ನಾ ಕಂಡ ಕಾಶ್ಮೀರ

Spread the love
Share Buttonಭಾರತದ
ಉತ್ತರ ತುದಿಯಲ್ಲಿ ದೇಶದ ಕಿರೀಟವೆಂಬಂತೆ ಕಾಶ್ಮೀರ ನೆಲೆಸಿದೆ. ಕಾಶ್ಮೀರಕ್ಕೆ ಪ್ರವಾಸ ಹೋಗಲು ಒಂದು ತಿಂಗಳು ಮುಂಗಡವಾಗಿಯೇ ಎಲ್ಲಾ ಸಿದ್ಧತೆಯಾಗಿತ್ತು. ಒಂದು ವಾರ ಕಳೆಯಿತು. ಹೀಗೆಯೇ ಒಂದು ಬೆಳಗ್ಗೆ ವಾರ್ತಾ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಮಾಹಿತಿಯೊಂದು ಬೇಸರ ಮೂಡಿಸಿತು. ಶ್ರೀನಗರ ವಿಮಾನ ನಿಲ್ದಾಣದ ಬಳಿ ಗಲಭೆಯಲ್ಲಿ ಬಿಎಸ್ಎಫ್ ಯೋಧನೊಬ್ಬನು ಹುತಾತ್ಮನಾಗಿದ್ದನು. ಶ್ರೀನಗರ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ ಎಂಬ ವಾರ್ತೆ ವಾಹಿನಿಗಳಲ್ಲಿ ಹರಿದಾಡುತ್ತಿತ್ತು.

ಪ್ರಾಣ ತ್ಯಜಿಸಿದ ಯೋಧನ ಬಗ್ಗೆ ಒಂದು ಕಡೆ ಬೇಸರವಾದರೆ ಇನ್ನೊಂದು ಕಡೆ ಪ್ರವಾಸ ಸಾಧ್ಯವೇ ಎಂಬ ಚಿಂತೆ ಶುರುವಾಗಿತ್ತು. ಸೇನೆಯ ಪ್ರಾಬಲ್ಯತೆಯಲ್ಲಿ ಉಸಿರಾಡುವ ಕಾಶ್ಮೀರಕ್ಕೆ ಗಲಭೆಹೋರಾಟಗಳು, ಶತ್ರುಗಳ ಸಂಚಿನ ದಾಳಿ ಕಾಶ್ಮೀರದ ಗಾಳಿಯಲ್ಲಿ ಬೆರೆತುಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಮ್ಮ ಮತ್ತು ಮಗಳು ಇಬ್ಬರೇ ಹೋಗುವುದು ಸುರಕ್ಷಿತವೇ? ಏಕೆಂದರೆ ಅಲ್ಲಿ ಯಾವ ಕ್ಷಣದಲ್ಲಿಯಾದರೂ ಗಲಭೆ ಏಳ ಬಹುದು. ಹೀಗೆಯೇ ಸಾವಿರ ಯೋಚನೆಗಳು ಮನಕಲಕಲು ಆರಂಭಿಸಿದ್ದವು. ಕಾಶ್ಮೀರದ ಬಗ್ಗೆ ನಮಗೆ ಏನೂ ತಿಳಿದಿರಲಿಲ್ಲ. ವಾರ್ತಾ ವಾಹಿನಿಗಳಲ್ಲಿ ತಿಳಿಯುವ ಮಾಹಿತಿ ಬಿಟ್ಟರೆ ಅಲ್ಲಿನ ಜನರು ಎಂತಹವರು, ದೈನಂದಿನ ಚಟುವಟಿಕೆ ಹೇಗಿರಬಹುದು ಎಂದು ತಿಳಿಯುವ ಕುತೂಹಲವಿತ್ತು. ಇಂಥಾ ಇನ್ನಷ್ಟು ಪ್ರಶ್ನೆಗಳು ಮನಸ್ಸಿನಲ್ಲಿ ಮನೆಮಾಡುವಷ್ಟರಲ್ಲಿ ನನ್ನ ಅಮ್ಮ ಹೇಳಿದರು, ನಮ್ಮ ಮರಣ ಎಲ್ಲಿ ಬರೆದಿದೆ ಎಂದು ನಮಗೆ ತಿಳಿದಿಲ್ಲ, ಎಲ್ಲಾ ಭಯವನ್ನು ಬದಿಗಿಟ್ಟು ಧೈರ್ಯಮಾಡಿ ಹೊರಡುವ ಎಂದರು. ಪ್ರವಾಸದ ದಿನ ಬಂದಿತು, ಅತ್ಯುತ್ಸಾಹದಿಂದ ನಾವು ಬೆಂಗಳೂರನ್ನು ಬಿಟ್ಟೆವು.

ಶ್ರೀನಗರ ವಿಮಾನ ನಿಲ್ದಾಣಕ್ಕೆ ತಲುಪಿ ಇನ್ನೇನು ಹತ್ತು ನಿಮಿಷ ಕಳೆಯಲಿಲ್ಲ ಅಷ್ಟರಲ್ಲಿ ಒಂದು ಬೇಸರದ ಮಾಹಿತಿ ನಮ್ಮತ್ತ ಬಂದಿತು. ಕಾಶ್ಮೀರದಲ್ಲಿ ಭಾರತದ ಯಾವುದೇ ಆಪರೇಟರ್ ಗಳ ಪ್ರೀಪೇಡ್ ಸಿಮ್ ಕಾರ್ಡ್ ಚಾಲನೆಯಾಗುವುದಿಲ್ಲ. ಎಲ್ಲಾ ದೂರವಾಣಿ ಸಂಪರ್ಕಗಳಿಂದ ನಮ್ಮ ಕೊಂಡಿ ಕಳಚಿಕೊಂಡಿತು. ಆದರೂ ಭಯಬೀಳದೆ ನಮ್ಮ ವಾಹನ ಚಾಲಕನನ್ನು ಹುಡುಕುತ್ತಾ ಹೊರನಡೆದೆವು. ಚಾಲಕನ ಕೈಯಲ್ಲಿ ನಮ್ಮ ನಾಮಫಲಕಗಳು ಕಾಣುತ್ತಿದ್ದಂತೆ ಎಲ್ಲಾ ಚಿಂತೆಗಳಿಗೆ ತೆರೆ ಬಿದ್ದಿತು. ಕಾಶ್ಮೀರದಲ್ಲಿನ ವಾಸ ಲವಲವಿಕೆಯಿಂದ ಶುರುವಾಯಿತು.

ಶ್ರೀನಗರ, ಗುಲ್ಮಾರ್ಗ್, ಪೆಹೆಲ್ಗಾಮ್, ಸೋನ್ಮಾರ್ಗ್ ಹೀಗೆ ಕಾಶ್ಮೀರದ ಹಲವೆಡೆ ಸುತ್ತಾಡಿದ ನಾನು ಗಮನಿಸಿದ ವಿಷಯಗಳು ಹಲವಾರು. ಕಾಶ್ಮೀರದ ಜನರು ಪ್ರವಾಸಿಗರನ್ನು ಆದರದಿಂದ ಬರಮಾಡಿಕೊಳ್ಳುತ್ತಾರೆ. ಇಲ್ಲಿನ ಪುರುಷರು ಮಹಿಳೆಯರನ್ನು ಒಳ್ಳೆಯ ದೃಷ್ಟಿಯಿಂದ ನೋಡುತ್ತಾರೆ. ಎಲ್ಲಿಯೂ ಯಾರದ್ದೇ ದೃಷ್ಟಿಯಿಂದ ಅಥವಾ ನಡತೆಯಿಂದ ನಮಗೆ ಅನಾನುಕೂಲವಾಗಲಿಲ್ಲ. ಒಮ್ಮೊಮ್ಮೆ ಸಂಶಯ ಪಡುತ್ತಿದ್ದೆವು, ಏಕೆ ಎಲ್ಲರೂ ಇಷ್ಟು ನಯವಿನಯದಿಂದ ಮಾತಾಡುತ್ತಾರೆ, ಇದರ ಹಿಂದೆ ಏನಿರಬಹುದು ಎಂದು. ಇಂದಿನ ಪ್ರಪಂಚ ಎಂಥಾ ನಾಟಕರಂಗವಾಗಿದೆ ಎಂದರೆ ಸತ್ಯವನ್ನೂ ಬೇಗ ನಂಬಲು ಮನಸ್ಸು ಹಿಂಜರಿಯುತ್ತದೆ. ಆದರೂ ದಿನ ಉರುಳುತ್ತಿದ್ದಂತೆ ಇಲ್ಲಿಯ ಜನ ಸಂಭಾಷಣೆ ಮಾಡುವುದೇ ಪ್ರೀತಿ, ಕಾಳಜಿಯಿಂದ ಎಂದು ಅರಿವಾಯಿತು.

 

 

ನಾವು ಮಾತನಾಡಿದ ಪ್ರತಿಯೊಂದು ಕಾಶ್ಮೀರಿಯ ಮುಖದಲ್ಲಿ ಒಂದು ರೀತಿಯ ಬೇಸರ, ಅಸಹಾಯಕತೆ ಅಡಗಿತ್ತು. ಎಲ್ಲರೂ ನಮ್ಮಲ್ಲಿ ಪ್ರಶ್ನಿಸಿದ್ದು ಒಂದೇ. ನೀವು ಇಲ್ಲಿ ಸುರಕ್ಷಿತವಾಗಿದ್ದೀರಲ್ಲವೇ, ನಿಮಗೆ ಇಲ್ಲಿ ಏನಾದರೂ ತೊಂದರೆಯಾಗಿದೆಯೇ, ಮೀಡಿಯಾದವರು ತೋರಿಸುವಂತೆ ನಿಮಗೆ ಎಲ್ಲಿಯಾದರೂ ಗಲಭೆ ಕಾಣುತ್ತಿದೆಯೇ ಎಂದು. ಇಂಥಹ ಪ್ರಶ್ನೆಗಳನ್ನು ಕೇಳಲು ಕಾರಣ ಕಾಶ್ಮೀರದಲ್ಲಿ ಪ್ರವಾಸಿಗರ ಸಂಖ್ಯೆ ತುಂಬಾ ಕಡಿಮೆಯಾಗಿದೆಯಂತೆ. ನಾವು ಶ್ರೀನಗರದಲ್ಲಿದ್ದ ಒಂದು ದಿನ ಶ್ರೀನಗರ ಬಂಧ್ ಆಗಿತ್ತು. ನಮ್ಮ ವಾಹನ ಚಾಲಕ ವಿಷಯ ತಿಳಿಸುವವರೆಗೆ ಬಂಧ್ ಎಂದು ಅರಿವಾಗಲೇ ಇಲ್ಲ. ಅಂಗಡಿಮುಂಗಟ್ಟುಗಳು ಕೆಲವೆಡೆ ಮುಚ್ಚಿದ್ದರೂ, ಜನ ಜೀವನ ಶಾಂತಿಯಿಂದಲೇ ಸಾಗುತ್ತಿತ್ತು.  ಇಂದಿನ ವಾಣಿಜ್ಯ ಲೋಕದಲ್ಲಿ ವಿವಿಧ ವಾರ್ತಾ ವಾಹಿನಿಗಳು, ಪತ್ರಿಕೆಗಳು ತಮ್ಮ ಸ್ವಾರ್ಥಕ್ಕಾಗಿ ಸಣ್ಣ ವಿಷಯವನ್ನು ಸ್ಫೋಟಕ ವಿಷಯದಂತೆ ಮಾರ್ಪಾಡಿಸಿ ಪ್ರಸಾರಮಾಡುತ್ತಾರೆ.  ದೇಶದ ಹಲವಾರು ದಿಕ್ಕಿನಲ್ಲಿ ನೆಲೆಸಿರುವ ನಾವು ಮಾಧ್ಯಮ ಹೇಳಿದ್ದನ್ನು ನಂಬುತ್ತೇವೆ. ಕಾಶ್ಮೀರವನ್ನು ಒಂದು ಅಪಾಯಕಾರಿ, ಕ್ರೋಧ, ಗಲಭೆಯ ನಾಡು ಎಂದು ಬಿಂಬಿಸಲಾಗುತ್ತಿದೆ. ಇವುಗಳನ್ನು ನೋಡಿದ ಜನರು ಕಾಶ್ಮೀರದತ್ತ ಪಯಣ ಬೆಳೆಸಲು ಹಿಂದೇಟು ಹಾಕುತ್ತಿದ್ದಾರೆ. ಕಾಶ್ಮೀರಿಗಳಿಗೆ ಪ್ರವಾಸೋದ್ಯಮವೇ ಜೀವಾಳ. ಪ್ರವಾಸಿಗರು ಕಡಿಮೆಯಾದ್ದರಿಂದ ಕಾಶ್ಮೀರಿಗಳ ಆದಾಯಕ್ಕೆ ಕತ್ತಿ ಬೀಸಿದಂತಾಗಿದೆ.

ಕಾಶ್ಮೀರಿಗಳ ಜೀವನಶೈಲಿಯ ಬಗ್ಗೆ ಹೇಳುವುದಾದರೆಹಾಸಿಗೆ ಇದ್ದಷ್ಟೇ ಕಾಲು ಚಾಚು” ಎಂಬ ಮಾತನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಿದ್ದಾರೆ.  ದುಂದು ವೆಚ್ಚವಿಲ್ಲ, ತುಂಬಾ ಸರಳ ಜೀವನ ನಡೆಸುತ್ತಾರೆ. ಹಳ್ಳಿಯಲ್ಲಿ ಗೋಧಿ ಪ್ರಮುಖವಾಗಿ ಬೆಳೆಯುತ್ತಾರೆ. ಹಸು, ಕುರಿಗಳನ್ನು ಎಲ್ಲೆಡೆ ಕಾಣಬಹುದು. ಕೆಲವೆಡೆ ಮಾತ್ರ ಕೇಸರಿ ಹಾಗೂ ಆ್ಯಪಲ್ ಬೆಳೆಯುತ್ತದೆ. ಹಣ್ಣು, ತರಕಾರಿ ಲಭ್ಯವಿದ್ದು ಬಾಳೆಹಣ್ಣನ್ನು ಹೆಚ್ಚಾಗಿ ಕಾಣಬಹುದು.ಶ್ರೀನಗರ ಬೆಂಗಳೂರಿನ ಅರ್ಧದಷ್ಟಿರಬಹುದು. ಕಾಶ್ಮೀರದ ಎಲ್ಲೆಡೆ ಸೈನಿಕರು ಹಾಗೂ ಸೇನೆಯವರ ಸಂಚಾರವನ್ನು ದೈನಂದಿನ ಜೀವನದಲ್ಲಿ ಕಾಣಬಹುದು. ಯಾವುದೇ ಶಾಪಿಂಗ್ ಮಾಲ್, ಒಳ್ಳೆಯ ಚಲನಚಿತ್ರ ಮಂದಿರವಿಲ್ಲ. ಶೇಕಡ 95ರಷ್ಟು ಮುಸಲ್ಮಾನರಿದ್ದಾರೆ. ಎಲ್ಲಾ ಧರ್ಮದವರನ್ನು ಪ್ರೀತಿಯಿಂದ ಸ್ವಾಗತಿಸುತ್ತಾರೆ. ದೇವಸ್ಥಾನ ಹಾಗೂ ಚರ್ಚಗಳು ತುಂಬಾ ಕಡಿಮೆ. ಇಲ್ಲಿ ಮದ್ಯದಂಗಡಿ ಕಾಣುವುದೇ ಇಲ್ಲ. ಶ್ರೀನಗರದಂತ ದೊಡ್ಡ ಪೇಟೆಯಲ್ಲಿ ಒಂದೆರಡು ಮದ್ಯದಂಗಡಿ ಕಂಡರೆ ಹೆಚ್ಚು. ರಸ್ತೆಗಳು ಒಳ್ಳೆಯ ಗತಿಯಲ್ಲಿದೆ. ತೀರಾ ಕುಗ್ರಾಮ ಎಲ್ಲಿಯೂ ಕಂಡುಬರಲಿಲ್ಲ. ವ್ಯವಹಾರದಲ್ಲಿ ಚರ್ಚೆ ಉಂಟು ಆದರೆ ಮೋಸವಿಲ್ಲ. ಶ್ರಮಪಟ್ಟು ದುಡಿಯುತ್ತಾರೆ.

 

 

ಕಾಶ್ಮೀರದ ಜನರ ನೋಟ, ನಡತೆ, ಆತಿಥ್ಯ ನೋಡಿದರೆ ಪುನಃ ಹೋಗಬೇಕೆಂದೆನಿಸುತ್ತದೆ. ಯಾವುದೇ ಮಾಹಿತಿಗಳಿಗೆ ಮಾರು ಹೋಗದೆ, ದೃಢ ನಿರ್ಧಾರ ಮಾಡಿ ಕಾಶ್ಮೀರಕ್ಕೆ ಪಯಣ ಬೆಳೆಸಿದ ಸಂತಸವಿದೆ. ನಾನು ಕಂಡ ಕಾಶ್ಮೀರ ತುಂಬಾ ಅಂದ, ಚೆಂದ. ನನ್ನ ಕಾಶ್ಮೀರದ ದಿನಗಳನ್ನು ಇನ್ನಷ್ಟು ಸುಂದರ ಮಾಡಿದ್ದು ಅಲ್ಲಿಯ ಜನತೆ. ನಾ ಕಂಡ ಕಾಶ್ಮೀರವನ್ನು ನಿಮ್ಮಲ್ಲಿ ಹೀಗೆ ಹಂಚಿಕೊಂಡಿದ್ದೇನೆ. ಜೀವನದಲ್ಲಿ ಒಮ್ಮೆಯಾದರೂ ಕಾಶ್ಮೀರಕ್ಕೆ ಹೋಗಿ ಅಲ್ಲಿಯ ಗಂಧಗಾಳಿ ಸವಿಯಲೇಬೇಕು..


– ರಮ್ಯಶ್ರೀ ಭಟ್ , ಬೆಂಗಳೂರು

6 Responses

 1. Shruthi Sharma says:

  ಕಾಶ್ಮೀರದ ಜನತೆಯ ನಡೆ ನುಡಿಯ ಬಗೆಗೆ ಮೊದಲ ಬಾರಿ ನಾನು ಓದಿದ ಲೇಖನ. ತುಂಬಾ ಉತ್ತಮವಾಗಿದೆ. ಬರೆಯುತ್ತಿರಿ.. 🙂

  • Ramyashri Bhat says:

   ನಿಮ್ಮ ಪ್ರತಿಕ್ರಿಯೆಯು ನನಗೆ ಇನ್ನಷ್ಟು ಬರೆಯಲು ಪ್ರೋತ್ಸಾಹಿಸುತ್ತದೆ. ತುಂಬಾ ಧನ್ಯವಾದಗಳು

 2. Hema says:

  ಇತ್ತೀಚೆಗೆ ನಾವು ಕಾಶ್ಮೀತರದ ‘ಕಟ್ರಾ’ ನಗರ ಮತ್ತು ವೈಷ್ಣೋದೇವಿ ಮಂದಿರಕ್ಕೆ ಭೇಟಿ ಕೊಟ್ಟಿದ್ದೆವು. ಪ್ರಾಕೃತಿಕ ಸೊಬಗಿನ ಬೀಡಿನಲ್ಲಿ, ಸ್ನೇಹಪರ ಶ್ರಮಿಕ ಜನರನ್ನು ಭೇಟಿಯಾದ ಅನುಭವ ನಮ್ಮದು ಕೂಡ. ಬಹುಶ: ಪ್ರವಾಸೋದ್ಯಮವೇ ಅವರ ಮುಖ್ಯ ಆದಾಯದ ಮೂಲ ಅನಿಸಿತ್ತು. ಉತ್ತಮ ಬರಹ.

  • Ramyashri Bhat says:

   ವಾಹ್ ! , ನೀವು ವೈಷ್ಣೋದೇವಿ ಮಂದಿರಕ್ಕೆ ಹೋದ ಅನುಭವಗಳನ್ನು ತಿಳಿಯಲು ಇಷ್ಟಪಡುತ್ತೇನೆ. ಸಾಧ್ಯವಾದಷ್ಟು ಬೇಗ ಪ್ರಕಟಿಸಿ. ಧನ್ಯವಾದಗಳು

 3. ವಿಜಯಾಸುಬ್ರಹ್ಮಣ್ಯ,ಕುಂಬಳೆ. says:

  ತಾವು ಅನುಭವಿಸಿ ಕಂಡುಂಡ ಪ್ರವಾಸ ಕಥನ ಅನ್ಯರಿಗೆ ಮಾದರಿ. ಮೆಚ್ಚುಗೆಯಾಯ್ತು.

 4. Rcb says:

  ಒಳ್ಳೆಯ ಲೇಖನ ..

Leave a Reply

 Click this button or press Ctrl+G to toggle between Kannada and English

Your email address will not be published.

Follow

Get every new post on this blog delivered to your Inbox.

Join other followers: