ಬೆಳದಿಂಗಳು, ಸಂಗೀತ ಮತ್ತು ಹಿಂದೋಳ..

Share Button

 

ಯುವ ಸಂಗೀತ ಕಲಾವಿದ ಅಭಿಷೇಕ್ ರಘುರಾಮರ ಕಂಠದಿಂದ ಆಲಾಪನೆಯು ಹೊಮ್ಮುತ್ತಿದ್ದಂತೆ ನೆರೆದಿದ್ದ ಜನಸ್ತೋಮ ನಿಶ್ಚಲ, ಮೌನ ನಂತರ ಮಂತ್ರಮುಗ್ಧ..

ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ , ಮೈಸೂರಿನಲ್ಲಿರುವ ಸುತ್ತೂರು ಮಠದ ಪುಷ್ಕರಿಣಿಯ ಆವರಣದ ಸುಂದರ ವಾತಾವರಣದಲ್ಲಿ ತಂಗಾಳಿಯನ್ನು ಆಸ್ವಾದಿಸುತ್ತ ತುಂಬಿದ್ದ ಜನಸ್ತೋಮ ವಿರಾಮವಾಗಿ ಸಂಗೀತ ರಸದೌತಣಕ್ಕೆ ತಯಾರಾಗಿತ್ತು. ಪ್ರತಿ ಹುಣ್ಣಿಮೆಯ ದಿನದಲ್ಲಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವ ಸುತ್ತೂರು ಮಠದಲ್ಲಿ ಶ್ರೀಗಳ ಉಪಸ್ಥಿತಿಯಲ್ಲೇ ಕಾರ್ಯಕ್ರಮವು ನಡೆಯುವುದು. ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಶ್ರೀ ಮಠವು ಸುಂದರ, ಶಾಂತ ಸ್ಥಳ. ಹೀಗೆ 150 ನೆಯ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಖ್ಯಾತ ಕಲಾವಿದ ಅಭಿಷೇಕ್ ರಘುರಾಮರ ಗಾಯನವು ಏರ್ಪಾಡಾಗಿತ್ತು. ಕರ್ಣಾಟ ಸಂಗೀತದ ವಿವಿಧ ಕ್ಷೇತ್ರಗಳಲ್ಲಿ ಹೆಸರುವಾಸಿಯಾದ ಕಲಾವಿದರ ಕೌಟುಂಬಿಕ ಹಿನ್ನಲೆಯಿರುವ ಇವರು ಗಾಯನವನ್ನೇ ಪ್ರವೃತ್ತಿಯಾಗಿಸಿಕೊಂಡವರು.


ಹೊತ್ತಿಳಿಯುತ್ತಿದ್ದಂತೆ ವಾರ್ಮ್-ಅಪ್ ವರ್ಣ ಕೀರ್ತನೆಗಳಿಂದ ಸಂಗೀತದ ಲೋಕಕ್ಕೆ ತಮ್ಮೊಂದಿಗೆ ಉಳಿದೆಲ್ಲರನ್ನೂ ಕರೆದೊಯ್ದ ನಂತರ ನೇರವಾಗಿ ಸುಂದರ ಹಿಂದೋಳದಲ್ಲಿ ಕಲಾವಿದರು ತಮ್ಮನ್ನು ತಾವು ಮುಳುಗಿಸಿಕೊಂದಂತೆ ಕೇಳುಗರು ತನ್ಮಯ! ಆಲಾಪನೆಯು ಮಂದ್ರ-ಮಧ್ಯ-ತಾರ್ ಸ್ಥಾಯಿಗೇರುತ್ತಿದ್ದಂತೆ ಆಸ್ವಾದಕರ ಏಕಾಗ್ರತೆಯೂ ಮುಗಿಲಾಚೆ ತಲುಪಿತ್ತು, ಒಬ್ಬರಿಗಿಂತೊಬ್ಬರು ಮಿಗಿಲಾಗಿ ರಾಗ-ಭಾವಕ್ಕೆ ಇಂಚಿಂಚು ಮೆರುಗನ್ನೀಯುತ್ತಿದ್ದ ಪಕ್ಕವಾದ್ಯದವರೂ ತಮ್ಮೆಲ್ಲಾ ಜ್ನಾನವನ್ನು ಒರೆಹಚ್ಚಿ ರಾಗವನ್ನು ಪರಿಪೂರ್ಣಗೊಳಿಸಿದ್ದರು. ಸಭಿಕರು ರಾಗ ಭಾವಕ್ಕೆ ತಕ್ಕಂತೆ ತಲೆದೂಗಿ ತಾಳ ಹಾಕುತ್ತಿದ್ದರೆ ಅಮ್ಮಂದಿರ ಜೊತೆ ಬಂದ ಪುಟ್ಟಮಕ್ಕಳೂ ಕೂಡಾ ಮೌನವಾಗಿ ಆಲಿಸುತ್ತಿದ್ದ ದೃಶ್ಯವಂತೂ ಅವರ್ಣನೀಯ.

ಬಹುಶ: “ಹಿಪ್ನೋಟೈಸಿಂಗ್ ಮೆಲೊಡಿ” ಎನ್ನುವುದೇ ಹಿಂದೋಳ ರಾಗಕ್ಕೆ ಸೂಕ್ತವಾದ ಪರ್ಯಾಯ. ಭಕ್ತಿ ಮತ್ತು ಶೃಂಗಾರ ರಸಗಳೇ ಪ್ರಧಾನವಾದ, ಕೇಳುಗರನ್ನು ಸಮ್ಮೋಹನಗೊಳಿಸುವ, ಪ್ರಶಾಂತ, ಹಿತಕರವಾದ ಮತ್ತು ಧ್ಯಾನಸ್ಥ ರಾಗ. ಪ್ರಣಯಭಾವವು ತುಂಬಿರುವ ಈ ರಾಗದ ಪ್ರಸ್ತುತಿಪರಿಪೂರ್ಣವಾಗಿಸುವುದು ಬಹಳ ಕಷ್ಟ. ಹಾಡುಗರ ಕೋನದಿಂದ ಹೇಳುವುದಾದರೆ, ರಾಗದ ನಿಜವಾದ ಅನುಭೂತಿಯು ಕೇಳುಗರಿಗುಂಟಾಗುವಂತೆ ಹಾಡುವುದು ಕಷ್ಟ ಸಾಧ್ಯವೇ ಸರಿ. ವೈಜ್ನಾನಿಕವಾಗಿ ಹೇಳುವುದಾದರೆ ಈ ರಾಗದ ಕೇಳ್ವಿಯಿಂದಾಗಿ ಮಾನಸಿಕ ಸಮತೋಲನವುಂತಾಗಿ ರಕ್ತದೊತ್ತಡವೂ ಹದಗೊಳ್ಳುತ್ತದೆ. ಸಭೆಗಳಲ್ಲಿ ಅಪರೂಪಕ್ಕೆ ಹಿಂದೋಳವನ್ನು ಎತ್ತಿಕೊಳ್ಳುವ ಕೆಲವು ಕಲಾವಿದರು ಬೆರಳೆಣಿಕೆಯಷ್ಟು ನಿಮಿಷಗಳಲ್ಲಿ ಆಲಾಪನೆಯ ತಮ್ಮ ಸರಕನ್ನು ಮುಗಿಸಿಬಿಡುವುದು ಕಂಡುಬರುತ್ತದೆ. ಕಾರಣವಿಲ್ಲದಿಲ್ಲ. “ಸ-ಗ(2)-ಮ(1)-ದ(1)-ನಿ(2)-ಸ” ಎಂಬೀ

 

 

ವಿಶೇಷವಾದ ಐದೇ ಐದು ಸ್ವರಗಳು ಪ್ರಸ್ತುತ ಹಿಂದೋಳದಲ್ಲಿ. ಉತ್ತಮ ಸ್ವರ ಜ್ನಾನ, ಶಾರೀರ, ಚಾತುರ್ಯ ಹಾಗೂ ಮುಖ್ಯವಾಗಿ ಸೌಂದರ್ಯಾರಾಧಕ ಮನಸ್ಸು ಇವಿಷ್ಟು ಇರುವ ಹಾಡುಗಾರರು ಮಾತ್ರ ನಿಜವಾದ ರಾಗದ ಸೌಂದರ್ಯವನ್ನು ಉಣಬಡಿಸಲು ಸಾಧ್ಯ. ತಮ್ಮ ಸಂಗೀತ ಜ್ನಾನದ ಮಟ್ಟವನ್ನು ಕೇಳುಗರಿಗೆ ತೋರಿಸುವ ಉದ್ದೇಶವಿಲ್ಲದೆ ರಾಗದ ಸೌಂದರ್ಯವನ್ನು ಅನುಭವಿಸುತ್ತ ಅದರ ಭಾವದಲ್ಲಿ ಮುಳುಗೇಳುತ್ತ ಹಾಡಿದಾಗಲೇ ಕೇಳುಗರಿಗೂ ಅದರ ಅನುಭವವಾಗುವುದು. ಪ್ರತಿ ರಾಗದ ಪ್ರತಿ ಸ್ವರದ ಸೌಂದರ್ಯವನ್ನು ವಿಭಿನ್ನ ಕೋನಗಳಲ್ಲಿ ವಿಭಿನ್ನ ಸ್ವರ ಸಂಯೋಗಗಳಲ್ಲಿ ಹಾಡಿ ಸಭಿಕರಿಗೆ ಕೊರೆತದ ಅನುಭವವಾಗದಂತೆ ಮೆರುಗಿನಿಂದ ಪ್ರಸ್ತುತಿಪಡಿಸಲು ಕಠಿಣ ಶ್ರಮದ ಅಗತ್ಯವಿದೆ.

ಆಭಿಷೇಕ್ ರಘುರಾಮರ ಹಿಂದೋಳ ಅಲಾಪನೆಯು ಹೆಚ್ಚೂ ಕಡಿಮೆ ನಲುವತ್ತೈದು ನಿಮಿಷಗಳಕಾಲ ಮುಂದುವರಿದಿದ್ದರೂ ಕೇಳುಗರ ಭಾವದಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ. ಎಲ್ಲೂ ಒಂದಿನಿತೂ ಪುನರಾವರ್ತನೆಯ ಅನುಭವ ಕೆಳುಗರಿಗಾಗದಂತೆ ಪೂರ್ಣ ಶ್ರದ್ಧೆ, ಉತ್ಸಾಹ, ಏಕಾಗ್ರತೆಯಿಂದ ಸ್ವರಗಳ ಜೋಡಣೆಯನ್ನು ಆಲಾಪನದಲ್ಲಿ ಮುಂದರೆಸಿದ್ದರು. ಬಹಳ ವಿಸ್ಮಯಕಾರಿಯಾದ, ಸ್ವಾರಸ್ಯಕರವಾದ ಅಪರೂಪದ ಸ್ವರ ಜೊಡಣೆಯಿಂದ ಮನಸೂರೆಗೊಂದ ಕಲಾವಿದರು ಆಲಾಪನೆ ಮುಗಿಸಿದಾಗ ಕರತಾಡನದ ಸದ್ದು ಮುಗಿಲು ಮುಟ್ಟಿತ್ತು. ಮುಂದೆ ಪಿಟೀಲಿನಲ್ಲಿ ಸರಿಸಾಟಿಯಾಗಿ ರಾಗದ ಪ್ರಸ್ತುತಿಯನ್ನು ಮಾಡಿದ ಶ್ರೀ ಕಾರ್ತಿಕ್ ರವರೂ ಸಭಿಕರನ್ನು ಅದೇ ಚಿತ್ತದಲ್ಲಿ ನೆಲೆಗೊಳ್ಳುವಂತೆ ಮಾಡುವಲ್ಲಿ ಸಹಕಾರಿಯಾದರು. ಮುತ್ತುಸ್ವಾಮಿ ದೀಕ್ಷಿತರ “ಗೋವರ್ಧನ ಗಿರೀಶಮ್ ಸ್ಮರಾಮಿ… ” ಎಂಬ ಅತಿ ಸುಂದರವಾದ ಕೀರ್ತನೆಯನ್ನು ನೆರವಲ್, ಸ್ವರವಿಸ್ತಾರ ಗಳೊಡನೆ ಮುಗಿಸಿದಾಗ ಸಭೆಯಿಡೀ ರಾಗಾನುಭೂತಿಯಿಂದ ಹೊರಬರುವ ಇಚ್ಛೆಯಿಲ್ಲವೆಂಬಂತೆ ಮೌನವಾಗಿತ್ತು.

ಮುಂದೆ ಶಂಕರಾಭರಣದ ಆಲಾಪನೆಯನ್ನೂ ಅಷ್ಟೇ ಪ್ರೌಢವಾಗಿ ಸೂಕ್ಶ್ಮವಾದ ಸ್ವರಸಂಚಾರಗಳೊಂದಿಗೆ ಪ್ರಸ್ತುತಿಗೊಳಿಸಿ “ಶ್ರೀ ಚಾಮುಂಡೇಶ್ವರಿ ಪಾಲಯಮಾಂ.. ” ಹಾಡಿದಾಗ ಗಾಳಿಯಲ್ಲೂ ಭಕ್ತಿ, ಗಾಂಭೀರ್ಯದ ಸಂಚಾರ..

ಸಂಗೀತವನ್ನು ಆಲಿಸಲು, ಅದರ ಅನುಭೂತಿಗೊಳಗಾಗಲು, ಅದರ ಒಳಹೊರಗು ತಿಳಿಯಬೆಕಿಲ್ಲ. ಕೇಳುವ ಕಿವಿಗಳು, ಉತ್ತಮವಾದುದನ್ನು ಪ್ರಶಂಸಿಸುವ ಮನಸ್ಸು ಇದ್ದರೂ ಸಾಕು. ಪ್ರಕೃತಿಯ ಪ್ರತಿ ಶಬ್ದದಲ್ಲೂ ಲಯವನ್ನು ಕಾಣಬಹುದು. ಗಮನಕೊಟ್ಟು ಆಲಿಸಿದರೆ ಅದರ ಅನುಭವವಾಗುವುದು. “ಜೀವನ ಚೈತ್ರ” ಚಿತ್ರದಲ್ಲಿ ಡಾ|| ರಾಜಕುಮಾರ್ ಅವರು ಹಾಡಿದಂತೆ “ನಾದಮಯ.. ಈ ಲೋಕವೆಲ್ಲ.. ” ಎನ್ನುವುದು ನೂರಕ್ಕೆ ನೂರು ಸತ್ಯ 🙂 ನೀರು ಗಾಳಿ, ಪ್ರಾಣಿಗಳ ಕೂಗು, ಮಗುವಿನ ಅಳು …. ಹೀಗೆ ಪ್ರತಿ ಶಬ್ದದಲ್ಲೂ ಅದರದೇ ಆದ ಶ್ರುತಿ, ಸ್ಥಾಯಿ, ಲಯಗಳನ್ನು ಕಾಣಬಹುದು. ಮನೆಯೊಡತಿಯ ಮಾತಿನ ಧಾಟಿ ಬದಲಾದಾಗ ಗುರುತಿಸುವ ಸಾಕು ಪ್ರಾಣಿಗಳಲ್ಲೂ ಶಬ್ದಕ್ಕೆ ಸ್ಪಂದಿಸುವ ಮನವಿದೆ. ಆದನ್ನು ಗುರುತಿಸುವ ಗುಣವಿದೆ. ಜೋಗುಳಕ್ಕೆ ನಿದ್ರಿಸುವ ಹಸುಗೂಸುಗಳಿಗೂ ಸಂಗೀತಕ್ಕೆ ಸ್ಪಂದಿಸುವ ಹೃದಯವಿದೆ. ಹಳ್ಳಿಗಳಲ್ಲಿ ತುಂಟ ಖಿಲಾಡಿ ಹಸುಗಳ ಹಾಲು ಕರೆಯುವಾಗ ಹಾಡೊಂದನ್ನು ಗುನುಗುನಿಸುವ ಅಮ್ಮಂದಿರಿದ್ದಾರೆ. ಸಂಜೆ ಹೊತ್ತು ಚೀರಿ ಅಳುವ ಕರುಗಳು ಕೂಡಾ ಇಂಪಾದ ಹಾಡಿಗೆ ಸುಮ್ಮನಾಗುವುವು…. ಗಮನಿಸುತ್ತಾ ಹೋದರೆ ಪ್ರತಿಯೊಂದು ಚಲನೆಯಲ್ಲೂ ಶಬ್ದದಲ್ಲೂ ಅಡಗಿರುವ ಸಂಗೀತದ ಪರಿಚಯವಾಗುತ್ತದೆ.

ಮಕ್ಕಳನ್ನು ಸಂಗೀತ ನೃತ್ಯ ತರಗತಿಗಳಿಗೆ ಅಟ್ಟುವ ಹೆತ್ತವರು ತಿಳಿಯಬೇಕಾದುದು, ಕಲೆಯು ಜ್ಯೂನಿಯರ್, ಸೀನಿಯರ್ ಇತ್ಯಾದಿ ಪರೀಕ್ಷೆಗಳಿಗೆ ಸೀಮಿತವಲ್ಲ. ಈ ಪರೀಕ್ಷೆಗಳ ಪಠ್ಯಕ್ರಮವನ್ನು ಮನ:ಪಾಠಗೊಳಿಸಿ ಹಾಡುವುದಲ್ಲ, ರಾಗಲಕ್ಷಣಗಳನ್ನು ಬಾಯಿಪಾಠ ಮಾಡಿ ಹಾಡುವುದಲ್ಲ ಸಾಧನೆ, ಬದಲಾಗಿ ಕಲೆಯಲ್ಲಿ ತಮ್ಮ ತಮ್ಮ ಸೃಜನಶೀಲತೆಯನ್ನು ಅಳವಡಿಸಿಕೊಂಡರೇ ಕಲೆಗೆ ನ್ಯಾಯ ಒದಗಿಸಿದಂತಾಗುವುದು.

ಬೆಳದಿಂಗಳ ಸಂಗೀತದ ಮೋಡಿಗೊಳಗಾಗಿ ಮುಂದಿನ ಬೆಳದಿಂಗಳ ಸಂಗೀತದ ತನಕ ಚಪ್ಪರಿಸುವಂತಹ ಸಂಗೀತವ ಮೆಲುಕುಹಾಕುತ್ತ ಹಿಂದಿರುಗಿದಾಗ ಅಮೋಘವಾದೇನನ್ನೋ ಪಡೆದುಕೊಂಡಂತಹ ಭಾವ 🙂

-ಶ್ರುತಿ ಶರ್ಮಾ. ಮೈಸೂರು

25 Responses

  1. VINAY KUMAR V says:

    ಸೊಗಸಾದ ಬರಹ. ಸಂಗೀತದ ಅರಿವಿಲ್ಲದವರಿಗೂ ಅದನ್ನು ವಿವರಿಸಿದ ರೀತಿ ಪ್ರಶಂಸನೀಯ. ಅಭಿನಂದನೆಗಳು ಶ್ರುತಿ. 🙂

  2. jayashree says:

    excellent shruti. mesmerising narration. just perfect.

  3. savithrisbhat says:

    ಯುವ ಕಲಾವಿದ ಅಭಿಷೇಕ್ ರಘುರಾಮ್ ಅವರ ಹಾಡುಗಾರಿಕೆಯನ್ನು ಪುತ್ತೂರಿನವರಾದ ನಮಗೂ ಒಮ್ಮೆ ಕೇಳುವ ಅವಕಾಶ ಲಭಿಸಿತ್ತು.ಅಮೋಘ ಹಾಡುಗಾರಿಕೆ ಯಿ೦ದ ಸಭಿಕರನ್ನು ಸ೦ಗೇತ ಲೋಕಕ್ಕೆ ಕರೆದೊಯ್ದಿದ್ದರು .ಮೈಸೂರಿನಲ್ಲಾದ ಬೆಳದಿ೦ಗಳಲ್ಲಿ ಹಿ೦ದೋಳ ರಾಗದ ಆಲಾಪನೆ,ಹಾಡು,ಸ್ವರ ಗಳನ್ನು ಕಿವಿಗೆ ಕೇಳಿದ೦ತೆ ಅನುಭವವಾಯಿತು. ಸಾ_ಮ_ಜ_ವ_ರ_ಗ_ಮ_ನಾ. ತುಂಬಾ ಚೆನ್ನಾಗಿ ಬರೆದಿದ್ದೀರಿ .

    • Shruthi says:

      ಧನ್ಯವಾದಗಳು.
      “ಸಾಮಜವರಗಮನಾ.. ” ಹಿಂದೋಳದಲ್ಲಿರುವ ಮತ್ತೊಂದು ಅದ್ಭುತ ಕೃತಿ!

  4. Jithin says:

    I understand that the article is related to Hindol Raga and Music. Could you please translate it to English?

  5. BH says:

    ಬಹಳ ಸೊಗಸಾದ ನಿರೂಪಣೆ. ಈಗಿನ ಯುವಜನರು ಪಾಶ್ಚಾತ್ಯ ಹಾಗೂ ಅಬ್ಬರದ ಸಂಗೀತವನ್ನು ಹೆಚ್ಚಾಗಿ ಇಷ್ಟಪಡುವುದನ್ನು ಗಮನಿಸಿದ್ದೇವೆ. ಆದರೆ ತಾಂತ್ರಿಕ ವಿದ್ಯಾಭ್ಯಾಸದ ಜತೆಗೆ ಸಂಗೀತ ಮತ್ತು ಸಾಹಿತ್ಯದ ಒಲವನ್ನು ಹೊಂದಿರುವ ನಿಮ್ಮನ್ನು ನೋಡಿ ಖುಷಿಯಾಗುತ್ತದೆ.

    • Shruthi says:

      ಲೇಖನವನ್ನು ಆಳವಾಗಿ ಪರಿಗಣಿಸಿದ್ದಕ್ಕೆ ಧನ್ಯವಾದಗಳು 🙂

      ಪಾಶಾತ್ಯ ಸಂಗೀತವೂ ಶಾಸ್ತ್ರೀಯ ಸಂಗೀತದ 3 ಪ್ರಕಾರಗಳಲ್ಲೊಂದು. ಹೆಮ್ಮೆಯ ವಿಚಾರವೆಂದರೆ ಇದರ ಮೂಲವು ಭಾರತೀಯ ಸಂಗೀತವು.

  6. Krishnaveni Kidoor says:

    ಸಂಗೀತದ ಆಸ್ವಾದನೆ ,ಆಳವಾದ ಅನುಭೂತಿ ಜಗವೆಲ್ಲ ನಾದಮಯವಾದ ಬೆಳದಿಂಗಳ ಲೋಕ ಈ ಎಲ್ಲ ಓದಿದಾಗ ವಿಶೇಷ ಅನುಭೂತಿ ಓದುಗರಾದ ನಮಗೂ ಆಯಿತು .ಬರಹದಲ್ಲಿ ಒಳ್ಳೆಯ ಹಿಡಿತವಿದೆ .ಉತ್ತಮ ಸಂಸ್ಕಾರವಂತ ವ್ಯಕ್ತಿತ್ವ ಬೆಳೆಯುವಲ್ಲು ಕೂಡ ಸಂಗೀತ ಪ್ರಭಾವಿಸುತ್ತದೆ .ಅಪರೂಪವಾದ ಇಂತಹ ಬರಹ ಇನ್ನೂ ಬರಬೇಕು.

    • Shruthi says:

      ಧನ್ಯವಾದಗಳು.
      >> ಉತ್ತಮ ಸಂಸ್ಕಾರವಂತ ವ್ಯಕ್ತಿತ್ವ ಬೆಳೆಯುವಲ್ಲು ಕೂಡ ಸಂಗೀತ ಪ್ರಭಾವಿಸುತ್ತದೆ
      ನಿಜವಾದ ಮಾತು.
      ಇನ್ನಷ್ಟು ಬರಹಗಳನ್ನು ಬರೆಯಲು ಯತ್ನಿಸುತ್ತೇನೆ 🙂

  7. Ashok Mijar says:

    your article is really interesting. Nice to read and to get knowledge about music.

  8. Hemanth says:

    ಸಂಗೀತದಿಂದ ಮನುಷ್ಯನ ಬೌಧಿಕ ವಿಕಾಸವಾಗುವುದು.ನಿಮ್ಮ ಈ ಬರಹ ನಿಜವಾಗಲು ಸಂಗೀತದ ರಸಾನುಭೂತಿ ಅನುಭವ ನೀಡಿತು.ಸಂಗೀತ ಮಳೆಯನ್ನೂ ತರಿಸಬಹುದು.ಕಾಯಿಲೆಯನ್ನು ಗುಣಪಡಿಸುವುದು.

    ಕಾಫಿ ರಾಗ-ತಂಪಿನ ಅನುಭವ ನೀಡುವುದು
    ಭಾಗ್ಹೆಶ್ವರಿ ರಾಗ -ಅತಿ ಒತ್ತಡ ಮತ್ತು ಮಧುಮೇಹ ನೀಯಂತ್ರಿಸುವುದು
    ಭೂಪಾಲಿ ರಾಗ -bp ನೀಯಂತ್ರಿಸುವುದು.
    ಒಟ್ಟಿನಲ್ಲಿ ಸಂಗೀತ ಮನೋಲ್ಲಾಸ ನೀಡುವುದು ನಿಮ್ಮ ಬರಹದಂತೆ…..ಅದ್ಭುತ ,ವಿನೂತನ,ಹರ್ಷಮಯ.

  9. neethi says:

    the way you have narrated is simply ಸುಪರ್ಬ್ 🙂 keep going shruthi 🙂

  10. Parvathy says:

    Hi Shruthi,

    Very well narrated. Good work. Keep it up!. 🙂

  11. sindhoooo says:

    ಸಂಗೀತಮಯವಾದ ಉತ್ತಮ ಲೇಖನ. ಎಸ್. ಎಲ್. ಭೈರಪ್ಪನವರ ಕಾದಂಬರಿಗಳಲ್ಲಿ ಕಂಡುಬರುವಂತಹ, ಪಾಮರನೂ ಸಂಗೀತ ಆಲಿಸುತ್ತಿರುವೆನೋ ಎಂದು ಅನುಭೂತಿ ಪಡೆಯುವಂತಹ ಮತ್ತು ಸಂಗೀತ ಕಲಿಯಬೇಕೆಂದು ತುಡಿತ ಮೂಡಿಸುವಂತಹ ವರ್ಣನೆ! ಶುಭವಾಗಲಿ!

  12. ಲೇಕನ ತುಂಬಾ ಸೊಗಸಾಗಿ ಮೂಡಿಬಂದಿದೆ, ABHINANDANEGALU

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: