ಲಾಕ್ ಡೌನ್ ಟೈಮ್ ಪಾಸ್ ….
ಈಗ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಕಾಲ ಕಳೆಯುವುದು, ದಿನ ದೂಡುವುದು ಹೇಗೆನ್ನುವ ಯೋಚನೆ ನಮ್ಮ ನಿಮ್ಮಲ್ಲಿರಬಹುದು. ಒಂದಕ್ಕೂ ಹೆಚ್ಚು ದಶಕದಿಂದ ಸರ್ಕಾರಿ ಅಥವಾ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ನಮಗೆ ಸಧ್ಯಕ್ಕೆ ಮಾಡಲು ನಿರ್ದಿಷ್ಟ ಕಾರ್ಯಗಳು ಇಲ್ಲದೆ ನಮ್ಮ ಕೈಯನ್ನು ನಾವೇ ಕಟ್ಟಿಹಾಕಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.
ನಾವು ನೀವೆಲ್ಲ ನೋಡುತ್ತಿರುವಂತೆ ಈಗ ಹಲವರು ಕಾಲ ಕಳೆಯಲು ಮೊಬೈಲ್ ಇಲ್ಲವೇ ಟಿ.ವಿ. ಯನ್ನು ಅವಲಂಬಿಸಿದ್ದಾರೆ ಇಲ್ಲವೇ ಹೆಚ್ಚು ಹೊತ್ತು ಅದರ ಮುಂದೆಯೇ ಕುಳಿತಿರಬೇಕಾದ ಸ್ಥಿತಿ. ಟಿಕ್ ಟಾಕುಗಳು ನಮ್ಮನ್ನು ನಗಿಸುತ್ತಿವೆ, ಕೋರೋನ ವೈರಸ್ ಸುದ್ದಿಗಳು ಭಯ ಹುಟ್ಟಿಸುತ್ತಿವೆ. ಮನೆಯ ಯಜಮಾನ ಅಥವಾ ದುಡಿಯುತ್ತಿರುವವನು ಸ್ವಲ್ಪ ಸಂದಿಗ್ದಕ್ಕೆ ಒಳಗಾಗಿದ್ದಾನೆ ಎನ್ನುವುದರಲ್ಲಿ ಎರಡು ಮಾತಿಲ್ಲ.
ಮನೆಯ ಸದಸ್ಯರೆಲ್ಲರೂ ಮನೆಯಲ್ಲಿಯೇ ಇದ್ದಾರೆ. ಮುಖ್ಯವಾಗಿ ಓದುತ್ತಿರುವ ಮಕ್ಕಳನ್ನು ಸೂಕ್ಷ್ಮವಾಗಿ ಅವರಿಗೆ ನೋವುಂಟಾಗದ ರೀತಿ ಗಮನಿಸಬೇಕಾಗಿದೆ. ಮಕ್ಕಳು ಓದುವ ಕಡೆ ಗಮನ ಕೊಡಬೇಕೋ ಅಥವಾ ಆಟಗಳ ಕಡೆ ಅಥವಾ ಟಿ.ವಿ. ಮೊಬೈಲುಗಳ ಕಡೆ ಗಮನ ಹರಿಸಲು ಅವಕಾಶ ಮಾಡಿಕೊಡಬೇಕೋ ಎನ್ನುವುದನ್ನು ಜಾಣತನದಿಂದ ಬಗೆಹರಿಸಬೇಕಾಗಿದೆ. ಮಕ್ಕಳು ಹೊರಗಡೆ ಹೋಗುವ ಹಾಗಿಲ್ಲ, ಎಲ್ಲವೂ ಮನೆಯೊಳಗೇ..
ಮಕ್ಕಳು, ಯಜಮಾನ ಬೆಳಗ್ಗೆ ತಿಂಡಿ ತಿಂದು ಶಾಲೆ ಅಥವಾ ಕಚೇರಿಗೆ ಹೊರಟರೆ ಸಂಜೆಯತನಕ ಆ ಮನೆಯ ಗೃಹಿಣಿಗೆ ವೇಳಾಪಟ್ಟಿಯ ರೀತಿ ಕೆಲಸ ಇರುತ್ತೆ, ಅದನ್ನು ಆಕೆ ಲೀಲಾಜಾಲವಾಗಿ ನಿರ್ವಸುವುದೇ ಸೋಜಿಗ. ಆ ಮಹಾತಾಯಿಗೊಂದು ದೀರ್ಘದಂಡ ನಮಸ್ಕಾರ. ಕೈ ಹಿಡಿದಾಕೆಯೂ ಕಚೇರಿ ಕೆಲಸ ನಿರ್ವಹಿಸುವವಳಾಗಿದ್ದರೆ ಆ ವಿಚಾರ ಬೇರೆ.
ಕೋರೋನ ವೈರಸ್ ಇನ್ನೆಷ್ಟು ಕಾಲ ಇರಬಹುದು ಅಥವಾ ಅದರ ನಿರ್ಮೂಲನೆ ಆಗಬಹುದು ಎನ್ನುವುದು ಗೊತ್ತಿಲ್ಲ. ಪ್ರತಿಯೊಂದನ್ನು ಎದುರಿಸಬೇಕಾದವರೂ ನಾವೇ.. ಧೈರ್ಯದಿಂದ ಇರೋಣ.
- ಮಕ್ಕಳಿಗೆ ಬರೆಯುವ ಕಲೆ ಅಭ್ಯಾಸ ಮಾಡಿಸಿ (ಅಂಚೆ ಪತ್ರಗಳ ಮೂಲಕ ಅಲ್ಲದಿದ್ದರೂ ಈಗ ಮೊಬೈಲ್ ಮೂಲಕ ಅಥವಾ ಈಮೈಲ್ ಮೂಲಕ ಬರೆಯಲು ಅವಕಾಶ ಇದೆ) – ಅದು ದೂರದ ನೆಂಟರಿಷ್ಟರಿಗೆ ಗೌರವಪೂರ್ವಕವಾಗಿ ಬರೆಯುವುದು ಹೇಗೆ, ಸಣ್ಣ ಸಣ್ಣ ಕಥೆಗಳನ್ನು, ಅನುಭವಗಳನ್ನು ಬರೆಯುವುದು ಹೇಗೆ ಎನ್ನುವುದನ್ನು… ಒಂದು ಪುಟ, ಎರಡು ಪುಟ ಹೀಗೆ.
- ಮಹನೀಯರಾದ ಭೈರಪ್ಪ, ಕುವೆಂಪು, ಕಾರಂತ, ಬೀಚಿ, ತರಾಸು, ಅನುಪಮಾ ನಿರಂಜನ, ಮುಂತಾದವರ ಕಥೆ-ಕಾದಂಬರಿಗಳನ್ನು ಓದಿಸುವ ಅಭ್ಯಾಸ ಮಾಡಿಸಿ. ಪ್ರಸಿದ್ಧ ಆಂಗ್ಲ ಪುಸ್ತಕಗಳೂ ಆಗಬಹುದು. ಮಕ್ಕಳ ಮೊಬೈಲ್ ಬಳಕೆಯ ಶೇ. 100 ರಷ್ಟನ್ನು ಹೇಗಾದರೂ ಮಾಡಿ ಶೇ. 10 ಕ್ಕೆ ಇಳಿಸಿ. ಇದರಿಂದ ಅಪ್ಪನ ಜೇಬಿಗೂ ಬಹಳ ಹಣ ಉಳಿತಾಯ ಆಗುತ್ತದೆ.
- ನಮ್ಮ ಸಾಂಪ್ರದಾಯಿಕ ಕ್ರೀಡೆಗಳನ್ನು ನಾವು ಮರೆಯುತ್ತಿದ್ದೇವೆ. ಮನೆಯೊಳಗೇ ಆಡಬಹುದಾದ – ಅಳಿಗುಳಿಮನೆ, ಚೌಕಾಬಾರ (5 ಮನೆ ಮತ್ತು 7 ಮನೆ), ಕೈಮೇಲೆ ಕಾಶಿ, ಚದುರಂಗ, ಕಲ್ಲಿನ ಆಟ ಹೀಗೆ ಹಲವು ಬಗೆಯ ಆಟಗಳನ್ನು ಹಿರಿಯರಿಂದ ತಿಳಿದುಕೊಂಡು ಆಡಬಹುದು, ಆಡುವ ಮೂಲಕ ಅದಕ್ಕೆ ಪ್ರಾಧಾನ್ಯತೆಯನ್ನೂ ಕೊಡಬಹುದು.
- ಹೆಣ್ಣು ಮಕ್ಕಳಿಗೆ ತಾಯಂದಿರು ವಿವಿಧ ಬಗೆಯ ಅಡುಗೆ ಮಾಡುವುದನ್ನು ಕಲಿಸಿಕೊಡಬಹುದು.
ಮತ್ತೊಂದೆರಡು ವಿಚಾರಗಳು ಎಂದರೆ –
~ ಮನೆಯ compound ಒಳ ಜಾಗದಲ್ಲಿ ಮತ್ತು ತಾರಸಿಯ ಮೇಲೆ ಇರುವ ಜಾಗದಲ್ಲಿ ಕೆಲವು ಸೊಪ್ಪುಗಳನ್ನು ಮತ್ತು ತರಕಾರಿಗಳನ್ನು ಬೆಳೆಯಬಹುದು.
~ ಕೊತ್ತಂಬರಿಯಿಂದ ಹಿಡಿದು ದಂಟು, ಕೀರೆ, ಚಕೋತ, ಸಪ್ಸಿಗೆ, ಪಾಲಕ್ ಮತ್ತು ಬೀನಿಸ್, ಬದನೆ, ಮೂಲಂಗಿ, ಹಲಸಂದೆ ಇತ್ಯಾದಿ ಬೆಳೆದುಕೊಳ್ಳಬಹುದು.
~ ಶಾಶ್ವತವಾಗಿ ಈ ಸಮಯದಲ್ಲಿಯೆ ಹಣ್ಣಿನ ಗಿಡಗಳನ್ನು ನೆರಳು ನೀಡುವ ಮರಗಳನ್ನು ಬೆಳೆಸಲು ಯೋಜಿಸಬಹುದು.
~ ಪೂಜೆಗಾಗಿ ವಿವಿಧ ಹೂವಿನ ಗಿಡಗಳನ್ನು ಬೆಳೆಸುವ ಪದ್ದತಿ ಇದ್ದೇ ಇದೆ.
~ ದಯಮಾಡಿ ಅಡುಗೆ ಮನೆಯಲ್ಲಿ ಸಿಗುವ ಹಸಿ ಕಸ (Kitchen waste) ವನ್ನು ವ್ಯರ್ಥ ಮಾಡದೆ ಅದನ್ನು ಗಿಡಗಳಿಗೆ ಗೊಬ್ಬರವಾಗಿ ಉಪಯೋಗಿಸಿ.
~ ಈಗ ಮಕ್ಕಳ ಸಹಕಾರವೂ ಸಿಗುವುದರಿಂದ ಈ ಪ್ರಯತ್ನ ನಿಮ್ಮ ನಿಮ್ಮ ಮನೆಗಳಲ್ಲಿ ಏಕಾಗಬಾರದು ಎನ್ನುವ ಬಗ್ಗೆ ತಿಳಿಸುವ ಆಕಾಂಕ್ಷೆ ಇದಾಗಿದೆ.
PC: ಸಾಂದರ್ಭಿಕ ಚಿತ್ರ, ಅಂತರ್ಜಾಲ ಕೃಪೆ
ಕಡೆಯದಾಗಿ ಮುಖ್ಯವಾದ ಮಾತು ಎಂದರೆ –
1) ನಾವು ಅನ್ಯಥಾ ಹಣ ವ್ಯಯ ಮಾಡಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಸಿಗುವ (Status Bottles) ಕುಡಿಯುವ ನೀರನ್ನು ಬಳಸುತ್ತಿರುವುದು ನಮ್ಮ ದುರಾದೃಷ್ಟ.
2) ಇದರ ಮುಂದಿನ ಸರದಿ – ಶುದ್ಧವಾದ ಪ್ರಾಣ ವಾಯುವನ್ನು ಖರೀದಿ ಮಾಡುತ್ತಿರುವ ಹಂತ. ಈಗಾಗಲೇ ತಮಿಳುನಾಡಿನಲ್ಲಿ ಪ್ರಾರಂಭವಾಗಿದೆ. ಆಸ್ಪತ್ರೆಗಳಲ್ಲಿ ಸಿಗುವ ಆಕ್ಸಿಜೆನ್ ಒಂದು ಸಿಲಿಂಡರ್ ಬೆಲೆ ಎಂಟು ನೂರರಿಂದ ಸಾವಿರ ಇದೆ. ಒಂದು ದಿನಕ್ಕೆ ಒಬ್ಬರಿಗೆ ಇಂತಹ ಮೂರು ಸಿಲಿಂಡರ್ ಬೇಕು. ಚಿಕ್ಕ ಚಿಕ್ಕ ಸಿಲಿಂಡರುಗಳು ಕೂಡ ಇದೆ. ನೂರರಿಂದ ಹಿಡಿದು ಮೂರು ನೂರಾರವರೆಗೆ. ಈ ಚಿಕ್ಕವನ್ನು ಹೆಚ್ಚು ಗಾಳಿ ಇಲ್ಲದ ಹಿಮಾಲಯದ ಎತ್ತರದ ಪ್ರದೇಶಗಲ್ಲಿ ಚಾರಣಿಗರು ಮತ್ತು ವಯಸ್ಸಾದ ಯಾತ್ರಿಗಳು ಮಾತ್ರ ಉಪಯೋಗಿಸುತ್ತಾರೆ ಎನ್ನುವುದನ್ನು ನೆನಪಿನಲ್ಲಿಡಿ.
3) ನಾವು ಮರಗಿಡಗಳನ್ನು ಬೆಳೆದಷ್ಟು ನಮಗೆ “ಅಮೃತ ವಾಯು” ಅಪಾರ ಪ್ರಮಾಣದಲ್ಲಿ ಸಿಗುತ್ತದೆ. ಮರಗಿಡಗಳನ್ನು ಬೆಳೆಯುವುದರಿಂದ ಮಳೆ ಆಗುತ್ತದೆ. ಪ್ರಕೃತಿ ಮತ್ತು ಪರಿಸರಗಳು ವಾಯುಮಾಲಿನ್ಯ ಇಲ್ಲದೆ ಶೋಭಿಸುತ್ತವೆ.
ಇದಕ್ಕೆ ಬಹಳ ಅದ್ಭುತವಾದ ಒಂದೇ ಒಂದು ಉದಾಹರಣೆ ಎಂದರೆ – ಈಗ ದೇಶಾದ್ಯಂತ ಲಾಕ್ ಡೌನ್ ಆಗಿದೆ. ಶೇ. ಒಂದರಷ್ಟು ವಾಹನಗಳು ಈಗ ರಸ್ತೆಯ ಮೇಲೆ ಓಡಾಡುತ್ತಿಲ್ಲ. ಇದರ ಪರಿಣಾಮ ಏನು ಗೊತ್ತಾ…? ವಾಯುಮಾಲಿನ್ಯ ಇಲ್ಲವೇ ಇಲ್ಲ, ಹಾಗಾಗಿ ವಾತಾವರಣ ತಿಳಿಗೊಂಡು ಪಂಜಾಬಿನ ಜಲಂಧರದಿಂದ ಎರಡು ನೂರು ಕಿಲೋಮೀಟರು ದೂರದ ಉತ್ತರದ ತುದಿಯ ಹಿಮಾಲಯವನ್ನು ಅಲ್ಲಿಯ ಜನರು ಕಾಣುತ್ತಿದ್ದಾರೆ. ಇದು 30 ವರ್ಷಗಳ ಹಿಂದೆ ಕಾಣುತ್ತಿತ್ತಂತೆ.
ನಾವು ಪ್ರಾಣ ವಾಯುವನ್ನು ಖರೀದಿ ಮಾಡಬೇಕಾದ ಮಟ್ಟಕ್ಕೆ ಇಳಿಯುವುದು ಖಂಡಿತವಾಗಿ ಬೇಡ. ನಾವು ಮರ-ಗಿಡಗಳನ್ನು ಹೆಚ್ಚೆಚ್ಚು ಬೆಳೆಯುವ ಪ್ರಯತ್ನ ಮಾಡೋಣ ಮತ್ತು ಈ ವಿಷಯದಲ್ಲಿ ಇತರರಿಗೂ ಆಸಕ್ತಿ ಮೂಡುವಂತೆ ಮಾಡೋಣ.
ಈ ವಿಷಯವನ್ನು ಇತರರ ಜೊತೆಯಲ್ಲೂ ಹಂಚಿಕೊಳ್ಳಿ.
ವಂದನೆಗಳು,
– ಎಂ.ವಿ. ಪರಶಿವಮೂರ್ತಿ, ಮೈಸೂರು
ಉತ್ತಮ ವಿಚಾರಗಳು
ಒಳ್ಳೆಯ ಸಲಹೆಗಳು,ವಿಚಾರಗಳು,ತುಂಬಿರುವ ಲೇಖನ ಓದಿ ಕುಶಿ ಆಯಿತು.
ವಿರಾಮ ಸಮಯದ ಸದುಪಯೋಗದ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿರುವಿರಿ..ಧನ್ಯವಾದಗಳು.