ಕೃತಿ ಪರಿಚಯ: ವಿ.ಬಿ.ಅರ್ತಿಕಜೆ ಅವರ ‘ರಾಮ ನೀತಿ’
ವಾಲ್ಮೀಕಿ ವಿರಚಿತ ರಾಮಾಯಣವು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿದೆ. ಪವಿತ್ರ ಗ್ರಂಥ ರಾಮಾಯಣವನ್ನು ಶ್ರದ್ಧೆಯಿಂದ ಓದಿದರೆ ಅಥವಾ ದೃಶ್ಯ ಶ್ಯಾವ್ಯ ಮಾಧ್ಯಮಗಳ ಮೂಲಕ ಅರ್ಥಮಾಡಿಕೊಂಡರೆ, ಅರಿವಿನ ಹರವು ಹೆಚ್ಚುವುದರ ಜೊತೆಗೆ, ಮನೋರಂಜನೆ, ಮನಶ್ಶಾಂತಿ , ಸತ್ಸಂಗ ಹಾಗೂ ಪುಣ್ಯಪ್ರಾಪ್ತಿಯೂ ಆಗುತ್ತದೆ ಎಂಬ ನಂಬಿಕೆ ನಮ್ಮದು.
ದೈನಂದಿನ ಮಾತುಕತೆಗಳಲ್ಲಿ ಯಾವುದಾದರೂ ವಿಚಾರದ ಬಗ್ಗೆ ಮಾತನಾಡುವಾಗ ‘ ಅದು ದೊಡ್ಡ ರಾಮಾಯಣ’…’ಅಲ್ಲಿ ಒಂದು ರಾಮಾಯಣ ಆಯಿತು’ ….ಹೀಗೆ ‘ಹೆಚ್ಚು’ ಎಂಬ ವಿಷಯವನ್ನು ಬಿಂಬಿಸಲು ರಾಮಾಯಣ ಎಂಬ ಉಪಮೆಯನ್ನು ಕೊಡುವಷ್ಟರ ಮಟ್ಟಿಗೆ ರಾಮಾಯಣವು ತನ್ನ ಅಗಾಧತೆಯ ಮೂಲಕವೇ ಪರಿಚಯಿಸಲ್ಪಡುತ್ತದೆ . ಹಾಗಾದರೆ, 7 ಕಾಂಡಗಳನ್ನು ಹೊಂದಿದ 24000 ಶ್ಲೋಕಗಳುಳ್ಳ ಮೂಲ ರಾಮಾಯಣವನ್ನು ಓದಿದವರೆಷ್ಟು ಮಂದಿ ಇರಬಹುದು ಎಂದು ಲೆಕ್ಕ ಹಾಕತೊಡಗಿದರೆ ಕೆಲವೇ ಮಂದಿ ವಿದ್ವಾಂಸರು ಸಿಗಬಹುದು.
ಆಧುನಿಕ ಜೀವನಶೈಲಿಯ ಧಾವಂತ , ಬದಲಾದ ಆದ್ಯತೆ ಮತ್ತು ಆಸಕ್ತಿಗಳು ಹಾಗೂ ತಂತ್ರಜ್ಞಾನದ ಅವಿಷ್ಕಾರದಿಂದ ಕೈಯಲ್ಲಿ ಕಂಗೊಳಿಸುವ ಪುಟ್ಟ ಮೊಬೈಲ್ ಫೋನ್ ನ ಮೂಲಕ ಕ್ಷಣಮಾತ್ರದಲ್ಲಿ ಅವಶ್ಯವಿರುವ ಮಾಹಿತಿಯನ್ನು ಪಡೆಯಲು ಸಾಧ್ಯ. ಹೀಗಿರುವಾಗ ಸಂಪೂರ್ಣ ರಾಮಾಯಣದ ಗ್ರಂಥವನ್ನು ಓದಲು ಆಸಕ್ತಿ, ಸಮಯ, ತಾಳ್ಮೆ ಹಾಗೂ ಅರ್ಥಮಾಡಿಕೊಳ್ಳುವ ಕೌಶಲ ಇರುವ ಜನರು ಬಲು ಕಡಿಮೆ. ಈಗಿನ ಓದುಗರಿಗೆ ಸರಳ ವಾಕ್ಯಗಳಲ್ಲಿ, ಸಂಕ್ಷಿಪ್ತವಾಗಿ, ಸುಲಭವಾಗಿ ಸಿಗುವ ವಿಚಾರಗಳು ಬೇಕು.
ಈ ನಿಟ್ಟಿನಲ್ಲಿ, ಶ್ರೀ.ವಿ.ಬಿ. ಅರ್ತಿಕಜೆಯವರು ಬರೆದ ಪುಟ್ಟ ಪುಸ್ತಕ ‘ರಾಮನೀತಿ’ಯಲ್ಲಿರುವ ಚೌಪದಿಗಳು ಹಾಗೂ ಸಮಗ್ರ ರಾಮಾಯಣವನ್ನು ಅತಿ ಸಂಕ್ಷಿಪ್ತವಾಗಿ ಪೋಣಿಸಿದ ‘ರಾಮಾಯಣ ಸಪ್ತಪದಿ’ ಬಹಳ ಉಪಯುಕ್ತ. ಅರ್ತಿಕಜೆಯವರು ತಮ್ಮ ಪ್ರಾಧ್ಯಾಪಕ ವೃತ್ತಿಯಲ್ಲಿ ಕನ್ನಡೇತರ ಪಠ್ಯವನ್ನು ಬೋಧಿಸುತ್ತಿದ್ದರೂ, ‘ರಾಮ ಕೀರ್ತಿ’ ಎಂಬ ರಾಮಕಥಾ ಸಾರವನ್ನು ಷಟ್ಪದಿ ಛಂದಸ್ಸಿನಲ್ಲಿ , ಗಮಕವಾಚನಕ್ಕೂ ಸೂಕ್ತವಾಗುವಂತೆ ಬರೆದ ಅವರ ಕನ್ನಡಾಭಿಮಾನಕ್ಕೆ ಹೆಮ್ಮೆಯಾಗುತ್ತಿದೆ. ನೃತ್ಯಕ್ಕೆ ಅಳವಡಿಸಲು ಸಾಧ್ಯವಾಗುವ ಶೈಲಿಯ ‘ಗೀತ ರಾಮಾಯಣ’, ನೀತಿ ಹಾಗೂ ತತ್ವಗಳನ್ನೊಳಗೊಂಡ ‘ರಾಮಾಯಣ ನೀತಿಸಾರ’ ಹಾಗೂ ‘ರಾಮ ಉವಾಚ’ ಭಾಗಗಳು ಕೃತಿಯ ಸಮಗ್ರತೆಗೆ ಪೂರಕವಾಗಿ ಮೂಡಿಬಂದಿವೆ.
ರಾಮಾಯಣದ ಕಥೆಗಳೂ, ಅವುಗಳಲ್ಲಿ ಅಡಕವಾದ ನೀತಿಯೂ ಅಗಾಧವಾದುದು. ನಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಅವುಗಳನ್ನು ಮನನ ಮಾಡಿಕೊಂಡು ಜೀವನದಲ್ಲಿ ಅಳವಡಿಸುವ ಪ್ರಯತ್ನ ನಮ್ಮದಾಗಬೇಕು. ಈ ಉದ್ದೇಶಕ್ಕಾಗಿ ‘ರಾಮ ನೀತಿ’ ಪುಸ್ತಕವನ್ನು ಓದುವುದು ಖಂಡಿತಾ ಸಹಕಾರಿ. ಸಂಕ್ಷಿಪ್ತ ರೂಪದಲ್ಲಿ ರಾಮಾಯಣವನ್ನು ಬರೆದು ಮುದ್ರಿಸಿ, ಓದಲು ಅನುಕೂಲವಾಗುವಂತೆ ಒದಗಿಸಿರುವ ಶ್ರೀ.ವಿ.ಬಿ.ಅರ್ತಿಕಜೆಯವರಿಗೆ ಅನಂತ ಧನ್ಯವಾದಗಳು.
.
– ಹೇಮಮಾಲಾ.ಬಿ. ಮೈಸೂರು
ರಾಮಾಯಣ ವು ಹಿಂದುತ್ವದ ಪವಿತ್ರ ಗ್ರಂಥ ಅದರ ಸಾರವನ್ನಾದರೂ ಓದಬೇಕು.
ಧನ್ಯವಾದಗಳು.
ಬಹುಶಃ ಈ ರೀತಿ ಸರಳವಾಗಿ ಜೀವನಸಾರವನ್ನೇ ಕಟ್ಟಿಕೊಡುವ ಬೃಹದ್ಗ್ರಂಥವೊಂದನ್ನು ಹಲವರಿಗೆ ತಲುಪಿಸಿದರೆ ಕೆಲವರಾದರೂ ಮೂಲದ ರುಚಿ ನೋಡಲು ಎಳಸಬಹುದೇನೋ! ನಮ್ಮಂತಹ ಸಾಮಾನ್ಯರನ್ನು ದೃಷ್ಟಿಯಲ್ಲಿರಿಸಿಕೊಂಡು ಪುಸ್ತಕ ರತ್ನವೊಂದನ್ನು ರಚಿಸಿಕೊಟ್ಟ ಶ್ರೀ ವಿ. ಬಿ. ಅರ್ತಿಕಜೆಯವರಿಗೂ, ಈ ಕೃತಿಯನ್ನು ಯುವಜನತೆಗೆ ತಲುಪುವಂತೆ ಪರಿಚಯ ಮಾಡಿಕೊಟ್ಟ ನಿಮಗೂ ಧನ್ಯವಾದಗಳು.
ಧನ್ಯವಾದಗಳು 🙂