ಗುಮ್ಮನ ಕರೆಯದಿರೆ

Share Button

 

 

ಸಮಯ ಹಾಗೂ ಅನುಕೂಲತೆ ಇದ್ದರೆ ಯಾವುದೇ ರೀತಿಯ ಪ್ರಯಾಣವನ್ನು ಇಷ್ಟಪಡುವ ಜಾಯಮಾನದವಳಾದ ನನಗೆ ಎಲ್ಲಾ ಬಗೆಯ ಯಾನಗಳೂ ಸಂತಸದಾಯಕ. ಹಿಮಾಚ್ಛಾದಿತ ಬೆಟ್ಟಗಳ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾರಾಡಿದಾಗ ಸಿಗುವ ಖುಷಿಯನ್ನು ಮೈಸೂರಿನ ರಸ್ತೆಗಳಲ್ಲಿ ಜಟಕಾಗಾಡಿಯಲ್ಲಿ ಪ್ರಯಾಣಿಸಿದಾಗಲೂ ಕಂಡುಕೊಳ್ಳುತ್ತೇನೆ.  ಗುಂಡಿಗಳೇ ಹೆಚ್ಚಿರುವ ರಸ್ತೆಗಳಲ್ಲಿ ದ್ವಿಚಕ್ರವಾಹನ ಚಲಾಯಿಸುವಾಗ ಹಲವು ಬಾರಿ ಮುಗ್ಗರಿಸಿ ಬಿದ್ದಿದ್ದರೂ, ಯಾನ ದೈನಂದಿನ ಅಗತ್ಯ. ಈ ದಿನಗಳಲ್ಲಿ ಹೆಚ್ಚಿನವರಿಗೂ  ಕಾರು, ಬಸ್ಸು, ರೈಲು, ವಿಮಾನಗಳಲ್ಲಿ ಪ್ರಯಾಣಿಸುವುದು ಸಾಮಾನ್ಯ ಅಥವಾ ಅನಿವಾರ್ಯ. ಹಾಗಾದರೆ, ವಾಹನಗಳಲ್ಲಿ ಮಾತ್ರವೇ ಯಾನ ಮಾಡಬೇಕೆ? ಯಾನಕ್ಕೊಂದು ವಿಶೇಷ ಭಾವವಿದೆ;  ‘ಕಥಾಯಾನ‘ದ ಮೂಲಕ  ಸಾಹಿತ್ಯಲೋಕವನ್ನು ತಲಪಬಹುದು ಎಂಬುದು ನನಗೆ ಈಗ ತಾನೇ ಮನದಟ್ಟಾದ ವಿಷಯ.

ಭಾರತೀಯ ಅಣುವಿದ್ಯುತ್ ನಿಗಮ, ಕೈಗಾ  ಮತ್ತು ಸಹ್ಯಾದ್ರಿ ಕನ್ನಡ ಸಂಘದ ಸಹಯೋಗದಲ್ಲಿ, ಖ್ಯಾತ ಸಾಹಿತಿ ಮತ್ತು ಅಂಕಣಕಾರರಾದ ಶ್ರೀ ಸಂತೋಷಕುಮಾರ ಮೆಹೆಂದಳೆ ಅವರ ನೇತೃತ್ವದಲ್ಲಿ 09-10 ಜೂನ್ 2018  ರಂದು ಕೈಗಾದ ಟೌನ್ ಶಿಪ್ ನಲ್ಲಿ  ‘ಕಥಾಯಾನ‘  ಕಾರ್ಯಕ್ರಮವು ಬಹಳ ವ್ಯವಸ್ಥಿತವಾಗಿ ನೆರವೇರಿತು. ಎರಡು ದಿನಗಳ ಕಾಲ ಜರುಗಿದ ಈ ಶಿಬಿರದಲ್ಲಿ, ರಾಜ್ಯದ ವಿವಿಧೆಡೆಗಳಿಂದ ಬಂದ  ವಿವಿಧ ವಯೋಮಾನದ, ಸರಕಾರಿ ಹಾಗೂ ಖಾಸಗಿ ಸಂಸ್ಥೆಯ ಉದ್ಯೋಗಿಗಳು, ಗೃಹಿಣಿಯರು…ಹೀಗೆ ವಿಭಿನ್ನ ವರ್ಗದ ಪ್ರತಿನಿಧಿಗಳು ಭಾಗವಹಿಸಿದ್ದುದು ವಿಶೇಷವಾಗಿತ್ತು.

ಕರಾವಳಿಯಲ್ಲಿ ನಾವಿದ್ದ ಮೂರುದಿನಗಳ ಕಾಲವೂ ನಿರಂತರವಾಗಿ ಮಳೆಯ ಸಿಂಚನದ ಜತೆಗೆ ಸಾಹಿತ್ಯದ ಲಹರಿ. ಆಗಾಗ ಮಂಜಿನ ಮುಸುಕಿನೊಳಗೆ ಮರೆಯಾಗುತ್ತಿದ್ದ ಪಶ್ಚಿಮ ಘಟ್ಟಗಳ ಸಾಲು, ಹಸಿರಾಗಿ ಕಂಗೊಳಿಸುತ್ತಿದ್ದ ಗಿಡಮರಗಳು, ರಸ್ತೆಯುದ್ದಕ್ಕೂ ಇಕ್ಕೆಲಗಳಲ್ಲಿ ನೀರು ತುಂಬಿದ್ದ ಗದ್ದೆಗಳು, ಆಗೊಮ್ಮೆ ಈಗೊಮ್ಮೆ ಭರ್ರೋ ಎಂದು ಬೀಸುವ ತೆಂಕಣ ಗಾಳಿಗೆ ಬಾಗುವ ಕೊಂಕಣ ಸೀಮೆಯ ಮರಗಿಡಗಳು….ಇಷ್ಟಾಗಿಯೂ ಸ್ವಲ್ಪ ಸೆಕೆ ಎನಿಸುತ್ತಿದ್ದ ಕಡಲತಡಿಯ ವಾತಾವರಣ. ಇಂತಹ ಸುಂದರ ವಾತಾವರಣದಲ್ಲಿ ‘ಕಥಾಯಾನ’ದ ಅನಾವರಣ ಬಲು ಆಪ್ತವಾಗಿತ್ತು.

ಜೂನ್ 09, 2018 ರಂದು ಸಾಹಿತ್ಯ ಕಾರ್ಯಾಗಾರದ  ನಿರೂಪಕರಿಂದ ಸ್ವಾಗತ, ಸಂಚಾಲಕರ ಪ್ರಾಸ್ತಾವಿಕ ನುಡಿಗಳ ನಂತರ    ಮುಖ್ಯ ಅತಿಥಿಗಳು ಹಾಗೂ ವಿಶೇಷ ಅಹ್ವಾನಿತರು ದೀಪ ಬೆಳಗುವ ಮೂಲಕ ‘ಕಥಾಯಾನ’ಕ್ಕೆ ಚಾಲನೆ ಕೊಡಲಾಯಿತು.


ಶ್ರೀ ಜೆ.ಆರ್ .ದೇಶಪಾಂಡೆ , ಕೇಂದ್ರ ನಿರ್ದೇಶಕರು, ಕೈಗಾ 3-4 ಘಟಕ ಅವರು, ಅಣುವಿದ್ಯುತ್  ನಿಗಮದ ಸಾಮರ್ಥ್ಯ, ಕಾರ್ಯವೈಖರಿ, ಸಾಮಾಜಿಕ ಜವಾಬ್ದಾರಿ, ಸುರಕ್ಷತೆಗೆ ಕೊಡಲಾದ ಆದ್ಯತೆ  ಮೊದಲಾದ ವಿಚಾರಗಳನ್ನು ವಿವರಿಸಿ, ಘಟಕದಿಂದಾಗಿ ಸುತ್ತುಮುತ್ತಲಿನ ಪರಿಸರ ಹಾಗೂ ನಿವಾಸಿಗಳ  ಮೇಲೆ ಯಾವುದೇ ಹಾನಿಯಾಗುತ್ತಿಲ್ಲ, ವಿದ್ಯುತ್ ಉತ್ಪಾದನೆಯ ಜೊತೆಗೆ  ಪರಿಸರ ಸಮೃದ್ಧಿ, ಸಮಾಜಸೇವೆ ಹಾಗೂ ಸಾಹಿತ್ಯವು ಬೆಳೆಯಲಿ ಎಂಬುದು ನಿಗಮದ ಉದ್ದೇಶ ಎಂದರು.

ಸಾಹಿತ್ಯಿಕ ಕಾರ್ಯಕ್ರಮದ ಮೊದಲ ಅವಧಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದ ಡಾ.ಚಂದ್ರಿಕಾ ಅವರು, ಕವನದ ಸಾಹಿತ್ಯಿಕ ಒಳನೋಟ, ಆಶಯ, ಭಾವ, ಶಬ್ದಾಡಂಬರ, ಪ್ರಾಸಪದಗಳ ಔಚಿತ್ಯ, ಕವನ ಹುಟ್ಟುವ ಸಂದರ್ಭ ಇತ್ಯಾದಿಗಳ ಬಗ್ಗೆ ಬಹಳ ಸೊಗಸಾಗಿ ಸಾಹಿತ್ಯದ ಅಂತರಂಗ ಮತ್ತು ಬಹಿರಂಗವನ್ನು ತೆರೆದಿಟ್ಟರು. ಅವರದೇ ಮಾತಿನಲ್ಲಿ ಹೇಳುವುದಾದರೆ, ಇದು ‘ಪವರ್ ಪ್ಲಾಂಟ್ ಜತೆಗೆ ಸಾಹಿತ್ಯದ ಪವರ್’ !

ಅಂಕಣ ಬರಹಗಳ ಆಳ-ವಿಸ್ತಾರ, ಬೆಡಗು-ಬಿನ್ನಾಣಗಳ, ಬರಹಕ್ಕೆ ಪೂರ್ವತಯಾರಿ ಹಾಗೂ ನಿರಂತರ ಓದುವಿಕೆಯ ಅಗತ್ಯದ ಬಗ್ಗೆ  ಬೆಳಕು ಚೆಲ್ಲಿದ ಖ್ಯಾತ ಲೇಖಕ ಶ್ರೀ ರೋಹಿತ್ ಚಕ್ರತೀರ್ಥ ಅವರು ಬಹಳ ರಸವತ್ತಾಗಿ ವಿಷಯ ಮಂಡನೆ ಮಾಡುತ್ತಾ ‘ಕಷ್ಟಪಟ್ಟು ಬರೆಯಿರಿ, ಕಷ್ಟಪಟ್ಟು ಓದುವ ಹಾಗಿರಬಾರದು’ ಎಂಬ ಸಲಹೆ ಕೊಟ್ಟರು.

ಮುಂದಿನ  ಅವಧಿಯಲ್ಲಿ ಮಾತನಾಡಿದ ಶ್ರೀ ಸಂತೋಷಕುಮಾರ ಮೆಹೆಂದಳೆ ಅವರು, ಕಥೆಗಳ ರಚನಾಕ್ರಮ, ಕಥಾವಸ್ತುಗಳ ಆಯ್ಕೆ, ಸೂಕ್ತವಾದ ಶೀರ್ಷಿಕೆ ಕೊಡುವ ಅಗತ್ಯ ಹಾಗೂ ಕಥನ ಶೈಲಿಯ ಬಗ್ಗೆ ತಮ್ಮ ಕೆಲವು ಸಣ್ಣ ಕಥೆಗಳ ಉದಾಹರಣೆಯೊಂದಿಗೆ ಬಲು ಸೊಗಸಾಗಿ ನಿರೂಪಿಸಿದರು .

ಶ್ರೀ ಅಶೋಕ್ ಹಾಸ್ಯಗಾರ ಅವರು ಸಾಪ್ತಾಹಿಕ ಪುರವಣಿಗಳಿಗೆ ಬರೆಯುವಾಗ ಸಾರ್ವತ್ರಿಕ ವಿಚಾರಗಳು, ಸಾಂದರ್ಭಿಕತೆ, ಮೂಢನಂಬಿಕೆಗಳಿಲ್ಲದಿರುವುದು, ಮಾಹಿತಿಯ ಸಮಗ್ರತೆ, ಸಂಪಾದಕರ ಜವಾಬ್ದಾರಿ ಮತ್ತು ನಿರೀಕ್ಷೆಗಳ ಬಗ್ಗೆ ಅರಿವು ಇತ್ಯಾದಿಗಳನ್ನು ವಿವರಿಸಿದರು.

ಮಡಕೆ ಚೂರಿನಿಂದ  ಆರಂಭವಾದ ಅಕ್ಷರಗಳು ಶಿಲಾಶಾಸನ, ತಾಳೆಗರಿ, ಬಟ್ಟೆ,ಕಾಗದಗಳಲ್ಲಿ ಮೂಡಿ,  ಕಂಪ್ಯೂಟರ್ ಪರದೆಯ ಮೇಲೆ  ಹರಿದುಬಂದ ಪರಿಯನ್ನು  ವಿವರಿಸುತ್ತಾ ಶ್ರೀ ಉದಯಶಂಕರ ಪುರಾಣಿಕ ಅವರು ಕನ್ನಡ ಸಾಫ್ಟ್ ವೇರ್‍ ನ ಅವಿಷ್ಕಾರ, ದೂರದರ್ಶನ, ಎ.ಟಿ.ಎಮ್ ಗಳಲ್ಲಿ ಕನ್ನಡ ತಂತ್ರಾಂಶದ ಅಳವಡಿಕೆ   ಮತ್ತು  ತಾವು ಎದುರಿಸಿದ ಕೆಲವು ಸಮಸ್ಯೆಗಳನ್ನು ತೆರೆದಿಟ್ಟರು. ಡಾ.ರಾಜಶೇಖರ ಮಠಪತಿ ಅವರು ಕೆಲವು ಪ್ರಸಿದ್ಧ ಆಂಗ್ಲ ಹಾಗೂ ಕನ್ನಡ ಕಾದಂಬರಿಗಳ ಉದಾಹರಣೆ ಸಮೇತವಾಗಿ  ಕಾದಂಬರಿಯ ಪ್ರಕಾರಗಳು, ವಿನ್ಯಾಸ, ಪಾತ್ರ, ಶೈಲಿ ಇತ್ಯಾದಿ ವಿಚಾರಗಳನ್ನು ಪ್ರಸ್ತುತಪಡಿಸಿದರು ,

ಪತ್ರಿಕಾ ಪ್ರಕಟಣೆಗೆ ಕಳುಹಿಸುವ ಬರಹಕ್ಕೆ  ಸರಿಹೊಂದುವ ಸಾಂದರ್ಭಿಕ ಚಿತ್ರಗಳನ್ನು ತೆಗೆಯುವ ಕಲೆ ಹಾಗೂ ಸುಂದರವಾದ ಚಿತ್ರಗಳನ್ನು ಸೇರಿಸಿ ಬರಹವನ್ನು ರಚಿಸುವ ಕೌಶಲದ ಬಗ್ಗೆ ಮಾತನಾಡಿದ ಶ್ರೀ ನಾಗೇಶ್ ಮುತ್ಮುರ್ಡು ಅವರು ಪ್ರದರ್ಶಿಸಿದ ಪ್ರಕೃತಿಯ ಮತ್ತು ಪುಟ್ಟ ಮಕ್ಕಳ ಚಿತ್ರಗಳಲ್ಲಿ ಅದ್ಭುತವಾದ ಬೆಳಕು ಮತ್ತು ಭಾವದ ಯಾನವಿತ್ತು.

‘ಕರಾವಳಿ ಮುಂಜಾವು’ ಪತ್ರಿಕೆಯ  ಸಂಪಾದಕರಾದ ಶ್ರೀ ಗಂಗಾಧರ ಹಿರೇಗುತ್ತಿ ಅವರು ಪತ್ರಿಕೋದ್ಯಮದ ಆಯಾಮಗಳು ಮತ್ತು  ಸಂಪಾದಕರ ದೃಷ್ಟಿಯಿಂದ ಬರಹಗಳು ಹೇಗಿರಬೇಕು  ಎಂದು ಬಹಳಷ್ಟು ವಿಚಾರಗಳನ್ನು ತಿಳಿಯಪಡಿಸಿದರು.

ಕೈಗಾ ಅಣುವಿದ್ಯುತ್ ನಿಗಮದವರು ತಮ್ಮ ಪ್ರಾತ್ಯಕ್ಷಿಕೆಯ ಮೂಲಕ, ವಿದ್ಯುತ್ ನ ಹೆಚ್ಚುವರಿ ಅಗತ್ಯ, ಸಂಪನ್ಮೂಲಗಳ ಕೊರತೆ, ಬೃಹತ್ ಪ್ರಮಾಣದಲ್ಲಿ ಪ್ರಾಕೃತಿಕ ಸಂಪನ್ಮೂಲಗಳಿಂದ ವಿದ್ಯುತ್ ತಯಾರಿಸಲು ಇರುವ ತೊಡಕುಗಳು ಇತ್ಯಾದಿಗಳನ್ನು ಮನದಟ್ಟು ಮಾಡಿದರು. ಯುರೇನಿಯಂ ಮೂಲವಸ್ತುವಿನ ಅಣುವಿದಳನದ ಮೂಲಕ ಉತ್ಪನ್ನವಾದ ತಾಪಮಾನವನ್ನು ಭಾರಜಲದ ಮೂಲಕ  ಹೀರಿಕೊಂಡು,  ಕಾಳಿನದಿಯ ನೀರನ್ನು ಉಪಯೋಗಿಸಿ, ಉಗಿಯನ್ನಾಗಿಸಿ, ಉಗಿಯ ಮೂಲಕ  ಟರ್ಬೈನ್ ಗಳನ್ನು ಅತಿವೇಗವಾಗಿ ಚಲಿಸಿ ವಿದ್ಯುತ್ ಉತ್ಪನ್ನವಾಗುವ ಪರಿ ಮತ್ತು ಉತ್ಪಾದಿಸಿದ ವಿದ್ಯುತ್ ಅನ್ನು ಪವರ್ ಗ್ರಿಡ್ ಗಳಿಗೆ ಹಾಯಿಸಿ ಪ್ರವಹಿಸುವ ವಿಧಾನಗಳು, ನೀರನ್ನು ತಣಿಸಿ ಪುನ: ನದಿಗೆ ಬಿಡುವ ಪ್ರಕ್ರಿಯೆ, ತ್ಯಾಜ್ಯ ನಿರ್ವಹಣೆ ಹಾಗೂಪ್ರತಿ ಹಂತದಲ್ಲಿಯೂ ಅಳವಡಿಸಿರುವ ಸುರಕ್ಷತಾ ಮುಂಜಾಗರೂಕತೆ ಕ್ರಮಗಳನ್ನು ವಿವರಿಸಿದರು.

‘ಕಾಳಿ ನದಿಯ ನೀರಿಗೆ ಯಾವುದೇ ವಿಕಿರಣ ಸೋಕುವುದಿಲ್ಲ, ಜಲಚರಗಳಿಗೆ ಹಾನಿಯಾಗುವ ಸಂಭವನೀಯತೆ ಇಲ್ಲವೇ ಇಲ್ಲ, ಇದೇ ನೀರನ್ನು ಕೈಗಾ ಟೌನ್ ಶಿಪ್ ನ ಅಗತ್ಯಗಳಿಗಾಗಿ ಬಳಸುತ್ತೇವೆ. ವಿಕಿರಣದಿಂದಾಗಿ ಸ್ಥಳೀಯರಲ್ಲಿ ಮಾರಣಾಂತಿಕ ರೋಗಗಳು ಹಬ್ಬುತ್ತಿವೆ ಎಂಬ ಮಾಹಿತಿ ಸತ್ಯಕ್ಕೆ ದೂರವಾದುದು . ಹಲವಾರು ವರ್ಷಗಳಿಂದ ರಿಯಾಕ್ಟರ್ ನ ಸಮೀಪದಲ್ಲಿಯೇ ಕೆಲಸ ಮಾಡುತ್ತಿದ್ದರೂ ನಾವು ಆರೋಗ್ಯವಾಗಿದ್ದೇವೆ.  ಇಲ್ಲಿ ಕಾಣಸಿಗುವ ಅಪಾರ ಪಕ್ಷಿಸಂಕುಲ ಮತ್ತು ಇತರ ಜೀವವೈವಿಧ್ಯವು ಇಲ್ಲಿನ ಸಮೃದ್ಧ ಪರಿಸರಕ್ಕೆ ಸಾಕ್ಷಿ. ವಿಕಿರಣದಿಂದಾಗಿ  ಏನಾದರೂ ಹಾನಿಯಾಗುವುದಿದ್ದರೆ ರಿಯಾಕ್ಟರ್ ನ ಪಕ್ಕದಲ್ಲಿಯೇ ಹಲವು ವರ್ಷಗಳಿಂದ ಇರುವ ನಮಗೇ ಮೊದಲು ಕ್ಯಾನ್ಸರ್ ಬರಬೇಕಿತ್ತು ಅಂದಾಗ ಹೌದೆನ್ನಿಸಿತು.

1987ರ ಆಸುಪಾಸಿನಲ್ಲಿ, ನಾನು ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿರುವ  ವಿವೇಕಾನಂದ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದ ಸಮಯ. ಆಗ ಕೈಗಾ ಅಣುವಿದ್ಯುತ್ ನಿಗಮದ ಸ್ಥಾಪನೆಯ ವಿರುದ್ಧ  ರಾಜ್ಯವ್ಯಾಪಿ ಆಂದೋಲನ ನಡೆದಿತ್ತು. ‘ಕೈಗಾದಲ್ಲಿ ಕಾಡು ಕಡಿದು ಬಾಂಬ್ ಫ್ಯಾಕ್ಟರಿ ಮಾಡುತ್ತಾರಂತೆ… ಎಲ್ಲರೂ  ಸ್ಟ್ರೈಕ್ ಮಾಡುತ್ತಾರೆಂತೆ, ನಾವೂ ಜಾಥಾ ಮಾಡಬೇಕು ಇವಿಷ್ಟೇ ಆಗ ಹದಿಹರೆಯದಲ್ಲಿದ್ದ ನಮಗೆ ಅರ್ಥವಾದ ವಿಷಯಗಳು ಹಾಗೂ ಸಾರ್ವಜನಿಕರು ಚರ್ಚಿಸುತ್ತಿದ್ದ  ‘ಕೈಗಾದ ಗುಮ್ಮ’.  ಮುಗ್ಧತೆ ಹಾಗೂ ಅಜ್ಞಾನದಿಂದ ಕೈಗಾ ಅಣುವಿದ್ಯುತ್  ಕೇಂದ್ರದ ಸ್ಥಾಪನೆಯನ್ನು ವಿರೋಧಿಸಿದ ಸಾವಿರಾರು ಮಂದಿಯಲ್ಲಿ ನಾನೂ ಒಬ್ಬಳು. ಸುಮಾರು ಮೂವತ್ತು ವರ್ಷಗಳ ನಂತರ, ಅದೇ ಕೈಗಾ ಘಟಕದ ಆವರಣದಲ್ಲಿ , ಸಾಹಿತ್ಯ ಕಾರ್ಯಾಗಾರದ ಮೂಲಕ, ಅವರ ಆತಿಥ್ಯ ಪಡೆಯುವಂತಾದುದು ಯೋಗಾಯೋಗ!

ನನ್ನ ವೃತ್ತಿಜೀವನದಲ್ಲಿ ರಾಸಾಯನಿಕ ವಸ್ತುಗಳನ್ನು ತಯಾರಿಸುವ ಬಹುರಾಷ್ಟ್ರೀಯ ಸಂಸ್ಥೆಯಲ್ಲಿ ಕೆಲಸಮಾಡಿದ ಕಾರಣ,  , ಸಂಸ್ಥೆಯ ಸಾಮಾಜಿಕ ಜವಾಬ್ದಾರಿ, ಗುಣಮಟ್ಟದ ಉತ್ಪಾದನೆಯ ಜೊತೆಗೆ ತನ್ನ ಸಂಸ್ಥೆಯ ಉದ್ಯೋಗಿಗಳ ಆರೋಗ್ಯ ಮತ್ತು ಸುತ್ತುಮುತ್ತಲಿನ ಪರಿಸರಕ್ಕೆ ಹಾನಿಯುಂಟಾಗಬಾರದೆಂಬ ನೈಜ ಕಾಳಜಿ, ಕಾರ್ಖಾನೆ ಮತ್ತು ಬಾಯ್ಲರ್ ಗಳ್ ಇಲಾಖೆಯ ಕಣ್ಗಾವಲು,  ಕೈಗಾರಿಕೆಗೆ ಸಂಬಂಧಿಸಿದ ಕೆಲವು ನಿಯಮಾವಳಿಗಳು,  ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕುಶ,  ಪ್ರತಿಯೊಬ್ಬನ ಉದ್ಯೋಗಕ್ಕೆ ಸಂಬಂಧಿಸಿದ ವಿಶಿಷ್ಟ ಸುರಕ್ಷತಾ ನಡಾವಳಿಗಳು, ಅಗ್ನಿಶಾಮಕ ಮತ್ತು ಪ್ರಥಮ ಚಿಕಿತ್ಸಾ ತರಬೇತಿ,  ಉದ್ಯೋಗದ ಸ್ಥಳದಲ್ಲಿ ಸುರಕ್ಷೆಗೆ ಸಂಬಂಧಿಸಿದ ನಿಯಂತ್ರಣಾ ವಿಧಾನಗಳು, ಅಪಘಾತ ತಡೆಗಟ್ಟುವುದು,   ಅಪಘಾತದ ಅಣಕು ಪ್ರದರ್ಶನ, ತುರ್ತು ನಿರ್ವಹಣೆ ….ಹೀಗೆ ಹಲವಾರು ಸುರಕ್ಷತೆಗೆ ಸಂಬಂಧಿಸಿದ ಚಟುವಟಿಕೆಗಳಲ್ಲಿ ಭಾಗವಹಿಸಿದ ಅನುಭವವಾಯಿತು.  ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಯಾವುದೇ ಕೈಗಾರಿಕೆಯಲ್ಲಿ ‘ಸುರಕ್ಷತೆ ಮೊದಲು, ಕೆಲಸ ಆಮೇಲೆ’  ಎಂಬ ವೇದವಾಕ್ಯ ಸದಾ ಚಾಲನೆಯಲ್ಲಿರುತ್ತದೆ ಎಂಬುದು ನನ್ನ ಸ್ವಾನುಭವ, ಹೀಗಿರುವಾಗ ವಿಕಿರಣಶೀಲ ರಾಸಾಯನಿಕ ವಸ್ತುಗಳನ್ನು ಬಳಸುವ ಕೈಗಾ ಅಣುವಿದ್ಯುತ್ ನಿಗಮದಲ್ಲಿ ಸುರಕ್ಷತೆಯ ಬಗ್ಗೆ ರಾಜಿ ಮಾಡಲು ಸಾಧ್ಯವೇ ಇಲ್ಲ ಎಂದು ಖಂಡಿತವಾಗಿ ಹೇಳಬಹುದು.

11 ಜೂನ್  2018 ರಂದು ನಮಗೆ ಕೈಗಾ ಅಣುವಿದ್ಯುತ್ ಉತ್ಪಾದನಾ ಘಟಕಕ್ಕೆ ಭೇಟಿಯ ಕಾರ್ಯಕ್ರಮವಿತ್ತು.  ಟೌನ್ ಶಿಪ್ ನಿಂದ 16 ಕಿ.ಮೀ ದೂರದಲ್ಲಿರುವ ಘಟಕಕ್ಕೆ ಬಸ್ ವ್ಯವಸ್ತೆಯಿತ್ತು. ಮುಖ್ಯದ್ವಾರದಿಂದಲೇ ಆರಂಭವಾದ ಸುರಕ್ಷತಾ ತಪಾಸಣೆ ವಿವಿಧ  ಹಂತಗಳಲ್ಲಿ ಮುಂದುವರಿದಿತ್ತು. ಹಸಿರ ಸಿರಿಯ ಮಧ್ಯೆ ಇರುವ ಘಟಕದಲ್ಲಿ ಶುಚಿತ್ವ  ಹಾಗೂ ಅಚ್ಚುಕಟ್ಟುತನ ಎದ್ದು ಕಾಣುತ್ತಿತ್ತು. ಸಂಬಂಧಿತ ಅಧಿಕಾರಿಗಳು ಬಹಳ ಶ್ರದ್ಧೆ ಮತ್ತು ತಾಳ್ಮೆಯಿಂದ ನಮಗೆ ಘಟಕದ ಕಾರ್ಯವಿಧಾನವನ್ನು ವಿವರಿಸಿ ಆಯಾ ವಿಭಾಗಕ್ಕೆ ಕರೆದೊಯ್ದರು.  ಉದ್ಯೋಗಿಗಳ ಹಾಗೂ ಅತಿಥಿಗಳ  ಸುರಕ್ಷತೆಯ ಬಗ್ಗೆ ಆದ್ಯತೆ ಕೊಟ್ಟಿರುವುದು ಗಮನಕ್ಕೆ ಬಂತು.

‘ಅಜ್ಞಾನಕ್ಕೆ  ಅಭಿಜ್ಞಾನವೇ ಮದ್ದು’ ಎಂಬಂತೆ, ಕೈಗಾ ಅಣುವಿದ್ಯುತ್ ನಿಗಮದ ಕಾರ್ಯವೈಖರಿ ಹಾಗೂ ವಿಕಿರಣದ ಬಗ್ಗೆ  ಭಯ, ಕುತೂಹಲ  ಇರುವವರು ಅಥವಾ ಅಪೂರ್ಣ ಮಾಹಿತಿ ಪಡೆದು ಗೊಂದಲದಲ್ಲಿ ಇರುವವರು  ಒಮ್ಮೆ ಕೈಗಾಕ್ಕೆ ಭೇಟಿ ಕೊಟ್ಟರೆ ಉತ್ತಮ. ಸಾರ್ವಜನಿಕರು ಆಡಳಿತ ಮಂಡಳಿಯ ಪೂರ್ವಾನುಮತಿ ಪಡೆದು  ಪ್ರತಿ  ಶನಿವಾರದಂದು ಅಲ್ಲಿಗೆ ಭೇಟಿ ಕೊಡಬಹುದಾದ ವ್ಯವಸ್ಥೆಯನ್ನು ಕಲ್ಪಿಸಿದ್ದಾರೆ.

ಸಾಹಿತ್ಯದ ಬಗ್ಗೆ ತಿಳಿವಳಿಕೆ ಮೂಡಿಸುವ ಉಪನ್ಯಾಸಗಳು, ವೈಯುಕ್ತಿಕ ಕಾಳಜಿ ವಹಿಸಿದ ಆತಿಥ್ಯ, ಶಿಸ್ತುಬದ್ಧ ಸಂಯೋಜನೆ  ಅಚ್ಚುಕಟ್ಟಾದ ಕಾರ್ಯಕ್ರಮ ಸಂಯೋಜನೆ, ಶುಚಿರುಚಿಯಾದ ಊಟೋಪಚಾರದ ಜೊತೆಗೆ ಸೂಕ್ತ ವಾಸ್ತವ್ಯವನ್ನು ಒದಗಿಸಿಕೊಟ್ಟ  ಅತಿಥೇಯರಿಗೆ ಮತ್ತು ‘ಕಥಾಯಾನ’ ಎಂಬ ವಿನೂತನ ಕಾರ್ಯಕ್ರಮದ ಮೂಲಕ ನಮ್ಮ ಕೈಗಾ ಭೇಟಿಗೆ ಕಾರಣರಾದ  ಶ್ರೀ ಸಂತೋಷಕುಮಾರ್ ಮೆಹೆಂದಳೆ ಅವರಿಗೆ ಅನಂತ ಧನ್ಯವಾದಗಳು.

 

– ಹೇಮಮಾಲಾ.ಬಿ

23 Responses

  1. ಶಂಕರಿ ಶರ್ಮ says:

    ಒಳ್ಳೆಯ ಬರಹ.

  2. Venkatesh says:

    “ಕಥಾಯಾನಾ”ದ ಸಂಪೂ ರ್ಣ ವರದಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಮೇಡಂ. ವಂದನೆಗಳು.

  3. Venkatesh says:

    “ಕಥಾಯಾನಾ”ದ ಸಂಪೂ ರ್ಣ ವರದಿ ತುಂಬಾ ಚೆನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು ಮೇಡಂ. ವಂದನೆಗಳು.

  4. ಎಸ್ ಎ ಕಾಂತಿ, ಕೈಗಾ says:

    ಶ್ರೀಮತಿ ಹೇಮಮಾಲಾರವರೇ, ಕೈಗಾದ ಅಣುವಿದ್ಯುತ ಘಟಕದ ಬಗ್ಗೆ ಜನರಲ್ಲಿ ಇರುವ ಪೂರ್ವಾಗ್ರಹ ಭಯ ಹಾಗೂ ಅದರ ಸುರಕ್ಷತೆಯ ಬಗ್ಗೆ ಬರೆದ ನಿಮ್ಮ ಲೆಖನ ತುಂಬಾ ಚನ್ನಾಗಿ ಮೂಡಿಬಂದಿದೆ. ಅಭಿನಂದನೆಗಳು. ಕಾಕತಾಳಿಯಂತೆ ನಾನೂ ಸಹ ಕಥಾಯಾನದ ವರದಿ ಪ್ರಾರಂಭಿಸಿದೆ ಕೆಲಸದ ಮಧ್ಯ ಪೂರ್ಣಗೊಳಿಸಲಾಗಿಲ್ಲ. ಮೊದಲ ದಿನದ ಕೊನೆಯ ಸಂಪನ್ಮೊಲ್ಲ ವ್ಯಕ್ತಿಯೊಂದಿಗೆ ಸುಮಾರು ಎರಡು ಪುಟಗಳಷ್ಟಾಗಿವೆ. ಇನ್ನೂ ಎರಡನೆಯ ದಿನದ್ದು ಸೇರಿಸಿದರೆ ಇನ್ನೆರಡು ಪುಟಗಳಾಗಬಹುದು. ಸದ್ಯ ಇದ್ದನ್ನು ನನ್ನಲ್ಲಿಯೇ ಇಟ್ಟುಕೊಳ್ಳುತ್ತೆನೆ. ಮತ್ತೊಂದು ಸಂಧರ್ಬಿಕ ವಿಶಯದೊಂದಿಗೆ ಸುರಹೊನ್ನೆಯೊಂದಿಗೆ ಸೇರಿಕೊಳ್ಳುತ್ತೆನೆ. ಉತ್ತಮ ಲೆಖನಕ್ಕಾಗಿ ಮತ್ತೊಮ್ಮೆ ಅಭಿನಂದನೆಗಳು. ಶುಭವಾಗಲಿ

    • Hema says:

      ಶ್ರೀಯುತ ಕಾಂತಿ ಅವರೇ,
      ಧನ್ಯವಾದಗಳು. ನಾನು ಕಥಾಯಾನದ ನಡಾವಳಿಗಳ ಬಗ್ಗೆ ಬರೆದಿರುವುದು ಅತ್ಯಲ್ಪ. ಒಂದೇ ಕಾರ್ಯಕ್ರಮದ ಬಗ್ಗೆ ಇಬ್ಬರು ಬರೆಯುವಾಗ ಕೆಲವು ವಾಕ್ಯಗಳು ಪುನರಾವರ್ತನೆ ಆಗುವುದು ಸಹಜ, ಅಡ್ಡಿಯಿಲ್ಲ. ತಮ್ಮ ಬರಹದ ಫೋಕಸ್ ಮತ್ತು ದೃಷ್ಟಿಕೋನ ವಿಭಿನ್ನವಾಗಿರಬಹುದು. ನಮ್ಮದು ಅಂತರ್ಜಾಲ ಪತ್ರಿಕೆಯಾದುದರಿಂದ ಪುಟ ಮಿತಿಯಿಲ್ಲ.ಬರಹ ದೊಡ್ಡದಾಗಿದ್ದರೆ ಕಂತುಗಳಾಗಿ ಪ್ರಕಟಿಸಿದರಾಯಿತು. ಕಥಾಯಾನದ ಬಗ್ಗೆ ಇನ್ನಷ್ಟು ಬರಹಗಳು ಬರಲಿ, ಮುಂದೆಯೂ ಬೇರೆ ವಿಷಯಗಳ ಬಗ್ಗೆ ಬರೆಯಿರಿ. ತಮ್ಮ ಬರಹವನ್ನು editor@surahonne.com ವಿಳಾಸಕ್ಕೆ email ಮೂಲಕ ಕಳುಹಿಸಿ.
      ಸುರಹೊನ್ನೆ ಬಳಗಕ್ಕೆ ಸ್ವಾಗತ.
      ಹೇಮಮಾಲಾ

  5. ಅಮೃತಾ ಮೆಹೆಂದಳೆ says:

    ತುಂಬಾ ಔಚಿತ್ಯಪೂರ್ಣ ಲೇಖನ.

  6. ಚಿತ್ತರಂಜನ್ says:

    ತುಂಬಾ ಸೊಗಸಾದ ನಿರೂಪಣೆ.

  7. Anuradha JH . says:

    Very nice article

  8. ದೀಪಾ ಜೋಶಿ says:

    ಒಳ್ಳೆಯ ಲೇಖನ

  9. Visheshwar Gaonkar says:

    ಚೆಂದ ಬರಹ.

  10. UPS ಕುಮಾರ್, ಕೈಗಾ says:

    ಕಾರ್ಯಕ್ರಮದ ಬಗ್ಗೆ ವಿಸ್ತೃತವಾಗಿ ಅಷ್ಟೇ ಸುಂದರವಾಗಿ ನಿಮ್ಮ ಅನಿಸಿಕೆ, ಅನುಭವಗಳನ್ನು ಅಕ್ಷರ ರೂಪದಲ್ಲಿ ಪ್ರಕಟಿಸಿದ್ದೀರಿ. ನಿಮ್ಮ ಅನುಭವದ ಹಿನ್ನೆಲೆಯಲ್ಲಿ ಕೈಗಾ ಅಣುವಿದ್ಯುತ್ ಕೇಂದ್ರದ ಸೂಕ್ಷ್ಮತೆಗಳನ್ನು, ಸುರಕ್ಷತೆಗಳನ್ನು ಗ್ರಹಿಸಿ ನಮೂದಿಸಿರುವುದು ಅಭಿನಂದನೀಯ.

  11. Krishnaveni Kidoor says:

    ಉತ್ತಮ ವಿವರಗಳ ಮೂಲಕ ಶಿಬಿರದ ಮುಖ್ಯಾಂಶಗಳ ಬಗೆಗೊಂದು ಪಕ್ಷಿ ನೋಟ ಒದಗಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು.

  12. Ranganath Nadgir says:

    Sulalita. Sawistar Mahiti Kottiruwiri. dhanyawadagalu,

  13. Rama Mv says:

    Very nice narration HEMA. CONGRATULATIONS

  14. Hema says:

    ಬರಹವನ್ನು ಮೆಚ್ಚಿ ಪ್ರೋತ್ಸಾಹಿಸಿದ ಎಲ್ಲರಿಗೂ ಅನಂತ ಧನ್ಯವಾದಗಳು

  15. Udaya Shankar Puranik says:

    ಹೇಮಾಜೀ, ನಿಮ್ಮ ಪರಿಚಯವಾಗಿದ್ದು ನನಗೆ ತುಂಬಾ ಸಂತೋಷದ ಮತ್ತು ಅಭಿಮಾನದ ವಿಷಯವಾಗಿದೆ. ತುಂಬಾ ಆತ್ಮೀಯತೆಯಿಂದ ಕಥಾಯಾನ 2018 ಕುರಿತು ಬರೆದಿರುವಿರಿ. ನಿಮಗೂ ಮತ್ತು ಸುರಹೊನ್ನೆ ಬಳಗದ ಸದಸ್ಯರಿಗೂ ನನ್ನ ಅನಂತ ಧನ್ಯವಾದಗಳು

  16. ಸ್ಮಿತಾ says:

    ಹೌದು‌…ಕಥಾಯಾನದಲ್ಲಿ..ಪಯಣಿಸದಿದ್ಧರೂ..ಪಯಣದ ಎಲ್ಲಾ ನಿಲ್ದಾಣಗಳಲ್ಲೂ ನಿಂತು..ಸ್ಥಳ ಪರಿಚಯಿಸಿದಷ್ಟೇ..ಸವಿವರವಾಗಿ..ಕಾರ್ಯಕ್ರಮದ ಪ್ರತಿ..ಹಂತವನ್ನೂ..ದೃಶ್ಯಾತ್ಮಕವಾಗಿ ಕಟ್ಟಿಕೊಟ್ಟಿದ್ದಾರೆ.ಧನ್ಯವಾದಗಳು.

  17. Vijaya Kulkarni says:

    ಪವರ್ ಪ್ಲಂಟ್ ಬಗ್ಗೆ ಪಿಪಿಟಿ ತೋರಿಸುವಾಗಲೇ ಅವರು ಹೇಳಿದ್ದರು, ನನಗೆ ಇದರ ಬಗ್ಗೆ ತುಂಬಾ ಕೂತುಹಲವಿತ್ತು ಎಂದು, ತುಂಬಾ ಚೊಕ್ಕಟವಾಗಿ ಬರಹ ಮೂಡಿ ಬಂದಿದೆ

  18. Mahadevi Bingi says:

    ಸುಂದರ, ಸರಳ, ಮತ್ತು ಸಮೃದ್ಧ ವಾದ ಮಾಯಿತಿ.! ಲೇಖನ ಖುಷಿ ಕೊಟ್ತು.
    ‌ಸೂಪರ್…ಕಾರ್ಯಕ್ರಮದ ಯಶಸ್ಸಿಗೆ ಕಾರಣರಾದವರಿಗೆಲ್ಲ…ಅಭಿನಂದನೆಗಳು

  19. Poornima Pandit says:

    ಸರಳ ಸುಂದರ ನಿರೂಪಣೆ

  20. Raj says:

    Congratulations! Very nicely written! You have taken the trouble to make it very readable so that the reader is saved the trouble!
    Raj

  21. Shankara Narayana Bhat says:

    ಕಥಾಯಾನ ಜರುಗಿದ ಸ್ಥಳದ ವರ್ಣನೆ ನೈಜವಾಗಿದೆ, ಬಳಿಕ ವರದಿಯನ್ನು ವಿವರವಾಗಿ ತಿಳಿಸಿದ್ದೀರಿ? ಬಹಳಷ್ಟು ದೀರ್ಘವಾದ ದರಿಂದ ನನಗೆ ಓದಲು ತುಸು ಕಷ್ಟವಾಯಿತು, ತೊಂದರೆ ಇಲ್ಲ, ಶುಭವಾಗಲಿ,

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Follow

Get every new post on this blog delivered to your Inbox.

Join other followers: