವನಗಳು 1931 ರಿಂದ 1941 ರವರೆಗೆ ಪ್ರಬುದ್ಧ ಕರ್ಣಾಟಕದಲ್ಲಿ ಪ್ರಕಟವಾದವು.ತೀನಂಶ್ರೀ ಯವರ ಅವರ ಆರೈಕೆಯಲ್ಲಿ,ವೆಂಕಣ್ಣಯ್ಯನವರ ವಾತ್ಸಲ್ಯದಲ್ಲಿ ಕವಿಯ ಕವನಗಳು ಬೆಳೆದವು.
ಎ ಆರ್ ಕೃ ಹಾಗೂ ತೀನಂಶ್ರೀ ಈ ಕವನಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸಲು ನಿರ್ಧರಿಸಿದರು.ಆದರೆ ಇದನ್ನು ಮಾಸ್ತಿಯವರೂ ಪ್ರಕಟಿಸಲು ಮುಂದೆ ಬಂದದ್ದರಿಂದ ಕೆ ಎಸ್ ನ ರವರು ,ಅವರ ಆಶೀರ್ವಾದ ಪಡೆದು ಮುಂದುವರೆದರು..ಕೃತಿಗೆ ವಿಜಿಯವರಿಂದ ಮುನ್ನುಡಿ ಎಂಬ ಹೊನ್ನುಡಿಯೇ ದೊರತದ್ದೂ ಸುದೈವ. ಎ ಆರ್ ಕೃ ಅವರ ವಚನ ಭಾರತಕ್ಕೆ ರೇಖಾಚಿತ್ರಗಳನ್ನು ರಚಿಸಿದ್ದ ಪುರುಷೋತ್ತಮರಾಯರು ಕವಿತೆಗಳಿಗೆ ಪೂರಕವಾದ ಆಕರ್ಷಕ ರೇಖಾಚಿತ್ರಗಳನ್ನು ಬರೆದುಕೊಟ್ಟರು. (ಇಂದಿನ ಆವೃತ್ತಿಗಳಲ್ಲೂ ಆ ಚಿತ್ರಗಳಿವೆ) 1942ರ ಜನವರಿಯಲ್ಲಿ ,ಒಂದು ಸಂಜೆ , ಮಹಾರಾಜಾ ಕಾಲೆಜಿನ ವಿಶಾಲ ಅಂಗಳದಲ್ಲಿ ಮೈಸೂರ ಮಲ್ಲಿಗೆ ಅರಳುತ್ತದೆ. ಸ್ವತಃ ಕೃಷ್ಣಶಾಸ್ತ್ರಿಗಳೇ 27 ವರುಷದ ತರುಣ ಕವಿಯನ್ನು ವೇದಿಕೆಗೆ ಕರೆದೊಯ್ದು ಸಭೆಗೆ ಪರಿಚಯಿಸಿದರಂತೆ. ಅಲ್ಲದೆ ಮೈಸೂರ ಮಲ್ಲಿಗೆಯಿಂದ ಎರಡು ಪದ್ಯಗಳನ್ನೂ ವಾಚಿಸಿದರಂತೆ.ಕವಿಗೆ ಸಂಭಾವನೆಯಾಗಿ ನೂರು ರೂಪಾಯಿಯನ್ನೂ ಮತ್ತು ನೂರು ಪ್ರತಿಯನ್ನೂ ನೀಡಲಾಯಿತಂತೆ.
ಸಮಾರಂಭದಲ್ಲಿ ಬಿ ಎಂಶ್ರೀ,ಮಾಸ್ತಿ,ಡಿವಿಜಿ,ಕುವೆಂಪು ,ತೀನಂಶ್ರಿ,ಡಿ ಎಲ್ ನರಸಿಂಹಾಚಾರ್ ಮುಂತಾದ ಸಾರಸ್ವತ ಗಣ್ಯರು ಭಾಗವಹಿಸಿ ಹರಸಿದರೆಂದು ನಮ್ಮ ತಂದೆಯವರು ಹೇಳುತ್ತಿದ್ದರು.
ಕೃಷ್ಣಶಾಸ್ತ್ರಿಗಳು ಕನ್ನಡದ ಶ್ರೇಷ್ಠ ಸಾಹಿತ್ಯ ಪರಿಚಾರಕರು.ಉತ್ತಮ ಕೃತಿಗಳನ್ನು ಗಮನಿಸಿ,ಕವಿಗಳಿಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲದೆ ಕೃತಿ ಪ್ರಕಟಗೊಳ್ಳುವಂತೆ ಮಾಡಿ ಸಂತಸಪಡುತ್ತಿದ್ದ ಮಹಾನ್ ಚೇತನ . ಎ ಆರ್ ಕೃ ಅವರ ಈ ಉಪಕಾರವನ್ನು ನಮ್ಮ ತಂದೆಯವರು ಅವರ ಜೀವಮಾನದ ಕೊನೆಯವರೆಗೂ ಕೃತಜ್ಞತೆಯಿಂದ ಸ್ಮರಿಸುತ್ತಿದ್ದರು.
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ನಿವೃತ್ತ ಉಪ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು )
(ಮುಂದುವರಿಯುವುದು….)
ನಾಡಿನ ನೆಚ್ಚಿನ ಕವಿಯ ಕುರಿತು ಅವರ ಮಕ್ಕಳೇ ವಿಷಯ ಹಂಚಿಕೊಂಡಾಗ, ಓದಲು ಬಹಳ ಖುಷಿ ಎನಿಸುತ್ತದೆ. ಏಕೆಂದರೆ ಕವಿಗೆ ಸಂಬಂಧಿಸಿದ ಘಟನೆಗಳನ್ನು ನಿರೂಪಿಸುವವರು ಅವುಗಳನ್ನು ಹೆಚ್ಚು ನಿಕಟವಾಗಿ ನೋಡಿರುವದರಿಂದ ಅಥವಾ ನಂಬಲರ್ಹ ವ್ಯಕ್ತಿಗಳಿಂದ ಕೇಳಿರಬಹುದಾದುದರಿಂದ, ವಾಸ್ತವಕ್ಕೆ ಹತ್ತಿರವಿರುವ ಈ ವಿಚಾರಗಳು ಆಪ್ತವೆನಿಸುತ್ತವೆ.
ಹೇಮಾಮಾಲಾ ಮೇಡಂ ನಿಮ್ಮ ಈ ಹೊಸ ಹುಮ್ಮಸ್ಸಿನ ಕೆಲಸಕ್ಕೆ ಮನಃಪೂರ್ವಕ ಅಭಿನಂದನೆಗಳು.
ಚೆನ್ನಾದ ‘ಮಲ್ಲಿಗೆ’ಯ ಮಾಲೆ ನೀಡಲು ಆಯ್ದು ಅರಳಿಸಿರುವ ಮೊದಲ ಮಲ್ಲಿಗೆಯ ಹೂವು ಬಹಳ ಪರಿಮಳದಿಂದ ಕೂಡಿದೆ. ಶ್ರೀ ಮಹಾಬಲ ಅವರಿಗೆ ಬಹಳ ಧನ್ಯವಾದಗಳು.
ನಾಡಿನ ಖ್ಯಾತ ಕವಿಗಳ ಬಗ್ಗೆ ಅವರ ಸುಪುತ್ರರೇ ನಿರೂಪಿಸುವ ಅನುಭವಕಥನವನ್ನು ಪ್ರಕಟಿಸಲು ನಮಗೆ ಸಂತೋಷವಾಗಿದೆ. ಧನ್ಯವಾದಗಳು 🙂
“ರಾಯರು ಬಂದರು” “ತೌರ ಸುಖದೊಳಗೆನ್ನ”, ” ಒಂದಿರುಳು ಕನಸಿನಲಿ” ಹೀಗೆ ಆಪ್ತವಾದ ಹಾಡುಗಳ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಪ್ರತಿಯೊಂದು ಹಾಡೂ ಸದಾ ಹಸಿರು.
ಸರಹೊನ್ನೆಯಲ್ಲಿ ಇಂದು ಮೈಸೂರು ಮಲ್ಲಿಗೆಯ ಘಮ ಹರಡಿದೆ.
ಮಹಾಬಲ ಸರ್ ಹಾಗೂ ಹೇಮಾ ಮೇಡಂ ಗೆ ಧನ್ಯವಾದಗಳು
ಧನ್ಯವಾದಗಳು ಮೇಡಂ 🙂
ಧನ್ಯವಾದ
Tumbha chennagittu odalice
ನಾಡಿನ ಪ್ರಖ್ಯಾತ ಕವಿಯೊಬ್ಬರ ಪರಿಚಯ ಆವರ ಮಗನಿಂದಲೇ ಆಗುತ್ತಿರುವುದು ತುಂಬಾ ವಿಶೇಷವಾಗಿದೆ.
ಅಭಿನಂದನೆ ಮಹಾಬಲ ಅವರೆ, ಬಹಳ ಸುತ್ತ್ಯಾರ್ಯ ಕೆಲಸ. ಮತ್ತಷ್ಟು ಬರೆಯಿರಿ.
ತುಂಬಾ ಆಪ್ತ ವಾಗಿ ಸೊಗಸಾಗಿ ಮೂಡಿಬಂದಿದೆ. ಲೇಖಕರಾದ ಮಹಾಬಲರವರಿಗೂ ಪ್ರಕಟಿಸಿದ ಹೇಮಮಾಲರವರಿಗೂ ಧನ್ಯವಾದಗಳು.
ಸೂಪರ್ ಸರ್. ಬಹಳ ಅಪರೂಪದ ಮಾಹಿತಿಗಳು ಸಿಗುತ್ತಿವೆ ನಿಮ್ಮ ಬರಹದಿಂದ.ಇನ್ನಷ್ಟು ಕುತೂಹಲದೊಂದಿಗೆ ಮುಂದಿನ ಬರಹವನ್ನು ಎದುರು ನೋಡುತ್ತಿದ್ದೇವೆ.
ಸುರಹೊನ್ನೆ ಪತ್ರಿಕೆಯಲ್ಲಿ ಮಲ್ಲಿಗೆಯ ಕಂಪು
ನೆಚ್ಚಿನ ಕವಿಗಳ ಬಗ್ಗೆ ತಿಳಿದುಕೊಳ್ಳಲು ಸಹಕಾರಿಯಾಗಿದೆ… ಅದರಲ್ಲೂ ಅವರ ಸುಪುತ್ರ ಹಂಚಿಕೊಳ್ಳುವುದು ಬಹಳ ಸಂತೋಷದ ಸಂಗತಿ
ಎಲ್ಲರಿಗೂ ಧನ್ಯವಾದಗಳು
ಸುರಹೊನ್ನೆಯೊಂದಿಗೆ ಮೈಸೂರು ಮಲ್ಲಿಗೆ ಬಾಂಧವ್ಯ ಬಹಳ ಸಂತೋಷದಾಯಕ.ಒದಗಿಸಿದ ಕವಿಯ ಪುತ್ರನಿಗೂ ಪ್ರಕಟಿಸುವ ಹೇಮಮಾಲಾ ಅವರಿಗೂ ವಂದನೆಗಳು.
ನಾಡಿನ ಹೆಮ್ಮೆಯ ಕವಿಗಳ ಬಗೆಗೆ ಅವರ ಪುತ್ರರಿಂದಲೇ ತಿಳಿಯುವ ಅಪರೂಪದ ಅವಕಾಶ ನಮ್ಮದು..ಅದಕ್ಕಾಗಿ ಪತ್ರಿಕೆಯ ಸಂಪಾದಕಿ ಹೇಮಮಾಲಾರಿಗೆ ಹಾಗೂ ಲೇಖಕರಿಗೆ ತುಂಬು ಹೃದಯದ ಧನ್ಯವಾದಗಳು.
ಸರ್, ತಮ್ಮ ತಂದೆಯವರ ಬಗ್ಗೆ ಬಹಳ ಚೆನ್ನಾಗಿ ಬರೆಯುತ್ತಿದ್ದೀರಿ, ಧನ್ಯವಾದಗಳು. ತಮ್ಮ ತಂದೆಯವರಾದ ನಮ್ಮ ಪ್ರೀತಿಯ ಕವಿ ಕೆ.ಎಸ್.ನ. ಅವರ ಕುರಿತು ಹೊರ ಬಂದ ಅಭಿನಂದನ ಗ್ರಂಥ ‘ಚಂದನ’ ಬೇಕಾಗಿದೆ ಎಲ್ಲಿ ದೊರೆಯುವದು ವಿಳಾಸ ತಿಳಿಸಿ ತರಿಸಿಕೊಳ್ಳುತ್ತೇನೆ. ನನ್ನ ಸೆಲ್ ನಂ ೭೬೨೪೯೨೭೮೭೬ ಫೋನಿನ ಮೂಲಕ ತಿಳಿಸಿದರಂತೂ ತುಂಬಾ ಉಪಕಾರವಾಗುತ್ತದೆ, ಪುನಃ ಧನ್ಯವಾದಗಳು ತಮಗೆ.