ಮಾತು ಮೌನವಾದಾಗ….
ಕಡಿಮೆ ಮಾತನಾಡಿ,ಮೆಲ್ಲಗೆ ಮಾತನಾಡಿ, ಯೋಚಿಸಿ ಮಾತನಾಡಿ, ಮಧುರವಾಗಿ ಮಾತನಾಡಿ, ಪ್ರೀತಿಯಿಂದ ಮಾತನಾಡಿ, ಗೌರವದಿಂದ ಮಾತನಾಡಿ. ಇದು ಮಾತಿನ ಬಗ್ಗೆ ಶ್ರೀ ಆರ್ಷ ಋಷಿಮುನಿಗಳು ನುಡಿದ ಬಿಂದುಗಳು. ಆದರೆ ಜನ ಸಾಮಾನ್ಯರು ಇದನ್ನು ಚಾ-ಚೂ ತಪ್ಪದೆ ಪಾಲಿಸುತ್ತಾರಾ?ಪಾಲಿಸುವುದಕ್ಕೆ ಆಗುತ್ತಾ? ಎಂದು ಕೇಳಿದರೆ ಇಲ್ಲ ಎನ್ನದೆ ವಿಧಿಯಿಲ್ಲ.ಕೆಲವು ವೇಳೆ ಹೇಳಬೇಕೆಂದಿದ್ದ ಮಾತು ಮೌನ ವಹಿಸುತ್ತದೆ.ಹಾಗೆಯೇ ಮೌನ ವಹಿಸಬೇಕಾದ ಸಂದರ್ಭದಲ್ಲಿ ಮಾತು ಬಿಗಡಾಯಿಸಿ ಬಿಡುತ್ತದೆ. ಇನ್ನು.., ಮಾತು ಮುರಿಯುವ ಸಂದರ್ಭವೂ ಇದೆ. ಮಾತನ್ನು ಅಲ್ಲಗಳೆಯುವಿಕೆಗೆ ಮಾತು ಮುರಿಯುವುದು ಎನ್ನುತ್ತಾರೆ. ಅದು ಮಾತ್ರ ಇಬ್ಬರ ನಡುವೆ ಒಮ್ಮೆ ಬಿಗಡಾಯಿಸಿ ಮತ್ತೆ ಶೀತಲ ಯುದ್ಧಕ್ಕೆಡೆ ಮಾಡುವ ಕ್ಷಣ.
ಗಂಡ-ಹೆಂಡಿರ ಜಗಳದಲ್ಲಿ, ಅಪ್ಪ-ಮಕ್ಕಳ ವಾಗ್ವಾದದಲ್ಲಿ, ಮಾತು ಮೌನ ವಹಿಸಿದರೆ ಲೇಸು.ಇಂತಹ ಸಂದರ್ಭದಲ್ಲಿ ಜಾಗ್ರತೆ ವಹಿಸಿದರೆ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ.ಇಲ್ಲದೆ ಹೋದರೆ ಪುಟ್ಟ ಮಕ್ಕಳಿದ್ದಲ್ಲಿ ಅವುಗಳ ಮೇಲೆ ದುಷ್ಪರಿಣಾಮ ಆಗಿಯೇ ಆಗುತ್ತದೆ.
ಆತ್ಮೀಯರಲ್ಲೂ ಸಹ ಕೆಲವು ವೇಳೆ ಅಸಮಾಧಾನ ಏರ್ಪಟ್ಟು ಒಳಗೊಳಗೇ ಕತ್ತಿ ಮಸೆಯುವಂತಾಗುತ್ತದೆ.ಇಂತಹ ವೇಳೆ ಮೌನ ಮುರಿದು ಮೊದಲಿನ ಸ್ಥಿತಿಗೆ ಬರಲು ಹವಣಿಸುವುದು ಲೇಸು. ಒಳಗಿನ ಚಿಕ್ಕ-ಪುಟ್ಟ ಜಿದ್ದು ಹೊರಗೆ ತೋರ್ಪಡಿಸದೆ; ಅನ್ಯರಿಗೆ ಇವರು ಅದೆಷ್ಟು ಆತ್ಮೀಯರೆಂದು ಹುಬ್ಬೇರಿಸುವ ಸನ್ನಿವೇಶವೂ ಇಲ್ಲದಿಲ್ಲ. ಅನ್ಯೋನ್ಯತೆಯ ಒಂದು ಜೋಡಿ ದಂಪತಿಗಳಿದ್ದರು. ಯಾರಾದರೂ ಅತಿಥಿಗಳೋ ಆತ್ಮೀಯರೋ ಆಗಮಿಸಿದಲ್ಲಿ ಅವರ ಪರಸ್ಪರ ಸಂಭಾಷಣೆ; ಗಂಡ, ಹೆಂಡತಿಯನ್ನು ಹೊಗಳುವುದು, ಹೆಂಡತಿ, ಗಂಡನನ್ನು ಹೊಗಳುವುದು ಇದೇ ಪರಿಪಾಠ!. ಆಗಂತುಕರಿಗೆ ಪತಿ-ಪತ್ನಿಯೆಂದರೆ ಹೀಗಿರಬೇಕು! ಅನ್ನಿಸಿದರೆ ಅತಿಶಯೋಕ್ತಿಯಲ್ಲ.ಬಂದವರು ನಿರ್ಗಮಿಸಿದ ತಕ್ಷಣ ಇವರ ಜಗಳ!. ಹಿಂದೆ ಬಾಕಿಯಾದ್ದಕ್ಕೆಲ್ಲ ಬಡ್ಡಿಯನ್ನೂ ಸೇರಿಸಿ ಸಂದಾಯ!!.
ನಮ್ಮೂರಲ್ಲಿ ಒಬ್ರು ಗಂಡ-ಹೆಂಡತಿ,ಹಗಲಲ್ಲಿ ಅತ್ರಿ-ಅನಸೂಯರನ್ನು ಮೀರಿಸುವ ತರ. ಮುಸ್ಸಂಜೆ ಆಯ್ತೆಂದರೆ ಹಾವು ಮುಂಗುಸಿಗಳು ಸೋತು ಹೋಗಬೇಕು!. ರಾತ್ರಿಯಾಯ್ತೆಂದ್ರೆ ವಾಪಾಸು ಗಂಡ-ಹೆಂಡತಿ ಬಾಳ್ವೆ!!.
ಇನ್ನೊಂದು ಉದಾಹರಣೆ ಹೇಳುವುದಿದ್ದರೆ; ಮಾತನಾಡಬೇಕಾದಲ್ಲಿ ಮೌನವೇ ಮಾತಾಗುವುದು. ಮಕ್ಕಳನ್ನು ಗದರಿಸುವ ಸಂದರ್ಭದಲ್ಲಿ, ಕೂಲಿಯಾಳುಗಳನ್ನು ತರಾಟೆ ಮಾಡುವಲ್ಲಿ, ಇದು ಹೆಚ್ಚು ಪ್ರಯೋಜನಕಾರಿ!. ಆದರೆ ಕಂಗಳ ಸ್ಪಂದನೆಯೊಂದಿಗೆ, ಮುಖ, ಹೌದೋ ಅಲ್ಲವೋ ಎಂಬಂತೆ ಸ್ಪಂದಿಸಿ ಆ ರೀತಿ ಕೆಲಸ ಮಾಡಬೇಕಾಗುವುದು ಅವಶ್ಯ. ಹಾಗೆಯೇ ಚಿಂತೆ, ದುಖಃಗಳು ಮೌನದಲ್ಲಿ ಮಾತಾಡುತ್ತವೆ.ಇದು ಆರೋಗ್ಯಕ್ಕೆ ಮಾರಕ!. ಸ್ವತಃ ಸುಖ –ಸಂತೋಷಗಳ ಮೌನಮಾತು,ದೇಹದ ಆರೋಗ್ಯಕ್ಕೂ ಸತ್ಪರಿಣಾಮ ಎಂಬುದೂ ಸತ್ಯ!.
– ವಿಜಯಾ ಸುಬ್ರಹ್ಮಣ್ಯ. ಕುಂಬಳೆ
Nice. ಒಳ್ಳೆಯ ಮಾತಿನಿಂದ ಮನಸುಗಳನ್ನು ಗೆಲ್ಲಬಹುದು . ಹಾಗೆಯೇ ನೇರ ಮಾತಿನಿಂದ ನಿಷ್ಟೂರವಾದಿಗಳು ಅನ್ನಿಸಿಕೊಳ್ಳುತ್ತೇವೆ . ಆದರೆ ಹೇಳಬೇಕಾದ್ದನ್ನು ನೇರವಾಗಿ ಹೇಳುವುದರಿಂದ ಅದನ್ನು ತೆಗೆದು ಕೊಳ್ಳುವವರು ಹೇಗೆ ತಗೊಂಡ್ರೂ ಹೇಳುವವರ ಮನಸ್ಸು ನಿರಾಳವಾಗಿರುತ್ತದೆ .
ನಯನಾ ಬಜಕ್ಕೂಡ್ಳು
ಧನ್ಯವಾದ
ನಿಜ..ನುಡಿದರೆ ಮುತ್ತಿನ ಹಾರದಂತಿರಬೇಕು. ಮಾತಿನಿಂ ನಡೆನುಡಿಯು..ಮಾತಿನಿಂ ಹಗೆಕಳೆಯು ..ಹೀಗೆ ಮಾತು/ಮೌನಗಳ ಮಹತ್ವವನ್ನು ನಾವು ಅರಿಯಬೇಕು .ಚೆಂದದ ಬರಹ.
ಸಾರ್ವಕಾಲಿಕ ಸತ್ಯದ ಬರಹ ಚೆನ್ನಾಗಿ ಮೂಡಿ ಬಂದಿದೆ ವಿಜಯಕ್ಕ.