ಕವಿ ಕೆ.ಎಸ್.ನ ನೆನಪು 2 : ‘ತೆರೆದ ಬಾಗಿಲು’ ಕವನ ಸಂಕಲನ
‘ತೆರೆದ ಬಾಗಿಲು’ ಕವನ ಸಂಕಲನ;ನಿಘಂಟು ಬ್ರಹ್ಮ ಜಿ ವಿ ಅವರ ಪಾತ್ರ
ನಮ್ಮ ತಂದೆಯವರು 1960ರಲ್ಲಿ ಪ್ರಕಟವಾದ ಮನೆಯಿಂದ ಮನೆಗೆ ನಂತರ 1977ರಲ್ಲಿ ಪ್ರಕಟವಾದ ‘ತೆರೆದ ಬಾಗಿಲು’ ವರೆಗೆ ಯಾವುದೇ ಕೃತಿಯನ್ನು ಹೊರತಂದಿರಲಿಲ್ಲ.ಅವರು ಈ ವಿರಾಮವನ್ನು ಜನಜೀವನವನ್ನೂ,ವಿದ್ಯಮಾನಗಳನ್ನೂ ಗಮನಿಸುವ/ಗ್ರಹಿಸುವ ಅವಧಿ ಎಂದು ಭಾವಿಸಿದ್ದರು.ಅದು ನವ್ಯಕಾವ್ಯದ ಏರುಕಾಲವೆಂದು ಪರಿಗಣಿತವಾಗಿತ್ತು ಎಂಬುದು ವಾಸ್ತವ.ನಮ್ಮ ತಂದೆಯವರಂತೆ ಹಲವಾರು ಕವಿಗಳು ಆವರೆಗೆ ಅನುಸರಿಸುತ್ತಿದ್ದ ನವೋದಯ ಶೈಲಿಯ ನವ್ಯ ವಿಮರ್ಶಕರ ಅವಗಣನೆಗೆ ಹಾಗೂ ಕುಹಕಕ್ಕೆ ಪಾತ್ರವಾದ ಅವಧಿಯೂ ಹೌದು.
ಹಾಗೆಂದು ಕೆ ಎಸ್ ನ ಅವರು ಕವನ ಬರೆಯುದನ್ನೇ ನಿಲ್ಲಿಸಿಬಿಟ್ಟಿದ್ದರೆ? ಇಲ್ಲ ‘ಶಿಲಾಲತೆ’ ಸಂಗ್ರಹದ ‘ಗಡಿಯಾರದಂಗಡಿಯ ಮುಂದೆ’ ಕವನದಲ್ಲೇ ನವ್ಯಕಾವ್ಯದ ಲಕ್ಷಣವೆನ್ನಿಸಿದ್ದ ಕ್ಲಿಷ್ಟತೆಯನ್ನು ತಂದಿದ್ದರು. ಯಾವುದೇ ಕವನ ಸಂಕಲನ ಪ್ರಕಟಣೆಯಾಗದ ಈ ನಡುವಿನಲ್ಲಿಯೂ ತೆರೆದ ಬಾಗಿಲು, ಮುಚ್ಚಿದ ಕಿಟಕಿ,ಕುಶಲ ಪ್ರಶ್ನೆ ಮುಂತಾದ ಭಿನ್ನ ಶೈಲಿಯ ಕವನಗಳು ಸಾಕ್ಷಿ ಪತ್ರಿಕೆಯಲ್ಲಿ ,ಪ್ರಜಾವಾಣಿ , ಉದಯವಾಣಿ, ಸುಧಾ ಪತ್ರಿಕೆಗಳ ದೀಪಾವಳಿ/ಯುಗಾದಿ ವಿಶೇಷಾಂಕಗಳಲ್ಲಿ ಪ್ರಕಟವಾದವು ಮತ್ತು ಆಕಾಶವಾಣಿ ಮೂಲಕ ಬಿತ್ತರಗೊಂಡವು .
ಎಲ್ಲ ಕಾವ್ಯಾಸಕ್ತರಿಗೆ ಕವಿಯ ಈ ನಡೆ ಸ್ವಲ್ಪ ಕುತೂಹಲಕರವಾಗಿ ಕಂಡಿತ್ತು. ಮುಂದಿನ ಕವನ ಸಂಕಲನ ಯಾವಾಗ ಎಂದು ಕೇಳಿದವರಿಗೆಲ್ಲ ಕವಿಯದು ಮೌನ ಅಥವಾ ನಗುವಿನ ಉತ್ತರ ಸರ್ವೇಸಾಧಾರಣವಾಗಿತ್ತು.
ನಮ್ಮ ತಂದೆಯವರಿಗಿಂತ ಒಂದು ವರುಷ ಹಿರಿಯರಾದ ಪೂಜ್ಯ ಜಿವಿ ಯವರು ತಮಗೆ ಕವಿಯೊಡನೆ ಇದ್ದ ಸ್ನೇಹ ಸಲುಗೆ ಪ್ರಯೋಗಿಸಿ ಒಮ್ಮೆ “ಹದಿನೇಳು ವರುಷಗಳಿಂದ ನಿಮ್ಮ ಒಂದೂ ಕವನ ಸಂಕಲನ ಬಂದಿಲ್ಲ ಅದರಿಂದ ಹಲವಾರು ಮನ್ನಣೆ ,ಪ್ರಶಸ್ತಿಗಳು ತಪ್ಪಿಹೋಗಿವೆ.ಅದರಲ್ಲೂ ಕೇಂದ್ರ ಸಾಹಿತ್ಯ ಸಾಹಿತ್ಯ ಅಕಾದೆಮಿಯವರು ಪುಸ್ತಕ ಪ್ರಕಟಣೆಯಾಗದೆ ಪ್ರಶಸ್ತಿಗೆ ಪರಿಗಣಿಸುವುದೇ ಇಲ್ಲ.ಏನು ಸಮಸ್ಯೆ?.” ಎಂದು ಕೇಳಿಯೇಬಿಟ್ಟರು. ನಮ್ಮ ತಂದೆಯವರ ಸಮಜಾಯಿಷಿ ಅವರಿಗೆ ಸಮ್ಮತವಾಗಲಿಲ್ಲ. ಮುಂದುವರೆದು ಜಿವಿಯವರು “ಹೀಗೆ ಮಾಡೋಣ.ನೀವೇ ಪ್ರಕಟಿಸಿ.ಕಾವ್ಯಾಸಕ್ತರಿಂದ ತಲಾ ನೂರು ರೂಪಾಯಿ ವಂತಿಗೆ ಸ್ವೀಕರಿಸೋಣ. ಕೃತಿ ಬಂದಾಗ ಅವರಿಗೆ ಹಣ ವಾಪಸು ಮಾಡಿ ಜತೆಗೆ ಒಂದು ಪ್ರತಿ ಕೊಡೋಣ. ನನ್ನದೇ ಮೊದಲ ವಂತಿಗೆ ಆಗಲಿ” ಎಂದರಂತೆ.
ಇತರ ಕಾವ್ಯಾಸಕ್ತರಿಗೂ ವಿಷಯ ಮುಟ್ಟಿತು.ತಕ್ಕಷ್ಟು ಹಣ ಸಂಗ್ರಹವಾಯಿತು.ಲಿಪಿ ಪ್ರಿಂಟರ್ಸ್ನ ಬಾಲಕೃಷ್ಣ(ಬಾಕಿನ) ಮುದ್ರಿಸುವ ಜವಾಬ್ದಾರಿ ವಹಿಸಿಕೊಂಡರು. ಪ್ರೊ.ಎಲ್ಎಸ್ ಶೇಷಗಿರಿ ರಾವ್ ಮೌಲ್ಯಯುತವಾದ ಮುನ್ನುಡಿ ಬರೆದುಕೊಟ್ಟರು. 1976ರ ನವೆಂಬರ್ ನಲ್ಲಿ ಡಾ.ಹಾಮಾ ನಾಯಕ ಕೃತಿ ಲೋಕಾರ್ಪಣೆ ಮಾಡಿದರು.ಸಮಾರಂಭದ ದಿನವೇ ಗಣನೀಯ ಸಂಖ್ಯೆಯ ಪ್ರತಿಗಳು ಮಾರಾಟವಾಯಿತು.
ಅದೇ ವರುಷ ಡಿಸೆಂಬರ್ ನಲ್ಲಿ ಶಿವಮೊಗ್ಗದಲ್ಲಿ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಡಾ.ಸುಮತೀಂದ್ರ ನಾಡಿಗ ಅವರು ತಮ್ಮ ಕರ್ನಾಟಕ ಬುಕ್ ಸ್ಟಾಲ್ ಮಳಿಗೆಯಲ್ಲಿ ಮತ್ತಷ್ಟು ಪ್ರತಿಗಳನ್ನು ಮಾರಾಟ ಮಾಡಿಕೊಟ್ಟರು.
ಇವೆಲ್ಲಕ್ಕೂ ಕಿರೀಟಪ್ರಾಯವೆಂಬಂತೆ ತೆರೆದ ಬಾಗಿಲು ಕೃತಿ 1977ರ ವರ್ಷದ ಕೇಂದ್ರ ಸಾಹಿತ್ಯ ಅಕಾದೆಮಿಯ ಪ್ರಶಸ್ತಿಗೂ ಪಾತ್ರವಾಯಿತು.ಕಾವ್ಯಲೋಕ ಕೃತಿಯನ್ನು ಬೆರಗು,ಸಂಭ್ರಮಗಳಿಂದ ಬರಮಾಡಿಕೊಂಡಿತು.
ಇಂಥದೊಂದು ಅಚ್ಚರಿಯ ಯಶಸ್ಸಿಗೆ ಬಾಗಿಲು ತೆರೆದ ಜಿವಿ ಅವರ ಕ್ರಿಯಾ ಯೋಜನೆಯನ್ನು ನಮ್ಮ ತಂದೆಯವರು ಕೃತಜ್ಙತೆಯಿಂದ ನೆನಪಿಸಿಕೊಳ್ಳುತ್ತಿದ್ದರು.
ಈ ಲೇಖನ ಸರಣಿಯ ಹಿಂದಿನ ಸಂಚಿಕೆ ಇಲ್ಲಿದೆ: http://surahonne.com/?p=28322
-ಕೆ ಎನ್ ಮಹಾಬಲ
(ಕೆ ಎಸ್ ನ ಪುತ್ರ, ನಿವೃತ್ತ ಉಪ ವ್ಯವಸ್ಥಾಪಕರು, ಭಾರತೀಯ ಸ್ಟೇಟ್ ಬ್ಯಾಂಕ್, ಬೆಂಗಳೂರು )
(ಮುಂದುವರಿಯುವುದು….)
ನಮ್ಮ ಹಿರಿಯ ಹಾಗೂ ಪ್ರೀತಿಯ ಕವಿಯ ಕುರಿತು ಬರುತ್ತಿರುವ ಲೇಖನ ಸರಣಿ ಓದಲು ಖುಷಿಯಾಗುತ್ತೆ.
ನಿಮ್ಮ ತಂದೆಯವರ ಸಾಹಿತ್ಯ ಕ್ಷೇತ್ರದ ಪಯಣ ದ ಕುರಿತು ಇರುವ ಕುತೂಹಲ ಮುಂದೇನಾಯಿತು ಅಂತ ಓದಲು ಕಾಯುವಂತೆ ಮಾಡುತ್ತದೆ. ಲೇಖನ ಸರಣಿ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ.
ಲೇಖನ ಕುತೂಹಲ ಭರಿತ..ಮುಂದುವರಿಯಲಿ ಸರ್…
ಅತ್ಯುತ್ತಮವಾದ, ಅಪರೂಪದ ಮಾಹಿತಿಗಳನ್ನು ತಿಳಿಸುತ್ತಿರುವ ತಮಗೆ ಧನ್ಯವಾದಗಳು
ಎಲ್ಲರಿಗೂ ಧನ್ಯವಾದಗಳು
ಹಿರಿಯ ಸಾಹಿತಿಯೊಬ್ಬರ ಜೀವನ ಚರಿತ್ರೆ ಅವರ ಪುತ್ರರಿಂದಲೇ ತಿಳಿಯುವಂತಾಗಿದೆ…ಕುತೂಹಲ ಕಾಪಿಡುತ್ತಾ ಸಾಗುತ್ತಿರುವ ಸೊಗಸಾದ ಲೇಖನ..ಧನ್ಯವಾದಗಳು ಸರ್.