ಸಿಂಗಾಡ್ ..ವಾಟರ್ ಚೆಸ್ಟ್ ನಟ್
ನೆಲದ ಮೇಲೆ ಬೆಳೆಯುವ ವಿವಿಧ ಹಣ್ಣು, ಕಾಯಿಗಳನ್ನೂ, ನೆಲದ ಕೆಳಗೆ ಬೆಳೆಯುವ ಹಲವಾರು ಗಡ್ಡೆಗೆಣಸುಗಳನ್ನೂಆಹಾರವಾಗಿ ಬಳಸುವ ನಮಗೆ, ನೀರಿನಲ್ಲಿ ಬೆಳೆಯುವ ತರಕಾರಿಗಳು ಕಾಣಸಿಗುವುದು ಅಪರೂಪ. ‘ವಾಟರ್ ಚೆಸ್ಟ್ ನಟ್’’ ನೀರಿನಲ್ಲಿ ಬೆಳೆಯುವ ವಿಶಿಷ್ಟ ತರಕಾರಿ.
ಉತ್ತರಾಖಂಡ ರಾಜ್ಯದ ರೂರ್ಕಿಯಲ್ಲಿ ತರಕಾರಿ ಮಾರುವವರ ಕೈಗಾಡಿಯಲ್ಲಿ ಹಸಿರು ಮಿಶ್ರಿತ ಕಪ್ಪು ಬಣ್ಣದ, ಸುಮಾರಾಗಿ ಪಿರಮಿಡ್ ಆಕಾರದಲ್ಲಿದ್ದ ಕಾಯಿಗಳನ್ನು ಗಮನಿಸಿದೆವು. ಅದನ್ನು ಸ್ಥಳೀಯವಾಗಿ ‘ಸಿಂಗಾಡ್ ‘ ಅನ್ನುತ್ತಾರೆ. ಸರೋವರ ಮತ್ತು ಕೆಸರು ಮಿಶ್ರಿತ ಜಾಗಗಳಲ್ಲಿ ಬೆಳೆಯುತ್ತದೆ. ಭಾರತದ ಹಲವು ರಾಜ್ಯಗಳಲ್ಲಿ ಸಿಂಗಾಡ್ ಅನ್ನು ಬೆಳೆಸುತ್ತಾರೆ.
ಸಿಂಗಾಡ್ ನ ಹಸಿರು ಮಿಶ್ರಿತ ಕಪ್ಪು ಬಣ್ಣದ ದಪ್ಪ ಸಿಪ್ಪೆಯ ಒಳಗಡೆ ತಿನ್ನಲರ್ಹವಾದ ಬಿಳಿಬಣ್ಣದ ಒಂದೇ ಬೀಜ ಇರುತ್ತದೆ. ಬಿಳಿಬಣ್ಣದ ತಿರುಳು ಗರಿಗರಿಯಾಗಿದ್ದು, ಅದರ ರುಚಿಯು ಸುಮಾರಾಗಿ ಮೊಳಕೆ ಬಂದ ಗೋಡಂಬಿಯನ್ನು ಹೋಲುತ್ತದೆ. ಆದರೆ ನೀರಿನಲ್ಲಿ ಬೆಳೆದ ಹಸಿಪಾಚಿಯ ಹಾಗೆ ವಿಶಿಷ್ಟವಾದ ತಿಳಿವಾಸನೆ ಇದೆ .
ಹಿಂದಿ ಭಾಷೆಯಲ್ಲಿ ‘ಸಿಂಘ್ಹಾರ’ ಹಾಗೂ ಇಂಗ್ಲಿಷ್ ನಲ್ಲಿ ‘ವಾಟರ್ ಚೆಸ್ಟ್ ನಟ್’ ಎಂಬ ಹೆಸರುಳ್ಳ ಸಿಂಗಾಡ್ ನ ಸಸ್ಯಶಾಸ್ಥೀಯ ಹೆಸರು Trapa bispinosa. ಸಿಂಗಾಡ್ ಗಿಡಗಳು ಕೊಳದಲ್ಲಿ ತಾವರೆಯಂತೆ ಬೆಳೆಯುತ್ತವೆ. ಅದರ ಹೂಗಳು ಮತ್ತು ಎಲೆಗಳು ನೀರಿನಲ್ಲಿ ತೇಲುತ್ತಿರುತ್ತವೆ. ಪರಾಗಸ್ಪರ್ಶದ ನಂತರ ಕಾಯಿಗಳು ನೀರಿನ ಅಡಿಯಲ್ಲಿ ಬೆಳೆಯುತ್ತವೆ.
ಸಿಂಗಾಡ್ ಕಾಯಿಯಲ್ಲಿ ಕೊಬ್ಬಿನಂಶ ಕಡಿಮೆ ಹಾಗೂ ಗ್ಲುಟಿನ್ ಇರುವುದಿಲ್ಲ . ಶರೀರಕ್ಕೆ ಶಕಿವರ್ಧಕ ಹಾಗೂ ರಕ್ತದಲ್ಲಿರುವ ಕಶ್ಮಲಗಳನ್ನು ಹೊರಹಾಕುತ್ತದೆ. ಸಿಂಗಾಡ್ ಅನ್ನು ಹಸಿಯಾಗಿಯೂ ತಿನ್ನಬಹುದು, ಬೇಯಿಸಿ ಪಲ್ಯ ಮಾಡಬಹುದು ಹಾಗೂ ಒಣಗಿಸಿ ಹಿಟ್ಟು ಮಾಡಿ ರೊಟ್ಟಿ, ಕೇಕ್ ಇತ್ಯಾದಿ ವಿವಿಧ ಅಡುಗೆಗಳಿಗೆ ಬಳಸಬಹುದು. ತಲೆನೋವಿಗೆ ಸಿಂಗಾಡ್ ಕಾಯಿಯ ಜ್ಯೂಸ್ ಕುಡಿದರೆ ಶಮನಕಾರಿ. ಪ್ರೊಟೀನ್, ಪೊಟಾಶಿಯಂ, ಅಯೋಡಿನ್ ಇತ್ಯಾದಿ ಪೋಷಕಾಂಶಗಳನ್ನು ಹೊಂದಿರುವ ಸಿಂಗಾಡ್ ಅನ್ನು ಕೆಲವು ಆಯುರ್ವೇದ ಹಾಗೂ ಯುನಾನಿ ಪದ್ಧತಿಯ ಔಷಧಗಳ ತಯಾರಿಯಲ್ಲಿಯೂ ಬಳಸುತ್ತಾರೆ.
– ಹೇಮಮಾಲಾ.ಬಿ
ಉತ್ತಮ ಮಾಹಿತಿ 🙂
Thank you for letting us know a rare variety of vegetable.
ಒಳ್ಳೆಯ ಮಾಹಿತಿ. ಗೊತ್ತಿರಲಿಲ್ಲ.
ತಿಳಿದುಕೊಳ್ಳಬಹುದಾದ ಅದೆಷ್ಟು ಹೊಸತುಗಳಿವೆಯಲ್ಲ! ನಮ್ಮ ದೇಶದಲ್ಲೇ ಪುಟ್ಟ ಪ್ರಪಂಚವಿದೆ ಎನಿಸಿತು, ಸಿಂಗಾಡ್ ನನ್ನು ಪರಿಚಯಿಸಿದ್ದಕ್ಕೆ ಧನ್ಯವಾದಗಳು.ಇದರ ಮೂಲ ಭಾರತವೇ?
ಥ್ಯಾಂಕ್ಸ್. ಮೂಲ ಚೀನಾ. ಏಷ್ಯಾದ ಹಲವು ಭಾಗಗಳಲ್ಲಿವೆಯಂತೆ ( ಗೂಗಲ್ ಮಾಹಿತಿ).
ಓ, ಹೌದೇ! ಹೆಚ್ಚಿನ ಮಾಹಿತಿಗಾಗಿ ಧನ್ಯವಾದಗಳು 🙂