ಮಕ್ಕಳಿಂದ ಸಂಸ್ಕೃತಿ ಉಳಿಸಿ ಬೆಳೆಸುವ ಪೋಷಕರ ಪಾತ್ರ
ಸಾಂಸ್ಕೃತಿಕವಾಗಿ ಶ್ರೀಮಂತವಾಗಿರೋ ಈ ದೇಶದಲ್ಲಿ ಅದನ್ನು ಉಳಿಸಿ ಬೆಳೆಸುವ, ತಲೆಮಾರಿನಿಂದ ತಲೆಮಾರಿಗೆ ಅದನ್ನು ವರ್ಗಾಯಿಸುವ ಕಾರ್ಯಗಳು ಇಂದು ಅಗತ್ಯವಾಗಿವೆ. ಇಂತಹ ಕಾರ್ಯಗಳನ್ನು ನಾವು ಮಕ್ಕಳಿಂದಲೇ ಪ್ರಾರಂಭ ಮಾಡುವದು ಸಂಸ್ಕೃತಿಯನ್ನು ಉಳಿಸುವ ದೃಷ್ಟಿಯಿಂದ ಹೆಚ್ಚು ಸೂಕ್ತ ಅನಿಸುತ್ತದೆ. ಆದರೆ ಅದು ಹೇಗೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಉದ್ಭವವಾಗುವುದು ಸಹಜ.
ಮಕ್ಕಳು ತೋಟದಲ್ಲಿ ಅರಳಿ ನಗುತ್ತಿರುವ ಸುಂದರ ಹೂವುಗಳು. ಈ ಹೂಗಳು ಸದಾ ನಳನಳಿಸುತ್ತಾ ಇರಬೇಕು. ಒಂದು ಪೀಳಿಗೆಯಿಂದ ಮತ್ತೊಂದು ಪೀಳಿಗೆಗೆ ಸಂಸ್ಕೃತಿ ಯನ್ನು ಹೊತ್ತೊಯ್ಯಬೇಕು ಅನ್ನುವುದಾದರೆ ಆ ಮಕ್ಕಳ ಪೋಷಕರು ಹಾಗೂ ಶಿಕ್ಷಕರು ಅತ್ಯಂತ ಹೆಚ್ಚಿನ ಜವಾಬ್ದಾರಿ ತಗೊಬೇಕಾಗುತ್ತದೆ. ಪೋಷಕರು ಎಲ್ಲಾ ಜವಾಬ್ದಾರಿಯನ್ನು ಶಿಕ್ಷಕರ ಮೇಲೆಯೇ ಹೇರಿ ತಮ್ಮ ಜವಾಬ್ದಾರಿಯನ್ನು ಹಗುರ ಮಾಡಿಕೊಳ್ಳುತ್ತಿದ್ದಾರೆ. ಆದರೆ ಮಗು ಶಿಕ್ಷಕ ಹಾಗೂ ಪೋಷಕರನ್ನು ಅನುಕರಣೆ ಮಾಡುತ್ತವೆ . ಇಲ್ಲಿ ಇಬ್ಬರ ಪಾತ್ರವೂ ಅಪಾರ .
ಒಮ್ಮೆ ಒಬ್ಬಾತ ಸೈಕಲ್ ಅಂಗಡಿಯಲ್ಲಿ ಇರುವ ಸುಂದರ ಸೈಕಲ್‌ಗಳನ್ನು ಕಂಡು ಅಂಗಡಿಯಾತನನ್ನು ಕೇಳುತ್ತಾನೆ . “ಈ ಸೈಕಲ್ ಹೊಡೆಯಲು ಬರುತ್ತದೆಯೇ, ನನ್ನ ಮಗ ಈ ಸೈಕಲ್ ಮೇಲೆ ಕುಳಿತು ಸುಲಭವಾಗಿ ಚಲಿಸಬಲ್ಲನೇ” ಎಂದು ಕೇಳುತ್ತಾನೆ. “ಇದು ಉತ್ತಮ ಗುಣಮಟ್ಟದ ಸೈಕಲ್ ಯಾರೂ ಬೇಕಾದರೂ ಇದನ್ನು ಸುಲಭವಾಗಿ ಹೊಡೆಯಬಹುದು, ಯಾವುದೇ ಸಂಶಯವಿಲ್ಲದೆ ಕೊಂಡುಕೊಳ್ಳಿ “ಎಂದು ಹೇಳುತ್ತಾನೆ ಅಂಗಡಿಯಾತ.
ಅತ್ಯಂತ ಆಸಕ್ತಿಯಿಂದ ಸೈಕಲ್ ಕೊಂಡು ಹೋದ ವ್ಯಕ್ತಿ ಎರಡೇ ದಿನದಲ್ಲಿ ವಾಪಸ್ಸು ಬಂದು “ಏನಯ್ಯ ಸೈಕಲ್ ಚೆನ್ನಾಗಿ ಹೊಡಿಬಹುದು ಅಂತ ಹೇಳಿ ಮೋಸ ಮಾಡಿಬಿಟ್ಟೆ. ನನ್ನ ಮಗ ಈ ಸೈಕಲಿನಿಂದ ಕೈಕಾಲು ಮುರಿದುಕೊಂಡಿದ್ದಾನೆ. ಎಂತಹ ಸೈಕಲನ್ನು ಕೊಟ್ಟುಬಿಟ್ಟೆ. ನಿನ್ನ ಮಾತು ಕೇಳಿ ನಾನು ಕೆಟ್ಟೆ “ಎಂದು ಆ ವ್ಯಕ್ತಿ ಜೋರು ಮಾಡುತ್ತಾನೆ.
ಆಗ ಅಂಗಡಿಯ ಮಾಲಿಕ “ಅಲ್ಲಾ ಸ್ವಾಮಿ ನಾನು ಉತ್ತಮವಾದ ಸೈಕಲನ್ನು ಕೊಟ್ಟಿದ್ದಿನಿ, ಒಳ್ಳೆಯ ಸೈಕಲ್ ಮಾರೋಕೆ ಸಾಧ್ಯವೇ ವಿನಃ , ಸೈಕಲ್ ಹೊಡೆಯೋಕೆ ಬೇಕಾದ ಬ್ಯಾಲನ್ಸನ್ನು ಮಾರೋಕೆ ಸಾಧ್ಯ ಎನ್ರಿ. ಮೊದಲು ಸೈಕಲ್ ಬ್ಯಾಲನ್ಸನ್ನು ಕಲಿಸಿ ಕೊಡಿ ಅಂತ ದಬಾಯಿಸಿ ಕಳುಹಿಸಿ ಕೊಡುತ್ತಾನೆ .ಹೀಗೆ ಉತ್ತಮವಾದ ವಾಹನಗಳನ್ನು ಮಾರಬಹುದೇ ವಿನಾಃ ಕಲಿಯುವಿಕೆಗೆ ಬೇಕಾದ ಆಸಕ್ತಿ ಪ್ರಾವಿಣ್ಯತೆಯನ್ನು ಮಾರೋಕೆ ಸಾಧ್ಯವಿಲ್ಲ. ಅದೇ ರೀತಿ ಒಬ್ಬ ಶಿಕ್ಷಕ ಮಗುವಿಗೆ ಉತ್ತಮವಾಗಿ ಬೋಧಿಸಬಲ್ಲ . ಕಲಿಕೆಗೆ ಬೇಕಾದ ಎಲ್ಲಾ ಸಹಾಯವನ್ನು ಮಾಡಬಲ್ಲ. ಆದರೆ ಕಲಿಕೆ ಮಾತ್ರ ಮಗುವಿನಿಂದಲೇ ಆಗಬೇಕು, ಆ ಮಗು ಸ್ವತಃ ಕಲಿತಾಗ ಮಾತ್ರ ಅಕ್ಷರ, ಜ್ಞಾನ ವೃದ್ಧಿಯಾಗೋಕೆ ಸಾಧ್ಯ. ಇದನ್ನು ಪೋಷಕರು ಅರ್ಥ ಮಾಡಿಕೊಂಡು ತಮ್ಮ ಜವಾಾರಿಯನ್ನುಕೂಡ ಅರಿಯಬೇಕು.
ಸುಂದರವಾಗಿ ಅರಳಿ ನಗುತ್ತಾ ಇರೊ ಹೂವುಗಳು, ಬಾಡೋಕೆ ಕಾರಣ ಇರುತ್ತೆ , ಗಿಡಕ್ಕೆ ಬೇಕಾದ ನೀರು, ಗೊಬ್ಬರ ಕಡಿಮೆ ಆದರೂ ಗಿಡ ಬಾಗುತ್ತದೆ, ಹೆಚ್ಚು ಆದರೂ ಗಿಡ ಬಾಗುತ್ತದೆ. ಇದಕ್ಕೆ ಕೂಡಬೇಕಾದಷ್ಟು ಪ್ರಮಾಣದ ನೀರು, ಗೊಬ್ಬರ ಕೊಡಬೇಕು. ಈಗಂತು ಎಲ್ಲಾ ಮನೆಗಳಲ್ಲೂ ಒಂದೊ, ಎರಡೋ ಮಕ್ಕಳಿರುತ್ತದೆ. ಮಗು ಕೇಂದ್ರೀಕೃತ ಸಂಸಾರಗಳೇ ಹೆಚ್ಚು. ಮಗುವಿನ ಬಗ್ಗೆ ವಿಪರೀತ ಕಾಳಜಿ, ಪ್ರೀತಿ , ವಾತ್ಸಲ್ಯ. ಅದು ಏನು ಹೇಳುತ್ತೊ ಅದನ್ನು ಕೊಡಿಸಿಬಿಡಬೇಕು. ಅದೆಷ್ಟೆ ದುಡ್ಡಾದ್ರು ಚಿಂತೆ ಇಲ್ಲ . ಅದರಿಂದ ಏನೇ ಹಾನಿಯಾದ್ರೂ ಪರವಾಗಿ ನಮ್ಮ ಮಗು ಬೇಸರ ಮಾಡ್ಕೊಬಾರದು ಅನ್ನೋ ಮನೋಭಾವ, ಇಂದಿನ ಹೆತ್ತವರಲ್ಲಿ ಹೆಚ್ಚು ಕಾಣ್ತಾ ಇದ್ದೇವೆ.
ನಮಗಂತೂ ನಾವು ಬಯಸಿದ ಎಲ್ಲವನ್ನು ಈಡೇರಿಸಿ ಕೊಡೋ ಹೆತ್ತವರಿರಲಿಲ್ಲ . ಆಗೆಲ್ಲ ತಮಗೆಷ್ಟು ನಿರಾಶೆ ಆಗ್ತಾ ಇತ್ತು . ಬೇಸರ ಆಗ್ತ ಇತ್ತು . ಅಂತಹ ಬೇಸರ ತಮ್ಮ ಮುದ್ದು ಕಂದಮ್ಮಗಳಿಗಾಗಬಾರದು ಅನ್ನೋ ಆಲೋಚನೆ ಒಂದೆಡೆ ಆದರೆ, ತಾವು ಏನಾಗಬೇಕು ಅಂತ ಅಂದುಕೊಂಡಿದ್ದರೋ, ಅದು ತಮ್ಮ ಮಕ್ಕಳಾದ್ರೂ ಆಗಲಿ ಅನ್ನೋ ಒತ್ತಡ ತರೋದು, ಆ ಮಕ್ಕಳಿಗೆ ಆಸಕ್ತಿ ಇರಲಿ, ಬಿಡಲಿ, ತನ್ನಾಸೆಯನ್ನು ಮಗು ಈಡೇರಿಸಲೇಬೇಕು. ಉದಾಹರಣೆಗೆ ತಾನು ಡಾಕ್ಟರಾಗಲಿಲ್ಲ ಅಂತ ತನ್ನ ಮಗನಾದರೂ ಡಾಕ್ಟರಾಗಲಿ, ಮಗಳು ಇಂಜಿನಿಯರ್ ಆಗಲಿ, ನೃತ್ಯಗಾತಿ ಆಗಲಿ ಅನ್ನೋ ಒತ್ತಡ ಹೇರಿ, ಆ ಮಕ್ಕಳಿಗೆ ಅದರಲ್ಲಿ ಆಸಕ್ತಿ ಇಲ್ಲದಿದ್ದಾಗ ಅವು ಓದಿನಲ್ಲಿ ಬದುಕಿನಲ್ಲಿ ಆಸಕ್ತಿ ಕಳೆದುಕೊಂಡು ಏನೇನೋ ಅನಾಹುತಗಳಿಗೆ ಕಾರಣಕರ್ತರಾಗುತ್ತಾರೆ. ಇಂತಹ ಪರಿಸ್ಥಿತಿಯನ್ನು ನಿರ್ಮಾಣ ಮಾಡಬೇಕು. ತಮ್ಮ ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆ, ಆಸೆ ಇದೆ ಅದನ್ನೆ ಓದಲು ಬಿಡಬೇಕು. ಎಲ್ಲಾ ಮಕ್ಕಳು ಡಾಕ್ಟರ್, ಇಂಜಿನಿಯರುಗಳೇ ಆಗಬೇಕೆ.
ಜಾಗತಿಕರಣದಿಂದಾಗಿ ಇಂದು ನಮ್ಮ ದೇಶ ತೆರೆದ ಕೈ ಗಳಿಂದ ವಿದೇಶಿ ಸಂಸ್ಕೃತಿಯನ್ನು ಸ್ವಾಗತಿಸುತಿದೆ. ಇದರ ಪರಿಣಾಮ ಕೂಡ ನಮ್ಮ ಪುಟಾಣಿಗಳ ಮೇಲೆ ಆಗ್ತಾ ಇದೆ . ಯಾವುದೊ ಪಾನೀಯ ಕುಡಿದ ಮಾತ್ರಕ್ಕೆ ತಾನು ಸಚಿನ್ ಅಂತೆ ದೊಡ್ಡ ಕ್ರಿಕೆಟಿಗವಾಗಬಹುದು ಅನ್ನೋ ಕನಸುಗಳನ್ನು ಇಂದಿನ ಟಿವಿ ಸಂಸ್ಕೃತಿ ಜಾಹೀರಾತು ನಮ್ಮ ಕಂದಮ್ಮಗಳಿಗೆ ಮಾಡ್ತಾ ಇದೆ. ಯಾವುದೋ ಕ್ರೀಮ್ ಹಚ್ಚಿದರೆ ತಾನು ಐಶ್ವರ್ಯ ರೈ ಯಂತೆ ಸುಂದರ ಹುಡುಗಿಯಾಗ ಬಹುದು ಅನ್ನೋ ಕಲ್ಪನೆ ಹುಡುಗಿಯರಿಗೆ ಇರುತ್ತೆ. ಇಂತಹ ಪೊಳ್ಳು ಕನಸುಗಳಿಗೆ ನಾವು ಮಕ್ಕಳನ್ನು ಬಿಟ್ಟು ಕೊಡುತ್ತಾ ಇದ್ದೆವೆ. ಮಕ್ಕಳು ಆಸೆ ಪಟ್ಟು ಕುಡಿಯುವ ತಂಪು ಪಾನೀಯಗಳು, ಟಾಯ್ಲೆಟ್ ತೊಳೆಯುವ ಕ್ರಿಮಿನಾಶಕಗಳಿಗೆ ಸಮನಾಗಿರುತ್ತವೆ ಅನ್ನೋ ಸತ್ಯವನ್ನು ನಾವೇಕೆ ಮಕ್ಕಳಿಗೆ ತಿಳಿಸೊಲ್ಲ. ಸದಾ ಕುಡಿಯುವ ಆ ಪಾನೀಯಗಳಿಂದ ದಂತಗಳು ಕರಗಿ ಹೋಗುತ್ತವೆ ಅನ್ನೋ ನೈಜ ಚಿತ್ರಣಗಳನ್ನೆಕೆ ನಾವು
ಮಕ್ಕಳಿಗೆ ಕೊಡುತ್ತಿಲ್ಲ. ಮಕ್ಕಳು ಕೇಳಿದ ಕೂಡಲೇ ಪಾನೀಯಗಳನ್ನು ಕೊಡಿಸಿಬಿಡುತ್ತೇವೆ . ಇವತ್ತು ಎಷ್ಟೋ ಮಕ್ಕಳಿಗೆ ಎಳನೀರು ಬೇಡದ ವಸ್ತು. ಮಜ್ಜಿಗೆ ಬೇಕಾಗಿಯೇ ಇಲ್ಲಾ ಮಕ್ಕಳಿಗೆಲ್ಲಾ ಟಿ ವಿಯಲ್ಲಿ ಬರುವ ಸಚಿನ್ ಕುಡಿಯುವ, ಐಶ್ವರ್ಯ ಋತ್ವಿಕ್ ರೋಷನ್ ಕುಡಿಯುವ ಪಾನೀಯಗಳೇ ಬೇಕು. ಇಂಥ ಹವ್ಯಾಸಗಳನ್ನು ಬೆಳಿಸುತ್ತಾ ನಾವು ವಿದೇಶಿ ಕಂಪನಿಗಳಿಗೆ ಮಣೆ ಹಾಕುತ್ತಾ ಸ್ವದೇಶಿ ಮೂಲಕ್ಕೆ ಕಂಠಕಪ್ರಾಯರಾಗಿ , ರೈತನ ಆತ್ಮಹತ್ಯೆಗೆ ಪರೋಕ್ಷವಾಗಿ ಕಾರಣವಾಗುತ್ತಾ ಇದ್ದೇವೆ.
ಬೆಳಿಗ್ಗೆ ಎದ್ದ ಕೂಡಲೇ ಮಕ್ಕಳಿಗೆ ಕಾರನ್ ಪ್ಲೇಕ್ಸ್ ಬೇಕು. ರೊಟ್ಟಿ,ದೊಸೆ ಬೇಡ , ಫಿಜ್ಜಾ ಬೇಕು. ನಾವು ಕೂಡ ಯಾವುದೋ ಆಮಿಷಕ್ಕೆ ಬಲಿ ಬಿದ್ದು ಮಕ್ಕಳಿಗೆ ತಮ್ಮತನವನ್ನು ಬೆಳೆಸುವಲ್ಲಿ, ಸ್ವದೇಶದ ಪ್ರೇಮ ಸಂಸ್ಕೃತಿಯಲ್ಲಿನ ಆಸಕ್ತಿಯನ್ನು ತುಂಬುವಲ್ಲಿ ಹಿಂಜರಿಯುತ್ತಿದ್ದೇವೆ . ಈಗಲಾದರೂ ನಾವು ಬದಲಾಗಬೇಕು . ವಿದೇಶಿಯರಿಗೆ ನಮ್ಮ ಸಂಸ್ಕೃತಿಯ ಆಸಕ್ತಿ ಬೆಳೆಯುತ್ತದೆ . ಅವರು ಆಸೆಯಿಂದ ಯೋಗವನ್ನು ಕಲಿಯುತ್ತಿದ್ದಾರೆ . ನಮ್ಮ ಆಯುರ್ವೇದಿಕವನ್ನು ಆಸಕ್ತಿಯಿಂದ ನೋಡ್ತಾ ಇದಾರೆ. ನಮ್ಮ ಭರತನಾಟ, ಯಕ್ಷಗಾನ , ಆವರಿಗೂ ಪ್ರಿಯ ಅನಿಸುತ್ತದೆ . ಆದರೆ ಇದ್ಯಾವುದೂ ನಮಗೆ ಬೇಡವಾಗ್ತಾ ಇದೆ . ಇಂದಿನ ಮಕ್ಕಳಿಗೆ ಶಿವರಾಮ ಕಾರಂತ ಯಾರು ಅಂತ ಗೊತ್ತಿಲ್ಲ .ಬೇಂದ್ರೆಯವರಿಗೆ ಯಾವ ಪ್ರಶಸ್ತಿ ಬಂತು ಆನೋದು ತಿಳಿದಿಲ್ಲ. ಸಾಹಿತ್ಯದ ಯಾವ ಕೃತಿ ಇದೆ ಅಂತಲೇ ಗೊತ್ತಿಲ್ಲ . ಎಷ್ಟೋ ಮಕ್ಕಳಿಗೆ ಕಥೆ ಅಂದ್ರನೇ ಗೊತ್ತಿಲ್ಲ ಕವನ ಅಂದ್ರೆ ತಿಳಿದಿಲ್ಲ. ಆದ್ರೆ ಕಾರ್ಟೂನ್ ಬಹಳ ಇಷ್ಟ. ಈ ಪುಟಾಣಿಗಳಿಗೆ ಯಾಕೆ ಹೀಗಾಗುತ್ತಿದೆ.
ನಾವ್ಯಾಕೆ ಸಾಹಿತ್ಯಕ ವಾತಾವರಣವನ್ನು ಮಕ್ಕಳಿಗೆ ಕೊಡ್ತಾ ಇಲ್ಲ.ದೂರದರ್ಶನದ ವ್ಯಾಮೋಹದಲ್ಲಿ ಮುಳುಗಿದ ಮಕ್ಕಳನ್ನು ಸೃಜನಾತ್ಮಕತೆಗೆ ಯಾಕೆ ನಾವು ಎಳೆಯುತ್ತಾ ಇಲ್ಲಾ .ಈ ಪುಟಾಣಿಗಳ ಸಾಹಿತ್ಯದ ವಾತಾವರಣ ಸೃಷ್ಟಿ ಮಾಡಿ , ಅವರಿಗೆ ಸಾಹಿತ್ಯದ ಕೃತಿಗಳನ್ನು ಓದುವಲ್ಲಿ ಆಸಕ್ತಿ ಬೆಳೆಸಿ , ಕವಿತೆ ಎಂದರೇನು , ಅದನ್ನು ಹೇಗೆ ಬರೆಯಬಹುದು ಅನ್ನೋ ತಿಳಿವಳಿಕೆ ಕೊಟ್ಟರೆ ,ಈ ಮಕ್ಕಳಿಂದ ಒಬ್ಬ ಕಾರಂತ, ಒಬ್ಬ ಭೈರಪ್ಪ , ಒಬ್ಬ ಅನುಪಮಾ ನಿರಂಜನ , ಒಬ್ಬ ಬೇಂದ್ರೆಯವರನ್ನು
ಸೃಷ್ಟಿಸೋಕೆ ಸಾಧ್ಯ.
ನಮ್ಮ ನಾಡಿನ ಬಗ್ಗೆ , ಸಂಸ್ಕೃತಿಯ ಬಗ್ಗೆ ಮಕ್ಕಳಿಗೆ ತಿಳಿಸಿ, ಗೌರವ ಬೆಳೆಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ಶಿಕ್ಷಕರ ಮತ್ತು ಪೋಷಕರ ಮೇಲಿದೆ.ಬದುಕಿನ ಮೌಲ್ಯಗಳು, ರೀತಿ ನೀತಿಗಳು, ಪರಂಪರೆ ಆಚಾರ ವಿಚಾರಗಳು, ನಾಡ ಹಬ್ಬ . ರಾಷ್ಟ್ರೀಯ ಹಬ್ಬಗಳು, ಶಿಲ್ಪಕಲೆ ಮುಂತಾದ ವಿಚಾರಗಳನ್ನು ಮಕ್ಕಳ ಮನದಲ್ಲಿ ಬಿಂಬಿಸುತ್ತ ಬಂದಲ್ಲಿ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಸಾಧ್ಯ .
-ಎನ್. ಶೈಲಜಾ ಹಾಸನ
ಹೌದು. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಮನೆಯ ಪೂರಕ ವಾತಾವರಣ ಅತ್ಯಗತ್ಯ. ಚೆಂದದ ಬರಹ.
ಧನ್ಯವಾದಗಳು ಮೇಡಂ
ಬಹಳ ಒಳ್ಳೆಯ ಲೇಖನ ಶೈಲಜಾ..
ನಾನೂ ಧೋರಣೆಯನ್ನು ಖಂಡಿತವಾಗಿ ಮೆಚ್ಚುತ್ತೇನೆ. ಇಷ್ಟ ಪಡುತ್ತೇನೆ.ಇಂತಹ ಪೂರಕ ಪ್ರೇರಣೆ ,ವಾತಾವರಣ ಪ್ರತಿ ಮನೆಯಲ್ಲಿ ಸೃಷ್ಟಿಯಾದರೇ ಮುಂದಿನ ಪೀಳಿಗೆ ನಮ್ಮ ಪೀಳಿಗೆಯ ಎಲ್ಲಾ ತರದ ಮೌಲ್ಯಗಳನ್ನು ಉಳಿಸಿ ಬೆಳೆಸಲು ಸಾಧ್ಯ..
ಧನ್ಯವಾದಗಳು ಮೇಡಂ
Su…….. perb. ಒಂದೊಂದು ಮಾತೂ ಸತ್ಯ. ಮಕ್ಕಳನ್ನು ಸರಿಯಾದ ರೀತಿಯಲ್ಲಿ ಬೆಳೆಸುವ, ತಪ್ಪುಗಳನ್ನು ತಿದ್ದುವ ಹೊಣೆಗಾರಿಕೆ ಕೇವಲ ಶಿಕ್ಷಕರದ್ದು ಮಾತ್ರವಲ್ಲ, ಖಂಡಿತ ಹೆತ್ತವರದ್ದೂ ಕೂಡ. ನಮ್ಮ ಸಂಸ್ಕೃತಿ, ಆಚಾರ ವಿಚಾರಗಳು ಹೇಗೆ ಮೂಲೆಗುಂಪಾಗುತ್ತಿವೆ ಅನ್ನುವುದನ್ನು ಬಹಳ ಸೊಗಸಾಗಿ ಮನ ಮುಟ್ಟುವಂತೆ ವಿವರಿಸಿದ್ದೀರಿ.
ಧನ್ಯವಾದಗಳು ನಯನ
ನಮಸ್ತೆ
ನಿಮ್ಮ ಒಂದೊಂದು ವಾಕ್ಯವು ಸತ್ಯ. ಮನೆಯಲ್ಲಿ ಸ್ವಲ್ಪ ಪೋಷಕರು ಮಕ್ಕಳ ಮೇಲೆ ಗಮನ ಹರಿಸಬೇಕು. ಕೇವಲ ಬೇಕು ಬೇಡ ಮಾತ್ರ ತಂದುಕೊಡುವಲ್ಲಿ ಜೀವನ ದುಕೂತಿದ್ದರೆ. ಸಂಸ್ಕಾರ ಸಂಸ್ಕೃತಿ ನಡವಳಿಕೆ ಗೌರವ ಇವೆಲ್ಲವನ್ನೂ ತಿಳಿಸಿಕೊಡಬೇಕು. ಶಿಕ್ಷಕರು ವಿದ್ಯಾರ್ಥಿಗಳ ನಡುವೆ ಒಳ್ಳೆ ಬಾಂಧವ್ಯ ಇಟ್ಟುಕೊಳ್ಳಬೇಕು. ದಿನಕ್ಕೆ ಒಮ್ಮೆ ಯಾದರು ನೀತಿ ಪಾಠ ಮಾಡಬೇಕು. ನಿಮ್ಮ ಈ ಬರವಣಿಗೆ ಕುಷಿ ಕೊಟ್ಟಿದೆ.
ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು ಸುಮಂತ್ ರವರೇ.
ಸುಂದರಬರಹ
ಧನ್ಯವಾದಗಳು ಆಶಾರವರೇ
ಬಹಳ ಚೆನ್ನಾಗಿ ಬರೆದಿದ್ದೀರಿ
ಧನ್ಯವಾದಗಳು ಸಾವಿತ್ರಿ ಭಟ್ ರವರೆ
ನಮಸ್ತೆ ಶೈಲಜಾ ಮ್ಯಾಮ್
ನಿಮ್ಮ ಲೇಖನ ಮಹತ್ವಪೂರ್ಣವಾಗಿದೆ
ಸಂಸ್ಕೃತಿಯನ್ನು ಉಳಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ಪೋಷಕರದು. ಸ್ನೇಹಿತರು ಕೂಡ ಇದರಲ್ಲಿ ಮಹತ್ವದ ಪಾತ್ರ ವಹಿಸುತ್ತಾರೆ.ಉತ್ತಮ ಸ್ನೇಹಿತರು ಸುತ್ತಲೂ ಇದ್ದರೆ ಪೋಷಕರು ಬೆಳೆಸಿದ ಸಂಸ್ಕೃತಿ ಉಳಿಯಲು ಸಹಾಯವಾಗುತ್ತದೆ ಎನಿಸುತ್ತದೆ. ಶಿಕ್ಷಕರು ಪೋಷಕರು ಸಮಾಜ. ಉತ್ತಮ ಸಂಸ್ಕೃತಿಯನ್ನು ನೀಡಿದರೆ
ಸಮಾಜಕ್ಕೆ ಸಂತೋಷ ನೀಡಬಹುದು ಎನಿಸುತ್ತದೆ.
ಸಂಸ್ಕಾರ ಸಂಸ್ಕೃತಿಯ ಉಳಿಸಬೇಕು ಎಂದರೆ ನಾವು ನಡೆದುಕೊಳ್ಳಬೇಕು ಮಕ್ಕಳು ನೋಡಿದಂತೆ ಮಾಡುತ್ತಾರೆ ಹೇಳಿದಂತೆ ಮಾಡುವುದಿಲ್ಲ ಅಲ್ಲವೆ ಮೇಡಂ
ನಿಮ್ಮ ಪ್ರಯತ್ನಕ್ಕೆ ಧನ್ಯವಾದಗಳು ಮೇಡಂ
ಹೀಗೂ ಕೂಡ ಸಮಾಜವನ್ನು ತಿದ್ದಬಹುದು
ನಿಮ್ಮ ಬರವಣಿಗೆ ಸಂಸ್ಕಾರಯುತವಾಗಿದೆ.
ಧನ್ಯವಾದಗಳು
ಧನ್ಯವಾದಗಳು ಗೀತಾರವರೇ
ಮನೆಯೆ ಮೊದಲ ಪಾಠಶಾಲೆ, ಜನನಿ ತಾನೆ ಮೊದಲ ಗುರು..ಹೌದು ತಾನೇ? ಮಕ್ಕಳ ಬೌದ್ಧಿಕ ಬೆಳವಣಿಗೆಗೆ ಪೋಷಕರ ಸೂಕ್ತವಾದ ಮಾರ್ಗದರ್ಶನ ಖಂಡಿತಾ ಅತೀ ಅಗತ್ಯ. ಸೊಗಸಾದ ಸಕಾಲಿಕ ಬರಹ.
ಧನ್ಯವಾದಗಳು