ಹೆಣ್ಣಿಗಿಲ್ಲವೆ ಆಯ್ಕೆಯ ಸಾಮರ್ಥ್ಯ ?
ಆಯ್ಕೆಯ ಮಾತು ಬಂದಾಗ ಹೆಣ್ಣು ಇನ್ನೊಬ್ಬರ ನಿರ್ದೇಶನದ ಪರಿಧಿಯಲ್ಲಿಯೇ ಉಳಿದು ಬಿಡುತ್ತಾಳೆ. ಅವಳ ಆಯ್ಕೆಯ ಬಗ್ಗೆ ಸಮಾಜ ಯಾವತ್ತೂ ಅವಿಶ್ವಾಸವನ್ನೇ ತೋರುತ್ತ ಬಂದಿದೆ. ‘ನಿನಗೇನೂ ತಿಳಿಯುವುದಿಲ್ಲ’ ಎಂಬ ಧೋರಣೆಯನ್ನು ಹೊಂದಿ ಆಕೆಯ ವೈಯಕ್ತಿಕ ಜೀವನದಲ್ಲೂ ಮೂಗು ತೂರಿಸಿ ಆಕೆಯ ಆಯ್ಕೆಯ ಹಕ್ಕನ್ನು ಕಸಿದುಕೊಳ್ಳುತ್ತದೆ. ಹೆಣ್ಣು ಅಬಲೆ, ಆಕೆಯ ಬುದ್ಧಿ ಮೊಣಕಾಲ ಕೆಳಗೆ, ನಿರ್ಧಾರ ತೆಗೆದುಕೊಳ್ಳುವಲ್ಲಿ ಆಕೆ ಅಸಮರ್ಥಳು ಎಂದು ಹೇಳುತ್ತಲೇ ಆಕೆಯ ರೆಕ್ಕೆಗಳಿಗೆ ಕೊಡಲಿ ಏಟನ್ನು ಕೊಡಲಾಗುತ್ತದೆ. ಮನೆಯಲ್ಲಿ ಹಿರಿಯರೆನ್ನಿಸಿಕೊಂಡವರೋ, ಅಥವಾ ಗಂಡಸರೋ ಆಯ್ಕೆಯ ಹಕ್ಕನ್ನು ಪಡೆದುಕೊಂಡಿರುತ್ತಾರೆ. ಅವರು ಬೆರಳು ತೋರಿಸಿದ್ದನ್ನೇ ಆಕೆ ಒಪ್ಪಿಕೊಳ್ಳಬೇಕಾಗುತ್ತದೆ. ಇಷ್ಟವಿರಲಿ, ಕಷ್ಟವಿರಲಿ ಅದರಲ್ಲೇ ಆಕೆ ತೃಪ್ತಿಯನ್ನು ಕಾಣಬೇಕಾಗುತ್ತದೆ.
ಚಿಕ್ಕವರಿರುವಾಗ ಅಪ್ಪ ಆಯ್ಕೆ ಮಾಡಿ ಕೊಡಿಸಿದ ಗೊಂಬೆಯನ್ನೇ ಇಷ್ಟಪಡಬೇಕು. ಅಪ್ಪ ಆರಿಸಿ ತಂದ ಬಟ್ಟೆಗಳನ್ನೇ ಧರಿಸಿ ಸಂತುಷ್ಠಳಾಗಬೇಕು. ಆದರೆ ಬುದ್ಧಿ ಬಲಿತು ಹದಿ ಹರೆಯಕ್ಕೆ ಕಾಲಿಟ್ಟಾಗಲೂ ತನಗೆ ಆಸಕ್ತಿ ಇರುವ ವಿಷಯವನ್ನು ಆಯ್ದುಕೊಂಡು ಓದುವ ಅವಕಾಶ ಕೆಲವು ಹೆಣ್ಣು ಮಕ್ಕಳಿಗಿಲ್ಲ. ವಿಜ್ಞಾನ ವಿಷಯವನ್ನು ಆಯ್ದುಕೊಂಡು ಓದುವಷ್ಟು ಸಮರ್ಥಳಾಗಿದ್ದರೂ ಹೆಣ್ಣಿಗೇಕೆ ವಿಜ್ಞಾನ, ಗಣಿತಗಳ ಗೊಡವೆ? ಎಷ್ಟೆಂದರೂ ಮದುವೆಯಾಗಿ ಹೋಗುವವಳು ಎಂಬ ಅಲಿಖಿತ ಧೋರಣೆಗಳಿಗೆ ಬಲಿಯಾಗಿ ತನ್ನ ಆಸೆ-ಆಕಾಂಕ್ಷೆಗಳನ್ನು ಹತ್ತಿಕ್ಕಿಕೊಳ್ಳಬೇಕಾಗುತ್ತದೆ. ಪದವಿಯ ನಂತರ ಮುಂದಿನ ಓದಿನ ಕುರಿತೂ ಅವಳ ಆಯ್ಕೆ, ನಿರ್ಧಾರಗಳು ಅಮಾನ್ಯವಾಗುತ್ತವೆ. ಇನ್ನು ಓದಿ ನಾಲ್ಕು ಕಾಸು ಸಂಪಾದಿಸಬೇಕೆಂಬ ಕೆಲವು ಹೆಣ್ಣು ಮಕ್ಕಳ ಕನಸು ಬೇರೆಯವರು ತೆಗೆದುಕೊಳ್ಳುವ ನಿರ್ಧಾರಗಳಲ್ಲೇ ಕಮರಿ ಹೋಗುತ್ತದೆ. ನೀನು ದುಡಿದು ತರುವ ಸಂಬಳದಲ್ಲಿ ಬದುಕುವ ಪರಿಸ್ಥಿತಿ ನಮಗಿನ್ನೂ ಬಂದಿಲ್ಲ ಎಂಬ ಮಾತಿನೊಂದಿಗೆ ಅವಳು ಕಟ್ಟಿಕೊಂಡ ಕನಸು ನುಚ್ಚು ನೂರಾಗುತ್ತದೆ.
ಮದುವೆಗೂ ಮುನ್ನ ಪಾಲಕರು, ಮದುವೆಯ ನಂತರ ಪತಿ, ಇಳಿ ವಯಸ್ಸಿನಲ್ಲಿ ಮಕ್ಕಳು ಹೆಣ್ಣನ್ನು ನಿಯಂತ್ರಿಸುತ್ತಲೇ ಬಂದಿದ್ದಾರೆ. ತನ್ನ ವೈಯಕ್ತಿಕ ಜೀವನದ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ, ಯೋಗ್ಯತೆ, ಅರ್ಹತೆಗಳಿದ್ದರೂ ಕೂಡ ಹೆಣ್ಣಿಗೆ ಆಯ್ಕೆಯ ವಿಷಯದಲ್ಲಿ ಸ್ವಾತಂತ್ರ್ಯವಿಲ್ಲ. ಜೀವಮಾನವಿಡೀ ಒಟ್ಟಾಗಿ ಬಾಳಿ ಬದುಕಬೇಕಾದ ಜೀವನ ಸಂಗಾತಿಯ ಆಯ್ಕೆಯ ವಿಷಯದಲ್ಲೂ ಆಕೆಗೆ ಸ್ವಂತಿಕೆಯಿಲ್ಲ. ಹೆತ್ತವರು ಹೇಳಿದ ಗಂಡನ್ನೇ ತಲೆ ಬಗ್ಗಿಸಿ ಒಪ್ಪಿಕೊಳ್ಳಬೇಕಾಗುತ್ತದೆ.
ವೈವಾಹಿಕ ಜೀವನಕ್ಕೆ ಕಾಲಿಟ್ಟಾಗ ಹಲವಾರು ಹೆಣ್ಣು ಮಕ್ಕಳು ಸಂಘರ್ಷಕ್ಕೆ ಒಳಗಾಗುತ್ತಾರೆ. ತಾವು ಕಾಪಿಟ್ಟುಕೊಂಡ ಕನಸುಗಳ ಸಾಕಾರಕ್ಕೆ ಸಂಗಾತಿಯಿಂದ ಪ್ರೋತ್ಸಾಹ ಸಿಗುವುದೆಂಬ ಆಕಾಂಕ್ಷೆಯಿಂದ ನವ ಜೀವನಕ್ಕೆ ಕಾಲಿಡುತ್ತಾರೆ. ಆದರೆ ಎಷ್ಟೋ ಹೆಣ್ಣು ಮಕ್ಕಳ ಆಸೆ, ಗುರಿಗಳು ಈಡೇರುವುದಿಲ್ಲ. ಆಕೆಯ ಓದು, ಸಮಾಜದಲ್ಲಿ ಗುರುತಿಸಿಕೊಳ್ಳಬೇಕೆಂಬ ಹಂಬಲ, ಕಲೆ, ಕೌಶಲ್ಯಗಳು, ಸಾಧನೆಗಳೆಲ್ಲ ತೆರೆಯ ಮರೆಯಲ್ಲಿ ಉಳಿದು ಬಿಡುತ್ತವೆ. ಸೂತ್ರದ ಗೊಂಬೆಯಾಗಿ ಆಡಿಸಿದಂತೆ ಆಡಬೇಕಾಗುತ್ತದೆ. ಎಲ್ಲೋ ಬೆರಳೆಣಿಕೆಯಷ್ಟು ಹೆಣ್ಣು ಮಕ್ಕಳು ಮದುವೆಗೆ ಮುನ್ನ ಸಾಧಿಸಲಾರದ್ದನ್ನು ಮದುವೆಯ ನಂತರ ಸಾಧಿಸುವ ಅವಕಾಶವನ್ನು ಪಡೆದುಕೊಳ್ಳುತ್ತಾರೆ.
ಇಳಿ ವಯಸ್ಸಿನಲ್ಲೂ ಕೂಡ ಹೆಣ್ಣಿನ ಸ್ವಂತಿಕೆಗೆ ಬೆಲೆ ಇರುವುದಿಲ್ಲ. ತಲೆಮಾರಿನ ಅಂತರ, ಮನೆಯವರ ಉದಾಸೀನತೆಯಿಂದ ಮೂಲೆಗುಂಪಾಗುತ್ತಾರೆ. ಅಳಿದುಳಿದ ಬದುಕನ್ನು ಅವರಿಚ್ಛೆಯಂತೆ ಬಾಳಲಾಗುವುದಿಲ್ಲ. ಕಾಲ ಬದಲಾಗಿದೆ, ನಿಮ್ಮ ಕಾಲವೇ ಬೇರೆ. ನಮ್ಮ ಕಾಲವೇ ಬೇರೆ. ನಿನಗೇನೂ ತಿಳಿಯದು ಎಂದು ಹೇಳಿ ಬಾಯಿ ಮುಚ್ಚಿಸಿ ಬಿಡುತ್ತಾರೆ. ಒಟ್ಟಿನಲ್ಲಿ ಹೆಣ್ಣು ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ಸಮರ್ಥಳಾದರೂ ಹೆಣ್ಣು ಎಂಬ ಒಂದೇ ಒಂದು ಕಾರಣದಿಂದ ಆಕೆಯ ಆಯ್ಕೆಗಳು ತಿರಸ್ಕೃತಗೊಳ್ಳುತ್ತವೆ.
ಕೊಟ್ಟ ಕೊನೆಗೆ ಹೆಣ್ಣು ಪ್ರಶ್ನಿಸುವುದು ಒಂದನ್ನೇ. ನಮಗೆ ಆಯ್ಕೆಯ ಹಕ್ಕಿಲ್ಲವೆ? ನಿರ್ಧಾರ ತೆಗೆದುಕೊಳ್ಳುವ ಜಾಣ್ಮೆ ಇಲ್ಲವೆ? ಅಥವಾ ಸ್ತ್ರೀ ಸ್ವಾತಂತ್ರ್ಯಕ್ಕೆ ಅರ್ಹಳಲ್ಲವೆ ಎಂದು.
– ಗೌರಿ ಚಂದ್ರಕೇಸರಿ, ಶಿವಮೊಗ್ಗ.