ಪುಸ್ತಕ ನೋಟ : ‘ಸ್ವಾತಂತ್ರ್ಯದ ಕಹಳೆ’

Share Button

ನಾವು ಮಂಗಳೂರಿನವರು. ಕಡಲಿನ ಮೊರೆತ, ಅಲೆಗಳ ಅಬ್ಬರ, ನೀರವ ಮೌನ, ಬೆಳ್ಳಿ ಕಿರಣಗಳಂತೆ ಹೊಳೆಯುವ ಕಿರು ಲಹರಿಗಳು, ಕಡಲಿನ ರೌದ್ರ, ಸೌಮ್ಯ ಭಾವಗಳು .. ನಮ್ಮ ಜೀವ ನಾಡಿಯನ್ನೇ ಮಿಡಿಯುವ ಪ್ರಾಕೃತಿಕ ಅಂಶ. ಹೀಗಾಗಿಯೇ ಕರಾವಳಿಯ ಬರಹಗಾರರ ಕವಿತೆಗಳಲ್ಲಿ, ಕತೆಗಳಲ್ಲೆಲ್ಲ ಕಡಲು, ಕಡಲಿನ ಮೊರೆತ ಒಂದು ಮಂದ್ರ ಸ್ಥಾಯಿಯ ಶ್ರುತಿಯಂತೆ ಹಾಸು ಹೊಕ್ಕಾಗಿದೆ. ಮಂಗಳೂರಿನ ಹೆಮ್ಮೆಯೆಂದರೆ ಉಳ್ಳಾಲದ ರಾಣಿ ಅಬ್ಬಕ್ಕ. ಕರ್ನಾಟಕದ ಬೇರೆ ಬೇರೆ ಅರಸೊತ್ತಿಗೆ ವಂಶಗಳಿಗಿಂತ ಭಿನ್ನವಾಗಿ, ಮಾತೃ ಪ್ರಧಾನ ಅಳಿಯ ಕಟ್ಟು ಪದ್ಧತಿ ಇರುವ ಕರಾವಳಿಯ ಅಸ್ಮಿತೆಯ, ದಿಟ್ಟತನದ ಪ್ರತೀಕವಾಗಿರುವ ಉಳ್ಳಾಲದ ರಾಣಿ ಅಬ್ಬಕ್ಕ ಇಲ್ಲಿನ ಜನರ ಸಮಷ್ಟಿ ಸ್ಮೃತಿಯ ಭಾಗವಾಗಿ ಇದ್ದಾಳೆ. ಹಾಗಿದ್ದರೂ ಅಬ್ಬಕ್ಕನ ಬಗ್ಗೆ ಚರಿತ್ರೆಯ ಪುಸ್ತಕಗಳಲ್ಲಿ ಉಲ್ಲೇಖಗಳು ಕಡಿಮೆ. ಇದೀಗ ಅಬ್ಬಕ್ಕ ಉತ್ಸವ, ಅಬ್ಬಕ್ಕ ಅಧ್ಯಯನ ಪೀಠ ಹೀಗೆ ತುಳು ನಾಡಿನ ಈ ವೀರ ವನಿತೆಯ ಬಗ್ಗೆ ಸಂಶೋಧನೆಗಳು , ಸಾಹಿತ್ಯಕ ಪ್ರಯತ್ನಗಳು ನಡೆಯುತ್ತಲಿವೆ. ಈ ನಿಟ್ಟಿನಲ್ಲಿ ಮುಮ್ತಾಜ಼್ ಬೇಗಂ ಅವರ ಸ್ವಾತಂತ್ರ್ಯದ ಕಹಳೆ’ ಒಂದು ವಿನೂತನ ಕೃತಿ.

ಮಮ್ತಾಜ಼್ ಬೇಗಮ್ ಅವರು ಕರಾವಳಿ ಲೇಖಕಿ ವಾಚಕಿಯರ ಸಂಘದ ಸಕ್ರಿಯ ಸದಸ್ಯರು. ಎರಡು ಕಥಾ ಸಂಕಲನಗಳು, ‘ವರ್ತುಲ‘, ಬಂದಳಿಕೆ‘ ಎಂಬ ಕಾದಂಬರಿಗಳು, ‘ಸರ್ವ ಋತುಗಳೂ ನಿನಗಾಗಿ ಎಂಬ ಕವನ ಸಂಕಲನ ಅಲ್ಲದೆ ಮಕ್ಕಳ ಸಾಹಿತ್ಯ, ಒಂದು ಇಂಗ್ಲಿಷ್ ಕಾದಂಬರಿಯನ್ನೂ ಅವರು ಬರೆದಿದ್ದಾರೆ. ಪ್ರತಿಷ್ಠಿತ ಅತ್ತಿಮಬ್ಬೆ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ , ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ ಪ್ರಶಸ್ತಿ , ಬಸವ ಜ್ಯೋತಿ ಅಲ್ಲದೆ ಇನ್ನೂ ಹತ್ತು ಹಲವು ಸನ್ಮಾನಗಳು ಅವರ ಸಾಹಿತ್ಯ ಕೃಷಿಗೆ ಲಭಿಸಿವೆ.

ಮಮ್ತಾಜ಼್ ಬೇಗಂ ಅವರ ‘ಸ್ವಾತಂತ್ಯದ ಕಹಳೆ‘ ಒಂದು ಚಾರಿತ್ರಿಕ ಕಾದಂಬರಿ. ಚಾರಿತ್ರಿಕ ಕಾದಂಬರಿಯನ್ನು ಬರೆಯಲು ಬೇಕಾದ ಪೂರ್ಣ ಸಿದ್ಧತೆ, ಚರಿತ್ರೆಯ ಅವಗಾಹನೆ, ಚರಿತ್ರೆಯನ್ನು ನಮ್ಮ ಕಣ್ಣೆದುರು ಸಾಕಾರಗೊಳಿಸಲು ಬೇಕಾದ ಕಲ್ಪನಾ ಶಕ್ತಿ, ಭಾಷಾ ಸಂಪತ್ತು ಅವರಲ್ಲಿ ಇರುವುದರಿಂದಲೇ ಈ ಕಾದಂಬರಿ ಒಂದು ವಿಶಿಷ್ಠ ಪ್ರಯೋಗವಾಗಿದೆ.

ಓರ್ವ ಮಹಿಳೆಯಾಗಿ, ಅದರಲ್ಲೂ ಸ್ವಾಭಿಮಾನಿ ಮುಸ್ಲಿಂ ಮಹಿಳೆಯಾಗಿ ಮುಮ್ತಾಜ಼್ ಅವರು ಅಬ್ಬಕ್ಕನ ದಿಟ್ಟತನವನ್ನು ಕಟ್ಟಿ ಕೊಡುವ ರೀತಿ ಅನನ್ಯ. ಇನ್ನು ಕನ್ನಡ ಮಟ್ಟಿಗೆ ಹೆಳುವುದಿದ್ದರೆ ತರಾಸು ಅವರ ‘ದುಗಾಸ್ತಮಾನ’, ‘ಮದಕರಿ ನಾಯಕ’, ಎಸ್ ಎಲ್ ಭೈರಪ್ಪ ಅವರ ‘ ಆವರಣ’, ಇತ್ತೀಚೆಗೆ ಬೇಲೂರು ವೇಣು ಅವರ ಚಿತ್ರದುರ್ಗದ ಕೋಟೆಯ ಬಗೆಗಿನ ಐತಿಹಾಸಿಕ ಕಾದಂಬರಿ ಇತ್ಯಾದಿ ಥಟ್ಟನೆ ನೆನಪಿಗೆ ಬರುವ ಕೃತಿಗಳನ್ನು ಹೊರತು ಪಡಿಸಿದರೆ ಹೆಚ್ಚೇನೂ ಕಾದಂಬರಿಗಳು ಪ್ರಚಲಿತವಾಗಿದ್ದಂತಿಲ್ಲ. ( ಇದು ನನ್ನ ಓದಿನ ಮಿತಿಯೂ ಇರಬಹುದು). ಅದರಲ್ಲೂ ಮಹಿಳೆಯರು ರಚಿಸಿದ ಚಾರಿತ್ರಿಕ ಕಾದಂಬರಿಗಳಂತೂ ಅತಿ ವಿರಳ. ಈ ನಿಟ್ಟಿನಲ್ಲಿ ಮಮ್ತಾಜ಼್ ಅವರ ಈ ಪ್ರಯತ್ನ ಸ್ತುತ್ಯರ್ಹವೂ, ಅವರ ಚಿಂತನ ಪರತೆ, ಇತಿಹಾಸವನ್ನು, ತನ್ನ ಸುತ್ತ ಮುತ್ತಲಿನ ಸಮಾಜವನ್ನು ಕುತೂಹಲದಿಂದ ಕಾಣುವ, ಅಂತ; ಸ್ಫೂರ್ತಿಯ ಸೆಲೆಗಳನ್ನು ಕಂಡುಕೊಳ್ಳುವ ಕಾಣ್ಕೆಯೂ ಆಗಿದೆ.

ಚರಿತ್ರೆಯ ಪುಟಗಳನ್ನೋದಿದರೆ ಮಂಗಳೂರಿಗೆ ಪರ್ಷಿಯಾ, ಅರೇಬಿಯಾ, ಹೆಚ್ಚೇಕೆ ಈಜಿಪ್ಟ್ ನಂತಹ ದೇಶಗಳೊಂದಿಗೆಯೂ ಸಂಪರ್ಕವಿತ್ತೆಂದು ಅರಿವಾಗುತದೆ. ತಮ್ಮ ಕೃತಿ ‘ಇನ್ ಎನ್ ಆಂಟಿಕ್ ಲಾಂಡ್’ ನಲ್ಲಿ ಖ್ಯಾತ ಭಾರತಿಯ ಆಂಗ್ಲ ಸಾಹಿತಿ ಅಮಿತವ್ ಘೋಷ್ ಅವರು ‘ಬೊಮ್ಮ’ ಎನ್ನುವ ತುಳು ನಾಡಿನ ಪಾತ್ರವನ್ನು ತರುತ್ತಾರೆ. ಈ ಪಾತ್ರ ಚಿತ್ರಣಕ್ಕೆ ಬೇಕಾದ ಅಂಶಗಳನ್ನು ಅವರು ಖ್ಯಾತ ಸಂಶೋಧಕರಾದ ಡಾ. ವಿವೇಕ್ ರೈ ಅವರಿಂದ ಪಡೆದುಕೊಂಡರಂತೆ. ಮೂರು ಬದಿಯ ಸಮುದ್ರ, ತೆಂಗು ಕಂಗಿನ ತೋಟಗಳು, ಬಂಗಾರ ಬಣ್ಣದ ಪೈರು, ಗಟ್ಟಿಮುಟ್ಟಾದ ಆಳುಗಳು, ಶ್ಯಾಮಲ ವರ್ಣದ ದಿಟ್ಟ ವ್ಯಕ್ತಿತ್ವದ ರಾಣಿ.. ಹೀಗೆ ಒಂದು ಸಮೃದ್ಧ ನಾಡಿನ ಶೌರ್ಯದ ಕತೆಯನ್ನು ಕಟ್ಟಿಕೊಡುವಲ್ಲಿ ಮುಮ್ತಾಜ್ ಬೇಗಂ ಅವರು ಯಶಸ್ವಿಯಾಗಿದ್ದಾರೆ.

ಉಳ್ಳಾಲದ ರಾಣಿ ಅಬ್ಬಕ್ಕ ನೆನಪಿಸಲ್ಪಡುವುದು ಆಕೆ ಪೋರ್ಚುಗೀಸರ ವಿರುದ್ಧ ಮೆರೆದ ಶೌರ್ಯದಿಂದಾಗಿ. ತನ್ನ ಗಂಡ ಬಂಗರಸನ ಅಸಹಕಾರ, ಕುತಂತ್ರ, ಉಳಿದ ತುಂಡರಸರ ಮಸಲತ್ತುಗಳು, ಸಾಮರಸ್ಯವಿಲ್ಲದ ದಾಂಪತ್ಯ,. ಇವನ್ನೆಲ್ಲ ಮೀರಿ ಜನರ ಸಮರ್ಥ ರಾಣಿಯಾಗಿ, ತನ್ನ ಆಢಳಿತಾತ್ಮಕ ದಕ್ಷತೆ, ಜನತೆಯ ಬೆಂಬಲ ಪಡೆಯುವ ಜನಪರವಾದ ಆಢಳಿತ, ಅಭಿವೃದ್ಧಿ ಕಾರ್ಯಗಳು ..ಹೀಗೆ ಮುಮಾಜ್ ಬೇಗಂ ಅವರು ತಮ್ಮ ಕಾದಂಬರಿಯಲ್ಲಿ ಆ ಕಾಲದಲ್ಲಿ ಸಂಭವಿಸಿರಬಹುದಾದ ಘಟನೆಗಳು, ಯುದ್ಧಗಳು, ಜೀವನ ಶೈಲಿ, ಇವುಗಳನ್ನೆಲ್ಲ ಕಣ್ಣಿಗೆ ಕಟ್ಟುವಂತೆ ದಾಖಲಿಸುತ್ತಾರೆ.

ಹಾಗಿದ್ದರೂ ಚಾರಿತ್ರಿಕ ಕಾದಂಬರಿ ಬರೆಯುವುದು ಸುಲಭವೇನಲ್ಲ. ಈ ಕೃತಿಗೆ ಮುನ್ನುಡಿ ಬರೆದ ಚಂದ್ರಕಲಾ ನಂದಾವರ, ಬಿ ಎಂ ರೋಹಿಣಿ ಹಾಗೂ ತುಕಾರಾಂ ಪೂಜಾರಿಯವರು ವಿಶ್ಲೇಷಿಸಿದಂತೆ ‘ಯಾರು ಈ ಅಬ್ಬಕ್ಕ? ಎಷ್ಟು ಅಬ್ಬಕ್ಕಂದಿರು ಇದ್ದರು? ಆಗಿನ ಕಾಲದಲ್ಲಿ ಎಷ್ಟು ಧರ್ಮಗಳಿದ್ದವು? ಅಬ್ಬಕ್ಕನ ಧರ್ಮ ಯಾವುವು? ಆಗಿನ ಕಾಲದ ಸಾಮಾಜಿಕ, ಧಾರ್ಮಿಕ ಸಂಘರ್ಷಗಳು ಯಾವುವು? ನಾವು ಸಾಮಾನ್ಯವಾಗಿ ವೀರ ರಾಣಿ ಎನ್ನುವ ಅಬ್ಬಕ್ಕ ಯಾರು? ಹೀಗೆ ಅನೇಕ ಗೊಂದಲಗಳು ಜನ ಸಾಮಾನ್ಯರಲ್ಲಿ ಇವೆ.

ವೀರರಾಣಿ ಅಬ್ಬಕ್ಕ

ಚರಿತ್ರೆಯ ದಾಖಲೆಗಳನ್ನು ಪರಿಶೀಲಿಸಿದಂತೆ ಮೂರು ಅಬ್ಬಕ್ಕಂದಿರು ಇದ್ದರಂತೆ. ಹಾಗೂ ಎರಡನೇ ರಾಣಿ ಅಬ್ಬಕ್ಕಳೇ ನಾವು ವೀರ ವನಿತೆ ಎನ್ನುವ ಉಳ್ಳಾಲದ ರಾಣಿ ಅಬ್ಬಕ್ಕ. ಹಿರಿಯ ಅಬ್ಬಕ್ಕಳೂ ಇಷ್ಟೇ ಧೈರ್ಯಶಾಲಿಯಾಗಿದ್ದಳು ಎನ್ನುತ್ತದೆ ಚರಿತ್ರೆ. ಇಟೆಲಿಯ ಪ್ರವಾಸಿ ಪಿಯಾತ್ರೋ ದಲ್ಲವಿಲ್ಲೆ ಯ ಪ್ರವಾಸ ಕಥನ ರಾಣಿ ಅಬ್ಬಕ್ಕಳ ಬಗ್ಗೆ ಪ್ರಮುಖ ದಾಖಲೆ. ಮಮ್ತಾಜ್ ಅವರ ಕಾದಂಬರಿ ಅವನ ಭೇಟಿ, ಅವನ ಕಂಗಳಿಗೆ ಗೋಚರಿಸುವ ತುಳು ನಾಡು ಅಂತೆಯೇ ರಾಣಿ ಅಬ್ಬಕ್ಕ ಪೋರ್ಚುಗೀಸರೊಂದಿಗೆ ಮಾಡಿದ ನಾಲ್ಕಕ್ಕೂ ಹೆಚ್ಚು ಯುದ್ಧಗಳ ವಿವರಗಳನ್ನೊಳಗೊಂಡಿದೆ. ಅಬ್ಬಕ್ಕನ ಆಳ್ವಿಕೆ ಸುದೀರ್ಘವಾಗಿದ್ದು ಆಕೆಯ ಕಾಲದಲ್ಲಿ ತುಳು ನಾಡು ಸಮೃದ್ಧವಾಗಿತ್ತು. ತನ್ನ ರಾಜ್ಯವನ್ನು ಸದೃಢವಾಗಿರಿಸಲು ಆಕೆ ಅರಬ್ ರಾಷ್ಟ್ರಗಳೊಂದಿಗೆ ತೆಂಗಿನ ಕಾಯಿ, ಕರಿ ಮೆಣಸು, ಕೆಂಪು ಅಕ್ಕಿ, ಸಾಂಬಾರ ಪದಾರ್ಥಗಳ ವ್ಯಾಪಾರ ಮಾಡುತ್ತಿದ್ದಳು. ಆಕೆಯ ಖ್ಯಾತಿ ಪರ್ಶಿಯಾದಂತಹ ದೇಶಗಳಲ್ಲೂ ಹರಡಿತ್ತು.

ಮಮ್ತಾಜ್ ಅವರು ಬಹಳ ಸುಂದರವಾಗಿ ಕಡಲು, ರಾಣಿಯ ದಿರಿಸು, ಘನತೆ ಹೀಗೆ ವರ್ಣಿಸುತ್ತ ಆ ಕಾಲಕ್ಕೆ ನಮ್ಮನ್ನು ಕೊಂಡೊಯ್ಯುತ್ತಾರೆ. ನಮ್ಮ ಅಕ್ಕ ಪಕ್ಕದ ಊರುಗಳ ಚಾರಿತ್ರಿಕ ಮಹತ್ವ ತಿಳಿದಾಗ ಹೆಮ್ಮೆಯೆನಿಸುತ್ತದೆ. ಉದಾಹರಣೆಗೆ ಉಳ್ಳಾಲದ ‘ಒಂಬತ್ತು ಕೆರೆ’ ಎನ್ನುವ ಜಾಗ ಭತ್ತದ ಬೇಸಾಯಕ್ಕೆ ನೀರಿನ ತೊಂದರೆಯಾಗಬಾರದೆಂದು ರಾಣಿ ಒಂಬತ್ತು ಕೆರೆ ತೋಡಿಸಿದ್ದಳಂತೆ.

ಮಮ್ತಾಜ್ ಅವರು ದಾಖಲೆಗಳ ಮೂಲಕ, ಹಾಗೆಯೆ ತಮ್ಮ ಕಲ್ಪನೆಯ ಮೂಲಕ ಆ ಕಾಲದ ಜೀವನ ಶೈಲಿ ( ಉದಾ: ತಾಳೆಗರಿ ಛತ್ರಿ, ಅಬ್ಬಕ್ಕನ ಅರಮನೆಯ ಭೋಜನ), ಮೀನುಗಾರಿಕೆ, ಕೃಷಿ, ಪಿಯತ್ರೋ, ರಾಣಿಯ ಉಡುಪುಗಳು.. ಹೀಗೆ ವಿವರಗಳನ್ನು ಕಟ್ಟಿಕೊಡುತ್ತಾರೆ. ನಾಲ್ಕನೇ ಬಾರಿಯ ಯುದ್ಧದಲ್ಲಿ ಪೋರ್ಚುಗೀಸರು ಸಂಪೂರ್ಣವಾಗಿ ಸೋತು ಹಿಮ್ಮೆಟ್ಟಿದರು. ಈ ಯುದ್ಧದಲ್ಲಿ ಪೋರ್ಚುಗೀಸರ ಪರವಾಗಿ ಹೋರಾಡಿದ ಅಬ್ಬಕ್ಕನ ಪತಿ ಬಂಗರಸ, ಅವನ ಅಳಿಯ ಕಾಮರಾಯ ಮಡಿದರು. ಮದ್ದುಗುಂಡುಗಳಿಂದ ತುಂಬಿದ ಪೋರ್ಚುಗೀಸರ ಹಡಗನ್ನು ರಾತ್ರಿಯ ನೀರವತೆಯಲ್ಲಿ ಕೇವಲ ತೆಂಗಿನ ಗರಿಗಳಿಂದ ಮಾಡಿದ ‘ತೂಟೆ’ (ದೊಂದಿ) ಹಾಗೂ ಕೇವಲ 200 ಸೈನಿಕರ ಸಹಾಯದಿಂದ ಅಬ್ಬಕ್ಕ ಸೋಲಿಸಿದ ರಣ ತಂತ್ರ ಅನನ್ಯ.

ಇನ್ನು ಇದು ಒಂದು ಕಾದಂಬರಿ ಆಗಿವುದರಿಂದ ಅಲ್ಲಲ್ಲಿ ಕಾಲ್ಪನಿಕ ಅಂಶಗಳಿವೆ.( ಮುಖ್ಯವಾಗಿ ಸಾಮಾನ್ಯ ಪ್ರಜೆಗಳ ಹೆಸರುಗಳು, ಹೇಳಿರಬಹುದಾದ ಮಾತುಗಳು ಇತ್ಯಾದಿ). ಚರಿತ್ರೆಯಲ್ಲಿ ಆಸಕ್ತಿ ಇಲ್ಲದವರಿಗೆ ಈ ಕಾದಂಬರಿ ಅಷ್ಟು ಸಲೀಸಾಗಿ ಓದಿಸಿಕೊಂಡು ಹೋಗಲಾರದು. ಕೆಲವೊಮ್ಮೆ ಪತ್ರಿಕಾ ವರದಿಯಂತೆಯೋ ಸಂಶೋಧನಾ ಪ್ರಬಂಧದ ಭಾಗದಂತೆಯೋ ಅನಿಸುವ ಸಾಲುಗಳು ಓದಿನ ಓಘಕ್ಕೆ ಕುಂದುಂಟು ಮಾಡುತ್ತವೆ. ಬಹುಶ: ಅದು ಕಾದಂಬರಿಯ ವಸ್ತುವಿನಿಂದ ಉಂಟಾದ ತೊಡಕು. ಕೆಲವು ಕಡೆ ವಿಚಾರಗಳು ಪುನರಾವರ್ತಿತವಾದಂತೆಯೂ ಅನಿಸಿತು.

ಹಾಗಿದ್ದರೂ ಮಮ್ತಾಜ್ ಬೇಗಂ ಅವರ ಪ್ರಯತ್ನ ಶ್ಲಾಘನೀಯ. ನಾವು ಓಡಾಡುವ ಜಾಗಗಳನ್ನು ( ಉಳ್ಳಾಲ ದರ್ಗಾ, ಸೋಮೇಶ್ವರ ಮಂದಿರ, ರುದ್ರ ಪಾದೆ.. ಹೀಗೆ) ಹೊಸದೊಂದು ನೋಟದಿಂದ ವೀಕ್ಷಿಸಲು ಈ ಕಾದಂಬರಿ ಬೆಳಕು ಚೆಲ್ಲುತ್ತದೆ. ಎಲ್ಲಕ್ಕಿಂತ ಮಿಗಿಲಾಗಿ ರಾಣಿ ಅಬ್ಬಕ್ಕನ ದಿಟ್ಟ ಹೋರಾಟವಿಲ್ಲದಿದ್ದಲ್ಲಿ ಮಂಗಳೂರು ಕೂಡ ಗೋವಾದಂತೆ ಪೋರ್ಚುಗೀಸರ ವಸಾಹತಾಗುತ್ತಿತ್ತು ಎನ್ನುವ ಚಾರಿತ್ರಿಕ ಅಂಶವನ್ನು ಮನಗಂಡಾಗ ಆಕೆಯ ಶೌರ್ಯದ ಬಗೆ ಹೆಮ್ಮೆ ಎನಿಸುತ್ತದೆ. ಮಮ್ತಾಜ್ ಬೇಗಂ ಅವರಿಗೆ ಶುಭಾಶಯಗಳು.

-ಡಾ.ಜಯಶ್ರೀ ಬಿ ಕದ್ರಿ, ಮಂಗಳೂರು

4 Responses

  1. Vasundhara Kadaluru Mallappa says:

    ಕಾದಂಬರಿಯನ್ನು ಓದಲೇ ಬೇಕೆನಿಸಿದೆ. ಈ ಕಾಳುಮೆಣಸಿನ ರಾಣಿ ಬಗ್ಗೆ ಶಾಲಾಪಠ್ಯಗಳಲ್ಲಿ ಮಾತ್ರ ಓದಿದ್ದು. ಜಯಶ್ರೀ ಕದ್ರಿಯವರು ಸಂಕ್ಷಿಪ್ತವಾಗಿಯೇ ಹಲವಾರು ಕುತೂಹಲಗಳನ್ನು ತೆರೆದಿಟ್ಟಿದ್ದಾರೆ ಇತಿಹಾಸ, ರಾಣಿ, ಕರಾವಳಿ ಕುರಿತು… ಧನ್ಯವಾದಗಳು ಕೃತಿಕಾರರಾದ ಮುಮ್ತಾಜ್ ಬೇಗಂ ಹಾಗೂ ಕದ್ರಿಯವರಿಗೆ…. ಸುರಹೊನ್ನೆಗೆ.

  2. ನಯನ ಬಜಕೂಡ್ಲು says:

    ಪುಸ್ತಕ ಪರಿಚಯ ಚೆನ್ನಾಗಿದೆ ಮೇಡಂ, ವಿಮರ್ಶೆಗೆ ಮೊದಲು ಬರುವ ಕರಾವಳಿಯ ಪರಿಚಯ, ಕಡಲು , ಸಾಗರ ಬಹಳ ಆಪ್ತ . ಸುಪರ್ಬ್

  3. Shankari Sharma says:

    ಕಾದಂಬರಿಯ ವಿಮರ್ಶೆ ಚೆನ್ನಾಗಿ ಮೂಡಿ ಬಂದಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: