ಗುಬ್ಬಚ್ಚಿ ಸ್ನಾನ: ಮಂದಾರವಲ್ಲಿಯವರ ಹಾಸ್ಯ ಬರಹಗಳ ಗುಚ್ಛ
‘ಜೋಕ್ಸ್’ ಎಂದರೆ ಯಾರಿಗೆ ಇಷ್ಟ ಇಲ್ಲ? ದೈನಂದಿನ ಜೀವನದಲ್ಲಿ ಒಮ್ಮೆ ನಕ್ಕು ಹಗುರಾಗಲು, ಜೀವನವನ್ನು ಹೊಸದಾಗಿ ಅಶಾ ಭಾವದಿಂದ, ಕೆಲವೊಮ್ಮೆ ಫಿಲಸಾಫಿಕಲ್ ಆಗಿ ಬದುಕಲು, ಹಾಸ್ಯ ಪ್ರಜ್ನೆ ಅತ್ಯಗತ್ಯ. ಜೋಕ್ ಗಳಲ್ಲಿ ಹಲವಾರು ಬಗೆ. ಅದೊಂದು ರೀತಿಯ ಆಡು ಮಾತಿನ ಸಾಹಿತ್ಯವೇ ಆಗಿದೆ. ಹೆಚ್ಚಿನ ಸಲ ನಮಗೆ ಜೋಕ್ ಗಳ ಕರ್ತ್ರ್ ಯಾರು ಎಂದು ಗೊತ್ತಿರುವುದಿಲ್ಲ. ಹಾಗೆಂದು ಅವು ಒಂದು ಕಾಲ ಘಟ್ಟದ, ದೇಶ ಕಾಲದ ಆಗು ಹೋಗುಗಳ ಪ್ರತಿಫಲನವೇ ಆಗಿದೆ. ಸರ್ದಾರ್ಜಿ ಜೋಕುಗಳು, ಮಂಗಳೂರು ವಲಯದಲ್ಲಿರುವ ರಾಂಪಣ್ಣ, ತ್ಯಾಂಪಣ್ಣನ ಜೋಕುಗಳು, ಉದಯವಾಣಿ ಪತ್ರಿಕೆಯಲ್ಲಿನ ‘ಗುಂಡ’ ಜೋಕುಗಳು.. ಹೀಗೆ. ಯಾವುದೇ ‘ಟೆಕ್ಸ್ಟ್’ ಅಂದರೆ ಬರಹ ಸಾಹಿತ್ಯ ಎಂದು ಪರಿಗಣಿಸುವುದಾದಲ್ಲಿ ಜೋಕುಗಳು ಒಂದು ರೀತಿಯ ಆಡು ಮಾತಿನ ಜನಪದವೇ ಆಗಿವೆ. ನಾವು ಸಣ್ಣವರಿದ್ದಾಗ ಶೌರಿ, ಗಾಂಪರೊಡೆಯರು.. ಹೀಗೆ ವಿಡಂಬನೆಗಳನ್ನು ಓದಿದ ನೆನಪು. ಕನ್ನಡದ ಹಾಸ್ಯ ಪರಂಪರೆ ಬಲು ದೊಡ್ಡದು. ಪಾ ವೆಂ, ಲಾಂಗೂಲಾಚಾರ್ಯ, ಬೀಚಿ, ಡುಂಡಿ ರಾಜ್, ಎಮ್. ಎಸ್. ನರಸಿಂಹಮೂರ್ತಿ, ಟಿ. ಸುನಂದಮ್ಮ, ನುಗ್ಗೇಹಳ್ಳಿ ಪಂಕಜ, ಅಂಬುಜಮ್ಮ, ಭುವನೇಶ್ವರಿ ಹೆಗಡೆಯವರು.. ಹೀಗೆ. ‘ಎಂತದು ಮಾರಾಯ್ರೆ’ ಎಂದು ನಗು ನಗುತ್ತಲೇ ಹಾಸ್ಯದ ಸೆಲೆ ಹರಿಯಿಸುವ ನವಿರಾದ ಬರಹಗಳು ಭುವನೇಶ್ವರಿಯವರದು. ಇದೇ ಸಾಲಿನಲ್ಲಿ ಹೆಸರಿಸಬಹುದಾದ ಹಾಸ್ಯ ಸಂಗ್ರಹ ಡಾ.ಮಂದಾರ ವಲ್ಲಿಯವರ ‘ಗುಬ್ಬಚ್ಚಿ ಸ್ನಾನ’.
ಮಂದಾರ ವಲ್ಲಿಯವರ ಬರಹಗಳು ಒಂದು ರೀತಿಯ ಶ್ರೇಷ್ಠ ವೈಚಾರಿಕತೆಯನ್ನೊಳಗೊಂಡ ಹಾಸ್ಯವಾಗಿರುವುದು ಇಲ್ಲಿಯ ಬರಹಗಳ ವೈಶಿಷ್ಠ್ಯ. ಕೆ. ಸತ್ಯನಾರಾಯಣ ಅವರು ತಮ್ಮ ಮುನ್ನುಡಿಯಲ್ಲಿ ಬರೆದಂತೆ ” ಇವು ಕೇವಲ ವಿನೋದ ಬರಹಗಳು ಮಾತ್ರವಲ್ಲ. ಕೆಲವಂತೂ ಅಪ್ಪಟ ಚಿಂತನ ಬರಹಗಳು; ಅಭಿವ್ಯಕ್ತಿಗೆ ಆರಿಸಿಕೊಂಡಿರುವ ಕ್ರಮ, ಹೇಳುವ ರೀತಿ ಮಾತ್ರ ವ್ಯಂಗ್ಯದ್ದು, ವಿನೋದದ್ದು. ಈ ಸಂಕಲನದ ‘ಚಿಂತಾ ಮಣಿ’ ಎನ್ನುವ ಬರಹ ತನ್ನ ಲವಲವಿಕೆಯ ನಿರೂಪಣೆಯಿಂದ, ತೆಳು ಹಾಸ್ಯದಿಂದ ಇಷ್ಟವಾಗುತ್ತದೆ. ತಮ್ಮ ‘ಖಾಲಿ ಪುರಾಣ’ ದಲ್ಲಿ ‘ಖಾಲಿ’ಯನ್ನು ವ್ಯಾಖ್ಯಾನಿಸುತ್ತ ಅವರು ಜಗತ್ತೇ ಮಾಯೆ ಎಂದು ಆಧ್ಯಾತ್ಮಿಕತೆಯನ್ನು ಹೊಳಯಿಸುತ್ತಾರೆ. ಅತ್ತೆ ಸೊಸೆಯರ ಸಣ್ಣ ಪುಟ್ಟ ಜಗಳಗಳು, ಮುಜುಗರದ ಘಟನೆಗಳು.. ಹೀಗೆ ಇಲ್ಲಿನ ಲೇಖನಗಳು ಸುಲಲಿತವಾಗಿ ಓದಿಸಿಕೊಂಡು ಹೋಗುತ್ತವೆ. ‘ಮುಜುಗರ’ ಲೇಖನದಲ್ಲಿ ಮದುವೆಯಾದ ಲೇಖಕಿಯನ್ನು ಇನ್ನ್ಯಾರದೋ ಮದುವೆಯಾಗದ ಮಗಳೆಂದು ಭಾವಿಸಿದ ವೃದ್ಧ ದಂಪತಿಗಳು ಅವ್ಯಾಹತವಾಗಿ ಮಾತಾಡಿ ಲೇಖಕಿಯನ್ನು ಪೇಚಿಗೆ ಸಿಕ್ಕಿಸುವುದು, ನಳ ದಮಯತಿ ಕತೆಯಲ್ಲಿ ಸ್ವಯಂವರಕ್ಕೆಂದು ಓಡೋಡಿ ಬಂದ ಋತುಪರ್ಣ ರಾಜನು ಅನುಭವಿಸಿರಬಹುದಾದ ಮುಜುಗರ.. ಹೀಗೆ ಈ ಲೇಖನ ಆಸಕ್ತಿದಾಯಕವಾಗಿದೆ. ಇನ್ನು ‘ಬೆನ್ನು ಹತ್ತಿದ ಭೂದೇವಿ’ ಯಲ್ಲಿ ಲೇಖಕಿ ಭೂಮಿಗೋಸ್ಕರ ಮಧ್ಯಮ ವರ್ಗದವರ ಹಂಬಲವನ್ನು, ಆ ಕನಸಿನಲ್ಲಿ ಬುಡುಬುಡುಕೆ ಶಾಸ್ತ್ರದವರನ್ನು, ಭವಿಷ್ಯ ಹೇಳುವವರನ್ನೆಲ್ಲ ನಂಬುವುದನ್ನು ಲಘು ಹಾಸ್ಯದೊಂದಿಗೆ ನಿರೂಪಿಸುತಾರೆ. ಈ ಪ್ರಬಂಧದದ ಪಂಚ್ ಲೈನ್: “ ನೋಡಿ ಸಾಕ್ಷಾತ್ ಭೂ ಮಾತೆ. ವಸುಂಧರ ಅಂತ ನಮ್ಮತ್ತೆ ಮಗಳು, ಓದಲೆಂದು ಬಂದಿದ್ದಾಳೆ. ಇಲ್ಲೇ ಇರ್ತಾಳೆ. ”
ಮಂದಾರವಲ್ಲಿಯರವ ಲೇಖನಗಳ ಪ್ರಬಲ ಸ್ಥಾಯಿ ಭಾವ ಅವುಗಳಲ್ಲಿನ ವೈಚಾರಿಕತೆ. ಲಘು ಧಾಟಿಯಿಂದಲೇ ಅವು ಪ್ರಾರಂಭವಾದರೂ ಅವುಗಳು ಚಿಂತನೆಯತ್ತ, ಜೀವನ ಸತ್ಯಗಳತ್ತ ತುಡಿಯುತ್ತವೆ. ಉದಾಹರಣೆಗೆ, ‘ಕಳೆಯೋಣ ಬನ್ನಿ‘ ಪ್ರಬಂಧದಲ್ಲಿ ಪೆನ್ನು, ಪೆನ್ಸಿಲ್, ರೇಶ್ಮೆ ಲಂಗ ಎಂದೆಲ್ಲ ಕಳೆಯುವ ಮಕ್ಕಳ ಬಗ್ಗೆ, ಹೃದಯ ಕಳೆದುಕೊಳ್ಳುವ ಫ಼ಿಲಂ ಹೀರೋಯಿನ್ ಗಳ ಬಗ್ಗೆ ಮಾತಾನಾಡುತ್ತಲೇ ” ಹಸಿವೆಯಲ್ಲಿ, ವಿರಹದಲ್ಲಿ, ಭಯದಲ್ಲಿ, ತಲ್ಲಣಗಳಲ್ಲಿ, ನಿದ್ದೆಗಳಲ್ಲಿ, ಎಚ್ಚರದಲ್ಲಿ, ಕನಸಿನಲ್ಲಿ, ಸಾವಿನಲ್ಲಿ, ಬದುಕಿನಲ್ಲಿ, ಹಾಡಿನಲ್ಲಿ, ಮೃದಂಗದಲ್ಲಿ, ಕವಿತೆಗಳಲ್ಲಿ, ಕಥೆಗಳಲ್ಲಿ.. ಎಲ್ಲೆಂದರೆ ಅಲ್ಲಿ , ಹೇಗೆಂದರೆ ಹಾಗೆ.. ,ಕಳೆದು ಹೋಗುವುದು ಸಾಮಾನ್ಯ ‘ ಎನ್ನುತ್ತಾರೆ. ‘ಮೂರು ಕಾಲಿನ ಕಪ್ಪೆ’ ವಾಸ್ತು, ಅದೃಷ್ಟದ ವಸ್ತುಗಳನ್ನು ನಂಬುವವರ ಬಗೆಗಿನ ವಿಡಂಬನೆ. ಇದೇ ರೀತಿ ‘ಹೆಸರಿಗೊಂದು ಕೊಸರು’ ಅದೃಷ್ಟಕ್ಕೋಸ್ಕರ ತಮ್ಮ ಹೆಸರು ಬದಲಾಯಿಸಿಕೊಳ್ಳುವವರನು ತಮಾಷೆಯಿಂದ ಗಮನಿಸುತ್ತದೆ.
ಕೌಟುಂಬಿಕ ವಿವರಗಳು, ತಲೆಮಾರುಗಳ ನಡುವಿನ ಅಂತರ, ಹಾಗೆಯೇ ಆಪ್ತ ಛೇಡಿಸುವಿಕೆಗಳಿಂದ ಲವಲವಿಕೆಯ ನಿರೂಪಣೆ ಇರುವ ಬರಹ ‘ಜನರೇಶನ್ ಗ್ಯಾಪ್’. ಇದರಲ್ಲಿನ ಅಜ್ಜಿ ವೆಂಕಮ್ಮಣ್ಣಿಗೆ ಇಂಗ್ಲಿಷ್ ಕಲಿಯುವ ಹಂಬಲ. ಈ ಅಜ್ಜಿಯನ್ನು, ಆಕೆಯ ಭಾವನೆಗಳನ್ನು ಲೇಖಕಿ ನವಿರಾಗಿ ಛೇಡಿಸುತ್ತಾರೆ. ಉದಾಹರಣೆಗೆ ಎದುರು ಮನೆಗೆ ಬಂದ ಫ಼ಾರಿನ್ ಲೇಡಿ ‘ಹೀಗೆ ಬೀಡು ಬೀಸಾಗಿ ನಡೀತಾಳಲ್ಲ.. ನನ್ನ ಹಾಗೆ ಅವಳಿಗೆ ಮಂಡಿ ನೋವು ಬರುವುದಿಲ್ಲವೇ? ಅದು ಅವರ ಪ್ರಮುಖ ಚಿಂತೆ. ‘ ಈ ಅಜ್ಜಿ ಸಂಸ್ಕೃತಿಗಳ ಭಿನ್ನತೆಯನ್ನು, ಅಂತೆಯೇ ಅವುಗಳಲ್ಲಿನ ಸಾಮರಸ್ಯವನ್ನು ಮನಗಾಣುತ್ತಾರೆ. ಈ ಪುಸ್ತಕದ ಶೀರ್ಷಿಕೆ ಲೇಖನವಾದ ‘ಗುಬ್ಬಚ್ಚಿ ಸ್ನಾನ’ ಈ ಧಾವಂತದ ಬದುಕಿನಲ್ಲಿ ಹೆಣ್ಣು ಮಕ್ಕಳಿಗೆ ನಿಧಾನವಾದ ಸ್ನಾನ ಕೂಡ ಕೆಲವೊಮ್ಮೆ ಹೇಗೆ ಲಕ್ಸುರಿ ಎಂದು ನವಿರು ಹಾಸ್ಯದೊಂದಿಗೆ ನಿರೂಪಿಸುತದೆ. ಕೊನೆಯ ಬರಹವಾದ ‘ಮೊದಲ ಯಾನ‘ ಅತೀವ ಜೀವನ ಪ್ರೀತಿಯಿಂದ ಹೊಸ ಅನುಭವಗಳನ್ನು ವಿವರಿಸುತ್ತದೆ; ಮೊದಲ ಸೈಕಲ್ ಪಯಣ, ಎಸಿ ಬಸ್ ಪಯಣ, ವಿಮಾನ ಯಾನ.. ಹೀಗೆ. ಮೊದಲೇ ಹೇಳಿರುವಂತೆ ಈ ಬರಹಗಳನ್ನು ಹಾಸ್ಯ ಪ್ರಬಂಧಗಳು ಎನ್ನುವುದಕಿಂತ ಲಲಿತ ಪ್ರಬಂಧಗಳು ಎನ್ನುವುದೇ ಸೂಕ್ತ. ತಮ್ಮ ಸದಭಿರುಚಿ ಹಾಗೂ ಅನುಭವ ವೈವಿಧ್ಯತೆಗಳಿಂದ ಸಮೃದ್ಧವಾಗಿರುವ ಈ ಲೇಖನ ಗುಚ್ಛ ಹಾಗೂ ಲೇಖಕಿಯವರಿಗೆ ಶುಭಾಶಯಗಳು.
.
-ಜಯಶ್ರೀ ಬಿ. ಕದ್ರಿ
ಹಾಸ್ಯಬರಹಗಳ ‘ಗುಬ್ಬಚ್ಚಿಸ್ನಾನ’ವನ್ನು ಏಕೆ ಓದಬೇಕು ಎಂದು ಚೆನ್ನಾಗಿ ಹೇಳಿದ್ದೀರಿ. ಪುಸ್ತಕದ ಪರಿಚಯಕ್ಕೆ ಧನ್ಯವಾದಗಳು
ಧನ್ಯವಾದಗಳು ಸುರಹೊನ್ನೆ ಸಂಪಾದಕೀಯ ವರ್ಗದವರಿಗೆ. ನನ್ನ ಪುಸ್ತಕ ಗುಬ್ಬಚ್ಚಿ ಸ್ನಾನವನ್ನು ಓದುಗ ವರ್ಗಕ್ಕೆ ಪರಿಚಯಿಸುವ ಸೌಹಾರ್ದತೆಗೆ ವಂದನೆಗಳು.
ಮಾನ್ಯ ಜಯಶ್ರೀಯವರು ಪುಸ್ತಕವನ್ನು ಸಮಗ್ರವಾಗಿ ಪರಿಚಯಿಸಿದ್ದಾರೆ. ಬರಹಗಳ ಕುರಿತ ಅವರ ಒಳನೋಟಗಳಿಗೆ ಅಭಾರಿಯಾಗಿದ್ದೇನೆ.
ಧನ್ಯವಾದಗಳು.
ಡಾ. ಎಂ. ಆರ್. ಮಂದಾರವಲ್ಲಿ