ಜಾತ್ರೆ ಎಂಬ ಸಂಭ್ರಮ.
ಮಧ್ಯಾಹ್ನದ ಕೆಲಸಗಳನ್ನು ಮುಗಿಸಿ ಫೋನನ್ನು ಕೈಗೆತ್ತಿಕೊಂಡೆ. ನನಗಾಗಿ ಸಂದೇಶವೊಂದು ಕಾದಿತ್ತು. ” ಊರಿಗೆ ಬರುತ್ತಿದ್ದಿಯಾ? ಜಾತ್ರೆಯಂತೆ “. ರಾಜಣ್ಣನ ಆ ಪ್ರಶ್ನೆಯು ನನ್ನದೇ ಲೋಕದಲ್ಲಿ ಮುಳುಗಿದ್ದ ನನ್ನನು ತಟ್ಟಿ ಎಬ್ಬಿಸಿತು. “ಈ ಬಾರಿ ಕಷ್ಟ” ಎಂಬ ಪ್ರಾಯೋಗಿಕ ಉತ್ತರವನ್ನಿತ್ತ ಮೇಲೂ ಮನಸ್ಸು ಸ್ವಲ್ಪ ಹಿಂದಕ್ಕೆ ಜಾರಿತು. ಊರ ಜಾತ್ರೆಯಲ್ಲಿ ಪಾಲ್ಗೊಂಡು ಕೆಲ ವರುಷಗಳೇ ಆಗಿವೆ ಎಂಬ ನೆನಪೂ ಆಯಿತು.
ಊರು ಅದು ಯಾವುದೇ ಇರಲಿ, ಅಲ್ಲಿ ಒಂದು ದೇವಾಲಯ ಅಥವಾ ಗುಡಿ ಇದ್ದೆ ಇರುತ್ತದೆ. ಅಲ್ಲೆಲ್ಲಾ ವಾರ್ಷಿಕೋತ್ಸವಗಳೂ, ಜಾತ್ರೆಗಳೂ ನಡೆದೇ ನಡೆಯುತ್ತವೆ. ಹಲವಾರು ಬಾರಿ ಈ ಉತ್ಸವಗಳು ಬರೀ ಒಂದು ಗುಡಿ, ಅಥವಾ ಗುಂಪಿಗೆ ಸೀಮಿತವಾಗಿರದೆ, ಇಡೀ ಊರಿನ ಉತ್ಸವವಾಗಿ ಮಾರ್ಪಟ್ಟಿರುತ್ತದೆ. ಜಾತ್ರೆ ಎಂಬುವುದು ಒಂದು ಸಾರ್ವಜನಿಕ ಸಂಭ್ರಮ ಎಂದೇ ಹೇಳಬಹುದು. ಊರೊಳಗಿನ ಜನತೆಗೆ ತಮ್ಮೊಳಗಿರುವ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಂದುಗೂಡುವ ಸಮಯವಿದಾದರೆ, ಹೊರ ಊರುಗಳಲ್ಲಿ ನೆಲೆಸಿರುವವರಿಗೆ ತಮ್ಮ ಊರಿಗೆ ಭೇಟಿ ನೀಡಲಿರುವ ಒಂದು ಸಂದರ್ಭ. ಒಟ್ಟಿನಲ್ಲಿ ಪ್ರತಿ ಊರಿಗೆ, ಅಲ್ಲಿಯ ಜಾತ್ರೆಯೇ ನಾಡ ಹಬ್ಬ.
ವಿಶೇಷವಾಗಿ ಅಲಂಕೃತಗೊಂಡ ದೇವರ ವಿಗ್ರಹಗಳನ್ನು ನೋಡುವುದು ಒಂದು ದೈವೀಕ ಅನುಭವವಾದರೆ, ದೇಗುಲಗಳ ಪ್ರಾಂಗಣಗಳಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವಗಳ ವರ್ಣನೆಯೇ ಕಷ್ಟ. ದೇವಾಲಯದ ಸುತ್ತಲೂ ನೇತಾಡುವ ಹೂವಿನ ಮಾಲೆಗಳು, ಕಣ್ಣುಕುಕ್ಕುವ ದೀಪಾಲಂಕಾರಗಳು, ಗಟ್ಟಿಯಾಗಿ ಅರಚಿಕೊಳ್ಳುವ ಧ್ವನಿವರ್ಧಕಗಳು, ಇವೆಲ್ಲವನ್ನೂ ಆಸ್ವಾದಿಸುವ ಜನ ಸಾಗರಗಳೂ ಈ ಜಾತ್ರ ಸಮಾರಂಭಗಳ ಮೆರಗು ಎಂದರೆ ತಪ್ಪಾಗದು. ಇನ್ನು ದೇವಾಲಯಗಳ ಹೊರಾಂಗಣದ ಅಬ್ಬರವನ್ನೇನೋ ಕೇಳುವುದೇ ಬೇಡ. ದೇಗುಲದ ಒಳಗಿನಷ್ಟೇ ವರ್ಣಮಯವಾಗಿರುತ್ತದೆ ಹೊರಗಿನ ಸಂತೆ ಗದ್ದೆಗಳು. ಕಿಕ್ಕಿರಿದು ಸೇರುವ ಜನರೇ ಒಂದು ದೊಡ್ಡ ಅಲಂಕಾರದಂತಿರುತ್ತದೆ. ಅದಕ್ಕೇ ಅಲ್ಲವೇ ಹೇಳುವುದು “ಜನ ಮರುಳೋ, ಜಾತ್ರೆ ಮರುಳೋ” ಎಂದು.
ಸಂತೆ ಗದ್ದೆಯಿಲ್ಲದೆ ಅದೇನು ಜಾತ್ರೆ, ಅಲ್ಲವೇ. “ದೇವರಿಗೆ ಸುತ್ತು ಬರುವವರಿಂದ ಸಂತೆಗೆ ಸುತ್ತು ಬರುವವರೇ ಜಾಸ್ತಿ” ಎಂದು ಅಪ್ಪ ಹೇಳುತಿದ್ದ ಮಾತು ನಿಜವೇ ಇರಬೇಕು. ಗದ್ದೆಯುದ್ದಕ್ಕೂ ಹಾಕಿರುವ ಡೇರೆ ಅಂಗಡಿಗಳು ಹಾಗು ತಿಂಡಿ-ಗಾಡಿಗಳು ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಸುಳ್ಳಾಗದು. ಸಂಜೆಯಾಗುತ್ತಿದ್ದಂತೆ ಈ ಡೇರೆ ಅಂಗಡಿಗಳಿಂದ ಬಣ್ಣ-ಬಣ್ಣದ, ವಿಧ-ವಿಧದ ಆಕರ್ಷಕ ವಸ್ತುಗಳು ಜನರನ್ನು ಕೂಗಿ ಕರೆಯ ತೊಡಗುತ್ತದೆ. ಸಣ್ಣ ಬಲ್ಬಿನ ಲೈಟುಗಳ ಬಿಳಕಿನಲ್ಲಿ ಮಿನ-ಮಿನ ಮಿಂಚುವ ಆ ವಸ್ತುಗಳನ್ನು ನಿರ್ಲಕ್ಷಿ ಮುಂದೆ ಸಾಗುವುದು ಕಷ್ಟ ಸಾಧ್ಯವೇ ಸರಿ. ಬಳೆ, ಮಾಲೆಯಂತಹ ವಸ್ತುಗಳು ಯುವತಿಯರನ್ನು ಆಕರ್ಷಿಸಿದರೆ, ಬಕೇಟು, ಪಾತ್ರೆ ಪಗಡಿಗಳು ಗೃಹಣಿಯರನ್ನು ಸೆಳೆಯುತ್ತದೆ. ಇನ್ನು ಮಕ್ಕಳನ್ನು ಸೆಳೆಯಲು ಒಂದಷ್ಟು ಆಟಿಕೆಗಳೂ, ಪುಗ್ಗೆಗಳೂ ಇದ್ದೆ ಇರುತ್ತವೆ. ಗಂಡಸರೂ ಬರಿ ಕೈಯಲ್ಲಿ ಮರಳ ಬೇಕಾಗುವುದಿಲ್ಲ. ಪುಸ್ತಕಗಳು, ಬ್ಯಾಗುಗಳು, ಗೃಹಾಲಂಕಾರದ ವಸ್ತುಗಳು, ಎಲ್ಲವೂ ಇಲ್ಲಿ ಲಭ್ಯ. ಇನ್ನು ತಿಂಡಿ ತಿನಿಸುಗಳ ಗಾಡಿಗಳ ಹಾವಳಿ ಬೇರೆಯೇ. ಜಾತ್ರೆ ಮಿಠಾಯಿಗಳು, ಐಸ್ ಕ್ರೀಮ್ ಗಾಡಿಗಳು, ಗೋಬಿ ಮಂಚೂರಿ ಗಾಡಿಗಳು, ಇನ್ನು ನಮ್ಮೂರಲ್ಲಂತೂ ಚುರುಮುರಿ ಗಾಡಿಗಳು ಇದ್ದೇ ಇರುತ್ತವೆ. ಎಂತಹ ಜಿಪುಣರ ಜೇಬಿಗೂ ಕತ್ತರಿ ಬೀಳುವುದಂತೂ ಖಂಡಿತ.
ಕಳೆದ ಕೆಲವು ವರುಷಗಳಿಂದ ಊರಿನ ಜಾತ್ರೆಗೆ ಅನುಪಸ್ಥಿತಳಾಗ ಬೇಕಾಗಿ ಬಂದರೂ, ಹಳೆಯ ನೆನಪುಗಳು ಇನ್ನೂ ಮಾಸಿಲ್ಲ. ಶಾಲಾ ದಿನಗಳಲ್ಲಿ ಜಾತ್ರೆಗೆ ಹೋಗುವುದೆಂದರೇ ಒಂದು ಸಂಭ್ರಮ. ಇನ್ನು ಅಲ್ಲಿ ಗೆಳತಿಯರು ಸಿಕ್ಕರೆ ಅಷ್ಟೇ ಕಥೆ. ಸಂತೆ ಗದ್ದೆಯುದ್ದಕ್ಕೂ ಹಿಂದೂ,ಮುಂದೂ ಅದೆಷ್ಟು ಬಾರಿ ಸಾಧ್ಯವೂ ಅಷ್ಟು ಬಾರಿ ಹೋಗುತ್ತಿದ್ದೆವು. ಜೊತೆಯಲ್ಲೇ ಬರುತ್ತಿದ್ದ ತಂಗಿಯ ಕಣ್ಣು ಪುಗ್ಗೆಯ ಮೇಲೆಯೇ ಇರುತ್ತಿತ್ತು. ಅಪ್ಪ ಬರುವಷ್ಟರಲ್ಲಿ ಅವಳಿಗೆ ಬೇಕಾಗಿರುವ ಪುಗ್ಗೆಯ ಆಯ್ಕೆಯಾಗಿರುತಿತ್ತು. ಊರು ಸುತ್ತುವ ಗೋಜಿಯಲ್ಲಿ ನಾನು ನನ್ನ ಪಟ್ಟಿ ತಯಾರು ಮಾಡಲು ಮರೆಯುತಿದ್ದೆ. ಕೊನೆಗೆ ಗೊಂದಲದಲ್ಲಿ ಏನೋ ಒಂದಕ್ಕೆ ಬೆರಳು ತೋರಿಸುತ್ತಿದ್ದೆ. ನಾನು ಹೊತ್ತು ತಂದ ಆ ಅನಗತ್ಯ ಸಾಮಗ್ರಿಯನ್ನು ತೋರಿಸುತ್ತಾ ಮುಂದಿನ ಜಾತ್ರೆಯವರೆಗೆ ಗೊಣಗುತಿದ್ದಳು ಅಮ್ಮ.
ಜಾತ್ರೆಗಳು ಕೊಟ್ಟ ಸಣ್ಣ ಸಣ್ಣ ಸಂತಸಗಳನ್ನು , ಸಂಭ್ರಮಗಳನ್ನು ನೆನಪಿಸುತ್ತಿರಬೇಕಾದರೆ ಒಂದೆಡೆ ಅದೇನೂ ಒಂಥರದ ಖುಷಿ ದೊರೆತರೆ, ಇನ್ನೊಂದೆಡೆ ಇನ್ನು ಯಾವಾಗ ಅಪ್ಪನ ಕೈ ಹಿಡಿದು ಚುರಮುರಿ ಗಾಡಿ ಮುಂದೆ ನಿಲ್ಲಲು ಸಾದ್ಯವಾಗುತ್ತದೆಯೋ ಎಂಬ ಬೇಸರವೂ ಮೂಡುತ್ತದೆ. ಊರ ಜಾತ್ರೆ, ಹಬ್ಬಗಳನ್ನು ನೆನಸಬೇಕಾದರೆ ನನ್ನಂತೆಯೇ ಊರು ಬಿಟ್ಟು ಬದುಕುತ್ತಿರುವ ಹಲವರಿಗೆ ಅದ್ಯಾಕಪ್ಪಾ ಊರು ಬಿಟ್ಟು ಬಂದೆ ಎಂದನಿಸದಿರದು. ಜಾತ್ರೆ ಎಂಬುವುದು ಒಂದು ನಿಜವಾದ ಸಂಭ್ರಮವೇ ಸರಿ.
-ಪಲ್ಲವಿ ಭಟ್, ಬೆಂಗಳೂರು
ನಿಜ. ಚಿಕ್ಕವರಿದ್ದಾಗ ಜಾತ್ರೆಯಲ್ಲಿ ಹತ್ತು ಪೈಸೆಗೆ ಒಂದರಂತೆ ಸಿಗುತ್ತಿದ್ದ ಕೆಂಪು ಬಣ್ಣದ ಐಸ್ ಕ್ಯಾಂಡಿಯನ್ನು ತಿನ್ನುವಾಗ ಸಿಗುತ್ತಿದ್ದ ಖುಷಿ ಈಗ ತರಾವರಿ ಐಸ್ ಕ್ರೀಂ ತಿನ್ನುವಾಗ ಸಿಗುತ್ತಿಲ್ಲ. ಚೆಂದದ ಬರಹ.
ಧನ್ಯವಾದಗಳು 🙂
ಚಿಕ್ಕಂದಿನ ಜಾತ್ರೆಯ ಸವಿನೆನಪುಗಳು ಯಾವಾಗಲೂ ಮಧುರ. ಚಂದದ ಲೇಖನ . ನಮ್ಮೂರ ಜಾತ್ರೆಯು ಹತ್ತಿರ ಬಂತು !
ಧನ್ಯವಾದಗಳು 🙂
ಇದೀಗ ನಮ್ಮ ಊರಲ್ಲಿ….. ಶ್ರೀ.. ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನ ದಲ್ಲಿ ಪನ: ಪ್ರತಿಷ್ಟಾ ಬ್ರಹ್ಮ ಕಲಶೋತ್ಸವ ನಡೆಯುತ್ತಿದೆ…. ಮೇಲಿನ ಎಲ್ಲ ಸಂಗತಿಗಳ ಆವರ್ತನೆ…. ಪುನರಾವರ್ತನೆ ಗಳು ಆಗುತ್ತಿವೆ
ಅದುವೇ ನನ್ನ ಈ ಬರಹಕ್ಕೆ ಪ್ರೇರಣೆ 🙂
ಜಾತ್ರೆಯ ಸಂಭ್ರಮದ ಬಗ್ಗೆ ಚೆನ್ನಾಗಿ ಬರೆದಿದ್ದೀರಿ.
ಧನ್ಯವಾದಗಳು 🙂
ಪರವೂರಿನಲ್ಲಿರುವವರಿಗೆ especially ಹೆಣ್ಣು ಮಕ್ಕಳಿಗೆ ಅವರ ತವರಿನ ತೇರು ಅಂದರೆ ಏನೋ ಸಂಭ್ರಮ , ಸಡಗರ. ಬರಲಾಗದಿದ್ದರು ಇಲ್ಲಿನ ವಿವರಣೆಗಳನ್ನು ಕೇಳಿಯೇ ಖುಷಿ ಪಡುತ್ತಾರೆ . ಚೆನ್ನಾಗಿ ಬರ್ದಿದ್ದೀರಿ .
ಚಂದದ ಲೇಖನ… ಜಾತ್ರೆಯ ಬಗ್ಗೆ ಸುಂದರ ಸವಿ ನೆನಪುಗಳೊಂದಿಗೆ…ಜಾತ್ರೆಗೆ ಹೋದಿರಾ
Uttama blog
Super
ದಯವಿಟ್ಟು ಜಾತ್ರೆಯ ಅನುಕೂಲಗಳು ತಿಳಿಸಿ ಅದರ ಅನಾನುಕೂಲಗಳು ತಿಳಿಸಿ
ದಯವಿಟ್ಟು ಜಾತ್ರೆಯ ಅನುಕೂಲಗಳು ತಿಳಿಸಿ ಅದರ ಅನಾನುಕೂಲಗಳು ತಿಳಿಸಿ
Reply