ಹೆಣ್ಣು ಹೇಳಿದ ಹೆಣ್ಣಿನ ಕಥೆಗಳ ಸಂಕಲನ : “ಗೀರು”

Spread the love
Share Button

ಕನ್ನಡದ ಹೊಸ ತಲೆಮಾರಿನ ಗಮನಾರ್ಹ ಕತೆಗಾರ್ತಿಯರಲ್ಲಿ ದೀಪ್ತಿ ಭದ್ರಾವತಿಯವರೂ ಒಬ್ಬರು. ತಮ್ಮ ಸೂಕ್ಷ್ಮ ಭಾವುಕ ಕಥೆಗಳಿಂದ ಹೆಸರು ವಾಸಿಯಾಗಿರುವ ದೀಪ್ತಿಯವರು ತಮ್ಮ ಮೊದಲ ಕಥಾಸಂಕಲನ “ಆ ಬದಿಯ ಹೂವು” ವಿನಿಂದ ಕತಾಪ್ರಪಂಚದಲ್ಲಿ ಭರವಸೆ ಮೂಡಿಸಿದ್ದವರು. ಈಗ ತಮ್ಮ ಎರಡನೇ ಕಥಾಸಂಕಲನ “ಗೀರು“ವಿನ ಮೂಲಕ ಮತ್ತೊಂದು ದಿಟ್ಟ ಹೆಜ್ಜೆ ಇರಿಸಿದ್ದಾರೆ. ಇಲ್ಲಿನ ಅವರ ಕತೆಗಳಲ್ಲಿ ಸ್ತ್ರೀ ಸಂವೇದನೆ, ಸ್ತ್ರೀ ಪ್ರಜ್ಞೆಯನ್ನು  ಕಾಣಬಹುದು. ಸ್ತ್ರೀವಾದಿ ಕತೆಗಳಂತಲೂ ಇವನ್ನು ಕರೆಯಬಹುದು. ಹಾಗೆ ಹೇಳಿ ಚೌಕಟ್ಟಿನೊಳಗಿಟ್ಟು ನೋಡುವ ಬದಲು ಇವನ್ನು ಹೆಣ್ಣು ಹೇಳಿದ ಹೆಣ್ಣಿನ ಕತೆಗಳು ಅಂತಷ್ಟೆ ಹೇಳಬಯಸುವೆ. ಭಾಷೆಯ ಹದ, ಕಥಾ ಹಂದರ, ಭಾವುಕ ಪ್ರಪಂಚದ ಅಧಿಕೃತ ಒಳಗೊಳ್ಳುವಿಕೆ, ಕುತೂಹಲ ಉಳಿಸಿಕೊಳ್ಳುವ ಅಂತ್ಯ…. ಎಲ್ಲವೂ ಇಲ್ಲಿನ ಕಥೆಗಳ ಲಕ್ಷಣಗಳು. ದೀಪ್ತಿಯವರದು ಕನ್ನಡ ಕಥಾಪ್ರಪಂಚದಲ್ಲಿ ಪಳಗಿದ ಕೈ. ಪ್ರಜ್ಞಾಪೂರ್ವಕವಾಗಿ ಪ್ರಯೋಗಾತ್ಮಕವಾಗಿ ಇಲ್ಲಿನ ಎಲ್ಲಾ ಕತೆಗಳಲ್ಲಿ ಹೆಣ್ಣೇ ನಾಯಕಿಯಾಗಿ ಬರುವುದು ಈ ಕಥಾಸಂಕಲನವನ್ನು ನೋಡುವ ನಮ್ಮ ನೋಟಕ್ಕೆ ಹೊಸದೇ ಆಯಾಮವನ್ನು ಒದಗಿಸಿದೆ.

ಈ ಸಂಕಲನದ ಮೊದಲ ಕಥೆ “ಸ್ಫೋಟ” . ಇದೊಂದು ಹೆಣ್ಣು ಕೇಂದ್ರೀತ ಮತ್ತು ತಣ್ಣಗೆ ಸ್ಫೋಟಿಸುವ ಕತೆ. ಇಲ್ಲಿನ ಕತಾ ನಾಯಕಿ ಸಮಾಜದ ರೀತಿ ರಿವಾಜಿಗೆ ತಕ್ಕುನಾದ ಪೊಳ್ಳು ಬದುಕನ್ನು ಆರಿಸಿಕೊಳ್ಳುವ ಹೊತ್ತಿನಲ್ಲೇ ಗಂಡನ ಗಂಡಸ್ತನದ ಮೆರವಣಿಗೆಯ ಆತ್ಮವನ್ನು ಒಳಗೇ ಹೊಸಕುವ ನಿರ್ಧಾರಕ್ಕೆ ಬರುವುದೇ ಒಂದು ಸ್ಫೋಟ. ಇಲ್ಲಿನ ಕತಾ ನಾಯಕಿಯ ನಿರ್ಧಾರ ಹುಬ್ಬೇರಿಸುವಂತೆ ಮಾಡುತ್ತಲೇ ಇಂತಹ ಒಂದು ವಿರೋಧವಿಲ್ಲದೆ ಸಮಾಜದ ದಿಕ್ಕು ಆರೊಗ್ಯಕರವಾಗಿ ತನ್ನ ಹಾದಿಯನ್ನು ಬದಲಿಸುತ್ತದೆ ಹೇಗೆ ಅಂತಲೂ ಅನಿಸುತ್ತದೆ. ಅರುಂಧತಿಯನ್ನು ಅವಳಿಗೆ ನ್ಯಾಯವಾಗಿ ಸಿಗಬೇಕಾದ ಲೈಂಗಿಕ ಸುಖದಿಂದ ವಂಚಿತಳನ್ನಾಗಿಸುವುದೇ ಒಂದು ತೂಕದ ಕ್ರೌರ್ಯ ಅನಿಸಿದರೆ ಅವಳನ್ನು ಕೃತಕ ಗರ್ಭ ಧಾರಣೆಗೆ ಅಣಿಗೊಳಿಸಿ ತನ್ನ ಗುಟ್ಟು ಹೊರಬರದಿರಲು ಅವಳಿಗೆ ಲೈಂಗಿಕ ಅಸಮರ್ಥತೆಯನ್ನು ಆರೋಪಿಸುವುದು ಅಕ್ಷಮ್ಯ ಅಪರಾಧವೇ. ಇದೆಲ್ಲವನ್ನೂ ಆರ್ಥಿಕ ಭದ್ರತೆ, ಮನೆ ಮಾನ ಮರ್ಯಾದೆ, ಸಮಾಜದ ಮೆಚ್ಚಿಕೆ, ತನ್ನ ಹೆಣ್ಣು ಸಹಜ ಸೃಷ್ಟಿ ಕ್ರಿಯೆಯಲ್ಲಿ ಪಾಲ್ಗೊಳ್ಳುವಿಕೆ… ಎಲ್ಲಕ್ಕಾಗಿಯೂ ಸಹಿಸಿಕೊಳ್ಳುವ ಅರುಂಧತಿ ಅಗ್ನಿಯು ದಹಿಸದೆ ಹೊರಬಂದ ಸೀತೆಯಂತೆ ಕಾಣುತ್ತಾಳೆ.

ಈ ಕಥಾಸಂಕಲನದ ಎರಡನೇ ಕತೆ “ಭಾಗೀಚಿಕ್ಕಿ”. ಇಲ್ಲಿನ ಭಾಗೀಚಿಕ್ಕಿ ಒಂದು ಸಾಮಾನ್ಯ ಮುಗ್ಧ ಹೆಣ್ಣುಮಗಳು. ನಮ್ಮ ನಿಮ್ಮೊಳಗೂ ಕಂಡುಬರಬಲ್ಲ ಸಾಮಾನ್ಯ ವ್ಯಕ್ತಿತ್ವದವಳು. ಅವಳು ಎಲ್ಲರನ್ನೂ ಪಾಲಿಸುತ್ತಾಳೆ ಲಾಲಿಸುತ್ತಾಳೆ ಪೊರೆಯುತ್ತಾಳೆ. ಸಿಹಿ ಹಣ್ಣಿನ  ಗಟ್ಟಿ ಹೊರಕವಚದಂತೆ ಘಟವಾಣಿ , ಜಹಳಗಂಟಿಯಂತೆ ಕಾಣುತ್ತಾಳೆ ಆದರೂ ಅವಳೊಳಗೂ ಒಂದು ತಾಯ್ತನದ ಹೆಣ್ಣಿದ್ದಾಳೆ. ಅವಳ ಮಮತೆ ಅಂತಃಕರಣವೂ ವಿನಾಕಾರಣ ಎಲ್ಲರನ್ನೂ ಪ್ರೀತಿಸುತ್ತದೆ. ತನ್ನದೆನ್ನುವ ಗುಲಗಂಜಿಯನ್ನೂ ಸಂಪಾದಿಸಿಟ್ಟುಕೊಳ್ಳದ, ಹೊರಡೆಂದರೆ ಉಟ್ಟ ಬಟ್ಟೆಯಲ್ಲೇ ಹೊರಟುಬಿಡಬಲ್ಲ ಭಾಗೀ ಚಿಕ್ಕಿ ಕೊನೆಗೆ ಯಾರೊಬ್ಬರ ಕರುಣೆ ಅನುಕಂಪದ ಋಣವನ್ನೂ ಇಟ್ಟುಕೊಳ್ಳದೆ ಋಣಮುಕ್ತಳಾಗಿ ಹೊರಡುವುದು, ಹೊರಟೇ ಹೋಗುವುದು ಕೆಸರಿನ ಕಮಲವನ್ನು ನೆನಪಿಸುತ್ತದೆ.

ಮೂರನೆ ಕತೆ “ಕ್ಯಾನ್ವಾಸ್“. ಈ ಕತೆ ಬಹಳ ಮಾರ್ಮಿಕವಾಗಿದೆ. ಹೆಣ್ಣನ್ನು ತನ್ನ ಆಸ್ತಿಯಂತೆ ಭಾವಿಸುವ ಗಂಡಿನ ಸಾಂಪ್ರದಾಯಿಕ ಭಾವನೆಯನ್ನು ಇಲ್ಲಿ ಬರುವ ಚಿತ್ರಕಾರನ ಪಾತ್ರ ಮುರಿಯುತ್ತದೆ. ಹಿಡಿದದ್ದು ಯಾವುದೂ ಹಿಡಿಯಲ್ಪಟ್ಟಿಲ್ಲ, ಹಿಡಿದಿಟ್ಟೆ ಎನ್ನುವುದೂ ಒಂದು ಸುಳ್ಳೇ ಅಂತನಿಸಿಬಿಡುತ್ತದೆ. ರಕ್ತ ಮಾಂಸ ಮಿಡಿಯುವೆದೆ ಯೋಚಿಸುವ ಮೆದುಳಿರುವ ಯಾವ ಜೀವಿಯಾದರೂ ಬೇಲಿ ಮುರಿಯುವ ಕೆಲಸ ಮಾಡಿಯೇ ಮಾಡುತ್ತದೆ. ಅದಕ್ಕೆ ಹೆಣ್ಣು ಹೊರತಲ್ಲ ಮತ್ತು ಹೆಣ್ಣು ಅನ್ನುವ ಹಣೆಪಟ್ಟಿಯೂ ಬೇಕಾಗಿಲ್ಲ. ಬೇಲಿ ಹಾಯುವುದು ಗಂಡಿಗೆ ಸಹಜ ಹೆಣ್ಣಿಗೆ ಅಪರಾಧ ಎನ್ನುವಂತೆ ಗ್ರಹಿಸುವ ಯೋಚನೆಯಲ್ಲಿಯೇ ಲೋಪವಿದೆ.

ಇಲ್ಲಿನ ನಾಲ್ಕನೆ ಕತೆ “ಚೌಕಟ್ಟು”. ಈ ಪುರುಷಕೇಂದ್ರಿತ ಸಮಾಜದಲ್ಲಿ ಹೆಣ್ಣಿಗೆ ತನ್ನನ್ನು ತಾನು ದೌರ್ಜನ್ಯಕ್ಕೆ ಒಳಗಾಗದಂತೆ ಕಾಪಿಟ್ಟುಕೊಳ್ಳುವುದೆಷ್ಟು ಕಷ್ಟವೋ ಅದೇ ರೀತಿ ದೌರ್ಜನ್ಯಕ್ಕೊಳಗಾದ ಹೆಣ್ಣುಮಗಳೊಬ್ಬಳು  ನ್ಯಾಯ ಪಡೆದುಕೊಳ್ಳುವುದೂ ಅಷ್ಟೇ ಕಷ್ಟವಿದೆ ಎಂಬುದನ್ನು ಅರುಂಧತಿ ಮತ್ತು ಮಧುವಂತಿ ಎನ್ನುವ ಎರಡು ಸೂಕ್ಷ್ಮ ಮನಸ್ಥಿತಿಯ ಹೆಣ್ಣುಮಕ್ಕಳ ಮೂಲಕ ನಿರೂಪಿಸಿರುವುದು ಮನಕಲಕುವಂತಿದೆ. ಇಲ್ಲಿ ಮಧುವಂತಿಯ ಮೇಲಾದ ಅತ್ಯಾಚಾರದ ಘಟನೆಯಿಂದ ತೆರದುಕೊಳ್ಳುವ ಕತೆ ಅರುಂಧತಿಯ ಹಳೆಯ ನೆನಪುಗಳನ್ನು ಕೆದಕುತ್ತದೆ. ಒಂದೊಮ್ಮೆ ಅರುಂಧತಿಯೂ ಅದೇ ಸ್ಥಿತಿಯಲ್ಲಿದ್ದವಳು. ಆದರೆ ಅವಳಿಗೆ ಧೈರ್ಯ ತುಂಬುವ, ಅವಳ ಮೇಲಾದ ದೌರ್ಜನ್ಯಕ್ಕೆ ಸಿಡಿದೆದ್ದ ಅಪ್ಪನಿದ್ದ. ಆದರೆ ಸಮಾಜದ ವಾಸ್ತವ ತಿಳಿದ ವಾಸ್ತವವಾದಿ ಅವಳಮ್ಮ ತನ್ನ ಮುಂದಿನ ಹೆಣ್ಣು ಮಕ್ಕಳ ಭವಿಷ್ಯದ ದೃಷ್ಟಿಯಿಂದ ಸಮಸ್ಯೆಯನ್ನು ಎದುರಿಸುವ ಬದಲು ಸಮಸ್ಯೆಯಿಂದ ಓಡಲು ಕಾರಣಳಾಗುತ್ತಾಳೆ. ಇಲ್ಲಿ ಅರುಂಧತಿಯ ಅಪ್ಪ ಮತ್ತು ಅಮ್ಮನ ಮನಸ್ಥಿತಿಗಳ ನಡುವಿರುವ ವೈರುಧ್ಯವನ್ನು ನಾವು ಗಮನಿಸಬಹುದು. ಆದೇ ಅತ್ಯಾಚಾರ ಮಾಡಿದವನ ತಂದೆ ತಾಯಂದಿರ ಹೊಣೆಗೇಡಿತನ ಮತ್ತು ಅವರ ತಮ್ಮ ದುಷ್ಟ ಮಗನನ್ನು ಸಮರ್ಥಿಸುವ ಸ್ವಾರ್ಥವನ್ನು ಕಾಣಬಹುದು. ಗಂಡಿಗೆ ಜಾರುವ ಭಯವಿಲ್ಲ. ಆದರೆ ತನ್ನದಲ್ಲದ ತಪ್ಪಿಗೂ ಹೆಣ್ಣು ಉತ್ತರಧಾರಿಯಾಗುತ್ತಾಳೆ. ತನ್ನ ಹಕ್ಕು ಸ್ವತಂತ್ರವನ್ನೂ ಇತರರ ಇಚ್ಛೆಯ ಮೇರೆಗೆ ಬಳಸಬೇಕಾದ ಅನಿವಾರ್ಯತೆ ಸ್ಥಿತಿ ಹೆಣ್ಣಿಗಿರುವುದು ಶೋಚನೀಯ. ಎಷ್ಟೆಲ್ಲ ಬದಲಾಗಿರುವ ಸಮಾಜದಲ್ಲಿಯೂ ಈ ಸ್ಥಿತಿಯ ಬಗ್ಗೆ ಇರುವ ಮೂಲವಾಧಿತನದ ಬಗ್ಗೆ ಬೇಸರವೆನಿಸುತ್ತದೆ. ಅರುಂಧತಿ ಸೋತಿದ್ದರು ಮಧುವಂತಿ ಸೋಲೊಪ್ಪಿಕೊಳ್ಳದೇ ಸಮಸ್ಯೆಗೆ ಎದುರಾಗುವುದು ಅವಳ ಸಾವು-ಬದುಕಿಗಿಲ್ಲದ ಅರ್ಥವನ್ನು ಹೋರಾಟದಲ್ಲಿ ಕಂಡುಕೊಳ್ಳಲು ಹೊರಡುವುದು ಬೆಳ್ಳಿಕಿರಣವೊಂದು ಮಿಂಚಿದಂತೆನಿಸುತ್ತದೆ.

ಈ ಸಂಕಲನದ ಐದನೆ ಕತೆ “ಮುಚ್ಚಿದ ಬಾಗಿಲು“. ಈ ಕತೆ ಬದುಕಿನ ನಿರರ್ಥಕತೆಯನ್ನು ಹೇಳುತ್ತದೆ. ಮೊಮ್ಮೊಗಳಿಗಾಗಿ ಪರಿತಪಿಸುತ್ತಿದ್ದ ವೃದ್ಧ ದಂಪತಿಗಳೊಂದು ಕಡೆಯಾದರೆ ಒಂಟಿತನದಲ್ಲಿ ಹಾಡುವ ಮುದ್ದು ಹೆಣ್ಣುಮಗು ಇನ್ನೊಂದು ಕಡೆ. ಈ ಎರೆಡೂ ಒಂಟಿ ಜೀವಗಳು ಇನ್ನೇನು ಒಂದಾಗುತ್ತಾರೆ, ಒಂದಾಗಲಿ ತಬ್ಬಲಿಗೆ ತಬ್ಬಲಿ ಆಸರೆಯಾಗುವಂತೆ ಎಂದುಕೊಳ್ಳುವಷ್ಟರಲ್ಲಿಯೇ ಇಬ್ಬರೂ ಶಾಶ್ವತಾಗಿ ದೂರಾಗುವುದರೊಂದಿಗೆ ಕೊರೆಹಿಂಡುವ ಯಾತನಾಮಯ ಹಾಡೊಂದನ್ನು ನಮ್ಮೊಳಗೆ ಉಳಿಸಿಬಿಡುತ್ತದೆ. ಮತ್ತದು ಬದುಕಿನ ವಾಸ್ತವ ಅಂತ್ಯವೂ ಸಹ.  ಯಾವುದು ನಾವು ಎಣಿಸಿದಂತೆ ನಡೆಯುತ್ತದೆ ಹೇಳಿ…. ಇದೊಂದು ಶೋಕಗೀತೆಯಂತಹ ಕತೆ.

ಈ ಸಂಕಲನದ ಆರನೇ ಕತೆ “ಮೊಹರು”. ಇದೊಂದು ಬದುಕಿನ ಅನಿವಾರ್ಯತೆಗಳಿಗೆ ಸಿಕ್ಕಿ ವೇಶ್ಯೆಯಾದವಳ ಕತೆ. ಅದು ಬರಿ ಅಷ್ಟೇ ಆಗಿದ್ದರೆ ಇಲ್ಲಿನ ಕಥಾನಾಯಕಿ ಮೂರರಲ್ಲೊಬ್ಬಳಾಗಿಬಿಡುತ್ತಿದ್ದಳೇನೋ. ಆದರೆ ತನ್ನ ಹಾಗು ತನ್ನ ಮಕ್ಕಳ ಜೀವನ ನಿರ್ವಹಣೆಗಾಗಿ ಇಳಿದ ಈ ಕಸುಬು ನೀಡುವ ಏಡ್ಸ್ ಎನ್ನುವ ಬಹುಮಾನಕ್ಕೆ ಎರವಾಗಿಬಿಡುತ್ತಾಳೆ. ಇದೂ ವಿಶೇಷವಲ್ಲ. ಆದರೆ ಗೆಳತಿಯೊಮ್ಮೆ ಕಾಂಡೋಮನ್ನು ಬಳಸಲು ಹೇಳಿದಾಗ ಗಿರಾಕಿಗಳಿಗದು ಇಷ್ಟವಾಗದು,  ನನ್ನ ಆದಾಯಕ್ಕೆ ಕಲ್ಲು ಬೀಳುತ್ತದೆ ಎಂದೆಲ್ಲಾ ಸಬೂಬು ಹೇಳುವ ಅವಳು ತನಗೆ ಏಡ್ಸ್ ಬಂದಿದೆ ಎಂದು ತಿಳಿದಾಗ ಅದನ್ನು ಎದುರಿಸುವ ರೀತಿ ಮತ್ತು ಮುಂದಿನ ಅವಳ ನಡೆ ಅವಳ ಬಗ್ಗೆ ಹೆಮ್ಮೆ ಮೂಡಿಸಿಬಿಡುತ್ತದೆ. ಗೆಳತಿ ಅಂಜುತ್ತಾ ಈ ವಿಷಯ ಅರುಹಿದಾಗಲೂ ತನ್ನ ಸಾವು ಬದುಕಿನ ಬಗ್ಗೆ ಯೋಚಿಸದೆ, ಇದನ್ನು ಮುಂಚೆಯೇ ನಿರೀಕ್ಷಿಸಿದ್ದವಳಂತೆ ಬಹಳ ಸಹಜವಾಗಿ ಸ್ವೀಕರಿಸುತ್ತಾ ಗೆಳತಿಯನ್ನು ಕೇಳುತ್ತಾಳೆ, “ದಯವಿಟ್ಟು ಇದನ್ನು ಗುಟ್ಟಾಗಿಡು”ಎಂದು. ಕಾರಣ ತನ್ನ ಕಸುಬಿಗದು ತೊಂದರೆ ಆಗಬಾರದು ಹಾಗಾಗಿ. ಅದೇ ಕಾರಣಕ್ಕೆ ತನ್ನ ರಿಪೋರ್ಟನ್ನೂ ಅಲ್ಲಿಯೇ ಹರಿದು ಡಸ್ಟ್ಬಿನ್ನಿಗೆ ಹಾಕುತ್ತಾಳೆ. ಮತ್ತೆ ಕೊನೆಯಲ್ಲಿ  ಗೆಳತಿಯಲ್ಲಿ ಕಾಂಡೋಮುಗಳನ್ನು ಕೊಡು ಎಂದು ಕೇಳುವುದು ನಮ್ಮನ್ನು ಕಲಕಿಬಿಡುತ್ತದೆ. ತನ್ನ ಆರೋಗ್ಯದ ವಿಚಾರಕ್ಕೆ ಬಂದಾಗ ಅವಳು ಯಾವತ್ತೂ ಕಾಂಡೋಮುಗಳನ್ನು ಬಳಸಲಿಲ್ಲ, ಆದರೆ ತನ್ನಿಂದ ಇತರರಿಗೆ ಕಾಯಿಲೆ ಹರಡಬಾರದು ಎನ್ನುವ ಜಾಗ್ರತೆಯಲ್ಲಿ ಕಾಂಡೋಮುಗಳನ್ನು ಕೇಳುವುದು ಅವಳ ದೊಡ್ಡಸ್ಥಿಕೆಯನ್ನು ತೋರಿಸುತ್ತದೆ. ಇಲ್ಲಿ ಅವಳ ಗೆಳತಿ ಇವಳು ಮತ್ತಾರಿಗಾದರೂ ಕಾಯಿಲೆಯನ್ನು ಹರಡಿಬಿಟ್ಟರೆ ಎಂದು ಮನದಲ್ಲೇ  ಅನುಮಾನಿಸುವಾಗಲೇ ಇವಳು ಕಾಂಡೋಮುಗಳನ್ನು ಕೇಳುವುದು ಸಣ್ಣತನದ ಸಭ್ಯರನ್ನು ಕೆಣಕುವಂತಿದೆ. ಚಿಕ್ಕದಾದರೂ ಬಹಳ ಕಾಡುವ ಮತ್ತು ಬಹಳಷ್ಟು ಕಾಲ ಮನಸಿನಲ್ಲುಳಿದುಬಿಡುವಂತ ಕತೆಯಿದು.

“ಗೀರು” ಈ ಸಂಕಲನದ ಶೀರ್ಷಿಕೆ ಕತೆ. ಈ ಕತೆಯ ನಾಯಕಿ ಪಾರ್ವತಿ, ತನ್ನದಲ್ಲದ ತಪ್ಪಿನಿಂದಾಗಿ ಅಥವಾ ಹೇಳಿಕೊಳ್ಳಲಾಗದ ತಪ್ಪಿನಿಂದಾಗಿ ಎಚ್.ಐ.ವಿ. ಪಾಸಿಟೀವ್ ಎಂದು ಗುರುತಿಸಲ್ಪಡುತ್ತಾಳೆ. ಅದೂ ತನ್ನ ಗರ್ಭಾವಸ್ಥೆಯಲ್ಲಿ. ಇದರಲ್ಲಿ ಅವಳದೂ  ಪಾಲಿರಬಹುದಾ ಎನ್ನುವ ಅನುಮಾನವೂ ಕಾಡುತ್ತದೆ. ಕಾರಣ ಪರೀಕ್ಷೆ ಮಾಡಿದಾಗ ಅವಳ ಗಂಡ ಆರೋಗ್ಯವಂತನಿರುತ್ತಾನೆ. ನಂತರ ನಾವೆಲ್ಲ ಊಹಿಸುವಂತೆಯೇ ಗಂಡ, ಅಪ್ಪ ಅಮ್ಮ, ಸಮಾಜ, ಎಲ್ಲವು ಅವಳನ್ನು ತುಚ್ಛವಾಗಿ ನೋಡುತ್ತದೆ. ತನ್ನವರ ನಿರ್ಲಕ್ಷ್ಯದಿಂದಲೇ  ಅವಳು ಸಾಯುತ್ತಾಳೆ ಸಹ. ಈ ಕಾಯಿಲೆಯ ಬಗ್ಗೆ ಇಂದಿಗೂ ಸರಿಯಾದ ಜಾಗೃತಿ ಇಲ್ಲದಿರುವಿಕೆ ಮತ್ತು ಬದುಕು ನಶ್ವರ ಎಂದು ತಿಳಿದೂ ಶಾಶ್ವತವಾಗಿ ಬದುಕುವ ದುರಾಸೆ ಹೊಂದಿದ ಮನುಷ್ಯನ ದುಷ್ಟ ಮನೋಭಾವವೂ ಸಹ ನಿರಪರಾಧಿಗಳನ್ನೂ ಅಪರಾಧಿಗಳ ಸ್ಥಾನದಲ್ಲಿ ನಿಲ್ಲಿಸಿ ಶಿಕ್ಷಿಸುವಂತೆ ಮಾಡಿಬಿಡುತ್ತದೆ. ಪಾರ್ವತಿ ನಿರಪರಾಧಿಯೋ ಅಪರಾಧಿಯೋ… ಆದರೆ ಅವಳಿಗೆ ಬದುಕಲು ಒಂದು ಅವಕಾಶ ಸಿಗಬೇಕಿತ್ತು ಅನಿಸುತ್ತದೆ. ಎಲ್ಲವೂ ಸರಿ ಇದ್ದಾಗ ತಲೆ ಮೇಲಿಟ್ಟುಕೊಂಡು ಮೆರೆಸುವ ನಾವು ಚೂರು ಎಡವಿದಾಗ ಕೈಹಿಡಿದು ನಡೆಸುವ ವಾತ್ಸಲ್ಯವನ್ನೇಕೆ ತೋರುವುದಿಲ್ಲ. ಅದೆಷ್ಟೋ ಸೋಂಕಿತ ಗಂಡಂದಿರನ್ನು ತಾಯಿಯಂತೆ ಪಾಲಿಸುವ ಹೆಂಡತಿಯರಿರುವಾಗ ಗಂಡಂದಿರಿಗೇಕೆ ಆ ಔದಾರ್ಯ ಬರುವುದಿಲ್ಲ. ಕೊನೆಯಲ್ಲಿ ಕತೆಗಾರ್ತಿ 2018 ರಲ್ಲಿ ಬಿಹಾರದಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸುತ್ತಾರೆ. ಯಾವ ಮಕ್ಕಳಿಗೂ ಇಂತಹ ಅನುಭವ ಆಗಲೇಬಾರದು. ಆದರೆ ಈ ಕತೆಯ ಪಾರ್ವತಿ ಹಾಸ್ಟೆಲ್ಲಿನಲ್ಲಿದ್ದಳು ಎಂದು ಹೇಳುವುದಕ್ಕೂ ಈ ಘಟನೆಗೂ ಸಂಬಂಧೀಕರಿಸುವುದು ಸ್ವಲ್ಪ ಕಷ್ಟವೆನಿಸುತ್ತದೆ. ಒಂದು ವೇಳೆ ಪಾರ್ವತಿ ಹಾಸ್ಟೆಲ್ಲಿನಲ್ಲಿ ಓದುವಾಗ ಯಾರಾದರೂ ಅವಳ ಮೇಲೆ ಲೈಂಗಿಕ ದೌರ್ಜನ್ಯ ಮಾಡಿ ಅವಳಿಗೆ ಈ ಕಾಯಿಲೆ ಬಂದದ್ದಾಗಿದ್ದರೆ ಅವಳ ಗಂಡನಿಗೂ ಈ ಸೋಂಕು ತಗುಲಿರಬೇಕಿತ್ತಲ್ಲವಾ ಎನ್ನುವ ಪ್ರಶ್ನೆ ಏಳುತ್ತದೆ.

ಇಲ್ಲಿನ ಎಂಟನೇ ಕತೆ ನ್ಯೂಸ್ ಬೀ. ಈ ಕತೆಯ ನಾಯಕಿ ಮುಗ್ಧೆ. ಆದರೆ ಒಬ್ಬ ದೈಹಿಕವಾಗಿ ಮತ್ತು ಮಾನಸಿಕವಾಗಿಯೂ ಅಷ್ಟಾವಕ್ರನಾದ ಗಂಡನ ಅಷ್ಟಾವಗುಣಗಳನ್ನೂ ಮೆಟ್ಟಿ ಹೇಗೆ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುತ್ತಾಳೆ ಎನ್ನುವುದೇ ಈ ಕತೆಯ ಕಥಾವಸ್ತು. ಈ ಕತೆಯ ನಿರೂಪಣೆ ಚಂದವಿದೆ. ಆದರೆ ಅಂತ್ಯ ಸಡನ್  ಆಗಿ ಸಂಭವಿಸಿಬಿಟ್ಟಂತೆ ಅನಿಸುತ್ತದೆ. ನ್ಯೂಸ್ ಬಿ ಮುಗ್ಧತೆಯನ್ನು ಕಳಚಿಕೊಂಡು ಪ್ರಬುದ್ಧಳಾಗಿಬಿಡುವ ಆ ಟ್ರಾನ್ಸ್ಫಾರ್ಮೇಶನನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಿರೂಪಿಸಬಹುದಿತ್ತು ಅನಿಸುತ್ತದೆ.

ಇನ್ನು ಒಂಭತ್ತನೆ ಕತೆ “ನೆರಳಿನಾಚೆ”. ನೆರಳಿನಾಚೆಯ ಸತ್ಯ ಮೂರ್ತಿ ತನ್ನಪ್ಪನ ಕನಸನ್ನು ನುಚ್ಚುನೂರು ಮಾಡಿದವನು, ಅಪ್ಪನ ದುಡಿಮೆಯಲ್ಲಿ ತಿನ್ನುತ್ತಾ ಉಂಡಾಡಿ ಗುಂಡನ ಹಾಗೆ ತಿರುಗಾಡಿಕೊಂಡಿದ್ದವನು ಅಪ್ಪ ಮೂಲೆ ಹಿಡಿದಾಗ ಬದುಕಿನ ಕಠೋರತೆಗೆ ಎದುರಾಗುತ್ತಾನೆ. ಅನಾಯಾಸವಾಗಿ ಆಕರ್ಷಿತರಾಗುವ ಸತ್ಯಮೂರ್ತಿ ಮತ್ತು ಚಮೇಲಿ ಬದುಕನ್ನು ಹೇಗೋ ತಳ್ಳುತ್ತಾರಾದರೂ ವಿಧಿ ಮರದ ಮುರಿದ ಹರೆಯ ರೂಪದಲ್ಲಿ ಬಂದೆರಗುತ್ತದೆ. ಈಗ ಸತ್ಯಮೂರ್ತಿ ಹುಡುಗಾಟದ ಹಿಡಿಯಬಲ್ಲ. ತುಂಬು ಸಂಸಾರದ ಯಜಮಾನ. ಆದರೆ ಎಖದೂ ಸ್ವಸಾಮರ್ಥ್ಯದಿಂದ ದುಡಿದವನಲ್ಲ. ಚಮೇಲಿಯೇ ಅವನನ್ನೂ ಅವನ ಸಂಸಾರವನ್ನೂ ಜವಾಬ್ದಾರಿಯಿಂದ ಸಲಹಿದವಳು. ಇವನೇನಿದ್ದರೂ ಅವಳ ಕೆಲಸದಲ್ಲಿ ಸಹಾಯಕನಾಗಿ ಕೆಲಸಷ್ಟೇ. ಹೀಗಿರುವಾಗ ಸತ್ಯಮೂರ್ತಿಯ ಅಮ್ಮ ಮರದ ಕೊಂಬೆಯೊಂದು ಮೈಮೇಲೆ ಬಿದ್ದು ನೆಲಹಿಡಿಯುತ್ತಾಳೆ. ಸತ್ಯಮೂರ್ತಿಯ ಸಾಮರ್ಥ್ಯದಿಂದ ಅವಳನ್ನು ಗುಣ ಮಾಡಿಸುವುದು ಸಾಧ್ಯವಾಗುವುದಿಲ್ಲ. ಇನ್ನವಳು ಸಾವಿನ ಅಂಚಿಗೆ ಬಂದಾಗ ಮನೆಗೆ ಕರೆತರುತ್ತಾನಾದರೂ ಅವಳು ಸುಲಭಕ್ಕೆ ಸಾಯುವುದಿಲ್ಲ. ಅವಳದೇ ಕೊನೆ ಆಸೆ ಎಂದು ಆ ಕ್ಷಣ ಅದೇಕೆ ನಂಬಿಬಿಡುತ್ತಾನೋ ತನ್ನಮ್ಮನ ಮುಕ್ತಿಗಾಗಿ ಗಿಡನೆಡಲು ಶುರುಹಚ್ಚಿಕೊಳ್ಳುತ್ತಾನೆ. ಕೊನೆಗೂ ಇವ ಗಿಡ ಹಚ್ಚಿ ಬಂದ ದಿನ ಅವನ ಅಮ್ಮ ಜೀವ ಬಿಡುತ್ತಾಳಾದರೂ, ಇವನು ಹಚ್ಚಿ ಬಂದ ಗಿಡಗಳು ಅವನಮ್ಮನ ದಾರಿಯನ್ನೇ ಹಿಡಿದಿರುತ್ತವೆ ಎನ್ನುವುದೊಂದು ವಿಷಾದ. ನಂತರ ಗಿಡನೆಡುವ ಮಹತ್ ಕಾರ್ಯಕ್ಕೆ ತನ್ನ ಜೀವನವನ್ನೇ ಮುಡುಪಿಟ್ಟುಬಿಡುತ್ತಾನೆ ಸತ್ಯಮೂರ್ತಿ. ನಂತರ ಅಧಿಕಾರಿ ವರ್ಗದ ಮತ್ತು ಸತ್ತಮುತ್ತಲಿನವರ ಅಜಾಗೃತಿ ಮತ್ತು ಈರ್ಷೆಗೆ ಬಲಿಯಾಗಿ ಅವನು ನೆಟ್ಟ ಮರಗಳು ಉಸಿರುಬಿಡುತ್ತವೆ ಮತ್ತು ಇವನಿಂದ ಏನೂ ಮಾಡಲಾಗಲಿಲ್ಲ ಎನ್ನುವ ಕರುಣಾಜನಕ ಸ್ಥಿತಿಯಲ್ಲಿ ಕತೆ ಅಂತ್ಯವಾಗುತ್ತದೆ. ಇಲ್ಲಿ ಚಮೇಲಿ ಎನ್ನುವ ಸಾಧಾರಣ ಸರಳ ಹೆಣ್ಣುಮಗಳು ದುಡಿಯಲಾರದ ಗಂಡನನ್ನೂ ತಾನು ಹೆತ್ತ ಮಕ್ಕಳೊಂದಿಗೆ ಮತ್ತೊಂದು ಎನ್ನುವ ಹಾಗೆ ಸಾಕುತ್ತಾ ಹೋಗುವುದು ಹೆಣ್ಣಿನ ಅಂತಃಕರಣವನ್ನು ತೋರಿಸುತ್ತದೆ. ಇದೊಂದು ಪುಟ್ಟ ಆದರೂ ಸಶಕ್ತ ಪಾತ್ರ. ಅವಳೆಂದೂ ಯಾವ ಕಾರಣಕ್ಕೂ ಗಂಡನನ್ನು ವಿರೋಧಿಸಲಿಲ್ಲ. ಗಂಡನ ಬೇಜವಾಬ್ದಾರಿತನಕ್ಕೆ ಎದುರಾಡಲಿಲ್ಲ. ಆದರೆ ಸತ್ಯಮೂರ್ತಿ ಮಾತ್ರ ಜೀವನದುದ್ದಕ್ಕೂ ಒಂದಲ್ಲಾ ಒಂದು ಕಾರಣ ಹೊದ್ದು ಬೇಜವಾಬ್ದಾರಿ ಮನುಷ್ಯನಾಗಿಯೇ ಬದುಕಿಬಿಡುತ್ತಾನೆ. ತನ್ನ ಮನೆಯನ್ನೇ ಉದ್ಧಾರ ಮಾಡದವನು ಸಮಾಜವನ್ನೇನು ಮಾಡಿಯಾನು ಅಂತಲೂ ಅನಿಸುತ್ತದೆ. ಆದರೂ ಸತ್ಯಮೂರ್ತಿ ಮರ ನೆಡುವ ಕೆಲಸಕ್ಕೆ ಕೈ ಹಾಕುವುದು ಆದರಣೀಯ ಮತ್ತು ಸುತ್ತಲ ಸಮಾಜ ಅವನಿಗೆ ಸಹಕರಿಸದಿರುವುದು ದುರಂತ.

ಹತ್ತನೇ ಕತೆ “ಶಿಕ್ಷೆ”. ಈ ಕತೆ ಕೆಲವೇ ಸಾಲುಗಳದ್ದಾದರೂ ಅದರ ಒಟ್ಟೂ ಪರಿಣಾಮ ಬಹಳ ತೀವ್ರ. ಮಾನಸಿಕವಾಗಿ ಎಂದೋ ಸತ್ತಿರುವ ಮನುಷ್ಯನಿಗೆ ದೈಹಿಕ ಸಾವು ಒಂದು ಸಾವೇ ಅಲ್ಲ ಎನ್ನುವುದನ್ನು ಬಹಳ ಎಚ್ಚರಿಕೆಯಿಂದ ಒಪ್ಪ ಓರಣದಿಂದ, ಅನವಶ್ಯಕ ವಿವರಣೆಗಳಿಲ್ಲದೆ ಕಟ್ಟಿಕೊಟ್ಟಿದ್ದಾರೆ ದೀಪ್ತಿಯವರು.

ಹನ್ನೊಂದನೆ ಕತೆ “ಅಲಮೇಲಮ್ಮ ಮತ್ತು ಇಂಗ್ಲೀಶ್”. ಇಂಗ್ಲೀಶ್ ತಿಳಿಯದ “ನಾನ್ಸೆನ್ಸ್ ಅಜ್ಜಿ” ತಾನುಂಡ ಅವಮಾನ ತನ್ನ ಮೊಮ್ಮೊಗನಿಗೆ ಬರಬಾರದೆಂದು ಅವನನ್ನು ಇಂಗ್ಲೀಶ್ ಶಾಲೆಗೆ ದಾಖಲಿಸುತ್ತಾಳೆ. ಆದರೆ ಅಲ್ಲಿನ ಹೊರೆಗೆ ಹೊಂದಿಕೊಳ್ಳಲಾಗದ ವೆಕ್ಟ ಸಾವಿನ ಅಂಚಿಗೆ ಬಂದು ನಿಲ್ಲುತ್ತಾನೆ.  ಇಲ್ಲಿ ಅಲಮೇಲಮ್ಮನದು ಅವಮಾನದ ಬೇಗುದಿಯಷ್ಟೇ ಆಗದೆ ಸ್ವಪ್ರತಿಷ್ಠೆ ಮತ್ತು ಇಂಗ್ಲೀಶ್ ವ್ಯಾಮೋಹದ ಸ್ವರೂಪವನ್ನೂ ಪಡೆದು ದುರಂತಕ್ಕೆ ಕಾರಣವಾಗುತ್ತದೆ.

ಹನ್ನೆರಡನೆ ಕತೆ ಕುದಿ. ಇದೊಂದು ಸುಂದರ ಹೆಣಿಗೆಯ ಕತೆ. ಇಲ್ಲಿನ ಕುಕ್ಕರ್, ಕೌಸಲ್ಯ, ಅಕ್ಕಾಯಮ್ಮ, ಕೌಸಲ್ಯಳ ಅತ್ತೆ… ಎಲ್ಲರೂ ಒಂದೊಂದು ಬಗೆಯ ಕುದಿಯಲ್ಲಿದ್ದಂತೆ ಕಂಡುಬರುತ್ತಾರೆ. ಈ ಕತೆಯ ಎಲ್ಲ ಹೆಣ್ಣು ಪಾತ್ರಗಳ ಕುದಿಗೆ ಕುಕ್ಕರ್ ಎನ್ನುವ (ಆಧುನಿಕ) ಸಾಧನ ದ್ಯೋತಕವಾಗಿ ನಿಲ್ಲುತ್ತದೆ. ಕಾಲ ಎಷ್ಟೇ ಬದಲಾಗಿದ್ದರೂ ಇಂದಿಗೂ ಅದೇ ಸ್ಥಿತಿಯಲ್ಲಿರುವ ಅದೇ ಸೀತೆಯರು ಇದ್ದಾರೆ ಎನಿಸುವುದು ಆಧುನಿಕತೆಯ ವ್ಯಂಗ್ಯ. ಮದುವೆ ಎನ್ನುವುದು ಹೇಗೆ ಹೆಣ್ಣಿಗೆ ಬಂಧನವಾಗಿ ಮಾರ್ಪಟ್ಟಿದೆ ಎನ್ನುವುದನ್ನು ಬಹಳ ಚಂದ ಲೇಖಕಿ ಕಟ್ಟಿಕೊಟ್ಟಿದ್ದಾರೆ. ಇಲ್ಲಿನ ಹೆಣ್ಣು ಬಂಧನದ ನಡುವೆಯೂ ತನ್ನ ಅಸ್ಮಿತೆಯ ಪ್ರಶ್ನೆಯನ್ನು ತನ್ನ ಆತ್ಮಕ್ಕಾದರೂ ಕೇಳಿಕೊಳ್ಳುತ್ತಾಳೆ. ಅಂದರೆ ಅವಳೊಳಗೆ ಪ್ರಶ್ನೆಗಳು ಇವೆ… ಎನ್ನುವುದೊಂದು ಸಮಾಧಾನ. ಮತ್ತೆ ಕೌಸಲ್ಯ ಮಹಿಳಾಸಮಾಜ,  ಕಲ್ಯಾಣೋತ್ಸವಗಳನ್ನು ತನ್ನ ಬಿಡುಗಡೆಯ ಹಾದಿಯನ್ನಾಗಿಸಿಕೊಂಡಿದ್ದಾಳೆ. ಇದೊಂದು ಸಶಕ್ತ ಕತೆ.

ಹದಿಮೂರನೆ ಕತೆ “ರೊಕ್ಕದೋಷ”. ದೇವೇರಿಯ ಮುಗ್ಧತೆಯನ್ನು ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ಅವಳ ಭಾವನೆಗಳ ಜೊತೆ ಆಟವಾಡುವ ಕ್ರೌರ್ಯ ಇಲ್ಲಿನ ಕಥಾವಸ್ತು. ಮನುಷ್ಯ ಪಶು ಸ್ವಭಾವತಃ ಸಮಯಸಾಧಕ, ಸ್ವಾರ್ಥಿ. ಆದರೆ ಅವನ ಹುಟ್ಟು ಸಂಸ್ಕಾರವನ್ನು ಮೀರಿ ಪಶುತನವೇ ಮೆರೆಯುವುದು ಶೋಚನೀಯ.ಇಂಥವರ ನಡುವೆಯೂ ದೇವೇರಿಯಂತ ಮುಗ್ಧೆಯರು ಇರುವುದೇ ನಮ್ಮ ಪುಣ್ಯ.

ಇಲ್ಲಿನ ಹದಿನಾಲ್ಕನೆಯ ಮತ್ತು ಕೊನೆಯ ಕಥೆಯೇ “ಈ ಟೆಂಡರ್”. ಇದೊಂದು ಕಾಲ್ಪನಿಕ ಕಥೆ. ಭಗವಂತನ ಸೃಷ್ಟಿಕ್ರಿಯೆಯಲ್ಲೂ ಹಸ್ತಕ್ಷೇಪ ನಡೆಸಿ ಲಂಚ ಪಡೆಯುವಲ್ಲಿ ಸಫಲನಾಗುವ ಮನುಷ್ಯ ಎಂದಿಗೂ ಬದಲಾಗದ ಡೊಂಕು ನಾಯಿ ಬಾಲ ಎನಿಸಿಬಿಡುತ್ತಾನೆ.

ಒಟ್ಟಾರೆ ಚಂದದ ಹದಿನಾಲ್ಕು ಕಥೆಗಳನ್ನುಳ್ಳ ಈ ಸಂಕಲನ ಯಾರನ್ನೂ ನಿರಾಸೆಗೊಳಿಸುವುದಿಲ್ಲ ಎನ್ನುವುದೂ ಇದರ ಹೆಗ್ಗಳಿಕೆಗಳಲ್ಲೊಂದು. ಮುಂದಿನ ದಿನಗಳಲ್ಲಿ ಇನ್ನೆಂತೆಂತಹಾ ಕಥೆಗಳು ಇವರ ಬತ್ತಳಿಕೆಯಿಂದ ಹೊರಬರುತ್ತವೆಂಬ ಕುತೂಹಲ ಹೆಚ್ಚಾಗಿದೆ.

-ಆಶಾ ಜಗದೀಶ್

5 Responses

 1. Lalitha Siddabasavaiah says:

  ಪುಸ್ತಕ ಬಯಸಿ ಓದುವಂತಹ ವಿಮರ್ಶೆ. ತ್ಯಾಂಕ್ಯೂ ಆಶಾ

 2. Smitha Amrithraj says:

  ಒಳ್ಳೇ ವಿಮರ್ಶೆ ಆಶಾ

 3. Deepthi says:

  ಧನ್ಯವಾದ ಆಶಾ ಮತ್ರು ಸುರಹೊನ್ನೆಗೆ….ಪ್ರೀತಿಯಿಂದ ‌ದೀಪ್ತಿ

 4. Nayana Bajakudlu says:

  ಪುಸ್ತಕದ ಕುರಿತಾದ ನಿರೂಪಣೆ , ಕಥೆಗಳನ್ನು ಓದಲು ಪ್ರೇರೇಪಿಸುವಂತಿದೆ , ಕುತೂಹಲ ಮೂಡಿಸುವಂತಿದೆ . beautiful

 5. Jessy Pudumana says:

  ಉತ್ತಮ ಪರಿಚಯ..ಅಭಿನಂದನೆಗಳು ಮೇಡಂ

Leave a Reply to Deepthi Cancel reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: