ವಿನಯ್ ಚಂದ್ರರವರ ‘ತೊರೆ ಹರಿವ ಹಾದಿ’:
ವಿನಯ್ ಚಂದ್ರರವರ ‘ತೊರೆ ಹರಿವ ಹಾದಿ ‘ ಕವನ ಸಂಕಲನ ಓದಿದೆ. ಮಳೆಯೊಂದು ದಿನದಲ್ಲಿ ಕವಿತೆಯ ‘ನನ್ನಮ್ಮನಿಗಲ್ಲೂ ನನ್ನದೇ ಚಿಂತೆ‘ ಎಂಬ ಭಾವನಾತ್ಮಕ ಸಾಲುಗಳಿಂದ ನೇರ ಹೃದಯಕ್ಕೆ ಇಳಿಯುವ ಪದ್ಯದಿಂದ ಸಂಕಲನ ಶುರುವಾಗುತ್ತದೆ. ಈ ಸಂಕಲನದಲ್ಲಿ ಕವಿಯ ಸೃಜನಶೀಲತೆ ಭೂತ, ಭವಿಷ್ಯ ವರ್ತಮಾನಗಳೆಲ್ಲವಲ್ಲೂ ಓದುಗನನ್ನು ಕರೆದೊಯ್ಯುತ್ತಾ ಭೀಕರ ವರ್ತಮಾನದ ನಟ್ಟನಡುವೆ ತಂದು ನಿಲ್ಲಿಸುತ್ತಾ, ಈ ವರ್ತಮಾನಕ್ಕೆ ನೀನೆ ಹೊಣೆ ಎಂದು ಮೂದಲಿಸುತ್ತಾ ಮುಂದೇನು ಎಂದು ನಮ್ಮನ್ನೇ ಪ್ರಶ್ನಿಸುತ್ತವೆ. ‘ಬಿಟ್ಟರೆ ಗೊಮ್ಮಟನನ್ನೂ ಕುಟ್ಟಿ ಜಲ್ಲಿ ಮಾಡಿ ಲೋಡುಮಾಡಲು ಕಾದಿದ್ದಾರೆ ಜನ‘ ಎಂಬ ಸಾಲುಗಳು ಓದುಗನನ್ನ ಬೆಚ್ಚಿಬೀಳಿಸುತ್ತಾ ವಾಸ್ತವದ ನಮ್ಮ ದುರಾಸೆ, ಹಣದಾಹ, ಅಧಿಕಾರದ ವ್ಯಾಮೋಹದಲ್ಲಿ ಸರ್ವನಾಶವಾಗಿರುವ ಮಾನವೀಯ ಮೌಲ್ಯಗಳನ್ನು ಶೋಧಿಸುತ್ತವೆ.
ಮನುಷ್ಯನಾಗಿ ಹುಟ್ಟಿದ ಮೇಲೆ ಬದುಕನ್ನು ಸಾರ್ಥಕ ರೀತಿಯಲ್ಲಿ ಬದುಕಬೇಕು ಎಂಬುದನ್ನು ಸಾರುತ್ತವೆ. ‘ಧಗಧಗನುರಿವ ಚಿತೆಯಲ್ಲೇ ನೆಟ್ಟ ಕಣ್ಣಲ್ಲಿ ಕಂಡ ಜ್ವಾಲೆ ತಣಿದು ಭಸ್ಮವಾಗುವ ಮುನ್ನ ಹೃದಯವೊಂದರಲ್ಲಾದರೂ ಬೆಳಗಲಿ ಹಣತೆ-ಸಾಕು‘ ಎಂಬ ಸಾಲುಗಳಲ್ಲಿ ಕವಿ ಓದುಗನ ಆತ್ಮಾವಲೋಕನ ಮಾಡಿಕೊಳ್ಳಲು ಪ್ರೇರೇಪಿಸುತ್ತವೆ. ಹೀಗೆ ಪ್ರತಿಯೊಂದು ಕವಿತೆಯಲ್ಲೂ ವಿನಯ್ ಚಂದ್ರರವರ ಅನುಭವ, ಬದುಕಿನ ಗ್ರಹಿಕೆ, ಭವಿಷ್ಯದ ಕನಸು, ಮಲ್ಲಿಗೆಯಂತ ನೆನಪುಗಳ ಕಾಲಗರ್ಭದಲ್ಲಿರುವ ಕೆಂಡ ಸಂಪಿಗೆಯಂತ ಅನುಭವ, ವಾಸ್ತದ ವಿಡಂಬನೆ ಎದುರಾಗಿ ವಿಸ್ಮಯಗೊಳಿಸುತ್ತವೆ.
ಪ್ರಾಸ, ಛಂದಸ್ಸಿನ ಗೋಜಿಗೆ ಹೋಗದೆ ಸುಲಲಿತವಾಗಿ ಓದಿಸಿಕೊಂಡು ಹೋಗುವ ಕವಿತೆಗಳು ಹರಿವ ತೊರೆಯಂತೆ ಪ್ರಾಮಾಣಿಕವಾಗಿ ಓದುಗನ ಭಾವಯಾನದಲ್ಲಿ ಹರಿಯುತ್ತಾ ಓದಿದ ನಂತರವೂ ಝುಳು ಝುಳು ನಿನಾದದ ಕೇಳಿಸುತ್ತದೆ.
–ಶರತ್ ಪಿ.ಕೆ. ಹಾಸನ
ಕೃತಿ ಪರಿಚಯ ಚೆನ್ನಾಗಿ ಮೂಡಿ ಬಂದಿದೆ.
ಧನ್ಯವಾದಗಳು ಶರತ್