ಅಪಾಂಥೀಯತೆಯ ಹೊಸ ದರ್ಶನ ರಾಗಂ ಅವರ ‘ಜಾಡಮಾಲಿ…’
‘ಜಾಡಮಾಲಿಯ ಜೀವ ಕೇಳುವುದಿಲ್ಲ’ ರಾಗಂ ಅವರ ವಿನೂತನ ಪ್ರಯೋಗ. ವಿಸ್ತಾರದ ಓದುಳ್ಳ ‘ರಾಗಂ’ ತರಹದವರು ಮಾತ್ರ ಮಾಡಬಹುದಾದ ಸಾಹಸವಿದು. ವಿಶ್ವದಾದ್ಯಂತ ಕವಿ ಮನಸ್ಸುಗಳು ಒಂದೇ ರೀತಿಯ ತರಂಗಾಂತರದಲ್ಲಿ ಸ್ಪಂದಿಸುತ್ತಿರುತ್ತವೆ ಎನ್ನುವುದಕ್ಕೆ ಪ್ರಸ್ತುತ ಕೃತಿ ಸಾಕ್ಷಿಯಾಗಿದೆ. ಕವಿಯ ದೇಶ ಭಾರತವಾಗಿರಬಹುದು, ಇರಾನ್,ಇರಾಕ್, ಅಲ್ಬೇನಿಯಾ, ಥಾಯ್ ಲ್ಯಾಂಡ್, ಫ್ರಾನ್ಸ್, ಪಾಕಿಸ್ತಾನ, ಇಂಗ್ಲಂಡ್, ಲ್ಯಾಟಿನ್ ಅಮೇರಿಕಾ, ಚೀನಾ, ರಷಿಯಾ ಯಾವುದೇ ಆಗಿರಬಹುದು ಅವರ ಅಂತಃಕರಣದ ಝರಿ ಖಂಡಾಂತರವಾಗಿ ಹರಿಯುತ್ತಲೇ ಇರುತ್ತದೆ ಎನ್ನುವ ರಾಗಂ ಅವರ ಗ್ರಹಿಕೆ ಈ ಕೃತಿ ರಚನೆಯ ಹಿಂದೆ ಕೆಲಸ ಮಾಡಿದೆ.
ಇಂದು ಕಾವ್ಯವೆನ್ನುವು ಪಂಥ, ಪಂಗಡ, ಸಿದ್ಧಾಂತಗಳ ಕಳ್ಳಹುದುಲಿನಲ್ಲಿ ಸಿಲುಕಿಕೊಂಡು ಒದ್ದಾಡುತ್ತಿರವಾಗ, ವಿಮರ್ಶಕರು ಕಾವ್ಯದ ಕೊರಳಿಗೆ ಸಾಂದರ್ಭಿಕತೆಯ ನುಲಿಕೆಕಟ್ಟಿ ಎಳೆದಾಡುತ್ತಿರುವಾಗ ಕಾವ್ಯದ ಹಂಗು ಮೀರುವಿಕೆಯ ಹಾಗೂ ಹದ್ದುಮೀರುವಿಕೆಯ ಸಹಜ ಸ್ವಾತಂತ್ರ್ಯದ ಶಕ್ತಿಯನ್ನು ರಾಗಂ ಅಪ್ತವಾಗಿ ಈ ವಿನೂತನ ಪ್ರಯೋಗದ ಮೂಲಕ ದರ್ಶಿಸುತ್ತಾರೆ. ಕಾವ್ಯದ ನಿಜವಾದ ಆತ್ಮ ಅಡಗಿರುವುದು ಅದರ ಅಪಾಂಥೀಯತೆಯಲ್ಲಿ ಎನ್ನುವ ಹೊಸ ದರ್ಶನವನ್ನು ‘ಜಾಡಮಾಲಿ….’ ನೀಡುತ್ತದೆ.
ಈ ಕೃತಿಯಲ್ಲಿ ವಿಮರ್ಶೆಯು ತನ್ನ ಬಿಗುಮಾನವನ್ನು ಬಿಟ್ಟು ಮುಕ್ತ ಮನಸ್ಸಿನ ತೆಕ್ಕೆಯಲ್ಲಿ ಕಾವ್ಯವನ್ನು ಹಿಡಿದು ಅನುಸಂಧಾನಕ್ಕೆ ತೆರೆದುಕೊಳ್ಳುವ ಹೊಸಮಾದರಿಯನ್ನು ಕಾಣುತ್ತೇವೆ.
ಇಂದು ಧರ್ಮವೆನ್ನುವುದು ರಾಜಕೀಯ ಅಡ್ಡೆಯಲ್ಲಿ ಲಜ್ಜೆತೊರೆದು ಬಿಕರಿಗಿಟ್ಟಕೊಂಡ ಸರಕಾಗಿರುವಾಗ ‘ಜಾಡಮಾಲಿ . . .’ ಕೃತಿಯು ಇಂಥ ವಿಕೃತಿಯನ್ನು ಜಾಲಾಡುವ ಕೆಲಸ ಮಾಡುತ್ತಿದೆ.
ಮನುಷ್ಯನ ಎದೆಯಿಂದ ಎದೆಗೆ ಅದಿಮರೂಪದಲ್ಲಿ ಹರಿದಾಡುವ ಪ್ರೀತಿಗಿಂತ ಹಿರಿದಾದ ಧರ್ಮ ಯಾವುದೂ ಇಲ್ಲ ಎನ್ನುವ ಸತ್ಯ ಇಲ್ಲಿನ ಕವಿತೆಗಳಲ್ಲಿ ಚಂದಿರನ ಬೆಳಕಿನ ಹಾಗೆ ಓದುಗನ ಎದೆಯಗೂಡಿನಲ್ಲಿ ಇಳಿಯುತ್ತಲೇ ಹೋಗುತ್ತದೆ. ಒಳಹೊಕ್ಕ ಬೆಳಕು ನಮ್ಮೊಳಗಿನ ಮಾಲಿನ್ಯವನ್ನು ವಿರೇಚನಗೊಳಿಸುತ್ತಲೇ ಇರುತ್ತದೆ. ಹಾಗೇ, ಇಲ್ಲಿನ ಕವಿತೆಗಳು ನಮ್ಮನ್ನು ಮತ್ತೆ ಮತ್ತೆ ಮನುಷ್ಯತ್ವದ ಪಾಜಗಟ್ಟೆಗೆ ತಂದು ನಿಲ್ಲಿಸುತ್ತವೆ.
ದೇಶ ಭಾಷೆ ಧರ್ಮ ಪಂಥಗಳ ಆಚೀಚೆ ಸಹಜವಾಗಿ ಲಾಳಿಯಾಡುವ ಇಲ್ಲಿನ ಕವಿತೆಗಳು ಹಲವು ಎಳೆಗಳನ್ನು ಸೇರಿಸಿ ಚೆಂದ ಚಿತ್ತಾರದ ನೇಯ್ಗೆ ಮಾಡುತ್ತವೆ. ಇಲ್ಲಿನ ಕವಿತೆಗಳನ್ನು ಓದುತ್ತಿದ್ದಂತೆ ಕಾವ್ಯ ಎಂದಿಗೂ ಛೇದಿಸುವ ಖಡ್ಗವಲ್ಲ ಎನ್ನಿಸುತ್ತದೆ. ಅದೇನಿದ್ದರೂ ಓದುಗನ ಎದೆ ಭೇದಿಸಿ ಅಂತಃಕರಣದ ಬೀಜವೂರುವ ಕೂರಿಗೆ ತಾಳು ಎನ್ನಿಸುತ್ತದೆ. ಇಲ್ಲಿನ ಕವಿತೆಗಳ ಸಾಲು ಓಣಿಗಳಲ್ಲಿ ರಕ್ತದ ಘಾಟು ವಾಸನೆ ಹೊಡೆಯುವುದಿಲ್ಲ; ಪ್ರೀತಿ ಮಮತೆಯ ಗಂಧ ತೀಡುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿನ ಕವಿಗಳು ಜೀವಕಾರುಣ್ಯದ ತೇರು ಎಳೆಯಲು ಬೇರೆ ಬೇರೆ ಕಾಲದೇಶದಿಂದ ಸಾಗಿ ಬಂದ ಸಮೂಹದ ಹಾಗೆ ತೋರುತ್ತಾರೆ.
‘ಅಸಹನೆ ಇರುಳುಗಣ್ಣಿನ ರೋಗ, ದೇವರನ್ನು ಪ್ರೀತಿಸುವವರು/ಅಸಹಿಷ್ಣುಗಳಾಗಿರಲು ಸಾಧ್ಯವಿಲ್ಲ’ ಎನ್ನುತ್ತಾನೆ ಜಲಾಲುದ್ದೀನ ರೂಮಿಯ ಶಿಷ್ಯ ತಬ್ರೀಝಿ. ‘ನನ್ನ ಖಡ್ಗದ ತುದಿಯ ಮೇಲೆ ಕುಳಿತು/ ನೆತ್ತರು ಕುಡಿಯಲು ಬರುತ್ತಿರುವ ನನ್ನ ಪ್ರೀತಿಯೇ/ ನೀನು ಯಾವ ರೂಪದಲ್ಲಿ ಬಂದರೂ ಸ್ವಾಗತವೆ’ ಎನ್ನುತ್ತಾನೆ ಪರ್ಶಿಯನ್ ಭಾಷೆಯಲ್ಲಿ ರುಬಾಯಿ ಬರೆದ ಸರ್ಮದ್. ‘ನನಗೆ ತಿಳಿಯದು ನಾನಾರೆಂದು/ ನಾನು ಮುಸ್ಲಿಮನಲ್ಲ/ ಕಿರಿಸ್ತಾನ, ಹಿಂದು/ ಜರತೃಷ್ಟನೂ ಅಲ್ಲ’ ಎನ್ನುತ್ತಾನೆ ಮೊಘಲ್ ದೊರೆ ದಾರಾಶಿಕೊ. ಥಾಯ್ ಲ್ಯಾಂಡಿನ ಕ್ರಾಂತಕಾರಿ ಕವಿ ಕುಂತೀ ‘ಗೊತ್ತಿರಲಿ ನಾಯಕರೆ/ ಬೂಟಿನ ಹಿಂಬದಿಯ ಹಿಡಿ ಮಣ್ಣಿನಲ್ಲಿ/ ನನ್ನ ಕ್ರಾಂತಿಯ ಕನಸರಳುತ್ತದೆ’ ಎಂದು ಹೇಳುತ್ತಾನೆ. ಕ್ರಾಂತಿಯ ಫೀನಿಕ್ಸ್ ಗುಣ ಓದುಗನ ಎದೆಯಲ್ಲಿ ಚಿರಕಾಲ ಉಳಿಯುವ ಹಾಗೆ ಮಾಡುತ್ತಾನೆ. ಪಾಕಿಸ್ತಾನದ ಮಹಾ ವಿದ್ರೋಹಿ ಕವಿ ಬುಲ್ಲೇಷಾ ‘ಮಸೀದೆ-ಮಂದಿರಗಳ ಕರೆಗೆ/ ಓಡುವ ಹುಚ್ಚು ಮನವೆ/ ನಿನ್ನೆದೆಯ ದೇಗುಲವನೆಂದಾದರೂ/ ಹೊಕ್ಕೆಯೇನು?/ ಇಲ್ಲಿ ಕಾಣದ ದೇವರು/ ನಿನಗೆಂದಾದರೂ ಅಲ್ಲಿ ಕಂಡನೇನು?’ ಸಾಲುಗಳ ಮೂಲಕ ಯಾವ ಕಾಲದೇಶಕ್ಕೂ ಸಲ್ಲುವಂಥ ಮಾತನ್ನು ಆಡುತ್ತಾನೆ. ಕನ್ನಡ ನಾಡಿನ ಶರಣರ ತೋಳಿಗೆ ತೋಳು ಬೆಸೆದು ನಿಂತವರ ಹಾಗೆ ತೋರುತ್ತಾನೆ.
ಹೀಗೆ, ಎಲ್ಲ ರೀತಿಯಲ್ಲೂ ಸೀಳಿ ಹೋಗಿರುವ, ಗಡರೇಖೆಗಳನ್ನು ನಿರ್ಮಿಸಿಗೊಂಡಿರುವ, xenophobea ದಿಂದ ಸದಾ ನರಳುತ್ತಿರುವ, ಅನ್ಯವಾದುದರ ರಕ್ತಕ್ಕೆ ಸುಖಾ ಸುಮ್ಮನೆ ಹಂಬಲಿಸುತ್ತಿರುವ ವರ್ತಮಾನದ ಸಂದರ್ಭದಲ್ಲಿ ವಿಶ್ವವನ್ನು ಬೆಸೆಯುವ ರಾಗಂ ಅವರ ಸಾಹಿತ್ಯಕ ಹೆರ್ಕ್ಯೂಲಿಯನ್ ಸಾಹಸ ಸ್ವಾಗತಾರ್ಹವಾದುದು. ಅಧ್ಯಯನದ ವಿದ್ವತ್ತಿಗೆ ಇಂಥದ್ದೊಂದು ಧನಾತ್ಮಕ ರೂಪ ನೀಡಿದ ರಾಗಂ ಅವರು ಅಭಿನಂದನಾರ್ಹರು.
– ಪ್ರೊ.ಚನ್ನಪ್ಪ ಕಟ್ಟಿ
ಚೆನ್ನಾಗಿದೆ ಸರ್
ವಂದನೆಗಳು
ಕವಿತೆಗಳ ಆಳಕ್ಕಿಳಿದು ಬರೆದ ವಿಮರ್ಶೆ ಸೊಗಸಾಗಿದೆ , ಇಲ್ಲಿ ಪ್ರೀತಿ ಪ್ರೇಮ, ನಾಡಿನ ಪ್ರತಿ ಭಕ್ತಿ , ಪ್ರೇಮ, ಜೊತೆಗೆ ಆತ್ಮವಿಮಶೆಗಳನ್ನು ಒಳಗೊಂಡ ಕವಿತೆಗಳಿವೆ . ಈ ವಿಮರ್ಶೆ ಬರೀಲಿಕ್ಕೆ i ಥಿಂಕ್ ಗಹನವಾದ ಅಧ್ಯಾಯನವನ್ನೇ ಮಾಡಿರ್ತೀರಿ ಅಲ್ವಾ ಸರ್ ?? Nice
ರಾಗಂ ಅವರ ‘ಜಾಡಮಾಲಿ’ ನನ್ನ ಅಭಿಪ್ರಾಯಕ್ಕೆ ಪ್ರತಿಕ್ರಿಯೆ ನೀಡಿದ ನಿಮಗೆ ವಂದನೆಗಳು.
ಪ್ರಬುದ್ಧ ನಿರೂಪಣೆ, ಚೆನ್ನಾಗಿದೆ.