ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ
ಡಾ.ಕೋರನ ಸರಸ್ವತಿಯವರ ‘ಕೊಡಗು ಗೌಡ ಸಮುದಾಯ ಸಾಂಸ್ಕೃತಿಕ ಅನನ್ಯತೆ‘ ಎನ್ನುವ ಸಂಶೋಧನಾತ್ಮಕ ಕೃತಿ , ಅರೆಭಾಷೆ ಗೌಡ ಸಮುದಾಯದ ಸಂಸ್ಕೃತಿ , ಸಂಪ್ರದಾಯ, ಆಚರಣೆ , ಪದ್ಧತಿ ಇವುಗಳ ಕೂಲಂಕುಷ ವಿವರಗಳೊಂದಿಗೆ ವಿಶಿಷ್ಟವಾಗಿ ಮೂಡಿಬಂದಿದೆ.೨೦೦೮ ರಲ್ಲಿ ಅಧ್ಯಯನ ಬರಹ ಲೋಕಾರ್ಪಣೆಗೊಂಡರು ಪ್ರಸ್ತುತ ದಿನಗಳವರೆಗು ಗೌಡ ಅರೆಭಾಷೆನ ಸಾಂಸ್ಕೃತಿಕ ಅನನ್ಯತೆಯ ಬಗ್ಗೆ ಇಷ್ಟು ವಿವರಣೆಯ ಬೇರೆ ಕೃತಿ ಬರಲಿಲ್ಲ ಎಂಬುದು ಅತಿಶಯೋಕ್ತಿ ಅಲ್ಲ. ಪ್ರಕಟ ಆದ ಮೇಲೆ ಇಂದಿನವರೆಗೆ ೨೦೧೦ ರಲ್ಲಿ ಮತ್ತೆ೨೦೧೬ರಲ್ಲಿ ಮುದ್ರಣಗಳನ್ನು ಕಂಡು , ಪ್ರಸಕ್ತ ದಿನಗಳಲ್ಲಿಯು ಕೊಡಗಿನಲ್ಲಿ ಗೌಡ ಸಮುದಾಯದ ಪರಂಪರೆಯನ್ನು ಓದಿಕೊಳ್ಳಲು ಆಸಕ್ತಿ ಇರುವ ಜನರು ಈ ಪುಸ್ತಕವನ್ನು ತೆಗೆದುಕೊಳ್ಳುತ್ತಿರುವುದು ಇದಕ್ಕೆ ಸಾಕ್ಷಿ. ಈ ಕೃತಿನ ಸಂಪೂರ್ಣ ಓದುವಾಗ ನಮ್ಮ ಅರೆಭಾಷೆ ಗೌಡ ವಲಯದ ಸಾಂಸ್ಕೃತಿಕ ವೈಭವ ಇಷ್ಟು ಶ್ರೀಮಂತಿಕೆಯಲ್ಲಿ ಇದೆಯೇ ಎಂಬುದು ನಮಗೆ ಆಶ್ಚರ್ಯವಾಗುತ್ತದೆ.. ಸರ್ವ ವಿಚಾರಗಳ ಸಂಪೂರ್ಣ ಜ್ಞಾನ ಮತ್ತೆ ಅನುಸರಿಸಲು ವಿಧಾನಗಳು ನಮಗೆ ಒಂದೇ ಕೃತಿಯಲ್ಲಿ ಸಿಗುತ್ತದೆ. ಬಳಿಗಳ ಬಗ್ಗೆ ಹೇಳುವಾಗ ಪ್ರತಿ ಬಳಿಯ ಹಿನ್ನೆಲೆ , ಅದು ಹೇಗೆ ಆಚರಣೆಗೆ ಬಂದಿದೆ ಎಂಬುದರ ವಿವರ ಓದುವಾಗ ಕೃತಿಯ ಅಧ್ಯಯನ ಶೀಲತೆಯ ಜೀವಂತಿಕೆ ಮತ್ತು ತೀವ್ರತೆ ನಮ್ಮರಿವಿಗೆ ಬರುತ್ತದೆ.ಯಾವುದೇ ಪೂರ್ವಾಗ್ರಹ ಇರದೆಯೆ ಈ ಕೃತಿಯನ್ನು ಓದಿದ ನನಗೆ ಅಭೂತಪೂರ್ವ ಜ್ಞಾನ ಲಭಿಸಿತು.
ಯಾವುದೇ ಜನಾಂಗದ ಸಂಪ್ರದಾಯದ ಬೇರು ಇರುವ ಜಾಗವೆಂದರೆ ಅದು ಹಳ್ಳಿ. ಇಂಥ ಪ್ರದೇಶದಿಂದ ಸಾಮಾಜಿಕ , ಸಾಂಸ್ಕೃತಿಕ ಅನನ್ಯತೆಯನ್ನು ಅಧ್ಯಯಿಸಿ ದಾಖಲೀಕರಣ ಮಾಡುವುದೆಂದರೆ ಅದು ಹೋರಾಟ. ಈ ಕೃತಿಯಲ್ಲಿ ಕೊಡಗು ಗೌಡ ಸಮುದಾಯದ ಉದ್ದೇಶ ಮತ್ತೆ ವ್ಯಾಪ್ತಿ, ಕೊಡಗು ಗೌಡ ಸಮುದಾಯದ ಭೌಗೋಳಿಕ ನೆಲೆ, ಸಾಮಾಜಿಕ ನೆಲೆ , ಕೊಡಗು ಗೌಡರ ಆಹಾರ ಪದ್ಧತಿ ಮತ್ತೆ ಜೀವನ ಕ್ರಮ, ಕೊಡಗ್ ಗೌಡರ ಜಾನಪದ ಜಗತ್ತು, ಕೊಡಗು ಗೌಡ ಸಮುದಾಯದ ಸಾಂಸ್ಕೃತಿಕ ಅನನ್ಯತೆ ಮತ್ತು ಚಲನಶೀಲತೆ ಇವಿಷ್ಟು ಅಂಶಗಳನ್ನು ದಾಖಲಿಸಿದ್ದಾರೆ. ಆದರೆ ಸಂಸ್ಕೃತಿನ ಬೆಳವಣಿಗೆಯೆಂದು ಹೇಳಿದರೆ ಅದು ಚಲನಶೀಲತೆ. ಸಾಂಸ್ಕೃತಿಕ ಅಂಶಗಳಾದ ನಂಬಿಕೆಗಳು ಒಂದೇ ಸಮುದಾಯದಲ್ಲಿದವರಲ್ಲಿಯು ಭಿನ್ನವಾಗಿರುತ್ತದೆ. ಆದರಿಂದ ಇಂಥ ನಿರಂತರ ಪ್ರಕ್ರಿಯೆಯ ಸಂಸ್ಕೃತಿಯನ್ನು ಇನ್ನು ಅಧ್ಯಯನ ಮಾಡಿ ಹೊಸ ರೂಪದ ಇನ್ನೊಂದು ಕೃತಿಯನ್ನು ಲೇಖಲಿಯವರಲ್ಲಿ ನಾವು ನಿರೀಕ್ಷಿಸಬಹುದು.
ಇಲ್ಲಿನ ಕೃತಿಯಲ್ಲಿ ಲೇಖಕಿಯವರು ಹೇಳುವಂತೆ ವ್ಯಕ್ತಿ ಮತ್ತು ಸಮಾಜ ಪರಂಪರಾಗತವಾಗಿ ಒಪ್ಪಿಕೊಂಡು, ಅನುಸರಿಸಿಕೊಂಡು ಬರುವ ವರ್ತನೆಗಳನ್ನು ನಾವು ನಂಬಿಕೆಗಳೆಂದು ಕರೆಯುತ್ತೇವೆ. ಕೊಡಗು ಗೌಡರು ತಮ್ಮದೆ ಆದ ಕೆಲವು ನಂಬಿಕೆಗಳನ್ನು ಇಟ್ಟುಕೊಂಡಿದ್ದಾರೆ. ಒಂದು ಜನಾಂಗದ ಒಟ್ಟು ಧೋರಣೆಗೆ ಪೂರಕವಾಗಿಯೆ ನಂಬಿಕೆಗಳು ಹುಟ್ಟಿಕೊಂಡಿರುವುದರಿಂದ, ಜನಾಂಗದ ಸಂಸ್ಕತಿಯನ್ನು ನಂಬಿಕೆಗಳು ಪ್ರದರ್ಶಿಸುತ್ತವೆ.ನಂಬಿಕೆ ಸಂಸ್ಕೃತಿಯ ಮೂಲ ಬೇರು ಇದ್ದ ಹಾಗೆ. ಕೊಡಗು ಗೌಡರ ಎಲ್ಲ ನಂಬಿಕೆಗಳ ಕಾರ್ಯಕಾರಣನ ಗ್ರಹಿಸುದು ಕಷ್ಟ ಆದರು , ಅವುಗಳು ಗೌಡರ ನಿತ್ಯ ಜೀವನದಲ್ಲಿ ಸೇರಿ ಹೋಗಿದೆ. ಆದರಿಂದ ಗೌಡ ಸಮುದಾಯದ ನಂಬಿಕೆಗಳನ್ನು ಆ ಪ್ರದೇಶದ ಸಂಸ್ಕೃತಿಗೆ ಸಂಬಂಧಿಸಿ ಹೇಳಬಹುದು.. ಜನರ ನಂಬಿಕೆಗ ತಮ್ಮ ಸಮುದಾಯದ ಸಾಂಸ್ಕ್ರತಿಕ ವಲಯವನ್ನು ಇನ್ನು ಗಟ್ಟಿಗೊಳಿಸುತ್ತದೆ.
ಕರ್ನಾಟಕದ ಬೇರೆ ಬೇರೆ ಕಡೆಗಳಲ್ಲಿಯು ಗೌಡ ಸಮುದಾಯ ಇದ್ದರು ಒಂದು ಪ್ರದೇಶದ ಒಳಗಡೆ ವಾಸಿಸುವ ಸಮುದಾಯ ತನ್ನ ಸಾಂಸ್ಕೃತಿಕ ಅಸ್ಮಿತೆಯನ್ನು ಎತ್ತಿ ಹಿಡಿಯುತ್ತದೆ.. ಇಂತಹ ಸಮುದಾಯದ ಒಳಗೆ ಹೋಗಿ ಅಧ್ಯಯಿಸಿ ಬರೆದರಿಂದ ಲೇಖಕಿಯವರ ಜ್ಞಾನ ಎಷ್ಟು ವ್ಯಾಪಕವಾದು ಎಂಬುದು ನಮಗೆ ತಳಿಯುತ್ತದೆ . ಅಲ್ಲದೆ ಪ್ರತಿ ವಿಚಾರವನ್ನು ವಸ್ತುನಿಷ್ಠವಾಗಿ ಗ್ರಹಿಸಿದ ಮತ್ತು ಸಂಗ್ರಹಿಸಿದ ದೃಷ್ಟಿಕೋನವೊಂದು ನಮ್ಮರಿವಿಗೆ ಬರುತ್ತದೆ. ಅರೆಭಾಷೆಯ ಪರಿಸರದಲ್ಲಿ ಬದುಕುತ್ತಿರುವ ನಮಗೆಲ್ಲ ಕೊಡಗಿನ ಗೌಡ ಸಮುದಾಯ ತನ್ನದೆ ಆದ ವೈಶಿಷ್ಟ್ಯಗಳನ್ನು ಹೇಗೆ ಪರಂಪರಾಗತವಾಗಿ ಉಳಿಸಿಕೊಂಡು ಬಂದಿದೆ ಎಂಬುದರ ಸ್ಥೂಲ ವಿವರಣೆ ಸಿಗುತ್ತದೆ. ಇದು ಗೌಡ ಸಮುದಾಯದಲ್ಲಿ ವಾಸಿಸುವ ಯುವ ಜನಾಂಗಕ್ಕೆ ತೀರಾ ಅವಶ್ಯಕ. ಒಟ್ಟಿನಲ್ಲಿಈ ಕೃತಿ ಅರೆಭಾಷೆಯ ಗೌಡ ಸಮುದಾಯಕ್ಕೆ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ವಲಯಲಿ ತುಂಬ ಮನ್ನಣೆ ದೊರಕಿಸುವಂತ ಕೃತಿ . ಗೌಡ ಸಮುದಾಯ ಮಾತಾಡುವಂತ ಅರೆಭಾಷೆ ಕನ್ನಡದ ಒಂದು ಸಾಮಾಜಿಕ ಉಪಭಾಷೆ ಎಂಬುದನ್ನು ವಿದ್ವಾಂಸರು ಈಗಾಗಲೆ ಖಚಿತಪಡಿಸಿದ್ದಾರೆ. ಈ ಭಾಷೆ ಮಾತಾಡುವರ ಸಂಸ್ಕೃತಿಯನ್ನು ಉಳಿಸುವುದೆಂದು ಹೇಳಿದರೆ ಭಾಷೆಯನ್ನು ಉಳ್ಸಿದಂತೆ. ಈ ನಿಟ್ಟಿನಲ್ಲಿ ಈ ಕೃತಿ ಮಹತ್ವವಾಗಿ ಕೊನೆವರೆಗೆ ಉಳಿದುಕೊಳ್ಳುತ್ತದೆ.
ಜಾನಪದದ ಕುರಿತು ಹೇಳುವುದಾದರೆ ಮನುಕುಲ ಪಡೆದ ಅನುಭವಗಳ ,ಕಲಿತ ಆಚರಣೆಗಳ ಒಟ್ಟು ಗ್ರಹಿಕೆ. ಲೇಖಕಿಯವರ ಆಸಕ್ತಿದಾಯಕ ಕ್ಷೇತ್ರವೆ ಜನಪದ ಕಾರ್ಯ ಆಗಿರುವಂತದ್ದು ,ಅವು ಜಾನಪದದ ಕುರಿತು ಬರೆದದ್ದನ್ನು ಓದುವಾಗ ನಮಗನಿಸುತ್ತದೆ ಮತ್ತು ಇಂತಹ ಮಹತ್ವದ ಕೃತಿ ಬರೆಯಲು ಪ್ರೇರಣೆಯು ಜನಪದವೆ ಎಂಬುದು ಸ್ಪಷ್ಟ ಆಗುತ್ತದೆ. ಕೃತಿನ ಉದ್ದೇಶ ಮತ್ತು ವ್ಯಾಪ್ತಿ ಅಧ್ಯಾಯದಲ್ಲಿ ಜನಪದದಷ್ಟು ವಿಶಾಲವು ವ್ಯಾಪಕವು ಆದ ಇನ್ನೊಂದು ಪದವಿ ಇಲ್ಲವೆಂದು ಕಾಣುತ್ತದೆ. ಹರಿಯ ಬಸಿರಲ್ಲಿ ಬ್ರಹ್ಮಾಂಡ ಅಡಗಿದ ಹಾಗೆ ಜನಪದದ ಕುಕ್ಷಿಯಲ್ಲಿ ಜಗತ್ತೆಲ್ಲ ಹುದುಗಿದೆ. ಜನಪದ ಆದಿ ಅಂತ್ಯ ಇಲ್ಲದೆ ಗುಪ್ತಗಾಮಿನಿಯಾಗಿ ಸಂಸ್ಕೃತಿಯೊಟ್ಟಿಗೆ ಹರಿದು ಬರುತ್ತಿದೆ. ಹಳೆಯ ತಲೆಮಾರು ತಾನು ಪರಂಪರೆಯಿಂದ ಪಡೆದ ಸಮಸ್ತ ಅನುಭವನ ಮುಂದಿನ ಪೀಳಿಗೆಗೆ ಧಾರೆ ಎರೆಯುವಲ್ಲಿ ಜೀವನದ ಎಲ್ಲ ಸ್ತರಗಳಲ್ಲಿ ಜಾನಪದ ಪ್ರತಿಫಲಿತ ಆಗುತ್ತದೆ. ಕಾಲ ಕಾಲದ ಜನಜೀವನ ಮತ್ತು ಸಂಸ್ಕೃತಿಯನ್ನು ಸರಿಯಾದ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಜಾನಪದ ಸಹಾಯ ಮಾಡುತ್ತದೆ. ಹೀಗಿರುವಾಗ ಒಟ್ಟಾರೆ ಜನಪದವೆಂದು ಹೇಳುವುದು ಮನುಷ್ಯನ ಸಾಂಸ್ಕೃತಿಕ ವಲಯಲಿ ಭಾರಿ ಮಹತ್ವದ ವಿಷ್ಯ. ಲೇಖಕಿಯವರ ದೀರ್ಘಕಾಲದ ಜಾನಪದ ಅಧ್ಯಯನವೆ ಇಂತಹದೊಂದು ಕೃತಿನ ಹುಟ್ಟಿಗೆ ಕಾರಣ ಅಂತ ಹೇಳಬಹುದು .ಜಾನಪದ ಲೋಕಲಿ ದಣಿವರಿಯದೆ ಅಡ್ಡಾಡ್ಡಿಕೊಂಡಿದ್ದರೆ ಅದು ಕೊಡುವ ಜ್ಞಾನ ಎಂಥ ಕೃತಯನ್ನು ಬರೆಸುವಂಥ ಶಕ್ತಿ ಕೊಡುತ್ತದೆ.
ಈ ಕೃತಿಯ ತುಂಬ ಅತ್ಯಮೂಲ್ಯವಾದ ಮಾಹಿತಿಗಳು ಸಿಗುತ್ತವೆ. ಆಚರಣೆನ ಹಿಂದೆನ ಚರ್ಚೆಗಳಿಗೆ ಇಲ್ಲಿ ಉತ್ತರ ಇದೆ. ನಮ್ಮ ಕಾಲದ ಅಗತ್ಯಗಳಿಗೆ ಅಗತ್ಯವಾದ ವಿಶ್ಲೇಷಣೆಗಳಿವೆ. ಯಾವುದೇ ವಿಚಾರಗಳ ಕುರಿತಾದರು ಅನಗತ್ಯ ಹೇರಿಕೆ ಇಲ್ಲಿಲ್ಲ . ಮಾಹಿತಿಗಳ ಕುರಿತಾದ ಅತಿರಂಜಿತ ವೈಭವೀಕರಣಕ್ಕೆ ಇಲ್ಲಿ ಆಸ್ಪದವಿಲ್ಲ.ಅರೆಭಾಷೆ ಗೌಡ ಸಮುದಾಯದವರಿಗೆ ಇದು ಅಪೂರ್ವವಾದ ಆಕರ ಗ್ರಂಥ. ಇದು ಒಂದು ಸಾಹಿತ್ಯ ಕೃತಿಯ ಹಾಗೆ ಓದುಗರನ್ನು ಸುಲಭವಾಗಿ ಹಿಡಿದಿಟ್ಟುಕೊಳ್ಳುತ್ತದೆ ಎಂಬುದರ ಅನುಭವ ನನಗಾಗಿದೆ. ಈ ಕೃತಿಯನ್ನು ಓದುವುದರಿಂದ ಅನೇಕ ಮೂಢನಂಬಿಕೆಗಳಂದಲು ಸುಲಭದಲ್ಲಿ ನಾವು ಪಾರಾಗಬಹುದು. ಯಾಕೆಂದರೆ ವಿಜ್ಞಾನ ಹೇಳುವ ಸತ್ಯವನ್ನು ಒಂದು ಚೌಕಟ್ಟಿನೊಳಗಿಟ್ಟು ವಿವರಿಸಿದ ರೀತಿ ಎಂತವರಿಗು ಅರ್ಥ ಆಗುತ್ತದೆ. ಒಟ್ಟಿನಲ್ಲಿವಿಸ್ತಾರದ ಕಾರ್ಯಕ್ಷೇತ್ರದಲ್ಲಿ ಕೊಡಗಿನ ಗೌಡ ಸಮುದಾಯದ ಸಾಂಸ್ಕೃತಿಕ ವಲಯದ ಒಳನೋಟವನ್ನು ಅತ್ಯಂತ ಪರಿಣಾಮಕಾರಿಯಾಗಿ ತೆರೆದಿಸಿದ ಲೇಖಕಿಯವರ ಶ್ರಮ ಸಾರ್ಥಕ.
– ಸಂಗೀತ ರವಿರಾಜ್ , ಚೆಂಬು
ಒಳ್ಳಯ ವಿಶ್ಲೇಷಣೆ ಸಂಗೀತ. ಉಪಯುಕ್ತ ಪುಸ್ತಕ ಬರೆದ ಕೋರನ ಸರಸ್ವತಿಯವರಿಗೂ ಅಭಿನಂದನೆಗಳು
ಇದರ ಪ್ರತಿ ಸಿಗುವ ಬಗೆ ಹೇಗೆ?
ನೈಸ್. ಕೊಡಗು ಸಂಸ್ಕೃತಿ , ಅವರ ಆಚಾರ ವಿಚಾರ ಟೋಟಲಿ ಡಿಫರೆಂಟ್ ಮತ್ತು ಆಕರ್ಷಕ .
ಧನ್ಯವಾಗಳು ಸುರಹೊನ್ನೆ