ಪ್ರಕೃತಿ-ಪ್ರಭೇದ

ರೆಂಜೆ ಹೂವ ಬಲ್ಲಿರಾ?

Share Button

 

ಕಳೆದ ಎಪ್ರಿಲ್ ತಿಂಗಳಲ್ಲಿ ತವರುಮನೆಗೆ ಹೋಗಿದ್ದೆ. ಅಮ್ಮನ ತಲೆಯಲ್ಲಿ ರೆಂಜೆ ಹೂವಿನ ಮಾಲೆ ಕಂಡಾಗ ಬಾಲ್ಯದ ನೆನಪುಗಳ ಸರಮಾಲೆ ಕಣ್ಣೆದುರು ಬರಲಾರಂಭಿಸಿತು. “ನಂಗಿಲ್ವಾ ರೆಂಜೆ ಮಾಲೆ?” ಕೇಳಿಯೇ ಬಿಟ್ಟೆ ಅಮ್ಮನತ್ರ. “ನಂಗೊತ್ತಿತ್ತು ನೀನು ಕೇಳ್ತೀಯಾ ಅಂತ. ನೀನು ಬರುತ್ತಿ ಅಂತ ಗೊತ್ತಾದ ಕೂಡಲೇ ಪುನಃ ಹೋಗಿ ರೆಂಜೆ ಹೂವುಗಳನ್ನು ಹೆಕ್ಕಿಕೊಂಡು ಬಂದು ಮಾಲೆ ಸುರಿದೆ” ಅಂದರು ಅಮ್ಮ. ತಲೆಗೆ ಮುಡಿಯುವ ಮೊದಲು, ಮೊಬೈಲ್ನಲ್ಲಿ ರೆಂಜೆ ಮಾಲೆಯ ಫೋಟೋ ತೆಗೆದೆ. ಬಳಿಕ “ಅಮ್ಮ ಸುರಿದ ರೆಂಜೆ ಮಾಲೆ” ಅಂತ ಶಿರೋನಾಮೆ ಬರೆದು Whatsapp status   ಹಾಕಿ ಬಿಟ್ಟೆ.  Whatsapp status ಹಾಕುವುದು   ಈಗಿನ ಫ್ಯಾಶನ್ ತಾನೇ?  ಹಿರಿಯ- ಕಿರಿಯ, ಪಂಡಿತ- ಪಾಮರ, ಗಂಡು- ಹೆಣ್ಣು, ಜಾತಿ- ಮತ  ಭೇದವಿಲ್ಲದೆ ಎಲ್ಲರ ಕೈಯಲ್ಲೂ ಮೊಬೈಲ್.  Whatsapp, Facebook  ಉಪಯೋಗಿಸದವರು ಬಹಳ ಕಡಿಮೆ. ನಾನೂ ಅದಕ್ಕೆ ಹೊರತಲ್ಲ.

ಕೋಮಲ, ತನ್ಮಯಗೊಳಿಸುವ ಸುಗಂಧಭರಿತ ರೆಂಜೆ ಹೂವಿನ ಬಗ್ಗೆ ಹೇಳಹೊರಟೆ ಅಂತ ನೀವು ಅಂದ್ಕೊಂಡ್ರಾ? ನಿಮ್ಮ ಊಹೆ ಖಂಡಿತಾ ತಪ್ಪು. ನಾನು ಹೇಳಹೊರಟ ವಿಷಯ ನನ್ನ  Whatsapp status ಗೆ ಬಂದ ಪ್ರತಿಕ್ರಿಯೆಗಳ ಬಗ್ಗೆ. ಆ ಬಳಿಕ ಮನದಲ್ಲಿ ಮೂಡಿದ ಯೋಚನೆಗಳ ಬಗ್ಗೆ.

“ಅಮ್ಮ ಸುರಿದ ರೆಂಜೆ ಮಾಲೆ ಚಂದ ಉಂಟು. ಆದರೆ ನಿನ್ನ ಫೋನ್ ಮಾತ್ರ ವ್ಯಾಪ್ತಿ ಪ್ರದೇಶದ ಹೊರಗೆ ಉಂಟು”– ನನ್ನ ಪತಿರಾಯರ ಸಂದೇಶ. ತಾಯಿ ಮನೆ ತಲುಪಿದ ನಂತರ “ಇಲ್ಲಿಗೆ ತಲುಪಿದ್ದೇನೆ” ಅಂತ ಪತಿರಾಯರಿಗೆ ಹೇಳಲು ಮರೆತಿದ್ದೆ! ಆ ಕೂಡಲೇ ಫೋನಾಯಿಸಿದೆನೆನ್ನಿ.

ನನ್ನಂತೆಯೇ ಹಳ್ಳಿಯಲ್ಲಿ ಹುಟ್ಟಿ ಬೆಳೆದು ಬೇರೆ ಬೇರೆ ಕಾರಣಗಳಿಂದ ಪಟ್ಟಣ ಸೇರಿರುವ ನನ್ನ Whatsapp contact ಪಟ್ಟಿಯಲ್ಲಿರುವ ಅನೇಕ ಗೆಳತಿಯರ ಹಾಗೂ ಸಹೋದ್ಯೋಗಿನಿಯರ ಉದ್ಗಾರ “ವಾವ್“. “ಈ ರೆಂಜೆ ಹೂವಿನಲ್ಲಿ ಕಂದು ಬಣ್ಣ ಇದೆ. ನಮ್ಮನೆಯಲ್ಲಿ ಅಚ್ಚ ಬಿಳಿ ಬಣ್ಣದ ರೆಂಜೆ ಹೂವುಗಳಿದ್ದವು. ಬಾಲ್ಯದ ದಿನಗಳನ್ನು ನೆನಪಿಸುವಂತೆ ಮಾಡಿದ್ದಕ್ಕೆ ಧನ್ಯವಾದಗಳು” ಎಂಬ ಸಂದೇಶ ಕಳಿಸಿದ್ರು ನನ್ನ ಸೀನಿಯರ್ ರೇಖಕ್ಕ.

“ಮ್ಯಾಡಂ, ಇದು ಯಾವ ಹೂವು?” ಎಂಬ ಪ್ರಶ್ನೆ ಕೇಳಿ ಸಂದೇಶ ಕಳಿಸಿದ ನನ್ನ ವಿದ್ಯಾರ್ಥಿನಿ ಗ್ರೀಷ್ಮಾಳಿಗೆ “ರೆಂಜೆ ಹೂವು” ಎಂದು ಮರುಸಂದೇಶ ಕಳಿಸಿದೆ. “ಈ  ಹೂವಿನ ಬಗ್ಗೆ ಗೊತ್ತೇ ಇರ್ಲಿಲ್ಲ. ಮೊದಲನೇ ಸಲ ಈ ಹೂವಿನ ಹೆಸರು ಕೇಳಿದ್ದು. ಮತ್ತೆ ನಾನು ಇಷ್ಟರವರೆಗೆ ಈ ಹೂವನ್ನು ಕಂಡಿರ್ಲಿಲ್ಲ” ಅಂದ್ಳು. ಈ ಹೂವಿನ ಬಗ್ಗೆ ವಿವರಣೆ ನೀಡಿದೆ ಅವಳಿಗೆ. “ನನ್ನಮ್ಮನ ಬಾಯಲ್ಲಿ ಈ ಹೂವಿನ ಹೆಸರು ಕೇಳಿ ಗೊತ್ತಿತ್ತು. ರೆಂಜೆ ಹೂವು ಈ ತರಹ ಇರುವುದಾ?” ಅಂತ ಪ್ರಶ್ನಿಸಿ ಇನ್ನೊಬ್ಬಳು ವಿದ್ಯಾರ್ಥಿನಿಯ ಸಂದೇಶ.

Whatsapp status ನಲ್ಲಿ ಹಾಕಿದ್ದು ಒಂದು ಚಿತ್ರ ಆದರೆ ನನ್ನ ತಲೆಯಲ್ಲಿ ಹಲವು ಯೋಚನೆಗಳು.  ಹೌದು, ಕಾಲ ಬದಲಾಗಿದೆ. ಪರಿಸರ, ಪರಿಸ್ಥಿತಿ, ಜೀವನಶೈಲಿ, ಯೋಚಿಸುವ ರೀತಿ ಎಲ್ಲವೂ ಬದಲಾಗಿವೆ. ನಾವೆಲ್ಲಾ ಸಣ್ಣವರಿರುವಾಗ ಹೂವು ಯಾವುದೇ ಇರಲಿ. ಮಾಲೆ ಕಟ್ಟಿ ಮುಡಿಯುವುದೇ ಒಂದು ಸಂಭ್ರಮ. ಮಲ್ಲಿಗೆ, ಜಾಜಿಮಲ್ಲಿಗೆ, ದುಂಡುಮಲ್ಲಿಗೆ, ಸೇವಂತಿಗೆ, ಅಬ್ಬಲ್ಲಿಗೆ, ಸಂಪಿಗೆ, ಸುಗಂಧಿ, ಗುಲಾಬಿ. ಹಾಗೆಯೇ  ಒಣಗಿದ ನಂತರವೂ ಪರಿಮಳ ಮಾಸದ ರೆಂಜೆ, ಸುರಗಿ, ಕೇದಗೆ… ನಾವೂ ಮುಡಿದು, ಹೂವು ಯಥೇಚ್ಛವಾಗಿದ್ದರೆ, ಹೆಚ್ಚುವರಿ ಮಾಲೆ ಕಟ್ಟಿ ಪ್ರೀತಿಯ ಗೆಳತಿಯರಿಗೂ, ಮೆಚ್ಚಿನ ಶಿಕ್ಷಕಿಯರಿಗೂ ಕೊಟ್ಟು, ಅವರು ಮುಡಿದಿದ್ದನ್ನು ನೋಡಿ ಸಂಭ್ರಮಿಸುತ್ತಿದ್ದೆವು. ಹೂವುಗಳನ್ನು ಕೊಯ್ಯುವುದೂ, ನಂತರ ಹೂಮಾಲೆ ಕಟ್ಟುವುದೂ ಆಪ್ತವಾದ ಕೆಲಸ ಆಗಿತ್ತು. ಬೇಸಿಗೆ ಕಾಲದಲ್ಲಿ ಬಾವಿಯಂದ ನೀರು ಸೇದಿ, ಹೂಗಿಡಗಳಿಗೆ ನೀರು ಹಾಕುವ ಕೆಲಸವೂ ಮನಸಿಗೆ ಖುಷಿ ಕೊಡುತ್ತಿತ್ತು.

ಈಗ ಹೂವು ಮುಡಿಯಲು ಹೆಚ್ಚಿನ ಹೆಣ್ಣು ಮಕ್ಕಳು ಒಪ್ಪುತ್ತಿಲ್ಲ. “ನಂಗೆ ಇಷ್ಟ ಇಲ್ಲ” ಅಂತ ಮುಖ ಸಿಂಡರಿಸುವವರೇ ಜಾಸ್ತಿ. ಕೆಲವು ಶಾಲೆಗಳಲ್ಲಿ  ಹೂವು ಮುಡಿಯುವುದನ್ನು ನಿಷೇಧಿಸುತ್ತಾರೆ ಸಹಾ.  ಹೂವು ಮುಡಿಯುವುದು ಕೇವಲ ಶುಭಸಮಾರಂಭಗಳಿಗೆ ಸೀಮಿತವಾಗಿದೆ. ಅದು ಕೂಡಾ ಮಲ್ಲಿಗೆ ಅಥವಾ ಗುಲಾಬಿ ಮಾತ್ರ.  ವಿವಿಧ  ಹೂವುಗಳ ಪರಿಚಯವೂ ಇಂದಿನ ಮಕ್ಕಳಿಗೆ ಕಡಿಮೆ. ಹೂವುಗಳ ಬಗ್ಗೆ, ಅವುಗಳ ಔಷಧೀಯ ಗುಣಗಳ ಬಗ್ಗೆ ಮಕ್ಕಳಿಗೆ ತಿಳಿಸುವುದು ಕೂಡಾ ಹೆತ್ತವರ ಕರ್ತವ್ಯ. ಹಾಗಾದ್ರೆ ಮಾತ್ರ ಮುಂದಿನ ಪೀಳಿಗೆಯ ಮಕ್ಕಳಿಗೂ ರೆಂಜೆ ಹೂವು, ಸುರಗಿ ಹೂವು ಬಗ್ಗೆ ಗೊತ್ತಿರಲು ಸಾಧ್ಯ. ನೀವೇನಂತೀರಾ?

-ಡಾ.ಕೃಷ್ಣಪ್ರಭಾ, ಮಂಗಳೂರು

13 Comments on “ರೆಂಜೆ ಹೂವ ಬಲ್ಲಿರಾ?

  1. ನಿಮ್ಮ ಈ ಬರಹ ಬಾಲ್ಯದ ನೆನಪುಗಳ ಪುಟವನ್ನು ತೆರೆಯಿತು . ಚೆನ್ನಾಗಿದೆ ಲೇಖನ . ಈಗಿನ ಮಕ್ಕಳ ಪರಿಸ್ಥಿತಿ ಹೇಗಿದೆ ಅಂದ್ರೆ ಭತ್ತ ಯಾವ ಮರದಲ್ಲಿ ಬೆಳಿಯುತ್ತೆ ಅಂತ ಕೇಳೋವರೆಗೆ ಹದ ಗೆಟ್ಟಿದೆ . ಈ ಪರಿಸ್ಥಿತಿಗೆ ಯಾರನ್ನೆಲ್ಲಾ ಹೊಣೆ ಮಾಡಬಹುದು ??. ನೀವು ಹೇಳಿದ ಹಾಗೆ ಹೆತ್ತವರೇ ಮಕ್ಕಳಿಗೆ ಎಲ್ಲವನ್ನು ಕರ್ತವ್ಯ ಅಂತ ತಿಳಿದು ಹೇಳ್ಬೇಕು ಆವಾಗ ಸ್ವಲ್ಪ ಆದ್ರೂ ಪರಿಸ್ಥಿತಿ ಸುಧಾರಿಸಬಹುದೇನೋ. ಇಷ್ಟ ಆಯಿತು ಲೇಖನ .

    1. ಬಾಲ್ಯದ ನೆನಪುಗಳು ಮನದಲ್ಲಿ ಸದಾ ಹಸಿರಾಗಿರುತ್ತವೆ. ನೆನಪಿಸಿಕೊಂಡಷ್ಟೂ ಮತ್ತೆ ಮತ್ತೆ ಕಾಡುತ್ತವೆ….ಧನ್ಯವಾದಗಳು ನಯನಾ ಅವರಿಗೆ….

  2. ನಮ್ಮ ಅಂಗಳದಲ್ಲಿ ಇರುವ ರೆಂಜೆ ಮರದಲ್ಲಿ ಹೂವಿದೆ. ಮರದ ಪರಿಮಳ ಮಧುರ. ಬರೆದದ್ದು ಚೆನ್ನಾಯಿತು.

  3. ಹುಡುಗಿ ಮತು ‌ಹೂವಿನ ನಡುವಿನ ಸಂಬಂಧವನ್ನು ಮನೋಜ್ಞ ವಾಗಿ ಹೇಳಿದ ರೀತಿ ; ಇಂದಿನ ಪೀಳಿಗೆ ಬಳ಼ ಸುವ what’s app ನ್ನ ವಿಡಂಬನಾತ್ಮಕವಾಗಿ ಒಂದೇ ವಾಕ್ಯದಲ್ಲಿ ವಿವರಿಸಿದ ಬಗೆ ; ಯಾಂತ್ರಿಕ ಬದುಕಿನಲ್ಲಿ ಹೂವು ಮೌಲ್ಯ ಕಳೆದುಕೊಂಡ ಅನುಭವದಿಂದ ತಮಗಾಗಿರುವ ಅವ್ಯಕ್ತ ನೋವನ್ನ ಲಘು ವಾಗಿ ವ್ಯಕ್ತ ಪಡಿಸಿದ ಶೈಲಿ…ಮನದಲ್ಲಿ ಅಚ್ಚೊತ್ತಿ ರುವಂತಿತ್ತು.

    ಆಪ್ತ ವೆನಿಸುವ ಶೈಲಿಯಲ್ಲಿ ..ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ ಬಗೆ…ಅದು ಸುಂದರ ! ಅತೀ
    ಸುಂದರ !!

    1. ಮೆಚ್ಚುಗೆಯ ನುಡಿಗಳನ್ನು ಓದಿದಾಗ ಮನ ತುಂಬಿ ಬಂತು… ಧನ್ಯವಾದಗಳು ಸಂತೋಷ್ ಅವರಿಗೆ…

  4. ಈ ಲೇಖನ ಓದಿ ಹಲವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಕಾರ್ಕಳದ ಬಳಿ ರೆಂಜಾಳ ಎಂಬ ಊರಿನ ಹೆಸರಿಗೆ ಆ ಊರಿನಲ್ಲಿ ಜಾಸ್ತಿ ರೆಂಜೆಯ ಮರಗಳು ಇರುವುದೇ ಕಾರಣವಂತೆ.

  5. ರೆಂಜೆ ಹೂ ಎಲ್ಲರಿಗೂ ಪ್ರಿಯ…ತಿಂದವರಿಗೇ ಗೊತ್ತು ಅದರ ಹಣ್ಣಿನ ರುಚಿ. ಒಮ್ಮೆಲೇ ಬಾಲ್ಯದತ್ತ ಧಾವಿಸಿದೆ ನಾನು!

  6. Superb…. ಮರೆಯಲಾಗದ ನೆನಪು… ಅಕ್ಕ ನ ಮದುವೆಗೆ ರೆಂಜೆ ಮಾಲೆ ಸಿದ್ಧಪಡಿಸಿದ್ದು..

  7. ರೆಂಜೆಗೆ ನಮ್ಮ ಬಾಲ್ಯದಲ್ಲೂ ಸ್ಥಾನವಿತ್ತು.ಅದು ನೆನಪಾಯಿತು.
    -ನಾದಾ

    1. ಓ ದೇವರೇ…ಸರ್ ನಿಮ್ಮ ಪ್ರತಿಕ್ರಿಯೆ ಕಂಡಾಗ ಏನೋ ಒಂದು ಪುಳಕ ಮನದೊಳಗೆ…ಧನ್ಯವಾದಗಳು ಸರ್

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *