ಕಪ್ಪು ಹುಡುಗಿಯ ಸ್ವಗತ…..
ಬದಲಾಗುತ್ತಿರುವ ಕಾಲಮಾನದಲ್ಲಿ ಸಾಹಿತ್ಯ ತನ್ನ ನೆಲೆ ಧೋರಣೆಯನ್ನು ಸದಾ ಬದಲಾವಣೆಗೆ ಮುಕ್ತವಾಗಿ ತೆರೆದಿಟ್ಟುಕೊಂಡು ಕೂತಿರುತ್ತದೆ. ಅದನ್ನು ಸಮಯದೊಂದಿಗೆ ತುಲನೆ ಮಾಡಿ ತೂಗಲೂಬಹುದು. ಸಾಹಿತ್ಯ ಎನ್ನುವುದು ಆ ಕಾಲಮಾನದಲ್ಲಿ ಬದುಕಿದ ಒಟ್ಟಾರೆ ಮಾನವ ಜನಾಂಗದ ಪ್ರತಿಬಿಂಬ. ಅದಕ್ಕೆ ಸಾಹಿತಿಯನ್ನು ಅಘೋಶಿತ ಇತಿಹಾಸರ ಎಂದು ಬಣ್ಣಿಸಲಾಗುತ್ತದೆ. ಆದರಿಲ್ಲಿ ಕಳೆದು ಹೋದುದರ ಬಗೆಗಿನ ಹಳಹಳಿಕೆಗಳು, ಮುಂದಿನ ಭವಿಷ್ಯತ್ತಿನ ಬಗೆಗಿನ ಆಸೆಗಣ್ಣಿನ ನೋಟಗಳು ಒಟ್ಟಾಗಿ ವರ್ತಮಾನವನ್ನು ದುಡಿಯಲು ತೊಡಗಿಸುತ್ತವೆ. ಇತಿಹಾಸ, ಚರಿತ್ರೆ, ಚಾರಿತ್ರ್ಯ, ಪೂರ್ವಾಪರ, ಹಿನ್ನೆಲೆ ಎನ್ನುವಂತ ಪದಗಳು ಹುಟ್ಟಿಕೊಳ್ಳಲಿಕ್ಕೂ ಅವುಗಳ ಅಗತ್ಯ ಕಂಡು ಕಾಡಿರಬಹುದು. ಸಾಹಿತ್ಯವೆನ್ನುವುದು ಜಲಚಕ್ರದಲ್ಲಿ ನೀರು ಮತ್ತೆ ಮತ್ತೆ ಆವಿಯಾಗಿ, ಮೋಡವಾಗಿ, ಮಳೆಯಾಗಿ, ನದಿಯಾಗಿ ಮತ್ತೆ ಮತ್ತೆ ನವೀಕರಣಗೊಳ್ಳುವ ಪರಿಯಂತೆ ಸ್ವರೂಪದಲ್ಲಿ ಅದೇ ಆಗಿದ್ದು ಹೊರ ಉಡುಗೆಯಲ್ಲಿ ಬದಲಾಗುತ್ತಾ ನಡೆಯುತ್ತಿರುತ್ತದೆ. ನನ್ನದೇ ಭಾವ ಅದೇ ಕಾಲಕ್ಕೆ ಇನ್ಯಾರದೋ ಭಾವವೂ ಆಗಿರಬಹುದು, ನನಗನ್ನಿಸಿದ್ದು ಇನ್ನೊಬ್ಬರಿಗೂ ತಟ್ಟಬಹುದು…. ರಚಿಸಿದ್ದು ಯಾರಾದರಿರಲಿ ಅನುಭವಿಸುವ, ಆಸ್ವಾದಿಸುವ ಎಲ್ಲರಿಗೂ, ಎಲ್ಲದಕ್ಕೂ ಸಲ್ಲುತ್ತಾ ಹೋಗುವುದು ಸಾಹಿತ್ಯದ ಗುಣ. ಸಾಹಿತಿಗಿಂತಲೂ ಸಾಹಿತ್ಯದ ಯಶಸ್ಸು ಯಾವಾಗಲೂ ಮುಖ್ಯವಾಗುತ್ತದೆ.
ಸಂಗೀತ ರವಿರಾಜರ “ಕಪ್ಪು ಹುಡುಗಿ”ಯನ್ನು ಒಂದೇ ಗುಕ್ಕಿಗೆ ಓದಿ ಮುಗಿಸಿದ ಮೇಲೆ ಹೀಗನ್ನಿಸಲು, ಹೀಗೇ ಅನ್ನಿಸಲು ಕಾರಣವಿದೆ… ಮತ್ತೆ ಅದು ಈ ಪುಸ್ತಕದಲ್ಲೇ ಇದೆ ಅನಿಸಿತು. ಕಪ್ಪುಹುಡುಗಿ ಸಂಗೀತಾರ ಮೂರನೆ ಆದರೆ ಮೊದಲ ಗದ್ಯ ಸಂಕಲನ (ಪ್ರಬಂಧ). ಸಂಗೀತ ನಿಜಕ್ಕೂ ಚೆಂದದ ಪದ್ಯಗಳನ್ನು ಬರೆದವರು. ಎಷ್ಟು ಚೆಂದ ಬರೆದಿದ್ದಾರೆ ಎಂದು ಸೋಜಿಗ ಪಟ್ಟುಕೊಳ್ಳುವಂತೆ, ಇಲ್ಲೇನೋ ತಾಳ ತಪ್ಪುತ್ತಿದೆ ಎನ್ನುವಲ್ಲಿಗೂ ಕೆಲವಲ್ಲಿ ಸಿಲುಕುವ ಯಶಸ್ವಿ ಕವಿತೆಗಳು. ಅವರ ಕವಿತೆಗಳಲ್ಲಿ ಮುಗ್ಧತೆ, ಪ್ರಬುದ್ಧತೆ ಎಂಬ ವೈರುಧ್ಯದ ಪದಗಳು ಕೈ ಕೈ ಹಿಡಿದು ನಡೆಯುವ ಪರಿಯನ್ನು ಓದುವುದೂ ಒಂದು ಸುಖ. ಅದರೆ ಈ ಕವಯಿತ್ರಿ ಇದ್ದಕ್ಕಿದ್ದ ಹಾಗೆ ತಮ್ಮ ಹಾದಿ ಬದಲಿಸಿಕೊಳ್ಳುತ್ತಾರೆ. ತಾನು ಗದ್ಯವನ್ನೂ ಬರೆದು ಸೈ ಎನಿಸಿಕೊಳ್ಳಬಲ್ಲೆ ಎಂದೂ ತೋರಿಸಿಕೊಡುತ್ತಾರೆ…. ಮತ್ತದು ಒಂದು ನಮೂನಿ ಜಾದೂವಿನಂತೆ….
ಗದ್ಯವನ್ನು ತಮ್ಮ ನಿಲುವಾಗಿಸಿಕೊಂಡ ಬರಹಗಾರರಿಗೂ ಪದ್ಯದಿಂದ ಜಿಗಿವ ಗದ್ಯಕಾರರಿಗೂ ನಡುವೆ ಸುಲಭಕ್ಕೆ ಒಂದು ವ್ಯತ್ಯಾಸವನ್ನು ಗುರುತಿಸಿಬಿಡಬಹುದು. ಗದ್ಯಕ್ಕೆ ಒದಗುವ ಪದ್ಯದ ಸೊಗಡು ಗದ್ಯದ ರುಚಿಯನ್ನೂ ಹೆಚ್ಚಿಸಬಲ್ಲದು. ಕೆಲವೊಮ್ಮೆ ಅಪರೂಪಕ್ಕೆ ರುಚಿಸದೆಯೂ ಹೋಗಬಹುದು. ಆದರೆ ಅದೇನೂ ಅಂತಹ ಅವಗುಣವಲ್ಲ. ಇದನ್ನೆ ಸಂಗೀತಾರವರ ಲಲಿತ ಪ್ರಬಂಧಗಳಲ್ಲೂ ಕಾಣಬಹುದು. ಈ ಕವಯಿತ್ರಿ ತನ್ನನ್ನು ತಾನು ಪೊರೆ ಕಳಚಿಕೊಂಡು ಹೊರತರಲು ಪ್ರಬಂಧ ಮಾದರಿಯನ್ನು ದುಡಿಸಿಕೊಳ್ಳತೊಡಗುತ್ತಾರೆ. ಮುಗ್ಧತೆ ಮತ್ತು ಪ್ರಾಮಾಣಿಕತೆ ಅವರ ಬರವಣಿಗೆಯ ಶಕ್ತಿ.
ಸಂಗೀತಾರವರ ಪ್ರಬಂಧಗಳು ಮುಖ್ಯವಾಗಿ ಗಮನ ಸೆಳೆಯುವುದು ವೈವೀಧ್ಯಮಯ ವಿಷಯಗಳ ಆಯ್ಕೆಯಿಂದಾಗಿ. ಮನೆಯೆಂಬ ಪ್ರಪಂಚದ ಆಗುಹೋಗುಗಳಿಗೆ ಎಚ್ಚರಗಣ್ಣಾಗಿ ಜ್ಞಾನೇಂದ್ರಿಯಗಳನ್ನು ದುಡಿಸಿಕೊಳ್ಳುವ ಪ್ರವೃತ್ತಿ ಅವರದು. ಬಾಲ್ಯಾದಿ ಪ್ರೌಢಾವಸ್ಥೆಯ ಈ ಘಟ್ಟದವರೆವಿಗೂ ಅವರು ಕಂಡುಂಡದ್ದನ್ನು ಚೊಕ್ಕಟವಾಗಿ ನಮಗೆ ಬಡಿಸುತ್ತಾರೆ. ಕವಿತೆಯನ್ನು, ಸಾಹಿತ್ಯವನ್ನು ತೀವ್ರತರವಾಗಿ ಧೇನಿಸುವ ಅವರಿಗೆ ಸಾಹಿತ್ಯ ಅನುಭವವಾಗಿ ನಿಲುಕ್ಕಿದ್ದೂ ಪ್ರಬಂಧಕ್ಕೆ ವಿಷಯವಾಗುತ್ತದೆ (ಕವಿತೆಯ ಕನವರಿಕೆಗಳು, ಬರಹಗಾರರ ಬವಣೆಗಳೆಂಬ ಸುಖಗಳು, ಸಾಹಿತ್ಯ ಸಮ್ಮೇಳನ ಏಕೆ ಬೇಕು?). ಮತ್ತವರ ‘ಹೆಣ್ಣಾದವಳು ಮಾತ್ರ ಇಂಥದ್ದನ್ನು ಸೃಷ್ಟಿಸಲು ಸಾಧ್ಯ’ ಎನಿಸುವಂತಹ ಆಪ್ತ ಬರೆಹಗಳು ನಿಜಕ್ಕೂ ಹೆಣ್ಣಿನ ಭಾವಲೋಕವನ್ನು ಲೋಕದ ಮುಂದೆ ಜಗಜ್ಜಾಹೀರುಗೊಳಿಸುತ್ತವೆ (ಸೀರೆ ಮತ್ತು ನೀರೆ, ಕಣ್ಣೀರಿನ ಕಥನ, ವಾಂತಿ ಪುರಾಣಗಳು, ಹೆಣ್ಮನದ ಸುಳಿಯೊಳಗೆ, ಸುರಗಿ ಹೂವಿನ ನೆನಪು ಸೊರಗುವುದಿಲ್ಲ, ಮಹಿಳಾ ಕಾಲೇಜ್ ಎಂಬ ಮಾಯಾಂಗನೆ, ಪುಟ್ಟ ಕಂದ ಶಾಲೆಗೆ ಹೊರಡುವ ಹೊತ್ತು). ಇವಲ್ಲದೆ ಮತ್ತಷ್ಟು ಪ್ರಬಂಧಗಳು ಅವರ ಶ್ರಮ ಸಾರ್ಥಕವಾದದ್ದಕ್ಕೆ ಪುರಾವೆ ಒದಗಿಸುತ್ತವೆ. ವಾಂತಿ, ಕಪ್ಪು ಮೈ ಬಣ್ಣ, ಚಹಾ, ಧಾರಾವಾಹಿ, ಸಾಮಜಿಕ ಕಳಕಳಿ ಯಂತಹ ವಿಚಾರಗಳೂ ಅವರ ಬರೆಹಕ್ಕೆ ವಸ್ತುಗಳಾಗುತ್ತವೆ.
‘ಸುರಿದದ್ದು ಮಳೆ, ಕರಗಿದ್ದು ಒಡಲು‘ ಪ್ರಬಂಧವಂತೂ ಪ್ರಬಂಧಕವನವಂತಲೇ ಅನಿಸಿಬಿಡುತ್ತದೆ. ಮತ್ತೆ ಮತ್ತೆ ಮನಸಿಗೆ ಕೆಲಸ ಕೊಡುತ್ತಾ ಒಳೊಳಗೇ ನೂಲ ಸುತ್ತಿ ಸುತ್ತಿ ಗೂಡ ಕಟ್ಟಿಯಾದ ಮೇಲೆ ಚಿಟ್ಟೆಯಾಗಿ ಹೊರಬಂದು ತನಗೇನೂ ಗೊತ್ತಿಲ್ಲ ತಾನೇನೂ ಮಾಡಲೇ ಇಲ್ಲ ಎನ್ನುವ ಭಾವ ಅವರದು. ಮತ್ತೆ ಕೆಲವಲ್ಲಿ ತಮ್ಮ ಮಿತಿಯನ್ನು ತಾವೇ ಮೀರುವಂತೆ ಭಾವನಾತ್ಮಕ ನಿಸ್ಪೃಹತೆಯಲ್ಲಿ ಸೊಲ್ಲೆತ್ತುತ್ತಾರೆ. ಆ ದನಿಯಾದರೋ ಮೇಲ್ಛಾವಣಿ ಮಟ್ಟಕ್ಕೆ ಏರುತ್ತದೆ. ಇನ್ನಷ್ಟು ಪ್ರಯತ್ನಿಸಿದರೆ ಆಕಾಶವೇ ಸಿಕ್ಕಿಬಿಡಬಹುದೆಂಬ ಆಮಿಶ ಅವರನ್ನು ಬರೆಹಕ್ಕೆ ಹಚ್ಚುತ್ತಿದೆ.
ಸಂಗೀತಾರ ಅನುಭವಜನ್ಯವಾದ ಆತ್ಮ ಕಥಾನಕದ ರೂಪದಲ್ಲಿರುವ ಪ್ರಬಂಧಗಳು ನಿಜಕ್ಕೂ ಭರವಸೆ ಹುಟ್ಟಿಸುತ್ತವೆ. ಇದನ್ನು ಹೇಳಬೇಕಾ, ಬೇಡವಾ ಎನ್ನುವ ಸಣ್ಣ ಅಂಜಿಕೆಯೊಂದನ್ನು ಪೊಶಿಸಿಕೊಂಡೇ ಬರುವ ಅವರು, ಹೆಣ್ಣು ಮನ, ಚೌಕಟ್ಟನ್ನು ಮೀರಲು ಮೀನಾಮೇಶ ಎಣಿಸುವ ರೂಪಕದ ಚಿತ್ರಣವಾಗುತ್ತಾರೆ. ಒಂದಷ್ಟು ಭಿಡೆ ಇಟ್ಟುಕೊಂಡು ಬರೆದಾಗಲೇ ಸಾಹಿತಿ ಬರೆದದ್ದು ವೇದ್ಯವಾಗಲಿಕ್ಕೆ ಸಾಧ್ಯ. ಇಲ್ಲವಾದರೆ ಎಲ್ಲವನ್ನೂ ಪರೋಕ್ಷವಾಗಿ ಹೇಳಬೇಕೆಂಬ ಒತ್ತಡದಲ್ಲಿ, ಪರೋಕ್ಷ ರೂಪಕಗಳ ಹಿಂದೆ ಮೂಡಿ ಬರುವ ಆಶಯಗಳು ನಾವಂದುಕೊಂಡ ಗಮ್ಯವನ್ನು ತಲುಪಲಾಗದೆ, ಕನಿಷ್ಟ ರಂಜನೀಯ ಗುಣವೂ ಸೊರಗಿ ಸೋತರೆ ಖಂಡಿತಾ ನಿರಾಸೆಯಾಗುತ್ತದೆ.
ಇಲ್ಲಿನ ಎಲ್ಲಾ ಪ್ರಬಂಧಗಳಲ್ಲಿ ಗಟ್ಟಿಯಾದ ಹೆಣ್ಣು ಧ್ವನಿಯೊಂದು ಸಿಕ್ಕು ಸಮಾಧಾನ ಕೊಡುತ್ತದೆ. ಜಾಗತಿಕವಾಗಿ ಹೆಣ್ಣು ಎಷ್ಟೆ ಬದಲಾಗಿದ್ದರೂ ಕೌಟುಂಬಿಕ ಚೌಕಟ್ಟನ್ನು ಧಿಕ್ಕರಿಸುವ ಮಟ್ಟಕ್ಕೆ ಇನ್ನೂ ಆಗಿಲ್ಲ… ಮತ್ತೆ ಕುಟುಂಬದ ಚೌಕಟ್ಟಗಳಲ್ಲಿ ಬಿಗಿ ಭದ್ರವಾದ ಎತ್ತರದ ಹೊಸಿಲೊಂದು ಹೆಬ್ಬಾಗಿಲಲ್ಲಿದೆ ಮತ್ತು ಮರಳಿ ಬರಲು ಬಿಡದ ಅದನ್ನು ದಾಟಿ ಹೊರ ಹೋಗಲು ಸಾವಿರ ಸಲ ಯೋಚಿಸಬೇಕು….. ಹೆಣ್ಣು ತನ್ನ ಕುಟುಂಬವನ್ನು ಅತೀವ ಪ್ರೀತಿಸುತ್ತಾಳೆ… ಅದು ಮತ್ತದವಳ ಅವಿಭಾಜ್ಯ ಅಂಗವೂ ಸಾ…. ತನ್ನೆಲ್ಲ ಜಗತ್ತನ್ನೂ ಅದಕ್ಕಾಗಿ ಬಿಡಲು ತಯಾರಿರುತ್ತಾಳೆ. ಅದು ಅವಳ ಶಕ್ತಿ ಎಂದುಕೊಳ್ಳುವ ಹೊತ್ತಲ್ಲೇ ಅದು ದುರ್ಬಳಕೆಯಾಗುತ್ತಿರುತ್ತದೆ. ವ್ಯವಸ್ಥೆ ಹೀಗೆ ಅಂದ ಮೇಲೆ ಮಾಡುವುದೇನು…. ಎಂದು ತಲೆ ಮೇಲೆ ಕೈ ಹೊತ್ತು ಕೂರುವುದಕ್ಕಿಂತ, ಮುಂದೇನು….?! ಎಂದು ಮುಂದಿನ ನಡೆಯನ್ನು ರೂಪಿಸಬೇಕಾದುದು ಪ್ರಸ್ತುತ ಪರಿಸ್ಥಿತಿಯ ದರ್ದು ಮತ್ತು ತುರ್ತು.
ಒಳಗೇ ನವೆಯುತ್ತಾ ಕೂತಾಗ ಲೋಕದ ಮುಂದೆ ಅದು ಕ್ಷುಲ್ಲಕ ಎನ್ನುವುದು ಗೊತ್ತಾಗುವುದಿಲ್ಲ. ಕೆಲವೊಮ್ಮೆ ಉಪ್ಪಿನಕಾಯಿಯನ್ನು ಎಷ್ಟೇ ಹದವಾಗಿ ಹಾಕಿದ್ದರೂ ತಿನ್ನುವವರ ರುಚಿ, ಅಭಿರುಚಿಯನ್ನೊಮ್ಮೆ ಕೊಟ್ಟು ಕೇಳಿ ತಿಳಿದೇ ಮುಂದುವರಿಯಬೇಕಾಗುತ್ತದೆ. ಪ್ರತಿಯೊಬ್ಬರೂ ಒಂದಲ್ಲ ಒಂದು ಹಂತದಲ್ಲಿ ಮುಗ್ಧತೆಯನ್ನು ಕಳೆದುಕೊಳ್ಳಲೇಬೇಕು. ಎಲ್ಲವನ್ನೂ ತಿಳಿದಾದ ಮೇಲೆ ಮತ್ತೆ ಮುಗ್ಧತೆಯನ್ನು ಸಿದ್ಧಿಸಿಕೊಳ್ಳುವುದಿದೆಯಲ್ಲ ಅದೇ ಸಾಧನೆ. ಅದು ಸಂಗೀತಾರ ಹಾದಿಯಾಗಲಿ. ತಮ್ಮ ಮೊದಲ ಪ್ರಬಂಧ ಸಂಕಲನದಿಂದಲೇ ಬರವಸೆ ಹುಟ್ಟಿಸುವ ಅವರಿಂದ ಮತ್ತಷ್ಟು ಒಳ್ಳೆಯ ಕೃತಿಗಳನ್ನಂತೂ ನಿರೀಕ್ಷಿಸಬಹುದು.
-ಆಶಾ ಜಗದೀಶ್
ಮುದ್ದಾದ ವಿಮರ್ಶೆ…ಸಂಗೀತಾರಂತೇ.. ಓದುವ ಆಸೆಯನ್ನು ಹೆಚ್ಚಿಸಿತು.
ಪುಸ್ತಕ ವಿಮರ್ಶೆ ಮುದ್ದಾಗಿ ಮೂಡಿಬಂದಿದೆ.. ಧನ್ಯವಾದಗಳು.
ಚೆನ್ನಾಗಿದೆ ಪುಸ್ತಕ ಪರಿಚಯ. ಪುಸ್ತಕದ ಹೆಸರೇ ಒಂದು ರೀತಿ ಆಕರ್ಷಕವಾಗಿದೆ.
ತಮ್ಮ ವಿಮರ್ಶೆ, ವಿಶ್ಲೇಷಣೆ ಚೆನ್ನಾಗಿದೆ. ತಮಗೆ ಧನ್ಯವಾದಗಳು.
ಲೇಖಕಿಯವರಿಗೆ ಅಭಿನಂದನೆಗಳು
ಎಲ್ಲರಿಗು ಧನ್ಯವಾದಗಳು