ಜೀವಸೆಲೆ ಚಿಮ್ಮುವ ‘ಕುಮುದಾಳ ಭಾನುವಾರ’
ಕರಾವಳಿಯ ತುಂಬು ಸೊಬಗಿನಲ್ಲಿ ಕಣ್ಮಣಿಯಾಗಿ ಬೆಳೆದು,ಕವಿ ಕುಸುಮವಾಗಿ ಅರಳಿದವರು, ‘ಕುಮುದಾಳ ಭಾನುವಾರ’ ದ ಒಡತಿ, ಅಮಿತಾ ಭಾಗ್ವತ್. ತುಂಬು ಕುಟುಂಬದ ಅಕ್ಕರೆಯ ಕುಡಿಯಾಗಿ ಬೆಳೆದ ಇವರು, ತನ್ನ ಭಾವ ದಳಗಳಲ್ಲಿ ಅದೆಷ್ಟೋ ಅನುಭವಗಳ ಘಮವನ್ನು ಬಚ್ಚಿಟ್ಟುಕೊಂಡು ಸಪ್ತಪದಿ ತುಳಿದು ಬಂದ ಮುಂಬೈಯಲ್ಲಿ ಮೆಲ್ಲನೆ ಅರಳಿಸಿದ್ದಾರೆ. ಅರವತ್ತೊಂದು ಕವನಗಳಿರುವ ‘ಕುಮುದಾಳ ಭಾನುವಾರ’ ಕವನ ಸಂಕಲನವನ್ನು ಓದುತ್ತ ಹೋದಂತೆ ಪರಿಮಳವು ಮನ ತುಂಬಿಕೊಂಡು ಮುದ ನೀಡುತ್ತದೆ. ತಾಯ್ನಾಡಿನ ಹಸಿ ಮಣ್ಣನ್ನು ಮಹಾರಾಷ್ಟ್ರದ ಮುಂಬಯಿಗೆ ತಂದು, ತನ್ನ ಅನುಭವ ಸಾಹಿತ್ಯದ ಬೀಜ ಬಿತ್ತಿ, ಇಲ್ಲಿಯ ನೆಲದಲ್ಲಿ ಬೇರೂರಿದ್ದಾರೆ. ಅಮಿತಾ ಅವರು ಸಾಹಿತ್ಯದ ಹೊಂಗಿರಣ.ಸಂಪಾದಕಿ, ನಿರೂಪಕಿ,ಕವಿ, ಬರಹಗಾರ್ತಿಯಾಗಿಯೂ ತನ್ನನ್ನು ಗುರುತಿಸಿಕೊಂಡಿದ್ದಾರೆ.ವೃತ್ತಿಯಲ್ಲಿ ವಕೀಲರಾದ ಕವಿ ತಮ್ಮನ್ಯಾಯಯುತವಾದ ಅನಿಸಿಕೆ, ಕಲ್ಪನೆ, ಬೇಡಿಕೆಗಳೊಡನೆ ಏಕಾಂತದಲ್ಲಿ ಭಾವ ಸಂವಾದ ಮಾಡುವುದರ ಮೂಲಕ ನವಿರಾದ ಕವಿತೆಗಳನ್ನು ಕಟ್ಟಿಕೊಟ್ಟಿದ್ದಾರೆ.
ಕೃತಿಯ ಆರಂಭದಲ್ಲಿ,‘ಯಾರು ಮೆಚ್ಚಲಿ ಬಿಡಲಿ ಪರಿವೆ ಎನಗೇಕೆ’ ಎಂಬ ಭಾವದಿಂದ ಹೊರಟು, ಮುಂದೆ ಗಟ್ಟಿಯಾಗಿ ಪಡಿಯೂರುತ್ತ ಹೋಗುತ್ತಾರೆ. ಹುಟ್ಟೂರಿನ ಬೆಚ್ಚನೆಯ ಮಡಿಲಲ್ಲಿ ಆಗಾಗ ಹೊರಳಾಡುವ ಹಂಬಲ ಹೊತ್ತ ಕವಿಗೆ ಅಲ್ಲಿಯೂ ಒಂದು ಬಗೆಯ ಆಧುನಿಕತೆ ಕಾಡುತ್ತದೆ. ಇಡೀ ಭೂಮಂಡಲವನ್ನೇ ಸೃಷ್ಟಿಸಿದ ಶಕ್ತಿಯ ಮುಂದೆ ಭಕ್ತಿ ಪೂಜೆಗಳು ಮಕ್ಕಳಾಟದಂತೆ ಕಾಣುತ್ತದೆ. ‘ಸೃಷ್ಟಿಯ ಜಗನ್ನಾಯಕನಿಗೆ ಏನೂ ಕೊಡಲಾರೆ’ ಎಂಬ ನೋವು ಕಣ್ಣಲ್ಲಿ ಉಕ್ಕಿ ಹರಿದರೆ ಅದೇ ಅಭಿಷೇಕ’ಎಂಬ ವೈಚಾರಿಕ ನಿಲುವನ್ನು ಸಭ್ಯತೆಯಿಂದ ಹೇಳಿಕೊಂಡಿದ್ದಾರೆ.
ತನ್ನ ಬಿಂಬವನ್ನು ಸರಿಯಾಗಿ ತೋರಿಸದ ಕನ್ನಡಿಯನ್ನು ‘ಗೋಸುಂಬೆ’ ಎಂದು ಅಣಕಿಸುವಾಗ, ಅದಕ್ಕೆ ಕೊಡುವ ಕಾರಣ ಬಹಳ ಸೊಗಸಾಗಿದೆ. ಬೆಳಕನ್ನು ತನ್ನ ಅಂಗಾಂಗಗಳಲ್ಲಿ ಆವರಿಸಿಕೊಂಡ ಕವಿ ಅದನ್ನು ಸೂಸುವವನ ಚಮತ್ಕಾರ,ಚೇಷ್ಟೆಗಳನ್ನು ಸೂಕ್ಷ್ಮವಾಗಿ ಸೆರೆಹಿಡಿದಿದ್ದಾರೆ. ಕೃತಿಯ ಶೀರ್ಷಿಕೆ ಹೊತ್ತ ಕವನದಲ್ಲಿ, ದುಡಿಯುವ ಹೆಣ್ಣು ಕುಮುದಾ, ದಿನನಿತ್ಯದ ಅವಸರದ ಜೀವನದಲ್ಲಿಯೂ ಹೇಗೆ ಸುಖ ಕಾಣುವಳು!. ಬಿಡುವಿನ ಭಾನುವಾರವೂ ಅವಳ ಕಾಲುಗಳು ಥರ ಥರ, ಬೆವರು ಭರ ಭರ.
ನೀನು ಊಟ ಮಾಡಮ್ಮ
ಅಂದನಾ ಮುದ್ದು ಮಗ
ಅರಳಿದ ತಾವರೆ ಕುಮುದಾಳ ಮೊಗ
‘ಕೋಪ ಬಂದರೆ ನೀನಿನ್ನೂ ಸುಂದರಿ’
ಅವನ ಲಘುಹಾಸ್ಯ
ಅವಳ ನಡಿಗೆಗೆ ನವಿಲಿನ ಲಾಸ್ಯ
ಈ ಕವನವನ್ನು ಓದುವ ಪ್ರತಿಯೊಬ್ಬ ಹೆಣ್ಣಿಗೂ ಕವನದ ‘ಕುಮುದಾ, ನಾನೇ’ಎಂದು ಅನಿಸುವಂತಿದೆ.
ಹೆಣ್ಣಿನ ಅರ್ಥಪೂರ್ಣ ಬದುಕನ್ನು ಹೇಳುವಾಗ ಅದನ್ನು ಡೊಂಬರಾಟದ ಹುಡುಗಿಯ ಕಸರತ್ತಿಗೆ ಹೋಲಿಸುತ್ತ ಮುಂದೆ ಸಾಗಿ, ಕಣ್ಣೀರನ್ನು ಪನ್ನೀರಾಗಿಸಿ ಅನುಭವಿಸುವ ಸಾಲುಗಳು ಓದುವಾಗ ಆಪ್ತವಾಗುತ್ತವೆ.
ಮುಲಾಂ ಸವರಿಕೊಂಡೆ
ಬಿದ್ದು ನೋವಾದಾಗಲೆಲ್ಲ
ಯಾರಿಗೂ ಹೇಳಲಿಲ್ಲ
ಯಾರನ್ನು ನೋಯಿಸಬೇಡ
ಎಂದಿದ್ದರು ಅಪ್ಪ-ಅಮ್ಮ
ನಾನೇ ಕಲಿತುಕೊಂಡೆ..ನನಗೂ ನೋವಾಗಬಾರದು
(ಡೊಂಬರಾಟದ ಹುಡುಗಿ)
ನನ್ನ ಅಭಿಮಾನದ ಅಣೆಕಟ್ಟು
ಒಡೆದು ಕಣ್ಣೀರ ಹನಿಗಳು
ಧುಮುಕಲು,ನೀ ನನ್ನ
ಬರ ಸೆಳೆಯಲು
ಉರುಳಿದ ಕಣ್ಣೀರು ಉಪ್ಪಾಗದೆ
ಸಕ್ಕರೆಯ ಸಿಹಿಯಾಗಿದ್ದೇಕೆಂದೇ
ತಿಳಿಯದಾಗಿದೆ
(ಕಣ್ಣೀರು- ಪನ್ನೀರು)
ಗುಲ್ ಮೊಹರ್ ಹೂವನ್ನು ಬಣ್ಣಿಸಿದ ಅಮಿತಾ ಅವರು ತನ್ನ ಬಿಗಿಯಾದ ಶಿಲ್ಪದಿಂದ ಮಾತಲ್ಲಿ ಹೇಳಲಾಗದ ಭಾವಗಳನ್ನು ಕಟ್ಟಿಕೊಟ್ಟಿದ್ದಾರೆ.ಅವರು ಕಾಣುವ ಹೊಸಲೋಕದ ವರ್ಣನೆಯನ್ನು ರಸವತ್ತಾಗಿಸಿ ‘ಸಂಸಾರವೆಂಬುದು ನಿತ್ಯ ವಸಂತ ‘ ಎನ್ನುವಾಗ ಕವಿಯ ಜೀವನ ಪ್ರೀತಿ ಕವಿತೆಯಾಗಿದೆ ಅನಿಸುತ್ತದೆ. ಪ್ರಕೃತಿಯ ಒಲವಿನೊಡನೆ ಜೀವನದ ಒಲವನ್ನು ಸಮೀಕರಿಸಿ ಒಲುಮೆಯ ತೂಕವನ್ನು ಹೆಚ್ಚಿಸುತ್ತಾರೆ. ತಮ್ಮ ‘ಶ್ರಾವಣದ ಮುಸ್ಸಂಜೆಯಲಿ’, ‘ವಿಸ್ಮಯ’, ‘ಬೈತಲೆ’,’ಗೊಂಬೆ ಜೀವಂತ’,ಎಲ್ಲ ಕವನಗಳನ್ನು ಹೊತ್ತು ನಡೆವ ನಡಿಗೆಯಲ್ಲಿ, ತನಗೆ ಜೀವ ತುಂಬುವ ಅವ್ಯಕ್ತ ತೆಯನ್ನು ಹುಡುಕುತ್ತಾರೆ.
ಯಾವುದೋ ಒಂದು ಘಳಿಗೆಯಲ್ಲಿ ಭೂಮಿಯ ಚಲನೆಗೆ ಗ್ರಹಣ ಹಿಡಿಯುವಾಗ, ಗೊಂಬೆಯ ಸೂತ್ರ ಹರಿಯುವಾಗ, ಅದನ್ನು ಸರಿಪಡಿಸುವ ಜೀವಸೆಲೆ ನೀಡುವ, ಗೊಂಬೆಗೆ ಜೀವ ಕೊಡುವ, ಅವ್ಯಕ್ತ ಚೇತನದ ಅಮೃತವನ್ನು ಕುಡಿದು ಮತ್ತದೇ ಹರ್ಷದಿಂದ ಮುಂದೆ ಸಾಗುವ ಭಾವವಿರುವ ಕವನಗಳು ನವಿರಾದ ಶೈಲಿಯಲ್ಲಿ ಮೂಡಿಬಂದಿವೆ.’ಇದು ತರವೇ ಕೃಷ್ಣ?’ ಎಂದು ಸ್ನೇಹಿತೆಯಂತೆ ಪ್ರಶ್ನಿಸುವ ಎರಡು ಕವನಗಳ ದೃಷ್ಟಿಕೋನ ಬೇರೆ ಬೇರೆಯದು.
ಬದಲಾದ ಕುಟುಂಬ ವ್ಯವಸ್ಥೆಯಲ್ಲಿ ಮನಃಶಾಂತಿ ಯ ಹುಡುಕಾಟ ವಾಸ್ತವಿಕವಾಗಿದೆ.ಮುಂಬಯಿಯ ಜೋಪಡಿಯ ಹುಡುಗನನ್ನು ‘ಅಪ್ಪನ ಕೋಟು’ ಕವನದಲ್ಲಿ ಮನಕಲಕುವಂತೆ ಚಿತ್ರಿಸಿದ್ದಾರೆ. ಇರುಳನ್ನು ‘ಮುಗುದೆ’ ಎಂದು ಕರೆದು, ನೈಜ ಇರುಳಿನ ಜೊತೆಯಲ್ಲಿ ಜೀವನದ ಬವಣೆಯನ್ನು ಮೇಳೈಸಿ ಕವನದ ಕೊನೆಯಲ್ಲಿ ಯಾವುದೋ ಒಂದು ಕ್ಷಣ ಇರುಳ ಮೇಲೆ ಕರುಣೆಯ ಛಾಯೆಯನ್ನು ಮೂಡಿಸಿದ್ದಾರೆ. ಇರುಳನ್ನು ಪ್ರೀತಿಸುವ ಕಲೆಯೆಂದರೆ ಹೀಗೆ.
ಹಗಲಿನ ಬೆವರನೆಲ್ಲ ಹಗುರವಾಗಿ
ಒರೆಸಿ ಜೋಗುಳ ಲಾಲಿ
ತನ್ನ ಪಾಡಿಗೆ ತಾನು
ಧನ್ಯವಾದಕ್ಕೂ ಕಾಯದೆ
ಮಾಯವಾಗುವ ಯಾಮಿನಿ
(ಯಾಮಿನಿ)
ದರ್ಜಿ ಹಾಕುವ ತೇಪೆ ಜೀವನ ಸಂಪಾದನೆಗಾಗಿದ್ದರೆ, ಅಜ್ಜಿ ಹಚ್ಚುವ ತೇಪೆ ವಾತ್ಸಲ್ಯ ಭರಿತವಾದದ್ದು.ಬದುಕಿನ ಕೆಲವು ತಾರಕ ಸ್ಥಾಯಿ ಕ್ಷಣಗಳಿಗೆ ಮೌನವೇ ತೇಪೆ ಎನ್ನುತ್ತಾರೆ ಕವಿ.
ಎಣ್ಣೆ ಹಾಕಿದ ಮೇಲೆ ಭರ್ರೆಂದು
ಓಡುವ ಮಷೀನ್ ಗೆ ಬಿಗಿತ
ಹೆಚ್ಚಾದರೆ ಹರಿಯುವ ಭೀತಿ
ಕೈಯಿಂದ ಮೆತ್ತನೆಯ ದಾರ
ಗಳನ್ನೆಳೆಯುವ ತೇಪೆಗೂ
ಕೂಡಿಸುವ ಪ್ರೀತಿ (ತೇಪೆ)
ಎಲ್ಲರ ಕೈಯಲ್ಲೂ ಬಿಕ್ಷಾಪಾತ್ರೆ
ಬಡಿಸುವವರಾರು?
ಅಮಿತ ಭಾವ ಯಾನದಲ್ಲಿ ಇಂತಹ ಚಿಂತನೆಗಳೂ ಸೇರಿಕೊಂಡಿವೆ.ಪುಟ ತಿರುವುತ್ತ ಹೋದಂತೆ ಕವಿಭಾವದ ಹಲವು ಮಜಲುಗಳು ತೆರೆಯುತ್ತಾ ಹೋಗುತ್ತವೆ. ತಾಯಿಯ ವಾತ್ಸಲ್ಯವನ್ನು ಪ್ರತಿಬಿಂಬಿಸುವಂತಹ ವಿಚಾರಗಳು,ಬದುಕನ್ನು ಹದಗೊಳಿಸಿ ಸವಿಯುವ ಕಲೆ ಮುಂದಿನ ಕೆಲವು ಕವಿತೆಗಳಲ್ಲಿ ಮೂಡಿಬಂದಿವೆ.
ಪ್ರಕೃತಿಯ ಹಲವು ಅಂಶಗಳನ್ನು ಬದುಕಿನೊಡನೆ ಬೆಸೆಯುತ್ತ, ಅವುಗಳಲ್ಲಿ ಹಲವು ಬಗೆಯ ಅವ್ಯಕ್ತ ಸುಖವನ್ನು ಕಂಡು ಹೊಸ ಉತ್ಸಾಹವನ್ನು ಪಡೆಯುವತ್ತ ಸಾಗುವ ಕವಿ ಓದುಗರನ್ನೂ ಅದೇ ಭಾವ ಪ್ರಪಂಚಕ್ಕೆ ಪರಿಚಯಿಸುವ ಕಲೆಗಾರಿಕೆಯನ್ನು ತೋರಿದ್ದಾರೆ. ಮನಸ್ಸಿಗೆ ಎಟುಕದ ಯಾವ ರೀತಿಯ ಕೃತ್ರಿಮ ಕಲ್ಪನೆಗಳಿಗೂ ಅವಕಾಶ ಕೊಡದೆ ಪ್ರಾಮಾಣಿಕವಾಗಿ ಹಲವು ಸಂಗತಿಗಳೊಡನೆ ಮೌನ ಮಾತು-ಕತೆಗಿಳಿದು ಅದನ್ನು ಓದುಗರಿಗೂ ದಕ್ಕುವಂತೆ ಮಾಡಿರುವುದು ಅಮಿತಾ ರವರ ಲೇಖನಿಯ ಹಿರಿಮೆ.
‘ಕುಮುದಾಳ ಭಾನುವಾರ’ ಕೃತಿಯಲ್ಲಿ ಅವರ ಕೌಶಲ್ಯವನ್ನು ಎತ್ತಿಹಿಡಿದಿರುವಂತಹ ಕವಿತೆ ‘ಹೊಸ್ತಿಲು’.
ಛಟ್ಟೆಂದು ಮೂಡಿದ ಛಪ್ಪೆಯಲಿ
ಅರಳಿದ ರಂಗೋಲಿ
ಉದುರಿಸಲು ಅರಿಶಿಣ-ಕುಂಕುಮ
ಸಜ್ಜುಗೊಂಡಿದೆ ಹೊಸ್ತಿಲು
ಕವಿತೆಯ ಆರಂಭದಲ್ಲಿ ಬಾಹುಬಲಿಗೆಂದೇ ಮಂಗಳಕರವಾದ ಹೊಸ್ತಿಲನ್ನು ಸಜ್ಜುಗೊಳಿಸಿ ಮುಂದುವರಿಯುತ್ತಾರೆ. ಸಹಜತೆಯಿಂದಲೆ ಹರಿಯುವ ಸಾಲುಗಳಲ್ಲಿ ಕವಿ, ತನ್ನೂರಿನ ವಾತ್ಸಲ್ಯ ಬಯಕೆಗಳನ್ನು ಹೊತ್ತು, ಹೊಸ್ತಿಲ ಚೌಕಟ್ಟಿನಿಂದ ಹೊರಬರುತ್ತಾರೆ. ಮುಂಬಯಿಯನ್ನು ಸಾಕಿ ಸಲುಹಿದ ತಾಯಿ ಎನ್ನುತ್ತಾರೆ ಕವಿ. ಅನುಭವಿಸಲು ಸಮಯವಿಲ್ಲದ ಇಲ್ಲಿನ ಕೃತ್ರಿಮ ಜೀವನದ ಚಿತ್ರಣ ಕೊಡುತ್ತಾರೆ.ಸಂಪತ್ತು ಯಶಸ್ಸು ಕೀರ್ತಿಗಳ ಬೆನ್ನಟ್ಟಿ ಹೋಗುವ ಶಹರದ ಕಲ್ಮಶಗಳನ್ನು ತೊಳೆದು ತೊಳೆದು ಇಲ್ಲಿಯ ಸಮುದ್ರ ಕಪ್ಪು ಎಂಬ ಕವಿಯ ಹೇಳಿಕೆಯಲ್ಲಿ ಸತ್ಯವಿದೆ ಎನಿಸುತ್ತದೆ. ಕೊನೆಯ ಸಾಲುಗಳನ್ನು ಓದಿದರೆ ‘ಕವಿಗೆ ನಮೋ’ ಎಂದು ನಮಗರಿವಿಲ್ಲದೆಯೇ ಮನಸ್ಸು ಹೇಳಿಕೊಳ್ಳುವಂತಿದೆ.ವೈರಾಗ್ಯ ಮೂರ್ತಿಯಾದ ಬಾಹುಬಲಿಗೆ ಎಲ್ಲವನ್ನು ಸಮರ್ಪಿಸುತ್ತಾರೆ ಕವಿ. ಅವನ ಎದುರಿಗೆ ತಮ್ಮ-ತಮ್ಮೊಳಗೆ ಗಡಿರೇಖೆಗಳನ್ನು ಹಾಕಿಕೊಳ್ಳುವ ಹೊಸ್ತಿಲ ಕಲ್ಪನೆ ಶಿಥಿಲ ಎಂದು ಸಮರ್ಪಣಾ ಭಾವದಿಂದ ಹೇಳಿಕೊಳ್ಳುತ್ತಾರೆ. ಅಮಿತಾರ ಕಾವ್ಯ ಪ್ರತಿಭೆಗೆ ಅವರ ‘ಹೊಸ್ತಿಲು’ ಕವನ ಸಾಕ್ಷಿಯಾಗಿದೆ.ಕವಿತೆ ಸೂಕ್ಷ್ಮವಾಗಿ ಕಟ್ಟಿ ಕೊಡುವ ವಿಷಯಗಳು ಬಾಹುಬಲಿಯ ಕಥಾನಕದಂತೆಯೆ ಉದಾತ್ತವಾಗಿದೆ.
ಕವನದ ಕೊನೆಯ ಸಾಲುಗಳು..
ಸಂಪತ್ತು ಯಶಸ್ಸು ಕೀರ್ತಿ ಹೊಸ್ತಿಲ
ದಾಟಿ ವೈರಾಗ್ಯದ ಆಗಸದತ್ತ ಬೆಳೆದ
ಬಾಹುಬಲಿ! ನಿನ್ನ ಅಸೀಮ ನಿಲುವಿನೆದುರು
ನನ್ನ ಹೊಸ್ತಿಲ ಕಲ್ಪನೆ ಶಿಥಿಲ,ಹುಡಿಹುಡಿ
ನಮೋ ನಮೋ ನಿನಗೆ…
ಕವಿತೆಯ ಪಕಳೆಗಳು ಸ್ವಲ್ಪವೂ ಬಾಡದಂತೆ ಕಾಳಜಿಯಿಂದ ಆರ್ದ್ರತೆಯಲ್ಲಿ ಅದ್ದಿ ತೆಗೆಯುತ್ತಾ ತಾಜಾತನವನ್ನು ಕೊನೆಯವರೆಗೂ ಕಾಪಾಡಿಕೊಂಡಿರುವುದು ಕೃತಿಯ ವಿಶೇಷತೆ.
ತಮ್ಮ ನಿಜ ಜೀವನದಲ್ಲಿ ಅಕ್ಕರೆ, ಪ್ರೀತಿ ವಾತ್ಸಲ್ಯಗಳನ್ನು ವಿಫುಲವಾಗಿ ಪಡೆದುಕೊಂಡಿದ್ದರೂ, ಅದರ ಜೊತೆಯಲ್ಲಿ, ಸುಳಿವಿಲ್ಲದೆ ದಕ್ಕುವ ಪ್ರಕೃತಿ ವಿಷಯಗಳ ಅವ್ಯಕ್ತ ಒಲುಮೆಯನ್ನು ಅನುಭವಿಸುವ ಜೀವನಪ್ರೀತಿ ಅವರ ವ್ಯಕ್ತಿತ್ವದಲ್ಲೂ ಕಂಡುಬರುವುದು ಸತ್ಯ. ಕುಮುದಾಳ ಜೀವನೋತ್ಸಾಹ ಅವರ ಮುಂದಿನ ಎಲ್ಲ ದಿನಗಳಲ್ಲೂ ಹೀಗೆಯೇ ಮುಂದುವರಿಯಲಿ.
-ಕಲಾ ಚಿದಾನಂದ
ಸುಂದರವಾದ ಪುಸ್ತಕ ವಿಮರ್ಶೆ. ಕವನ ಸಂಕಲನ ದೆಡೆಗೆ ಆಕರ್ಷಿಸುವಂತಿದೆ
ಪುಸ್ತಕ ಪರಿಚಯ ಹಾಗೂ ವಿಶ್ಲೇಷಣೆ ಸೊಗಸಾಗಿದೆ.