ನಮ್ಮೂರ ಸುದ್ದಿ

ಆಕರ್ಷಿಸಿದ ಮುಟ್ಟಾಳೆಯ ಮಳಿಗೆ

Share Button

ಜನಮನದಿಂದ ಮರೆಯಾಗುತ್ತಿರುವ ಅಡಿಕೆ ಹಾಳೆಯ ಮುಟ್ಟಾಳೆ ಶ್ರೀ ಕ್ಷೇತ್ರ ಧರ್ಮಸ್ಥಳ ಲಕ್ಷದೀಪೋತ್ಸವದ ವಸ್ತು ಪ್ರದರ್ಶನದಲ್ಲಿ   ಆಕರ್ಷಣೆಗೆ ಪಾತ್ರವಾಗಿದೆ. ಈ ಕರಕುಶಲ ವಸ್ತು ಕೃಷಿಕರಿಗೆ ಅಚ್ಚುಮೆಚ್ಚಿನದಾಗಿದೆ. ದಕ್ಷಿಣಕನ್ನಡದಲ್ಲಿ ಬಿಸಿಲಿನ ಬೇಗೆಯಲ್ಲಿ ಮನೆಯ ಹೊರಗಿನಗದ್ದೆ, ತೋಟ, ಹಿತ್ತಲಿನಲ್ಲಿ ದುಡಿಯುವುದೇ ಹೆಚ್ಚು. ಆ ಬಿಸಿಲಿನ ತಾಪವನ್ನು ತಡೆದುಕೊಳ್ಳಲು ಉಪಕಾರಿಯಾಗಿರುವುದೇ ಅಡಿಕೆ ಹಾಳೆಯಿಂದ ತಯಾರಿಸಲಾದ ಟೋಪಿ ಮುಟ್ಟಾಳೆ.
.
ಬೆಳ್ತಂಗಡಿ ತಾಲೂಕಿನ ಅಳದಂಗಡಿ ಗ್ರಾಮದ ಬಾಬು ನಲ್ಕೆ ಮತ್ತು ಪತ್ನಿ ಎಲ್ಯಪ್ಪೆ ಇವರ ಕೈಚಳಕದಿಂದ ಮುಟ್ಟಾಳೆ ತಯಾರಿಸಿ ಮೂವತ್ತು ವರ್ಷದಿಂದ ಮಾರಾಟ ಮಾಡುತ್ತಿದ್ದಾರೆ. ಐದು ವರ್ಷಗಳಿಂದ ಲಕ್ಷ ದೀಪೋತ್ಸವದಲ್ಲಿ ತಮ್ಮದೇ ಮಳಿಗೆಯಲ್ಲಿ ಮುಟ್ಟಾಳೆ ಮಾರಾಟ ಮಾಡುತ್ತಿದ್ದು ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ಈ ಬಾರಿಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.ಅಡಿಕೆ ಮರದಿಂದ ಬೀಳುವ ಹಾಳೆಗಳನ್ನು ಸಂಗ್ರಹಿಸಿ ತಂದು ಬಿಸಿ ನೀರಿನಲ್ಲಿ ಸ್ವಲ್ಪ ಹೊತ್ತು ನೆನೆಸುತ್ತಾರೆ. ನಂತರ ಎರಡು ಹಾಳೆಗಳನ್ನು ಜೋಡಿಸಿ, ಕತ್ತಿಯಿಂದ ತಿವಿದು ತಲೆಯ ಅಳತೆಗೆ ತಕ್ಕ ಹಾಗೆ ಕತ್ತರಿಸಿ ಎರಡೂ ಕಡೆಯ ಅಂಚುಗಳನ್ನು ಬೆರಳುಗಳಿಂದ ಬಿಗಿಯಾಗಿ ಹಿಡಿದು ಹಾಳೆಯ ತುದಿಗಳನ್ನು ಸಣ್ಣಗೆ ನೆರಿಗೆ ಮಾಡಿ ಉದ್ದವಾದ ಸೂಜಿ ಮತ್ತುಗಟ್ಟಿಯಾದ ಪ್ಲಾಸ್ಟಿಕ್ ದಾರದ ಸಹಾಯದಿಂದ ಹೊಲಿಯುತ್ತಾರೆ. ಇನ್ನು ಟೋಪಿಯ ಸುತ್ತಲೂ ಉಲನ್ ದಾರದಿಂದ ವಿವಿಧ ಚಿತ್ರಗಳನ್ನು ಅದರ ಮೇಲೆ ಬಿಡಿಸಿ ಮುಟ್ಟಾಳೆಗೆ ಮತ್ತಷ್ಟು ಮೆರುಗು ನೀಡುತ್ತಾರೆ.
.
ಇಳಿವಯಸ್ಸಿನ ಈ ದಂಪತಿ ತಮ್ಮ ಬಿಡುವಿನ ಸಮಯದಲ್ಲೂ ಮುಟ್ಟಾಳೆಗಳನ್ನು ತಯಾರಿಸಿ ಮಾರಾಟ ಮಾಡುವುದು ವಿಶೇಷ. ಈ ಆಧುನಿಕ ಯುಗದಲ್ಲೂ ಅಡಿಕೆ ಮರದ ಟೋಪಿಯನ್ನು ಜೀವಂತವಾಗಿರಿಸಿದ್ದಾರೆ. ಕರಕುಶಲ ವಸ್ತುಗಳ ಅಸ್ತಿತ್ವ ಕಣ್ಮರೆಯಾಗಬಾರದು ಎನ್ನುವುದು ಇವರ ಮಾತು.

ವರದಿ: ಮೋಕ್ಷ ರೈ.
ಚಿತ್ರಗಳು: ಆದರ್ಶ ಕೆ.ಜಿ

4 Comments on “ಆಕರ್ಷಿಸಿದ ಮುಟ್ಟಾಳೆಯ ಮಳಿಗೆ

  1. ಹಿಂದೆ ಪ್ಲಾಸ್ಟಿಕ್ ಬದಲು ಕಪ್ಪು ಬಣ್ಣದ ಪ್ರಾಕೃತಿಕವಾಗಿ ದೊರೆಯುವ ಯಾವುದೋ ದಾರವನ್ನು ಉಪಯೋಗಿಸುತ್ತಿದ್ದುದನ್ನು ನೋಡಿದ ನೆನಪು ಇದೆ. ದಾರ ಈಂದಿನ ಮರದಲ್ಲಿ ದೊರಕುತ್ತಿದ್ದಿರಬೇಕು ಸರೀಯಾಗಿ ಗೊತ್ತಿಲ್ಲ .

  2. ತಿಗರಿ ತಿರುಗುವೆ ಗರಾ ಗರಾ
    ಮಡಕೆ ಮಾಡುವೆ ಭರಾ ಭರಾ
    ಹಾಗಾದರೆ ನಾನು ಯಾರು…
    ಇದು ನನಗೆ ಆರನೇ ತರಗತಿಯಲ್ಲಿ ಇತ್ತು.ಕ್ವಿಜ್ಹ್ ಥರ

  3. ಕಣ್ಮರೆಯ ಅಂಚಲ್ಲಿ ಇರುವಂತಹ ವಸ್ತುಗಳಲ್ಲಿ ಇದೂ ಒಂದು . ಅಡಿಕೆ ಮರದ ಹಾಳೆಯಿಂದ ಅಡಿಕೆ ಹೆಕ್ಕಿ ತುಂಬಿಕೊಳ್ಳಲು ಸಹಾಯ ಆಗುವಂತಹ ಒಂದು ಬಾಸ್ಕೆಟ್ ತರದ ವಸ್ತುವನ್ನೂ ತಯಾರಿಸುತ್ತಿದ್ದರು . ಇವೆಲ್ಲ ಈಗ ಬಹಳ ಅಪರೂಪದ ವಸ್ತುಗಳಾಗಿವೆ

  4. ಹಿಂದೆ ಈ ಮುಟ್ಟಾಳೆ ಇಲ್ಲದೆ ಹಳ್ಳಿಯ ಕೆಲಸ ಸಾಗುತ್ತಲೇ ಇರಲಿಲ್ಲ. ಬಿಸಿಲಿನಿಂದ ರಕ್ಷಿಸುವುದರ ಜೊತೆಗೆ ತಲೆಯಲ್ಲಿ ಭಾರ ಹೊರುವಾಗ ರಕ್ಷಣೆಗಾಗಿ ಉಪಯೋಗವಾಗುತ್ತಿತ್ತು. ಚಂದದ ಬರಹ.

Leave a Reply to vishwanathakana Cancel reply

 Click this button or press Ctrl+G to toggle between Kannada and English

Your email address will not be published. Required fields are marked *