ಕೊಲ್ಮಾ-ಇಲ್ಲಿ ಜೀವಂತವಾಗಿರುವುದೇ ವಿಶೇಷ

Spread the love
Share Button

ಕೊಲ್ಮಾ ಶಹರಿನ ಘೋಷಣಾ ವಾಕ್ಯ ಇಟ್ಸ್ ಗ್ರೇಟ್ ಟು ಬಿ ಅಲೈವ್ ಇನ್ ಕೊಲ್ಮಾ’. ಶಹರಿನ ಹೆಸರಿನ ಜೊತೆ ಯಾಕೆ ಈ ಘೋಷಣಾ ವಾಕ್ಯ ಜೋಡಣೆಯಾಗಿದೆ? ಏನಿದರ ಅರ್ಥ. ಇದು ಅತಿಮಾನುಷ ಶಕ್ತಿಯ ಕೇಂದ್ರವೇ? ಭೂತ ಪ್ರೇತಗಳ ಆವಾಸ ಸ್ಥಾನವೇ?

ಸ್ಯಾನ್‌ಪ್ರಾನ್ಸಿಸ್ಕೊಗೆ ದಕ್ಷಿಣದಲ್ಲಿರುವ ಡಾಲೇ ನಗರದ ಸಮೀಪ ಇರುವ ಪುಟ್ಟ ಶಹರೇ ಕೊಲ್ಮಾ. ಇದನ್ನು ಸತ್ತವರ ಶಹರು ಎನ್ನುತ್ತಾರೆ. ಕಾರಣ ಇಲ್ಲಿನ ಭೂಮಿಯಲ್ಲಿ ಸತ್ತು ಹೆಣವಾಗಿ ಹುದುಗಿರುವವರು ಸಾವಿರವಾದರೆ ಅದಕ್ಕೆ ಅನುಗುಣವಾಗಿ ಬದುಕಿರುವವರು ಸಂಖ್ಯೆ ಕೇವಲ ಒಂದು ಮಾತ್ರ. ಈ ಶಹರಿನ ವಿಸ್ತೀರ್ಣ ಎರೆಡು ಚದರ ಮೈಲಿಗಳಷ್ಟು. ಇಷ್ಟರಲ್ಲೇ ಹದಿನೇಳು ಮಸಣಗಳು ಹರಡಿವೆ. ಹದಿನೇಳು ಮಸಣದಲ್ಲಿರುವ ಕಳೇಬರಗಳ/ಆತ್ಮಗಳ ಸಂಖ್ಯೆ ಸುಮಾರು 1.5 ಮಿಲಿಯನ್. ಹಾಗಾಗಿ ಈ ಶಹರಿನ ಘೋಷಣಾ ವಾಕ್ಯ ಅರ್ಥ ಪೂರ್ಣ.

ಇಲ್ಲಿನ ಮಸಣಗಳಲ್ಲಿ ಸತ್ತು ಮಲಗಿರುವವರೆಲ್ಲಾ ಭೂಕಂಪ, ಸುನಾಮಿಯಂಥ ಯಾವುದಾದರು ಪ್ರಕೃತಿ ವಿಕೋಪಕ್ಕೆ ಸಿಕ್ಕು ಸಾಮೂಹಿಕವಾಗಿ ಸತ್ತವರಲ್ಲ. ದೇಶಗಳ ನಡುವೆ ನಡೆದ ಯುದ್ಧದ ಸಮಯದಲ್ಲಿ ಬಾಂಬ್ ದಾಳಿಗೆ ಸಿಕ್ಕು ವೀರ ಮರಣ ಹೊಂದಿದವರಲ್ಲ. ದೇಶ ಭ್ರಷ್ಟರಲ್ಲ, ಅಪರಾಧಿಗಳಲ್ಲ, ದುಷ್ಕರ್ಮಿಗಳಲ್ಲ, ಬದಲಿಗೆ ಬಹಳಷ್ಟು ಜನ ಹಿಂದೊಮ್ಮೆ ಸ್ಯಾನ್‌ಪ್ರಾನ್ಸಿಸ್ಕೊದ ಪ್ರತಿಷ್ಠಿತ ಪ್ರಜೆಗಳಾಗಿದ್ದವರು. ತಮ್ಮ ಜೀವಮಾನದ ಎಲ್ಲಾ ದಿನಗಳನ್ನು ಅದೇ ನಗರದಲ್ಲಿ ಕಳೆದವರು. ಸ್ಯಾನ್‌ಪ್ರಾನ್ಸಿಸ್ಕೊವನ್ನು ಅವಿಭಾಜ್ಯ ಅಂಗವಾಗಿ ಪರಿಗಣಿಸಿದ್ದವರು. ಆದರೂ ಯಾಕಾಗಿ ಅವರ ಕಳೇಬರ ಇಲ್ಲಿಗೆ ಬಂದಿದೆ. ಏನಿದರ ಹಿನ್ನೆಲೆ?

20 ನೇ ಶತಮಾನದ ಮೊದಲ ಭಾಗದಲ್ಲಿ ಸ್ಯಾನ್‌ಫ್ರಾನ್ಸಿಸ್ಕೊ ನಗರದ ಆಡಳಿತವು ನಗರದ ಒಳಿತಿಗಾಗಿ ಒಂದು ಶಾಸನವನ್ನು ಜಾರಿ ಮಾಡಿತು. ಅದರ ಪ್ರಮುಖ ಅಂಶ ನಗರದ ಪರಿಮಿತಿಯಲ್ಲಿ ಸತ್ತವರ ಹೆಣವನ್ನು ಹೂಳುವುದರ ನಿಷೇಧ ಹಾಗೂ ಹಾಲಿ ಇರುವ ಮಸಣದಲ್ಲಿನ ಕಳೇಬರವನ್ನು ತೆರವುಗೊಳಿಸುವುದಾಗಿತ್ತು. ಶಾಸನದಂತೆ ನಗರದಲ್ಲಿದ್ದ ಎಲ್ಲಾ ಮಸಣಗಳಿಗೆ ಬೀಗ ಹಾಕಲಾಯಿತು.

ಈ ಶಾಸನದ ಪರವಾಗಿ ತನ್ನ ವಾದ ಮಂಡಿಸಿದ ಸರ್ಕಾರ ಮಸಣಗಳಿಂದ ಅನಾರೋಗ್ಯಕರ ವಾತಾವರಣ ಸೃಷ್ಟಿಯಾಗಿ ಪ್ರಜೆಗಳ ಆರೋಗ್ಯಕ್ಕೆ ಹಾನಿಯಾಗುತ್ತದೆ ಎಂದು ಬಿಂಬಿಸಿತು. ಆದರೆ ಒಳ ಗುಟ್ಟು ಬೇರೆಯದೇ ಆಗಿತ್ತು. ನಗರ ಬೆಳೆಯತ್ತಿದ್ದಂತೆ ಭೂಮಿಯ ಬೆಲೆ ಕೈಗೆಟುಕದಷ್ಟು ಮೇಲಕ್ಕೇರಿತ್ತು. ಗಗನಕ್ಕೇರಿತ್ತು. ಸತ್ತವರನ್ನು ಮಣ್ಣು ಮಾಡುವ ಮಸಣಕ್ಕಾಗಿ ಚಿನ್ನದಂತ ಭೂಮಿಯನ್ನು ಮೀಸಲಿಡುವುದು ಸಲ್ಲ ಎಂಬುದೇ ಒಳಗಿದ್ದ ಮರ್ಮ. ಜೊತೆ ಜೊತೆಗೆ ಹಾಲಿ ಮಸಣದ ಜಾಗವನ್ನು ತೆರವುಗೊಳಿಸುವುದು.

ಮುಂದುವರಿದಂತೆ ಶಾಸನದ ಜಾರಿಯ ನಂತರ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿನ ಎಲ್ಲಾ ಮಸಣಗಳಲ್ಲಿ ಮಣ್ಣು ಮಾಡಿದ್ದ ನೂರಾರು ಸಾವಿರ ಕಳೇಬರಗಳನ್ನು ಅಗೆದು ತೆಗೆದು ನಗರದ ದಕ್ಷಿಣದಲ್ಲಿದ್ದ ಖಾಲಿ ಜಾಗಕ್ಕೆ ರವಾನಿಸಲಾಯಿತು. ಆ ಸ್ಥಳವೇ ಮಣದ ಶಹರು ಕೊಲ್ಮಾ.

ಆಗ ಕೊಲ್ಮಾದಲ್ಲಿ ವಾಸಿಸುತ್ತಿದ್ದ ಬಹಳಷ್ಟು ನಿವಾಸಿಗಳ ಉದ್ಯೋಗ ಹೆಣವನ್ನು ಮಣ್ಣು ಮಾಡಲು ಅವಶ್ಯವಿದ್ದ ಗುಂಡಿಯನ್ನು ತೆಗೆಯುವುದು, ಸ್ಮಾರಕಗಳನ್ನು ಕೆತ್ತುವುದು, ಹೆಣದ ಮೆರವಣಿಗೆಗೆ ಬೇಕಿರುವ ಹೂವನ್ನು ಬೆಳೆಯುವುದು ಹಾಗೂ ಕೊನೆಯ ಪಯಣದ ಸಮಯದಲ್ಲಿ ಬೇಕಾದಂತೆ ತಯಾರಿಸಿ ನೀಡುವುದು ಆಗಿತ್ತು.

20 ನೇ ಶತಮಾನದ ಹೆಚ್ಚು ಕಾಲ ಅಲ್ಲಿನವರು ಈ ಕೆಲಸದಲ್ಲೇ ನಿರತರಾಗಿದ್ದರು. 1980 ರ ನಂತರವಷ್ಟೇ ಬೇರೆ ಬೇರೆ ಇತರೆ ಕೆಲಸ ಕಾರ್ಯಗಳ ಜನ ಬಂದು ಇಲ್ಲಿ ನೆಲಸಲಾರಂಭಿಸಿದ್ದು. ಇಂದು ಈ ಸಣ್ಣ ಶಹರು ಮಸಣದ ಜೊತೆಗೆ ದೊಡ್ಡ ದೊಡ್ಡ ಅಂಗಡಿ ಮುಗ್ಗಟ್ಟುಗಳ, ಆಟೋಮೊಬೈಲ್ ಷೋರೂಮ್‌ಗಳ, ಬಾಕ್ಸಿಂಗ್ ಎರೇನಾಗಳ ತಾಣವಾಗಿದೆ.

ಕೊಲ್ಮಾದ ಇತಿಹಾಸ:
ಕೊಲ್ಮಾದ ಇತಿಹಾಸದ ಪುಟವನ್ನು ಕೆದಕಿ ನೋಡಿದಲ್ಲಿ ಅದು 19ನೇ ಶತಮಾನದ ಮಧ್ಯ ಭಾಗಕ್ಕೆ ಕರೆದೊಯ್ಯುತ್ತದೆ. 1849 ರಲ್ಲಿ ಪ್ರಾರಂಭವಾದ ಕ್ಯಾಲಿಫೋರ್ನಿಯಾ ‘ಗೋಲ್ಡ್ ರಷ್’ ಇದಕ್ಕೆ ಮೂಲ. ಅತಿ ಬೇಗನೆ ಶ್ರೀಮಂತರಾಗುವ ಕನಸು ಹೊತ್ತ ಲಕ್ಷಾಂತರ ಆಕಾಂಕ್ಷಿಗಳು, ವ್ಯಾಪಾರಸ್ಥರು, ವಲಸಿಗರು, ದೇಶ ವಿದೇಶಗಳಿಂದ ಬಂದು ಕ್ಯಾಲಿಫೋರ್ನಿಯಾ ಸೇರಿದರು. ಹೀಗೆ ವಲಸೆ ಬಂದವರಲ್ಲಿ ಸಾಕಷ್ಟು ಜನ ಪಕ್ಕದ ಸ್ಯಾನ್‌ಪ್ರಾನ್ಸಿಸ್ಕೊಗೂ ಲಗ್ಗೆ ಇಟ್ಟರು. ಇವರುಗಳ ಬರುವಿಕೆಗೆ ಮುನ್ನ ಸ್ಯಾನ್‌ಪ್ರಾನ್ಸಿಸ್ಕೊ ಕೇವಲ ಎರೆಡು ನೂರು ಜನ ಸಂಖ್ಯೆಯ ಪುಟ್ಟ ವಸಾಹತಾಗಿತ್ತು.

ಕ್ಯಾಲಿಫೋರ್ನಿಯಾದ ಸುತ್ತ ಮುತ್ತ ಚಿನ್ನಕ್ಕಾಗಿ ಅನ್ವೇಷಿಸುವುದು ಚಿನ್ನ ಅರಸಿ ಬಂದವರಿಗೆ ಅಷ್ಟು ಸುಲಭದ ತುತ್ತಾಗಿರಲಿಲ್ಲ. ಅನ್ವೇಷಣೆಯ ಭರಾಟೆಯಲ್ಲಿ ಆದ ಅಪಘಾತಗಳಲ್ಲಿ ಅಸುನೀಗಿದವರು ಸಾವಿರಾರು ಜನ. ಮತ್ತೆ ಕೆಲವರು ಕಾಲರದಂತಹ ಭಯಂಕರ ಖಾಯಿಲೆಗೆ ತುತ್ತಾದರು. ಸಾಯುವವರ ಸಂಖ್ಯೆ ಹೆಚ್ಚಾದಂತೆಲ್ಲಾ ಮಸಣಗಳ ಸಂಖ್ಯೆಯೂ ಅಧಿಕವಾಗುತ್ತಾ ಹೋಯಿತು. ಎರೆಡು ಡಜನ್‌ಗೂ ಹೆಚ್ಚು ಸ್ಮಶಾನಗಳನ್ನು ನೂತನವಾಗಿ ತೆರೆದರೂ ಅವೂ ಸಹ ಕೆಲವೇ ದಿನಗಳಲ್ಲಿ ತುಂಬಿ ತುಳಕಲಾರಂಭಿಸಿತು.

 • ಮಸಣದ ಮಾಲೀಕರು ಹೊಸ ಹೊಸ ಜಾಗದ ಅನ್ವೇಷಣೆಗೆ ಹೊರಟಾಗ ಅವರಿಗೆ ಕಣ್ಣಿಗೆ ಬಿದ್ದದ್ದೇ ಕೊಲ್ಮಾ ಶಹರು. ಇಲ್ಲಿನ ಮೊದಲ ಸ್ಮಶಾನ ‘ಹೊಲಿ ಕ್ರಾಸ್’ ಪ್ರಾರಂಭವಾಗಿದ್ದು 1887 ರಲ್ಲಿ.
 • 1900 ರಲ್ಲಿ ಇನ್ನು ಹೆಚ್ಚಿನ ಮಸಣಗಳನ್ನು ತೆರೆಯಲು ಸ್ಥಳಾವಕಾಶವಿಲ್ಲ ಎಂದು ಸ್ಯಾನ್‌ಪ್ರಾನ್ಸಿಸ್ಕೊ ಘೋಷಿಸಿತು ಹಾಗೂ ಸ್ಯಾನ್‌ಪ್ರಾನ್ಸಿಸ್ಕೊ ಅಂತ್ಯಕ್ರಿಯೆಯ ಪರವಾನಗಿಯನ್ನು ರದ್ದುಗೊಳಿಸಿತು.
 • 1914 ರಲ್ಲಿ ಕೇವಲ ಹೊಸ ಮಸಣಗಳನ್ನು ತೆರೆಯಲು ಪರವಾನಗಿಯನ್ನು ನೀಡದಿದ್ದರೆ ಸಾಲದು ಬದಲಿಗೆ ಹಾಲಿ ಅಸ್ಥಿತ್ವದಲ್ಲಿರುವ ಮಸಣಗಳ ಪ್ರದೇಶವನ್ನು ವಾಪಸ್ಸು ಪಡೆಯುವುದು ಅನಿವಾರ್ಯ ಎಂದು ಮಸಣದ ಮಾಲೀಕರುಗಳಿಗೆ ಉಚ್ಛಾಟನೆಯ ಪತ್ರಗಳನ್ನೂ ಸಹ ಜಾರಿಮಾಡಿತು. ಆಗಲೇ ರಾಶಿ ರಾಶಿ ಹೆಣಗಳು ಕೊಲ್ಮಾಗೆ ಸ್ಥಳಾಂತರಗೊಳ್ಳಲು ಪ್ರಾರಂಭವಾಗಿದ್ದು.
 • 1924 ರಲ್ಲಿ ಕೊಲ್ಮಾವನ್ನು ಅಧಿಕೃತವಾಗಿ ಸಂಘಟಿಸಲಾಯಿತು. ನಂತರ ಇದನ್ನು ಲಾನ್ಡೇಲ್ ಎನ್ನಲಾಗುತ್ತಿದ್ದರೂ 1941 ರಲ್ಲಿ ಮತ್ತೆ ಕೊಲ್ಮಾ ಎಂದು ಮರು ನಾಮಕರಣ ಮಾಡಲಾಯಿತು.

ಇಂದು 1800  ಜನಸಂಖ್ಯೆ ಹೊಂದಿರುವ ಕೊಲ್ಮಾ ಶಹರಿನ ಭೂಮಿಯಲ್ಲಿ ಒಂದೂವರೆ ಮಿಲಿಯನ್ ಆತ್ಮಗಳು ಹುದುಗಿವೆ. ಅಮೇರಿಕಾದ ಸುಪ್ರಸಿದ್ದರ ಆತ್ಮಗಳು ಇಲ್ಲಿ ಸಾಕಷ್ಟಿವೆ. ಡೆನಿಮ್ ಟ್ರೌಸರ್‍ಸ್‌ನ ಜನಕ ಲೆವಿ ಸ್ಟ್ರಾಸ್, ದಿನ ಪತ್ರಿಕೆಯ ಪ್ರಭಾವಿ ಉದ್ಯಮಿ ವಿಲಿಯಮ್ ರಾಂಡೋಲ್ಫ್ ಹರ್ಸ್ಟ, ಅಮೇಡಿಯೋ ಗಿಯನ್ನಿನಿ ಎಂಬ ಪ್ರಸಿದ್ಧ ಉದ್ಯಮಿ ಮತ್ತು ಬ್ಯಾಂಕ್ ಆಫ್ ಅಮೇರಿಕಾದ ಸ್ಥಾಪಕರು ಇಲ್ಲಿ ಹುದಗಿದ್ದಾರೆ.

ಕೊಲ್ಮಾ ಶಹರಿನ ನೆಲದಲ್ಲಿ ಹುದುಗಿರುವವರ ಸಂಖ್ಯೆ ಅತಿ ಹೆಚ್ಚಾಗಿರುವ ಕಾರಣ ‘ದ ಸಿಟಿ ಆಫ್ ಸೈಲೆಂಟ್’ ಎಂಬ ವಿಷಣ್ಣ ಹೆಸರಿನಿಂದಲೂ ಇದನ್ನು ಗುರುತಿಸುತ್ತಾರೆ. ಕೊಲ್ಮಾದ ಜನ ಈ ಘೋಷಣೆಯನ್ನು ಹೊಗಳಿಕೆ ಎಂಬಂತೆ ಸ್ವೀಕರಿಸಿ ಸಂತೋಷಿಸುತ್ತಾರೆ.

-ಕೆ.ವಿ.ಶಶಿಧರ, ಬೆಂಗಳೂರು
(ಕೃಪೆ: ಅಂತರ್ಜಾಲ)

 

6 Responses

 1. ನಯನ ಬಜಕೂಡ್ಲು says:

  Super sir. ವಿಭಿನ್ನ ಹಾಗೂ ಕುತೂಹಲಕಾರಿ ಬರಹ

 2. KRISHNAPRABHA M says:

  ಕುತೂಹಲಕಾರಿ ಮಾಹಿತಿಯುಳ್ಳ ಲೇಖನ

 3. ಶಂಕರಿ ಶರ್ಮ says:

  ವಿಚಿತ್ರ, ವಿಶೇಷ ಮಾಹಿತಿ… ನಿಜಕ್ಕೂ ನಂಬಲಸಾಧ್ರ!

  • Anonymous says:

   ತಮ್ಮ ಮೆಚ್ಚುಗೆಯ ಪ್ರತಿಕ್ರಿಯೆಗೆ ಧನ್ಯವಾದಗಳು

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: