ಕಾಲಾಯ ತಸ್ಮಯೇ ನಮಃ
ಸಾವಿರಾರು ಜನ ಸೇರಿರುವ ಒಂದು ಸನ್ಮಾನ ಸಮಾರಂಭ. ಕಾರ್‍ಯಕ್ರಮ ನಿರೂಪಕಿ ಹೇಳುತ್ತಾಳೆ, “ಇವತ್ತು ನಮ್ಮ ‘ತಿಪ್ಪೇ ಹಳ್ಳಿ’ ವಿಶ್ವದಾದ್ಯಂತ ಗುರುತಿಸಿಕೊಂಡಿದೆ. ಅದಕ್ಕೆ ಕಾರಣ ‘ಮಹದೇವಪ್ಪ’ ಅವರ ಸಮಾಜಸೇವೆ. ರಾಷ್ಟ್ರಪ್ರಶಸ್ತಿ ಪಡೆದ ಅವರ ಸಂಸ್ಥೆ ಇಂದು ಎಲ್ಲರಿಗೂ ಮಾದರಿಯಾಗಿದೆ. ಈಗ ನಮ್ಮನ್ನುದ್ದೇಶಿಸಿ ಅವರು ಕೆಲವು ಮಾತುಗಳನ್ನಾಡಬೇಕಾಗಿ ವಿನಂತಿಸುತ್ತೇನೆ.” ತಮಗೆ ಹೊದಿಸಿದ ಶಾಲು, ಹೂಮಾಲೆಗಳನ್ನು ಮುಂದಿರುವ ಟೇಬಲ್ ಮೇಲಿಟ್ಟು, ನಿಧಾನವಾಗಿ ಎದ್ದು ಬಂದ ಮಹದೇವಪ್ಪ ಮೈಕ್ ಮುಂದೆ ನಿಂತು ಒಮ್ಮೆ ಗಂಟಲು ಸರಿಪಡಿಸಿಕೊಂಡು ಮಾತಾಡಲು ಶುರು ಹಚ್ಚಿಕೊಂಡರು, “ಪ್ರಿಯರೇ, ನಿಮಗಿವತ್ತು ಕಾಣುತ್ತಿರುವುದು; ನಮ್ಮ ಸಂಸ್ಥೆಯ ಯಶಸ್ಸು. ವಿಶ್ವಮಟ್ಟದಲ್ಲಿ ನiಗಿರುವ ಒಳ್ಳೆಯ ಹೆಸರು. ಇಷ್ಟು ದಿನ ಈ ಸಂಸ್ಥೆ ಹುಟ್ಟಿ ಬೆಳೆದ ರೀತಿಯನ್ನು ನಾನೆಲ್ಲೂ ಹೇಳಿಲ್ಲ; ಆದರೆ ಇಂದು ಇಷ್ಟು ಜನರ ಮುಂದೆ ಮನಸ್ಸು ಬಿಚ್ಚಿ ಮಾತಾಡಬೇಕೂಂತ ಅನ್ನಿಸುತ್ತಿದೆ.
ಇಪ್ಪತ್ತು ವರುಷಗಳ ಹಿಂದೆ ನಾನೊಬ್ಬ ವ್ಯಾಪಾರಿಯಾಗಿದ್ದೆ. ಪುರುಸೊತ್ತಿಲ್ಲದ ವಹಿವಾಟು, ಧನ ಕನಕದ ರಾಶಿಗೆ ಏನೂ ಕೊರತೆಯಿರಲಿಲ್ಲ; ಆದರೆ ಮಹಾ ಜಿಪುಣ. ಯಾರಿಗೂ ಒಂದಂಶದ ಸಹಾಯ ಮಾಡಿದವನಲ್ಲ. ಇದೇ ಬೀದಿಯ ಕೊನೆಯಲ್ಲಿ ಎರಡಂತಸ್ತಿನ ವ್ಯಾಪಾರ ಮಳಿಗೆ ಇತ್ತು. ಮದುವೆಯೂ ಕೂಡ ಆಗದೆ ಹಣ ಒಟ್ಟು ಮಾಡಿಡುತ್ತಿದ್ದೆ.
ಆವಾಗ ಬರಗಾಲ ಇತ್ತು, ಒಂದು ದಿನ ಪುಟ್ಟ ಹುಡುಗಿಯೊಬ್ಬಳು ನನ್ನ ಕಾಲಿಗೆ ಬಿದ್ದು, “ಅಪ್ಪಯ್ಯ, ದಯವಿಟ್ಟು ಸ್ವಲ್ಪ ದಾನ ಮಾಡಿ. ನನ್ನ ಅಣ್ಣನಿಗೆ ತುಂಬಾ ಜ್ವರ ಬಂದಿದೆ. ಡಾಕ್ಟ್ರು ಫೀಸ್ ಕೇಳ್ತಿದ್ದಾರೆ. ಇದ್ದವಳೊಬ್ಬ ಅಮ್ಮ ಕಾಯಿಲೆ ಬಿದ್ದು ತೀರಿ ಹೋದಳು. ನನ್ನ ಅಣ್ಣನನ್ನಾದರೂ ಉಳಿಸಿ.” ಎಂದು ಗೋಗರೆದಳು. ನಾನು ತುಚ್ಛವಾಗಿ ಬೈದು, ಅವಳನ್ನು ಕಾಲಿನಿಂದ ಒದ್ದು ಬಿಟ್ಟೆ. ಆ ಮಗು ತನಗೆ ನೋವಾದರೂ ಮತ್ತೆ ಮತ್ತೆ ಕಾಲು ಹಿಡಿದು ಅಂಗಲಾಚಿದಳು. “ನನ್ನ ಅಣ್ಣನನ್ನು ಬದುಕಿಸಿಕೊಡಿ, ದಮ್ಮಯ್ಯ ಸ್ವಲ್ಪವಾದರೂ ಹಣ ಕೊಡಿ”. ಆದರೆ ನಾನು ಕರಗಲೇ ಇಲ್ಲ. ಬದಲಾಗಿ “ಭಿಕ್ಷೆ ಎತ್ತಿ ಬದುಕು ಹೋಗು ಎಂದು ದೂಡಿ ಬಿಟ್ಟೆ. ಬರಗಾಲ ಇನ್ನೂ ಹೆಚ್ಚಿತು. ಸುಡುವ ಬಿಸಿಲಿಗೆ ಜನ ನರಳ ತೊಡಗಿದರು
.
ಒಂದು ಮಧ್ಯಾಹ್ನ ಅದು ಹೇಗೋ ಏನೋ, ವ್ಯಾಪಾರ ಮಳಿಗೆಗೆ ಬೆಂಕಿ ಬಿತ್ತು. ಕಣ್ಣ ಮುಂದೆಯೇ ಎಲ್ಲವೂ ಸುಟ್ಟು ಕರಕಲಾಯಿತು. ಒಟ್ಟು ಮಾಡಿಟ್ಟ ಧನಕನಕದ ರಾಶಿ ಬೆಂಕಿಯಲ್ಲಿ ನಾಶವಾಗುತ್ತಿದ್ದಂತೆ ನಾನು ಕುಸಿದು ಹೋದೆ. ಊರಿನ ಜನ ಯಾರೂ ಹತ್ತಿರ ಸುಳಿಯಲಿಲ್ಲ. ತಲೆಯ ಮೇಲೆ ಕೈ ಹೊತ್ತು ಗೋಳೋ ಎಂದು ಅಳುತ್ತಿದ್ದವನಿಗೆ ಸಮಾಧಾನಿಸಲು ಯಾರು ಇರಲಿಲ್ಲ. ರಾತ್ರಿಯಾಗುತ್ತಿದ್ದಂತೆ ಭಯ ಆವರಿಸಿತು. ತಾನಿನ್ನು ಹುಚ್ಚನಾಗುತ್ತೇನೆ, ಆಮೇಲೆ ಬೀದಿ ಬೀದಿ ಸುತ್ತಿ ಕೊನೆಗೊಮ್ಮೆ ನರಕದ ಸಾವನ್ನು ಕಾಣುತ್ತೇನೆ ಎಂದು ರೋಧಿಸತೊಡಗಿದೆ.
ಮತ್ತೆ ಅದೇ ಸಣ್ಣ ಹುಡುಗಿ ಕಣ್ಣೆದುರು ಬಂದಳು. “ಅಪ್ಪಯ್ಯ, ಈವಾಗ ಅತ್ತು ಪ್ರಯೋಜನವಿಲ್ಲ ಅಪ್ಪಯ್ಯ. ನೀವು ಎಷ್ಟೇ ಕಷ್ಟಪಟ್ಟು ಹಣ ಒಟ್ಟು ಮಾಡಿಟ್ಟರೂ ಈಗ ನಿಮ್ಮ ಬಳಿ ಹಣವಿಲ್ಲ, ಒಳ್ಳೆಯ ಕೆಲಸ ಮಾಡದೆ ಜನವೂ ಇಲ್ಲ. ನಂಗೆ ಭಿಕ್ಷೆ ಬೇಡೋಕೆ ಹೇಳಿದಿರಲ್ಲವೇ? ನನ್ನ ಅಣ್ಣನನ್ನು ಭಿಕ್ಷೆ ಬೇಡಿಯೇ ಬದುಕಿಸಿಕೊಂಡೆ. ಬನ್ನಿ ನಮ್ಮ ಮನೆಗೆ” ಎಂದು ಪುಟ್ಟ ಹುಡುಗಿ ಕೈ ಹಿಡಿದು ಭಿನ್ನವಿಸಿದಳು. ಗಾಯದ ಮೇಲೆ ಬರೆ ಎಳೆದ ಹಾಗಾದರೂ ಅವಳ ಮುಗ್ಧತೆಗೆ ಸೋತುಹೋದೆ. ಹರಕಲು ಮನೆಯ ಕುಸಿದ ಗೋಡೆಗಳ ಮಧ್ಯೆ ಗುಣ ಮುಖನಾಗುತ್ತಿರುವ ಹುಡುಗ ಕಣ್ ಕಣ್ಣು ಬಿಟ್ಟು ನೋಡಿದ. ಪುಟ್ಟ ಹುಡುಗಿ ಎಲ್ಲಾ ವಿವರಿಸಿದಳು. ಮರುದಿನ ಬೆಳಗ್ಗೆ ಎಚ್ಚರವಾದವನಿಗೆ ಕಣ್ಣ ಮುಂದೆ ಕಂಡಿದ್ದು ಭಿಕ್ಷಾ ಪಾತ್ರೆ ಹಿಡಿದು ನಿಂತ ಅಣ್ಣ, ತಂಗಿ. ಅದೇನು ಮರುಕ ಹುಟ್ಟಿತೋ ಗೊತ್ತಿಲ್ಲ. ಆ ಮಕ್ಕಳನ್ನು ಮೊದಲ ಬಾರಿ ತಡೆದ. ಸುಟ್ಟು ಹೋದ ಮನೆ, ಮಳಿಗೆಯಲ್ಲಿ ಏನೆಲ್ಲ ಸಿಕ್ಕಿತೋ ಅದನ್ನು ತಂದು ಮಾರಿ ಒಂದು ಸೂರು ಮಾಡಿದೆ.
ಪುಟಾಣಿ ಮಕ್ಕಳು ತುಂಬಾ ಚುರುಕು. ನನ್ನ ಬುದ್ಧಿಯನ್ನು ಅವರು ಅಸ್ತ್ರವಾಗಿಸಿದರು. “ಈ ಹಳ್ಳಿಯಲ್ಲಿ ಹಸುರಿಲ್ಲ ಹಾಗಾಗಿ ಮಳೆಯಲ್ಲಿ, ನೀರಿಲ್ಲ. ಅದಕ್ಕಾಗಿ ನಾವು ದುಡಿಯುವ” ಎಂದರು. ಎಲ್ಲಾ ಜನರಲ್ಲಿ ನಾವು ಬೆರೆತು ಹೋಗಿ ಮಾದರಿ ಹಳ್ಳಿ ಆಯಿತು. ಇಂದು ನಾವು ನೋಡುವ ಈ ಸಂಸ್ಥೆ ಸುಟ್ಟು ಹೋದ ಮಳಿಗೆಯ ಮೇಲೆ ನಿಂತಿರುವ “ಸ್ನೇಹ ಸಂಗಮ”. ಅಲ್ಲಿ ನಿಮ್ಮ ಜೊತೆ ಕುಳಿತಿರುವ ಅದೇ ಮಕ್ಕಳು ಸ್ನೇಹ ಮತ್ತು ಸಂಗಮರ ಪ್ರತಿಫಲ, ಅವರಿಬ್ಬರೂ ಈ ಪ್ರಶಸಿಗೆ ಅರ್ಹರು, ನಾನಲ್ಲ!” ಎಂದರು.
ಅಷ್ಟು ಹೇಳಿದ್ದೇ ಎಲ್ಲರೂ ಎದ್ದು ಕರತಾಡನ ಮಾಡಿದರು ಒದ್ದೆಯಾದ ಕಣ್ಣಂಚುಗಳಿಂದ. ಕೆಲವೊಮ್ಮೆ ಯಾರೂ ತಿದ್ದಲಾಗದಿದ್ದಲ್ಲಿ ಕಾಲವೇ ನಮ್ಮನ್ನು ತಿದ್ದುತ್ತದೆ ಎನ್ನುವುದು ಇದಕ್ಕೇ ಎನೋ..!
– ಅಶೊಕ್ ಕೆ.ಜಿ. ಮಿಜಾರು
ಮನ ತಟ್ಟಿದ ಬರಹ …
ತಮ್ಮ ಕಥೆಗಳಲ್ಲಿ ಯಾವುದಾದರೂ ನೀತಿ ಅಡಕವಾಗಿರುತ್ತದೆ! ಕತೆ ಮತ್ತು ನಿರೂಪಣೆಯೂ ಇಷ್ಟವಾಯಿತು.
ಕಥೆ ಗೆ ಮನಸ್ಸು ತಟ್ಟುವಅಂಶವಿದೆ .ಆದರೆ ಎಲ್ಲವೂ ನಾನೇ ನನ್ನಿಂದಲೇ ಎನ್ನುವವರೇ ಹೊರತುಇಂತವ್ರೆಲ್ಲಿರ್ತಾರೆ?.
ಸೊಗಸಾದ ನೀತಿಕಥೆ ಇಷ್ಟವಾಯಿತು
Well narrated Ashok