ಪುಸ್ತಕ ನೋಟ “ಚಾರ್ ಧಾಮ್”

Share Button

ಹೇಮಮಾಲಾ.ಬಿ ಯವರ “ಚಾರ್ ಧಾಮ್”-  ಯಮುನೋತ್ರಿ, ಗಂಗೋತ್ರಿ, ಕೇದಾರನಾಥ್, ಬದರಿನಾಥ್  ಕ್ಷೇತ್ರಗಳ ಪ್ರವಾಸ ಕಥನ. ಈ ಪುಸ್ತಕದ ಹೆಸರನ್ನು ಓದುವಾಗಲೇ ಮನಸಿನ ತುಂಬಾ ಹಿಮಾಲಯದ  ಚಿತ್ರಣ ತುಂಬಿಕೊಳ್ಳುತ್ತದೆ . ಮುನ್ನುಡಿಯಲ್ಲಿ  ಎಂ.ವಿ ಪರಶಿವಮೂರ್ತಿಯವರ  ಅಭಿಪ್ರಾಯವನ್ನು ಓದುವಾಗಲಂತೂ  ಪುಸ್ತಕವನ್ನು ಓದಿ ಮುಗಿಸದೆ ಕೆಳಗಿಡಲು ಮನಸೇ ಬಾರದು. ಇಲ್ಲಿ ಈ ಪುಸ್ತಕದ ಜೊತೆ ಜೊತೆಗೆ ಲೇಖಕಿಯ ಸಹಜ, ಸಂಕ್ಷಿಪ್ತ , ಸುಂದರವಾದ ಪರಿಚಯವೂ  ಮನ ಸೆಳೆಯುತ್ತದೆ.  ವಿಠಲ್  ರಾಜು  ಅವರ ಚೆನ್ನುಡಿಯಲ್ಲಿ ಈ ಪುಸ್ತಕ ಪ್ರಕಟಣೆಯ  ಉದ್ದೇಶವನ್ನು ಬಹಳ ಚೆನ್ನಾಗಿ ಉಲ್ಲೇಖಿಸಿದ್ದಾರೆ. ಈ ಪುಸ್ತಕದಿಂದ ಪ್ರವಾಸ ಹೋಗುವವರಿಗೆ  ಉಪಯೋಗವಾದಲ್ಲಿ  ಪುಸ್ತಕ ಪ್ರಕಟಗೊಂಡದ್ದು  ಸಾರ್ಥಕ ಅನ್ನೋ ಲೇಖಕಿಯ ಸಾರ್ಥಕತೆಯ ಭಾವ ಮನಸಿಗೆ ಆಪ್ತವೆನಿಸುತ್ತದೆ .
.
ಮೊದಲ ಮಾತು –  ಇದರಲ್ಲಿ ಹೇಮಮಾಲಾ ಬಿ ಯವರ ಪರಿಚಯ ಅವರ ಮಾತುಗಳಲ್ಲೇ  ಇದೆ. ಇದರ ಹೊರತಾಗಿ ನನಗೆ, ಅವರು ಈಗ ಮೈಸೂರಿನಲ್ಲಿ  ನೆಲೆಸಿರುವ ನಮ್ಮ ಕಾಸರಗೋಡು ಜಿಲ್ಲೆ  ಗಡಿನಾಡಿನವರು  ಅನ್ನೋ ಹೆಮ್ಮೆ , ಅಭಿಮಾನ. ಅವರ ಇತ್ತೀಚಿನ ಕೆಲವು ಪ್ರವಾಸ ಕಥನಗಳಿಂದ  ಅರಿವಿಗೆ ಬಂದ ಮತ್ತೊಂದು ವಿಚಾರ ಎಂದರೆ ಎಲ್ಲಾ ಕಡೆಗಳಲ್ಲೂ  ಅವರು ಸಾಕಷ್ಟು ಹೊಂದಾಣಿಕೆಗಳನ್ನು  ಮಾಡಿಕೊಂಡು ಸಾಗುವವರು. ಋಣಾತ್ಮಕ ವಿಚಾರಗಳಿಗೆ ಜಾಸ್ತಿ ಒತ್ತು ಕೊಡದೆ ಧನಾತ್ಮಕವಾಗಿ  ಎಲ್ಲವನ್ನೂ ನೋಡುವವರು. ಇವರ ಈ ಸ್ವಭಾವದಿಂದಾಗಿ ಎಲ್ಲರಿಗೂ ಬಹಳ ಹತ್ತಿರವಾಗುತ್ತಾರೆ. ಹಿತ ಮಿತವಾದ  ಮಾತು, ಮಾತಿನಲ್ಲೂ  ಬಹಳ ಸಹಜತೆ, ಸರಳತೆ. ಒಟ್ಟಿನಲ್ಲಿ ಯಾವ ಹಮ್ಮು ಬಿಮ್ಮುಗಳಿಲ್ಲದ  ಸೀದಾ  ಸಾದಾ ವ್ಯಕ್ತಿತ್ವ .
.
ಹೇಮಮಾಲಾ  ಅವರು “ಸುರಹೊನ್ನೆ”  ಅನ್ನುವ ಅಂತರ್ಜಾಲ ಪತ್ರಿಕೆಯ  ಒಡತಿಯೂ ಹೌದು.ಇದರಲ್ಲಿ ಅವರು ಹೊಸ ಬರಹಗಾರರಿಗೆ ನೀಡುವ ಅವಕಾಶ, ಪ್ರೋತ್ಸಾಹವನ್ನು ಎಷ್ಟು ವಿವರಿಸಿದರೂ, ಶ್ಲಾಘಿಸಿದರೂ ಮುಗಿಯದು.ಈ ಸ್ಪರ್ಧಾತ್ಮಕ  ಯುಗದಲ್ಲಿ  ತನ್ನ ಜೊತೆ ಜೊತೆಗೆ ಉಳಿದವರನ್ನು ಕೈ ಹಿಡಿದು ಮೇಲೆತ್ತುವ  ಗುಣ ಬಹಳ ಅಪರೂಪ. ಆದರೆ ಇದಾವುದನ್ನು  ಪರಿಗಣಿಸದೆ  ಎಲ್ಲರಿಗೂ  ಸಮಾನ ಅವಕಾಶ ಕಲ್ಪಿಸುವ ಇವರ ಈ ಗುಣದ ಮುಂದೆ ತಲೆಬಾಗದಿರಲು  ಸಾಧ್ಯವೇ  ಇಲ್ಲ. ಇವರು ಬರೆಯುವ ಪ್ರವಾಸ ಕಥನಗಳು ಪ್ರವಾಸ ಪ್ರಿಯರಿಗೆ  ಮಾರ್ಗದರ್ಶನ ನೀಡುವ ಕೈಪಿಡಿ. ಅದರಲ್ಲಿ ಎಲ್ಲಾ ಮಾಹಿತಿಗಳು ಲಭ್ಯ . ಓದುಗರಿಗೆ ಒಳ್ಳೆಯ ಮಾಹಿತಿಗಳ ಜೊತೆಗೆ ಮನರಂಜನೆಯನ್ನೂ ನೀಡುತ್ತದೆ ..
.
ಚಾರ್ ಧಾಮ್ ವಿಚಾರ್ :-
ಇಲ್ಲಿ ಪ್ರವಾಸಕ್ಕೆ ಹೊರಡುವ  ಮುನ್ನದ  ಪೂರ್ವ  ತಯಾರಿಗಳ  ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಲಾಗಿದೆ . ಎಲ್ಲಿಂದ ಹೇಗೆ ಹೊರಡುವುದು, ಖರ್ಚು ವೆಚ್ಚ , ಶ್ರೀಮಂತ ಹಾಗೂ ಮಧ್ಯಮ ವರ್ಗದ ವ್ಯವಸ್ಥೆಗಳು, ಆರೋಗ್ಯಸಂಬಂಧಿ  ಮುನ್ನೆಚ್ಚರಿಕೆಯ  ಕ್ರಮಗಳು , ಹೀಗೆ ಎಲ್ಲವನ್ನೂ ಹೇಗೆ ವ್ಯವಸ್ಥಿತವಾಗಿ  ಹೊಂದಿಸಿಕೊಳ್ಳುವುದು  ಎನ್ನುವುದನ್ನು ಹಂತ ಹಂತವಾಗಿ ವಿವರಿಸಲಾಗಿದೆ. ಜೊತೆಗೆ ಪ್ರವಾಸ ಹೊರಟ ನಂತರ ಚಿಕ್ಕ ಚಿಕ್ಕ ವಿಚಾರಗಳಿಗೆಲ್ಲ  ಸಿಡಿಮಿಡಿ  ಗೊಳ್ಳದಿರಿ  ಅನ್ನೋ ಕಿವಿ ಮಾತು ಲೇಖಕಿಯ ಸಹನೆ, ತಾಳ್ಮೆ  ಹಾಗೂ ಎಲ್ಲಾ ಪರಿಸ್ಥಿತಿಗಳಲ್ಲೂ   ಹೊಂದಿಕೊಂಡು ಹೋಗುವ ಮನೋಭಾವವನ್ನು ಬಿಂಬಿಸುತ್ತದೆ . ಪ್ರವಾಸ , ಚಾರಣ ಹೊರಡುವ ಪ್ರತಿಯೊಬ್ಬರೂ ತಮ್ಮಲ್ಲಿ  ಬಹು ಮುಖ್ಯವಾಗಿ ಅಳವಡಿಸಿಕೊಳ್ಳಬೇಕಾದ  ಗುಣ ಇದು . ಇಲ್ಲದಿದ್ದಲ್ಲಿ ತಮ್ಮ ಪ್ರವಾಸದಲ್ಲಿ ಮನಕಲಕುವಂತಹ , ನಿರಾಶೆ ಹೊಂದುವಂತಹ  ಪರಿಸ್ಥಿತಿಗಳು  ಎದುರಾಗುವುದರಲ್ಲಿ  ಸಂಶಯವೇ ಇಲ್ಲ .
.
ಬಂದ್ ನಲ್ಲಿ  ಬಂಧಿಯಾದೆವು  :-
ಚಾರಣಕ್ಕೆ  ಹೊರಟ ಸಮಯದಲ್ಲಿ ಕೋರ್ಟ್ನಿಂದ  ಕಾವೇರಿ ನೀರಿನ ವಿಚಾರವಾಗಿ ತೀರ್ಪು  ಹೊರಬಿದ್ದ  ಕಾರಣ ಮುಷ್ಕರ ಘೋಷಿಸಲ್ಪಟ್ಟ  ಸಂದರ್ಭದಲ್ಲಿ ಲೇಖಕಿ ಹಾಗೂ ತಂಡದವರು  ತಲುಪಬೇಕಾದ  ಸ್ಥಳವನ್ನು  ಹೇಗೆ ತಲುಪಿದರು  ಅನ್ನುವ ಅನುಭವವನ್ನು ಇಲ್ಲಿ ಉಲ್ಲೇಖಿಸಲಾಗಿದೆ . ರೈಲ್ವೆ  ನಿಲ್ದಾಣಗಳಲ್ಲೂ ಅನಿವಾರ್ಯ ಪರಿಸ್ಥಿತಿಗಳಲ್ಲಿ  ಉಳಿದುಕೊಳ್ಳಲು  ವಸತಿ  ವ್ಯವಸ್ಥೆ ಇದೆ ಅನ್ನುವ ಹೊಸ ವಿಚಾರ ಇಲ್ಲಿ ಓದಿ ಗೊತ್ತಾಯಿತು ನನಗು . ಎಲ್ಲರೂ ಜತೆಗೂಡಿ ಹೊರಡುವ ಪ್ರವಾಸದ ಖುಷಿಯನ್ನು ಹೇಮಾಮಾಲಾ ಅವರು ಎಳೆ ಎಳೆಯಾಗಿ ಬಿಡಿಸಿ ಇಟ್ಟಿದ್ದಾರೆ ತಮ್ಮ ಲೇಖನದಲ್ಲಿ .
.
ತೇನಸಿಂಗ್ … ಗೋಪಮ್ಮ….  ಅನ್ನಪೂರ್ಣ :-
ಇಲ್ಲಿ ಹಿಮಾಲಯದ ಅನೇಕ ಕಡೆಗಳಲ್ಲಿ  ಹಲವಾರು ಬಾರಿ ಚಾರಣ ನಡೆಸಿರುವ  ಇಬ್ಬರು ವೀರ ಮಹಿಳಾ ಮಣಿಯರ ಸಾಹಸದ ಪರಿಚಯ ಮಾಡಿಕೊಡಲಾಗಿದೆ . ಇಳಿ ವಯಸ್ಸಿನಲ್ಲೂ ಉತ್ಸಾಹದ ಚಿಲುಮೆಗಳಾಗಿ  ದೇಶ ಸುತ್ತುವ  ಹವ್ಯಾಸವನ್ನು ಬೆಳೆಸಿಕೊಂಡಿರುವ  ಇವರುಗಳ  ಬಗ್ಗೆ ಓದುವಾಗ ನಿಜಕ್ಕೂ ಹೆಮ್ಮೆ ಅನ್ನಿಸುತ್ತದೆ .
ಹರಿದ್ವಾರದತ್ತ -ರೈಲಿನಲ್ಲಿ  ಭಜನೆ, ನರ್ತನ:-
ಇಲ್ಲಿಂದ ಶುರು ಪ್ರಯಾಣದ  ನಿಜವಾದ ಕಷ್ಟ ಸುಖ, ನಿಜವಾದ ಮಜ. ಟಿಕೆಟ್ ಕಾಯ್ದಿರಿಸಿದ್ದರೂ  ಬೋಗಿಯಲ್ಲಿ  ಜನರು ತುಂಬಿಕೊಳ್ಳುತಿದ್ದ  ಪರಿ,ಅದರಿಂದಾದ ತ್ರಾಸ, ಬೇರೆ ಬೇರೆ ಊರಿನ ಜನಗಳ ಪರಿಚಯ, ಭಜನೆ , ನರ್ತನಗಳ  ಮೂಲಕ ಅವರ ಸಂಸ್ಕೃತಿಯ ಪರಿಚಯ,  ಅವರೊಡನೆ ಕೈ ಜೋಡಿಸಿ ತಾವೂ ಆನಂದಿಸಿದ  ರೀತಿ, ಕೊನೆಗೆ ತಲುಪಬೇಕಾಗಿದ್ದ  ಜಾಗ ತಲುಪಿದ ನಂತರ ಆ ದಿನದ ಪ್ರಯಾಣಕ್ಕೊಂದು  ವಿರಾಮ ಎಲ್ಲದರ ಸುಂದರ ಉಲ್ಲೇಖ . ಜನ ಸಾಮಾನ್ಯರ ನಿಜವಾದ ಕಷ್ಟ ಸುಖದ ಅರಿವಾಗಬೇಕಾದರೆ  ರೈಲಿನಲ್ಲಿ ಪ್ರಯಾಣಿಸಬೇಕೆಂಬುದು  ಲೇಖಕಿಯ ಅನುಭವದ ಮಾತು. ರೈಲಿನಲ್ಲಿ ಊಟದ ಹೊತ್ತಿಗೆ ಎಲ್ಲರೂ ತಮ್ಮ ತಮ್ಮ ಮನೆಯಿಂದ ಮಾಡಿಕೊಂಡು ಬಂದಿದ್ದ ತಿಂಡಿಗಳನ್ನು  ಪರಸ್ಪರ ಹಂಚಿಕೊಂಡು ತಿನ್ನುವುದು  ತಂಡದ ಒಗ್ಗಟ್ಟನ್ನು  ಪ್ರದರ್ಶಿಸುತ್ತದೆ . ಆ ಸಮಯದಲ್ಲಿ ಎಲ್ಲರೂ ಒಂದೇ ಮನೆಯ ಸದಸ್ಯರು ಅನ್ನುವ ಭಾವನೆ.
ಬಯೋಮೆಟ್ರಿಕ್ ಕಾರ್ಡ್-  ಯಾತ್ರೆಯ  ದಾಖಲೆ  :-
ಚಾರ್ ಧಾಮ್ ಯಾತ್ರೆಗೆ ಹೊರಡುವ ಮೊದಲು ಯಾವ ಎಲ್ಲಾ ನಿಯಮ ನಿಬಂಧನೆಗಳನ್ನು ಅನುಸರಿಸಬೇಕು ಅನ್ನುವುದನ್ನು ಹಂತ ಹಂತವಾಗಿ ವಿವರಿಸಲಾಗಿದೆ ಇಲ್ಲಿ.  ಇಡೀ ಯಾತ್ರೆಯಲ್ಲಿ  ದಾಖಲೆಯಾಗಿ  ಬಯೋಮೆಟ್ರಿಕ್ ಕಾರ್ಡ್ ಬಹಳ ಮುಖ್ಯ.
.
ಹೃಷಿಕೇಶ  :-

ನೋಂದಣಿಯ  ಕೆಲಸ ಮುಗಿದ ನಂತರ ಹೃಷಿಕೇಶದತ್ತ  ಪ್ರಯಾಣ, ಇಲ್ಲಿ ಒಂದಷ್ಟು ಘಟನೆಗಳ  ಹಾಸ್ಯಮಿಶ್ರಿತ  ಉಲ್ಲೇಖ ಮನಸಿಗೆ ಮುದ ನೀಡುವಂತಿದೆ, ಒಂದಷ್ಟು ಸುತ್ತಾಟದ  ನಂತರ ಅಲ್ಲಿನ ಸ್ಥಳೀಯ  ತಿಂಡಿಗಳ  ರುಚಿ ನೋಡುವ ಕಾರ್ಯಕ್ರಮ , ಅದೂ ಕೂಡ ಅಲ್ಲಿನ ಅಶುಚಿತ್ವ  , ಅನಾನುಕೂಲತೆಗಳಿಗೆ  ತಲೆ ಕೆಡಿಸಿಕೊಳ್ಳದವರಿಗಷ್ಟೇ  ಅನ್ವಯಿಸುತ್ತದೆ ಅನ್ನುತ್ತಾರೆ ಲೇಖಕಿ .

ಯಮುನೋತ್ರಿಯತ್ತ ಪಯಣ :-
ಇಲ್ಲಿ ಹಿಮಾಲಯದ ತಪ್ಪಲಿನ  ನಿಸರ್ಗ ಸೌನ್ದರ್ಯ, ಜುಳು ಜುಳು ನಾದದೊಂದಿಗೆ ಹರಿಯುವ ಝರಿ, ನದಿ, ತೊರೆಗಳ ವರ್ಣನೆ ಮನಸ್ಸಿನಲ್ಲಿ ಒಂದು ಸುಂದರ ಲೋಕವನ್ನು  ನಿರ್ಮಿಸುತ್ತದೆ . ಲಾಖ್ ಮಂಡಲ್ , ಪಾಂಡವ  ಗುಹಾ  ಇವೆಲ್ಲಾ ಚಾರಣದಲ್ಲಿ  ಸಿಗುವ ಬೇರೆ ಬೇರೆ ಸ್ಥಳಗಳು . ಇಲ್ಲಿ ಚರಿತ್ರೆ, ಹಾಗು ಮಹಾಭಾರತಕ್ಕೆ  ಸಂಬಂಧಪಟ್ಟ ಸಾಕಷ್ಟು ಕಥೆಗಳು , ವಿವರಗಳು ಎಲ್ಲವನ್ನು  ಬಹಳ ಸೊಗಸಾಗಿ, ಉಲ್ಲೇಖಿಸಲಾಗಿದೆ . ಪ್ರತಿಯೊಂದು ಊರಲ್ಲೂ  ಪಾಂಡವರು ತಮ್ಮ ಕುರುಹು, ನೆನಪುಗಳನ್ನು ಕಥೆಗಳ ರೂಪದಲ್ಲಿ ಉಳಿಸಿ  ಹೋಗಿರುವುದು  ನಿಜಕ್ಕೂ ಆಶ್ಚರ್ಯದ  ಸಂಗತಿ. ಆ ಕಥೆಗಳನ್ನು ಸುಳ್ಳು ಅನ್ನುವ ಹಾಗೂ ಇಲ್ಲ, ನಿಜವೆಂದು  ಒಪ್ಪಿಕೊಳ್ಳಲೂ ಕಷ್ಟ . ಏನೇ ಆಗಿದ್ದರೂ ಇತಿಹಾಸ ಇತಿಹಾಸವೇ.
.
ವಿಠಲಸೋಮ ಪ್ರಸಾದ ಪಾಕ :-
ಇದೊಂದು ತಂಡದ ಗಂಡಸರು ಉಳಿದ ಸದಸ್ಯರಿಗೆ  ಅಡುಗೆ ಮಾಡಿ ಹಾಕುತ್ತೇವೆಂದು  ಒಪ್ಪಿಕೊಂಡು ಕಷ್ಟ ಪಡುವ ಹಾಸ್ಯಾತ್ಮಕ  ಸನ್ನಿವೇಶ .ಈ ಪ್ರವಾಸ ಕಥನದ ಇನ್ನೊಂದು ವಿಶೇಷ ಎಂದರೆ ಹೇಮಾಮಾಲಾ ಅವರು ಪ್ರವಾಸದಲ್ಲಿ ತಮಗೆ ನೇರವಾದ ಎಲ್ಲರನ್ನೂ ಸ್ಮರಿಸಿ  ಅವರ ಹೆಸರುಗಳನ್ನೂ, ತಮ್ಮ ಬರಹದಲ್ಲಿ ಉಲ್ಲೇಖಿಸಿರುವುದು . ಇದು ಲೇಖಕಿಯ ಕೃತಜ್ಞತಾಭಾವವನ್ನು  ತೋರಿಸುತ್ತದೆ.
.
ತೇಲುವ ಆ ಮೋಡದ ಮೇಲೆ :-
ಈ  ಅಧ್ಯಾಯದಲ್ಲಿ  ಲೇಖಕಿ ತಮ್ಮ ಬಾಲ್ಯದ ದಿನಗಳನ್ನು ಬಹಳ ಜ್ಞಾಪಿಸಿಕೊಂಡಿದ್ದಾರೆ, ಕಾರಣ ಹೆಲಿಕಾಫ್ಟರ್ ನಲ್ಲಿ ಪ್ರಯಾಣಿಸಲು  ಒದಗಿ  ಬಂದ ಅವಕಾಶ . ಈ ನೆನಪುಗಳು ನಮ್ಮ ಬಾಲ್ಯದ ಸುಂದರ ಪುಟಗಳನ್ನೂ ತೆರೆಯುತ್ತವೆ . ಇಲ್ಲಿ 2013ರಲ್ಲಿ ಭೀಕರ ಜಲ ಪ್ರವಾಹಕ್ಕೆ  ಬಲಿಯಾಗಿ ನಾಶವಾದ ಕೇದಾರದ  ಹಳ್ಳಿಗಳ ಚಿತ್ರಣ ಮನವನ್ನು ಕಲಕುತ್ತದೆ.
ಪ್ರತಿಯೊಬ್ಬ ಹಿಂದೂವಿಗೂ  ಜೀವನದಲ್ಲಿ ಒಮ್ಮೆಯಾದರೂ ಬರಬೇಕೆಂಬ ಭಾವ ಹುಟ್ಟಿಸುವ  ಸ್ಥಳ  ಕೇದಾರನಾಥ  ಎನ್ನುತ್ತಾರೆ ಲೇಖಕಿ . ಇವರು ಈ ಸ್ಥಳಕ್ಕೆ  ಮಾರು ಹೋಗಿರುವುದು ಬರಹದಲ್ಲಿ ಸ್ಪಷ್ಟವಾಗಿ ಎದ್ದು ಕಾಣಿಸುತ್ತದೆ. ಮನಸೋ ಇಚ್ಛೆ ತಿರುಗಾಟದ  ಕುರಿತಾಗಿ ಬರೆದ ನಂತರ ಕೇದಾರನಾಥದ ಸ್ಥಳ ಪರಿಚಯ , ಮಹಾಭಾರತದ  ಕಾಲದಲ್ಲಿ ನಡೆದ ಘಟನೆಗಳು ಮತ್ತು ಕೇದಾರನಾಥ ಹೇಗೆ ಗುರುತಿಸಲ್ಪಟ್ಟಿತು  ಅನ್ನುವ ವರ್ಣರಂಜಿತ  ವಿಚಾರಗಳನ್ನು ನಾವು ಓದಬಹುದು.
.
ತಮ್ಮ ಪ್ರವಾಸ ಕಥನದ ಕೊನೆಯಲ್ಲಿ ಸಹ ಯಾತ್ರಿಗಳ  ಅಭಿಪ್ರಾಯಗಳನ್ನು ನಮೂದಿಸಿರುವುದು  ಲೇಖಕಿಯ ವಿಶಾಲ ಮನೋಭಾವಕ್ಕೆ  ಸಾಕ್ಷಿ . ಇಲ್ಲಿ ಸೋಮಶೇಖರ  ಮೈಸೂರ್ ಅವರು ಬಹಳ ಹಾಸ್ಯಾತ್ಮಕವಾಗಿ, ನದಿಗಳ  ಸುಂದರ ಕಾವ್ಯಾತ್ಮಕ  ವರ್ಣನೆಯ  ಮೂಲಕ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಪ್ರವಾಸ ಹೋದಲ್ಲಿ ಒಂದೆಡೆ ಬಿಸಿನೀರಿನ  ಹೊಂಡಕ್ಕೆ  ಇಳಿಯಬೇಕು  ಅಂದುಕೊಂಡು ಇಳಿಯದೆ  ಹಾಗೆಯೇ ಇಳಿಯುವುದೋ  ಬೇಡವೋ ಎಂದು ಯೋಚಿಸುತ್ತಾ  ಕುಳಿತಿರುವಾಗ,  ಎಲ್ಲಿಂದಲೋ  ಒಬ್ಬ ಬಂದವ ಅವಸರ  ಅವಸರವಾಗಿ  ಧುಮುಕಿ  ಅದೇ ವೇಗದಲ್ಲಿ  ಮರಳಿ ಮೇಲೆ ಬಂದು ಕುಳಿತಾಗ , ಅವನ ಮೈ ಮೇಲೆ ಎದ್ದ ಬೊಬ್ಬೆಗಳನ್ನು ಕಂಡು ನೀರಿಗಿಳಿಯುವ ಯೋಚನೆಯನ್ನು ಕೈ ಬಿಟ್ಟ ಘಟನೆಯನ್ನು , ಕಂಡವರ ಮಕ್ಕಳನ್ನು ಬಾವಿಗೆ ನೂಕಿ ಆಳ ನೋಡೋದು ಅಂದ್ರೆ ಇದೇ ಎಂದು ಹಾಸ್ಯಾತ್ಮಕವಾಗಿ ವಿವರಿಸಿದ ಘಟನೆ ನಗು ಉಕ್ಕಿಸುತ್ತದೆ .
.
ಪೂರ್ಣಿಮಾ ಸುರೇಶ್ ಮೈಸೂರ್ ಇವರು ಹಿಮಾಲಯದ ವರ್ಣನೆಯನ್ನು   ಪದಗಳಲ್ಲಿ ಎಷ್ಟೇ ಮಾಡಿದರೂ ಕುರುಡನಿಗೆ  ಆನೆಯನ್ನು  ಬಣ್ಣಿಸಲು ಹೇಳಿದಂತೆ  ಅನ್ನುತ್ತಾರೆ . ಇದರ ಅರ್ಥ ಹಿಮಾಲಯದ ಸೌಂದರ್ಯವನ್ನು ಸ್ವತಃ ನೋಡಿ ಆನಂದಿಸಬೇಕು  ಎಂದು .
.
ಚಾರ್ ಧಾಮ್  ಪ್ರವಾಸ ಕಥನವನ್ನು  ಓದಿ ಮುಗಿಸುವ ಹೊತ್ತಿಗೆ ಸ್ವತಃ ನಾನೇ ಅಲ್ಲಿ ಸುತ್ತಾಡಿ ಬಂದ ಅನುಭವ, ಅಷ್ಟು ಆಪ್ತವಾದ ಬರಹ. ಎಲ್ಲಿಂದ , ಹೇಗೆ, ಯಾವ ರೀತಿ ಹೋಗಬೇಕೆಂಬ  ಸಚಿತ್ರ  ಚಿತ್ರಣದಿಂದ  ಕೂಡಿದ ಲೇಖನ ಮಾಲೆ. ಎಲ್ಲಿಯೂ ಸ್ವಲ್ಪವೂ ಬೇಸರವೆನಿಸದೆ  ರೋಚಕವಾಗಿದೆ.
.
ಕುಳಿತಲ್ಲೇ ಸ್ವರ್ಗವನ್ನು  ತೋರಿಸುವಂತಹ  ಸುಂದರ ಪ್ರವಾಸ ಕಥನವನ್ನು ಬರೆದ ಲೇಖಕಿ ಹೇಮಾಮಾಲಾ .ಬಿ ಯವರಿಗೊಂದು ಹೃತ್ಪೂರ್ವಕ ಧನ್ಯವಾದ . ಪ್ರವಾಸ ಹೋಗುವ ಯೋಚನೆ ಇರುವವರಿಗೂ  ಇದು ಮಾರ್ಗದರ್ಶನ ನೀಡಬಲ್ಲುದು. ಒಟ್ಟಲ್ಲಿ ಇದೊಂದು ಸುಂದರವಾದ ಪ್ರವಾಸ ಕಥನ , ಜೊತೆಗೆ ಸಂಗ್ರಹ ಯೋಗ್ಯ ಕೂಡ.

.

– ನಯನ ಬಜಕೂಡ್ಲು
.

   

15 Responses

  1. Hema says:

    ‘ಚಾರ್ ಧಾಮ್ ‘ ಪುಸ್ತಕವನ್ನು ಎಷ್ಟೊಂದು ಸೊಗಸಾಗಿ ಪರಿಚಯಿಸಿದ್ದೀರಿ ನಯನಾ…ನಿಮ್ಮ ಪ್ರೀತಿಗೆ ಋಣಿ. ಲೇಖಕಿಗೆ ಇದಕ್ಕಿಂತ ದೊಡ್ಡ ಪ್ರಶಸ್ತಿ ಬೇರೆ ಇಲ್ಲ.ಧನ್ಯೋಸ್ಮಿ ! .

  2. Parvathikrishna says:

    ತುಂಬ ಚೆನ್ನಾಗಿ ಪುಸ್ತಕ ಪರಿಚಯ ಮಾಡಿದ್ದೀರಿ ನಯನಾ ಅವರೇ .ನಾನು ಎರಡು ಬಾರಿ ಓದಿ ಖುಷಿಪಟ್ಟೆ.ಸರಳವಾಗಿ ಹಾಗೂ ರೋಚಕವಾಗಿ ಬರೆದ ಹೇಮಮಾಲಾರಿಗೆ ಧನ್ಯವಾದಗಳು ..ವಿಮರ್ಶಿಸಿದ ನಿಮಗೂ ಧನ್ಯವಾದಗಳು.

  3. Savithri bhat says:

    ನಿಮ್ಮ ಪುಸ್ತಕ ವಿಮರ್ಶೆ ಮತ್ತೊಮ್ಮೆ ಪುಸ್ತಕ ಓದಿದ ಅನುಭವ ಆಯಿತು. ಬಹಳ ಸೊಗಸಾಗಿ ಬರದಿದ್ದೀರಿ ನಯನಾ..

  4. ಧರ್ಮಣ ಧನ್ನಿ says:

    ಚಾರದಾಮ ಪ್ರವಾಸ ಕಥನ ಹೊಂದಿದ ಪುಸ್ತಕ ನಾನು ಓದಿರುವೆ.ಹೆಮಾ ಮಾಲಾ ಅವರ ಅದ್ಬುತ ಪುಸ್ತಕವಾಗಿದೆ.
    ವಿಶ್ಲೇಷಣೆ ಚೆನ್ನಾಗಿತ್ತು.ಧನ್ಯವಾದಗಳು

  5. km vasundhara says:

    ಪುಸ್ತಕ ನಾನೂ ಓದಿರುವೆ. ಓದುವಾಗ ನನಗೆ ಬಂದ ಭಾವನೆಯನ್ನು ನೀವೇ ಹೇಳಿರುವಂತಿದೆ! ಅಚ್ಚುಕಟ್ಟಾಗಿ ನಿರೂಪಿಸಿರುವ ಚೆಂದದ ಪ್ರವಾಸ ಕಥನ. ನನ್ನ ಮನೆಯ ಹಿರಿಯರಿಗೂ ಕೊಟ್ಟು ಓದಿಸಿರುವೆ. ಹೃಷಿಕೇಶ , ಹರಿದ್ವಾರ ಮೊದಲಾದವನ್ನು ೧೦ ವರ್ಷಗಳ ಹಿಂದೆ ನೋಡಿ ಬಂದಿರುವ ನನಗೆ ಪುನಃ ಅವನ್ನೆಲ್ಲಾ ನೋಡಿಸಿದ ಪುಸ್ತಕ ‘ಚಾರ್ಧಾಮ್’.. ಆದರೆ ಲೇಖಕರು ತಮ್ಮ ಸಹಿ ಹಾಕದೇ ಪುಸ್ತಕ ಕಳಿಸಿಕೊಟ್ಟದ್ದೊಂದು ಬೇಸರ ಉಳಿದಿದೆ..

    • Hema says:

      ಅನಂತ ಧನ್ಯವಾದಗಳು ಮೇಡಂ.
      ಅದು ನನ್ನ ಪ್ರಥಮ ಪುಸ್ತಕ, ಸಹಿ ಹಾಕಿ ಕಳುಹಿಸಬಹುದು ಎಂದು ನನ್ನ ತಲೆಗೆ ಹೊಳೆದೇ ಇಲ್ಲವಲ್ಲಾ. ಕ್ಷಮಿಸಿ. ಮುಂದೆ ಯಾವತ್ತಾದರೂ ಎರಡನೆಯ ಪುಸ್ತಕ ಬರೆದರೆ, ಆ ತಪ್ಪನ್ನು ಸರಿಪಡಿಸಿಕೊಳ್ಳುವೆ!

    • ನಯನ ಬಜಕೂಡ್ಲು says:

      ಧನ್ಯವಾದಗಳು ಮೇಡಂ. ತುಂಬಾ ಒಳ್ಳೆಯ ಪುಸ್ತಕ. ಸಂಗ್ರಹ ಯೋಗ್ಯ ಕೂಡಾ.

  6. ಹರ್ಷಿತಾ says:

    ಬಹಳ ಚೆನ್ನಾಗಿ ವಿಶ್ಲೇಷಿಸಿದ್ದೀರಿ ನಯನಕ್ಕಾ…ನಾನೂ ಈ ಪುಸ್ತಕವನ್ನು ಎರಡು ಬಾರಿ ಓದಿದ್ದೇನೆ…

  7. Anonymous says:

    ಸಹಜ, ಸುಂದರ , ಸುಲಲಿತ ಲೇಖನ ಪ್ರೀತಿಯ ಮಾಲಾರದ್ದು. ಬಹಳ ಆತ್ಮೀಯವಾಗಿ, ಅವರ ಪುಸ್ತಕವನ್ನು, ನಯನಾ ಅವರು ಪರಿಚಯಿಸಿದ ಪರಿ ಸೊಗಸಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: