ರುಚಿಗೊಪ್ಪುವ ಬಸಳೆಸೊಪ್ಪಿನ ತಿನಿಸುಗಳು
ಕರಾವಳಿ ಹಾಗೂ ಮಲೆನಾಡಿನ ಜನರಿಗೆ ಬಸಳೆಯ ಅಡುಗೆಗಳೆಂದರೆ ಬಲು ಇಷ್ಟ. ಹೆಚ್ಚಿನವರ ಮನೆಯಂಗಳದಲ್ಲಿ ಬಸಳೆ ಬಳ್ಳಿಯ ಚಪ್ಪರವಿರುತ್ತದೆ. ಮಳೆಗಾಲದಲ್ಲಿ ಬಸಳೆಯ ದಂಟನ್ನು ನೆಟ್ಟು, ಸ್ವಲ್ಪ ಹಟ್ಟಿಗೊಬ್ಬರ ಹಾಕಿ ಬೆಳೆಸಿ, ಪುಟ್ಟ ಚಪ್ಪರಕ್ಕೆ ಬಳ್ಳಿಯನ್ನು ಹಬ್ಬಿಸಿದರೆ, ವರ್ಷವಿಡೀ ತಾಜಾ ಬಸಳೆ ಸೊಪ್ಪು ಅಡುಗೆಗೆ ಲಭ್ಯವಾಗುತ್ತದೆ. ಪಟ್ಟಣಗಳಲ್ಲಿ ವಾಸಿಸುವವರೂ ಕೂಡ ತಮ್ಮ ಕೈತೋಟ, ತಾರಸಿ ತೋಟ ಅಥವಾ ಕುಂಡಗಳಲ್ಲಿ ಬಸಳೆಯ ದಂಟನ್ನು ನೆಟ್ಟು, ಅಪ್ಪಟ ಸಾವಯವ ಬಸಳೆ ಸೊಪ್ಪನ್ನು ಬೆಳೆಸಬಹುದು.
ಬಸಳೆ ಬಳ್ಳಿಯಲ್ಲಿ ಹಸಿರು ಬಣ್ಣ ಹಾಗೂ ಕೆಂಪು ಬಣ್ಣದ ತಳಿಗಳಿವೆ. ವಿಟಮನ್ ಎ, ವಿಟಮಿನ್ ಸಿ , ಕ್ಯಾಲ್ಚಿಯಂ ಹಾಗೂ ಕಬ್ಬಿಣದ ಅಂಶಗಳುಳ್ಳ ಬಸಳೆಸೊಪ್ಪಿನಿಂದ ವಿವಿಧ ಅಡುಗೆಗಳನ್ನು ತಯಾರಿಸಿ ಉಣ್ಣಬಹುದು. ಇದು ತಂಪು ಗುಣವನ್ನು ಹೊಂದಿರುವುದರಿಂದ ಬಾಯಿಹುಣ್ಣಿನ ಪರಿಹಾರಕ್ಕೆ ಬಹಳ ಒಳ್ಳೆಯದು. ಅಡುಗೆ ಮಾಡಲು ಬಸಳೆಯನ್ನು ಹೆಚ್ಚುವಾಗ ಸೊಪ್ಪನ್ನು ದಂಟಿನಿಂದ ಬೇರ್ಪಡಿಸಿ, ತೊಳೆದು ಸಣ್ಣಗೆ ಹೆಚ್ಚಬೇಕು. ತೀರಾ ಎಳೆಯ ದಂಟನ್ನೂ ಸೊಪ್ಪಿನೊಂದಿಗೆ ಹೆಚ್ಚಿ ಸೇರಿಸಬಹುದು. ಬಸಳೆಯ ಬಲಿತ ದಂಟುಗಳಲ್ಲಿ ನಾರಿನಂಶ ಜಾಸ್ತಿ ಇರುವುದರಿಂದ ಅವುಗಳನ್ನು 3-4 ಇಂಚು ಉದ್ದಕ್ಕೆ ಕತ್ತರಿಸಿ, ಸೊಪ್ಪಿನೊಟ್ಟಿಗೆ ಬೇಯಿಸಿ, ಮೆತ್ತಗೆ ಬೆಂದ ಭಾಗವನ್ನು ಮಾತ್ರ ತಿನ್ನುವ ಪದ್ಧತಿ. ಬಸಳೆ ಸೊಪ್ಪಿನ ಕೆಲವು ಸಾಂಪ್ರದಾಯಿಕ ಅಡುಗೆಗಳು ಇಲ್ಲಿವೆ :
1. ಬಸಳೆ-ಹುರುಳಿಕಾಳಿನ ಸಾಂಬಾರು
ಬೇಕಾಗುವ ಸಾಮಗ್ರಿಗಳು :
3 ಕಪ್ ಹೆಚ್ಚಿದ ಬಸಳೆ ಸೊಪ್ಪು, ಅರ್ಧ ಕಪ್ ಹುರುಳಿಕಾಳು, ಅರ್ಧ ಕಪ್ ತೆಂಗಿನಕಾಯಿ ತುರಿ, ಗೋಲಿ ಗಾತ್ರದ ಹುಣಸೇಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಸಣ್ಣ ತುಂಡು ಬೆಲ್ಲ, ಚಿಟಿಕೆ ಅರಸಿನ ಪುಡಿ,
ಮಸಾಲೆಗೆ: ಬ್ಯಾಡಗಿ ಮೆಣಸಿನಕಾಯಿ 6, ಧನಿಯಾ 2 ಚಮಚ , ತೊಗರಿಬೇಳೆ 1 ಚಮಚ , ಉದ್ದಿನ ಬೇಳೆ 1 ಚಮಚ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತ್ಯಬೀಜ, ಚಿಟಿಕೆ ಇಂಗು.
ಒಗ್ಗರಣೆಗೆ : 1 ಚಮಚ ಎಣ್ಣೆ, ಸಾಸಿವೆ, 1 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವಿನಸೊಪ್ಪು/ಬೆಳ್ಳುಳ್ಳಿ ಎಸಳುಗಳು,
ತಯಾರಿಸುವ ವಿಧಾನ :
ಮೊದಲು ನೆನೆಸಿದ ಹುರುಳಿಕಾಳುಗಳನ್ನು ಕುಕ್ಕರಿನಲ್ಲಿ ಬೇಯಿಸಿ. ಬೆಂದ ಹುರುಳಿಕಾಳು, ಹೆಚ್ಚಿದ ಬಸಳೆ ಸೊಪ್ಪು, ಚಿಟಿಕೆ ಅರಸಿನ, ರುಚಿಗೆ ತಕ್ಕಷ್ಟು ಉಪ್ಪು, ಬೇಕಿದ್ದರೆ ಸ್ವಲ್ಪ ಬೆಲ್ಲ, ಹುಣಸೆಹಣ್ಣಿನ ರಸ – ಇವಿಷ್ಟನ್ನು ಸೇರಿಸಿ ಪುನ: ಬೇಯಿಸಿ. ಮಸಾಲೆ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಂಡು, ತೆಂಗಿನಕಾಯಿ ತುರಿಯ ಜೊತೆಗೆ ಸೇರಿಸಿ ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ. ಬೇಯಿಸಿದ ಸೊಪ್ಪು-ಕಾಳುಗಳ ಮಿಶ್ರಣಕ್ಕೆ ರುಬ್ಬಿದ ಮಸಾಲೆಯನ್ನು ಸೇರಿಸಿ. ಬೇಕಿದ್ದಷ್ಟು ನೀರು, ಉಪ್ಪು ಸೇರಿಸಿ ಸಾಂಬಾರಿನ ಹದಕ್ಕೆ ಕುದಿಸಿ. ಆಯ್ಕೆಗೆ ತಕ್ಕಂತೆ ಬೆಳ್ಳುಳ್ಳಿ ಹಾಕಿ ಅಥವಾ ಹಾಕದೆ ಒಗ್ಗರಣೆ ಮಾಡಿದಾಗ ಬಸಳೆ-ಹುರುಳಿಕಾಳಿನ ಸಾಂಬಾರು ತಯಾರಾಗುತ್ತದೆ. ಅನ್ನ ಅಥವಾ ಚಪಾತಿಯೊಂದಿಗೆ ಈ ಸಾಂಬಾರು ರುಚಿಯಾಗಿರುತ್ತದೆ.
2. ಬಸಳೆ ಸೊಪ್ಪಿನ ಮಸ್ಸಾರು
ಬೇಕಾಗುವ ಸಾಮಗ್ರಿಗಳು :
2 ಕಪ್ ಹೆಚ್ಚಿದ ಬಸಳೆ ಸೊಪ್ಪು, ಅರ್ಧ ಕಪ್ ತೊಗರಿಬೇಳೆ, ಚಿಟಿಕೆ ಅರಸಿನ ಪುಡಿ, ಈರುಳ್ಳಿ 1, ಟೊಮೆಟೋ, 1 ಗೋಲಿ ಗಾತ್ರದ ಹುಣಸೇಹಣ್ಣು, 1 ಚಮಚ ತೆಂಗಿನಕಾಯಿ ತುರಿ, ಶುಂಠಿ 1 ಇಂಚು, ಬೆಳ್ಳುಳ್ಳಿ 5-6 ಎಸಳುಗಳು, ಕೊತ್ತಂಬರಿ ಸೊಪ್ಪು ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು, ಮಸಾಲೆಗೆ: ಕಾಳುಮೆಣಸು 2 ಚಮಚ, ಧನಿಯಾ 1 ಚಮಚ , ಉದ್ದಿನ ಬೇಳೆ 1 ಚಮಚ, ಅರ್ಧ ಚಮಚ ಜೀರಿಗೆ, ಕಾಲು ಚಮಚ ಮೆಂತ್ಯಬೀಜ
ಒಗ್ಗರಣೆಗೆ : 1 ಚಮಚ ಎಣ್ಣೆ, ಸಾಸಿವೆ, 1 ಒಣಮೆಣಸಿನಕಾಯಿ, ಸ್ವಲ್ಪ ಕರಿಬೇವಿನಸೊಪ್ಪು/ಬೆಳ್ಳುಳ್ಳಿ ಎಸಳುಗಳು,
ತಯಾರಿಸುವ ವಿಧಾನ :
ಹೆಚ್ಚಿದ ಬಸಳೆ ಸೊಪ್ಪು, ಈರುಳ್ಳಿ, ಟೊಮೆಟೊ, ಚಿಟಿಕೆ ಅರಸಿನ, ಹುಣಸೆಹಣ್ಣಿನ ರಸ ಇವಿಷ್ಟನ್ನು ಕುಕ್ಕರಿನಲ್ಲಿ ಹಾಕಿ, ಸ್ವಲ್ಪ ನೀರು ಸೇರಿಸಿ ಬೇಯಿಸಿ, ಬೆಂದ ಮಿಶ್ರಣವನ್ನು ಎಗ್ ಬೀಟರ್ ಅಥವಾ ಸೌಟಿನಲ್ಲಿ ಮಸೆಯಿರಿ. ಮಸಾಲೆ ಸಾಮಗ್ರಿಗಳನ್ನು ಸಣ್ಣ ಉರಿಯಲ್ಲಿ ಹುರಿದುಕೊಂಡು, ತೆಂಗಿನಕಾಯಿ ತುರಿ, ಶುಂಠಿ ಮತ್ತು ಬೆಳ್ಳುಳ್ಳಿಯ ಜೊತೆಗೆ ಸೇರಿಸಿ ರುಬ್ಬಿಕೊಳ್ಳಿ. ಮಸೆದ ಸೊಪ್ಪಿಗೆ ರುಬ್ಬಿದ ಮಸಾಲೆ, ರುಚಿಗೆ ತಕ್ಕಷ್ಟು ಉಪ್ಪು, ಬೇಕಾದರೆ ನೀರು ಸೇರಿಸಿ ಸಾಂಬಾರಿನ ಹದಕ್ಕೆ ಕುದಿಸಿ. ಹೆಚ್ಚಿದ ಕೊತ್ತಂಬರಿ ಸೊಪ್ಪು ಸೇರಿಸಿ, ಸಾಸಿವೆ-ಬೆಳ್ಳುಳ್ಳಿ ಒಗ್ಗರಣೆ ಮಾಡಿದರೆ ಬಸಳೆ ಸೊಪ್ಪಿನ ಮಸ್ಸಾರು ಸಿದ್ಧ. ಇದು ಬಿಸಿ ಅನ್ನ ಮತ್ತು ತುಪ್ಪದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ.
3. ಬಸಳೆ ಸೊಪ್ಪಿನ ಪತ್ರೊಡೆ
ಬೇಕಾಗುವ ಸಾಮಗ್ರಿಗಳು :
ಹೆಚ್ಚಿದ ಬಸಳೆ ಸೊಪ್ಪು 4 ಕಪ್ , ಕುಸುಬಲಕ್ಕಿ 2 ಕಪ್, ತೆಂಗಿನಕಾಯಿ ತುರಿ 2 ಚಮಚ , ಹುಣಸೆಹಣ್ಣು ಗೋಲಿ ಗಾತ್ರ, ಬ್ಯಾಡಗಿ ಮೆಣಸಿನಕಾಯಿ 6 , ಧನಿಯಾ 2 ಚಮಚ, ಉದ್ದಿನ ಬೇಳೆ 2 ಚಮಚ, ಜೀರಿಗೆ ಅರ್ಧ ಚಮಚ, ಚಿಟಿಕೆ ಇಂಗು, ರುಚಿಗೆ ತಕ್ಕಷ್ಟು ಉಪ್ಪು
ತಯಾರಿಸುವ ವಿಧಾನ :
ಕುಸುಬಲಕ್ಕಿಯನ್ನು 4 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ, ನೀರನ್ನು ಬಸಿದಿಟ್ಟುಕೊಳ್ಳಿ. ಮಸಾಲೆ ವಸ್ತುಗಳನ್ನು ಹುರಿದಿಟ್ಟುಕೊಳ್ಳಿ. ನೆನೆಸಿದ ಅಕ್ಕಿ, ಹುರಿದ ಮಸಾಲೆ, ತೆಂಗಿನಕಾಯಿ ತುರಿ, ಹುಣಸೇಹಣ್ಣು, ಇವೆಲ್ಲವನ್ನೂ ಸೇರಿಸಿ ಮಿಕ್ಸಿಯಲ್ಲಿ ಇಡ್ಲಿ ಹಿಟ್ಟಿನ ಹದಕ್ಕೆ ರುಬ್ಬಿ, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಹೆಚ್ಚಿದ ಬಸಳೆ ಸೊಪ್ಪನ್ನು ಸೇರಿಸಿ, ಚೆನ್ನಾಗಿ ಬೆರೆಸಿ. ಈ ಹಿಟ್ಟನ್ನು ಬಾಳೆ ಎಲೆಯಲ್ಲಿ ಮಡಚಿ ಹಬೆಯಲ್ಲಿ ಬೇಯಿಸುವುದು ಸಾಂಪ್ರದಾಯಿಕ ವಿಧಾನ. ಬಾಳೆ ಎಲೆಯಲ್ಲಿ ಬೇಯಿಸಿದ ಪತ್ರೊಡೆಗೆ ವಿಶಿಷ್ಟ ಪರಿಮಳ ಬರುತ್ತದೆ. ಬಾಳೆಲೆಯ ಅನುಕೂಲವಿಲ್ಲದಿದ್ದರೆ, ಸಾದಾ ಇಡ್ಲಿಯಂತೆಯೂ ಬೇಯಿಸಬಹುದು.
ಬಿಸಿ-ಬಿಸಿ ಪತ್ರೊಡೆಗೆ ತೆಂಗಿನೆಣ್ಣೆ, ತುಪ್ಪ, ಚಟ್ನಿ,ಜೋನಿಬೆಲ್ಲ ..ಹೀಗೆ ಅವರವರ ಆಯ್ಕೆಗೆ ತಕ್ಕಂತೆ ಸಿಹಿ ಅಥವಾ ಖಾರದ ನೆಂಚಿಕೆಯೊಂದಿಗೆ ಬೆಳಗಿನ ಉಪಾಹಾರಕ್ಕೆ ತಿನ್ನಲು ರುಚಿಯಾಗಿರುತ್ತದೆ. ಬೆಂದ ಪತ್ರೊಡೆಯನ್ನು ಪುಡಿ ಮಾಡಿ, ಕಾಯಿ-ಬೆಲ್ಲ ಸೇರಿಸಿ ಒಗ್ಗರಣೆ ಮಾಡಿದರೂ ಚೆನ್ನಾಗಿರುತ್ತದೆ.
4. ಬಸಳೆ ಸೊಪ್ಪಿನ ತಂಬುಳಿ
ಬೇಕಾಗುವ ಸಾಮಗ್ರಿಗಳು :
ಬಸಳೆ ಸೊಪ್ಪು 10 ಎಲೆಗಳು, ಒಂದು ಚಮಚ ಜೀರಿಗೆ, ಒಂದು ಚಮಚ ಕಾಳುಮೆಣಸು, ಹಸಿರುಮೆಣಸಿನಕಾಯಿ 1 , ತೆಂಗಿನಕಾಯಿ ತುರಿ 4 ಚಮಚ , ತುಪ್ಪ ಒಂದು ಚಮಚ, ಮಜ್ಜಿಗೆ ನಾಲ್ಕು ಸೌಟು, ರುಚಿಗೆ ತಕ್ಕಷ್ಟು ಉಪ್ಪು.
ಒಗ್ಗರಣೆಗೆ : ಸ್ವಲ್ಪ ಎಣ್ಣೆ , ಸಾಸಿವೆ, ಉದ್ದಿನಬೇಳೆ, ಒಣಮೆಣಸು ಒಂದು, ಕರಿಬೇವಿನ ಸೊಪ್ಪು ಸ್ವಲ್ಪ
ತಯಾರಿಸುವ ವಿಧಾನ :
ಬಸಳೆಸೊಪ್ಪನ್ನು ಸಣ್ಣಗೆ ಹೆಚ್ಚಿ ತುಪ್ಪ ಸೇರಿಸಿ ಸಣ್ಣ ಉರಿಯಲ್ಲಿ ಹುರಿದು ಬಾಡಿಸಿ. ಬಾಡಿಸಿದ ಬಸಳೆಸೊಪ್ಪು , ತೆಂಗಿನಕಾಯಿ ತುರಿ, ಜೀರಿಗೆ, ಕಾಳುಮೆಣಸು, ಖಾರ ಬೇಕಿದ್ದರೆ ಹಸಿರುಮೆಣಸಿನಕಾಯಿ ಇವಿಷ್ಟನ್ನು ನುಣ್ಣಗೆ ರುಬ್ಬಿ. ಇದಕ್ಕೆ 4 ಸೌಟು ಮಜ್ಜಿಗೆ ಮತ್ತು ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ, ಕರಿಬೇವಿನ ಒಗ್ಗರಣೆ ಕೊಟ್ಟರೆ ಬಸಳೆಸೊಪ್ಪಿನ ತಂಬುಳಿ ಸಿದ್ಧವಾಗುತ್ತದೆ. ಈ ತಂಬುಳಿಯು ಅನ್ನದೊಂದಿಗೆ ಉಣ್ಣಲು ಚೆನ್ನಾಗಿರುತ್ತದೆ. ಹೊಟ್ಟೆಗೆ ತಂಪು.
ಹಸಿ ಬಸಳೆ ಸೊಪ್ಪಿನಲ್ಲಿ ಸ್ವಲ್ಪ ಲೋಳೆ ಇರುವುದರಿಂದ ಇದರ ಅಡುಗೆಯನ್ನು ಮಾಡಲು ಹಿಂಜರಿಯುವವರೂ ಇದ್ದಾರೆ. ಆದರೆ ಬಸಳೆ ಸೊಪ್ಪಿನ ಲೋಳೆಯ ಅಂಶವು ಬೆಂದ ಮೇಲೆ ಇರುವುದಿಲ್ಲ. ಇದರ ರುಚಿ ಸುಮಾರಾಗಿ ಪಾಲಾಕ್ ಸೊಪ್ಪಿನಂತೆಯೇ ಇರುತ್ತದೆ. ಹಾಗಾಗಿ, ಪಾಲಾಕ್ ಸೊಪ್ಪನ್ನು ಬಳಸಿ ಮಾಡಬಹುದಾದ ಎಲ್ಲಾ ಆಧುನಿಕ ಅಡುಗೆಗಳನ್ನು ಬಸಳೆಸೊಪ್ಪಿನಿಂದಲೂ ತಯಾರಿಸಬಹುದು. ಉದಾ: ಬಸಳೆ ಸೊಪ್ಪಿನ ಪನೀರ್ ಮಸಾಲಾ, ರೈಸ್ ಭಾತ್ , ಪರಾಠಾ.. ಇತ್ಯಾದಿ .
,
-ಹೇಮಮಾಲಾ.ಬಿ
(ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಲೇಖನ)
ಉತ್ತಮ ಮಾಹಿತಿ. ಬಸಳೆ-ಹುರುಳಿಕಾಳಿನ ಹುಳಿ ಅಂತೂ ಅತ್ಯದ್ಭುತ ರುಚಿ!
ಬಸಳೆಯ ಬಹುರೂಪದರ್ಶನ ಮಾಡಿಸಿದ್ದೀರಿ, ಧನ್ಯವಾದಗಳು 🙂
ಧನ್ಯವಾದಗಳು 🙂