ಹೇಮಮಾಲಾ ಬಿ, ಮೈಸೂರು.
ಪ್ರವಾಸ

ಮನಸಾ ಮಾತಾ ಮಂದಿರ್.. ಚುನರಿ..  

Share Button

ಚಂಡಿಗರ್ ನಿಂದ ಸುಮಾರು 10 ಕಿ.ಮಿ ದೂರದಲ್ಲಿರುವ್ ಪಂಚ್ಕುಲ ಎಂಬಲ್ಲಿ, ಶಕ್ತಿ ದೇವತೆಯೆಂದು ಆರಾಧಿಸಲ್ಪಡುವ ‘ಮನಸಾ ಮಾತೆ’ಯ ಮಂದಿರವಿದೆ.ಕ್ರಿ.ಶ. 1811-1815 ರ ಅವಧಿಯಲ್ಲಿ ಅಂದಿನ ಮಣಿಮಜ್ರ ದ ದೊರೆ ಮಹಾರಾಜ ಗೋಪಾಲ್ ಸಿಂಗ್ ಈ ದೇವಸ್ಥಾನವನ್ನು ಕಟ್ಟಿಸಿದನಂತೆ. ಅಮೇಲೆ ನವೀಕರಣಗೊಂಡ ಈ ದೇವಾಲಯ ಈಗಂತೂ ಪುರಾತನ ಮಂದಿರವೆನಿಸುವುದಿಲ್ಲ. ವಿಶಾಲವಾದ ಆವರಣದಲ್ಲಿ, ಚಂದ್ರಕಾಂತ ಶಿಲೆಯಿಂದ ಮಾಡಿದ ನೆಲ, ಕೆತ್ತನೆ, ಜಗಮಗಿಸುವ ವಿದ್ಯುದೀಪಗಳು ಆಧುನಿಕತೆಯ ಮೆರುಗು ಕೊಟ್ಟಿವೆ.
.
ಎಲ್ಲ ದೇವಾಲಯಗಳ ಹೊರಗೆ  ಇರುವಂತೆ ಇಲ್ಲೂ  ಹೂವು-ಹಣ್ಣು ಮಾರುವವರು,  ಚಪ್ಪಲಿ ಸಂರಕ್ಷಕಕರು, ಭಿಕ್ಷೆ ಬೇಡುವವರು ಇದ್ದರು. ಜೊತೆಗೆ ಕೆಂಬಣ್ಣದ  ಜರಿ ಅಂಚಿನ ಪುಟ್ಟ ಶಾಲುಗಳನ್ನೂ ಮಾರಾಟಕ್ಕೆ ಇಟ್ಟಿದ್ದರು. ಕುತೂಹಲದಿಂದ ಅದೇನೆಂದು ವಿಚಾರಿಸಿದಾಗ ಸ್ವಾರಸ್ಯಕರವಾದ ಉತ್ತರ ಸಿಕ್ಕಿತು.’ಏ ಚುನರಿ ಹೈ, ಆಪ್ ಪ್ರಾರ್ಥನಾ ಕರ್ಕೆ ಇಸೆ ಪೇಡ್ ಕೊ ಬಾಂದನಾ ಹೈ, ಮಾತಾ ಆಪ್ನಾ ಇಛ್ಛಾ ಪೂರಿ ಕರ್ತೀ ಹೈ, ಫಿರ್  ಆಪ್ ಏಕ್ ಔರ್ ಬಾದ್ ಆಕೆ ಅಪ್ನಾ ಚುನರಿ ಲೇನಾ ಹೈ‘ ಅಂದ ಅಂಗಡಿಯಾತ.
 
.
ಆ ಕ್ಷಣದಲ್ಲಿ  ನನಗೆ  ಮನಸಾ ಮಾತೆಯಲ್ಲಿ ಪ್ರಾರ್ಥಿಸಬಹುದಾದ ಯಾವುದೇ ನಿವೇದನೆ ಹೊಳೆಯಲಿಲ್ಲ. ಇಲ್ಲಿ ವರೆಗೆ ಬಂದುದಕ್ಕೆ, ವಿಶಿಷ್ಟ ಹರಕೆಯ ವಿಧಾನ ತಿಳಿದಂತಾಯಿತು ಎಂದು ನಾನೂ ಹೂವು-ಹಣ್ಣು ಹಾಗೂ ಚುನರಿ ಯನ್ನು ಖರೀದಿಸಿದೆ.ದೇವಿಯ ದರ್ಶನವಾಗಿ ಹೊರಬರುತ್ತಿದ್ದಂತೆ ಅಲ್ಲಿರುವ ಕೆಲವು  ಮರಗಳಲ್ಲಿ ತೂಗಾಡುತ್ತಿರುವ ಕೆಂಪು ಶಾಲುಗಳು ಕಾಣಿಸಿದುವು. ಜನರು  ಶ್ರದ್ಧಾ-ಭಕ್ತಿಯಿಂದ ಚುನರಿಯನ್ನು  ಮರದ ಗೆಲ್ಲುಗಳಿಗೆ  ಕಟ್ಟುವ  ಕಾರ್ಯದಲ್ಲಿ ನಿರತರಾಗಿದ್ದರು.ಈಗ ನನಗೆ ನಿಜಕ್ಕೂ ಪೇಚಿಗೆ ಸಿಲುಕುವಂತಾಯಿತು.
.
ನಾನು ಯಾವುದಾದರು ಕೋರಿಕೆಯನ್ನು ಈಡೇರಿಸೆಂದು ದೇವಿಗೆ ಹರಕೆ ಹೊತ್ತು ಚುನರಿಯನ್ನು ಮರದ ಟೊಂಗೆಗೆ ಕಟ್ಟಿದರೆ…. ಅಕಸ್ಮಾತ್ ಆ ಕೋರಿಕೆ ನೆರವೇರಿದರೆ, ಅದಕ್ಕೆ ಮಾತೆಯ ವರವೇ ಕಾರಣವೆಂಬ ಚಿಂತನೆ ಕಾಡಿದರೆ, ಆಗ ನಾನು ಪುನಃ ಮೈಸೂರಿನಿಂದ ಹರಕೆ ತೀರಿಸಲು ಇಲ್ಲಿಗೆ ಬರಬೇಕಾಗಿ ಬಂದರೆ,ಬಂದರೂ ಇಷ್ಟೊಂದು ಚುನರಿಗಳ ಮಧ್ಯದಲ್ಲಿ ನಾನು ಕಟ್ಟಿದ ಚುನರಿಯನ್ನು ಗುರುತಿಸಿವುದು ಸಾಧ್ಯವೆ? ಕೊನೆಗೆ ಮನಸ ಮಾತೆ ಹರಸುವ ಬದಲು ಮುನಿಸು ತೋರಿದರೆ ಇತ್ಯಾದಿ ‘ರೆ’ ಸಾಮ್ರಾಜ್ಯದ ಕಲ್ಪನೆಗಳು ಕಾಡತೊಡಗಿದವು . ಹಾಗಾಗಿ ‘ಸರ್ವೇ ಜನಾ ಸುಖಿನೊ ಭವಂತು’ ಎಂದು ಗುಣುಗುಣಿಸಿ, ನಾನು  ಒಯ್ದಿದ್ದ  ಚುನರಿಯನ್ನು, ಮರದ ಒಂದು ಟೊಂಗೆಗೆ ಕಟ್ಟಿ ಬಂದೆ. ಇನ್ನು ನಾನು ಅಲ್ಲಿಗೆ ಪುನ: ಹೋಗಬೇಕಾದರೆ ಮನಸಾ ಮಾತೆಯೇ ಮನಸು ಮಾಡಬೇಕು ಹೊರತು, ನನಗೂ ಅವಳಿಗೂ ಏನೂ ಒಪ್ಪಂದವಿಲ್ಲ, ಹಾಗೂ ಬೇರೆ ಯಾರಾದರೂ ಭಕ್ತರು ನಾನು ಕಟ್ಟಿದ ಚುನರಿಯನ್ನು ಬಿಡಿಸಿದರೆಅವರಿಗೂ ಒಳ್ಳೆಯದಾಗಲಿ ಎಂಬಂತೆ!

 

ಅವರವರ ಭಾವಕ್ಕೆ ಅವರವರ ಭಕುತಿ!

 

 

ಹೇಮಮಾಲಾ.ಬಿ, ಮೈಸೂರು.

5 Comments on “ಮನಸಾ ಮಾತಾ ಮಂದಿರ್.. ಚುನರಿ..  

  1. ನೀವು ಪರಿಚಯಿಸುವ ಎಲ್ಲಾ ಸ್ತಳಗಳು ವಿಶೇಷವಾಗಿರುತ್ತವೆ. ಒಂದು ಹೊಸ ಹರಕೆಯ ರೀತಿ ತಿಳಿದಂತಾಯ್ತು.

  2. ಸರ್ವೇ ಜನಾ ಸುಖಿನೋಭವಂತು ಎಂದು ಪ್ರಾರ್ಥಿಸುವವರು ಕಮ್ಮಿ. ನಾನು, ನನಗೆ ಎನ್ನುವ ಮಧ್ಯೆ ವಿಭಿನ್ನತೆ ಕಂಡಿತು.ನಾವು ಕೂಡ ಇದರಿಂದ ಕಲಿಯಬಹುದು.ಉತ್ತಮವಾದ ಬರಹ .

Leave a Reply to BH Cancel reply

 Click this button or press Ctrl+G to toggle between Kannada and English

Your email address will not be published. Required fields are marked *