ಟಿವಿ ಮದುವೆಗಳು
ಟಿವಿ ಧಾರಾವಾಹಿಯಲ್ಲಿ ಮದುವೆಗಳನ್ನು ಹೆಚ್ಚು ಹೆಚ್ಚಾಗಿ ಮಾಡುತ್ತಿರುವುದು ಇತ್ತೀಚೆಗಿನ ದಿನಗಳಲ್ಲಿ ಎಲ್ಲಾ ಧಾರಾವಾಹಿಗಳಲ್ಲೂ ಕಂಡು ಬರುತ್ತಿದೆ . ನಿಜ ಮದುವೆಗಳಂತೆಯೇ ಅದ್ದೂರಿಯಿಂದ ಮಾಡುತ್ತಿರುವುದನ್ನು ನೋಡುತ್ತಿದ್ದೆವೆ. ಆದರೆ ಒಂದು ವಿಪರ್ಯಾಸದ ಸಂಗತಿ ಅಂದರೆ ಈ ಮದುವೆಗಳು ನಡೆಯುವುದಕ್ಕೆ ಮುಂಚೆ ಗಂಡು ಮತ್ತು ವಅವರ ಕಡೆಯವರು ಹೆಣ್ಣು ನೋಡಲು ಬರಬೇಕಲ್ಲವೇ. ಅದೆ ರೀತಿ ಧಾರಾವಾಹಿಗಳಲ್ಲೂ ಗಂಡಿನವರು ಹೆಣ್ಣು ನೋಡಲು ಬರುತ್ತಾರೆ.ಹುಡುಗಿ ಇಷ್ಟವಾದರೆ ಮದುವೆಯ ದಿನಾಂಕವನ್ನು ಆವತ್ತೆ ನಿಶ್ಚಯ ಮಾಡಿ ಮದುವೆಯನ್ನು ಮಾಡಿ ಬಿಡುವುದು ಸೋಜಿಗದ ವಿಷಯವಾಗಿದೆ.ಗಂಡು ಮತ್ತು ಅವರ ಮನೆಯವರು ಒಪ್ಪಿಗೆ ಕೊಟ್ಟ ಕ್ಷಣ ಹಿಗ್ಗಿ ಹೀರೇಕಾಯಿ ಆಗಿ ಹೆಣ್ಣಿನ ಕಡೆಯವರು ಮದುವೆ ತಯಾರಿ ನಡೆಸಿ ಕೆಲ ದಿನಗಳಲ್ಲಿಯೇ ಮದುವೆಯನ್ನು ಮಾಡಿ ಬಿಡುತ್ತಾರೆ. ಗಂಡಿನವರು ಯಾರು ?ಎಂತವರು ?ಅವರು ಹೇಳುತ್ತಿರುವುದು ಸತ್ಯವೇ ?ಎನ್ನುವುದನ್ನುವಿಚಾರಿಸದೆ ಗಂಡಿನ ಮನೆಯನ್ನು ,ಅವರ ನಡೆ ನುಡಿಯನ್ನು ಪರಿಶೀಲಿಸದೆ , ತಮ್ಮ ಮಗಳನ್ನು ಮದುವೆ ಮಾಡಿ ಬಿಡುತ್ತಾರೆ ಎಂಬ ನಿರ್ದೇಶಕರ ಮನಸ್ಥಿತಿ ಬಗ್ಗೆ ಏನು ಹೇಳಬೇಕೋ.
ಮದುವೆಗೂ ಮುನ್ನ ಆದೆಷ್ಟು ಸಂಪ್ರದಾಯಗಳು ನಡೆಯ ಬೇಕು.ಅವೆಲ್ಲಾ ಮುಗಿದ ಮೇಲೆ ತಾನೆ ಮದುವೆ. ಟಿವಿ ಧಾರಾವಾಹಿಗಳ ತರಾ ಮದುವೆ ನಡೆದು ಬಿಟ್ಟರೆ ನಮ್ಮ ಹೆಣ್ಣು ಮಕ್ಕಳ ಕಥೆ ಏನು. ಎಲ್ಲರ ಬದುಕಿನಲ್ಲೂ ಮದುವೆಗೆ ವಿಶೇಷ ಮಹತ್ವವಿದೆ.ವಿವಾಹ ನಿಶ್ಚಯಕ್ಕೂ ಮುನ್ನ ನಡೆಯುವ ಕೆಲವೊಂದು ಕಾರ್ಯಕ್ರಮಗಳಲ್ಲಿ ಹೆಣ್ಣು ನೋಡುವ ಶಾಸ್ತ್ರ ಪ್ರಮುಖ ಸ್ಥಾನವನ್ನು ಪಡೆದಿದೆ ಅಂತನೇ ಹೇಳ ಬಹುದು.ಹಿಂದೆ ಹೆಣ್ಣು ಮದುವೆ ವಯಸ್ಸಿಗೆ ಬಂದಿದ್ದಾಳೆ ಅಂತ ತಿಳಿದು ಬಂದರೆ ಸಾಕು, ಗಂಡಿನವರು ಹೆಣ್ಣು ನೋಡಲು ಬಂದು ಬಿಡುತ್ತಿದ್ದರು. ಒಪ್ಪಿಗೆಯಾದರೆ ನಂತರ ವರಸಾಮ್ಯ, ಆಸ್ತಿ, ಅಂತಸ್ತು , ಜಾತಕ ಹೀಗೆ ನೋಡುವ ಪರಿಪಾಠವಿತ್ತು.
ಆದರೆ ಈಗ ಹಾಗಲ್ಲ. ಮೊದಲು ವಾಟ್ಸಾಪ್ ನಲ್ಲಿ ಫೋಟೋಗಳ, ಬಯೋಡೆಟಾಗಳ ವಿನಿಮಯ, ಜಾತಕಗಳ ಪರಿಶೀಲನೆ ಯಾಗುತ್ತದೆ.ಅಲ್ಲಿ ಪರಸ್ಪರ ಒಪ್ಪಿಗೆಯಾದರೆ ಜಾತಕ ಹೊಂದಾಣಿಕೆಯಾದರೆ ಮಾತ್ರ ಹೆಣ್ಣು ನೋಡುವ ಶಾಸ್ತ್ರ. ಇದು ಮೊದಲ ಹಂತ.ಹುಡುಗ ಅವನ ತಾಯಿ ,ತಂದೆ ಸಹೋದರ ಸಹೋದರಿ ಇದ್ದರೆ ಅವರು ಹೀಗೆ ಮನೆಯವರು ಸೇರಿ ಕೊಂಡು ಹುಡುಗಿ ನೋಡಲು ಹುಡುಗಿಯ ಮನೆಗೆ ಬರುತ್ತಾರೆ. ಕೆಲ ಕಡೆ ಗಂಡಿನ ಮನೆಗೇ ಹುಡುಗಿಯನ್ನು ಕರೆದು ಕೊಂಡು ಹೋಗುವ ಪರಿಪಾಟವಿದೆ.ಅಲ್ಲಿ ಹುಡುಗಿ ಹುಡುಗನಿಗೆ ಮತ್ತು ಹುಡುಗ ಹುಡುಗಿಗೆ ಇಷ್ಟವಾದರೆ ಗಂಡಿನ ಕಡೆಯವರು ನಮ್ಮ ಮನೆಗೆ ಬನ್ನಿ ಅಂತ ಹೆಣ್ಣಿನ ಕಡೆಯವರಿಗೆ ಆಹ್ವಾನ ನೀಡುತ್ತಾರೆ.ಮೊದಲ ನೋಟಕ್ಕೆ ಈ ಸಂಬಂಧ ಆಗಬಹುದು ಅಂತ ಹುಡುಗಿ ಮನೆಯವರಿಗೆ ಅನ್ನಿಸಿದ್ರೆ ತಮ್ಮವರನ್ನು ಕರೆದು ಕೊಂಡು ಹುಡುಗನ ಮನೆಯವರ ಆಹ್ವಾನವನ್ನು ಮನ್ನಿಸಿ ಹುಡುಗನ ಮನೆಗೆ , ಮನೆ ನೋಡುವ ಶಾಸ್ತ್ರಕ್ಕೆ ತೆರಳುತ್ತಾರೆ.ಹುಡುಗಿಯನ್ನು ಬಿಟ್ಟು ಅಪ್ಪ, ಅಮ್ಮ ಅವರ ಸಹೋದರ, ಸಹೋದರಿಯೊಂದಿಗೆ ಹಿರಿಯರಿದ್ದರೇ ಅವರನ್ನು ಒಳಗೊಂಡು ಒಂದಷ್ಟು ಜನ ಗಂಡಿನ ಮನೆಗೆ ಭೇಟಿ ನೀಡಿ ಸೂಕ್ಷ್ಮವಾಗಿ ಅಲ್ಲಿನ ಒಳ ಹೊರಗನ್ನು ಪರಿಶೀಲಿಸುತ್ತಾರೆ. ಸಾಧ್ಯವಾದರೆ ಹುಡುಗನ ಬಗ್ಗೆ ,ಅವರ ಮನೆತನದ ಬಗ್ಗೆ ,ಅಕ್ಕ ಪಕ್ಕ ಗುಟ್ಟಾಗಿ ವಿಚಾರಿಸಿಕೊಳ್ಳಲು ತಮ್ಮವರಲ್ಲೊಬ್ಬರನ್ನು ಮೊದಲೆ ಸಿದ್ಧ ಮಾಡಿರುತ್ತಾರೆ.ಅವರು ಮನೆ ನೋಡುವಂತೆಯೊ, ಕುಳಿತು ಬೇಸರವಾಗಿ ಎದ್ದು ಹೊರ ಹೋಗುವಂತೆ ಹೋಗಿ, ಅಕ್ಕ ಪಕ್ಕದವರನ್ನು ವಿಚಾರಿಸಿ ಕೊಂಡು ಬರುತ್ತಾರೆ. ಅವರ ಪತ್ತೆದಾರಿಕೆಯಿಂದ ಆಗಬಹುದು ಅನಿಸಿದರೆ ಮತ್ತು ಗಂಡಿನ ಮನೆಯವರ ಆದರ ಉಪಚಾರಗಳಿಂದ ಸಮಾಧಾನ ಹೊಂದಿದರೆ ಮುಂದಿನ ಮಾತುಕತೆಗೆ ಕರೆ ನೀಡುತ್ತಾರೆ. ಅಲ್ಲಿಗೆ ಮದುವೆ ನಿಶ್ಚಯವಾದ ಹಾಗೆ ಅಂತನೂ ಭಾವಿಸುವಂತಿಲ್ಲ.
ಅಲ್ಲಿಂದ ಮುಂದಕ್ಕೆ ಪ್ರಮುಖವಾದ ಘಟ್ಟ ಮದುವೆ ಮಾತುಕಥೆ.ಇಲ್ಲಿ ಮದುವೆ ಮುರಿದು ಹೋದರೂ ಹೋಗಬಹುದು. ನಿಶ್ಚಯಏನಾದರೂ ಆಗಬಹುದು.ಎರಡು ಕಡೆಯವರು ಹಿರಿಯರು ಸಂಬಂಧಿಗಳು ಮಾತಿಗೆ ಕುಳಿತು ಕೊಳ್ಳುತ್ತಾರೆ. ವರದಕ್ಷಿಣೆ, ವರೋಪಚಾರ ಅಪರಾಧ ಅಂತ ತಿಳಿದಿದ್ದರೂ ಅದೆ ವಿಚಾರ ಮಾತುಕತೆಯಲ್ಲಿ ಪ್ರಮುಖ ವಿಷಯಗಳಾಗಿರುತ್ತವೆ .ಅಲ್ಲೊಂದಷ್ಟು ಜಗ್ಗಾಟ ನಡೆಯುತ್ತದೆ.ಗಂಡಿನ ಅಪ್ಪ ಮತ್ತು ಹೆಣ್ಣಿನ ಅಪ್ಪ ಇವರ್ಯಾರು ಮಾತಾಡದೆ ಮೂರನೆಯವರು ಮಾತು ಶುರುಮಾಡುತ್ತಾರೆ.ಇಬ್ಬರ ಕಡೆಯವರಿಗೂ ಮೊದಲೆ ಸೂಚನೆ ನೀಡಲಾಗಿರುತ್ತದೆ. ಆ ಪ್ರಕಾರ ತಮಗೆ ಯಾವುದೇ ರೀತಿಯಾ ಲಾಭ ನಷ್ಟ ಆಗದೆ ಹೋದರೂ ಮುಖ್ಯಸ್ಥರು ಪಟ್ಟ ಗಿಟ್ಟಿಸಿಕೊಂಡಿದ್ದರಿಂದ ಆ ಸ್ಥಾನಕ್ಕೆ ತಕ್ಕ ಹಾಗೆ ಗತ್ತು ಗೈರತ್ತಿನಿಂದೇ ಇರುತ್ತಾರೆ. ನಿರೀಕ್ಷೆಗಿಂತ ಸ್ವಲ್ಪ ಜಾಸ್ತಿನೇ ಗಂಡಿನ ಕಡೆಯ ಮುಖ್ಯಸ್ಥ ಬೇಡಿಕೆ ಇಡುತ್ತಾರೆ, ತಮಗೇ ಅದೆಲ್ಲಾ ಸಿಗುತ್ತದೆ ಏನೋ ಎಂಬಂತೆ. ತಾವೇ ಕೈಯಾರೆ ಕೊಡುವ ಹಾಗೆ ಹೆಣ್ಣಿನ ಕಡೆಯ ಮುಖ್ಯಸ್ಥ ಅಷ್ಟು ಕೊಡಲು ಸಾಧ್ಯವೇ ಇಲ್ಲ ಅಂತ ಪಟ್ಟು ಹಿಡಿಯುತ್ತಾರೆ.
ಇಬ್ಬರ ನಡುವೆಯೂ ಒಂದಷ್ಟು ಎಳೆದಾಟ ಜಗ್ಗಾಟ ನಡೆದು ಅವರು ಸ್ವಲ್ಪ ತಮ್ಮ ಬೇಡಿಕೆಯನ್ನು ಇಳಿಸಿದರೆ ಇವರು ಸ್ವಲ್ಪ ಏರಿಸಿಕೊಂಡು ಒಟ್ಟಾರೆ ಒಂದು ಒಪ್ಪಂದಕ್ಕೆ ಬರುತ್ತಾರೆ. ಮುಂದೆ ನಿಶ್ಚಿತಾರ್ಥ, ಮದುವೆಯ ದಿನದ ಛತ್ರದ ಮತ್ತು ಊಟದ ಮಾತುಕಥೆ ಇವೆಲ್ಲವೂ ಎರಡೂ ಕಡೆಯವರಿಗೂ ಸಮಾಧಾನವಾಗದೆ ಮಾತುಕಥೆ ಮುಗಿಯುವಂತಿಲ್ಲ. ಆನಂತರವೆ ಮದುವೆ ಗಟ್ಟಿ ಯಾದಂತೆ. ಸಮಾಧಾನವಾಗದಿದ್ದಲ್ಲಿ ಮಾತುಕಥೆ ಮುರಿದು ಬಿದ್ದು ಬಂದ ದಾರಿಗೆ ಸುಂಕವಿಲ್ಲದಂತೆ ಗಂಡಿನ ಕಡೆಯವರು ಬಂದ ದಾರಿ ಹಿಡಿಯುವರು. ಸಮಾಧಾನವಾದರೆ ಎಲೆಡಿಕೆಯ ತಾಂಬೂಲ ತಟ್ಟೆಗಳನ್ನು ಬದಲಾಯಿಸಿ ಕೊಂಡು ಹಬ್ಬದಡಿಗೆ ಉಂಡು ನಿಶ್ಚಿತಾರ್ಥದ ದಿನ ಬರುವೆವು ಎಂದು ತಿಳಿಸಿ ವಿದಾಯ ಹೇಳುವರು. ಅಲ್ಲಿಗೆ ಒಂದು ಘಟ್ಟ ಮುಗಿದಂತೆ. ಇಷ್ಟೇಲ್ಲ ಕಾರ್ಯಗಳು ಮುಗಿದ ನಂತರವೇ ಮದುವೆ. ಮದುವೆಯೆಂದರೆ ಸುಲಭದ ಮಾತಲ್ಲ.ಒಂದು ಮದುವೆ ಮಾಡಿ ಬೇಕಾದ್ರೆ ಏಳು ಕೆರೆ ನೀರು ಕುಡಿಯುವರು ಬೇಕಂತೆ.ಅದೆಷ್ಟೋ ಜೊತೆ ಚಪ್ಪಲಿ ಸವೆಸಿ ಬೇಕು ಅಂತ ಹಿರಿಯರು ಈಗಲೂ ಹೇಳುತ್ತಿರುತ್ತಾರೆ. ಟಿವಿ ಧಾರಾವಾಹಿಗಳಂತೆ ಮದುವೆಮಾಡಲಾದೀತೆ.
-ಎನ್. ಶೈಲಜಾ ಹಾಸನ
Well said madam . ಈಗಿನ ಕಾಲದಲ್ಲಿ ಹೆಣ್ಣು ಮಕ್ಕಳೇ ಮದುವೆಗೆ ಒಪ್ಪೋದಿಲ್ಲ ಇನ್ನು ಎಳೆದಾಟ , ಜಗ್ಗಾಟದ ಪ್ರಶ್ನೆ ಎಲ್ಲಿರುತ್ತೆ . ಮದುವೆ ಅನ್ನೋ ಸಂಪ್ರದಾಯದ ಒಂದು ಬಹಳ ಮುಖ್ಯ ಭಾಗದ ಮಹತ್ವವನ್ನು ನೀವು ವಿವರಿಸಿದ್ದೀರಿ .
ಹೌದು..ನಮ್ಮ ಮದುವೆ ಕಾಲದಲ್ಲಿ ಹೀಗಿತ್ತು. ನಯನಾ ಅವರು ಹೇಳಿದಂತೆ, ಈಗ ಹುಡುಗರೇ ಕಾಯಬೇಕು ಹುಡುಗಿ ಒಪ್ಪಿಗೆ ಸಿಗಲು.
ಲೇಖನ ಚೆನ್ನಾಗಿದೆ.